
ಬೆಂಗಳೂರು ದೆಹಲಿ ಕೆಂಪುಕೋಟೆ ಬಳಿ, ಇದೀಗ ಫರೀದಾಬಾದ್‌ನಲ್ಲಿ ಐದು ದಿನಗಳ ಒಳಗಾಗಿ ಸಂಭವಿಸಿದ ಎರಡು ಸ್ಫೋಟಗಳಿಗೆ 22 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಎರಡೂ ಪ್ರಕರಣಗಳಲ್ಲಿ ಸ್ಫೋಟಗೊಂಡಿದ್ದು ಅಮೋನಿಯಂ ನೈಟ್ರೇಟ್ ಎಂಬ ರಸಗೊಬ್ಬರಕ್ಕೆ ಬಳಸುವ ರಾಸಾಯನಿಕ. ರಸಗೊಬ್ಬರಗಳಿಗೆ ಬಳಸಬೇಕಿದ್ದ ರಾಸಾಯನಿಕವನ್ನು ಭಯೋತ್ಪಾದಕ ನೀಚ ಕೃತ್ಯಗಳಿಗೆ ಬಳಕೆ ಮಾಡಿರುವುದು ಆಘಾತಕಾರಿ.
ಸ್ಫೋಟಕ ಗುಣವಿರುವ ಈ ಬಿಳಿಪುಡಿ ತೇವಾಂಶ ಸೋಕಿದರೆ ಅದನ್ನು ಹೀರಿಕೊಂಡು ಗಟ್ಟಿಯಾಗುತ್ತದೆ. ಆದರೆ ಅದಕ್ಕೆ ಕಿಡಿ ಸೋಕಿದರೆ ಸ್ಫೋಟಗೊಳ್ಳುವ ಗುಣವನ್ನು ಹೊಂದಿದೆ. ಯೂರಿಯಾ ರೀತಿಯಲ್ಲೇ ಇರುವ ಈ ಬಿಳಿ ಪುಡಿಯನ್ನೂ ಹೊಲಗಳಿಗೆ ಎರಚಿ ರೈತರು ಬೆಳೆ ತೆಗೆಯುತ್ತಾರೆ.
ಇತಿಹಾಸದಲ್ಲಿ ಅಮೋನಿಯಂ ನೈಟ್ರೇಟ್ ಸೃಷ್ಟಿಸಿದ ಹಲವು ಪ್ರಮುಖ ದುರ್ಘಟನೆಗಳನ್ನು ನೆನಪು ಮಾಡಿಕೊಳ್ಳುವುದಾದರೆ, ಬೆಂಗಳೂರಿನ ಬಿಜೆಪಿ ಕಚೇರಿ ಎದುರು 2013ರ ಏ. 17ರಂದು ಬೈಕ್ ಸ್ಫೋಟಗೊಂಡು 16 ಜನ ಗಾಯಗೊಂಡಿದ್ದರು. ಅಲ್ಲಿಯೂ ಇದೇ ಬಿಳಿ ಪುಡಿ ಬಳಕೆಯಾಗಿತ್ತು ಎಂಬ ಅಂಶವನ್ನು ‘ಪ್ರಜಾವಾಣಿ’ಯ ಅಂಕಣಕಾರರೂ ಆಗಿರುವ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಅದೇ ವರ್ಷ ಏ. 17ರಂದು ಅಮೆರಿಕದ ಟೆಕ್ಸಾಸ್‌ನಲ್ಲಿ ಅಮೋನಿಯಂ ನೈಟ್ರೇಟ್ ಉತ್ಪಾದಿಸುವ ಕಾರ್ಖಾನೆ ಸ್ಫೋಟಗೊಂಡಿತು. ಬೆಂಕಿ ಆರಿಸಲು ಹೋದ 16 ಜನ ಮೃತಪಟ್ಟರು. 80 ಮನೆಗಳು ನಾಶವಾದವು. ಹಲವರು ಗಾಯಗೊಂಡರು.
1947ರ ಏ. 16ರಂದು ಅಮೋನಿಯಂ ನೈಟ್ರೇಟ್ ಪುಡಿ ತುಂಬಿದ್ದ ಹಡಗೊಂದು ಸ್ಫೋಟಗೊಂಡಿತ್ತು. ಈ ಹಡಗಿನಲ್ಲಿ ಬರೋಬ್ಬರಿ 2,300 ಟನ್ ಪುಡಿ ತುಂಬಿದ್ದ ಚೀಲಗಳಿದ್ದವು. ಸ್ಫೋಟದ ಬೀಕರತೆ ಎಷ್ಟಿತ್ತೆಂದರೆ, ಆಗಸದಲ್ಲಿ ಹಾರುತ್ತಿದ್ದ ನಗರ ವೀಕ್ಷಣೆಗೆ ಬಳಸುವ ಎರಡು ವಿಮಾನಗಳೂ ಸುಟ್ಟು ಧರೆಗೆ ಬಿದ್ದವು. ಒಟ್ಟು 581 ಜನ ಈ ದುರಂತದಲ್ಲಿ ಮೃತಪಟ್ಟರು. ಈ ಹಡಗಿನಿಂದ ಸ್ವಲ್ಪ ದೂರದಲ್ಲಿ ನಿಂತಿದ್ದ ಹಾಗೂ ಅಮೋನಿಯಂ ನೈಟ್ರೇಟ್ ಅನ್ನೇ ಹೊತ್ತಿದ್ದ ಮತ್ತೊಂದು ಹಡಗು 16 ಗಂಟೆಗಳ ನಂತರ ಸ್ಫೋಟಿಸಿತು.
ಲೆಬನಾನ್ ರಾಜಧಾನಿ ಬೀರೂಟ್‌ನಲ್ಲಿ 2020ರ ಆಗಸ್ಟ್ 12ರಂದು ಸಂಭವಿಸಿದ ಸ್ಫೋಟದ ಹಿಂದೆಯೂ ಇದೇ ಅಮೋನಿಯಂ ನೈಟ್ರೇಟ್ ಇತ್ತು. ಗೋದಾಮಿನಲ್ಲಿಟ್ಟಿದ್ದ ಈ ಪುಡಿ ಸ್ಫೋಟಗೊಂಡು 220 ಜನ ಮೃತಪಟ್ಟು, ಅಂದಾಜು ಏಳು ಸಾವಿರ ಜನ ಗಾಯಗೊಂಡಿದ್ದರು.
ನ. 10ರಂದು ಜಮ್ಮು ಮತ್ತು ಕಾಶ್ಮೀರದ ಫರೀದಾಬಾದ್‌ನಲ್ಲಿ ಪೊಲೀಸರು 2,900 ಕೆ.ಜಿ. ಅಮೋನಿಯಂ ನೈಟ್ರೇಟ್ ಅನ್ನು ವಶಪಡಿಸಿಕೊಂಡಿದ್ದರು. ಅದನ್ನು ನೌಗಾಮ್ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದರು. ಅದೇ ದಿನ ಸಂಜೆ ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದ ಹಿಂದೆಯೂ ಅದೇ ಅಮೋನಿಯಂ ನೈಟ್ರೇಟ್ ಬಳಕೆಯಾಗಿತ್ತು.
ಅಷ್ಟಕ್ಕೂ ಈ ಹಿಂದಿನ ಭಯೋತ್ಪಾದಕ ದಾಳಿಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದ್ದ ಆರ್‌ಡಿಎಕ್ಸ್‌ಗಿಂತ (ರಾಯಲ್ ಡೆಮಾಲಿಷನ್ ಎಕ್ಸ್‌ಪ್ಲೋಸಿವ್) ಅಮೋನಿಯಂ ನೈಟ್ರೇಟ್ ಹೆಚ್ಚು ತೀವ್ರತೆಯ ರಾಸಾಯನಿಕವೇ..?
ಆರ್‌ಡಿಎಕ್ಸ್ ಎಂಬುದು ಪ್ರಬಲ ಸ್ಫೋಟಕ ರಾಸಾಯನಿಕ. 2ನೇ ವಿಶ್ವಯುದ್ಧ ಸಂದರ್ಭದಲ್ಲಿ ಇದನ್ನು ಸೇನೆಯಲ್ಲಿ ಬಳಸಲಾಗಿತ್ತು. ಸಾಮಾನ್ಯಕ್ಕಿಂತ ತುಸು ದಪ್ಪ ಎನ್ನಬಹುದಾದ ರಕ್ಷಾ ಕವಚ ಹೊಂದಿದ್ದ ಜರ್ಮನಿಯ ಯು–ಹಡುಗಳನ್ನು ಪುಡಿಗಟ್ಟಲು ಬ್ರಿಟಿಷರು ಆರ್‌ಡಿಎಕ್ಸ್ ಪ್ರಯೋಗಿಸಿದ್ದರು.
ಜರ್ಮನಿಯ ವಿಜ್ಞಾನಿಗಳು ಮೊದಲನೇ ವಿಶ್ವಯುದ್ಧ ಸಂದರ್ಭದಲ್ಲೇ ಇದನ್ನು ಕಂಡುಹಿಡಿದಿದ್ದರಾದರೂ, ದುಬಾರಿ ಎಂಬ ಕಾರಣದಿಂದ ಅದರ ತಯಾರಿಕೆಗೆ ಕೈಹಾಕಲಿಲ್ಲ. ಆದರೆ ನಂತರದಲ್ಲಿ ಯುದ್ಧ ವಿಮಾನಗಳಿಗೆ ಅಳವಡಿಸುವ ಶಸ್ತ್ರಾಸ್ತ್ರಗಳಲ್ಲಿ ಹೆಕ್ಸಾಗನ್ ಎಂದು ಕರೆಯಲಾಗುವ ಆರ್‌ಡಿಎಕ್ಸ್ ಬಳಕೆಯನ್ನು ಜರ್ಮನ್ನರು ಆರಂಭಿಸಿದರು.
ವಾಸನೆ ಇಲ್ಲದ ಈ ರಾಸಾಯನಿಕ ಪುಡಿಯಂತೆಯೇ (CH2N2O2) ಸಿ–4 ಮತ್ತು ಸೆಮ್‌ಟೆಕ್ಸ್ ಎಂಬ ಸ್ಫೋಟಕಗಳು ಬಂದಿವೆ.
ಅತ್ಯಂತ ಪ್ರಬಲ ಸ್ಫೋಟಕವಾದ ಆರ್‌ಡಿಎಕ್ಸ್, ಗಟ್ಟಿಯಾದ ಉಕ್ಕನ್ನೇ ಛಿದ್ರ ಮಾಡಬಲ್ಲದು. ಕಾಂಕ್ರೀಟ್ ಮತ್ತು ಯಾವುದೇ ಗಟ್ಟಿಯಾದ ವಸ್ತುಗಳನ್ನು ಸ್ಫೋಟಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಂದರೆ, ಇದು ಸ್ಫೋಟಗೊಳ್ಳುವ ವೇಗವು ಸೃಷ್ಟಿಸುವ ಕಂಪನದಿಂದ ಸ್ಫೋಟದ ತೀವ್ರತೆ ಮತ್ತಷ್ಟು ಹೆಚ್ಚಳವಾಗುತ್ತದೆ. ಇದನ್ನು ಪ್ರತಿ ಸೆಕೆಂಡ್‌ಗೆ 8,700 ಮೀಟರ್ ಎಂದೆನ್ನಲಾಗುತ್ತದೆ. ಹೀಗಾಗಿ ಇದು ಅತ್ಯಂತ ಶಕ್ತಿಶಾಲಿ ಎಂದೇ ಬಿಂಬಿತವಾಗಿದ್ದ ಟಿಎನ್‌ಟಿಗಿಂತ 50 ಪಟ್ಟು ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಅತ್ಯಂತ ಸರಳ ರಾಸಾಯನಿಕವಾದ ಅಮೋನಿಯಂ ನೈಟ್ರೇಟ್ ಅನ್ನು ಸರಳವಾಗಿ ಉಪ್ಪು ಎನ್ನಬಹುದು. ಆದರೆ ಇದರಲ್ಲಿ ಒಂದು ಅಯಾನ್ ಅಮೋನಿಯಂ ಹಾಗೂ ನೈಟ್ರೇಟ್ ಆಗಿರುತ್ತದೆ. ಈ ರಾಸಾಯನಿಕ ಪ್ರಕ್ರಿಯೆಯಲ್ಲಿ ಅಮೋನಿಯಾ (NH3) ಮತ್ತು ನೈಟ್ರಿಕ್ ಆ್ಯಸಿಡ್ (HNO3) ಜತೆಗೂಡಿ NH4NO3 ಫಾರ್ಮುಲಾ ಆಗುತ್ತದೆ.
ಇದನ್ನು ಭತ್ತ, ಗೋದಿ, ಗೋವಿನ ಜೋಳ, ವಿವಿಧ ಜಾತಿಯ ಹಣ್ಣುಗಳು ಮತ್ತು ತರಕಾರಿಗಳ ಬೆಳೆಗಳಿಗೆ ರಸಗೊಬ್ಬರ ರೂಪದಲ್ಲಿ ನೀಡಲಾಗುತ್ತದೆ. ಬೆಳೆಯ ಸಮ ಪ್ರಮಾಣದ ಬೆಳವಣಿಗಿಗೆ ಇದರ ಬಳಕೆ ಮಾಡಲಾಗುತ್ತದೆ.
ವಾಸನೆ ಇಲ್ಲದೆ ಬಿಳಿ ಹರಳಿನಂತೆ ಕಾಣುವ ಈ ರಾಸಾಯನಿಕವನ್ನು ರಸಗೊಬ್ಬರದಲ್ಲಿ ಬಳಕೆ ಮಾಡಲಾಗಿದೆ. ಉತ್ಕರ್ಷಣಕಾರಿ ಗುಣವಿರುವ ಅಮೋನಿಯಂ ನೈಟ್ರೇಟ್‌ನಿಂದ ಕೆಲವೊಂದು ಸಂದರ್ಭಗಳಲ್ಲಿ ಪ್ರಬಲ ಸ್ಫೋಟವೂ ಉಂಟಾಗಬಹುದು. ಬೆಂಕಿ, ಅಧಿಕ ಉಷ್ಣಾಂಶವನ್ನು ಸೃಷ್ಟಿಸಬಹುದು.
ಇದಕ್ಕೆ ಮತ್ತೊಂದು ದಹನಕಾರಿ ಅಂಶ ಸಿಕ್ಕಾಗ ಅದರ ತೀವ್ರತೆ ಇನ್ನಷ್ಟು ಹೆಚ್ಚುತ್ತದೆ. ದೆಹಲಿ ಕೆಂಪುಕೋಟೆ ಬಳಿ ಸಂಭವಿಸಿದ ಸ್ಫೋಟದಲ್ಲಿ ಅಮೋನಿಯಂ ನೈಟ್ರೇಟ್ ಸ್ಫೋಟಗೊಂಡ ನಂತರ ಕಾರಿನಲ್ಲಿದ್ದ ಪೆಟ್ರೋಲಿಯಂ ತೈಲ ಇದಕ್ಕೆ ಇನ್ನಷ್ಟು ಉತ್ತೇಜನ ನೀಡಿದ್ದರಿಂದ ಪರಿಣಾಮವೂ ದೊಡ್ಡದೇ ಆಗಿತ್ತು.
ಅಮೋನಿಯಂ ನೈಟ್ರೇಟ್ ದಾಸ್ತಾನು ಭಾರತದಲ್ಲಿ ನಿಯಂತ್ರಣ ಕಾಯ್ದೆಗೆ ಒಳಪಟ್ಟಿದೆ. 2012ರ ಕಾಯ್ದೆ (2021ರ ತಿದ್ದುಪಡಿ) ಅಡಿಯಲ್ಲಿ ತಯಾರಿಕೆ, ದಾಸ್ತಾನು ಮತ್ತು ಬಳಕೆಗೆ ನಿರ್ದಿಷ್ಟ ಪರವಾನಗಿ ಅಗತ್ಯ.
ಹೀಗಿದ್ದರೂ ಫರೀದಾಬಾದ್‌ನಲ್ಲಿ ಪತ್ತೆಯಾದ ಬೃಹತ್ ಪ್ರಮಾಣದ ಅಮೋನಿಯಂ ನೈಟ್ರೇಟ್ ಭಯೋತ್ಪಾದಕರ ಕೈಗೆ ಹೇಗೆ ಸಿಕ್ಕಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನವನ್ನು ತನಿಖಾ ತಂಡಗಳು ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.