ಜಮ್ಮು ಮತ್ತು ಕಾಶ್ಮೀರದಲ್ಲಿ ಸೈನಿಕರು ಅಣಕು ಕಾರ್ಯಾಚರಣೆ ನಡೆಸಿದರು
ಪಿಟಿಐ ಚಿತ್ರ
ಬೆಂಗಳೂರು: ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಮತ್ತು ಭಾರತ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯವು ದೇಶದ ಹಲವು ರಾಜ್ಯಗಳಲ್ಲಿ ಬುಧವಾರ (ಮೇ 7) ಅಣಕು ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಿದೆ.
ಏ. 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿ ಕರ್ನಾಟಕದ ಮೂವರು ಹಾಗೂ ಇಬ್ಬರು ವಿದೇಶಿಯರನ್ನು ಒಳಗೊಂಡು 26 ಪ್ರವಾಸಿಗರನ್ನು ಹತ್ಯೆಗೈದಿದ್ದರು. ಇದಾದ ನಂತರ ದೇಶದಾದ್ಯಂತ ಜನಾಕ್ರೋಶ ವ್ಯಕ್ತವಾಗಿತ್ತು. ದಾಳಿಯನ್ನು ಪಾಕಿಸ್ತಾನ ಮೂಲದ ನಿಷೇಧಿತ ಜೈಶ್ ಎ ಮೊಹಮ್ಮದ್ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ ನಡೆಸಿರುವುದಾಗಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಭಾರತ ಪ್ರತೀಕಾರ ರೂಪವಾಗಿ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧ ಕಡಿದುಕೊಂಡಿತು. ಜತೆಗೆ ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸಿತು. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಈಗ ಯುದ್ಧದ ಭೀತಿಯನ್ನು ಸೃಷ್ಟಿಸಿದೆ.
ಇದರ ಬೆನ್ನಲ್ಲೇ ಕೇಂದ್ರ ಗೃಹಸಚಿವಾಲಯವು ಮೇ 7ರಂದು ‘ಬ್ಲಾಕ್‌ಔಟ್’ ಅಣಕು ಕಾರ್ಯಾಚರಣೆ ನಡೆಸಲು ಸೂಚಿಸಿದೆ. ರಾಜ್ಯದ ಬೆಂಗಳೂರು, ರಾಯಚೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡು ದೇಶದ 244 ಜಿಲ್ಲೆಗಳಲ್ಲಿ ನಡೆಯಲಿದೆ. ಇದರಲ್ಲಿ ವಾಯುದಾಳಿಯ ಸೈರನ್ ಮೊಳಗಲಿದೆ. ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ ಮತ್ತು ಯುದ್ಧ ಹಾಗೂ ಇತರ ತುರ್ತು ಸಂದರ್ಭಗಳಿಗೆ ಜನರನ್ನು ಸಜ್ಜುಗೊಳಿಸುವ ತರಬೇತಿ ಕಾರ್ಯಾಗಾರವೂ ಆಗಿರಲಿದೆ.
ನಾಗರಿಕ ಯುದ್ಧ ನಿಯಮ 1968ರ ಅಡಿಯಲ್ಲಿ ಈ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದೆ. ಸದ್ಯ ಉಂಟಾಗಿರುವ ಉದ್ವಿಗ್ನತೆಗೂ ಮತ್ತು ಅಣಕು ಕಾರ್ಯಾಚರಣೆಗೂ ಸಂಬಂಧವಿಲ್ಲ. ಆದರೆ ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ನಾಗರಿಕರನ್ನು ರಕ್ಷಣೆ ಮಾಡಲು ಅವರನ್ನು ಸಜ್ಜುಗೊಳಿಸಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವಾಲಯವು ಮೇ 2ರಂದು ಮಾಹಿತಿ ನೀಡಿತ್ತು.
ಯುದ್ಧ, ಕ್ಷಿಪಣಿ ದಾಳಿ ಅಥವಾ ವಾಯು ದಾಳಿಯ ಸಂದರ್ಭದಲ್ಲಿ ನಾಗರಿಕ ರಕ್ಷಣೆಯಲ್ಲಿ ಸರ್ಕಾರಿ ಯಂತ್ರ ಮತ್ತು ನಾಗರಿಕರನ್ನು ಸಜ್ಜುಗೊಳಿಸುವ ಪರೀಕ್ಷಾರ್ಥ ಪ್ರಯೋಗ. ಇದರಲ್ಲಿ ಯುದ್ಧದ ನೈಜ ಸನ್ನಿವೇಶವನ್ನೇ ಸೃಷ್ಟಿಸಲಾಗುತ್ತದೆ.
ವಾಯು ದಾಳಿಯ ಸೈರನ್ 244 ನಗರಗಳಲ್ಲಿ ಮೊಳಗಲಿದೆ. ತಕ್ಷಣ ವಿದ್ಯುತ್ ಕಡಿತ ಮಾಡಲಾಗುತ್ತದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಮತ್ತು ವಿಪತ್ತು ನಿರ್ವಹಣಾ ತಂಡಗಳು ನೈಜ ಪರಿಸರದಂತೆಯೇ ಕಾರ್ಯಾಚರಣೆ ನಡೆಸಲಿವೆ. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಅಪಾಯದ ಗಾಬರಿ ತಗ್ಗಿಸುವುದು, ಗೊಂದಲ ನಿವಾರಿಸುವುದು ಮತ್ತು ಜೀವಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಾಗಾರ ಮತ್ತು ಸಿದ್ಧತೆಯಾಗಿದೆ.
ಶೀತಲ ಸಮರ ಯುಗದಲ್ಲಿ ನಡೆಸಲಾಗುತ್ತಿದ್ದ ಮತ್ತು ಸಾಮಾನ್ಯ ಬಳಕೆಯಾಗಿದ್ದ ನಾಗರಿಕ ರಕ್ಷಣೆ ಕಾರ್ಯಾಚರಣೆ ಇದಾಗಿದೆ. ಆ ಸಂದರ್ಭದಲ್ಲಿ, ಸಂಭಾವ್ಯ ವಾಯುದಾಳಿ ಮತ್ತು ಪರಮಾಣು ದಾಳಿಯ ಅಪಾಯ ಎದುರಾದಾಗ ಹಲವು ರಾಷ್ಟ್ರಗಳು ಇಂಥ ಬ್ಲಾಕ್‌ಔಟ್ ಮತ್ತು ಸ್ಥಳಾಂತರ ಅಣಕು ಕಾರ್ಯಾಚರಣೆ ನಡೆಸುತ್ತಿದ್ದವು. ಇದರಿಂದ ಒತ್ತಡ ಮತ್ತು ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳುವುದರ ಜತೆಗೆ ರಕ್ಷಣಾ ಸಾಮರ್ಥ್ಯವನ್ನು ಮರುಮೌಲ್ಯಮಾಪನ ಮಾಡಲು ಭಾರತ ಮುಂದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ
ಅಣಕು ಕಾರ್ಯಾಚರಣೆ ಸಂದರ್ಭದಲ್ಲಿ ತಾತ್ಕಾಲಿಕ ದಿಗ್ಬಂಧನ ಇರಲಿದೆ. ಮೊಬೈಲ್ ಸಿಗ್ನಲ್ ಇರುವುದಿಲ್ಲ. ತುರ್ತು ಟ್ರಾಫಿಕ್ ಮಾರ್ಗ ಬದಲು ಜಾರಿಯಲ್ಲಿರಲಿದೆ. ನಾಗರಿಕರ ಸ್ಥಳಾಂತರ ಪ್ರಕ್ರಿಯೆಯನ್ನು ಅಧಿಕಾರಿಗಳು ನಡೆಸಲಿದ್ದಾರೆ. ಅಲ್ಲಲ್ಲಿ ಎಚ್ಚರಿಕೆಗಳು ಮೈಕ್‌ಗಳಲ್ಲಿ ಮೊಳಗಲಿವೆ. ಕೆಲವೆಡೆ ಪೊಲೀಸ್ ಮತ್ತು ಅರೆಸೇನಾ ಪಡೆಗಳು ಯುದ್ಧ ಮಾದರಿಯ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸಲಿದ್ದಾರೆ.
ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸಹಕಾರದೊಂದಿಗೆ ಗುರುತಿಸಲಾದ ನಾಗರಿಕ ರಕ್ಷಣಾ ಜಿಲ್ಲೆಗಳಲ್ಲಿ ಈ ಅಣಕು ಕಾರ್ಯಾಚರಣೆ ನಡೆಯಲಿದೆ. ಇದರಲ್ಲಿ ನಾಗರಿಕ ರಕ್ಷಣಾ ವಾರ್ಡನ್‌ಗಳು, ಗೃಹ ರಕ್ಷಕ ದಳ, ಎನ್‌ಸಿಸಿ, ರಾಷ್ಟ್ರೀಯ ಸೇವಾ ಸಂಸ್ಥೆಯ ಸ್ವಯಂಸೇವಕರು, ನೆಹರು ಯುವಕೇಂದ್ರದ ಸಂಘಟನೆ ಸದಸ್ಯರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ.
ಹೆಚ್ಚು ಒತ್ತಡವಿಲ್ಲದೆ ಸ್ಥಳೀಯ ಆಡಳಿತದ ಸೂಚನೆಗಳ ಪಾಲನೆ
ನೀರು, ಔಷಧ ಮತ್ತು ಫ್ಲಾಶ್‌ಲೈಟ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅತ್ಯಗತ್ಯ
ವದಂತಿ ಹರಡುವುದು ಅಥವಾ ಖಾತ್ರಿ ಇಲ್ಲದ ಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವುದನ್ನು ತಡೆಯಬೇಕು
ವಿದ್ಯುತ್ ಅಥವಾ ಅಂತರ್ಜಾಲ ಹಠಾತ್ ಸ್ಥಗಿತಗೊಂಡರೆ ಗಾಬರಿಯಾಗುವ ಅಗತ್ಯವಿಲ್ಲ
ಸರ್ಕಾರಿ ರೇಡಿಯೊ ಮತ್ತು ಟಿವಿಗಳಲ್ಲಿ ಪ್ರಸಾರವಾಗುವ ಅಧಿಕೃತ ಮಾಹಿತಿಯನ್ನಷ್ಟೇ ಕೇಳುವುದು
ಎಂಥದ್ದೇ ಪರಿಸ್ಥಿತಿಗೆ ಸಜ್ಜುಗೊಳ್ಳುವ ಒಂದು ಕಾರ್ಯಾಚರಣೆ ಇದಾಗಿದೆ. ಇದು ಜನರನ್ನು ಭಯಬೀತರನ್ನಾಗಿಸಲು ಅಲ್ಲ. ಸರ್ಕಾರಿ ಯಂತ್ರ ಮತ್ತು ಸಾರ್ವಜನಿಕರು ತಮ್ಮ ಪಾತ್ರಗಳೇನು ಎಂಬುದನ್ನು ಅರಿಯುವ ಪ್ರಯತ್ನ ಇದಾಗಿದೆ. ಈ ಅಣಕು ಕಾರ್ಯಾಚರಣೆಯ ಫಲಿತಾಂಶವನ್ನು ಆಧರಿಸಿ, ಅದನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವ ಪ್ರಯತ್ನ ಇದಾಗಿದೆ.
ವಾಯುದಾಳಿಯ ಸೈರನ್: ವಾಯು ದಾಳಿಯ ಅಪಾಯವನ್ನು ಮುಂಚಿತವಾಗಿಯೇ ತಿಳಿಸುವ ಸೈರನ್‌ಗಳನ್ನು ಅಣಕು ಕಾರ್ಯಾಚರಣೆಗೆ ಗುರುತಿಸಿದ ನಗರಗಳಲ್ಲಿ ಮೇ 7ರಂದು ಮೊಳಗಲಿವೆ. ತಕ್ಷಣ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಜ್ಜಾಗಬೇಕು.
ಕ್ರಾಶ್ ಬ್ಲಾಕ್‌ಔಟ್ಸ್: ಗುರುತಿಸಲಾದ ನಗರಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುವುದು. 1971ರ ಯುದ್ಧದಲ್ಲಿ ಈ ಪದ್ಧತಿ ಅಳವಡಿಸಲಾಗಿತ್ತು. ಬೆಳಕು ಇಲ್ಲದ ಕಾರಣ, ವಾಯುದಾಳಿಯನ್ನು ಸಾಧ್ಯವಾದಷ್ಟು ತಗ್ಗಿಸಬಹುದಾಗಿದೆ.
ಗೂಢವೇಷದ ಕಾರ್ಯಾಚರಣೆ: ಸಂಪರ್ಕ ಗೋಪುರಗಳು, ವಿದ್ಯುತ್ ಘಟಕಗಳು ಮತ್ತು ಸೇನಾ ನೆಲೆಗಳ ರಕ್ಷಣೆಗೆ ಗೂಢವೇಷ ಕಾರ್ಯಾಚರಣೆ ನಡೆಸಲಾಗುತ್ತದೆ. ವಾಯುದಾಳಿಯನ್ನು ರಕ್ಷಿಸುವ ತಂತ್ರಗಳ ಜತೆಗೆ ಉಪಗ್ರಹಗಳ ಮೂಲಕವೂ ಈ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ.
ಸ್ಥಳಾಂತರ ಕಾರ್ಯಾಚರಣೆ: ಅತಿ ಹೆಚ್ಚು ಅಪಾಯವಿರುವ ಸ್ಥಳಗಳಲ್ಲಿರುವ ನಾಗರಿಕರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ಕಡಿಮೆ ಸಮಯದಲ್ಲಿ ಗರಿಷ್ಠ ಜನರ ಸ್ಥಳಾಂತರದ ಸವಾಲಿನ ಜತೆಗೆ, ಬೇಕಾಗುವ ವಸ್ತುಗಳ ಮಾಹಿತಿಯನ್ನೂ ಕಲೆ ಹಾಕಲಾಗುತ್ತದೆ.
ನಾಗರಿಕರಿಗೆ ತರಬೇತಿ: ಶಾಲೆ, ಕಾಲೇಜು, ಕಚೇರಿ ಮತ್ತು ಸಮುದಾಯ ಕೇಂದ್ರಗಳಲ್ಲಿ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗುವುದು. ಅಪಾಯದ ಸಂದರ್ಭದಲ್ಲಿ ಜನರು ಹೇಗೆ ಸುರಕ್ಷಿತ ಸ್ಥಳಗಳನ್ನು ಹುಡುಕಿಕೊಳ್ಳಬೇಕು. ಭಯವಿಲ್ಲದೆ ಧೈರ್ಯವಾಗಿ ಹೇಗೆ ಪರಿಸ್ಥಿತಿ ನಿಭಾಯಿಸಬೇಕು ಎಂಬುದರ ಕುರಿತು ಸಿಬ್ಬಂದಿ ಮಾರ್ಗದರ್ಶನ ಮಾಡಲಿದ್ದಾರೆ.
ಶಾಲೆಗಳಲ್ಲಿ ನಡೆಸಲಾದ ಅಣಕು ಕಾರ್ಯಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ
ಅಣಕು ಕಾರ್ಯಾಚರಣೆ ನಂತರ ಆಯಾ ಜಿಲ್ಲಾಡಳಿತವು ತಾವು ಕೈಗೊಂಡ ಕ್ರಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು. ಸ್ಥಳಾಂತರಕ್ಕೆ ತೆಗೆದುಕೊಂಡ ಸಮಯ ಮತ್ತು ಶಿಫಾರಸುಗಳು ಅದರಲ್ಲಿರಬೇಕು ಎಂದು ಗೃಹ ಇಲಾಖೆ ಸೂಚಿಸಿದೆ.
ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಪಂಜಾಬ್‌ನ ಫಿರೋಜ್‌ಪುರ ಕಂಟೋನ್ಮೆಂಟ್‌ನಲ್ಲಿ ಭಾನುವಾರ ಸಂಜೆಯೇ ಇಂಥ ಅಣಕು ಕಾರ್ಯಾಚರಣೆ ನಡೆದಿದೆ. ಇಲ್ಲಿ 30 ನಿಮಿಷಗಳ ಬ್ಲಾಕ್‌ಔಟ್ ಡ್ರಿಲ್ ನಡೆದಿದೆ.
2022ರಲ್ಲಿ ನಡೆದ ಚಿಂತನ ಶಿಬಿರದಲ್ಲಿ ತೆಗೆದುಕೊಂಡ ನಿರ್ಧಾರದಂತೆ ದೇಶವ್ಯಾಪಿ ಇಂಥ ಅಣಕು ಕಾರ್ಯಾಚರಣೆ ನಡೆಸುವಂತೆ ಮುಖಂಡರು ಒತ್ತಾಯಿಸಿದ್ದರು. ಗಡಿ ಮತ್ತು ಕರಾವಳಿ ತೀರದಲ್ಲಿ ಗಡಿ ರಕ್ಷಣೆ ಕುರಿತು ಜಾಗೃತಿ ವಹಿಸಲು 2023ರ ಜನವರಿಯಲ್ಲಿ ಕೇಂದ್ರ ಗೃಹ ಕಾರ್ಯದರ್ಶಿ ಸೂಚಿಸಿದ್ದರು. ಇವೆಲ್ಲದರ ಪರಿಣಾಮ ಮೇ 7ರಂದು ಅಣಕು ಕಾರ್ಯಾಚರಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.