
ಕಲೆ: ಸಂತೋಷ್ ಸಸಿಹಿತ್ಲು
ಗಂಡು ಅಥವಾ ಹೆಣ್ಣು ಎಂಬ ಲಿಂಗ ವರ್ಗೀಕರಣಕ್ಕೆ ಸೇರದ, ಭಿನ್ನ ‘ಲಿಂಗತ್ವ’ದ ಹಾದಿ ಕಂಡುಕೊಂಡವರು ಲಿಂಗತ್ವ ಅಲ್ಪಸಂಖ್ಯಾತರು (ಟ್ರಾನ್ಸ್ ಜೆಂಡರ್). ಲಿಂಗತ್ವ ಅಲ್ಪಸಂಖ್ಯಾತರ ವರ್ಗದಲ್ಲಿ ಜೋಗಪ್ಪಗಳು, ಹಿಜ್ರಾಗಳು, ಅಂತರ್ ಲಿಂಗಿಗಳು, ಕೋಥಿ, ಜೋಗ್ತಾಗಳು (ಮಹಾರಾಷ್ಟ್ರ), ಶಿವಶಕ್ತಿಗಳು (ಆಂಧ್ರ) ಮತ್ತು ಅರವಾಣಿಗಳು (ತಮಿಳುನಾಡು) ಮುಂತಾದವರಿದ್ದಾರೆ. 2014ರಲ್ಲಿ ಸುಪ್ರೀಂ ಕೋರ್ಟ್ ತೀರ್ಪೊಂದರಲ್ಲಿ, ಅಸ್ತಿತ್ವದಲ್ಲಿರುವ ಅವಳಿ ಲಿಂಗಿಗಳ (ಗಂಡು ಮತ್ತು ಹೆಣ್ಣು) ಜೊತೆ ಟ್ರಾನ್ಸ್‌ಜೆಂಡರ್‌ಗಳನ್ನು ತೃತೀಯ ಲಿಂಗಿಗಳೆಂದು ಮಾನ್ಯತೆ ನೀಡಿದೆ.
ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ವಿಲೀನಗೊಳಿಸಿ, ಅವರ ಬದುಕಿನ ಗುಣಮಟ್ಟ ಸುಧಾರಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2017ರಲ್ಲಿ ‘ಕರ್ನಾಟಕದ ಅಲ್ಪಸಂಖ್ಯಾತರ ನೀತಿ’ ಜಾರಿಗೆ ತಂದಿದೆ. ಮುಂದುವರಿದು, ಅವಮಾನ, ತಾರತಮ್ಯ, ಖಿನ್ನತೆ, ಆತ್ಮಹತ್ಯಾ ಪ್ರವೃತ್ತಿಯಿಂದ ಅವರನ್ನು ಹೊರತರಬೇಕು. ಜತೆಗೆ ಈ ವರ್ಗದವರ ನೆರವಿಗಾಗಿ ‘ಲಿಂಗತ್ವ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಮಂಡಳಿ’ ಸ್ಥಾಪಿಸುವ ಮೂಲ ಉದ್ದೇಶದಿಂದ ಇಡೀ ದೇಶದಲ್ಲಿಯೇ ಕರ್ನಾಟಕದಲ್ಲಿ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ನಡೆಸಲಾಗಿದೆ. ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ 2025ರ ಸೆ. 15ರಿಂದ ನ. 21ರವರೆಗೆ ನಡೆದ ಸಮೀಕ್ಷೆಯಲ್ಲಿ ಈ ವರ್ಗದ ಸಂಪೂರ್ಣ ಚಿತ್ರಣ ಲಭ್ಯವಾಗಿದೆ. ಸಮೀಕ್ಷೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ವಾಸಸ್ಥಳ, ವಲಸೆ, ಕುಟುಂಬದ ಮೇಲಿನ ಅವಲಂಬನೆ, ಉದ್ಯೋಗ, ಆದಾಯ ಸೇರಿದಂತೆ ಹಲವು ರೀತಿಯ ಮಾಹಿತಿ ಸಂಗ್ರಹಿಸಲಾಗಿದೆ.
ರಾಜ್ಯದಲ್ಲಿ ಒಟ್ಟು 10,365 ಲಿಂಗತ್ವ ಅಲ್ಪಸಂಖ್ಯಾತರು ಇದ್ದು, ಈ ಪೈಕಿ 5,509 ಮಂದಿ ಗ್ರಾಮೀಣ ಪ್ರದೇಶದಲ್ಲಿದ್ದಾರೆ; ನಗರ ಪ್ರದೇಶದಲ್ಲಿ 3,589 ಮಂದಿ ನೆಲಸಿದ್ದಾರೆ. ಒಟ್ಟು ಜನರಲ್ಲಿ 10,106 ಮಂದಿ ಕರ್ನಾಟಕದವರು. 114 ಮಂದಿ ಆಂಧ್ರ ಪ್ರದೇಶ, ಕೇರಳ, ಮಹಾರಾಷ್ಟ್ರ, ತಮಿಳುನಾಡು, ತೆಲಂಗಾಣ ಮತ್ತಿತರ ರಾಜ್ಯಗಳಿಂದ ವಲಸೆ ಬಂದವರು. 1,461 ಮಂದಿ ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಸಮೀಕ್ಷೆಯಲ್ಲಿ 18 ವರ್ಷದ ಒಳಗಿನ 115 ಲಿಂಗತ್ವ ಅಲ್ಪಸಂಖ್ಯಾತ ಮಕ್ಕಳು ಇರುವುದನ್ನು ಗುರುತಿಸಲಾಗಿದೆ. 26 ಮಕ್ಕಳು ಕಾಲೇಜು ಶಿಕ್ಷಣ, 9 ಮಂದಿ ಶಾಲಾ ಶಿಕ್ಷಣ ಪಡೆದಿದ್ದಾರೆ. 80 ಮಕ್ಕಳು ವಿದ್ಯಾಭ್ಯಾಸದ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. 6 ಮಕ್ಕಳು ಶಾಲಾ ಹಂತದಲ್ಲೇ ಶಿಕ್ಷಣ ಮೊಟಕುಗೊಳಿಸಿದ್ದರೆ, 19 ಮಕ್ಕಳು ಕಾಲೇಜಿನಲ್ಲಿ ಇರುವಾಗಿ ಅರ್ಧಕ್ಕೆ ನಿಲ್ಲಿಸಿರುವುದು ಗೊತ್ತಾಗಿದೆ.
ಶಿಕ್ಷಣಕ್ಕಾಗಿ 53 ಮಕ್ಕಳು ಆರ್ಥಿಕ ಸೌಲಭ್ಯ ಕೋರಿದ್ದು, ಮೂವರು ಮಾತ್ರ ವಿದ್ಯಾರ್ಥಿ ವೇತನ ಪಡೆಯುತ್ತಿದ್ದಾರೆ. 45 ಮಕ್ಕಳು ಶಾಲಾ ಕಾಲೇಜುಗಳಲ್ಲಿ ದೌರ್ಜನ್ಯಕ್ಕೆ ಒಳಗಾಗಿರುವುದು, 36 ಮಕ್ಕಳು ಶಾಲಾ ಕಾಲೇಜುಗಳಿಂದ ಹೊರದೂಡಲ್ಪಟ್ಟಿರುವುದು, 54 ಮಕ್ಕಳು ತಾರತಮ್ಯಕ್ಕೆ ಒಳಗಾಗಿರುವುದು ತಿಳಿದುಬಂದಿದೆ. ಚಿಕಿತ್ಸೆ ಪಡೆಯಲು ಆಸ್ಪತ್ರೆಗಳಿಗೆ ತೆರಳಿದ ವೇಳೆಯಲ್ಲಿಯೂ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ತಾರತಮ್ಯಕ್ಕೆ ಅಥವಾ ಅವಮಾನಕ್ಕೆ ಒಳಗಾಗಿರುವುದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಶಿಫಾರಸುಗಳು
ಮನೆಗಳಲ್ಲಿ ಪೋಷಕರಿಗೆ, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು; ಶಿಕ್ಷಣಕ್ಕೆ ಆರ್ಥಿಕ ಸೌಲಭ್ಯ ಕಲ್ಪಿಸಬೇಕು
ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಲ್ಲಿ ಅರ್ಜಿ ಹಾಕುವ ಎಲ್ಲ ಲಿಂಗತ್ವ ಅಲ್ಪಸಂಖ್ಯಾತ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಬೇಕು
ಲಿಂಗತ್ವ ದೃಢೀಕರಣ ಶಸ್ತ್ರಚಿಕಿತ್ಸೆಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಆಯುಷ್ಮಾನ್ ಭಾರತ್ ಕಾರ್ಡ್ ವಿತರಿಸಬೇಕು
ಖಾಸಗಿ ಕ್ಷೇತ್ರದಲ್ಲಿ ಉದ್ಯೋಗ ದೊರೆಯುವಂತೆ ಯೋಜನೆ ರೂಪಿಸಬೇಕು; ಶೇ 1ರಷ್ಟು ಮೀಸಲಾತಿ ಕೊಡಬೇಕು
ಕೌಶಲ್ಯಾಭಿವೃದ್ಧಿ ಇಲಾಖೆ ಮೂಲಕ ವಿಶೇಷ ತರಬೇತಿ ನೀಡಲು ಯೋಜನೆ ರೂಪಿಸಬೇಕು
ವಸತಿ ಸೌಲಭ್ಯ ಕಲ್ಪಿಸಬೇಕು, ವಿಶೇಷ ಕ್ಯಾಂಪ್‌ಗಳ ಮೂಲಕ ಪಡಿತರ ಚೀಟಿ ನೀಡಬೇಕು
ಸಾರ್ವಜನಿಕ ಸ್ಥಳಗಳಲ್ಲಿ ಪ್ರತ್ಯೇಕ ಶೌಚಾಲಯ, ನಿರೀಕ್ಷಣಾ ಕೊಠಡಿಗಳನ್ನು ನಿರ್ಮಿಸಬೇಕು
ಸರ್ಕಾರದ ಯೋಜನೆಗಳು, ಸವಲತ್ತುಗಳಲ್ಲಿ ಆದ್ಯತೆ ನೀಡಬೇಕು
ಭಿಕ್ಷಾಟನೆಯಲ್ಲಿ ತೊಡಗಿರುವವರಿಗೆ ಭಿಕ್ಷುಕರ ಪುನರ್ವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಬೇಕು
ಹಿರಿಯರಿಗೆ ವೃದ್ಧಾಶ್ರಮಗಳಲ್ಲಿ ವಾಸ್ತವ್ಯ ಕಲ್ಪಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.