ADVERTISEMENT

DeepSeek: ಅಮೆರಿಕ ಟೆಕ್ ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದ ಚೀನಾದ AI ತಂತ್ರಜ್ಞಾನ

ಪಿಟಿಐ
Published 29 ಜನವರಿ 2025, 9:37 IST
Last Updated 29 ಜನವರಿ 2025, 9:37 IST
<div class="paragraphs"><p>ಫೈಲ್ ಚಿತ್ರ: ರಾಯಿಟರ್ಸ್</p></div>

ಫೈಲ್ ಚಿತ್ರ: ರಾಯಿಟರ್ಸ್

   

REUTERS/Dado Ruvic

ಮೆಲ್ಬೊರ್ನ್: ಎನ್‌ವಿಡಿಯಾ (Nvidia) ಚಿಪ್ ತಯಾರಕ ಸಂಸ್ಥೆಯ ಮೌಲ್ಯವು ಸೋಮವಾರ ಒಂದೇ ದಿನದಲ್ಲಿ ಸರಿಸುಮಾರು 600 ಬಿಲಿಯನ್ ಡಾಲರ್ (ಸುಮಾರು 52 ಲಕ್ಷ ಕೋಟಿ) ಕುಸಿಯಲು ಕಾರಣವಾಗಿದ್ದು, ಚೀನಾದ ಒಂದು ಪುಟ್ಟ ಸ್ಟಾರ್ಟ್ಅಪ್ ಆಗಿರುವ ಡೀಪ್‌ಸೀಕ್ (DeepSeek). ಅಮೆರಿಕದ ತಂತ್ರಜ್ಞಾನ ಮಾರುಕಟ್ಟೆಯನ್ನೇ ಅಲುಗಾಡಿಸಿಬಿಟ್ಟಿರುವ ಚೀನಾದ ಡೀಪ್‌ಸೀಕ್ ಎಂಬ ಜನರೇಟಿವ್ ಎಐ (GenAI) ಮಾಡೆಲ್, ಚಾಟ್‌ಜಿಪಿಟಿ ಜನಕ ಅಮೆರಿಕದ ಓಪನ್ ಎಐಗೆ ಅತಿದೊಡ್ಡ ಸವಾಲನ್ನೇ ನೀಡಿದೆ ಮತ್ತು ತೀರಾ ಕಡಿಮೆ ವೆಚ್ಚದಲ್ಲಿ ರೂಪುಗೊಂಡಿದೆ ಎಂಬುದೇ ಇದೀಗ ಸದ್ದು ಮಾಡುತ್ತಿರುವ ವಿಷಯ.

ADVERTISEMENT

ಡೀಪ್‌ಸೀಕ್‌ನಿಂದಾಗಿ, ಚಿಪ್ ತಯಾರಿಸುವ ಎನ್‌ವಿಡಿಯಾ ಸಂಸ್ಥೆಯು ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಒಂದು ದಿನದಲ್ಲಿ ಗರಿಷ್ಠ ನಷ್ಟ ಅನುಭವಿಸಿದರೆ, ಚಾಟ್‌ಜಿಪಿಟಿ, ಜೆಮಿನಿ ಮುಂತಾದ ಜನರೇಟಿವ್ ಎಐ ತಂತ್ರಜ್ಞಾನದಲ್ಲಿ ಭರ್ಜರಿ ಹೂಡಿಕೆ ಮಾಡಿರುವ ಇತರ ಟೆಕ್ ದಿಗ್ಗಜರಾದ ಮೈಕ್ರೋಸಾಫ್ಟ್, ಆಲ್ಫಬೆಟ್ ಮತ್ತು ಅಮೆಜಾನ್ ಷೇರುಗಳಿಗೂ ಸಾಕಷ್ಟು ಹೊಡೆತ ಬಿದ್ದಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಏರುಪೇರು ಕಂಡುಬಂದಿರುವುದು ಇದೇ ಕಾರಣದಿಂದ.

ಇದಕ್ಕೆ ಕಾರಣವೇನು?

ಡೀಪ್‌ಸೀಕ್ ಹೊಸದಾಗಿ ಬಿಡುಗಡೆ ಮಾಡಿರುವ R1 ಚಾಟ್‌ಬಾಟ್‌ನ ಕಾರ್ಯಸಾಮರ್ಥ್ಯದ ಬಗೆಗಿನ ವರದಿಗಳು ಮತ್ತು ಪ್ರತಿಸ್ಫರ್ಧಿಗಳಿಗಿಂತಲೂ ಅತ್ಯಾಧುನಿಕ ಸಾಮರ್ಥ್ಯವನ್ನು ಹೊಂದಿರುವುದು ಮತ್ತು ಅದನ್ನು ಅಭಿವೃದ್ಧಿಪಡಿಸುವುದಕ್ಕೆ ಕೂಡ ಹೆಚ್ಚು ಖರ್ಚು ಮಾಡಬೇಕಿಲ್ಲ ಎಂಬ ಅಂಶಗಳೇ ಹೂಡಿಕೆದಾರರ ಆಘಾತಕ್ಕೆ ಕಾರಣವಾಗಿ ಈ ಪರಿಯಲ್ಲಿ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸಿತು.

ಅಮೆರಿಕದ ತಂತ್ರಜ್ಞಾನ ಮತ್ತು ಸಂಬಂಧಿತ ಸ್ಟಾಕ್ ಮಾರುಕಟ್ಟೆಯ ಷೇರು ಬೆಲೆಗಳು ತೀರಾ ಕುಸಿಯುತ್ತಿರುವಂತೆಯೇ ಇತ್ತ ಡೀಪ್‌ಸೀಕ್ ಆರ್1 ಭರ್ಜರಿ ಗಳಿಕೆ ಕಂಡು, ಆ್ಯಪಲ್‌ನ ಆ್ಯಪ್ ಸ್ಟೋರ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿದ ಆ್ಯಪ್‌ಗಳಲ್ಲಿ ಮೇಲಿನ ಸ್ಥಾನಕ್ಕೇರಿಬಿಟ್ಟಿತು.

ಟೆಕ್ ಷೇರುಗಳೇಕೆ ಕುಸಿತ ಕಂಡವು?

DeepSeek ಎಐ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವು ಬಳಸಲು ಅಗ್ಗ ಮತ್ತು ಕಾರ್ಯನಿರ್ವಹಣೆ ಅತ್ಯುತ್ತಮವಾಗಿದೆ ಎಂಬ ಅಂಶಗಳೇ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಈಗಿನ ಕಂಪ್ಯೂಟರ್‌ಗಳ ಕಾರ್ಯಸಾಮರ್ಥ್ಯದ ಬಗೆಗೆ ಮಾರುಕಟ್ಟೆಯ ನಿರೀಕ್ಷೆಯನ್ನೇ ಈ ವಿಷಯ ಬುಡಮೇಲು ಮಾಡಿತು. ಎಂದರೆ, ಕಡಿಮೆ ಹಣ, ತಂತ್ರಜ್ಞಾನ ಬಳಸಿ ಹೆಚ್ಚಿನ ಲಾಭ ಪಡೆಯಬಹುದೆಂಬುದೇ ಇದರ ಒಟ್ಟಾರೆ ಅಂಶ. ಅಲ್ಲದೆ, ಅಮೆರಿಕದ ಟೆಕ್ ದಿಗ್ಗಜ ಕಂಪನಿಗಳ ಈಗಿರುವ ಎಐ ಉತ್ಪನ್ನಗಳು, ಅದರ ಅಭಿವೃದ್ಧಿ ಬಗೆಗಿನ ಸ್ಫರ್ಧಾತ್ಮಕತೆಗೆ ಡೀಪ್‌ಸೀಕ್ ಸವಾಲು ಒಡ್ಡಿರುವುದು ಮಾರುಕಟ್ಟೆ ಸಂವೇದನೆಯನ್ನು ಅಲುಗಾಡಿಸಿಬಿಟ್ಟಿದೆ.

ಷೇರು ಬೆಲೆಗಳು ಮಾರುಕಟ್ಟೆಯ ನಿರೀಕ್ಷೆಗಳಿಂದಲೇ ನಡೆಯುತ್ತವೆ. ಡೀಪ್‌ಸೀಕ್ ಆರ್1ನ ಕಾರ್ಯನಿರ್ವಹಣೆಯು ತಾಂತ್ರಿಕವಾಗಿ ಏನೆಲ್ಲಾ ಸಾಧ್ಯ ಮತ್ತು ಎಐಯನ್ನು ಎಷ್ಟೊಂದು ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸಿ, ಕಾರ್ಯಾಚರಣೆಗೆ ಒಳಪಡಿಸಬಹುದು ಎಂಬ ಅಂಶವು ಈ ನಿರೀಕ್ಷೆಗಳನ್ನೇ ಬದಲಾಯಿಸುವಷ್ಟು ಪ್ರಬಲವಾಯಿತು. ಡೀಪ್‌ಸೀಕ್ ಅನ್ನು ಯಾರು ಬೇಕಾದರೂ ಸಂಪೂರ್ಣ ಉಚಿತವಾಗಿ ಬಳಸಬಹುದು ಮತ್ತು ತಮಗೆ ಬೇಕಾದಂತೆ ಅಭಿವೃದ್ಧಿಪಡಿಸಬಹುದು ಎಂಬುದು ಟೆಕ್ ದಿಗ್ಗಜರ ಕುತೂಹಲಕ್ಕೆ ಕಾರಣ.

DeepSeek ಮೂಲ ಯಾರದು? ಅದರ R1 ಆವೃತ್ತಿ ಏನು?

2023ರಲ್ಲಿ ಚೀನಾದ ಹೈ ಫ್ಲಯರ್ ಎಂಬ ಹೆಡ್ಜ್ ಫಂಡ್ ಕಂಪನಿಯು DeepSeek ಅನ್ನು ನಿರ್ಮಿಸಿತು. 2021ರಿಂದೀಚೆಗೆ ಈ ಕಂಪನಿಯು ಮಾರುಕಟ್ಟೆ ವಹಿವಾಟಿನಲ್ಲಿ ಎಐಯನ್ನು ಬಳಸುತ್ತಾ ಬಂದಿದೆ.

ಚಾಟ್‌ಜಿಪಿಟಿ, ಜೆಮಿನಿ ಮುಂತಾದ ಚಾಟ್‌ಬಾಟ್‌ಗಳು ಹಾಗೂ ಇತರ ಎಐ ಆಧಾರಿತ ಟೂಲ್‌ಗಳಂತಹ ಜೆನರೇಟಿವ್ ಎಐ ತಂತ್ರಜ್ಞಾನದಲ್ಲಿ ಬಳಕೆಯಾಗುವ ಲಾರ್ಜ್ ಲಾಂಗ್ವೇಜ್ ಮಾಡೆಲ್ (LLM) ವ್ಯವಸ್ಥೆಯನ್ನೇ ಡೀಪ್‌ಸೀಕ್ ಕೂಡ ಬಳಸುತ್ತಿದೆ. R1 ಎಂಬುದು ಡೀಪ್‌ಸೀಕ್‌ನ ಚಾಟ್‌ಬಾಟ್ ಮತ್ತು ಮಾಡೆಲ್‌ಗಳಿಗೆ ಅಭಿವೃದ್ಧಿಪಡಿಸಲಾಗಿರುವ ಹೊಸ ಆವೃತ್ತಿ. ಡೀಪ್‌ಸೀಕ್ ಅಭಿವೃದ್ಧಿಪಡಿಸಿದ ಜನರೇಟಿವ್ ಎಐ ಮಾಡೆಲ್‌ಗಳ ಸರಳತೆಯೊಂದಿಗೆ, ಹಿಂದಿನ ಆವೃತ್ತಿಗಳು ಮತ್ತು ಸಾಕಷ್ಟು ದತ್ತಾಂಶಗಳ ಆಧಾರದಲ್ಲಿ R1 ರೂಪುಗೊಂಡಿದೆ. ಆದರೆ, ಅನ್ಯ ಮಾಡೆಲ್‌ಗಳಿಗೆ ಹೋಲಿಸಿದರೆ ಇದರ ಕಾರ್ಯನಿರ್ವಹಣೆ ಗರಿಷ್ಠ ಮತ್ತು ವೆಚ್ಚವು ಅಚ್ಚರಿಯೆನ್ನಿಸುವಷ್ಟು ಕಡಿಮೆ.

ಹಲವಾರು ಮಾನದಂಡಗಳನ್ನು ಗಮನಿಸಿದರೆ ಓಪನ್ಎಐನ ChatGPT 4.o1 ಆವೃತ್ತಿ ಸಹಿತ ಪ್ರಮುಖ ಪ್ರತಿಸ್ಫರ್ಧಿಗಳಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚಿನದಾದ ಕಾರ್ಯಸಾಮರ್ಥ್ಯವನ್ನು R1 ಹೊಂದಿದೆ ಎಂಬುದು ತಂತ್ರಜ್ಞಾನ ಕ್ಷೇತ್ರದ ಹೂಡಿಕೆದಾರರ ನಂಬಿಕೆ.

ಎನ್‌ವಿಡಿಯಾದಂತಹ ಅಮೆರಿಕದ ಕಂಪನಿಗಳು ಅಭಿವೃದ್ಧಿಪಡಿಸಿರುವ ಚಿಪ್‌ಗಳನ್ನು ಚೀನಾ ಕಂಪನಿಗಳು ಪಡೆಯದಂತೆ ಅಮೆರಿಕವು ರಫ್ತು ನಿಷೇಧ ವಿಧಿಸಿರುವ ಹೊರತಾಗಿಯೂ ಈ ಡೀಪ್‌ಸೀಕ್ ಮಾಡೆಲ್ ಸಂಪೂರ್ಣವಾಗಿ ತರಬೇತುಗೊಂಡು, ಜಗತ್ತಿನಾದ್ಯಂತ ಸೇವೆಗೆ ಲಭ್ಯವಿದೆ.

ಚೀನಾಕ್ಕೆ ಕೆಲವೊಂದು ಕಂಪ್ಯೂಟರ್ ಚಿಪ್‌ಗಳನ್ನು ಮತ್ತು ಯಂತ್ರೋಪಕರಣಗಳ ಮಾರಾಟವನ್ನು ಈ ಹಿಂದಿನ ಜೋ ಬೈಡೆನ್ ಆಡಳಿತವು ನಿರ್ಬಂಧಿಸಿತ್ತು. ಜಗತ್ತಿನ ಅತ್ಯಂತ ಸುಧಾರಿತ ತಂತ್ರಜ್ಞಾನವನ್ನು ಆರ್ಥಿಕವಾಗಿ ಮತ್ತು ರಾಜಕೀಯವಾಗಿ ವಿರೋಧಿಯಾಗಿರುವ ಚೀನಾ ಪಡೆಯಬಾರದು ಎಂಬುದು ಈ ನಿರ್ಧಾರದ ಹಿಂದಿನ ಉದ್ದೇಶವಾಗಿತ್ತು.

ಖಾಸಗಿತನದ ಆತಂಕ

R1 ಎಂಬ ಯಂತ್ರಾಧಾರಿತ ಬುದ್ಧಿಮತ್ತೆಯ ಆವೃತ್ತಿಗೆ ತರಬೇತಿ ನೀಡಲು ಬಳಸುವ ದತ್ತಾಂಶವೆಲ್ಲವೂ ಚೀನಾದ ಸರ್ವರ್‌ಗಳಲ್ಲೇ ಶೇಖರಣೆಗೊಂಡಿವೆ. ಈ ದತ್ತಾಂಶವೆಲ್ಲವೂ ಚೀನಾದ ಕಮ್ಯೂನಿಸ್ಟ್ ಪಾರ್ಟಿ ಸರ್ಕಾರದ ನಿಯಂತ್ರಣದಲ್ಲಿ ಮತ್ತು ಅದರ ಕಾನೂನಾತ್ಮಕ ಪರಿಧಿಯಲ್ಲೇ ಇರುವುದರಿಂದ, ಅಮೆರಿಕ ಮೂಲದ ಮತ್ತು ಜಗತ್ತಿನ ಇತರ ಕಂಪನಿಗಳು ಸಹಜವಾಗಿ ಈ ದತ್ತಾಂಶದ ಖಾಸಗಿತನ (ಪ್ರೈವೆಸಿ) ಬಗ್ಗೆ ಚಿಂತಿತವಾಗಿವೆ.

ಈ ಚಾಟ್‌ಬಾಟ್ ಕೋಡ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು, ಬಳಸಬಹುದು ಮತ್ತು ತಮಗೆ ಬೇಕಾದಂತೆ ಬದಲಾಯಿಸಿಕೊಳ್ಳಬಹುದು. ಈ ವ್ಯವಸ್ಥೆಯು ಚಾಟ್‌ಜಿಪಿಟಿಯಲ್ಲಿ ಲಭ್ಯವಿಲ್ಲ. ಆದರೆ, ಚಾಟ್‌ಬಾಟ್ ಕೋಡ್ ಎಲ್ಲರಿಗೂ ಲಭ್ಯವಿದೆ ಎಂದಾದರೂ, ಅದರೊಳಗಿರುವ R1 ಮಾಡೆಲ್‌ನ ಪಾರದರ್ಶಕತೆ ಬಗ್ಗೆಯೇ ಅಮೆರಿಕದಲ್ಲಿ ಆತಂಕ. ಯಾಕೆಂದರೆ, ಈಗಾಗಲೇ ಹಲವಾರು ಮಂದಿ ಬಳಸಿ ನೋಡಿದ ಪ್ರಕಾರ, R1 ಮಾಡೆಲ್, ಚೀನಾದ ಕಮ್ಯೂನಿಸ್ಟ್ ಸರ್ಕಾರದ ನೀತಿಗಳಿಗೆ ಅನುಗುಣವಾಗಿಯೇ ಕೆಲಸ ಮಾಡುತ್ತದೆ ಮತ್ತು ಅದರ ಸೆನ್ಸಾರ್‌ಗೂ ಒಳಪಟ್ಟಿರುತ್ತದೆ.

ಇದಕ್ಕೂ ಹೆಚ್ಚಿನದಾಗಿ, ಹೆಚ್ಚು ಸುಲಭವಾಗಿ ಲಭ್ಯವಿರುವ, ಸರಳವೂ ಆಗಿರುವ, ಕಡಿಮೆ ವೆಚ್ಚದಾಯಕವೂ ಆದ ಮತ್ತು ಕಡಿಮೆ ವಿದ್ಯುತ್ ಬಳಕೆಯನ್ನೂ ಬೇಡುವ ಒಂದು ಎಐ ಮಾಡೆಲ್ (ಡೀಪ್‌ಸೀಕ್) ಸಿಗುತ್ತದೆ ಎಂಬುದು ಸಮಾಜಕ್ಕೆ ಅನುಕೂಲಕರ ಅಂತನ್ನಿಸಬಹುದು. ಆದರೆ, ಮಾರುಕಟ್ಟೆಯನ್ನು ಒಂದು ದೇಶವೇ ಹಿಡಿತದಲ್ಲಿಟ್ಟುಕೊಳ್ಳಬಹುದಾದ ಭೌಗೋಳಿಕ-ರಾಜಕೀಯ ಆತಂಕದೊಂದಿಗೆ, ನಮ್ಮ ದತ್ತಾಂಶದ ಗೋಪ್ಯತೆ, ಬೌದ್ಧಿಕ ಆಸ್ತಿ, ಸೆನ್ಸಾರ್‌ಶಿಪ್ - ಈ ಅಂಶಗಳು ಲಾಭಕ್ಕಿಂತಲೂ ಹೆಚ್ಚು ಅಪಾಯಕಾರಿ ಎನ್ನುವುದು ಜಾಗತಿಕವಾಗಿ ಕಂಡುಬಂದಿರುವ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.