ನವದೆಹಲಿ: ಉದ್ಯೋಗಿಗಳಿಗೆ ನೀಡಲಾಗುವ ಎಚ್–1ಬಿ ವೀಸಾವನ್ನು ಅಮೆರಿಕ ಪರಿಷ್ಕರಿಸಿದ್ದು, ಇದು ಇಂದಿನಿಂದ (ಜ. 17) ಜಾರಿಯಾಗಲಿದೆ. ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರ ಕಾರ್ಯಾವಧಿಯಲ್ಲಿ ಕೈಗೊಂಡ ಕೊನೆಯ ಕ್ರಮ ಇದಾಗಿದ್ದು, ಕೌಶಲಭರಿತ ಉದ್ಯೋಗಿಗಳು ಅವರ ಉದ್ಯೋಗದ ಸ್ಥಿತಿಯನ್ನು ಆಧರಿಸಿ ಅಮೆರಿಕದಲ್ಲಿ ನೆಲೆಸಬಹುದು ಎಂದಿದೆ.
ವರ್ತಮಾನದ ಪರಿಸ್ಥಿತಿಯನ್ನು ಆಧರಿಸಿ ಎಚ್–1ಬಿ ವೀಸಾವನ್ನು ಪರಿಷ್ಕರಿಸಿರುವ ಅಮೆರಿಕ, ಇದರ ಮೂಲಕ ಜಗತ್ತಿನಲ್ಲಿರುವ ಉತ್ಕೃಷ್ಟ ಮೇಧಾವಿಗಳನ್ನು ತನ್ನತ್ತ ಸೆಳೆಯಲು ಅನುಕೂಲವಾಗುವಂತೆ ಆಧುನೀಕರಿಸಿದೆ.
ಈ ಮಾಹಿತಿಯನ್ನು ಅಮೆರಿಕದ ಪೌರತ್ವ ಹಾಗೂ ವಲಸೆ ನೀತಿ ಸೇವೆಗಳು (USCIS) ತನ್ನ ಅಂತರ್ಜಾಲ ಪುಟದಲ್ಲಿ ಹಂಚಿಕೊಂಡಿದೆ. ‘ಎಚ್–1ಬಿ ಅಂತಿಮ ಕಾನೂನನ್ನು ಆಧುನೀಕರಣಗೊಳಿಸಲಾಗಿದೆ. ವೀಸಾ ಮಂಜೂರು ಮಾಡುವ ಪ್ರಕ್ರಿಯೆಯನ್ನು ಪರಿಷ್ಕರಿಸಲಾಗಿದೆ. ಹೊಸ ಕಾನೂನಿನ್ವಯ ಪ್ರತಿಭಾವಂತ ನೌಕರರನ್ನು ಉಳಿಸಿಕೊಳ್ಳಲು ಉದ್ಯಮಕ್ಕೆ ಹೆಚ್ಚಿನ ಅವಕಾಶ ನೀಡಲಾಗಿದೆ. ಆ ಮೂಲಕ ತಮ್ಮ ಯೋಜನೆಗಳನ್ನು ಪೂರ್ಣಪ್ರಮಾಣದಲ್ಲಿ ಕಾರ್ಯಗತಗೊಳಿಸಲು ಅನುಕೂಲವಾಗಲಿದೆ’ ಎಂದಿದೆ.
2023ರ ದಾಖಲೆಗಳ ಪ್ರಕಾರ ಎಚ್–1ಬಿ ವೀಸಾ ಪಡೆದವರಲ್ಲಿ ಭಾರತೀಯರ ಸಂಖ್ಯೆ ಶೇ 70ರಷ್ಟು. ವೀಸಾ ಪರಿಷ್ಕರಣೆಯಲ್ಲಿ ಭಾರತೀಯರಿಗೆ ಹೆಚ್ಚಿನ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ.
‘ಉದ್ಯೋಗದಲ್ಲಿನ ವಿಶೇಷತೆ’ ಎಂಬ ಪದದ ವ್ಯಾಖ್ಯಾನವನ್ನು ಪರಿಷ್ಕರಿಸಲಾಗಿದೆ. ಪದವಿ ಹೊಂದಿರುವುದು ಅತ್ಯಗತ್ಯ ಎಂಬುದು ಸಾಮಾನ್ಯ. ಆದರೆ ಅದು ಎಲ್ಲಾ ಸಂದರ್ಭಗಳಲ್ಲೂ ಅನ್ವಯಿಸದು. ಇದಕ್ಕೆ ವಿಶಾಲ ಅರ್ಥವನ್ನು ಹೊಸ ನೀತಿಯಲ್ಲಿ ನೀಡಲಾಗಿದ್ದು, ವಿದ್ಯಾರ್ಹತೆಯು ನೌಕರಿಗೆ ನೇರವಾಗಿ ಸಂಬಂಧಿಸಿದ್ದಾಗಿರಬೇಕು ಎಂದೆನ್ನಲಾಗಿದೆ.
ವೀಸಾ ಮಂಜೂರು ಪ್ರಕ್ರಿಯೆಯಲ್ಲಿ ಪಾರದರ್ಶಕತೆ: ಯಾವುದೇ ಸಂಸ್ಥೆಯು ತನ್ನಲ್ಲಿ ಕೆಲಸ ಮಾಡುವ ಉದ್ಯೋಗಿಗಳ ವೀಸಾ ಅರ್ಜಿಗಳನ್ನು ಒಟ್ಟು ಮಾಡಿ ಒಂದೇ ಬಾರಿಗೆ ಸಲ್ಲಿಸುವ ಪದ್ಧತಿಗೆ ತಿಲಾಂಜಲಿ ಹಾಡಲಾಗಿದೆ. ಬದಲಿಗೆ ಎಲ್ಲರಿಗೂ ಸಮಾನ ಅವಕಾಶ ಪದ್ಧತಿಯನ್ನು ಜಾರಿಗೆ ತರಲಾಗಿದೆ.
ಎಫ್–1 ವೀಸಾ ಹೊಂದಿರುವವರಿಗೆ ಸರಳೀಕೃತ ವರ್ಗಾವಣೆ: ಎಫ್–1 ವೀಸಾ ಹೊಂದಿರುವ ವಿದ್ಯಾರ್ಥಿಗಳು ಉದ್ಯೋಗ ಪಡೆದ ಎಚ್–1ಬಿ ವೀಸಾಗೆ ವರ್ಗಾವಣೆಗೊಳ್ಳುವುದಾದರೆ ಕೆಲವೊಂದು ಸವಾಲುಗಳಿದ್ದರೂ, ಅದನ್ನು ಸರಳಗೊಳಿಸುವ ಪ್ರಯತ್ನ ಮಾಡಲಾಗಿದೆ.
ತ್ವರಿತ ವಿಲೇವಾರಿ: ಎಚ್–1ಬಿ ವೀಸಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು USCIS ಕ್ರಮ ಕೈಗೊಂಡಿದೆ. ಇದರಿಂದ ಉದ್ಯೋಗಿ ಮತ್ತು ಕಂಪನಿಗಳು ಹೆಚ್ಚು ಕಾಲ ಕಾಯುವ ಅಗತ್ಯವಿಲ್ಲ.
ಉದ್ಯೋಗದಾತರಿಗೆ ಹೆಚ್ಚಿನ ಅವಕಾಶ: ಕಂಪನಿಗಳು ತಮ್ಮ ಅಗತ್ಯಗಳಿಗೆ ತಕ್ಕಂತೆ ಎಚ್–1ಬಿ ವೀಸಾ ಹೊಂದಿರುವ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸ್ವಾತಂತ್ರ್ಯವನ್ನು ನೀಡಲಾಗಿದೆ.
ಉದ್ಯಮಿಗಳಿಗೂ ಹೆಚ್ಚಿನ ಅವಕಾಶ: ಎಚ್–1ಬಿ ವೀಸಾ ಪಡೆಯಲು ಇರುವ ಕಠಿಣ ಷರತ್ತುಗಳನ್ನು ಪೂರೈಸುವ, ಕಂಪನಿಯಲ್ಲಿ ಹೆಚ್ಚಿನ ಪಾಲು ಹೊಂದಿರುವ ಉದ್ಯಮಿಗಳು ನೇರವಾಗಿ ಅರ್ಜಿ ಸಲ್ಲಿಸಬಹುದು
ವೀಸಾ ಸುರಕ್ಷತೆಗೆ ಹೆಚ್ಚಿನ ಕ್ರಮ: USCIS ಮೂಲಕ ಘಟಕ ಪರಿಶೀಲನೆ ಇನ್ನಷ್ಟು ಬಿಗಿಗೊಳಿಸಲಾಗಿದೆ. ಇದರಲ್ಲಿ ವೃತ್ತಿ ಸ್ಥಳದ ಪರಿಶೀಲನೆ, ದೂರದ ಸ್ಥಳ ಹಾಗೂ ಮೂರನೇ ವ್ಯಕ್ತಿಯ ಸ್ಥಳದಲ್ಲಿ ಕಾಯ್ದೆಯ ದುರುಪಯೋಗವಾಗದಂತೆ ಹೆಚ್ಚಿನ ಪರಿಶೀಲನೆಗೆ ಅವಕಾಶ. ಪರಿಶೀಲನೆ ಸಂದರ್ಭದಲ್ಲಿ ಸಮರ್ಪಕ ಮಾಹಿತಿ ನೀಡದಿದ್ದರೆ ಎಚ್–1ಬಿ ಅರ್ಜಿಯ ನಿರಾಕರಣೆ ಅಥವಾ ಮರುಪರಿಶೀಲನೆಗೆ ಅವಕಾಶ.
ಹೊಸ ಅರ್ಜಿ ನಮೂನೆ: 2025ರ ಜ. 17ರಿಂದ ಎಚ್–1ಬಿ ವೀಸಾ ಪಡೆಯಲು ಹೊಸ ಅರ್ಜಿ ನಮೂನೆ I-129 ಕಡ್ಡಾಯಗೊಳಿಸಲಾಗಿದೆ. ಹಿಂದಿಗಿಂತಲೂ ಇದು ಸರಳ ಎಂದೆನ್ನಲಾಗಿದೆ.
ವಿನಾಯ್ತಿಯ ಮಾನದಂಡ: ಸಂಶೋಧನಾಧಾರಿತ ಸಂಸ್ಥೆಗಳಲ್ಲಿ ಎಚ್–1ಬಿಗೆ ಇರುವ ಕಾನೂನುಗಳನ್ನು ಸಡಿಲಿಸಲಾಗಿದೆ. ಈ ಹಿಂದೆ ಇದ್ದ ಮಾರ್ಗಸೂಚಿಗಳನ್ನು ಬದಲಿಸಲಾಗಿದೆ.
ಗಮನಾರ್ಹ ಬದಲಾವಣೆ: ಎಚ್–1ಬಿ ವೀಸಾ ಹೊಂದಿರುವವರು ಹೊಸ ಮಾರ್ಗಸೂಚಿ ಅನ್ವಯ ನವೀಕರಣಕ್ಕಾಗಿ ತಮ್ಮ ಮೂಲ ದೇಶಕ್ಕೆ ಹೋಗಬೇಕಾಗಿಲ್ಲ. ಇದು ಅಮೆರಿಕದಲ್ಲಿರುವ ಭಾರತೀಯರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.
ವಲಸೆ ನೀತಿಯನ್ನು ಇನ್ನಷ್ಟು ಭಿಗಿಗೊಳಿಸುವಂತೆ ರಿಪಬ್ಲಿಕನ್ ಪಕ್ಷದ ಬಹಳಷ್ಟು ಸಂಸದರು ಸರ್ಕಾರದ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದ್ದಾರೆ. ಇದರಲ್ಲಿ ಎಚ್–1ಬಿ ವೀಸಾ ಸಂಖ್ಯೆಯನ್ನು ಕಡಿತಗೊಳಿಸುವುದೂ ಸೇರಿದೆ. ಉತ್ಕೃಷ್ಟ ಕೌಶಲವಿರುವ ಉದ್ಯೋಗಿಗಳಗೆ ಹೆಚ್ಚಿನ ಬೆಂಬಲ ನೀಡುವ ಕುರಿತು ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹೇಳಿಕೆಯನ್ನು ನೀಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಹೇಳಿಕೆಯೊಂದನ್ನು ನೀಡಿ, ‘ನನ್ನ ಸ್ವಂತ ಉದ್ಯಮದಲ್ಲಿ ಬಹಳಷ್ಟು ಎಚ್–1ಬಿ ವೀಸಾ ಹೊಂದಿರುವವರು ಇದ್ದಾರೆ. ಇದರ ಮೇಲೆ ನನಗೆ ನಂಬಿಕೆ ಇದೆ. ಹಲವು ಬಾರಿ ನಾನು ಇದನ್ನು ಬಳಸಿದ್ದೇನೆ. ಇದೊಂದು ಉತ್ತಮ ಕಾರ್ಯಕ್ರಮ’ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.