ಪ್ರಾತಿನಿಧಿಕ ಚಿತ್ರ
ಐಸ್ಟಾಕ್ ಚಿತ್ರ
ಬಜೆಟ್ ಕುರಿತಾಗಿ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಸಂಸದರ ನಡುವೆ ಒಮ್ಮತ ಮೂಡದ ಕಾರಣ ಅಮೆರಿಕ ಸರ್ಕಾರ ಸ್ಥಗಿತಗೊಂಡಿರುವುದು ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದೆ.
ಸರ್ಕಾರವೇ ಸ್ಥಗಿತಗೊಂಡ ಪರಿಣಾಮ ಶೇ 40ರಷ್ಟು ಸರ್ಕಾರಿ ನೌಕರರು (7.50 ಲಕ್ಷ) ವೇತನ ರಹಿತ ರಜೆ ಮೇಲೆ ತೆರಳಬೇಕಾದ ಪರಿಸ್ಥಿತಿ ಅಲ್ಲಿ ತಲೆದೋರಿದೆ.
ಬಜೆಟ್ ಸಂಬಂಧಿತ ಘರ್ಷಣೆಗಳು ಅಮೆರಿಕದ ರಾಜಕೀಯದಲ್ಲಿ ಸಾಮಾನ್ಯವಾದರೂ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಸರ್ಕಾರದ ಪಾಲನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಪರಿಸ್ಥಿತಿಗೆ ಕಾರಣ. ಜತೆಗೆ ಪ್ರಸ್ತುತ ಬಿಕ್ಕಟ್ಟನ್ನೇ ಬಳಸಿಕೊಂಡು ಇನ್ನಷ್ಟು ಕಡಿತಗೊಳಿಸಬಹುದು ಎಂಬ ಆತಂಕ ಮನೆ ಮಾಡಿರುವುದರಿಂದ, ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ನಡುವಿನ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ.
ಅಮೆರಿಕದ ಆರ್ಥಿಕ ವರ್ಷ ಅಕ್ಟೋಬರ್‌ನಿಂದ ಪ್ರಾರಂಭವಾಗಲಿದೆ. ಆನಂತರಕ್ಕೆ ಅನ್ವಯಿಸುವಂತೆ ಸರ್ಕಾರಿ ಸೇವೆಗಳಿಗೆ ಹಣಕಾಸು ಒದಗಿಸುವ ಮಸೂದೆಯನ್ನು ಅಂಗೀಕರಿಸುವ ವಿಷಯದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಟ್‌ಗಳ ನಡುವೆ ಒಮ್ಮತ ಮೂಡಲಿಲ್ಲ. ಯಾವ ಯೋಜನೆಗಳಿಗೆ ಎಷ್ಟು ಹಣ ನೀಡಬೇಕು ಎಂದು ಅಲ್ಲಿನ ಸರ್ಕಾರದ ವಿವಿಧ ಶಾಖೆಗಳು ಒಪ್ಪಂದಕ್ಕೆ ಬರಬೇಕಾದ್ದು ಅಮೆರಿಕದ ನಿಯಮ.
ಅಮೆರಿಕದ ಎರಡೂ ಸದನಗಳಲ್ಲಿ ರಿಪಬ್ಲಿಕನ್ ಪಕ್ಷ ಬಹುಮತ ಹೊಂದಿದೆ. ಆದರೆ ಸೆನೆಟ್ ಅಥವಾ ಮೇಲ್ಮನೆಯಲ್ಲಿ ವೆಚ್ಚ ಕುರಿತಾದ ಮಸೂದೆ ಅಂಗೀಕಾರಕ್ಕೆ ಅಗತ್ಯವಿರುವ 60 ಮತಗಳ ಕೊರತೆಯನ್ನು ಆಡಳಿತಾರೂಢ ಪಕ್ಷ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ವಿರೋಧಪಕ್ಷವಾದ ಡೆಮಾಕ್ರೆಟ್‌ಗಳಿಗೆ ಸಂಧಾನದ ಅಧಿಕಾರವನ್ನೂ ಅಲ್ಲಿನ ವ್ಯವಸ್ಥೆ ನೀಡಿದೆ.
ಆರೋಗ್ಯ ವಿಮೆಯನ್ನು ಅಗ್ಗವಾಗಿಸುವ ತೆರಿಗೆ ಕ್ರೆಡಿಟ್‌ಗಳ ವಿಸ್ತರಣೆಯನ್ನು ಲಕ್ಷಾಂತರ ಅಮೆರಿಕನ್ನರು ಎದುರು ನೋಡುತ್ತಿದ್ದಾರೆ. ಜತೆಗೆ ವೃದ್ಧರು, ಅಂಗವಿಕಲರು ಮತ್ತು ಕಡಿಮೆ ಆದಾಯ ಹೊಂದಿರುವ ಜನರು ಬಳಸುವ ಸರ್ಕಾರಿ ಆರೋಗ್ಯ ಕಾರ್ಯಕ್ರಮವಾದ ಮೆಡಿಕ್‌ಏಡ್‌ಗೆ ಅನುದಾನ ಕಡಿತಗೊಳಿಸುವ ಟ್ರಂಪ್ ಆದೇಶವೂ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಆರೋಗ್ಯ ಕ್ಷೇತ್ರಕ್ಕೆ ಅನುದಾನ ಕಡಿತಗೊಳಿಸುವ ಸರ್ಕಾರದ ಕ್ರಮವನ್ನು ಡೆಮಾಕ್ರೆಟ್‌ಗಳು ತೀವ್ರವಾಗಿ ವಿರೋಧಿಸಿದ್ದಾರೆ.
ಈ ಎಲ್ಲದರ ಪರಿಣಾಮ ಏಳು ವರ್ಷಗಳ ನಂತರ ಅಮೆರಿಕ ಸರ್ಕಾರ ಸ್ಥಗಿತಗೊಂಡಿತು.
ಸರ್ಕಾರ ಸ್ಥಗಿತಗೊಂಡಿತು ಎಂದರೆ ಎಲ್ಲಾ ಸೇವೆಗಳು ನಿಲ್ಲುವುದಿಲ್ಲ. ಅಗತ್ಯವೆಂದು ಪರಿಗಣಿಸಲಾದ ಸೇವೆಗಳು ಹಿಂದಿನಂತೆಯೇ ಮುಂದುವರಿಯುತ್ತವೆ. ಆದರೂ, ಅನೇಕ ಸಂದರ್ಭಗಳಲ್ಲಿ ಸರ್ಕಾರ ಎಷ್ಟು ದಿನ ಸ್ಥಗಿತಗೊಳ್ಳುತ್ತದೋ ಅಷ್ಟು ದಿನ ಕೆಲ ಸಿಬ್ಬಂದಿಗೆ ವೇತನ ಸಿಗುವುದಿಲ್ಲ.
ಗಡಿ ಭದ್ರತೆ ಮತ್ತು ಕಾನೂನು ಜಾರಿ ಇಲಾಖೆ, ವಲಸೆ ಮತ್ತು ಕಸ್ಟಮ್ಸ್ ಜಾರಿ, ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆ ಮತ್ತು ವಾಯು ಸಂಚಾರ ನಿಯಂತ್ರಣ ನೌಕರರು ಎಂದಿನಂತೆಯೇ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ.
ಸಾಮಾಜಿಕ ಭದ್ರತೆ ಮತ್ತು ವೈದ್ಯಕೀಯ ಕ್ಷೇತ್ರದ ಪಾವತಿಗಳು ನಡೆಯುತ್ತವೆ. ಆದರೂ ಸೌಲಭ್ಯಗಳ ಪರಿಶೀಲನೆ ಮತ್ತು ಕಾರ್ಡ್‌ಗಳ ವಿತರಣೆ ಸ್ಥಗಿತಗೊಳ್ಳುತ್ತವೆ. ಅನಿವಾರ್ಯವಲ್ಲದ ಸೇವೆಗಳಲ್ಲಿ ಕೆಲಸ ಮಾಡುವ ಸರ್ಕಾರಿ ನೌಕರರನ್ನು ತಾತ್ಕಾಲಿಕವಾಗಿ ವೇತನರಹಿತ ರಜೆ ಮೇಲೆ ಕಳುಹಿಸಲಾಗುತ್ತದೆ. ಸರ್ಕಾರಿ ಅನುದಾನಿತ ಪ್ರಿ ಸ್ಕೂಲ್‌ಗಳು ಮತ್ತು ವಸ್ತುಸಂಗ್ರಹಾಲಯಗಳು ಬಾಗಿಲು ಹಾಕಲಿವೆ. ಕೇಂದ್ರ ರೋಗ ನಿಯಂತ್ರಣ ಮತ್ತು ಮುಂಜಾಗ್ರತಾ ಇಲಾಖೆ ಹಾಗೂ ರಾಷ್ಟ್ರೀಯ ಆರೋಗ್ಯ ಸಂಸ್ಥೆಯೂ ತನ್ನ ನೌಕರರನ್ನು ಫರ್ಲೊ ಮೇಲೆ ಕಳುಹಿಸುವ ಸಾಧ್ಯತೆಗಳಿವೆ ಎಂದು ಬಿಬಿಸಿ ವರದಿ ಮಾಡಿದೆ.
2018ರಲ್ಲಿ ಇಂಥದ್ಧೇ ಘಟನೆ ನಡೆದಾಗ ಅಂಚೆ ಇಲಾಖೆ ಎಂದಿನಂತೆಯೇ ಕಾರ್ಯ ನಿರ್ವಹಿಸಿತ್ತು. ಏಕೆಂದರೆ ಅದು ಸರ್ಕಾರದ ಅನುದಾನವನ್ನು ಅವಲಂಬಿಸಿಲ್ಲ. ಹೀಗಿದ್ದರೂ ಸಂಸದರಿಗೆ ವೇತನ ಸಿಗಲಿದೆ.
ಸರ್ಕಾರ ಸ್ಥಗಿತಕ್ಕೆ ಶ್ವೇತಭವನದ ಪ್ರತಿಕ್ರಿಯೆ ಹೇಗಿತ್ತು?
ಈ ಹಿಂದೆ ಹೀಗೆ ಸರ್ಕಾರ ಸ್ಥಗಿತಗೊಂಡ ಸಂದರ್ಭದಲ್ಲಿ ರಾಜಕೀಯವಾಗಿಯೂ ಭಯಾನಕ ಸನ್ನಿವೇಶನ ಸೃಷ್ಟಿಯಾಗಿದ್ದಕ್ಕೆ ಅಮೆರಿಕ ಸಾಕ್ಷಿಯಾಗಿದೆ. ಪ್ರತಿನಿತ್ಯ ನಾಗರಿಕರು ಸೌಲಭ್ಯಗಳಿಗಾಗಿ ಪರದಾಡಿದ್ದಾರೆ. ಅಧ್ಯಕ್ಷ ಹಾಗೂ ಸಂಸದರ ಸಹಿತ ರಾಜಕೀಯ ನಾಯಕರ ಪ್ರತಿಷ್ಠೆ ಕುಸಿದ ಉದಾಹರಣೆಗಳೂ ಇವೆ.
ಆದರೆ ಈ ಬಾರಿ ಶ್ವೇತಭವನ ಹೆಚ್ಚು ಸಂತೋಷವಾಗಿದೆ. ಅಮೆರಿಕದ ಹೆಚ್ಚಿನ ಭಾಗಗಳಿಗೂ ಆಡಳಿತ ಯಂತ್ರದ ಸ್ಥಗಿತದ ಕ್ರಮವನ್ನು ಅದು ವಿಸ್ತರಿಸಿದೆ. ಕಳೆದ ಒಂಬತ್ತು ತಿಂಗಳಲ್ಲಿ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಮಿತಿಮೀರಿ ಬಳಸಿರುವ ಟ್ರಂಪ್ ಅವರು ಸರ್ಕಾರಿ ಅನುದಾನವನ್ನು ಗಣನೀಯವಾಗಿ ಇಳಿಸಿದ್ದಾರೆ. ಕೆಲವೆಡೆ ನೌಕರರನ್ನು ವಜಾಗೊಳಿಸುವ ಕ್ರಮಕ್ಕೂ ಮುಂದಾಗಿದ್ದಾರೆ. ‘ಹಲವರನ್ನು ಕೆಲಸದಿಂದ ತೆಗೆಯುತ್ತೇವೆ’ ಎಂಬ ಸೆ. 30ರ ಟ್ರಂಪ್ ಅವರ ಹೇಳಿಕೆ ನೌಕರರ ನಿದ್ದೆಗೆಡಿಸಿದೆ.
ಪ್ರಸ್ತುತ ಬಿಕ್ಕಟ್ಟಿಗೆ ಡೆಮಾಕ್ರೆಟ್ ಮತ್ತು ರಿಪಬ್ಲಿಕನ್ ಪಕ್ಷದ ನಾಯಕರು ಪರಸ್ಪರ ದೋಷಾರೋಪಣೆಯಲ್ಲಿ ತೊಡಗಿದ್ದಾರೆ. ಹೀಗಿದ್ದರೂ ಈ ಪರಿಸ್ಥಿತಿ ತಪ್ಪಿಸಲು ಶ್ವೇತಭವನ ಹಲವು ರೀತಿಯಲ್ಲಿ ಪ್ರಯತ್ನ ನಡೆಸಿತು. ಸೆ. 29ರಂದು ಟ್ರಂಪ್ ಎಲ್ಲಾ ನಾಯಕರನ್ನು, ಕೆಳಮನೆ ಮತ್ತು ಮೇಲ್ಮನೆಯ ಉನ್ನತ ಡೆಮಾಕ್ರೆಟ್‌ಗಳು ಮತ್ತು ರಿಪಬ್ಲಿಕನ್ ಸಹೋದ್ಯೋಗಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಅದು ಫಲ ನೀಡಿರಲಿಲ್ಲ. ಈ ಭಿನ್ನಾಭಿಪ್ರಾಯ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಜಕೀಯ ಪಂಡಿತರು ಅಂದಾಜಿಸಿದ್ದಾರೆ.
ಸರ್ಕಾರ ಸ್ಥಗಿತ ಹೀಗೇ ಮುಂದುವರಿದರೆ ಪ್ರತಿವಾರಕ್ಕೂ ಆರ್ಥಿಕ ಬೆಳವಣಿಗೆಯಲ್ಲಿ ಶೇ 0.1ರಿಂದ ಶೇ 0.2ರಷ್ಟು ಕಡಿತವಾಗುವ ಸಾಧ್ಯತೆಗಳಿವೆ.
ಷೇರು ಮಾರುಕಟ್ಟೆ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದು.
ಟ್ರಂಪ್ ಸರ್ಕಾರವು ಕಾರ್ಮಿಕರನ್ನು ವಜಾಗೊಳಿಸಿದರೆ ಅದರ ಪರಿಣಾಮವೂ ವಿಪರೀತವಾಗಬಹುದು
ಟ್ರಂಪ್ ಅವರ ಸುಂಕ ನೀತಿಯ ಪರಿಣಾಮ ಅಮೆರಿಕದ ಆರ್ಥಿಕತೆ ಈಗಾಗಲೇ ತೊಂದರೆಗೊಳಗಾಗಿದೆ. ಇದರಿಂದ ದೇಶದಲ್ಲಿ ಅನಿಶ್ಚಿತತೆ ತಲೆದೋರುವ ಅಪಾಯವೂ ಇದೆ.
ಕಳೆದ 50 ವರ್ಷಗಳಲ್ಲಿ ಸರ್ಕಾರ ಸ್ಥಗಿತಗೊಂಡ ಹಲವು ಉದಾಹರಣೆಗಳಿವೆ. ಡೊನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಮೂರು ಬಾರಿ ಸರ್ಕಾರ ಸ್ಥಗಿತ ಕ್ರಮ ಜಾರಿಯಾಗಿದೆ. ಇವುಗಳಲ್ಲಿ ಮೂರನೇ ಬಾರಿ 35 ದಿನಗಳ ಕಾಲ ಸರ್ಕಾರ ಸ್ಥಗಿತಗೊಂಡಿದ್ದು, ಅಮೆರಿಕದ ಇತಿಹಾಸದಲ್ಲೇ ಅತ್ಯಂತ ದೀರ್ಘ ಅವಧಿಯದ್ದು ಎಂದು ದಾಖಲಾಗಿದೆ.
ಮೆಕ್ಸಿಕೊ ಗಡಿಯಲ್ಲಿ ಗೋಡೆ ನಿರ್ಮಿಸಲು ಹಣ ಒದಗಿಸುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಒಂದು ತಿಂಗಳಿನಿಂದ ವೇತನವಿಲ್ಲದ ವಾಯು ಸಂಚಾರ ನಿಯಂತ್ರಕರು ಒಮ್ಮೆಲೆ ‘ಅನಾರೋಗ್ಯ ರಜೆ’ ಘೋಷಿಸಿದ್ದರಿಂದ ಸ್ಥಗಿತ ಕ್ರಮವನ್ನು ಸರ್ಕಾರ ಹಿಂದೆ ಪಡೆಯಿತು.
2018–19ರ ಸ್ಥಗಿತವು ಆರ್ಥಿಕ ಉತ್ಪಾದನೆಯಲ್ಲಿ ಸುಮಾರು 11 ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ಕುಂಠಿತಗೊಂಡಿತು. ಆದರೆ ಇದೇ ಮೊದಲಲ್ಲ. ಇದಕ್ಕಿಂತ ಹಿಂದೆಯೂ ಅಮೆರಿಕದಲ್ಲಿ ಹಲವು ಬಾರಿ ಸರ್ಕಾರ ಸ್ಥಗಿತಗೊಂಡಿದೆ.
1995ರಲ್ಲಿ ಡೆಮಾಕ್ರೆಟ್ ಪಕ್ಷದ ಬಿಲ್ ಕ್ಲಿಂಟನ್ ಅವರ ಅವಧಿಯಲ್ಲಿ 21 ದಿನಗಳು ಸರ್ಕಾರ ಸ್ಥಗಿತಗೊಂಡಿತ್ತು. ಬರಾಕ್ ಒಬಾಮಾ ಅವರ ಅವಧಿಯಲ್ಲಿ 16 ದಿನಗಳು ಮತ್ತು 1980ರಲ್ಲಿ ರಿಪಬ್ಲಿಕನ್ ಪಕ್ಷದ ರೊನಾಲ್ಡ್ ರೇಗನ್ ಅವರ ಅವಧಿಯಲ್ಲಿ ಎಂಟು ದಿನಗಳ ಕಾಲ ಸರ್ಕಾರ ಸ್ಥಗಿತಗೊಂಡಿತ್ತು.
1981ರ ನವೆಂಬರ್– 2 ದಿನ
1982ರ ಸೆಪ್ಟೆಂಬರ್– 1 ದಿನ
1982ರ ಡಿಸೆಂಬರ್– 3 ದಿನ
1983ರ ನವೆಂಬರ್– 3 ದಿನ
1984ರ ಸೆಪ್ಟೆಂಬರ್– 2 ದಿನ
1984ರ ಅಕ್ಟೋಬರ್– 1 ದಿನ
1986ರ ಅಕ್ಟೋಬರ್– 1 ದಿನ
1987ರ ಡಿಸೆಂಬರ್– 1 ದಿನ
1990ರ ಅಕ್ಟೋಬರ್– 3 ದಿನ
1995ರ ನವೆಂಬರ್– 5 ದಿನ
1995ರ ಡಿಸೆಂಬರ್– 21 ದಿನ
2013ರ ಸೆಪ್ಟೆಂಬರ್– 16 ದಿನ
2018ರ ಜನವರಿ– 3 ದಿನ
2018ರ ಫೆಬ್ರುವರಿ– 1 ದಿನ
2018ರ ಡಿಸೆಂಬರ್– 35 ದಿನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.