
ಸಮಾಜದಲ್ಲಿ, ಕುಟುಂಬದಲ್ಲಿ ಶೋಷಣೆಗೆ ಗುರಿಯಾಗುವ ಮಹಿಳೆಗೆ ಜೈಲಿನಲ್ಲಿಯೂ ಸಂಕಷ್ಟದ ಹಾಗೂ ಸಂಕಟದ ಅನುಭವಗಳೇ ಹೆಚ್ಚು. ಸರ್ಕಾರದ ಅಧೀನದಲ್ಲಿದ್ದರೂ ಅಲ್ಲಿ ಮಹಿಳೆಯರು ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ; ಪೊಲೀಸರ ಸರ್ಪಗಾವಲಿನಲ್ಲಿದ್ದರೂ ಅಲ್ಲಿ ಹೆಣ್ಣಿನ ಮೇಲೆ ಹಲ್ಲೆ, ದೌರ್ಜನ್ಯ ನಡೆಯುತ್ತಿರುವ ಬಗ್ಗೆ ವರದಿಗಳು ಬಂದಿವೆ. ದೇಶದ ವಿವಿಧ ಜೈಲುಗಳಲ್ಲಿ ವಿಚಾರಣಾಧೀನ ಕೈದಿಗಳಾಗಿ, ಅಪರಾಧಿಗಳಾಗಿ ಶಿಕ್ಷೆ ಅನುಭವಿಸುತ್ತಿರುವ ಮಹಿಳೆಯರ ಸ್ಥಿತಿಗತಿ ಕುರಿತ ವರದಿ ಇಲ್ಲಿದೆ
ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಕೆಲವು ಕೈದಿಗಳು ಮೊಬೈಲ್, ಟಿ.ವಿ ಬಳಸುತ್ತಿದ್ದ ವಿಡಿಯೊಗಳು ಬಹಿರಂಗಗೊಂಡು, ಭಾರಿ ಗದ್ದಲವೇ ಉಂಟಾಗಿದೆ. ಕರ್ನಾಟಕವೂ ಸೇರಿದಂತೆ, ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇಂಥ ಘಟನೆಗಳು ನಡೆದಿವೆ, ನಡೆಯುತ್ತಲೇ ಇವೆ. ಜೈಲಿನಲ್ಲಿರುವ ಪುರುಷ ಕೈದಿಗಳ ಪೈಕಿ ಕೆಲವರು ಹೇಗೋ ಮಾಡಿ ಇಂಥ ವಿಐಪಿ ಸೌಲಭ್ಯಗಳನ್ನು ಪಡೆಯುತ್ತಾರೆ. ಆದರೆ, ಜೈಲುಗಳಲ್ಲಿರುವ ಮಹಿಳಾ ಬಂದಿಗಳ ಬದುಕು ಅಸಹನೀಯವಾಗಿದೆ. ಮೂಲಭೂತ ಅಗತ್ಯಗಳನ್ನು ಪಡೆಯುವುದರಿಂದ ಹಿಡಿದು ತಮ್ಮ ವೈಯಕ್ತಿಕ ಸ್ವಚ್ಛತೆ, ಘನತೆ ಕಾಪಾಡಿಕೊಳ್ಳಲು ಅಗತ್ಯವಾದ ಸ್ಥಳ, ಸೌಕರ್ಯಗಳನ್ನು ಪಡೆಯುವವರೆಗೆ ಅವರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಹಲವು ಅಧ್ಯಯನಗಳು ನಡೆದಿವೆ. ಜೈಲಿನಲ್ಲಿರುವ ಮಹಿಳೆಯರ ಸ್ಥಿತಿಗತಿ ಸುಧಾರಿಸಲು 210 ಸಂಸ್ಥೆಗಳು (ಎನ್‌ಜಿಒ) ದುಡಿಯುತ್ತಿವೆ.
ಜೈಲುಗಳಲ್ಲಿರುವ ಪುರುಷರ ಸಂಖ್ಯೆಗೆ ಹೋಲಿಸಿದರೆ ಮಹಿಳೆಯರ ಸಂಖ್ಯೆಯು ಕಡಿಮೆ ಇದ್ದರೂ, ಮಹಿಳೆಯರಿಗೆ ಒದಗಿಸಲಾಗಿರುವ (ಸ್ನಾನಗೃಹ, ಶೌಚ ಇತ್ಯಾದಿ) ಸೌಕರ್ಯಗಳು ಅವರ ಅಗತ್ಯಕ್ಕಿಂತಲೂ ತುಂಬಾ ಕಡಿಮೆ ಇವೆ. ಮಹಿಳಾ ಕೈದಿಗಳ ಸಂಖ್ಯೆ ಹೆಚ್ಚಿರುವ ಪಶ್ಚಿಮ ಬಂಗಾಳ, ಮಹಾರಾಷ್ಟ್ರದಂಥ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದೆ. ಅನೇಕ ಜೈಲುಗಳಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು, ಗರ್ಭಿಣಿ ತಾಯಂದಿರು ಮಕ್ಕಳಿಗೆ ಹಾಲೂಡಿಸಲು ಪ್ರತ್ಯೇಕ ಸ್ಥಳದ ಕೊರತೆ ಇದೆ. ಮುಟ್ಟಿನ ಸಂದರ್ಭಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದೂ ಕಷ್ಟಕರವಾಗಿದೆ ಎನ್ನುವುದು ವರದಿಯಾಗಿದೆ. ಆಗಿಂದಾಗ್ಗೆ ನಡೆಯುವ ತಪಾಸಣೆಯ ಹೆಸರಿನಲ್ಲಿ ಪೊಲೀಸರು ಜೈಲುಗಳಲ್ಲಿರುವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಅನೇಕ ಘಟನೆಗಳು ವರದಿಯಾಗಿವೆ.
ಜೈಲುಗಳು ರಾಜ್ಯ ಪಟ್ಟಿಯಲ್ಲಿ ಬರುವುದರಿಂದ ಮೂಲಸೌಕರ್ಯ ಕಲ್ಪಿಸುವುದು, ಬಂದಿಗಳಿಗೆ ಸೂಕ್ತ ಪ್ರಮಾಣದಲ್ಲಿ ಆಹಾರ ಒದಗಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯವಾಗಿದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳಿಗೆ ವಿಶೇಷ ಆಹಾರ ಒದಗಿಸಬೇಕು. ಕೆಲವು ಜೈಲುಗಳ ಕ್ಯಾಂಟೀನ್‌ಗಳಲ್ಲಿ ಆಹಾರ ಸಿಗುತ್ತದೆಯಾದರೂ ಹೆಚ್ಚಿನ ಮಹಿಳಾ ಕೈದಿಗಳು ಅದಕ್ಕೆ ಹಣ ತೆರುವ ಸ್ಥಿತಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ.
ಗರ್ಭಿಣಿಯರ ಪರಿಸ್ಥಿತಿ ದುರ್ಬರವಾಗಿದೆ. ನಿಯಮಗಳ ಪ್ರಕಾರ, ಜೈಲಿನಲ್ಲಿ ಅವರಿಗೆ ಸೂಕ್ತ ವೈದ್ಯಕೀಯ ನೆರವು ನೀಡಬೇಕು. ಆದರೆ, ದೇಶದ ಬಹುತೇಕ ಜೈಲುಗಳಲ್ಲಿ ನಿಯಮಗಳು ಕಾಗದದ ಮೇಲಷ್ಟೇ ಇವೆ. ಮಹಾರಾಷ್ಟ್ರದ ಬೈಕುಲ್ಲಾ ಜೈಲಿನಲ್ಲಿ 2012ರಲ್ಲಿ ಗರ್ಭಿಣಿಯೊಬ್ಬರು ಜೈಲಿನ ಶೌಚಾಲಯದಲ್ಲಿಯೇ ಮಗುವನ್ನು ಹೆತ್ತು, ಜೈಲಿನ ಪರಿಸ್ಥಿತಿಗೆ ಹೆದರಿ ಆ ಮಗುವನ್ನು ಬಕೆಟ್‌ನಲ್ಲಿ ಮುಳುಗಿಸಿ ಕೊಂದು ಹಾಕಿದ್ದರು. ಮಹಿಳಾ ಕೈದಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಗರ್ಭಿಣಿಯ ಬಗ್ಗೆ ಗಮನ ಕೊಡಲು ಸಾಧ್ಯವಾಗಿರಲಿಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದರು.
ದೇಶದಲ್ಲಿರುವ ವಿವಿಧ ರೀತಿಯ ಜೈಲುಗಳಲ್ಲಿ ಶೇ 4ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿದ್ದಾರೆ. ಆದರೆ, ಮಹಿಳೆಯರಿಗಷ್ಟೇ ಮೀಸಲಾದ ಜೈಲುಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಪ್ರತಿ ಐವರಲ್ಲಿ ಒಬ್ಬ ಮಹಿಳಾ ಬಂದಿಗೆ ಮಾತ್ರ ಮಹಿಳಾ ಜೈಲಿನಲ್ಲಿರುವ ಅವಕಾಶ ಸಿಕ್ಕಿದೆ. 2018 ಮತ್ತು 2023ರ ನಡುವೆ ಮಹಿಳಾ ಜೈಲುಗಳ ಸಾಮರ್ಥ್ಯವನ್ನು ಶೇ 26.7ರಷ್ಟು ಹೆಚ್ಚಳ ಮಾಡಲಾಗಿದೆ. ಆದರೆ, ಇದೇ ಅವಧಿಯಲ್ಲಿ ಮಹಿಳಾ ಬಂದಿಗಳ ಪ್ರಮಾಣವು ಶೇ 32ರಷ್ಟು ಹೆಚ್ಚಾಗಿದೆ.
ದೇಶದಲ್ಲಿ ಜೈಲುಗಳ ಸ್ಥಿತಿಗತಿ
ದೇಶದ 36 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 1,332 ಜೈಲುಗಳಿವೆ. ಆದರೆ, ಈ ಪೈಕಿ ಕೇವಲ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾತ್ರ ಮಹಿಳಾ ಜೈಲುಗಳಿವೆ. ಅವುಗಳಲ್ಲಿ 4,293 ಬಂದಿಗಳಿದ್ದಾರೆ (ಈ ಜೈಲುಗಳ ಒಟ್ಟು ಸಾಮರ್ಥ್ಯ 7,086).ಕರ್ನಾಟಕದಲ್ಲಿ ಒಂದು ಮಹಿಳಾ ಜೈಲು ಇದ್ದು, ಅದರಲ್ಲಿ 100 ಮಂದಿ (2023ರ ಅಂತ್ಯಕ್ಕೆ) ಬಂದಿಗಳಿದ್ದಾರೆ. ಉಳಿದ 20 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಹಿಳೆಯರಿಗೆ ಮೀಸಲಾದ ಜೈಲುಗಳೇ ಇಲ್ಲ
ರಾಜಸ್ಥಾನದಲ್ಲಿ ಏಳು, ತಮಿಳುನಾಡಿನಲ್ಲಿ ಐದು, ಕೇರಳದಲ್ಲಿ ಮೂರು ಮತ್ತು ಆಂಧ್ರಪ್ರದೇಶ, ಬಿಹಾರ, ಗುಜರಾತ್, ಪಂಜಾಬ್, ತೆಲಂಗಾಣ, ಉತ್ತರ ಪ್ರದೇಶ ಮತ್ತು ದೆಹಲಿಗಳಲ್ಲಿ ತಲಾ ಎರಡು ಮಹಿಳಾ ಜೈಲುಗಳಿವೆ. ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ಮಿಜೋರಾಂ, ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಒಂದು ಮಹಿಳಾ ಜೈಲು ಇದೆ
ದೇಶದ ವಿವಿಧ ಕಾರಾಗೃಹಗಳಲ್ಲಿ ಒಟ್ಟು 5,30,333 ಬಂದಿಗಳಿದ್ದು, ಅವರಲ್ಲಿ 5,08,715 ಪುರುಷರಾದರೆ, 21,510 ಮಹಿಳೆಯರು, 108 ಮಂದಿ ಲಿಂಗತ್ವ ಅಲ್ಪಸಂಖ್ಯಾತರು
ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಂದಿ ಮಹಿಳೆಯರು ಜೈಲುಗಳಲ್ಲಿದ್ದರೆ (3,926), ಬಿಹಾರದಲ್ಲಿ 2,029 ಮತ್ತು ಮಧ್ಯಪ್ರದೇಶದಲ್ಲಿ 1,803 ಮಹಿಳೆಯರು ಜೈಲಿನಲ್ಲಿದ್ದಾರೆ
ಮಹಿಳಾ ಜೈಲುಗಳ ಪೈಕಿ ಮಿಜೋರಾಂನಲ್ಲಿ ನಿಗದಿತ ಸಂಖ್ಯೆಗಿಂತ ಬಂದಿಗಳು ಹೆಚ್ಚು ಇದ್ದಾರೆ (ಶೇ 227.1). ತ್ರಿಪುರಾದಲ್ಲಿ ಈ ಪ್ರಮಾಣವು ಶೇ 184, ಮಹಾರಾಷ್ಟ್ರದಲ್ಲಿ ಶೇ 143.9 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 110.2 ಇದೆ
ಜೈಲಿನ ‘ಅಮಾನವೀಯ’ ಮುಖ
ಪಶ್ಚಿಮ ಬಂಗಾಳದ ಕಿಕ್ಕಿರಿದ ಜೈಲುಗಳ ಬಗ್ಗೆ ತನಿಖೆ ಮಾಡಲು ಕಲ್ಕತ್ತ ಹೈಕೋರ್ಟ್ 1990ರಲ್ಲಿ ವಕೀಲ ತಪಸ್ ಕುಮಾರ್ ಭಂಜಾ ಅವರನ್ನು ನೇಮಿಸಿತ್ತು. ಹಲವು ಮಹಿಳಾ ಬಂದಿಗಳ ಮೇಲೆ ಅತ್ಯಾಚಾರ ನಡೆದಿದ್ದು ಅವರ ಗಮನಕ್ಕೆ ಬಂದಿತ್ತು. ಅದರಿಂದ ಅನೇಕರು ಗರ್ಭಿಣಿಯರಾಗಿ, ಜೈಲಿನಲ್ಲಿಯೇ ಮಕ್ಕಳಿಗೆ ಜನ್ಮ ನೀಡಿದ್ದರು. ಮಹಿಳೆಯು ಜೈಲಿಗೆ ಅಡಿಯಿಟ್ಟ ದಿನದಿಂದಲೆ ಆಕೆಗೆ ಲೈಂಗಿಕ ಕಿರುಕುಳ ಆರಂಭವಾಗುತ್ತದೆ ಎನ್ನುವುದನ್ನು ಅವರು ಬಂದಿಗಳಿಂದ ತಿಳಿದರು. ಜೈಲಿನ ಪರಿಸ್ಥಿತಿಯನ್ನು ‘ಅಮಾನವೀಯ’ ಎಂದು ಬಣ್ಣಿಸಿದ್ದ ಅವರು ಕಲ್ಕತ್ತ ಹೈಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಆ ವರದಿಯಲ್ಲಿನ ಅಂಶಗಳ ಬಗ್ಗೆ ಸುಪ್ರೀಂ ಕೋರ್ಟ್ ಕೂಡ ಕಳವಳ ವ್ಯಕ್ತಪಡಿಸಿತ್ತು. ಜೈಲುಗಳಲ್ಲಿ ಮಹಿಳಾ ಕೈದಿಗಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ ಎಂದು ಅವರು ‘ದಿ ಗಾರ್ಡಿಯನ್’ ಪತ್ರಿಕೆಗೆ (2024, ಫೆ.23) ತಿಳಿಸಿದ್ದರು.
ದೇಶದಾದ್ಯಂತ ಮಹಿಳಾ ಬಂದಿಗಳ ಮೇಲೆ ಜೈಲಿನಲ್ಲಿರುವ ಪುರುಷರು ಮತ್ತು ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಹಿಂಸೆ ನಡೆದಿದೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2018ರ ವರದಿ ಉಲ್ಲೇಖಿಸಿದೆ.
ಹಿಂದುಳಿದವರೇ ಅಧಿಕ
ಮಹಿಳಾ ಬಂದಿಗಳ ಪೈಕಿ ಶೇ 75ರಷ್ಟು ಮಂದಿ ಎಸ್‌ಸಿ, ಎಸ್‌ಟಿ ಮತ್ತು ಎಲ್ಲ ಧರ್ಮಗಳಲ್ಲಿನ ಹಿಂದುಳಿದ ವರ್ಗದವರು, ಬಡವರು ಆಗಿದ್ದಾರೆ. ಸಮಾಜದಲ್ಲಿ ಹೆಚ್ಚು ಶೋಷಣೆಗೆ ಗುರಿಯಾಗುವ ಈ ಮಹಿಳೆಯರು ಜೈಲುಗಳಲ್ಲಿಯೂ ಹೆಚ್ಚು ಶೋಷಣೆ, ದೌರ್ಜನ್ಯಗಳಿಗೆ ಗುರಿಯಾಗುತ್ತಿದ್ದಾರೆ. ಮಹಿಳೆಯರ ಜಾತಿ, ವರ್ಗ, ಧರ್ಮ, ರಾಷ್ಟ್ರೀಯತೆ ಮುಂತಾದ ಅಂಶಗಳನ್ನು ಆಧರಿಸಿ ಮಹಿಳಾ ಕೈದಿಗಳೊಂದಿಗಿನ ಅಧಿಕಾರಿಗಳ ವರ್ತನೆಯು ನಿರ್ಧಾರವಾಗುತ್ತದೆ ಎನ್ನಲಾಗಿದೆ.
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆಪ್ತೆ ಶಶಿಕಲಾ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ ಪ್ರಕರಣ ಭಾರಿ ಸುದ್ದಿಯಾಗಿತ್ತು. ಆದರೆ, ಹಣ ನೀಡಿ ಅಕ್ರಮವಾಗಿ ಈ ರೀತಿ ಸೌಲಭ್ಯ ಪಡೆದ ಮಹಿಳಾ ಕೈದಿಗಳ ಪ್ರಮಾಣವು ತೀರಾ ಕಡಿಮೆ.
ಮಕ್ಕಳಿಗೂ ಜೈಲುವಾಸ
ಮಕ್ಕಳನ್ನು ಬೆಳೆಸಲು ಜೈಲುಗಳು ಯಾವ ಕಾರಣಕ್ಕೂ ಉತ್ತಮ ಸ್ಥಳಗಳಲ್ಲ. ಆದರೆ, ಅನಿವಾರ್ಯ ಸಂದರ್ಭಗಳಲ್ಲಿ ಆರು ವರ್ಷದವರೆಗಿನ ಮಕ್ಕಳು ತಮ್ಮ ತಾಯಿಯೊಂದಿಗೆ ಜೈಲಿನಲ್ಲಿ ಇರಲು ಅವಕಾಶವಿದೆ. ಮಕ್ಕಳಿಗೆ ಆರು ವರ್ಷವಾಗುವವರೆಗೆ ಅವರನ್ನು ಜೈಲಿನಲ್ಲಿಯೇ ಅವರ ತಾಯಂದಿರ ಜೊತೆ ಇರಲು ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆರ್.ಡಿ.ಉಪಾಧ್ಯಾಯ ಮತ್ತು ಆಂಧ್ರ ಪ್ರದೇಶ ನಡುವಿನ ಪ್ರಕರಣದಲ್ಲಿ (2006) ಆದೇಶಿಸಿತ್ತು.
ದೇಶದ ಜೈಲುಗಳಲ್ಲಿ 1,318 ಮಹಿಳೆಯರು 1,492 ಮಕ್ಕಳೊಂದಿಗೆ ಇದ್ದಾರೆ. ಇವರ ಪೈಕಿ 1,049 ಮಂದಿ ವಿಚಾರಣಾಧೀನ ಕೈದಿಗಳಾಗಿದ್ದು, ಅವರೊಂದಿಗೆ 1,191 ಮಕ್ಕಳಿದ್ದಾರೆ. ಉಳಿದಂತೆ, 249 ಮಹಿಳಾ ಕೈದಿಗಳು ತಪ್ಪಿತಸ್ಥರೆಂದು ನಿರ್ಧಾರವಾಗಿದ್ದು, ಅವರೊಂದಿಗೆ 272 ಮಕ್ಕಳಿದ್ದಾರೆ.
ಆಧಾರ: ಎನ್‌ಸಿಆರ್‌ಬಿ ಪ್ರಿಸನ್ ಸ್ಟ್ಯಾಟಿಸ್ಟಿಕ್ಸ್ 2023, ಸಿಟಿಜನ್ಸ್ ಫಾರ್ ಜಸ್ಟೀಸ್ ಆ್ಯಂಡ್ ಪೀಸ್, ಪುಲಿಟ್ಜರ್ ಸೆಂಟರ್, ದಿ ಗಾರ್ಡಿಯನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.