ADVERTISEMENT

ಆಳ-ಅಗಲ: ತಿಮ್ಮಪ್ಪನ ಸನ್ನಿಧಿಗೆ ಹಗರಣಗಳ ಕಳಂಕ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 0:30 IST
Last Updated 15 ಡಿಸೆಂಬರ್ 2025, 0:30 IST
ತಿರುಮಲ ತಿರು‍‍ಪತಿ ದೇವಾಲಯ
ತಿರುಮಲ ತಿರು‍‍ಪತಿ ದೇವಾಲಯ   
ಶ್ರೀಮಂತ ತಿರುಪತಿ ತಿರುಮಲ ದೇವಾಲಯ ಮತ್ತೆ ಸುದ್ದಿಯಲ್ಲಿದೆ. ಕಳಪೆ ಲಡ್ಡು ಪ್ರಸಾದ ಹಗರಣದ ತನಿಖೆ ಪ್ರಗತಿಯಲ್ಲಿರುವಾಗಲೇ ಶಾಲು ಹಗರಣ ಬಯಲಾಗಿದೆ. ಕೋಟ್ಯಂತರ ಭಕ್ತರು ನಡೆದುಕೊಳ್ಳುವ ವೆಂಕಟೇಶ್ವರ ಸನ್ನಿಧಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವ್ಯವಹಾರ ಪ್ರಕರಣಗಳು ಒಂದರ ನಂತರ ಮತ್ತೊಂದು ಎಂಬಂತೆ ವರದಿಯಾಗುತ್ತಿವೆ. ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಟಿಡಿಪಿ ಮತ್ತು ಹಿಂದೆ ಅಧಿಕಾರದಲ್ಲಿದ್ದ ವೈಎಸ್‌ಆರ್‌ಸಿಪಿ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ. ಭಕ್ತಿ, ಧಾರ್ಮಿಕ ಸೇವೆಗಳಷ್ಟೇ ನಡೆಯಬೇಕಾಗಿದ್ದ ದೇವಾಲಯದಲ್ಲಿ ಅಕ್ರಮಗಳು ನಡೆಯುತ್ತಿರುವುದು ಭಕ್ತರಿಗೆ ನೋವುಂಟು ಮಾಡುತ್ತಿದೆ

ದೇಶ ವಿದೇಶದ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರ ಮತ್ತು ಜಗತ್ತಿನ ಅತ್ಯಂತ ಸಿರಿವಂತ ದೇವಾಲಯಗಳಲ್ಲಿ ಒಂದಾಗಿರುವ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಆಡಳಿತ ಮಂಡಳಿಯ ಕೊರಳಿಗೆ ಈಗ ಮತ್ತೊಂದು ಹಗರಣ ಸುತ್ತಿಕೊಂಡಿದೆ. ದೇವಾಲಯದಲ್ಲಿ ಚಾಲ್ತಿಯಲ್ಲಿರುವ ‘ವೇದಾಶೀರ್ವಚನ’ ಕಾರ್ಯಕ್ರಮದಲ್ಲಿ ದಾನಿಗಳು ಮತ್ತು ಗಣ್ಯರನ್ನು ಗೌರವಿಸಲು ರೇಷ್ಮೆ ಶಾಲನ್ನು ಬಳಸುವ ಸಂಪ್ರದಾಯ ತಿರುಪತಿಯಲ್ಲಿದೆ. ಈ ಶಾಲುಗಳನ್ನು ಪೂರೈಸಲು ಟೆಂಡರ್‌ ಪಡೆದ ಸಂಸ್ಥೆಯು ರೇಷ್ಮೆಯ ಬದಲಿಗೆ ರೇಷ್ಮೆಯನ್ನೇ ಹೋಲುವ ಪಾಲಿಸ್ಟರ್‌ ಶಾಲನ್ನು 10 ವರ್ಷಗಳಿಂದ ಪೂರೈಸಿರುವುದು ಟಿಟಿಡಿಯ ವಿಚಕ್ಷಣ ಮತ್ತು ಭದ್ರತಾ ಸಂಸ್ಥೆಯ ತನಿಖೆಯಿಂದ ಗೊತ್ತಾಗಿದೆ. ಈ ಶಾಲುಗಳ ಖರೀದಿಗೆ ಟಿಟಿಡಿ ₹54 ಕೋಟಿ ವೆಚ್ಚ ಮಾಡಿದೆ. 

₹250 ಕೋಟಿ ಮೊತ್ತದ ಕಲಬೆರಕೆಯುಕ್ತ ಲಡ್ಡು ಹಗರಣವು ಭಕ್ತರ ನೆನಪಿನಿಂದ ಮಾಸುವ ಮುನ್ನವೇ ಶಾಲು ಹಗರಣ ಬಯಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇವಾಲಯದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಒಂದರ ಹಿಂದೆ ಒಂದು ಆರೋಪ ಕೇಳಿ ಬರುತ್ತಿದೆ. ಆಡಳಿತ ಮಂಡಳಿಯಲ್ಲಿರುವವರು, ಸರ್ಕಾರದಲ್ಲಿರುವ ಕೆಲವರು ತಿಮ್ಮಪ್ಪನ ಹೆಸರಿನಲ್ಲಿ ಅಕ್ರಮಗಳನ್ನು ಎಸಗುತ್ತಿದ್ದಾರೆ, ಭಕ್ತರನ್ನು ಶೋಷಿಸುತ್ತಿದ್ದಾರೆ ಎಂಬ ಅಭಿಪ್ರಾಯಗಳು ಭಕ್ತರ ವಲಯದಲ್ಲಿವೆ. ತಿರುಪತಿ ದೇವಾಲಯವು ರಾಜಕೀಯಕ್ಕೂ ಬಳಕೆಯಾಗುತ್ತಿದ್ದು, ವೈಎಸ್‌ಆರ್‌ಸಿಪಿ ಮತ್ತು ತೆಲುಗು ದೇಶಂ ಪಕ್ಷಗಳ ನಡುವೆ ದಾಳವಾಗಿ ಮಾರ್ಪಟ್ಟಿದೆ. 

ವೆಂಕಟೇಶ್ವರ ದೇವಾಲಯವು ಪ್ರಪಂಚದಲ್ಲಿಯೇ ಅತಿ ಹೆಚ್ಚು ಜನ ಭೇಟಿ ನೀಡುವ ಧಾರ್ಮಿಕ ಕೇಂದ್ರಗಳಲ್ಲೊಂದಾಗಿದೆ. ವಾರ್ಷಿಕವಾಗಿ ಸುಮಾರು 2.4 ಕೋಟಿಯಷ್ಟು ಭಕ್ತರು ಭೇಟಿ ನೀಡಿ ಶ್ರೀನಿವಾಸನ ದರ್ಶನ ಪಡೆಯುತ್ತಾರೆ. ವಾರ್ಷಿಕ ಏಕಾದಶಿ, ಸಾರ್ವತ್ರಿಕ ರಜಾ ದಿನಗಳು ಸೇರಿದಂತೆ ವರ್ಷದ ಹಲವು ಸಂದರ್ಭಗಳಲ್ಲಿ ಭಕ್ತರ ಸಂಖ್ಯೆಯು ದಿನವೊಂದಕ್ಕೆ ಒಂದು ಲಕ್ಷ ದಾಟುವುದೂ ಉಂಟು. ದೇವಾಲಯಕ್ಕೆ ಭೇಟಿ ನೀಡುವ ಬಹುತೇಕ ಭಕ್ತರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹುಂಡಿಗೆ ಹಣ ಹಾಕುತ್ತಾರೆ. ಅದರ ಜತೆಗೆ, ದವಸಗಳು, ಕೃಷಿ ಉತ್ಪನ್ನಗಳು, ಬೆಲ್ಲ, ನವಧಾನ್ಯ, ಬೆಳ್ಳಿ, ಬಂಗಾರ, ಭೂಮಿ, ವಿದೇಶಿ ಕರೆನ್ಸಿಯನ್ನೂ ದೇವರಿಗೆ ಅರ್ಪಿಸುತ್ತಾರೆ. ಶ್ರೀಮಂತ ಭಕ್ತರು ಹತ್ತಾರು ಕೆ.ಜಿ. ಆಭರಣಗಳನ್ನು ದಾನ ಮಾಡುವುದುಂಟು. 

ADVERTISEMENT

ಆದಾಯ, ವೆಚ್ಚ, ದರ್ಶನದ ವ್ಯವಸ್ಥೆ ಸೇರಿದಂತೆ ದೇವಸ್ಥಾನಕ್ಕೆ ಸಂಬಂಧಿಸಿದ ಸಕಲ ವ್ಯವಹಾರಗಳ ಉಸ್ತುವಾರಿ ಟಿಟಿಡಿ ಮಂಡಳಿಯದ್ದಾಗಿದೆ. ಟಿಟಿಡಿ ಹೊಂದಿರುವ ಸಂಪತ್ತೇ ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿರುವ ಕೆಲವರ ಭ್ರಷ್ಟಾಚಾರಕ್ಕೆ ಇಂಧನವಾಗಿದೆ. ಹುಂಡಿ ಹಣ ಕಳ್ಳತನ, ದರ್ಶನಕ್ಕಾಗಿ ನಕಲಿ ಶಿಫಾರಸು ಪತ್ರ, ದರ್ಶನ ಮಾಡಿಸುವುದಾಗಿ ವಂಚನೆ... ಹೀಗೆ  ತಿಮ್ಮಪ್ಪನ ಸನ್ನಿಧಿಯಲ್ಲಿನ ಸಾಲು ಸಾಲು ಹಗರಣಗಳು ಭಕ್ತರ ಮನಸ್ಸನ್ನು ತೀವ್ರವಾಗಿ ಗಾಸಿಗೊಳಿಸಿವೆ.

ಕಲಬೆರಕೆಯುಕ್ತ ಲಡ್ಡು ಹಗರಣ

ತಿರುಪತಿ ದೇವಾಲಯಕ್ಕೆ ಜಾಗತಿಕವಾಗಿ ಕಪ್ಪುಚುಕ್ಕೆ ತಂದಿದ್ದು ಕಳಪೆ ಲಡ್ಡು ಪ್ರಸಾದ ಹಗರಣ. ಕಳೆದ ವರ್ಷ ಬಯಲಾದ ಹಗರಣದ ಮೊತ್ತ ₹250 ಕೋಟಿ. ಕೋಟ್ಯಂತರ ಭಕ್ತರು ‘ತಿಮ್ಮಪ್ಪನ ಪ್ರಸಾದ’ ಎಂದು ಕಣ್ಣಿಗೆ ಒತ್ತಿಕೊಂಡು ಸೇವಿಸುತ್ತಿದ್ದ ಲಡ್ಡುವನ್ನು 2019–2024ರ ನಡುವೆ ಕಳಪೆ ತುಪ್ಪದಿಂದ ತಯಾರಿಸಲಾಗಿತ್ತು ಎಂಬ ಸಂಗತಿ ವೆಂಕಟೇಶ್ವರ ಭಕ್ತಸಮೂಹಕ್ಕೆ ದೊಡ್ಡ ಆಘಾತ ತಂದಿತ್ತು. ಈ ಲಡ್ಡು ಪ್ರಸಾದವು ಜಿಐ ಟ್ಯಾಗ್‌ ಅನ್ನೂ ಹೊಂದಿದೆ.  

ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಯೋಗಾಲಯಗಳ ವರದಿಗಳನ್ನು ಉಲ್ಲೇಖಿಸಿ, ಪ್ರಸಾದ ರೂಪದಲ್ಲಿ ನೀಡಲಾಗುತ್ತಿರುವ ಲಡ್ಡುವಿನಲ್ಲಿ ದನದ, ಹಂದಿಯ ಕೊಬ್ಬು, ಮೀನಿನ ಎಣ್ಣೆ ಬೆರೆಸಲಾಗಿದೆ ಎಂದು ಹೇಳುವ ಮೂಲಕ ಈ ಪ್ರಕರಣ ಬಯಲಾಗಿತ್ತು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು, ಅಲ್ಲಿನ ವಿಶೇಷ ತನಿಖಾ ತಂಡವು ಸುದೀರ್ಘ ತನಿಖೆ ನಡೆಸಿ ಕಳೆದ ತಿಂಗಳ ಹಿಂದೆಯಷ್ಟೇ (ನವೆಂಬರ್‌) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು ಹೊರಗೆಡಹಿದೆ. ಉತ್ತರಾಖಂಡದ ಭೋಲೆ ಬಾಬಾ ಆರ್ಗ್ಯಾನಿಕ್‌ ಡೇರಿ ಪ್ರೈ.ಲಿ. ಕಂಪನಿಯು ಒಂದೇ ಒಂದು ಹನಿ ಹಾಲು ಖರೀದಿಸದೇ ತಾಳೆ ಎಣ್ಣೆ, ತಾಳೆ ಹಣ್ಣಿನ ಬೀಜದಿಂದ ತಯಾರಿಸಿದ ಎಣ್ಣೆ ಹಾಗೂ ಇತರ ರಾಸಾಯನಿಕಗಳನ್ನು ಬಳಸಿ ಕಲಬೆರಕೆಯುಕ್ತ ತುಪ್ಪವನ್ನು ತಯಾರಿಸಿತ್ತು. ಟಿಟಿಡಿಗೆ ತುಪ್ಪ ಪೂರೈಸಲು ಟೆಂಡರ್‌ ಪಡೆದಿದ್ದ ಕಂಪನಿಗಳಿಗೆ 68 ಲಕ್ಷ ಕೆ.ಜಿಯಷ್ಟು ಈ ಕಳಪೆ ತುಪ್ಪ ಪೂರೈಸಿತ್ತು ಎಂಬ ಸಂಗತಿ ತನಿಖೆಯಿಂದ ಬಹಿರಂಗವಾಗಿದೆ. 

ದರ್ಶನ: ನಕಲಿ ಪತ್ರಗಳ ಹಾವಳಿ‌‌

ದೇವರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಗಣ್ಯರು, ಅಧಿಕಾರಿಗಳ ನಕಲಿ ಶಿಫಾರಸುಗಳನ್ನು ನೀಡಿ ಭಕ್ತರು/ಗಣ್ಯರಿಂದ ದೊಡ್ಡ ಮೊತ್ತವನ್ನು ವಸೂಲಿ ಮಾಡುತ್ತಿರುವ ಪ್ರಕರಣಗಳು ತಿರುಪತಿಯಲ್ಲಿ ಆಗಾಗ ವರದಿಯಾಗುತ್ತಲೇ ಇರುತ್ತವೆ. 

ಸಚಿವರು, ಶಾಸಕರು, ಉನ್ನತ ಅಧಿಕಾರಿಗಳ ನಕಲಿ ಲೆಟರ್‌ಹೆಡ್‌ಗಳನ್ನು ಸಿದ್ಧಪಡಿಸಿ, ನಕಲಿ ಸಹಿ, ಸೀಲ್‌ (ಮೊಹರು) ಹಾಕಿ ನಕಲಿ ವಿಐಪಿ ಪಾಸ್‌ಗಳನ್ನು ವಂಚಕರು ವಿತರಿಸುತ್ತಾರೆ. ಇದಕ್ಕಾಗಿ ಭಕ್ತರಿಂದ ತುಂಬಾ ಹಣವನ್ನು ಪಡೆಯುತ್ತಾರೆ. ಸ್ವತಃ ಟಿಟಿಡಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಭಕ್ತರಿಗೆ ಎಚ್ಚರಿಕೆ ನೀಡಿದ್ದಾರೆ.

ದೇವರ ದರ್ಶನದ ಟಿಕೆಟ್ ಕೊಡಿಸುತ್ತೇನೆ ಎಂದು ಮಧ್ಯವರ್ತಿಯೊಬ್ಬ ಭಕ್ತರಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿದ ಘಟನೆ ಇದೇ ಅಕ್ಟೋಬರ್‌ನಲ್ಲಿ ನಡೆದಿತ್ತು. ದೇವಸ್ಥಾನದ ಭದ್ರತಾ ಸಿಬ್ಬಂದಿ, ವಾಹನ ಚಾಲಕರು ಇಂಥದೇ ಹಗರಣಗಳಲ್ಲಿ ಸಿಲುಕಿ ಕೆಲಸ ಕಳೆದುಕೊಂಡ ಘಟನೆಗಳು ಹಲವು ಬಾರಿ ನಡೆದಿವೆ.

ಪರಕಾಮಣಿ ಹಣ ಕಳವು

ಎರಡೂವರೆ ವರ್ಷಗಳ ಹಿಂದಿನ ಪ್ರಕರಣ ಇದು. 2023ರ ಏಪ್ರಿಲ್‌ 29ರಂದು ದೇವಾಲಯದ ಹುಂಡಿಗಳಿಗೆ ಭಕ್ತರು ಹಾಕಿದ ಕಾಣಿಕೆ ಹಣವನ್ನು ಪರಕಾಮಣಿ (ಎಣಿಕೆ) ಮಾಡುವ ಸಂದರ್ಭದಲ್ಲಿ ತಿರುಪತಿ ಪೆದ್ದ ಜೀವರ್‌ ಮಠದ ಮುಖ್ಯ ಕ್ಲರ್ಕ್‌ ಸಿ.ವಿ.ರವಿಕುಮಾರ್‌ ಅವರು ಅಮೆರಿಕದ 900 ಡಾಲರ್‌ ನಗದನ್ನು (₹72 ಸಾವಿರ) ಕದಿಯಲು ಯತ್ನಿಸುವಾಗ ಸಿಕ್ಕಿ ಬಿದ್ದಿದ್ದರು. ರವಿಕುಮಾರ್‌ ಪ್ರಕರಣದ ಬಗ್ಗೆ ಅಂದು ಟಿಟಿಡಿಯ ಸಹಾಯಕ ವಿಚಕ್ಷಣ ಮತ್ತು ಭದ್ರತಾ ಅಧಿಕಾರಿಯಾಗಿದ್ದ ಸತೀಶ್‌ ಕುಮಾರ್‌ ದೂರು ನೀಡಿದ್ದರು. ಅದರ ಆಧಾರದಲ್ಲಿ ರವಿಕುಮಾರ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದೇ ವರ್ಷದ ಸೆಪ್ಟೆಂಬರ್‌ 23ರಂದು ತಿರುಪತಿ ಲೋಕ ಅದಾಲತ್‌ ನ್ಯಾಯಾಲಯದಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣ ವಿಲೇವಾರಿಯಾಗಿತ್ತು. ರವಿಕುಮಾರ್‌ ಅವರು ತಮಗೆ ಸೇರಿದ್ದ ಏಳು ಆಸ್ತಿಗಳನ್ನು ಟಿಟಿಡಿಗೆ ದಾನವಾಗಿ ನೀಡಿದ ನಂತರ ಈ ಪ್ರಕರಣ ಇತ್ಯರ್ಥಗೊಂಡಿತ್ತು.

ಆದರೆ ತಿರುಪತಿಯ ಪತ್ರಕರ್ತರೊಬ್ಬರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ ನಂತರ,  ಪ್ರಕರಣದ ಮರುತನಿಖೆ ನಡೆಸುವಂತೆ ಹೈಕೋರ್ಟ್‌ ಸಿಐಡಿಗೆ ನಿರ್ದೇಶಿಸಿತ್ತು. ರವಿಕುಮಾರ್‌ ಸಂಪಾದಿಸಿದ್ದ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಎಸಿಬಿಗೆ ಸೂಚಿಸಿತ್ತು. 

ಅಂದು ಅಲ್ಲಿ ದೂರು ನೀಡಿದ್ದ ಅಧಿಕಾರಿ ಸತೀಶ್‌ಕುಮಾರ್‌ (ಈ ವರ್ಷ ಗುಂತಕಲ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಆಗಿದ್ದರು) ಅವರು ಸಿಐಡಿ ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ, ಅಂದರೆ ಕಳೆದ ತಿಂಗಳ (ನವೆಂಬರ್‌) 10ರಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಅವರ ಮೃತದೇಹವು ರೈಲ್ವೆ ಹಳಿಯ ಬಳಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ವರದಿಯ ನಂತರ ಪೊಲೀಸರು ಹತ್ಯೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತುಲಾಭಾರ ದೇಣಿಗೆಯಲ್ಲೂ ವಂಚನೆ?

ದೇವಾಲಯದಲ್ಲಿ ನಡೆಯುವ ತುಲಾಭಾರ ಸೇವೆಗೆ ನೀಡುವ ದೇಣಿಗೆಯಲ್ಲೂ ವಂಚನೆ ನಡೆದಿದೆ ಎಂದು ಈ ವರ್ಷದ ಮೇ ತಿಂಗಳಲ್ಲಿ ಟಿಟಿಡಿ ಆಡಳಿತ ಮಂಡಳಿಯ ಸದಸ್ಯ ಜಿ.ಭಾನುಪ್ರಕಾಶ್‌ ರೆಡ್ಡಿ ಆರೋಪಿಸಿದ್ದರು. 2019–24ರ ಅವಧಿಯಲ್ಲಿ ತುಲಾಭಾರ ಸೇವೆಯ ಅಡಿಯಲ್ಲಿ ಸಂಗ್ರಹವಾಗಿದ್ದ ಎಲ್ಲ ಹಣ ದೇವಾಲಯದ ಬೊಕ್ಕಸಕ್ಕೆ ಸೇರಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಟಿಟಿಡಿಯ ವಿಚಕ್ಷಣ ಮತ್ತು ಭದ್ರತಾ ವಿಭಾಗಕ್ಕೆ ಅವರು ಮನವಿಯನ್ನೂ ಸಲ್ಲಿಸಿದ್ದರು.  

ತಿರುಪತಿ

ರಾಜಕೀಯ ಜಟಾಪಟಿ

ದೇವಾಲಯದ ಹಗರಣಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ಟಿಡಿಪಿ ಮತ್ತು ವೈಎಸ್‌ಆರ್‌ಸಿಪಿ ನಡುವೆ ಜಟಾಪಟಿ ನಡೆಯುತ್ತಿದೆ.

ಆಂಧ್ರಪ್ರದೇಶದಲ್ಲಿ ಯಾವ ರಾಜಕೀಯ ಪಕ್ಷ ಅಧಿಕಾರದಲ್ಲಿರುತ್ತದೆಯೋ ಟಿಟಿಡಿಯು ಅವರ ಕೈಗೊಂಬೆಯಂತೆ ವರ್ತಿಸುತ್ತದೆ. ಅದಕ್ಕೆ ತಕ್ಕಂತೆ ಟಿಟಿಡಿ ಅಧ್ಯಕ್ಷರನ್ನು ಆಡಳಿತ ಪಕ್ಷವೇ ನೇಮಕ ಮಾಡುತ್ತದೆ. ಈ ಹಿಂದಿನ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಅವರ ಸಂಬಂಧಿಯಾದ ವೈ.ವಿ.ಸುಬ್ಬಾರೆಡ್ಡಿ ಅವರನ್ನು ಟಿಟಿಡಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿತ್ತು ಎನ್ನುವ ಆರೋಪಗಳಿವೆ. 

ಟಿಟಿಡಿಯಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ವಿವಿಧ ಸಮಿತಿಗಳನ್ನು ಮಾಡಲಾಗುತ್ತದೆ. ಖರೀದಿ ಸಮಿತಿ, ಆರ್ಥಿಕ ಸಮಿತಿ, ಎಂಜಿನಿಯರಿಂಗ್ ಸಮಿತಿ, ಶಿಕ್ಷಣ ಸಮಿತಿ ಹೀಗೆ ನಿರ್ದಿಷ್ಟ ಕೆಲಸಕಾರ್ಯಗಳು ನಿರ್ದಿಷ್ಟ ಸಮಿತಿಗಳ ವ್ಯಾಪ್ತಿಯಲ್ಲಿ ಬರುತ್ತವೆ. ಒಂದು ಕಾಮಗಾರಿ/ತೀರ್ಮಾನದ ಬಗ್ಗೆ ಸಮಿತಿಗಳು ನಿರ್ಣಯ ಮಾಡಲಿದ್ದು, ಅದನ್ನು ಟಿಟಿಡಿ ಅನುಮೋದಿಸುತ್ತದೆ ಇಲ್ಲವೇ ತಿರಸ್ಕರಿಸುತ್ತದೆ. ಜಗನ್ ಸರ್ಕಾರದ ಒತ್ತಡಕ್ಕೆ ಮಣಿದು ಈ ಸಮಿತಿಗಳು ಟಿಟಿಡಿಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದವು ಎನ್ನುವ ಆರೋಪಗಳು ಕೇಳಿ ಬಂದಿವೆ. ಎಲ್ಲ ಸರ್ಕಾರಗಳ ಅವಧಿಯಲ್ಲೂ ಟಿಟಿಡಿಯಲ್ಲಿ ಇಂಥ ಅವ್ಯವಹಾರಗಳು ನಡೆದಿರುವ ನಿದರ್ಶನಗಳಿವೆ.  

ವಿಐಪಿಗಳ ನೆಚ್ಚಿನ ‘ಡಾಲರ್ ಶೇಷಾದ್ರಿ’

ಶೇಷಾದ್ರಿ ಎನ್ನುವವರು ದೇವಸ್ಥಾನದ ಅರ್ಚಕ, ಟಿಟಿಡಿಯ ವಿಶೇಷಾಧಿಕಾರಿಯಾಗಿದ್ದರು. 1978ರಲ್ಲಿ ಟಿಟಿಡಿಯಲ್ಲಿ ಕೆಲಸಕ್ಕೆ ಸೇರಿ ನಂತರ ಅಲ್ಲಿಯೇ ಹಂತಹಂತವಾಗಿ ಮೇಲೇರಿದ್ದರು. ಡಾಲರ್ ಶೇಷಾದ್ರಿ ಎಂದೇ ಹೆಸರಾಗಿದ್ದ ಅವರು ಹಲವು ದಶಕ ಟಿಟಿಡಿ ಮತ್ತು ವೆಂಕಟೇಶ್ವರನ ದೇವಸ್ಥಾನದ ಮೇಲೆ ಹಿಡಿತ ಹೊಂದಿದ್ದರು. ‘ಸೂಪರ್ ಪ್ರೀಸ್ಟ್’ ಎಂದೇ ಹೆಸರು ಪಡೆದಿದ್ದರು. ತಿರುಪತಿಗೆ ಯಾರೇ ಗಣ್ಯ ವ್ಯಕ್ತಿ ಬಂದರೂ ಶೇಷಾದ್ರಿ ಅಲ್ಲಿ ಹಾಜರಾಗುತ್ತಿದ್ದರು. ಅವರ ದರ್ಶನ, ವಸತಿ ಇತ್ಯಾದಿ ಎಲ್ಲ ವ್ಯವಸ್ಥೆ ಮಾಡುತ್ತಿದ್ದರು. ಗ್ಯಾನಿ ಜೈಲ್‌ಸಿಂಗ್, ಪಿ.ವಿ.ನರಸಿಂಹರಾವ್, ಮನಮೋಹನ್‌ಸಿಂಗ್, ನರೇಂದ್ರ ಮೋದಿ ಅವರಿಂದ ಹಿಡಿದು ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ತಾರೆಗಳಿಗೆ ಆತಿಥ್ಯ ನೀಡಿದ್ದರು. ಈ ಮೂಲಕ ಶೇಷಾದ್ರಿ ಗಣ್ಯರ ಒಲವು ಗಳಿಸುತ್ತಿದ್ದರು. ಟಿಟಿಡಿಗೆ ಅಧ್ಯಕ್ಷ, ಸದಸ್ಯರ ಆಯ್ಕೆ ಮೇಲೆ ಪ್ರಭಾವ ಬೀರುವಷ್ಟು ಪ್ರಭಾವಶಾಲಿಯಾಗಿದ್ದರು. 

2006ರಲ್ಲಿ ತಿರುಮಲ ದೇವಸ್ಥಾನದ ‘ಬೊಕ್ಕಸ’ದಿಂದ ತಲಾ ಐದು ಗ್ರಾಂ ತೂಕದ 300 ಬಂಗಾರದ ನಾಣ್ಯಗಳು ಕಾಣೆಯಾಗಿದ್ದವು. ಇದರ ಹಿಂದೆ ದಶಕಗಳ ಕಾಲ ಬೊಕ್ಕಸದ ಉಸ್ತುವಾರಿ ಹೊತ್ತಿದ್ದ ಶೇಷಾದ್ರಿ ಅವರ ಕೈವಾಡ ಇದೆ ಎನ್ನುವ ಆರೋಪಗಳು ಕೇಳಿಬಂದಿದ್ದವು. ಹಗರಣ ಬಯಲಿಗೆ ಬಂದ ನಂತರ, 2008ರಲ್ಲಿ ಡಾಲರ್ ಶೇಷಾದ್ರಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಟಿಟಿಡಿಯಿಂದ ವಜಾ ಮಾಡಲಾಗಿತ್ತು. ನಂತರ ಸರ್ಕಾರವು ಅವರ ವಿರುದ್ಧದ ವಜಾ ಆದೇಶವನ್ನು ಹಿಂಪಡೆದಿತ್ತು. ನಿವೃತ್ತಿ ನಂತರವೂ ಹಲವು ಸರ್ಕಾರಗಳು ಅವರ ಅವಧಿಯನ್ನು ಹಲವು ಬಾರಿ ವಿಸ್ತರಿಸಿದ್ದವು. ತಮ್ಮ 75ನೇ ವಯಸ್ಸಿನಲ್ಲಿ (2021) ಹೃದಯಾಘಾತದಿಂದ ನಿಧನರಾಗುವವರೆಗೂ ಅವರು ಟಿಟಿಡಿಯಲ್ಲಿ ನಿರ್ಣಾಯಕ ಅಧಿಕಾರ ಹೊಂದಿದ್ದರು.   

ದರ್ಶನಕ್ಕೆ ನೂಕುನುಗ್ಗಲು 

ದೇವಸ್ಥಾನಕ್ಕೆ ದಿನವೊಂದಕ್ಕೆ ಸುಮಾರು 65ರಿಂದ 70 ಸಾವಿರ ಭಕ್ತರು ದೇವರ ದರ್ಶನ ಪಡೆಯಲು ತಿರುಮಲಕ್ಕೆ ಆಗಮಿಸುತ್ತಾರೆ. ಆದರೆ, ಭಕ್ತರು ಬಂದ ದಿನವೇ ಅವರಿಗೆ ದರ್ಶನ ಸಿಗುವುದು ಅಪರೂಪ. ಅವರು ದರ್ಶನಕ್ಕಾಗಿ ಹಲವು ಗಂಟೆ, ದಿನ ಕಾಯಬೇಕು. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ವ್ಯವಸ್ಥೆ ಇದೆಯಾದರೂ, ಅಲ್ಲಿ ಟಿಕೆಟ್ ಪಡೆಯಲು ಕೆಲವರಿಗೆ ಮಾತ್ರ ಸಾಧ್ಯವಾಗುತ್ತದೆ. ಉಳಿದವರು ತಿರುಮಲಕ್ಕೆ ತೆರಳಿ ಕ್ಯೂನಲ್ಲಿ ನಿಂತು ದರ್ಶನದ ಟಿಕೆಟ್ ಪಡೆಯಬೇಕು. ಅವರ ಸರದಿ ಬರುವವರೆಗೆ ಕಾಯಬೇಕು. ಹೀಗೆ ಟಿಕೆಟ್‌ ಪಡೆಯಲು ನಿಂತಿದ್ದ ಜನರ ನಡುವೆ ನೂಕುನುಗ್ಗಲು ಸಂಭವಿಸಿ, ಕಾಲ್ತುಳಿತದಿಂದ 6 ಮಂದಿ ಭಕ್ತರು ಸತ್ತು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದ ಘಟನೆ ನಡೆದಿತ್ತು. 

ಉದ್ಯಮಿಗಳು, ಚಿತ್ರರಂಗದವರು, ರಾಜಕಾರಣಿಗಳು ಇಲ್ಲಿಗೆ ಆಗಾಗ್ಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅವರಿಗೆ ವಿಶೇಷ ದರ್ಶನದ ವ್ಯವಸ್ಥೆಯೂ ಇದೆ. ವಿಐಪಿ ಪಾಸ್‌ಗಳಿಂದಲೇ ಸಾಮಾನ್ಯ ಭಕ್ತರಿಗೆ ಸಮಸ್ಯೆಯಾಗುತ್ತಿದೆ ಎಂದು ಭಕ್ತರು ಹಲವು ಬಾರಿ ಆಕ್ರೋಶ ವ್ಯಕ್ತಪಡಿಸಿದ್ದಿದೆ. ಕಾಲ್ತುಳಿತ ಘಟನೆಯ ನಂತರ ವಿಐ‍ಪಿ ಪಾಸ್‌ಗಳನ್ನು ಕಡಿಮೆ ಮಾಡಿದ್ದೇವೆ ಎಂದು ಟಿಟಿಡಿ ಪ್ರತಿಪಾದಿಸುತ್ತಿದೆ. ಆದರೆ, ಗಣ್ಯರಿಗೆ ವಿಶೇಷ ದರ್ಶನದ ವ್ಯವಸ್ಥೆ ಈಗಲೂ ಇದೆ.

.ತಿಮ್ಮಪ್ಪನ ಸನ್ನಿಧಿಯಲ್ಲಿ ಚಿನ್ನದ ರಥೋತ್ಸವ
ಆಧಾರ: ಪಿಟಿಐ, ಬಿಬಿಸಿ, ಮಾಧ್ಯಮ ವರದಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.