
ಲಖನೌ: ರಾಮ ಮಂದಿರ ಪ್ರತಿಷ್ಠಾಪನೆಯ ನಂತರ ಅಯೋಧ್ಯೆಯ ಆರ್ಥಿಕತೆಯು ಐತಿಹಾಸಿಕ ಬದಲಾವಣೆಗೆ ಸಾಕ್ಷಿಯಾಗಿದೆ. ಮೊದಲ ಆರು ತಿಂಗಳಲ್ಲಿ 11 ಕೋಟಿ ಭಕ್ತರು ಭೇಟಿ ನೀಡಿದ್ದು, ಸ್ಥಳೀಯ ವ್ಯಾಪಾರಿಗಳ ಆದಾಯದಲ್ಲಿ ಐದು ಪಟ್ಟು ಏರಿಕೆಯಾಗಿದೆ ಎಂದು ವರದಿಯೊಂದು ಹೇಳಿದೆ.
'ಅಯೋಧ್ಯೆಯ ಆರ್ಥಿಕ ಪುನರುಜ್ಜೀವನ: ಶ್ರೀ ರಾಮ ಮಂದಿರ ಕುರಿತಾದ ಒಂದು ಅಧ್ಯಯನ' (The Economic Renaissance of Ayodhya, India: A Case Study on Sri Ram Mandir) ಎಂಬ ಶೀರ್ಷಿಕೆಯಡಿ 'ಭಾರತೀಯ ನಿರ್ವಹಣಾ ಸಂಸ್ಥೆ -ಲಖನೌ'(IIM-L) ಅಧ್ಯಯನ ನಡೆಸಿದೆ. ಇದರಲ್ಲಿ ರಾಮ ಮಂದಿರ ನಿರ್ಮಾಣದ ಮೊದಲು ಮತ್ತು ನಂತರ ಅಯೋಧ್ಯೆಯ ಆರ್ಥಿಕ ಪರಿಸ್ಥಿತಿಯನ್ನು ತುಲನಾತ್ಮಕ ವಿಶ್ಲೇಷಣೆ ನಡೆಸಿದೆ.
ರಾಮ ಮಂದಿರ ಪ್ರತಿಷ್ಠಾಪನೆಯ ಮೊದಲ ಆರು ತಿಂಗಳಲ್ಲಿ 11 ಕೋಟಿಗೂ ಹೆಚ್ಚು ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಈ ಅವಧಿಯಲ್ಲಿ ಸ್ಥಳೀಯ ವ್ಯಾಪಾರಿಗಳ ಆದಾಯ ಐದು ಪಟ್ಟು ಹೆಚ್ಚಾಗಿದೆ ಎಂದು ಈ ಅಧ್ಯಯನದಲ್ಲಿ ಹೇಳಲಾಗಿದೆ.
ರಾಮ ಮಂದಿರದ ಸುತ್ತಮುತ್ತಲಿನ ಆಸ್ತಿಗಳ ಮೌಲ್ಯ ಐದರಿಂದ ಹತ್ತು ಪಟ್ಟು ಹೆಚ್ಚಾದರೆ, ರಿಯಲ್ ಎಸ್ಟೇಟ್ ದರ ಶೇ25 ರಿಂದ 40ರಷ್ಟು ಏರಿಕೆಯಾಗಿದೆ. ಅಯೋಧ್ಯೆಯಲ್ಲಿ 150ಕ್ಕೂ ಹೆಚ್ಚು ಹೊಸ ಹೋಟೆಲ್‌ಗಳು ಮತ್ತು ಹೋಂ-ಸ್ಟೇಗಳನ್ನು ನಿರ್ಮಿಸಲಾಗಿದೆ. ಆನ್‌ಲೈನ್ ಬುಕಿಂಗ್ ಶೇ 400ರಷ್ಟು ಏರಿಕೆಯಾಗಿದೆ ಎಂದೂ ಅಧ್ಯಯನವು ಉಲ್ಲೇಖಿಸಿದೆ.
ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಿಂದ ಬರುವ ತೆರಿಗೆ ಆದಾಯ ₹20,000-24,000ಕೋಟಿ ಇರಬಹುದೆಂದು ಅಧ್ಯಯನ ತಿಳಿಸಿದೆ. ಆತಿಥ್ಯ, ನಿರ್ಮಾಣ, ಸಾರಿಗೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ತೀವ್ರವಾಗಿ ಹೆಚ್ಚಿವೆ ಎಂದು ಅದು ಹೇಳಿದೆ.
ಅಧ್ಯಯನದ ಪ್ರಕಾರ, ಪ್ರತಿದಿನ ಎರಡು ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಮುಂದಿನ 4-5 ವರ್ಷಗಳಲ್ಲಿ ಆತಿಥ್ಯ, ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಬಂಧಿತ ವಲಯಗಳಲ್ಲಿ ಸುಮಾರು 1.2 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದೂ ಅಧ್ಯಯನದ ವರದಿಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.