ಭಾರತ–ಪಾಕಿಸ್ತಾನ ಯುದ್ಧದ ಸಂದರ್ಭದಂತೆಯೇ ಇಸ್ರೇಲ್–ಇರಾನ್ ನಡುವೆ ಶಾಂತಿ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಕದನ ವಿರಾಮ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ಕದನ ವಿರಾಮವನ್ನು ಘೋಷಿಸಿದಂತೆ, ಇರಾನ್ ಹಾಗೂ ಇಸ್ರೇಲ್ ಕದನದ ನಡುವೆಯೂ ಇಬ್ಬರಿಗೂ ಮಾಹಿತಿ ಇಲ್ಲದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ‘ಕದನ ವಿರಾಮ’ ಘೋಷಿಸಿದ್ದಾರೆ. ಇದು ಇಡೀ ಜಗತ್ತನ್ನೇ ಬೆರಗುಗೊಳಿಸಿದೆ.
ಇರಾನ್ ಹಾಗೂ ಇಸ್ರೇಲ್ ಸೋಮವಾರ ಮಧ್ಯ ರಾತ್ರಿಯವರೆಗೂ ಪರಸ್ಪರ ಕ್ಷಿಪಣಿ ದಾಳಿ ನಡೆಸುತ್ತಲೇ ಇದ್ದವು. ಇದರ ನಡುವೆಯೇ ಅಧ್ಯಕ್ಷ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಕದನ ವಿರಾಮ ಘೋಷಿಸಿದರು. ‘ಇಸ್ರೇಲ್ ಮತ್ತು ಇರಾನ್ ನನ್ನ ಬಳಿ ಬಂದು ಶಾಂತಿ ಕೋರಿದವು. ಹೀಗಾಗಿ ಕದನ ವಿರಾಮಕ್ಕೆ ಇದುವೇ ಸುಸಮಯ ಎಂದು ಭಾವಿಸಿದೆ. ಜಗತ್ತು ಮತ್ತು ಪಶ್ಚಿಮ ಏಷ್ಯಾ ಇಲ್ಲಿ ನಿಜವಾದ ಜಯಶಾಲಿಗಳು’ ಎಂದಿದ್ದಾರೆ.
‘ಉಭಯ ರಾಷ್ಟ್ರಗಳು ಭವಿಷ್ಯದಲ್ಲಿ ಸಾಕಷ್ಟು ಪ್ರೀತಿ, ಶಾಂತಿಯೊಂದಿಗೆ ಸುಭೀಕ್ಷವಾಗಿರಲಿವೆ. ಸಾಕಷ್ಟು ಗಳಿಸುವ ಅವಕಾಶ ಹೊಂದಿವೆ. ಆದರೆ ಧರ್ಮ ಮತ್ತು ಸತ್ಯದ ದಾರಿಯನ್ನು ಬಿಟ್ಟರೆ ಕಳೆದುಕೊಳ್ಳಲೂ ಇವರಿಗೆ ಬಹಳಷ್ಟಿವೆ. ಇಸ್ರೇಲ್ ಮತ್ತು ಇರಾನ್‌ನ ಭವಿಷ್ಯ ಅಪರಿಮಿತವಾಗಿರಲಿದೆ. ಹಲವಾರು ಭರವಸೆಗಳಿಂದ ಕೂಡಿರಲಿದೆ’ ಎಂದು ಟ್ರಂಪ್ ಬರೆದುಕೊಂಡಿದ್ದಾರೆ.
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಭಯೋತ್ಪಾದಕ ನೆಲೆಯನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದು ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧಕ್ಕೆ ತಿರುಗಿತು. ಮೇ 7ರಂದು ಆರಂಭವಾದ ಈ ಸಂಘರ್ಷದಲ್ಲೂ ಮಧ್ಯ ಪ್ರವೇಶಿಸಿದ ಡೊನಾಲ್ಡ್ ಟ್ರಂಪ್ ಇದೇ ಮಾದರಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಏರ್ಪಟ್ಟಿದೆ ಎಂದು ತಾವೇ ಘೋಷಿಸಿಕೊಂಡಿದ್ದರು.
ಇರಾನ್ ಮತ್ತು ಇಸ್ರೇಲ್ ನಡುವಿನ ಕದನ ತಾರಕಕ್ಕೇರಿದ ಸಂದರ್ಭದಲ್ಲೇ ಟ್ರಂಪ್ ಅವರ ಘೋಷಣೆಗೆ ಶ್ವೇತಭವನದ ಅಧಿಕಾರಿಗಳೇ ಚಕಿತಗೊಂಡಿದ್ದಾರೆ ಎಂದು ವರದಿಯಾಗಿದೆ. ಟ್ರಂಪ್ ಕದನ ವಿರಾಮ ಘೋಷಣೆಯಾಗಿದೆ ಎಂದು ಹೇಳಿದ ನಂತರ ಶ್ವೇತಭವನವು ಕತಾರ್‌ನ ಆಡಳಿತಗಾರ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರ ನೆರವನ್ನು ಪಡೆಯಿತು. ಈ ಅಚ್ಚರಿಯಿಂದ ಹೊರಬರಲು ಇಸ್ರೇಲ್ ಕೆಲ ಸಮಯ ತೆಗೆದುಕೊಂಡಿತು. ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಟ್ರಂಪ್ ದೂರವಾಣಿ ಮೂಲಕ ಸಮಾಲೋಚನೆ ನಡೆಸಿದ ನಂತರವೇ ಇದನ್ನು ಘೋಷಿಸಿದ್ದಾರೆ. ಟ್ರಂಪ್ ಘೋಷಣೆ ಅರಗಿಸಿಕೊಂಡು ತನ್ನ ಹೇಳಿಕೆ ನೀಡಲು ಇರಾನ್ ಕೂಡಾ ಬರೊಬ್ಬರಿ ಮೂರು ಗಂಟೆಗಳನ್ನು ತೆಗೆದುಕೊಂಡಿತು ಎಂದು ಮಾದ್ಯಮಗಳು ವರದಿ ಮಾಡಿವೆ.
ಇಸ್ರೇಲ್ ಹಾಗೂ ಇರಾನ್ ನಡುವಿನ ಕದನ ವಿರಾಮದ ಶ್ರೇಯವನ್ನು ಟ್ರಂಪ್ ಪಡೆದುಕೊಂಡಿದ್ದಾರೆ. ಎರಡೂ ದೇಶಗಳು ಪರಸ್ಪರ ಕದನ ವಿರಾಮ ಒಪ್ಪಿಕೊಳ್ಳುವ ಮೊದಲೇ ಹೇಳಿಕೆ ನೀಡಿರುವ ಟ್ರಂಪ್, ‘ಇಲ್ಲಿಂದ 6 ಗಂಟೆಗಳಲ್ಲಿ ಉಭಯ ರಾಷ್ಟ್ರಗಳು ಕದನ ವಿರಾಮ ಪ್ರಕ್ರಿಯೆ ಆರಂಭಿಸಲಿವೆ. 12 ಗಂಟೆಗಳ ಒಳಗಾಗಿ ಕದನ ವಿರಾಮ ಪೂರ್ಣಗೊಳ್ಳಲಿದೆ’ ಎಂಬ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಕದನ ವಿರಾಮದ ವೇಳಾಪಟ್ಟಿಯನ್ನೂ ಟ್ರಂಪ್ ಅವರೇ ನೀಡಿದ್ದಾರೆ. ‘ಕದನ ವಿರಾಮದ ಆರಂಭ ಇರಾನ್ ನಡೆಸಬೇಕು. ಇದು 12 ಗಂಟೆಯ ಒಳಗಾಗಿ ಪೂರ್ಣಗೊಳ್ಳಬೇಕು. ಇಸ್ರೇಲ್ 24 ಗಂಟೆಗಳ ಒಳಗಾಗಿ ಕದನ ವಿರಾಮ ಪೂರ್ಣಗೊಳಿಸಬೇಕು. 12 ದಿನಗಳ ಕದನ ಅಧಿಕೃತವಾಗಿ ಕೊನೆಗೊಳ್ಳಬೇಕು. ಕದನ ವಿರಾಮ ಶಾಂತಿಯುತವಾಗಿ ಮತ್ತು ಗೌರವಯುತವಾಗಿ ಕೊನೆಗೊಳ್ಳಬೇಕು’ ಎಂದು ಟ್ರಂಪ್ ಹೇಳಿದ್ದಾರೆ.
‘ಇಸ್ರೇಲ್ ಮತ್ತು ಇರಾನ್ ಪರಸ್ಪರ ಸಾಮರ್ಥ್ಯ, ಧೈರ್ಯ ಮತ್ತು ಬುದ್ಧಿವಂತಿಕೆಯಿಂದ ಸಂಘರ್ಷ ಕೊನೆಗೊಳಿಸಿದ್ದಾರೆ. ಇದನ್ನು ‘12 ದಿನಗಳ ಕದನ’ ಎಂದು ಕರೆಯಬಹುದು. ತಡೆಯದಿದ್ದಲ್ಲಿ ವರ್ಷಗಟ್ಟಲೆ ಇದು ಎಳೆಯುವ ಸಾಧ್ಯತೆ ಇತ್ತು. ಇದರಿಂದ ಪಶ್ಚಿಮ ಏಷ್ಯಾ ನಾಶವಾಗುತ್ತಿತ್ತು. ಹಾಗಾಗಲಿಲ್ಲ. ಮುಂದೆಯೂ ಹಾಗೆ ಆಗುವುದಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
‘ಇರಾನ್‌ಗೆ ದೇವರು ಒಳ್ಳೆಯದನ್ನು ಮಾಡಲಿ, ಇಸ್ರೇಲ್‌ಗೆ ದೇವರು ಒಳ್ಳೆಯದನ್ನು ಮಾಡಲಿ, ಪಶ್ಚಿಮ ಏಷ್ಯಾಕ್ಕೆ ದೇವರು ಒಳ್ಳೆಯದನ್ನು ಮಾಡಲಿ. ಅಮೆರಿಕಕ್ಕೆ ದೇವರು ಒಳ್ಳೆಯದನ್ನು ಮಾಡಲಿ. ಇಡೀ ಜಗತ್ತಿಗೆ ದೇವರು ಒಳ್ಳೆಯದನ್ನು ಮಾಡಲಿ’ ಎಂದು ಟ್ರಂಪ್ ಹೇಳಿದ್ದಾರೆ.
‘ಅಮೆರಿಕದ ಇಚ್ಛೆಯಂತೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಇದು ದುರ್ಬಲವಾಗಿತ್ತು. ಟೆಹರಾನ್ ಇದರ ಸುಳಿವು ನೀಡಿದ್ದರೆ ಕದನ ನಡೆಯುತ್ತಲೇ ಇರಲಿಲ್ಲ ಅಥವಾ ವಾಷಿಂಗ್ಟನ್ ದಾಳಿಯನ್ನೂ ನಡೆಸುತ್ತಿರಲಿಲ್ಲ. ಮುಂಜಾಗ್ರತಾ ಕ್ರಮದಿಂದ ಜೀವಗಳ ಹಾನಿಯೂ ಆಗುತ್ತಿರಲಿಲ್ಲ’ ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲೆ ಅಮೆರಿಕ ನಡೆಸಿದ ದಾಳಿಯನ್ನು ವಿವರಿಸಿರುವ ಡೊನಾಲ್ಟ್ ಟ್ರಂಪ್, ‘ಇರಾನ್‌ನ ಅಣುಸ್ಥಾವರಗಳ ಮೇಲಿನ ದಾಳಿ ಹೆಚ್ಚು ತೀಕ್ಷ್ಣವಾಗಿರಲಿಲ್ಲ. ಆದರೆ ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಿಸಲಾಯಿತು. ಒಟ್ಟು 14 ಕ್ಷಿಪಣಿಗಳನ್ನು ಹಾರಿಸಲಾಯಿತು. ಇದರಲ್ಲಿ 13 ಅಣುಸ್ಥಾವರಗಳನ್ನು ಸ್ಫೋಟಿಸಿವೆ. ಒಂದು ಅಪಾಯಕಾರಿ ಅಲ್ಲದ ದಿಕ್ಕಿನೆಡೆ ಕಳುಹಿಸಲಾಯಿತು’ ಎಂದು ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ಈ ಸೇನಾ ಪ್ರಕ್ರಿಯೆಯಲ್ಲಿ ಅಮೆರಿಕದ ಯಾವೊಬ್ಬ ಪ್ರಜೆಗೂ ಹಾನಿಯಾಗಿಲ್ಲ. ಯಾವುದೇ ಆಸ್ತಿಪಾಸ್ತಿಗೂ ನಷ್ಟವಾಗಿಲ್ಲ. ಭವಿಷ್ಯದಲ್ಲಿ ಯಾವುದೇ ದ್ವೇಷ ಉಳಿಯುವುದಿಲ್ಲ ಎಂಬ ಭರವಸೆ ಇದೆ. ಇರಾನ್ ಬಹಳಾ ಮುಂಚೆಯೇ ನಮಗೆ ಮಾಹಿತಿ ನೀಡಿದ್ದರಿಂದಾಗಿ ಹೆಚ್ಚಿನ ಪ್ರಾಣಹಾನಿ ಸಂಭವಿಸಿಲ್ಲ’ ಎಂದಿದ್ದಾರೆ.
‘ಕದನ ವಿರಾಮದ ಸಲಹೆಯನ್ನು ಇರಾನ್ ಮೊದಲು ಒಪ್ಪಿಕೊಂಡಿತು. ಅದು ಇಸ್ರೇಲ್ ಅನ್ನೂ ಒಪ್ಪುವಂತೆ ಮಾಡಿತು’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.