ADVERTISEMENT

EXPLAINER | ನೋಬೆಲ್ ಶಾಂತಿ ಪ್ರಶಸ್ತಿ ಯಾರಿಗೆ? ಏನು ಹೇಳುತ್ತದೆ ನಿಯಮ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜುಲೈ 2025, 12:53 IST
Last Updated 9 ಜುಲೈ 2025, 12:53 IST
   

ವಾಷಿಂಗ್ಟನ್‌: ಮಾನವತೆಯ ಗೌರವವನ್ನು ಉತ್ತೇಜಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ನೀಡಲಾಗುವ ಜಗತ್ತಿನ ಸರ್ವಶ್ರೇಷ್ಠ ಪ್ರಶಸ್ತಿ ಎಂದೇ ನೋಬೆಲ್ ಶಾಂತಿ ಪ್ರಶಸ್ತಿಯನ್ನು ಪರಿಗಣಿಸಲಾಗುತ್ತದೆ. 

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರನ್ನು ಈ ಪ್ರಶಸ್ತಿಗೆ ನಾಮನಿರ್ದೇಶನ ಮಾಡುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಇತ್ತೀಚೆಗೆ ನೀಡಿದ ಹೇಳಿಕೆ ಹಲವು ಚರ್ಚೆಗಳಿಗೆ ಕಾರಣವಾಗಿದೆ.

ಒಂದೊಮ್ಮೆ ನೆತನ್ಯಾಹು ಅವರ ಅಪೇಕ್ಷೆಯಂತೆಯೇ ಟ್ರಂಪ್ ನೋಬೆಲ್ ಪ್ರಶಸ್ತಿ ಪಡೆದರೆ, ಅವರು ಈ ಪ್ರತಿಷ್ಠಿತ ಶಾಂತಿ ಪ್ರಶಸ್ತಿಗೆ ಭಾಜನರಾದ ಅಮೆರಿಕದ ಐದನೇ ಅಧ್ಯಕ್ಷ ಎಂದೆನಿಸಿಕೊಳ್ಳಲಿದ್ದಾರೆ. ಇವರಿಗೂ ಮೊದಲು ಥಿಯೋಡರ್ ರೂಸ್‌ವೆಲ್ಟ್, ವೂಡ್ರೊವ್‌ ವಿಲ್ಸನ್‌, ಜಿಮ್ಮಿ ಕಾರ್ಟರ್‌ ಮತ್ತು ಬರಾಕ್‌ ಒಬಾಮಾ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

ADVERTISEMENT

ನೋಬೆಲ್ ಶಾಂತಿ ಪ್ರಶಸ್ತಿಯನ್ನು ಯಾರೆಲ್ಲಾ ಪಡೆಯಬಹುದು?

ಸ್ವೀಡಿಶ್ ಕೈಗಾರಿಕೋದ್ಯಮಿ ಹಾಗೂ ಡೈನಮೈಟ್‌ ಕಂಡುಹಿಡಿದ ಆಲ್ಫರ್ಡ್‌ ನೋಬೆಲ್ ಅವರ ಉಯಿಲಿನಂತೆ, ಜಗತ್ತಿನಲ್ಲೇ ಸರ್ವಶ್ರೇಷ್ಠವಾದದ್ದನ್ನು ಸಾಧಿಸಿದ ವ್ಯಕ್ತಿ, ಸೈನ್ಯವನ್ನು ನಿರ್ಮೂಲನೆ ಮಾಡಿದವರು ಅಥವಾ ಅದರ ಸಂಖ್ಯೆ ತಗ್ಗಿಸಿದವರು, ಶಾಂತಿ ಸ್ಥಾಪನೆ ಮತ್ತು ಅದನ್ನು ಪ್ರಚಾರ ಮಾಡಿದವರಿಗೆ ನೀಡಬೇಕು ಎಂದಿದ್ದಾರೆ.

ನೋಬೆಲ್‌ ಅಂತರ್ಜಾಲ ತಾಣದಲ್ಲಿನ ಪರಿಚಯ ಪುಟದಲ್ಲಿ ಶಾಂತಿ ಪ್ರಶಸ್ತಿ ಸಮಿತಿಯ ಹಾಲಿ ಅಧ್ಯಕ್ಷ ಜಾರ್ಜಿಯನ್ ವಾಟ್ನೆ ಫ್ರೈಡ್ನೆಸ್‌ ಅವರು, ‘ನೋಬೆಲ್ ಶಾಂತಿ ಪ್ರಶಸ್ತಿವನ್ನು ಯಾರಿಗೆ ಬೇಕಾದರೂ ನೀಡಬಹುದು. ಅಂದರೆ ಈ ಪ್ರಶಸ್ತಿಯ ಇತಿಹಾಸವನ್ನು ಗಮನಿಸಿದಲ್ಲಿ, ಜಗತ್ತಿನ ಎಲ್ಲಾ ಪ್ರದೇಶಗಳ ಮತ್ತು ಸಮಾಜದ ಎಲ್ಲಾ ಸ್ಥರಗಳ ಜನರನ್ನೂ ಈ ಪ್ರಶಸ್ತಿಗೆ ಪರಿಗಣಿಸಿದ ಉದಾಹರಣೆ ಇದೆ’ ಎಂದಿದ್ದಾರೆ.

ಯಾರು ನಾಮನಿರ್ದೇಶನ ಮಾಡಬಹುದು?

ನಾಮನಿರ್ದೇಶನದಲ್ಲಿ ಸಾಕಷ್ಟು ಜನರು ಪಾಲ್ಗೊಳ್ಳಬಹುದು. ಇದರಲ್ಲಿ ಸರ್ಕಾರದ ಪ್ರತಿನಿಧಿಗಳು ಮತ್ತು ಸಂಸದರು; ವಿವಿಧ ರಾಷ್ಟ್ರಗಳ ಮುಖ್ಯಸ್ಥರು; ಇತಿಹಾಸ, ವಿಜ್ಞಾನ, ಕಾನೂನು ಮತ್ತು ತತ್ವಜ್ಞಾನ ವಿಭಾಗದ ಪ್ರಾಧ್ಯಾಪಕರು; ಈ ಹಿಂದೆ ನೋಬೆಲ್ ಶಾಂತಿ ಪ್ರಶಸ್ತಿಕ್ಕೆ ಭಾಜನರಾದವರು ಇತರರು ನಾಮನಿರ್ದೇಶನ ಮಾಡಬಹುದು.

ಹೀಗೆ ನಾಮನಿರ್ದೇಶನ ಮಾಡಿದವರ ಹೆಸರುಗಳನ್ನು 50 ವರ್ಷಗಳ ಕಾಲ ಗೋಪ್ಯವಾಗಿಡಲಾಗುತ್ತದೆ. ನಾಮನಿರ್ದೇಶನವನ್ನು ಬಹಿರಂಗವಾಗಿ ಹೇಳುವುದಕ್ಕೆ ಯಾವುದೇ ನಿರ್ಬಂಧವಿಲ್ಲ.

ನಿರ್ಧಾರ ಯಾರದ್ದು?

ನಾರ್ವೆ ಸಂಸತ್ತು ನೇಮಿಸಿದ ಐವರು ಸದಸ್ಯರ ಸಮಿತಿಯಾದ ನಾರ್ವೆ ನೋಬೆಲ್ ಸಮಿತಿಯು ನೋಬೆಲ್ ಶಾಂತಿ ಪ್ರಶಸ್ತಿ ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸಲಿದೆ. ಈ ಸಮಿತಿಯಲ್ಲಿ ನಿವೃತ್ತ ರಾಜಕಾರಣಿಗಳು ಇರುತ್ತಾರೆ. ಆದರೆ ಇದು ಕಡ್ಡಾಯವಲ್ಲ. ಹಾಲಿ ಸಮಿತಿಯ ಅಧ್ಯಕ್ಷರಾಗಿ ಪಿಇಎನ್ ಇಂಟರ್‌ನ್ಯಾಷನಲ್‌ನ ನಾರ್ವೆ ಶಾಖೆಯ ಮುಖ್ಯಸ್ಥರು ಇದ್ದಾರೆ. ಇವರೆಲ್ಲರ ಆಯ್ಕೆಯು ನಾರ್ವೆಯ ರಾಜಕೀಯ ಪಕ್ಷಗಳು ನಿರ್ಧರಿಸುತ್ತವೆ. ನೇಮಕಾತಿಯು ನಾರ್ವೆ ಸಂಸತ್ತಿನ ಸಮತೋಲನವನ್ನು ಪ್ರತಿನಿಧಿಸುತ್ತದೆ.

ಪ್ರಶಸ್ತಿಗೆ ಹೆಸರು ಅಂತಿಮಗೊಳಿಸುವ ನಿರ್ಧಾರ ಹೇಗೆ?

ನಾಮನಿರ್ದೇಶನಕ್ಕೆ ಜ. 31 ಕೊನೆಯ ದಿನ. ಟ್ರಂಪ್ ಅವರ ಹೆಸರನ್ನು ನೆತನ್ಯಾಹು ನಾಮನಿರ್ದೇಶನ ಮಾಡುವುದಾದರೆ, ಅದು ಈ ವರ್ಷಕ್ಕೆ ಪರಿಗಣಿಸಲಾಗದು. 2026ರ ಫೆಬ್ರುವರಿಯಲ್ಲಿ ನಡೆಯುವ ಮೊದಲ ಸಭೆಯಲ್ಲಿ ಸಮಿತಿಯು ತಮ್ಮದೇ ಆದ ನಾಮನಿರ್ದೇಶನ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಹೆಸರುಗಳನ್ನು ಅಂತಿಮಗೊಳಿಸಿದ ನಂತರ ಅವುಗಳನ್ನು ಕಾಯಂ ಸಲಹೆಗಾರರು ಮತ್ತು ಇತರ ಪರಿಣಿತರು ಮೌಲ್ಯಮಾಪನ ಮಾಡಲಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ.

ಪ್ರಶಸ್ತಿಯ ಸುತ್ತು ವಿವಾದಗಳ ಹುತ್ತ

ನೋಬೆಲ್ ಶಾಂತಿ ಪ್ರಶಸ್ತಿಯನ್ನು ರಾಜಕೀಯ ಸಂದೇಶದ ದೃಷ್ಟಿಕೋನದಿಂದಲೇ ನೋಡಲಾಗುತ್ತದೆ. ನೋಬೆಲ್ ಅಂತರ್ಜಾಲ ತಾಣದಲ್ಲಿ ಹೇಳಿರುವಂತೆಯೇ, ಕೆಲವು ಪುರಸ್ಕೃತರು, ‘ಅತ್ಯಂತ ವಿವಾದಿತ ರಾಜಕೀಯ ನಟರು’ ಎಂದಿದೆ. ಇವೆಲ್ಲದರ ನಡುವೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಂಘರ್ಷಗಳ ಮೇಲಿನ ಸಾರ್ವಜನಿಕರಿಗೂ ಮಾಹಿತಿ ಇದ್ದು, ಅವರೂ ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. 

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇಲವೇ ತಿಂಗಳು ನಂತರ ಒಬಾಮಾ ಈ ಪ್ರಶಸ್ತಿವನ್ನು ಮುಡಿಗೇರಿಸಿಕೊಂಡರು. 1973ರಲ್ಲಿ ವಿಯಟ್ನಾಮ್‌ ಯುದ್ಧ ಕೊನೆಗಾಣಿಸಿದ್ದಕ್ಕೆ ಅಮೆರಿಕದ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್‌ ಮತ್ತು ವಿಯೆಟ್ನಾಮ್‌ನ ರಾಜಕಾರಣಿ ಡುಕ್‌ ಥೊ ಅವರಿಗೆ ಪ್ರಶಸ್ತಿ ನೀಡಿಕ್ಕಾಗಿ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.

1994ರಲ್ಲಿ ಪ್ಯಾಲೆಸ್ಟೀನ್‌ ಮುಖ್ಯಸ್ಥ ಯಾಸಿರ್ ಅರಾಫತ್‌ ಅವರು ಇಸ್ರೇಲ್‌ನ ಶಿಮೊನ್‌ ಪೀರ್ಸ್‌ ಮತ್ತು ಯಿತ್‌ಝಾಕ್‌ ರಾಬಿನ್ ಅವರೊಂದಿಗೆ ಶಾಂತಿ ಪ್ರಶಸ್ತಿವನ್ನು ಹಂಚಿಕೊಂಡಾಗಲೂ ಸದಸ್ಯರೊಬ್ಬರು ಹುದ್ದೆ ತೊರೆದಿದ್ದರು.

ಶಾಂತಿ ಪ್ರಶಸ್ತಿಕ್ಕೆ ಭಾಜನರಾಗುವವರಿಗೆ ಸಿಗುವುದೇನು?

ನೋಬೆಲ್ ಶಾಂತಿ ಪ್ರಶಸ್ತಿಗೆ ಭಾಜನರಾಗುವವರಿಗೆ ಒಂದು ಪದಕ, ಒಂದು ಪದವಿ, 11 ದಶಲಕ್ಷ ಸ್ವೀಡಿಶ್ ಕ್ರೌನ್‌ (₹10 ಕೋಟಿ), ಜಾಗತಿಕ ಮನ್ನಣೆ ಸಿಗಲಿದೆ.

ಪುರಸ್ಕೃತರ ಹೆಸರು ಘೋಷಣೆ ಮತ್ತು ಪ್ರದಾನ ಸಮಾರಂಭ ಎಂದು?

2025ರ ಪುರಸ್ಕೃತರ ಹೆಸರು ಅ. 10ರಂದು ಒಸ್ಲೊದಲ್ಲಿರುವ ನಾರ್ವೆ ನೋಬೆಲ್ ಸಂಸ್ಥೆಯಲ್ಲಿ ಘೋಷಣೆಯಾಗಲಿದೆ. ಇದೇ ನಗರದಲ್ಲಿರುವ ಸಭಾಂಗಣದಲ್ಲಿ ಡಿ. 10ರಂದು ನಡೆಯಲಿರುವ ಆಲ್‌ಫ್ರೆಡ್‌ ನೋಬೆಲ್ ಅವರು ಸಂಸ್ಮರಣಾ ದಿನದಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನೋಬೆಲ್ ಶಾಂತಿ ಪ್ರಶಸ್ತಿ ಪಡೆದ ಭಾರತೀಯರು...

1979ರಲ್ಲಿ ಮದರ್ ಥೆರೇಸಾ, 1989ರಲ್ಲಿ ದಲೈ ಲಾಮಾ ಹಾಗೂ 2014ರಲ್ಲಿ ಕೈಲಾಶ್ ಸತ್ಯಾರ್ಥಿ ಅವರಿಗೆ ನೋಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.