
ಭಾರತೀಯ ಸೇನಾ ಪಡೆಗಳು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಎಂಟು ತಿಂಗಳ ಹಿಂದೆ ನಡೆಸಿದ 'ಆಪರೇಷನ್ ಸಿಂಧೂರ'ದಿಂದ ಬಲವಾದ ಪೆಟ್ಟು ತಿಂದಿದ್ದರೂ, ಕದನ ವಿರಾಮ ಉಲ್ಲಂಘಿಸುವ ತನ್ನ ಚಾಳಿಯನ್ನು ಪಾಕಿಸ್ತಾನ ಮುಂದುವರಿಸಿದೆ.
ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಡ್ರೋನ್‌ಗಳನ್ನು ಹಾರಿಸುವ ಮೂಲಕ ಸಂಘರ್ಷಕ್ಕೆ ಮತ್ತೆ ಮತ್ತೆ ಪ್ರಚೋದನೆ ನೀಡುತ್ತಿದೆ.
ಜಮ್ಮು ಮತ್ತು ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನದ ಹಲವು ಡ್ರೋನ್‌ಗಳು ಜನವರಿ 9ರಂದು ಪತ್ತೆಯಾಗಿದ್ದವು. ಗುರುವಾರ (ಜ.15) ರಾತ್ರಿಯೂ ಮತ್ತೆ ಡ್ರೋನ್‌ಗಳು ಕಾಣಿಸಿಕೊಂಡಿವೆ. ಭಾರತೀಯ ಸೇನೆ, ಭದ್ರತೆಯನ್ನು ಬಿಗಿಗೊಳಿಸಿದ್ದು, ಡ್ರೋನ್‌ಗಳನ್ನು ಹಿಮ್ಮೆಟ್ಟಿಸಲು ಸನ್ನದ್ಧವಾಗಿದೆ. ಆದಾಗ್ಯೂ, ಪಾಕ್ ಏಕಾಏಕಿ ಡ್ರೋನ್‌ಗಳನ್ನು ಗಡಿಯಾಚೆಗೆ ಹಾರಿಸಲು ಪ್ರಯತ್ನಿಸುತ್ತಿರುವುದು ಏಕೆ ಎಂಬ ಪ್ರಶ್ನೆ ಉದ್ಭವಿಸಿದೆ.
ಉಗ್ರ ದಾಳಿಗೆ ತಕ್ಕ ಉತ್ತರ ನೀಡಿದ್ದ ಸೇನೆ
ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಉಗ್ರರು 2025ರ ಏಪ್ರಿಲ್ 22ರಂದು ನಡೆಸಿದ್ದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಹತ್ಯೆಯಾಗಿ, ಹಲವರು ಗಾಯಗೊಂಡಿದ್ದರು.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಎರಡು ವಾರದ ನಂತರ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಿಂದ 10ರ ವರೆಗೆ ನಡೆದ ಈ ದಾಳಿ ವೇಳೆ ಹಲವು ಉಗ್ರರು ಹತರಾಗಿದ್ದರು.
ನಂತರ, ಪಾಕ್ ಪಡೆಗಳು ಗಡಿಯುದ್ದಕ್ಕೂ ದಾಳಿ ನಡೆಸಿದ್ದರಿಂದ, ಉಭಯ ದೇಶಗಳ ನಡುವೆ ಸಂಘರ್ಷ ಸ್ಥಿತಿ ನಿರ್ಮಾಣವಾಗಿತ್ತು. ಮೇ 10ರಂದು ಕದನ ವಿರಾಮ ಘೋಷಣೆಯಾಗಿತ್ತು.
'ಪಾಕಿಸ್ತಾನಕ್ಕಿದೆ ಭಾರತದ ಭಯ'
ಪಾಕಿಸ್ತಾನ ಸದ್ಯ ಹಾರಿಸುತ್ತಿರುವ ಡ್ರೋನ್‌ಗಳು ಕಳೆದ ವರ್ಷ ತಲೆದೋರಿದ್ದ ಸಂಘರ್ಷದ ವೇಳೆ ಹಾರಿಸಿದ್ದ ಕಾಮಿಕೇಜ್ (ಆತ್ಮಾಹುತಿ) ಡ್ರೋನ್‌ಗಳಲ್ಲ ಎಂಬುದು ಗಮನಿಸಬೇಕಾದ ವಿಚಾರ. ಆತ್ಮಾಹುತಿ ಡ್ರೋನ್‌ಗಳಲ್ಲ ಎಂದ ಮಾತ್ರಕ್ಕೆ ಮೈಮರೆಯುವ ಹಾಗಿಲ್ಲ. ಈ ಡ್ರೋನ್‌ಗಳನ್ನು (ಮಾನವರಹಿತ ವೈಮಾನಿಕ ವಾಹನಗಳನ್ನು) ದಾಳಿ ನಡೆಸಲು ಸೂಕ್ತ ಗುರಿಯ ಹುಡುಕಾಟಕ್ಕಾಗಿ ಬಳಸಲಾಗುತ್ತದೆ.
ಇತ್ತೀಚೆಗೆ ಕಂಡುಬಂದಿರುವ ಡ್ರೋನ್‌ಗಳು ಅತ್ಯಂತ ಸಣ್ಣ ಗಾತ್ರದವಾಗಿದ್ದು, ತುಂಬಾ ಎತ್ತರದಲ್ಲೇನೂ ಹಾರಾಟ ನಡೆಸಿಲ್ಲ. ವಿಚಕ್ಷಣೆಗಾಗಿ ಬಳಸುವಂತಹ ಈ ಡ್ರೋನ್‌ಗಳಲ್ಲಿ ಲೈಟ್ ಆನ್ ಆಗಿಯೇ ಇದ್ದವು ಎಂದು ಸೇನಾ ಪಡೆ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಅವರು ಕಳೆದವಾರ 'ಸೇನಾ ದಿನ'ವನ್ನುದ್ದೇಶಿಸಿ ಮಾಧ್ಯಮದವರೊಂದಿಗೆ ಮಾತನಾಡುವಾಗ ಹೇಳಿದ್ದರು.
ಡ್ರೋನ್‌ಗಳ ಮೇಲೆ ಕಣ್ಗಾವಲು ಇಡಲಾಗಿದೆ. ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದರು. 'ಭಾರತವು ಸೇನಾ ದಿನ (ಜನವರಿ 15) ಹಾಗೂ ಗಣರಾಜ್ಯೋತ್ಸವ ದಿನದಂದು (ಜನವರಿ 26ರಂದು) ಸೇನಾ ಕಾರ್ಯಾಚರಣೆ ನಡೆಸಬಹುದೇ ಎಂಬ ಭಯ ಪಾಕಿಸ್ತಾನಕ್ಕೆ ಇದ್ದೇ ಇದೆ' ಎಂದೂ ಹೇಳಿದ್ದರು.
ಜನವರಿ 9ರಿಂದ ಈವರೆಗೆ ಪಾಕಿಸ್ತಾನದ ಸುಮಾರು 10 – 12 ಡ್ರೋನ್‌ಗಳು ಅಂತರರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಹಾರಾಡಿವೆ. ಕೆಲವೆಡೆ ಅವನ್ನು ಹಿಮ್ಮೆಟ್ಟಿಸಲು ಸೇನಾ ಪಡೆಗಳು ಗುಂಡು ಹಾರಿಸಿವೆ.
ಪಾಕ್ ದಿಕ್ಕಿನಿಂದ ಬಂದ ಡ್ರೋನ್‌ಗಳು ಸಾಂಬಾ ಜಿಲ್ಲೆಯಲ್ಲಿ ಜನವರಿ 9ರಂದು ಎರಡು ಪಿಸ್ತೂಲ್‌ಗಳು, ಮೂರು ಮ್ಯಾಗಜಿನ್‌ಗಳು, 16 ಗುಂಡುಗಳು ಹಾಗೂ ಒಂದು ಗ್ರೆನೇಡ್ ಅನ್ನು ಬೀಳಿಸಿವೆ ಎಂದು ಶಂಕಿಸಲಾಗಿದೆ. ಗಣರಾಜ್ಯೋತ್ಸವಕ್ಕೂ ಮುನ್ನ ಭದ್ರತೆಯನ್ನು ಖಾತ್ರಿಪಡಿಸಿಕೊಳ್ಳಲು ನಡೆದ ಶೋಧ ಕಾರ್ಯಾಚರಣೆ ವೇಳೆ ಅವುಗಳನ್ನೆಲ್ಲ ವಶಕ್ಕೆ ಪಡೆಯಲಾಗಿದೆ.
ಡ್ರೋನ್‌ಗಳನ್ನು ಮತ್ತೆ ಮತ್ತೆ ಕಳುಹಿಸುತ್ತಿರುವುದೇಕೆ?
ಭಾರತದ ರಕ್ಷಣಾ ಪಡೆಯಲ್ಲಿನ ಲೋಪಗಳನ್ನು ಪತ್ತೆ ಮಾಡುವುದು, ಸೇನೆ ಹೇಗೆ ಪ್ರತಿಕ್ರಿಯಿಸಲಿದೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ಪಾಕ್ ಡ್ರೋನ್ ಚಟುವಟಿಕೆ ನಡೆಸುತ್ತಿರಬಹುದು ಎಂದು ರಕ್ಷಣಾ ವಿಶ್ಲೇಷಕರು ಅಂದಾಜಿಸಿದ್ದಾರೆ.
'ಭಾರತೀಯ ಸೇನಾ ಚಲನವಲನಗಳ ಮೇಲೆ ಕಣ್ಣಿಡಲು, ಭಾರತದ ಪ್ರತಿಕ್ರಿಯೆ ಹೇಗಿರಲಿದೆ ಎಂಬುದನ್ನು ಕಂಡುಕೊಳ್ಳಲು, ಯಾವ ರಾಡಾರ್ ವ್ಯವಸ್ಥೆ ಬಳಸುತ್ತಿದೆ ಎಂಬುದನ್ನು ಪರಿಶೀಲಿಸಲು, ಎಲ್ಲೆಲ್ಲಿ ಹೆಚ್ಚಿನ ಭದ್ರತೆ ಇದೆ ಎಂಬುದನ್ನು ತಿಳಿಯುವುದು ಪಾಕ್ ಡ್ರೋನ್ ಕಾರ್ಯಾಚರಣೆಯ ಉದ್ದೇಶವಿರಬಹುದು' ಎಂದು ಭೌಗೋಳಿಕ ತಜ್ಞ ಸುಮಿತ್ ರಾಜ್ ಹೇಳಿದ್ದಾರೆ.
ಸೇನಾಧಿಕಾರಿಗಳೂ ಇದೇ ಲೆಕ್ಕಾಚಾರದಲ್ಲಿದ್ದಾರೆ.
'ಬೆಲೆ ತೆರಬೇಕಾಗುತ್ತದೆ'
'ಭಾರತೀಯ ಸೇನೆಯಲ್ಲಿ ಏನಾದರೂ ಲೋಪಗಳಿವೆಯೇ ಎಂಬುದನ್ನು ಪತ್ತೆ ಹಚ್ಚಿ, ಉಗ್ರರನ್ನು ಗಡಿ ಪ್ರದೇಶಕ್ಕೆ ಕಳುಹಿಸುವುದು ಪಾಕ್ ಡ್ರೋನ್ ಕಾರ್ಯಾಚರಣೆ ಹಿಂದಿನ ಉದ್ದೇಶವಿರಬಹುದು' ಎಂದು ಸೇನಾ ಪಡೆ ಮುಖ್ಯಸ್ಥ ಹೇಳಿದ್ದರು.
ಅಂತಹ ಪ್ರಯತ್ನ ಮಾಡಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, 'ಭಾರತೀಯ ಸೇನಾ ಪಡೆಯಲ್ಲಿ ಅಂತ ಲೋಪವಿಲ್ಲ ಎಂಬುದು ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ. ಉಗ್ರರನ್ನು ಭಾರತಕ್ಕೆ ಕಳುಹಿಸುವ ಯಾವುದೇ ಅವಕಾಶವಿಲ್ಲ ಎಂಬುದು ಗೊತ್ತಾಗಿದೆ' ಎಂದಿದ್ದಾರೆ.
ಶಸ್ತ್ರಾಸ್ತ್ರ ರವಾನಿಸುವ ಸಂಚು?
ಪಾಕಿಸ್ತಾನದಲ್ಲಿ ಉದ್ವಿಗ್ನ ಪರಿಸ್ಥಿತಿಯಿದೆ. ಸ್ಥಳೀಯವಾಗಿ ನೇಮಕಾತಿ ಪ್ರಕ್ರಿಯೆಗಳು ಬಹುತೇಕ ಸ್ಥಗಿತಗೊಂಡಿರುವುದರಿಂದ, ಭಾರತದ ಗಡಿಯಲ್ಲಿ ಭಯೋತ್ಪಾದನೆಗೆ ಬಲ ತುಂಬುವ ಉದ್ದೇಶದಿಂದ ಮಾದಕವಸ್ತು ಸಾಗಣೆ ಹಾಗೂ ಶಸ್ತ್ರಾಸ್ತ್ರ ರವಾನೆಗೆ ಸಂಚು ರೂಪಿಸುತ್ತಿರುವ ಸಾಧ್ಯತೆ ಇದೆ ಎಂದು ಜಮ್ಮು ಮತ್ತು ಕಾಶ್ಮೀರದ ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಪಿ. ವೇದ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಭಾರತವು, ಸದೃಢವಾದ ಡ್ರೋನ್ ವಿರೋಧಿ ವ್ಯವಸ್ಥೆಗಳನ್ನು ಒಳಗೊಂಡಿದೆ. ಆದಾಗ್ಯೂ, ದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ವೈರಿ ರಾಷ್ಟ್ರದ ಡ್ರೋನ್ ಲಾಂಚ್‌ಪ್ಯಾಡ್‌ಗಳು ಮತ್ತು ನೆಲೆಗಳ ಮೇಲೆ ದಾಳಿ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿದೆ ಎಂದು ಪ್ರತಿಪಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.