ADVERTISEMENT

ISRO ಮುಟ್ಟಿಬಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಸುತ್ತಾಡಲು NASA ಗಗನಯಾನಿಗಳ ಕಾತರ

ಇ.ಎಸ್.ಸುಧೀಂದ್ರ ಪ್ರಸಾದ್
Published 22 ಜನವರಿ 2026, 12:30 IST
Last Updated 22 ಜನವರಿ 2026, 12:30 IST
<div class="paragraphs"><p>ನಾಸಾ ಎಕ್ಸ್ ಚಿತ್ರ</p></div>
   

ನಾಸಾ ಎಕ್ಸ್ ಚಿತ್ರ

ವಾಷಿಂಗ್ಟನ್‌: 1972ರ ಡಿಸೆಂಬರ್‌ನಲ್ಲಿ ಅಪೊಲೊ 17 ನೌಕೆಯು ಚಂದ್ರನಲ್ಲಿ ಇಳಿದಿತ್ತು. ನೀಲ್‌ ಆರ್ಮ್‌ಸ್ಟ್ರಾಂಗ್ ನೇತೃತ್ವದ ಗಗನಯಾನಿಗಳ ತಂಡ ಚಂದ್ರನ ಮೇಲೆ ಮೊದಲ ಹೆಜ್ಜೆ ಇರಿಸದ್ದ ಚಿತ್ರ ಇಂದಿಗೂ ಹರಿದಾಡುತ್ತಿದೆ. ಈ ಗಳಿಗೆಯನ್ನು ಸಂಭ್ರಮಿಸುವ ಸಲುವಾಗಿಯೇ ನಾಲ್ಕು ಗಗನಯಾನಿಗಳನ್ನು ಚಂದ್ರನ ಸುತ್ತ ಸುತ್ತುಹಾಕುವ ಕೆಲಸಕ್ಕೆ ನಾಸಾ ಕಳುಹಿಸುತ್ತಿದೆ. 

ಫೆ. 6ಕ್ಕೆ ಇದಕ್ಕೆ ಮುಹೂರ್ತ ನಿಗದಿಯಾಗಿದೆ. ಆರ್ಟೆಮಿಸ್–2 ಎಂಬ ಈ ಯೋಜನೆಯು ಹತ್ತು ದಿನಗಳದ್ದಾಗಿದ್ದು, ಇದರಲ್ಲಿ ರೀಡ್‌ ವೈಸ್‌ಮನ್‌ ಕಮಾಂಡರ್‌ ಆಗಿದ್ದಾರೆ. ಪೈಲೆಟ್‌ ಆಗಿ ವಿಕ್ಟರ್ ಗ್ಲೋವರ್‌ ಮತ್ತು ಮಿಷನ್‌ ತಜ್ಞರಾಗಿ ಕ್ರಿಸ್ಟಿನಾ ಕೋಚ್‌, ಕೆನಡಾ ಬಾಹ್ಯಾಕಾಶ ಸಂಸ್ಥೆಯ ಗಗನಯಾನಿ ಜೆರೆಮಿ ಹ್ಯಾನ್ಸೆನ್‌ ಅವರು ನಿಯೋಜನೆಗೊಂಡಿದ್ದಾರೆ. ಇವರ ಪ್ರಯಾಣಕ್ಕಾಗಿ ಡಯನ್‌ ಬ್ಯಾಹ್ಯಾಕಾಶ ನೌಕೆ ಸಜ್ಜಾಗಿದೆ.

ADVERTISEMENT

ಈ ನೌಕೆಯು ಚಂದ್ರನ ಮೇಲೆ ಇಳಿಯುವುದಿಲ್ಲ. ಆದರೆ ಆದರೆ ಭೂಮಿಗೆ ಹಿಂತಿರುಗುವ ಮೊದಲು ಅದರ ದೂರದ, ದಕ್ಷಿಣ ಧ್ರುವದ ಬಳಿ ಹಾರಾಟ ನಡೆಸಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ನಡೆಸಿದ ಚಂದ್ರಯಾನ–3ರಲ್ಲಿ ಭಾರತೀಯ ತಂತ್ರಜ್ಞರು ರೋವರ್‌ ವಿಕ್ರಂ ಅನ್ನು 2023ರ ಆ. 23ರ ಸಂಜೆ 6 ಗಂಟೆ 4 ನಿಮಿಷಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಸಿದ್ದರು. ಇದೀಗ ನಾಸಾ ಕೂಡಾ ದಕ್ಷಿಣ ಧ್ರುವವನ್ನೇ ಆಯ್ಕೆ ಮಾಡಿಕೊಂಡಿದೆ.

ಈ ಯೋಜನೆಗಾಗಿ ಅಮೆರಿಕದ ಫ್ಲೋರಿಡಾದಲ್ಲಿರುವ ಕೇಪ್ ಕ್ಯಾನ್ವೆರಲ್‌ನಲ್ಲಿರುವ ಉಡಾವಣಾ ವೇದಿಕೆಯಿಂದ ಗಗನಯಾನಿಗಳಿರುವ ನೌಕೆಯನ್ನು ಹೊತ್ತ ರಾಕೆಟ್‌ ನಭಕ್ಕೆ ಚಿಮ್ಮಲಿದೆ.

ಈ ಕುರಿತು ಮಾಹಿತಿ ನೀಡಿರುವ ನಾಸಾದ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್‌, ‘ಆರ್ಟೆಮಿಸ್–2 ಯೋಜನೆಯು ಮಾನವರ ಬಾಹ್ಯಾಕಾಶ ಹಾರಾಟದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ. ಭೂಮಿಯಿಂದ ಹಿಂದೆಂದಿಗಿಂತಲೂ ದೂರಕ್ಕೆ ಮಾನವ ಸಹಿತ ನೌಕೆಯು ತಲುಪಲಿದೆ. ಜತೆಗೆ, ಚಂದ್ರನಲ್ಲಿ ಹೋಗಿ ಯಶಸ್ವಿಯಾಗಿ ಭೂಮಿಗೆ ಮರಳುವ ಸುರಕ್ಷಿತ ವ್ಯವಸ್ಥೆಯನ್ನು ಇದು ಖಾತ್ರಿಪಡಿಸಿಕೊಳ್ಳಲಿದೆ’ ಎಂದಿದ್ದಾರೆ.

‘ಆರ್ಟೆಮಿಸ್‌–2 ಯೋಜನೆಯಿಂದ ಚಂದ್ರನ ಮೇಲೆ ಮಾನವನ ಉಪಸ್ಥಿತಿಯನ್ನು ಮತ್ತು ಅಮೆರಿಕನ್ನರನ್ನು ಭವಿಷ್ಯದಲ್ಲಿ ಮಂಗಳ ಗ್ರಹಕ್ಕೆ ಕಳುಹಿಸುವ ಪ್ರಕ್ರಿಯೆಗೆ ಮುನ್ನುಡಿಯಾಗಿದೆ’ ಎಂದೂ ಹೇಳಿದ್ದಾರೆ.

ಆರ್ಟೆಮಿಸ್‌–2 ಯೋಜನೆಯ ಗಗನಯಾನಿಗಳು

ಹೇಗಿರಲಿದೆ ಆರ್ಟೆಮಿಸ್–2 ಯೋಜನೆ..?

2027ರಲ್ಲಿ ಆರ್ಟೆಮಿಸ್–3 ಯೊಜನೆಗೆ ಈಗಲೇ ವೇದಿಕೆ ಸಿದ್ಧವಾಗುತ್ತಿದೆ. ಅದಕ್ಕೂ ಪೂರ್ವಭಾವಿಯಾಗಿ, ಆರ್ಟೆಮಿಸ್–2 ಯೋಜನೆಗೆ ಅಂತಿಮ ಸಿದ್ಧತೆಗಳು ನಡೆದಿವೆ. ಆರ್ಟೆಮಿಸ್–3 ಯೋಜನೆಯಲ್ಲಿ ಗಗನಯಾನಿಗಳು ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊದಲ ಬಾರಿಗೆ ಇಳಿಯುವ ನಿರೀಕ್ಷೆ ಇದೆ. ಜತೆಗೆ ಚಂದ್ರನಲ್ಲಿ ದೀರ್ಘಾವಧಿಯವರೆಗೆ ಇರುವ ಪ್ರಯೋಗವೂ ಇದಾಗಲಿದೆ ಎಂದು ಹೇಳಲಾಗಿದೆ. 

2022ರ ಆಗಸ್ಟ್‌ನಲ್ಲಿ ಆರ್ಟೆಮಿಸ್–1 ಯೋಜನೆಯನ್ನು ನಾಸಾ ಕೈಗೊಂಡಿತ್ತು. ಇದು ಮಾನವ ರಹಿತ ಹಾರಾಟವಾಗಿತ್ತು. ಆಳ ಬಾಹ್ಯಾಕಾಶ ಅನ್ವೇಷಣೆಯ ಭಾಗವಾಗಿದ್ದ ಇದರಲ್ಲಿ ಓರಿಯನ್‌ ಬಾಹ್ಯಾಕಾಶ ನೌಕೆ ಮತ್ತು ಎಸ್‌ಎಲ್ಎಸ್‌ ರಾಕೆಟ್‌ನ ಮೊದಲ ಸಂಯೋಜಿತ ಉಡ್ಡಯನವಾಗಿತ್ತು.

ಫ್ಲೋರಿಡಾದ ಕೆನಡಿ ಬ್ಯಾಹ್ಯಾಕಾಶ ಕೇಂದ್ರದಿಂದ ಉಡ್ಡಯನಗೊಳ್ಳುವ ಆರ್ಟೆಮಿಸ್–2 ಯೋಜನೆಯಲ್ಲಿ, ಗಗನಯಾನಿಗಳನ್ನು ಹೊತ್ತ ನೌಕೆಯು ಮೊದಲಿಗೆ ಭೂಮಿಯ ಸುತ್ತ ಆರಂಭಿಕ ಕಕ್ಷೆಯನ್ನು ಪ್ರವೇಶಿಸಲಿದೆ. ಇಲ್ಲಿ ಗಗನಯಾನಿಗಳು ಸುರಕ್ಷಿತವಾಗಿರುವರೇ ಎಂಬುದು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಭೂಮಿಗೆ ಹತ್ತಿರದಲ್ಲೇ ಇರುವಾಗ ಉಸಿರಾಡಲು ಅಗತ್ಯ ಗಾಳಿಯನ್ನು ಉತ್ಪಾದಿಸುವ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಸಿಬ್ಬಂದಿ ಪರೀಕ್ಷಿಸಲಿದ್ದಾರೆ.

ಚಂದ್ರನ ಗುರುತ್ವಾಕರ್ಷಣ ಶಕ್ತಿಯನ್ನು ಬಳಸಿಕೊಂಡು, ಗಗನಯಾನಿಗಳು ನಂತರ ಟ್ರಾನ್ಸ್‌ ಲೂನರ್‌ ಇಂಜೆಕ್ಷನ್ ಬರ್ನ್‌ ಅನ್ನು ಪ್ರಯತ್ನಿಸಲಿದ್ದಾರೆ. ಇಲ್ಲಿ ಓರಿಯಾನ್ ಸೇವಾ ಮಾಡ್ಯೂಲ್ ಅಂತಿಮ ನೂಕುಬಲವನ್ನು ಪ್ರಯತ್ನಿಸಿ ನೌಕೆಯನ್ನು ಚಂದ್ರನ ದೂರದ ಕಕ್ಷೆಗೆ ಹೊರದಬ್ಬಲಿದೆ. ಈ ಪ್ರಯತ್ನವು ಸುಮಾರು ನಾಲ್ಕು ದಿನಗಳದ್ದಾಗಿದೆ. ಕಕ್ಷೆಗಳ ಎಂಟು ಹಂತಗಳನ್ನು ಇದು ಪತ್ತೆ ಮಾಡಲಿದೆ. ಇದು ಅತಿ ದೂರದ ಬಿಂದುವಾಗಿರುವುದರಿಂದ, ಗಗನಯಾನಿಗಳು ಭೂಮಿಯಿಂದ ಸುಮಾರು 2.30 ಲಕ್ಷ ಕಿಲೋ ಮೀಟರ್ ದೂರವನ್ನು ಕ್ರಮಿಸಲಿದ್ದಾರೆ. ಇದರ ನಂತರ ಗಗನಯಾನಿಗಳು ಭೂಮಿಯ ಸಮುದ್ರ ತೀರದವರೆಗೂ ಮರು ಪ್ರಯಾಣವನ್ನೂ ಮಾಡಬೇಕಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಎಂಜಿನ್‌ ಇರುವುದಿಲ್ಲ.

ಭೂಮಿಯ ವಾತಾವರಣವನ್ನು ಪ್ರವೇಶಿಸುವ ಸಂದರ್ಭದಲ್ಲಿ ಕ್ಯಾಪ್ಸೂಲ್‌ನ ವೇಗ ಹೆಚ್ಚಲಿದೆ. ಇದರಿಂದ ಉಂಟಾಗುವ ಘರ್ಷಣೆಯನ್ನು ತಗ್ಗಿಸಿ, ಪೆಸಿಫಿಕ್ ಸಾಗರದಲ್ಲಿ ಇದು ಇಳಿಯುವಂತೆ ನಾಸಾ ತಜ್ಞರು ವ್ಯವಸ್ಥೆ ಮಾಡಿದ್ದಾರೆ.