
ದೇಶದ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಸ್ಥಾನವಿದೆ. 'ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೇ ತತ್ರ ದೇವತಾಃ' ಎಂದಿದ್ದಾರೆ ಹಿರಿಯರು. ಆದಾಗ್ಯೂ ದೇಶದಲ್ಲಿ ಭ್ರೂಣ ಹತ್ಯೆ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ನಿಂತಿಲ್ಲ. ಹೆಣ್ಣು ಮಗುವನ್ನು ಮನೆ ಬೆಳಗುವ ದೀಪ ಎಂದು ಕರೆಯುವ ಅದೇ ಜನ, ಮನೆಯಲ್ಲಿ ಹೆಣ್ಣು ಹುಟ್ಟಿದರೆ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುತ್ತಾರೆ. ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪ್ರತಿ ವರ್ಷ ಜನವರಿ 24ರಂದು 'ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ವನ್ನು ಆಚರಿಸಲಾಗುತ್ತದೆ.
ಜನವರಿ 24 ಅನ್ನು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನಾಗಿ 2009ರಿಂದ ಪ್ರತಿವರ್ಷ ಆಚರಿಸಲಾಗುತ್ತಿದೆ. ಅಮೆರಿಕದಂತಹ ಮುಂದುವರಿದ ದೇಶದಲ್ಲಿಯೂ ಈವರೆಗೆ ಸಾಧ್ಯವಾಗಿರದ ‘ಮಹಿಳಾ ಪ್ರಧಾನಿ’ಯ ವಾಸ್ತವ, ಭಾರತದಲ್ಲಿ 1966ರ ಜನವರಿ 24ಕ್ಕೆ ಇಂದಿರಾ ಗಾಂಧಿ ಅವರು ಭಾರತದ ಪ್ರಧಾನಿಯಾಗುವುದರೊಂದಿಗೆ ಸಾಧ್ಯವಾದದ್ದು ಈಗ ಇತಿಹಾಸ. ಇದೂ ಮಹಿಳಾ ಸಬಲೀಕರಣದ ಒಂದು ಗುರುತು ಎಂಬ ಕಾರಣಕ್ಕೆ ಈ ದಿನವನ್ನೇ ಹೆಣ್ಣು ಮಗುವಿನ ದಿನವನ್ನಾಗಿ ಭಾರತ ಆರಿಸಿಕೊಂಡಿದೆ.
ಪ್ರತಿ ವರ್ಷ ಹೊಸತೊಂದು ಧ್ಯೇಯವಾಕ್ಯವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆರಿಸಿಕೊಳ್ಳುತ್ತದೆ. ಆ ಧ್ಯೇಯವನ್ನು ಇಟ್ಟುಕೊಂಡು ಮತ್ತಷ್ಟು ಕೆಲಸಗಳನ್ನು ಮಾಡಬೇಕು, ಅರಿವು ಮೂಡಿಸಬೇಕು ಎನ್ನುವುದು ಅದರ ಉದ್ದೇಶ.
ಹೆಣ್ಣು ಮಕ್ಕಳ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಭಾರತ ಸರ್ಕಾರ, ಬೇಟಿ ಬಚಾವೊ, ಬೇಟಿ ಪಡಾವೊ, ಸುಕನ್ಯಾ ಸಮೃದ್ಧಿ ಯೋಜನೆ ಸೇರಿದಂತೆ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ದೇಶದಲ್ಲಿ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸಿವೆ. ಈ ಪ್ರಯತ್ನಗಳಿಗೆ ವಿವಿಧ ಅಭಿಯಾನಗಳು ಮತ್ತು ಜಾಗೃತಿ ಕಾರ್ಯಕ್ರಮಗಳು ಮತ್ತಷ್ಟು ಪುಷ್ಟಿ ನೀಡುತ್ತಿವೆ.
ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ, ಸಬಲೀಕರಣ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರ ವಿವಿಧ ಯೋಜನೆಗಳು ಮತ್ತು ಕಾನೂನು ಕ್ರಮಗಳನ್ನು ಜಾರಿಗೆ ತಂದಿದೆ. ಅವುಗಳು ಹೀಗಿವೆ..
ಬೇಟಿ ಬಚಾವೊ, ಬೇಟಿ ಪಡಾವೊ (BBBP):
2015 ಜನವರಿ 22ರಂದು ಈ ಯೋಜನೆಯನ್ನು ಪ್ರಾರಂಭಿಸಲಾಯಿತು. ಕ್ಷೀಣಿಸುತ್ತಿರುವ ಹೆಣ್ಣು ಮಕ್ಕಳ ಲಿಂಗಾನುಪಾತವನ್ನು ಸುಧಾರಿಸಲು (ಲಿಂಗಾನುಪಾತದ ಅಂತರ ಕಡಿಮೆ ಮಾಡುವುದು), ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು ಹಾಗೂ ಲಿಂಗ ಅಸಮಾನತೆಯನ್ನು ತೊಡೆದುಹಾಕುವುದು ಈ ಯೋಜನೆಯ ಉದ್ದೇಶವಾಗಿದೆ.
ಬೇಟಿ ಬಚಾವೊ, ಬೇಟಿ ಪಡಾವೊ ಯೋಜನೆ– ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
ಉಡಾನ್ (Udaan):
2014ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (MHRD) ಅಡಿಯಲ್ಲಿ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) ಈ ಯೋಜನೆಯನ್ನು ಪ್ರಾರಂಭಿಸಿದೆ. ಪ್ರತಿಷ್ಠಿತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಹೆಣ್ಣುಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ಹದಿಹರೆಯದ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಕೇಂದ್ರದ ಸಮಗ್ರ ಯೋಜನೆ (SAG)
11-14 ವರ್ಷದ ಬಾಲಕಿಯರಿಗೆ ಸರಿಯಾದ ಪೋಷಣೆ ಮತ್ತು ಆರೋಗ್ಯ ಸೇವೆಗಳನ್ನು ಪಡೆಯಲು ಸಹಾಯ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳ ಆರೋಗ್ಯ ಸ್ಥಿತಿಯನ್ನು ಸುಧಾರಿಸುವುದು, ನೈರ್ಮಲ್ಯ, ಪೋಷಣೆ, ಹದಿಹರೆಯದವರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶಗಳು.
ಪ್ರೌಢ ಶಿಕ್ಷಣಕ್ಕಾಗಿ ಬಾಲಕಿಯರಿಗೆ ಪ್ರೋತ್ಸಾಹ ಧನ
2008ರಲ್ಲಿ ಪ್ರಾರಂಭಿಸಲಾದ ಕೇಂದ್ರ ಪ್ರಾಯೋಜಿತ ಯೋಜನೆ ಇದಾಗಿದೆ. ಹೆಣ್ಣು ಮಕ್ಕಳಿಗೆ, ವಿಶೇಷವಾಗಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಸಮುದಾಯಗಳ ಬಾಲಕಿಯರಿಗೆ ಮಾಧ್ಯಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಇದರ ಉದ್ದೇಶ.
ಮುಟ್ಟಿನ ನೈರ್ಮಲ್ಯಕ್ಕೆ ಉತ್ತೇಜನ
2011ರಲ್ಲಿ ಪ್ರಾರಂಭಿಸಲಾದ ಈ ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ 10-19 ವರ್ಷ ವಯಸ್ಸಿನ ಹದಿಹರೆಯದ ಹುಡುಗಿಯರಲ್ಲಿ ಮುಟ್ಟಿನ ನೈರ್ಮಲ್ಯ ಅಭ್ಯಾಸಗಳ ಕುರಿತು ಅರಿವು ಮೂಡಿಸಲಾಗುತ್ತದೆ. ಹದಿಹರೆಯದವರ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯವನ್ನು ಸುಧಾರಿಸುವ, ನೈರ್ಮಲ್ಯ ಉತ್ಪನ್ನಗಳ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ
ಸುಕನ್ಯಾ ಸಮೃದ್ಧಿ ಯೋಜನೆ (SSY)
ಸುಕನ್ಯಾ ಸಮೃದ್ಧಿ ಯೋಜನೆಯು ಕೇಂದ್ರ ಸರ್ಕಾರದ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. 2015ರಲ್ಲಿ 'ಬೇಟೀ ಪಡವೋ ಬೇಟೀ ಬಚಾವೋ' ಅಭಿಯಾನದ ಭಾಗವಾಗಿ ಜಾರಿಯಾದ ಇದರ ಮುಖ್ಯ ಉದ್ದೇಶ ಹೆಣ್ಣು ಮಕ್ಕಳ ಭವಿಷ್ಯಕ್ಕೆ ಹಣವನ್ನು ಉಳಿತಾಯ ಮಾಡುವುದಾಗಿದೆ. 10 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಗುವಿನ ಹೆಸರಿನಲ್ಲಿ ಪೋಷಕರು ಅಥವಾ ಪಾಲಕರು ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದು.
ಭಾರತದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸಲು ಹಲವಾರು ಕಾನೂನು ಕ್ರಮಗಳು ಜಾರಿಯಲ್ಲಿವೆ.
ಬಾಲ್ಯ ವಿವಾಹ ನಿಷೇಧ ಕಾಯ್ದೆ 2006:
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆ–2012
ಬಾಲ ನ್ಯಾಯ ಕಾಯ್ದೆ, 2015:
ಮಿಷನ್ ವಾತ್ಸಲ್ಯ: ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ಮತ್ತು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸಲು ಸಹಾಯ ಮಾಡುತ್ತದೆ.
ಹೆಣ್ಣು ಮಕ್ಕಳು ಎದುರಿಸುವ ಎಲ್ಲ ತಾರತಮ್ಯವನ್ನು ತೊಡೆದು ಹಾಕುವುದು.
ಲಿಂಗಸಮಾನತೆಯ ಜಾಗೃತಿ ಉಂಟು ಮಾಡುವುದು.
ಹೆಣ್ಣು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.