ಕೇರಳ ಮತ್ತು ಪಶ್ಚಿಮ ಬಂಗಾಳ ಪ್ರಾತಿನಿಧಿಕ ಚಿತ್ರ
ಎಐ ಚಿತ್ರ
ಸ್ಥಳೀಯ ಭಾಷೆಯ ಸೊಗಡಿಗೆ ಅನುಗುಣವಾಗಿ ಸ್ಥಳ, ರಾಜ್ಯಗಳ ಹೆಸರು ಬದಲು ಮಾಡುವ ಪ್ರಕ್ರಿಯೆ ನಡೆಯುತ್ತಲೇ ಇದೆ. ಅಲಹಾಬಾದ್ ಪ್ರಯಾಗ್‌ರಾಜ್ ಆದಂತೆ, ಫೈಝಾಬಾದ್ ಅಯೋಧ್ಯೆಯಾದಂತೆ, ಕೇರಳ ಈಗ ಕೇರಳಂ ಆಗಿದೆ.
ಫೆ. 24ರಂದು ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ‘ಕೇರಳಂ’ ಮಾಡಿ ಎಂಬ ಕೇರಳ ರಾಜ್ಯದ ಮನವಿಯನ್ನು ಪುರಸ್ಕರಿಸಲಾಯಿತು. ಮಲಯಾಳ ಭಾಷೆಯಲ್ಲಿ ಉಚ್ಛರಿಸುವಂತೆ ತೆಂಗಿನ ನಾಡು ಎಂಬುದನ್ನು ಪ್ರತಿನಿಧಿಸುವಂತೆ ರಾಜ್ಯದ ಹೆಸರು ಬದಲಿಸುವ ಮನವಿಯನ್ನು ಕೇಂದ್ರ ಪುರಸ್ಕರಿಸಿತು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದ ನಿರ್ಧಾರವನ್ನು ಸಂಭ್ರಮದಿಂದ ಹಂಚಿಕೊಂಡಿದ್ದರು. ‘ನಮ್ಮ ಅದ್ಭುತ ಸಂಸ್ಕೃತಿಯನ್ನು ಇನ್ನಷ್ಟು ಬಲಪಡಿಸುವ ನಮ್ಮ ಪ್ರಯತ್ನದ ಭಾಗವಾಗಿದೆ’ ಎಂದಿದ್ದರು.
ಆದರೆ ಇದೇ ಸಂಭ್ರಮ ಪಶ್ಚಿಮ ಬಂಗಾಳದ ಕೋರಿಕೆಗೇಕಿಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾಷಾವಾರು ರಾಜ್ಯಗಳ ರಚನೆಯ ಸಂದರ್ಭದಲ್ಲಿ 1956ರ ನ. 1ರಂದು ಕೇರಳ ರಾಜ್ಯ ರಚನೆಯಾದ ದಿನವನ್ನು ‘ಕೇರಳ ಪಿರವಿ ದಿನ’ ಎಂದು ಆಚರಿಸಲಾಗುತ್ತದೆ. ಆಗ ಮಲಯಾಳ ಭಾಷೆಯಲ್ಲಿ ‘ಕೇರಳಂ’ ಎಂದೇ ಕರೆಯಲಾಗಿತ್ತು. ಆದರೆ ಸಂವಿಧಾನದ ಮೊದಲನೇ ಪರಿಚ್ಛೇದದಂತೆ ‘ಕೇರಳ’ ಎಂದೇ ದಾಖಲಾಯಿತು. ಆದರೆ ಸಂವಿಧಾನದ 3ನೇ ವಿಧಿಯಂತೆ
ಕೇರಳವನ್ನು ‘ಕೇರಳಂ’ ಮಾಡುವ ಪ್ರಯತ್ನ ಆರಂಭವಾಗಿದ್ದು 2024 ಜೂನ್‌ನಲ್ಲಿ. ಕೇರಳದ ವಿಧಾನಸಭೆಯಲ್ಲಿ ಒಕ್ಕೊರೊಲಿನಿಂದ ಅಲ್ಲಿನ ಶಾಸಕರು ಇದಕ್ಕೆ ಬೆಂಬಲ ವ್ಯಕ್ತಪಡಿಸಿ ನಿರ್ಣಯ ಕೈಗೊಂಡಿದ್ದರು. ನಂತರ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರವು ಕೇಂದ್ರಕ್ಕೆ ಮನವಿ ಸಲ್ಲಿಸಿತು. ಕೇಂದ್ರವೂ ಅದಕ್ಕೆ ಸಮ್ಮತಿ ಸೂಚಿಸಿದೆ.
ಇದರ ಆಧಾರದ ಮೇಲೆ ರಾಷ್ಟ್ರಪತಿ ಅವರು ಕೇರಳ ವಿಧಾನಸಭೆಯ ಮಸೂದೆ ಮೇಲೆ ಅದರ ಅಭಿಪ್ರಾಯವನ್ನು ಕೇಳಲಿದ್ದಾರೆ. ಪ್ರತಿಕ್ರಿಯೆ ನಂತರ ಕೇಂದ್ರ ಮುಂದಿನ ಹೆಜ್ಜೆ ಇಡಲಿದೆ. ರಾಷ್ಟ್ರಪತಿಯವರ ಶಿಫಾರಸಿನಂತೆ ಕೇರಳ (ಹೆಸರು ತಿದ್ದುಪಡಿ) ಮಸೂದೆಯು 2026ರಲ್ಲಿ ಸಂಸತ್ತಿನಲ್ಲಿ ಚರ್ಚೆಯಾಗಲಿದೆ. ಅಲ್ಲಿ ಅಂಗೀಕಾರವಾದಲ್ಲಿ ಕೇರಳವು ಅಧಿಕೃತವಾಗಿ ‘ಕೇರಳಂ’ ಆಗಲಿದೆ.
ಕೇರಳವನ್ನು ‘ಕೇರಳಂ’ ಎಂದು ಕರೆಯಲು ವಿದೇಶಗಳಲ್ಲಿ ನೆಲೆಸಿರುವ ಮಲಯಾಳಿಗಳ ಬೆಂಬಲ ಹೆಚ್ಚಾಗಿದೆ. ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲೆಸಿರುವ ಮಲಯಾಳಿಗಳು ಈಗಾಗಲೇ ‘ಕೇರಳಂ’ ಎಂದು ಕರೆಯಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಹಾಗೆಯೇ ‘ಅಂ’ ಸೇರಿಸಿದ ಮಾತ್ರಕ್ಕೆ ಎಲ್ಲವೂ ಬದಲಾಗಲಿದೆಯೇ ಎಂದು ಸಂಸದ ಶಶಿ ತರೂರ್ ಅವರು ವ್ಯಂಗ್ಯವಾಡಿದ್ದಾರೆ. ಇನ್ನೂ ಹಲವರು ಧನಿಗೂಡಿಸಿದ್ದಾರೆ.
ಆದರೆ ಬಾಂಬೆ ‘ಮುಂಬೈ’ ಆದಂತೆ, ಮದ್ರಾಸ್ ಅನ್ನು ‘ಚೆನ್ನೈ’ ಎಂದು ಕರೆದಂತೆ ಮಲಯಾಳಿಗಳೂ ಬ್ರಿಟಿಷ್ ಆಡಳಿತದ ಹೆಸರಿನ ಸಂಕೋಲೆಯಿಂದ ಹೊರಬರಲು ನಿರ್ಧರಿಸಿದ್ದಾರೆ. ಕೇರಳವನ್ನು ಎಂದಿಗೂ ‘ಚೇರಂ’ ಎಂದೇ ಕರೆಯಲಾಗುತ್ತಿತ್ತು. ಇದು ಚೇರಾ ಸಾಮ್ರಾಜ್ಯದಿಂದ ಬಂದ ಹೆಸರು. ತೆಂಗಿನ ನಾಡು ಎಂಬುದು ಇದರ ಅರ್ಥ. ನಾವು ಹೇಗೆ ಮಾತನಾಡುತ್ತೇವೋ ಜಗತ್ತು ಅದನ್ನೇ ಅನುಸರಿಸುತ್ತದೆ ಎಂಬುದು ಮಲಯಾಳಿಗಳ ವಾದ.
ಕೇರಳದ ಹೆಸರು ಬದಲಾವಣೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತುಸುವೂ ತಡಮಾಡದೆ ಹಸಿರು ನಿಶಾನೆ ತೋರಿದೆ ಎಂಬುದು ಸದ್ಯ ಎದ್ದಿರುವ ಚರ್ಚೆ. ಜತೆಗೆ ರಾಜ್ಯ ಮತ್ತು ಪ್ರಾದೇಶಿಕ ಭಾಷೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಹಾಗೂ ಹಿಂದಿಯನ್ನು ಎಲ್ಲೆಡೆ ಪ್ರಸಾರಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ತ್ರಿಭಾಷಾ ಸೂತ್ರವೂ ವಿವಾದ ಎಬ್ಬಿಸಿದ್ದೂ ಅಷ್ಟೇ ಸತ್ಯ.
‘ಹಿಂದಿ ಎಲ್ಲಾ ಭಾಷೆಗಳ ಸ್ನೇಹಿತ ಮತ್ತು ಹಿಂದಿಯೊಂದಿಗೆ ಜತೆಗೂಡಿದರೆ ದೇಶ ಇನ್ನಷ್ಟು ಆತ್ಮನಿರ್ಭರ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಈ ದೃಷ್ಟಿಕೋನದಲ್ಲಿ ಕೇರಳವನ್ನು ನೋಡುವುದಾದರೆ, ಅಲ್ಲಿನ ಚುನಾವಣೆಗೆ ಈಗ ಅಖಾಡ ಸಿದ್ಧವಾಗಿದೆ. ಕೇರಳದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಬಿಜೆಪಿ, ಅಲ್ಲಿನ ಜನರ ಆಶೋತ್ತರಗಳ ಈಡೇರಿಕೆಗೆ ತೀವ್ರ ಆಸಕ್ತಿ ತೋರುತ್ತಿದೆ ಮತ್ತು ಕೇರಳದ ಬೇಡಿಕೆಗೆ ಕೇಂದ್ರ ತ್ವರಿತವಾಗಿ ಸ್ಪಂದಿಸುತ್ತದೆ ಎಂಬ ಭಾವವನ್ನು ಸೃಷ್ಟಿಸುವ ಯತ್ನ ನಡೆಸುತ್ತಿದೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ಕೇರಳ ವಿಷಯದಲ್ಲಿ ಆಸಕ್ತಿ ತೋರುತ್ತಿರುವ ಕೇಂದ್ರ, ಬಂಗಾಳದ ವಿಷಯದಲ್ಲಿ ನಿರುತ್ಸಾಹ ಏಕೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳುತ್ತಿದ್ದಾರೆ.
‘ನಾವು ಯಾವುದೇ ರಾಜ್ಯದ ವಿರೋಧಿಗಳಲ್ಲ. ಆದರೆ ರಾಜ್ಯದ ಹೆಸರು ಬದಲಾವಣೆ ವಿಷಯದಲ್ಲಿ ಬಿಜೆಪಿ ಮತ್ತು ಸಿಪಿಎಂ ನಡುವೆ ಉತ್ತಮ ಬಾಂಧವ್ಯ ಇದ್ದು, ಅದು ತ್ವರಿತವಾಗಿ ಈಡೇರಿದೆ. ಯಾವಾಗಲೂ ಅವರೇ ಅಧಿಕಾರದಲ್ಲಿರುತ್ತಾರೆ ಎಂದೇನೂ ಇಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ಬಂಗಾಳದ ಹೆಸರನ್ನು ಪಡೆಯುತ್ತೇವೆ’ ಎಂದು ಗುಡುಗಿದ್ದಾರೆ.
ಬಂಗಾಳದ ಬಂಗಾಳಿಯಲ್ಲಿರುವಂತೆ 1999ರಲ್ಲಿ ಪಶ್ಚಿಮ ಬಂಗಾಳ ಕೋರಿತ್ತು. ಮುಖ್ಯಮಂತ್ರಿ ಆಗಿದ್ದ ಜ್ಯೋತಿ ಬಸು ಅವರ ನೇತೃತ್ವದ ಎಡಪಕ್ಷದ ಸರ್ಕಾರವು ಮೊದಲು ಪ್ರಸ್ತಾವನೆ ಸಲ್ಲಿಸಿತ್ತು. ಆರಂಭದಲ್ಲಿ ‘ಪಶ್ಚಿಮ್ ಬಾಂಗ್ಲಾ’ ಎಂದೂ ನಂತರದ ಸರ್ಕಾರವು ‘ಬಾಂಗ್ಲಾ’ ಎಂದೂ ಹೆಸರು ಬದಲಿಸುವ ಪ್ರಸ್ತಾವನೆ ಸಲ್ಲಿಸಿದ್ದವು.
2011ರಲ್ಲಿ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ ‘ಪಶ್ಚಿಮ ಬಂಗಾ’ ಎಂದೂ ಹಾಗೂ ಅದನ್ನೇ ಇಂಗ್ಲಿಷ್‌ನಲ್ಲಿ ‘ಬಾಂಗ್ಲಾ’ ಎಂದೂ ಇಡುವಂತೆ ಕೇಂದ್ರವನ್ನು ಕೋರಿತು. ಆದರೆ ಅದನ್ನು ಕೇಂದ್ರ ಪುರಸ್ಕರಿಸಲಿಲ್ಲ.
2016ರಲ್ಲಿ ಕೇಂದ್ರವು ಮರು ಪ್ರಯತ್ನ ನಡೆಸಿತು. ಇಂಗ್ಲಿಷ್‌ನಲ್ಲಿ ‘ಬೆಂಗಾಲ್’ ಎಂದೂ, ಬಂಗಾಳಿಯಲ್ಲಿ ‘ಬಾಂಗ್ಲಾ’ ಮತ್ತು ಹಿಂದಿಯಲ್ಲಿ ‘ಬಂಗಾಲ್’ ಎಂದೂ ಇಡುವಂತೆ ಕೋರಿತು.
ಇದನ್ನೂ ತಿರಸ್ಕರಿಸಿದ ಕೇಂದ್ರ, ‘ಹೆಸರು ಒಂದೇ ರೀತಿಯಲ್ಲಿರಬೇಕು’ ಎಂದು ವಿವರಣೆ ನೀಡಿತು.
2018ರಲ್ಲಿ ಪಶ್ಚಿಮ ಬಂಗಾಳದ ವಿಧಾನಸಭೆಯು ಮತ್ತೊಂದು ಯತ್ನ ನಡೆಸಿತು. ಈ ಬಾರಿ ‘ಬಾಂಗ್ಲಾ’ ಎಂಬ ಒಂದೇ ಹೆಸರನ್ನು ಅದು ಆಯ್ಕೆ ಮಾಡಿ ಕಳುಹಿಸಿತು.
ಇದು ರಾಜ್ಯಸಭೆಯಲ್ಲೂ ಚರ್ಚೆಯಾಯಿತು. ತೃಣಮೂಲ ಕಾಂಗ್ರೆಸ್‌ನ ರೀತಬ್ರಾತ ಬ್ಯಾನರ್ಜಿ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರಾಯ್ ಅವರು ಉತ್ತರಿಸಿ. ‘ಪ್ರಸ್ತಾವನೆಯ ಸಾಧಕ ಬಾಧಕಗಳನ್ನು ಗಮನಿಸಿದ ನಂತರವಷ್ಟೇ ತೀರ್ಮಾನ ಸಾದ್ಯ. ಆದರೆ ಹೆಸರು ಬದಲಾವಣೆಗೆ ಸಾಂವಿಧಾನಿಕ ತಿದ್ದುಪಡಿ ಅಗತ್ಯ’ ಎಂದಿದ್ದರು.
ಬಾಂಗ್ಲಾ ಎಂಬ ಹೆಸರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಾಂಗ್ಲಾದೇಶ ತಕರಾರು ಎತ್ತಬಹುದು ಎಂಬ ಕಳವಳವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದ್ದನ್ನು ದಿ ಹಿಂದೂ ವರದಿ ಮಾಡಿದೆ.
ಹೀಗಾಗಿ ಪಶ್ಚಿಮ ಬಂಗಾಳದ ಹೆಸರು ಬದಲಾವಣೆಯ ಕನಸು ಈಗಲೂ ನನಸಾಗದೆ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.