ಎರಡು ವಾರಗಳಿಂದ ರಾಜ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಟಿಸ್ ಸದ್ದು ಮಾಡುತ್ತಿದೆ. ಜಿಎಸ್‌ಟಿಯನ್ನು ಅರ್ಥಮಾಡಿಕೊಳ್ಳಲು ಜನರಿಗೆ ಒಂದಷ್ಟು ಸಮಯ ಬೇಕಾಗಬಹುದು ಎನ್ನುವುದನ್ನೂ ಯೋಚಿಸದೆ 2017ರ ಜುಲೈ 1ರಂದು ದೇಶದಾದ್ಯಂತ ಅದನ್ನು ಜಾರಿಗೆ ತರಲಾಗಿತ್ತು. ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬಂದು ಎಂಟು ವರ್ಷಗಳು ಕಳೆದಿದ್ದರೂ ಹೆಚ್ಚಿನ ಜನರಿಗೆ ಅದರ ಬಗ್ಗೆ ತಿಳಿದಿಲ್ಲ; ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾ ಬಂದ ಈ ವ್ಯವಸ್ಥೆ ಸುಧಾರಿಸುತ್ತಿದೆ ಎಂಬ ಭಾವನೆ ಮೂಡಿದ ಹೊತ್ತಿನಲ್ಲೇ ಈಗ ರಾಜ್ಯದ ಸಾವಿರಾರು ಹಣ್ಣು, ತರಕಾರಿ, ಬೇಕರಿ, ಕಾಂಡಿಮೆಂಟ್ಸ್ ವ್ಯಾಪಾರಿಗಳು, ಮದ್ಯದ ಅಂಗಡಿಗಳಲ್ಲಿ ಕುರುಕಲು ತಿಂಡಿ ಮಾಡುವವರು, ಹೋಟೆಲ್‌ಗಳು, ಪಾನ್ ಬೀಡಾ ಅಂಗಡಿಗಳನ್ನು ನಡೆಸುತ್ತಿರುವವರಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ. ನೋಟಿಸ್ ಕಂಡ ವ್ಯಾಪಾರಿಗಳು ಆತಂಕಗೊಂಡಿದ್ದಾರೆ, ದ್ವಂದ್ವಕ್ಕೆ ಒಳಗಾಗಿದ್ದಾರೆ, ಒಂದಷ್ಟು ಜನ ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ. ಮತ್ತೊಂದಷ್ಟು ಜನ ರೊಚ್ಚಿಗೂ ಎದ್ದಿದ್ದಾರೆ. ನೋಟಿಸ್ ನೀಡುವುದಕ್ಕೆ ಏನು ಕಾರಣ? ಈ ಗೊಂದಲ ಏಕೆ? ಉತ್ತರಗಳು ಇಲ್ಲಿವೆ
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು 50:50 ಅನುಪಾತದಲ್ಲಿ ಪಾಲು ಪಡೆಯುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯು ಕೇಂದ್ರ ಸರ್ಕಾರದ ಪರೋಕ್ಷ ತೆರಿಗೆಗಳ ಕೇಂದ್ರೀಯ ಮಂಡಳಿ ಅಡಿಯಲ್ಲಿ ಬರುವ ತೆರಿಗೆ ಇಲಾಖೆ ಮತ್ತು ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಗಳ ಅಧೀನದಲ್ಲಿ ಬರುತ್ತದೆ. ನಾವು ಖರೀದಿಸುವ ಪ್ರತಿ ಸರಕು ಮತ್ತು ಪಡೆಯುವ ಪ್ರತಿ ಸೇವೆಯ ಮೇಲೆ ಪಾವತಿಸುವ ಒಂದು ರೂಪಾಯಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ತಲಾ 50 ಪೈಸೆ ತೆರಿಗೆ ಹೋಗುತ್ತದೆ. ಅಂತರರಾಜ್ಯ ವಹಿವಾಟಿಗೆ ಸಂಬಂಧಿಸಿದಂತೆ ಐಜಿಎಸ್‌ಟಿ ಇದ್ದು, ಅದರಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಪಾಲಿದೆ.
ರಾಜ್ಯದಲ್ಲಿ ಇದುವರೆಗೆ ಬಂದ ನೋಟಿಸ್‌ಗಳನ್ನು ಆಧರಿಸಿ ಹೇಳುವುದಾದರೆ, ರಾಜ್ಯ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್‌ಗಳನ್ನು ನೀಡಿದೆ. ಕೇಂದ್ರ ತೆರಿಗೆ ಇಲಾಖೆ ಕೊಟ್ಟಿದ್ದು ಎಲ್ಲೂ ವರದಿಯಾಗಿಲ್ಲ. ಆದರೆ, ಸಂಗ್ರಹವಾಗುವ ಪ್ರತಿ ರೂಪಾಯಿ ತೆರಿಗೆಯಲ್ಲೂ ಕೇಂದ್ರಕ್ಕೆ ಶೇ 50 ಪಾವತಿಯಾಗುತ್ತದೆ ಎಂಬುದನ್ನು ನಾವು ನೆನಪಿಡಬೇಕು.
ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ) ಮೂಲಕ ನಡೆದ ವಹಿವಾಟಿನ ಆಧಾರದಲ್ಲಿ ಪ್ರತಿ ಆರ್ಥಿಕ ವರ್ಷ ಕಳೆದ ತಕ್ಷಣ ನೋಟಿಸ್ ನೀಡದೆ, ಈಗ ಒಟ್ಟಿಗೆ ಮೂರು ಅಥವಾ ನಾಲ್ಕು ವರ್ಷಗಳ ವಹಿವಾಟುಗಳ ಆಧಾರದಲ್ಲಿ ನೋಟಿಸ್ ಕೊಟ್ಟಿದ್ದು ಯಾಕೆ ಎಂಬುದು ಬಹುತೇಕರ ಪ್ರಶ್ನೆ. ಜಿಎಸ್‌ಟಿ 2017ರಲ್ಲಿ ಜಾರಿಗೆ ಬಂದಿದ್ದರೂ ಆಗಿನಿಂದ ನೀಡದೆ, 2020ರಿಂದ ನೋಟಿಸ್ ಯಾಕೆ ಕೊಟ್ಟದ್ದು ಎನ್ನುವ ಪ್ರಶ್ನೆಯೂ ಇದೆ. 2020ರ ನಂತರ ನಡೆದಿದ್ದ ಯುಪಿಐ ವಹಿವಾಟು ಆಧರಿಸಿ ನೋಟಿಸ್ ನೀಡಲಾಗಿದೆ ಎಂಬ ವಿಷಯವನ್ನು ವಾಣಿಜ್ಯ ತೆರಿಗೆ ಇಲಾಖೆಯೇ ಹೇಳಿದ್ದನ್ನು ನಾವಿಲ್ಲಿ ಗಮನಿಸಬೇಕು. ಅಂದರೆ, ಯಾವ ವರ್ಷದಿಂದ ಯುಪಿಐ ದತ್ತಾಂಶ ಲಭ್ಯವಿದೆಯೋ, ಆಯಾ ವರ್ಷದ ಮಾಹಿತಿ ಆಧರಿಸಿ ನೋಟಿಸ್ ನೀಡಲಾಗಿದೆ ಎಂಬುದು ಸ್ಪಷ್ಟ. ನೋಟಿಸ್ ನೀಡುವುದಕ್ಕೆ ಸಮಯದ ಮಿತಿ ಇದೆ. ಒಂದು ಸಂಸ್ಥೆಯ ಮೌಲ್ಯಮಾಪನ (ಅಸೆಸ್‌ಮೆಂಟ್) ಮಾಡಲು ಕಾನೂನಿನ ಅಡಿಯಲ್ಲಿ ಐದು ವರ್ಷಗಳವರೆಗೆ ಅವಕಾಶವಿದೆ. ಈ ಕಾರಣದಿಂದ ನೋಟಿಸ್ ಜಾರಿ ಮಾಡಲು ತಡವಾಗಿರಬಹುದು.
ಒಂದು ಆರ್ಥಿಕ ವರ್ಷದಲ್ಲಿ ನಡೆಯುವ ಸೇವೆಗೆ (service) ಸಂಬಂಧಿಸಿದ ವಹಿವಾಟಿನ ಮೊತ್ತ ₹20 ಲಕ್ಷಕ್ಕಿಂತ ಕಡಿಮೆ ಇದ್ದರೆ, ಅಂತಹ ವ್ಯಾಪಾರಿಗಳು ಜಿಎಸ್‌ಟಿ ನೋಂದಣಿ ಮಾಡುವ ಅವಶ್ಯಕತೆ ಇಲ್ಲ. ಅದೇ ರೀತಿ, ವಾರ್ಷಿಕ ಸರಕು (goods) ವಹಿವಾಟಿನ ಮೊತ್ತ ₹40 ಲಕ್ಷದವರೆಗೆ ಇದ್ದರೆ ನೋಂದಣಿ ಮಾಡಬೇಕಾಗಿಲ್ಲ. ಒಂದು ವೇಳೆ ಸೇವೆ ಮತ್ತು ಸರಕು ವ್ಯವಹಾರದ ಮಿತಿಯು ಇದನ್ನು ಮೀರಿದ್ದರೆ, ಜಿಎಸ್‌ಟಿ ನೋಂದಣಿ ಮತ್ತು ತೆರಿಗೆ ಪಾವತಿಸುವುದು ಕಡ್ಡಾಯ. ಜಿಎಸ್‌ಟಿ ನೋಂದಣಿ ಮಾಡಿಕೊಳ್ಳದೆ, ವಾರ್ಷಿಕವಾಗಿ ಈ ಮಿತಿಗಿಂತ ಹೆಚ್ಚು ವಹಿವಾಟು ನಡೆಸಿದವರಿಗೆ ಈಗ ನೋಟಿಸ್ ಬಂದಿದೆ
ಆರ್ಥಿಕ ವರ್ಷದಲ್ಲಿ ₹20 ಲಕ್ಷ (ಸೇವೆ), ₹40 ಲಕ್ಷ (ಸರಕು) ಮಿತಿಗಿಂತ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಿಗಳು ತೆರಿಗೆ ಪಾವತಿಸುವುದು ಕಡ್ಡಾಯ. ಆದರೆ, ಸಣ್ಣ ವ್ಯಾಪಾರಿಗಳಿಗಾಗಿಯೇ ಕಾಂಪೋಸಿಷನ್ ಸ್ಕೀಮ್ ಅಥವಾ ರಾಜಿ ತೆರಿಗೆ ಪದ್ಧತಿ ಎಂಬ ವ್ಯವಸ್ಥೆ ಇದೆ. ಇದರಲ್ಲಿ ಒಬ್ಬ ಸರಕು ವ್ಯಾಪಾರಿಯ ವಾರ್ಷಿಕ ವಹಿವಾಟು ₹1.5 ಕೋಟಿಯ ಒಳಗಿದ್ದರೆ ಅಂತಹ ವ್ಯಾಪಾರಿ ಕೇವಲ ಶೇ 1ರಷ್ಟು (ಸಿಜಿಎಸ್‌ಟಿ ಶೇ 0.5, ಎಸ್‌ಜಿಎಸ್‌ಟಿ ಶೇ 0.5) ತೆರಿಗೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಿ ತಮ್ಮ ರಿಟರ್ನ್ ಸಲ್ಲಿಸಬಹುದು. ಅದೇ ರೀತಿ, ಸೇವಾ ವಲಯದ ವ್ಯಕ್ತಿ ಅಥವಾ ಸಂಸ್ಥೆ ವಾರ್ಷಿಕ ವಹಿವಾಟು ₹50 ಲಕ್ಷದ ಒಳಗೆ ಇದ್ದರೆ, ಅದಕ್ಕೆ ಸಂಬಂಧಿಸಿದಂತೆ ಶೇ 6 ರಷ್ಟು (ಸಿಜಿಎಸ್‌ಟಿ ಶೇ 3, ಎಸ್‌ಜಿಎಸ್‌ಟಿ ಶೇ 3) ತೆರಿಗೆ ಪಾವತಿಸಬೇಕು. ಹೋಟೆಲ್ ಮಾಲೀಕರೂ ಈ ರಾಜಿ ತೆರಿಗೆ ಪದ್ಧತಿ ಅಳವಡಿಸಿಕೊಳ್ಳಬಹುದು. ಅವರು ಶೇ 5ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ (ಸಿಜಿಎಸ್‌ಟಿ ಶೇ 2.5, ಎಸ್‌ಜಿಎಸ್‌ಟಿ ಶೇ 2.5).
ಈ ರಾಜಿ ತೆರಿಗೆ ಪದ್ಧತಿಯನ್ನು ನೋಂದಣಿ ಸಮಯದಲ್ಲಿ ಅಥವಾ ಪ್ರತಿ ಆರ್ಥಿಕ ವರ್ಷದ ಆರಂಭದಲ್ಲಿ ಆಯ್ಕೆ ಮಾಡಿಕೊಳ್ಳಲು ಮಾತ್ರ ಅವಕಾಶವಿರುತ್ತದೆ. ಈಗಾಗಲೇ ನೋಟಿಸ್ ಪಡೆದವರಿಗೆ ಕಳೆದ ಆರ್ಥಿಕ ವರ್ಷಗಳಿಗೆ ಇದರ ಆಯ್ಕೆಯ ಅವಕಾಶ ಇಲ್ಲ.
ಪರೋಕ್ಷ ತೆರಿಗೆ ವಿನಾಯಿತಿ ಕೆಲವು ವಸ್ತುಗಳಿಗೆ ಮಾತ್ರವಿದೆ. ಅದರಲ್ಲಿ, ಈಗ ನೋಟಿಸ್ ಬಂದಂತಹ ವಿಷಯಕ್ಕೆ ಸಂಬಂಧಿಸಿದಂತೆ ಹಾಲು, ತರಕಾರಿ, ಹಣ್ಣಗಳು, ಹಾಲು, ಮಾಂಸ, ಮೀನು, ಮೊಟ್ಟೆ, ಅಕ್ಕಿ, ರಾಗಿ, ಜೋಳ, ಗೋಧಿ, ಸಜ್ಜೆ, ನವಣೆ ಇವುಗಳಿಗೆ ತೆರಿಗೆ ವಿನಾಯಿತಿ ಇದೆ. ಉಳಿದ ಪದಾರ್ಥಗಳಿಗೆ ಸಂಬಂಧಿಸಿದಂತೆ ಸರಕು ಮತ್ತು ಸೇವಾ ತೆರಿಗೆಯ ಕಾಯ್ದೆಯ ಪ್ರಕಾರ ಆಯಾ ಸರಕುಗಳಿಗೆ ಇರುವಂತಹ ಶೇ 5, ಶೇ 12, ಶೇ 18 ಮತ್ತು ಶೇ 28 ತೆರಿಗೆ ಪಾವತಿಸಬೇಕು. ಚಿನ್ನ ಬೆಳ್ಳಿಗೆ ಶೇ 3... ಹೀಗೆ ತೆರಿಗೆ ಅನ್ವಯಿಸುತ್ತದೆ.
ನೋಟಿಸ್ ಬಂದ ತಕ್ಷಣ ಭಯಭೀತರಾಗದೆ ನಿಮ್ಮ ಯುಪಿಐ ವಹಿವಾಟಿನ ವಿವರಗಳನ್ನು ಆಯಾ ಆರ್ಥಿಕ ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆದು (ಬಹುತೇಕರದ್ದು ನೂರಾರು/ ಸಾವಿರಾರು ಪುಟಗಳಿರುವುದರಿಂದ ಸಾಫ್ಟ್ ಕಾಪಿ ಡೌನ್ ಲೋಡ್ ಮಾಡುವುದು ಉತ್ತಮ) ಅದರಲ್ಲಿ ಬಂದಿರುವುದೆಲ್ಲಾ ವ್ಯಾಪಾರದ ಹಣವಾ? ಬೇರೆ ಸಾಲಗಳಿದ್ದವೇ? ನಗದು ಠೇವಣಿ ಇದೆಯೇ? ನೀವು ಯಾವ ವಸ್ತುಗಳನ್ನು ಮಾರುತ್ತಿದ್ದೀರಿ? ಹೀಗೆ ಪ್ರತಿಯೊಂದು ವಿವರವನ್ನೂ ನೋಟಿಸ್ ಕೊಟ್ಟ ಅಧಿಕಾರಿಗೆ ಉತ್ತರಿಸಬೇಕು. ಇಲ್ಲದಿದ್ದರೆ ನಿಮ್ಮದೇನೂ ತಕರಾರಿಲ್ಲ ಎಂದು ಅಧಿಕಾರಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಆದೇಶ ಮಾಡಲು ಅವಕಾಶವಿದೆ.
ಸರಕು ಮತ್ತು ಸೇವಾ ತೆರಿಗೆ ಕೇಂದ್ರ ಸರ್ಕಾರದ ನೇರ ವ್ಯಾಪ್ತಿಯಲ್ಲಿ ಇಲ್ಲ. ‘ಜಿಎಸ್‌ಟಿ ಕೌನ್ಸಿಲ್’ ಎನ್ನುವ ಪರೋಕ್ಷ ತೆರಿಗೆ ಮಂಡಳಿಯ ಅಡಿಯಲ್ಲಿ ಬರುತ್ತದೆ. ಕೇಂದ್ರ ಹಣಕಾಸು ಸಚಿವರು ಇದಕ್ಕೆ ಅಧ್ಯಕ್ಷರು. ಉಳಿದಂತೆ ಪ್ರತಿ ರಾಜ್ಯದ ಪ್ರತಿನಿಧಿ ಅಥವಾ ಹಣಕಾಸು ಮಂತ್ರಿ ಆಯಾ ರಾಜ್ಯದ ಸಮಸ್ಯೆಗಳನ್ನು, ಪ್ರಶ್ನೆಗಳನ್ನು ಮಂಡಳಿ ಸಭೆಯಲ್ಲಿ ಇರಿಸುತ್ತಾರೆ. ಅಲ್ಲಿ ಅಂಗೀಕಾರವಾದ, ಅನುಮೋದಿಸಲ್ಪಟ್ಟ ವಿಷಯಗಳನ್ನು ಮಾತ್ರ ಜಾರಿಗೆ ತರಲಾಗುತ್ತದೆಯೇ ವಿನಾ, ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಿಲಿ ತೀರ್ಮಾನ ಕೈಗೊಳ್ಳುವುದಕ್ಕೆ ಆಗುವುದಿಲ್ಲ. ಜಿಎಸ್‌ಟಿ ಮಂಡಳಿ ಮಾತ್ರ ಸದಸ್ಯರ ಬಹುಮತ ಅಭಿಪ್ರಾಯದ ಆಧಾರದ ಮೇಲೆ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಬಹುದು.
ಯುಪಿಐ ಬಳಸದೇ ನಗದು ವ್ಯವಹಾರ ಮಾಡುವುದು ಇದಕ್ಕೆ ಪರಿಹಾರವಲ್ಲ. ಇಲಾಖೆ ಈಗಾಗಲೇ ಇದರ ಬಗ್ಗೆ ಸ್ಪಷ್ಟನೆ ನೀಡಿದೆ. ಮೊದಲು ನೋಟಿಸ್‌ಗೆ ಉತ್ತರಿಸಬೇಕು. ನಂತರ ಇಲಾಖೆಯ ಅಧಿಕಾರಿಯು ನೀವು ಕೊಡುವ ಉತ್ತರ, ಅದಕ್ಕೆ ಸಂಬಂಧಿಸಿದ ದಾಖಲೆ ಎಲ್ಲವನ್ನೂ ಪರಿಶೀಲಿಸಿ ನೀವು ತೆರಿಗೆ ಕಟ್ಟಬೇಕಾ, ಜಿಎಸ್‌ಟಿ ನೋಂದಣಿ ಮಾಡಿಕೊಳ್ಳಬೇಕಾ ಎಂಬ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ. ಯಾವ ಉತ್ತರವನ್ನೂ ನೀಡದೆ ಹೋದರೆ ಜಿಎಸ್‌ಟಿ ಕಾಯ್ದೆ ಪ್ರಕಾರ, ನೀವೇ ತೆರಿಗೆ ವಂಚಿಸಿದ್ದೀರಿ ಎಂದು ಕ್ರಮ ಕೈಗೊಳ್ಳಲೂಬಹುದು. ಹಾಗಾಗಿ ‘ನಾನ್ಯಾಕೆ ಉತ್ತರಿಸಲಿ’ ಎನ್ನುವುದಕ್ಕಿಂತ ನಿಮ್ಮ ಉತ್ತರ ಲಿಖಿತ ರೂಪದಲ್ಲಿ ತೆರಿಗೆ ಇಲಾಖೆಯ ಕಚೇರಿಗೆ ಸಲ್ಲಿಸುವುದು ಸೂಕ್ತ. ನೀವು ತೆರಿಗೆ ವ್ಯಾಪ್ತಿಗೆ ಬರುತ್ತೀರೋ ಇಲ್ಲವೋ ಎನ್ನುವುದು ನಂತರದ ವಿಷಯ. ಆದರೆ, ಇಲಾಖೆಯ ನೋಟಿಸ್‌ಗೆ ದಾಖಲೆಗಳು ಮತ್ತು ಅಂಕಿ ಅಂಶಗಳ ಸಮೇತ ಉತ್ತರಿಸುವುದಂತೂ ಈಗಿನ ತುರ್ತು.
ಜಿಎಸ್‌ಟಿ ಜಾರಿಯಾದಾಗಿನಿಂದ ಈವರೆಗೆ ಜಿಎಸ್‌ಟಿ ಕೌನ್ಸಿಲ್‌ನ 55 ಸಭೆಗಳಾಗಿವೆ. ಆ ಸಭೆಗಳಲ್ಲಿ ಅನೇಕ ಬದಲಾವಣೆಗಳ ಬಗ್ಗೆ ನಿರ್ಣಯ ಕೈಗೊಂಡು ಜಾರಿಗೆ ತರಲಾಗಿದೆ. ಮುಂದೆ ಇನ್ನೇನು ಬದಲಾವಣೆಗಳು ಆಗಬಹುದು ಎನ್ನುವ ಕುತೂಹಲ ಇದ್ದೇ ಇದೆ.
ಲೇಖಕ: ತೆರಿಗೆ ಮತ್ತು ಆರ್ಥಿಕ ತಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.