ಕಠ್ಮಂಡು: ನೇಪಾಳದಲ್ಲಿ ಹಲವು ಸರ್ಕಾರಗಳನ್ನು ಉರುಳಿಸಿದ್ದ ಹಿರಿಯ ರಾಜಕಾರಣಿ ಕೆ.ಪಿ.ಶರ್ಮಾ ಓಲಿ 2024ರಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಾಗ ದೇಶಕ್ಕೆ ರಾಜಕೀಯ ಸ್ಥಿರತೆಯ ನಿರೀಕ್ಷೆ ಮೂಡಿಸಿದ್ದರು. ಆದರೆ, ಕೆಲವೇ ತಿಂಗಳುಗಳಲ್ಲಿ ಅದು ಹುಸಿಯಾಯಿತು.
ಚೀನಾದ ಅಭಿಮಾನಿ ಹಾಗೂ ಆ ರಾಷ್ಟ್ರ ನಿಲುವಿನ ಬದ್ದ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಓಲಿ ಅವರು ಭ್ರಷ್ಟಾಚಾರ ವಿರುದ್ಧದ ಹೋರಾಟ ಮತ್ತು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧದ ವಿರುದ್ಧ ಭಾರಿ ಪ್ರತಿಭಟನೆಯ ನಡುವೆ ರಾಜೀನಾಮೆ ನೀಡಬೇಕಾಯಿತು.
ರಾಜಧಾನಿ ಕಠ್ಮಂಡು ಹಾಗೂ ನೇಪಾಳದಾದ್ಯಂತ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಕನಿಷ್ಠ 25 ಮಂದಿ ಸಾವಿಗೀಡಾಗಿದ್ದು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
73 ವರ್ಷದ ಓಲಿ ಅವರ ರಾಜೀನಾಮೆಯಿಂದಾಗಿ ಕಳೆದ 17 ವರ್ಷಗಳಲ್ಲಿ 14 ಸರ್ಕಾರಗಳನ್ನು ಕಂಡ ದೇಶವನ್ನು ಮತ್ತೊಮ್ಮೆ ರಾಜಕೀಯ ಅಸ್ಥಿರತೆಯತ್ತ ದೂಡಿದೆ.
ಸಿಪಿಎನ್ (ಯುಎಂಎಲ್) ಪಕ್ಷದ ಅಧ್ಯಕ್ಷರಾದ ಓಲಿ 2024ರ ಜುಲೈನಲ್ಲಿ ತಮ್ಮ ರಾಜಕೀಯ ಮಿತ್ರ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರನ್ನು ಬಿಟ್ಟು, ಹಿಂದಿನ ರಾಜಕೀಯ ಶತ್ರು ಶೇರ್ ಬಹದ್ದೂರ್ ದೇವುಬಾ ನೇತೃತ್ವದ ನೇಪಾಳಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದರು.
ಪ್ರಚಂಡರನ್ನು ಬಿಟ್ಟು ಕಾಂಗ್ರೆಸ್ ಜೊತೆ ಸರ್ಕಾರ ರಚಿಸಿದ ನಿರ್ಧಾರವನ್ನು ಸಮರ್ಥಿಸಿಕೊಂಡು, ಇದು ರಾಜಕೀಯ ಸ್ಥಿರತೆ ಮತ್ತು ದೇಶದ ಅಭಿವೃದ್ಧಿಗೆ ಅಗತ್ಯವಿತ್ತು ಎಂದು ಹೇಳಿದ್ದರು.
ಇತ್ತೀಚೆಗೆ ನೇಪಾಳಿ ಯುವಕರು ಮತ್ತು ವಿದ್ಯಾರ್ಥಿಗಳು ಭ್ರಷ್ಟಾಚಾರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗಳನ್ನು ನಡೆಸಿದರು. ಇದೇ ವೇಳೆ ಸರ್ಕಾರ ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ ಹೇರಿದ್ದು ಯುವಕರು ಮತ್ತು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಯಿತು. ಈ ಬೆನ್ನಲ್ಲೇ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ಮತ್ತು ಯುವಕರು ಹಾಗೂ ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾದ ಓಲಿ ಅವರು ರಾಜೀನಾಮೆ ನೀಡಬೇಕಾಯಿತು.
ಚಿಕ್ಕ ವಯಸ್ಸಿನಲ್ಲಿ ವಿದ್ಯಾರ್ಥಿ ಚಳವಳಿಗಾರನಾಗಿ ರಾಜಕೀಯಕ್ಕೆ ಕಾಲಿಟ್ಟ ಓಲಿ ತಮ್ಮ ರಾಜಕೀಯ ಜೀವನದಲ್ಲಿ 14 ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. 2015ರ ಅಕ್ಟೋಬರ್‌ನಲ್ಲಿ ಓಲಿ ಮೊದಲ ಬಾರಿಗೆ ಪ್ರಧಾನಿಯಾದರು. ಈ ಅವಧಿಯಲ್ಲಿ ಅವರು ನೇಪಾಳದ ಭೂಮಿಯ ವಿಚಾರದಲ್ಲಿ ಭಾರತ ಹಸ್ತಕ್ಷೇಪ ಮಾಡುತ್ತಿದೆ ಹಾಗೂ ತಮ್ಮ ಸರ್ಕಾರ ಉರುಳಿಸಲು ಸಂಚು ಮಾಡುತ್ತಿದೆ ಎಂದು ಆರೋಪಿಸಿದ್ದರು.
2018ರ ಫೆಬ್ರುವರಿಯಲ್ಲಿ ಓಲಿ ನೇತೃತ್ವದ ಸಿಪಿಎನ್ (ಯುಎಂಎಲ್) ಹಾಗೂ ಪ್ರಚಂಡ ನಾಯಕತ್ವದ ಸಿಪಿಎನ್ (ಮಾವೋವಾದಿ) ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದವು. ಎರಡು ಪಕ್ಷಗಳು ಬಹುಮತ ಪಡೆದ ನಂತರ ಓಲಿ ಮತ್ತೆ ಪ್ರಧಾನಿಯಾದರು. ಆದೇ ವರ್ಷ ಮೇ ತಿಂಗಳಲ್ಲಿ ಈ ಎರಡು ಪಕ್ಷಗಳು ವಿಲೀನಗೊಂಡವು.
ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸುವ ಮೊದಲು ಭಾರತ ಜತೆ ಆರ್ಥಿಕ ಅಭಿವೃದ್ಧಿಗೆ ದಾರಿ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ನೇಪಾಳದ ಹೊಸ ನಕ್ಷೆಯಲ್ಲಿ ಭಾರತದ ಪ್ರದೇಶಗಳನ್ನು ಗುರುತಿಸಿದ್ದಕ್ಕೆ ಮತ್ತೆ ವಿವಾದ ಉಂಟಾಯಿತು. ಇದರಿಂದ ಭಾರತ–ನೇಪಾಳ ಸಂಬಂಧಗಳು ಮತ್ತೊಮ್ಮೆ ಹದಗೆಟ್ಟವು. ಭಾರತದ ಪ್ರದೇಶಗಳನ್ನು ಸೇರಿಸಿದ ಕಾರಣ ತಮ್ಮ ಸರ್ಕಾರವನ್ನು ಕೆಡವಲು ಭಾರತ ಪ್ರಯತ್ನಿಸುತ್ತಿದೆ ಎಂದು ಓಲಿ ಆರೋಪಿಸಿದ್ದರು.
2018ರ ಫೆಬ್ರುವರಿ 5ರಿಂದ 2021ರ ಜುಲೈವರೆಗೆ ಅವರು ಅಧಿಕಾರದಲ್ಲಿದ್ದರು. ಆದರೆ, ಸುಪ್ರೀಂ ಕೋರ್ಟ್ ಓಲಿ ಪ್ರಧಾನಿ ಸ್ಥಾನದಲ್ಲಿರುವುದು ಅಸಂವಿಧಾನಿಕ ಎಂದು ತೀರ್ಪು ನೀಡಿದ ಕಾರಣ ಅವರು ಪ್ರಧಾನಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
2024ರ ಜುಲೈನಲ್ಲಿ ನೇಪಾಳಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಮೂರನೇ ಅವಧಿಗೆ ಪ್ರಧಾನಿಯಾದರು. ಸರ್ಕಾರದ ಭ್ರಷ್ಟಚಾರ ಆರೋಪದಡಿಯಲ್ಲಿ 2025ರ ಸೆಪ್ಟೆಂಬರ್ 9ರಂದು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದರು.
ಓಲಿ ಹಿನ್ನೆಲೆ...
1952ರ ಫೆಬ್ರವರಿ 22ರಂದು ಪೂರ್ವ ನೇಪಾಳದ ತೇರಥುಂ ಜಿಲ್ಲೆಯಲ್ಲಿ ಮೋಹನ್ ಪ್ರಸಾದ್ ಮತ್ತು ಮಧುಮಾಯಾ ದಂಪತಿಗೆ ಹಿರಿಯ ಮಗನಾಗಿ ಓಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಅವರ ತಾಯಿ ಸಿಡುಬಿನಿಂದ ಸಾವಿಗೀಡಾದ ಕಾರಣ ಓಲಿ ಅಜ್ಜಿಯ ಆರೈಕೆಯಲ್ಲಿ ಬೆಳೆದರು.
9ನೇ ತರಗತಿ ಓದುಗ ಶಾಲೆಯನ್ನು ಬಿಟ್ಟು ರಾಜಕೀಯಕ್ಕೆ ಪ್ರವೇಶ ಮಾಡಿದರು. ವಿದ್ಯಾರ್ಥಿ ಚಳವಳಿಗಳಲ್ಲಿ ತೊಡಗಿಸಿಕೊಂಡು ಹಲವು ಸಲ ಜೈಲುವಾಸ ಅನುಭವಿಸಿದರು. ಜೈಲಿನಲ್ಲಿದ್ದಾಗಲೇ ಇಂಟರ್ ಮಿಡಿಯಟ್ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ನಂತರದ ದಿನಗಳಲ್ಲಿ ಕಮ್ಯೂನಿಸ್ಟ್ ಕಾರ್ಯಕರ್ತೆಯಾಗಿದ್ದ ರಚನಾ ಶಾಕ್ಯಾ ಅವರನ್ನು ವಿವಾಹವಾದರು.
1966ರಲ್ಲಿ ಪಂಚಾಯತ್ ವ್ಯವಸ್ಥೆ ವಿರುದ್ಧ ವಿದ್ಯಾರ್ಥಿ ಹೋರಾಟದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿದರು. 1970ರಲ್ಲಿ ನೇಪಾಳ ಕಮ್ಯೂನಿಸ್ಟ್ ಪಕ್ಷ ಸೇರಿ, ಅದೇ ವರ್ಷ ಬಂಧಿತರಾದರು.
1973ರಿಂದ 1987ರವರೆಗೆ 14 ವರ್ಷ ಜೈಲಿನಲ್ಲಿ ಇದ್ದ ಓಲಿ, ನೇಪಾಳ ರಾಜಕಾರಣದಲ್ಲಿ ಹಲವಾರು ವರ್ಷಗಳನ್ನು ಸೆರೆಮನೆಯಲ್ಲೇ ಕಳೆದ ವಿರಳ ನಾಯಕರಲ್ಲಿ ಒಬ್ಬರು.
1990ರ ಪ್ರಜಾಪ್ರಭುತ್ವ ಚಳವಳಿಯ ನಂತರ ಅವರು ರಾಷ್ಟ್ರಪ್ರಸಿದ್ಧಿ ಗಳಿಸಿದರು. 1991ರಲ್ಲಿ ಸಂಸತ್ತಿನ ಸದಸ್ಯರಾದರು. 1994–95ರಲ್ಲಿ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು.
2006ರಲ್ಲಿ ಗಿರಿಜಾ ಪ್ರಸಾದ್ ಕೊಯರಾಲಾ ನೇತೃತ್ವದ ಮಧ್ಯಂತರ ಸರ್ಕಾರದಲ್ಲಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. 2014ರಲ್ಲಿ ಸಿಪಿಎನ್ (ಯುಎಂಎಲ್) ಪಕ್ಷದ ನಾಯಕನಾಗಿ ಆಯ್ಕೆಯಾದರು. 2015ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗುವ ಮೂಲಕ ತಮ್ಮ ರಾಜಕೀಯ ಸ್ಥಾನವನ್ನು ಬಲಪಡಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.