ADVERTISEMENT

ಒಳನೋಟ | ಎಐ ಕಲಿತರಷ್ಟೇ ಕೆಲಸ: ಸೃಜನಶೀಲತೆ ಮತ್ತು ಸಹಜೀವನ ಅಗತ್ಯ

ಇ.ಎಸ್.ಸುಧೀಂದ್ರ ಪ್ರಸಾದ್
Published 4 ಜನವರಿ 2026, 1:32 IST
Last Updated 4 ಜನವರಿ 2026, 1:32 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಎಐ ಚಿತ್ರ: ಕಣಕಾಲಮಠ

ಪ್ರಶಾಂತ್‌, ಒಬ್ಬ ಅನುಭವಿ ಹಾಗೂ ನುರಿತ ಸಾಫ್ಟ್‌ವೇರ್ ತಂತ್ರಜ್ಞ. ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ನೌಕರಿ. ಕೋಡಿಂಗ್‌ನಲ್ಲಿ ಇವರ ಕೈಗಳು ಕರಗತ. ಆದರೆ, ಹೊಸ ತಂತ್ರಜ್ಞಾನದತ್ತ ಮುಖ ಮಾಡಿದ ಕಂಪನಿ, ಕೃತಕ ಬುದ್ಧಿಮತ್ತೆ ಅಳವಡಿಕೆಗೆ ಮುಂದಾಯಿತು. ಕೌಶಲಭರಿತ ನೌಕರರು ಮಾಡುವ ಕೆಲಸವನ್ನು ದಣಿವಿಲ್ಲದೆ, ವೇತನವನ್ನೂ ಕೇಳದೆ ಕೆಲವೇ ಕ್ಷಣಗಳಲ್ಲಿ ಪೂರ್ಣಗೊಳಿಸುವ ತಂತ್ರಜ್ಞಾನವದು. ಆಫೀಸ್‌ ರೊಟೀನ್‌ಗೆ ಹೊಂದಿಕೊಂಡಿದ್ದ ಪ್ರಶಾಂತ್‌ ಸೇರಿದಂತೆ ಅವರ ಸಹೋದ್ಯೋಗಿಗಳ ನಿದ್ದೆಗೆಡಿಸಿತು. ಆದರೆ ಧೈರ್ಯಗೆಡದ ಅವರನ್ನು ಎಐ ಸುನಾಮಿಯಿಂದ ರಕ್ಷಿಸಿದ್ದೂ ಅದೇ... ಸೃಜನಶೀಲತೆ.

ADVERTISEMENT

‘20 ವರ್ಷದಲ್ಲಿ ಕೆಲಸ ಎಂಬುದು ಆಯ್ಕೆಯಾಗುತ್ತದೆಯೇ ಹೊರತು, ಅನಿವಾರ್ಯವಲ್ಲ. ಕೃತಕ ಬುದ್ಧಿಮತ್ತೆ ಹಾಗೂ ರೊಬೊಗಳು, ಮನುಷ್ಯರು ನಿರ್ವಹಿಸುತ್ತಿದ್ದ ಕಾರ್ಯಭಾರವನ್ನು ವಹಿಸಿಕೊಳ್ಳಲಿವೆ. ಹೀಗಾಗಿ ಮನುಷ್ಯರು ಕೌಶಲ ಹಾಗೂ ಮೌಲ್ಯಗಳನ್ನು ಬೆನ್ನುಹತ್ತಬೇಕು’ ಎಂದು ಸ್ಪೇಸ್‌ ಎಕ್ಸ್‌, ಟೆಸ್ಲಾ ಕಂಪನಿಗಳ ಸ್ಥಾಪಕ ಇಲಾನ್ ಮಸ್ಕ್ ಅವರ ಮಾತುಗಳು ಇಡೀ ಜಗತ್ತನ್ನೇ ಬೇರೆ ದಿಕ್ಕಿನೆಡೆ ನೋಡುವಂತೆ ಮಾಡಿದೆ.

ಕೃತಕ ಬುದ್ಧಿಮತ್ತೆ ಎಂಬುದು ಸವಾಲಲ್ಲ, ಅದೊಂದು ಅವಕಾಶ ಎಂದು ಭರವಸೆ ನೀಡುವವರು ಹಲವರು. ಆದರೆ ಮತ್ತೊಂದೆಡೆ ಸದ್ದಿಲ್ಲದೆ ಆವರಿಸಿಕೊಳ್ಳುತ್ತಿರುವ ಈ ತಂತ್ರಜ್ಞಾನದಿಂದ ಉದ್ಯೋಗ ಕಳೆದುಕೊಳ್ಳುತ್ತಿರುವವರು ಒಬ್ಬರೇ, ಇಬ್ಬರೇ... ಇ–ಕಾಮರ್ಸ್‌, ಸೇವಾ ವಲಯ, ಡಯಾಗ್ನಾಸ್ಟಿಕ್ಸ್‌, ಮನರಂಜನೆ ಹಾಗೂ ಮಾಧ್ಯಮದಲ್ಲಿನ ಏಕತಾನತೆಯ ಕೆಲಸಗಳನ್ನು ಕೃತಕ ಬುದ್ಧಿಮತ್ತೆ ಸದ್ದಿಲ್ಲದೆ ಆವರಿಸಿದೆ.

ಈ ಕ್ಷೇತ್ರದ ಕಂಪನಿಗಳು ತಮ್ಮ ನೌಕರರ ಸಂಖ್ಯೆಗಳನ್ನು ಗಣನೀಯವಾಗಿ ತಗ್ಗಿಸುವ, ನೌಕರರ ಜಾಗದಲ್ಲಿ ಯಂತ್ರವನ್ನು ತರುವ ಆಲೋಚನೆ ನಡೆಸಿವೆ. ಇದಕ್ಕೊಂದು ಸ್ಪಷ್ಟ ಉದಾಹರಣೆ ಅಮೆಜಾನ್‌ ಕಂಪನಿಯು 2026ರಲ್ಲಿ 30 ಸಾವಿರ ನೌಕರರನ್ನು ವಜಾಗೊಳಿಸಲು ನಿರ್ಧರಿಸಿರುವ ಸುದ್ದಿ. ಮತ್ತೊಂದೆಡೆ ಕೃತಕ ಬುದ್ಧಿಮತ್ತೆ ವಿರುದ್ಧವೇ ಅಮೆಜಾನ್ ನೌಕರರು ಸಿಡಿದೆದ್ದು ಪ್ರತಿಭಟನೆ ನಡೆಸಿದ್ದು ಈ ಕಾಲದ ವಾಸ್ತವ.

ಅಮೆಜಾನ್ ಮಾತ್ರವಲ್ಲ, ಇಂಥ ನಿರ್ಧಾರ ಕೈಗೊಂಡ ಹಲವು ಸಾಫ್ಟ್‌ವೇರ್‌ ಕಂಪನಿಗಳೂ ಇವೆ. ಇತ್ತೀಚೆಗೆ ಕೆಲಸಕ್ಕೆ ತೆರಳಿದ ನೌಕರರಿಗೆ ಬೆಂಗಳೂರು ಮೂಲದ ಕಂಪನಿಯು, ಮನೆವರೆಗೂ ಹೋಗಲು ತಲಾ ₹1 ಸಾವಿರ ನೀಡಿ, ನಾಳೆಯಿಂದ ಕಂಪನಿಗೆ ಬರಬೇಡಿ ಎಂದು ಕಳುಹಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಸಂಗತಿಗಳು ಜಾಗತಿಕ ಮಟ್ಟದಲ್ಲಿ ಸರ್ವೇ ಸಾಮಾನ್ಯ ಎಂಬಂತಾಗಿದೆ. ಭವಿಷ್ಯದ ಕುರಿತು ಅಪಾರ ಕನಸು ಹೊಂದಿರುವ ವಿದ್ಯಾರ್ಥಿಗಳು ಮಾತ್ರವಲ್ಲ, ಬದುಕು ಕಟ್ಟಿಕೊಳ್ಳಲು ನಿತ್ಯ ಪ್ರಯಾಸಪಡುತ್ತಿರುವ ದುಡಿಯುವ ವರ್ಗ, ನಿವೃತ್ತಿಯ ಅಂಚಿನಲ್ಲಿರುವವರೂ ನೌಕರಿ ಉಳಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ಕಲಿಕೆ ಆರಂಭಿಸಿದ್ದಾರೆ.

ಅಷ್ಟಕ್ಕೂ ಎಐ ಸೃಷ್ಟಿಸಿದ ಆತಂಕ ಎಂಥದ್ದು...?

ಎಐ ಎಂಬುದು ನಿನ್ನೆ ಹುಟ್ಟಿ, ಇಂದು ಮುಗಿಲೆತ್ತರಕ್ಕೆ ಬೆಳೆದು ನಿಂತ ಪೆಡಂಭೂತವಲ್ಲ. ಯಂತ್ರಗಳಿಗೆ ಬುದ್ಧಿ ಕಲಿಸುವ ಕೆಲಸ 1950ರಿಂದಲೂ ಸಾಗುತ್ತಲೇ ಬಂದಿದೆ. ಈ ಹಿಂದೆ ಎರಡು ಬಾರಿ ಕೃತಕ ಬುದ್ಧಿಮತ್ತೆ ತನ್ನ ಪ್ರವೇಶಕ್ಕೆ ಪ್ರಯತ್ನ ಮಾಡಿದರೂ, ಡಿಜಿಟಲ್ ಪರಿಸರ ಅದಕ್ಕೆ ಪೂರಕವಾಗಿಲ್ಲದ ಕಾರಣ ಅದರ ಪ್ರಭಾವ ಅಷ್ಟಾಗಿ ಬಾಧಿಸಿರಲಿಲ್ಲ. ಯಂತ್ರಗಳ ಕೈಗೆ ಬುದ್ಧಿ ನೀಡುವ ಪ್ರಯತ್ನದಲ್ಲಿ 1965ರಲ್ಲಿ ಮೊದಲ ಅಲೆ, 1985ರಲ್ಲಿ ರೊಬೊ ರೂಪದಲ್ಲಿ ಎರಡನೇ ಅಲೆಯಾಗಿ ಅಪ್ಪಳಿಸಿದರೂ, ದೊಡ್ಡಮಟ್ಟದ ಆಘಾತ ಸೃಷ್ಟಿಸುವಲ್ಲಿ ಅವು ವಿಫಲವಾದವು. ಆದರೆ ಅಂತರ್ಜಾಲ ಹಾಗೂ ಸ್ಮಾರ್ಟ್‌ ಫೋನ್‌ ಪ್ರವೇಶವೊಂದು ಡಿಜಿಟಲ್‌ ವಿರಾಟರೂಪ ತೋರಿಸಿದೆ.

ಸ್ಮಾರ್ಟ್‌ಫೋನ್ ಪ್ರವೇಶದೊಂದಿಗೆ ಯಾಹೂ ಹಾಗೂ ಗೂಗಲ್‌ ಸರ್ಚ್‌ ಎಂಜಿನ್‌ಗಳು ಬಹಳಷ್ಟು ಕೆಲಸಗಳನ್ನು ಕಡಿಮೆ ಮಾಡಿದವು. ಆಗಲೂ ಇದೇ ಚರ್ಚೆ. ಕಂಪ್ಯೂಟರ್‌ಗಳು ನೌಕರಿ ಕಸಿದುಕೊಳ್ಳುತ್ತವೆ ಎಂಬುದೇ. ಆದರೆ ಈ ಸರ್ಚ್‌ ಎಂಜಿನ್‌ ಹಾಗೂ ಅಭಿವೃದ್ಧಿಗೊಂಡ ಹಲವು ತಂತ್ರಾಂಶಗಳನ್ನೇ ಅಸ್ತ್ರ ಮಾಡಿಕೊಂಡ ತಂತ್ರಜ್ಞರು, ಆ ಮೂಲಕವೇ ಉದ್ಯೋಗ ಕಂಡುಕೊಂಡರು. ಉದ್ಯೋಗ ಸೃಜಿಸಿದರು. ಅಬಾಲವೃದ್ಧರಾದಿಯಾಗಿ ಏನು ಬೇಕಿದ್ದರೂ ಗೂಗಲ್‌ ಅನ್ನು ಕೇಳು ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನಕ್ಕೆ ಸಮಾಜ ಇಂದು ಒಗ್ಗಿಕೊಂಡಿದೆ.

ಒಂದು ಕೇಳಿದರೆ 5 ಕೋಟಿ ಉತ್ತರಗಳನ್ನು ನೀಡುವ ಸಾಮರ್ಥ್ಯವಿರುವ ಗೂಗಲ್‌ ಸರ್ಚ್‌ ಮೂಲಕ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಹೊರೆ ಸದ್ಯ ಬಳಕೆದಾರರದ್ದು. ಆದರೆ ಮಾಹಿತಿ ನೀಡಿದರಷ್ಟೇ ಸಾಲದು, ಅದನ್ನು ಆಳದಲ್ಲಿ ಶೋಧಿಸಿ, ನನಗೇನು ಬೇಕು ಎಂಬುದನ್ನು ಅರಿತು, ವಿಶ್ಲೇಷಿಸಿ, ಸಂಸ್ಕರಿಸಿ ನೀಡುವ ಹೊಣೆಯನ್ನು ಈಗ ಎಐ ನಿಭಾಯಿಸುತ್ತಿದೆ. ಹೀಗಾಗಿ ಕೈಗಾರಿಕಾ ಕ್ರಾಂತಿಯ ನಂತರದಲ್ಲಿ ಮನುಷ್ಯರ ಜೀವನಮಟ್ಟ ಉತ್ತಮಪಡಿಸುವಲ್ಲಿ ದೊಡ್ಡ ಪರಿವರ್ತನೆಯನ್ನು ಎಐ ತರಲಿದೆ ಎಂದು ಇಡೀ ಜಗತ್ತೇ ಹೇಳುತ್ತಿದೆ.

ಇದರ ಪ್ರವೇಶದಿಂದ ರೋಗ ಪತ್ತೆ ಹಿಂದಿಗಿಂತಲೂ ಬೇಗ ಆಗುತ್ತಿದೆ. ಮಳೆ ಹಾಗೂ ಹವಾಮಾನ ವರದಿಗಳು, ಚಂಡ ಮಾರುತದ ಮಾಹಿತಿ ತ್ವರಿತವಾಗಿ ಮತ್ತು ನಿಖರವಾಗಿ ಲಭ್ಯವಾಗುತ್ತಿದೆ. ಶಿಕ್ಷಣ ಹಾಗೂ ಕಲಿಕೆ ಹಿಂದೆಂದಿಗಿಂತಲೂ ಪರಿಣಾಮಕಾರಿಯಾಗಿದೆ. ಮಾಧ್ಯಮಗಳಲ್ಲಿ ಸರ್ಚ್ ಎಂಜಿನ್‌ ಆಪ್ಟಿಮೈಸೇಷನ್‌ ಉತ್ತಮವಾಗುತ್ತಿರುವುದರಿಂದ ಸುದ್ದಿಗಳು ತ್ವರಿತವಾಗಿ ಜನರ ಕೈಯಲ್ಲಿರುವ ಸಾಧನಗಳನ್ನು ತಲುಪುತ್ತಿವೆ. ಹೀಗೆ ಒಂದೇ ಎರಡೇ. ಮನುಷ್ಯರನ್ನು ಅರ್ಥ ಮಾಡಿಕೊಳ್ಳುತ್ತಿರುವ ಯಂತ್ರಗಳು ಅತಿ ವೇಗದಲ್ಲಿ ತಮ್ಮನ್ನು ತಾವು ಉತ್ತಮಪಡಿಸಿಕೊಳ್ಳುತ್ತಾ ಸಾಗುತ್ತಿವೆ. ಜತೆಗೆ ಮನುಷ್ಯರ ಜೀವನದ ಗುಣಮಟ್ಟವನ್ನೂ ಉತ್ತಮಪಡಿಸುತ್ತಿದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲ.

ಹಾಗಿದ್ದರೆ ಮನುಷ್ಯರಿಗಿಂತ ಎಐ ಬುದ್ಧಿ ಚುರುಕೇ...?

‘ಹಿಂದೆ ಮೊಬೈಲ್ ಇಲ್ಲದ ಕಾಲವೊಂದಿತ್ತು. ಸ್ಥಿರ ದೂರವಾಣಿಗಳು ಇದ್ದ ಸಂದರ್ಭದಲ್ಲಿ ಬಹಳಷ್ಟು ಜನರ ಫೋನ್‌ ಸಂಖ್ಯೆಗಳನ್ನು ಬಾಯಲ್ಲೇ ಹೇಳುವಷ್ಟು ಸಾಮರ್ಥ್ಯ ಬಹುತೇಕರಿಗಿತ್ತು. ಯಾರ ಫೋನ್ ಸಂಖ್ಯೆ ಕೇಳಿದರೂ ಮಕ್ಕಳು ಪಟಪಟನೆ ಹೇಳುತ್ತಿದ್ದರು. ಈಗ ಅಪ್ಪ, ಅಮ್ಮನ ಫೋನ್‌ ಸಂಖ್ಯೆಯನ್ನೇ ಪದೇ ಪದೇ ನೆನಪಿಸುವಷ್ಟರ ಮಟ್ಟಿಗೆ ಸುಲಭ ಸೌಕರ್ಯಗಳ ದಾಸರಾಗಿದ್ದೇವೆ’ ಎಂದು ಇನ್ನರ್‌ವರ್ಸ್‌ ಟೆಕ್‌ನ ಸಿಇಒ ಹಾಗೂ ಸಹ ಸಂಸ್ಥಾಪಕ ಕೆ.ಆರ್. ಶಿವರಾಮ್‌ ಹೇಳುತ್ತಾರೆ.

ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಕಳೆದ ಎರಡು ದಶಕಗಳಿಂದ ಕೆಲಸ ಮಾಡುತ್ತಿರುವ ಅವರು, ಕೃತಕ ಬುದ್ಧಿಮತ್ತೆ ಇಡೀ ಜಗತ್ತನ್ನೇ ಆವರಿಸುತ್ತದೆ ಎಂಬ ಮಾತನ್ನು ಒಪ್ಪುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆಯನ್ನು ಕಲಿಯದಿದ್ದರೆ ಅವಕಾಶದಲ್ಲಿ ಹಿಂದೆ ಬೀಳುವುದಂತೂ ಖಂಡಿತಾ ಎಂಬ ಎಚ್ಚರಿಕೆಯನ್ನೂ ನೀಡುತ್ತಾರೆ.

‘ಕೃತಕ ಬುದ್ಧಿಮತ್ತೆ ಮೂಲಕ ‘ಹ್ಯೂಮನ್‌ 2.0‘ ಅಂದರೆ ಮನುಷ್ಯರ ಎರಡನೇ ಆವೃತ್ತಿ ಆರಂಭವಾಗಿದೆ. ಇಲ್ಲಿ ಕಲಿತು ಪರಿಣಿತರಾದ ಪ್ರತಿಯೊಬ್ಬ ವ್ಯಕ್ತಿಯೂ ಒಂದು ಶತಕೋಟಿ ಡಾಲರ್‌ ಕಂಪನಿಯ ಒಡೆಯನಾಗಲು ಸಾಧ್ಯ. ಹಾಗೆಯೇ ‘ಶೋಧಿಸು’ ಮತ್ತು ‘ಹುಡುಕು’ ಪ್ರಕ್ರಿಯೆಯಿಂದ ‘ಕೇಳು’ ಮತ್ತು ‘ಉತ್ಪಾದಿಸು’ ಎಂಬ ಯುಗಕ್ಕೆ ನಾವು ಪರಿವರ್ತನೆಗೊಂಡಿದ್ದೇವೆ.

ಇದನ್ನು ಸದುಪಯೋಗಪಡಿಸಿಕೊಂಡಿದ್ದೇ ಆದಲ್ಲಿ ಜಗತ್ತು ಮತ್ತೊಂದು ಎತ್ತರಕ್ಕೆ ಏರಲಿದೆ. ಡಾರ್ವಿನ್‌ನ ವಿಕಾಸವಾದದಲ್ಲಿ ಹೇಳಿರುವಂತೆ, ಇಲ್ಲಿ ಬಲಿಷ್ಠರಷ್ಟೇ (ಕೃತಕ ಬುದ್ಧಿಮತ್ತೆಯ ಜ್ಞಾನ ಮತ್ತು ಸೃಜನಶೀಲತೆ) ಉಳಿಯಲಿದ್ದಾರೆ’ ಎನ್ನುವುದು ಶಿವರಾಂ ಅವರ ಲೆಕ್ಕಾಚಾರ.

ಮೇಧಶಕ್ತಿಯ ಈ ಕ್ರಾಂತಿಯಿಂದ ಭಾರತ, ಜಗತ್ತಿನ ಹೊಸ ರೂಪ

ಕಳೆದ ಒಂದು ದಶಕದಲ್ಲಿ ಆಗಿರುವ ಬದಲಾವಣೆಯನ್ನು ಗಮನಿಸಿದರೆ ಕೃತಕ ಬುದ್ಧಿಮತ್ತೆ ಎಂಬುದು ವೈಜ್ಞಾನಿಕ ಕುತೂಹಲ ಎಂದು ನೋಡುವುದಕ್ಕಿಂತ ಹೆಚ್ಚಾಗಿ ನಾಗರಿಕತೆಯನ್ನೇ ಹೊಸ ರೂಪದೊಂದಿಗೆ ಪರಿವರ್ತಿಸುವ ಸಲಕರಣೆಯಾಗಿ ಹೊರಹೊಮ್ಮಿದೆ. ಆರ್ಥಿಕತೆಯನ್ನೇ ಬದಲಾಯಿಸಿದೆ, ಉದ್ಯೋಗ ಕ್ಷೇತ್ರವನ್ನೇ ಮರು ವ್ಯಾಖ್ಯಾನಿಸಿದೆ. ಮನುಷ್ಯನ ಸೃಜನಶೀಲತೆಗೆ ಹೊಸ ಭಾಷ್ಯ ಬರೆದಿದೆ. ಹೀಗಾಗಿ ಎಐ ಎಂಬುದು ಯಂತ್ರದೊಳಗೆ ಕಾಣದೆ ಕೂತು ಕೆಲಸ ಮಾಡುವ ಒಂದು ಸಲಕರಣೆಯಷ್ಟೇ ಅಲ್ಲ, 21ನೇ ಶತಮಾನದ ಪ್ರಮುಖ ಪಾತ್ರಧಾರಿ ಎಂದರೆ ತಪ್ಪಾಗದು ಎಂದೆನ್ನುತ್ತಾರೆ ಎಐ ಕ್ಷೇತ್ರದಲ್ಲೇ ಆಳವಾಗಿ ಅಧ್ಯಯನ ನಡೆಸಿರುವ ಡಾ. ಮದನ ಕುಮಾರ್ ಶ್ರೀನಿವಾಸನ್.

‘ಹುಡುಕಾಟ, ಮುಂದಾಲೋಚನೆ, ತರ್ಕ ಮತ್ತು ಹೊಸದರ ಸೃಷ್ಟಿ ಇವೆಲ್ಲವೂ ಕೃತಕ ಬುದ್ಧಿಮತ್ತೆಯ ಮುಂದುವರಿದ ಭಾಗವಾದ ಡೀಪ್‌ ಲರ್ನಿಂಗ್‌ನಿಂದ ಸಾಧ್ಯವಾಗಿದೆ. ಏಕೆಂದರೆ ಅಪಾರವಾದ ಮಾಹಿತಿಯನ್ನು ಓದಿ, ಅದರಲ್ಲಿರುವ ಪೂರಕ ಮಾಹಿತಿಯನ್ನು ಹೆಕ್ಕಿ, ಅದನ್ನು ವಿಶ್ಲೇಷಿಸಿ ನೀಡುವುದು ಮನುಷ್ಯರಿಂದ ಕೆಲವೇ ನಿಮಿಷಗಳಲ್ಲಿ ಅಸಾಧ್ಯ. ಅದನ್ನು ಸಾಧ್ಯವಾಗಿಸಿದ್ದು ಎಐ. ಕೃತಕ ಬುದ್ಧಿಮತ್ತೆ ಎಂಬುದರ ಉದಯವು ಕೇವಲ ತಾಂತ್ರಿಕ ಪ್ರಗತಿಯಷ್ಟೇ ಅಲ್ಲ, ಅದೊಂದು ಸಾಮಾಜಿಕ ಬದಲಾವಣೆಗೆ ಕಾರಣವೂ ಹೌದು. ಭವಿಷ್ಯದಲ್ಲಿ ಅಸಾಧಾರಣ ಅವಕಾಶಗಳನ್ನು ಸೃಷ್ಟಿಸಬಹುದಾದ ಈ ಸಲಕರಣೆ, ಬೆದರಿಕೆಯನ್ನೂ ಒಡ್ಡುತ್ತಿದೆ’ ಎನ್ನುವುದು ಅವರ ಎಚ್ಚರಿಕೆಯ ನುಡಿ.

ಎಐ ಚಿತ್ರ: ಕಣಕಾಲಮಠ

₹4 ಲಕ್ಷ ಕೋಟಿ ವಹಿವಾಟು ನಡೆಸಲಿರುವ ಜನರೇಟಿವ್ ಎಐ

ಕೃತಕ ಬುದ್ಧಿಮತ್ತೆ ಎಂಬ ಮಾರುಕಟ್ಟೆಯು 2030ರ ಹೊತ್ತಿಗೆ ₹1.62 ಲಕ್ಷ ಕೋಟಿಯಷ್ಟು ದೊಡ್ಡ ಮಾರುಕಟ್ಟೆಯಾಗಿ ಬೆಳೆಯಲಿದೆ. ಇದು ಜಾಗತಿಕ ಜಿಡಿಪಿಗೆ ₹14 ಲಕ್ಷ ಕೋಟಿಯಷ್ಟು ಕೊಡುಗೆ ನೀಡಲಿದೆ. ಜನರೇಟಿವ್‌ ಎಐ ಎಂಬ ಕ್ಷೇತ್ರವು ವಾರ್ಷಿಕ ₹2.3 ಲಕ್ಷ ಕೋಟಿಯಿಂದ ₹3.9 ಲಕ್ಷ ಕೋಟಿಯಷ್ಟು ವಹಿವಾಟು ನಡೆಸಲಿದೆ ಎಂದೇ ಅಂದಾಜಿಸಲಾಗಿದೆ. ಅಂದರೆ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲೇ ಹೊಸ ಶೆಕೆ ಆರಂಭವಾಗಲಿದೆ. ಕೋಡಿಂಗ್, ಟೆಸ್ಟಿಂಗ್, ಗ್ರಾಹಕರ ಬೆಂಬಲ, ಅನಲಿಟಿಕ್ಸ್‌ ಮತ್ತು ಹಣಕಾಸು ವ್ಯವಹಾರಗಳೂ ಸ್ವಯಂ ಚಾಲಿತವಾಗಲಿವೆ’ ಎನ್ನುವುದು ಅವರ ಅಂದಾಜು.

ಭಾರತದ ಐಟಿ ದಿಗ್ಗಜ ಕಂಪನಿಗಳಾದ ಟಿಸಿಎಸ್‌, ಇನ್ಫೊಸಿಸ್‌, ವಿಪ್ರೊ, ಎಚ್‌ಸಿಎಲ್‌ನಂತಹ ಕಂಪನಿಗಳೂ ಈಗ ಕೃತಕ ಬುದ್ಧಿಮತ್ತೆ ಆಧಾರಿತ ಕಾರ್ಯಚಟುವಟಿಕೆಗಳನ್ನು ತಮ್ಮೆಲ್ಲಾ ವಿಭಾಗಗಳಲ್ಲೂ ಅಳವಡಿಸಿಕೊಳ್ಳಲಿವೆ. ಐಟಿ ಸೇವಾ ಕಂಪನಿಗಳಾಗಿದ್ದ ಇವುಗಳು ಜಾಗತಿಕ ಎಐ ಕೇಂದ್ರಗಳಾಗಿ ಪರಿವರ್ತನೆ ಹೊಂದಲಿವೆ.

‘ಹಾಗಾದರೆ ಕೃತಕ ಬುದ್ಧಿಮತ್ತೆ ಸರ್ವಾಂತರ್ಯಾಮಿಯಾಗಲಿದೆ ಎಂಬ ಮಾತೂ ನಿಜವಲ್ಲ. ಏಕೆಂದರೆ ವ್ಯಕ್ತಿಯ ಸೃಜನಶೀಲತೆ ಎಂಬುದು ಕೃತಕ ಬುದ್ಧಿಮತ್ತೆಗಿಂತಲೂ ಹೆಚ್ಚು ಬೇಡಿಕೆಯುಳ್ಳ ಕ್ಷೇತ್ರವಾಗಿದೆ. ಇದು ಈಗಾಗಲೇ ₹2.7 ಲಕ್ಷ ಕೋಟಿಯಷ್ಟು ವ್ಯವಹಾರ ಹೊಂದಿದೆ. ಸೃಜನಶೀಲತೆಗೆ ಕೃತಕ ಬುದ್ಧಿಮತ್ತೆಯ ಬಲ ಸಿಕ್ಕರೆ ಉದ್ಯಮಗಳ ಜಿಗಿತ ನೂರ್ಮಡಿಯಾಗಲಿದೆ’ ಎಂಬುದು ಮದನ್ ಅವರ ಲೆಕ್ಕಾಚಾರ.

‘ಸದ್ಯದ ತಂತ್ರಜ್ಞಾನ ಜಗತ್ತಿನಲ್ಲಿ ಜ್ಞಾನಕ್ಕೆ ಸಂಬಂಧಿಸಿದ ಶೇ 60ರಿಂದ ಶೇ 70ರಷ್ಟು ಕೆಲಸಗಳು ಕೃತಕ ಬುದ್ಧಿಮತ್ತೆಯನ್ನೇ ಆಧರಿಸಿದೆ. ಇದು ಕಾನೂನು ಕ್ಷೇತ್ರದಿಂದ ಔಷಧ ಕ್ಷೇತ್ರದವರೆಗೂ ವ್ಯಾಪಿಸಿದೆ. ಒಬ್ಬ ಶತಕೋಟಿ ಉದ್ದಿಮೆದಾರನಾಗುವುದರಿಂದ ಹಿಡಿದು, ಎಐ ಮನೋವಿಜ್ಞಾನಿ, ಆರೋಗ್ಯ, ಔಷಧ, ಲೆಕ್ಕಪರಿಶೋಧನೆ, ಕಾನೂನು, ತಯಾರಿಕೆ ಕ್ಷೇತ್ರ ಮತ್ತು ಸಾರಿಗೆ, ಶಿಕ್ಷಣವನ್ನು ಸಾಮರ್ಥ್ಯಕ್ಕೆ ಪರಿವರ್ತಿಸಬಲ್ಲ ಸಾಧನವಾಗಿಯೂ ಇದು ರೂಪುಗೊಳ್ಳಲಿದೆ’ ಎನ್ನುವರು.

ಕೃತಕ ಬುದ್ಧಿಮತ್ತೆ ಹೇಗೆಲ್ಲಾ ನೆರವಾಗಬಹುದು...?

ಮನುಷ್ಯನ ಕಲಿಕೆಯ ಗುಣಗಳಾದ ಓದು, ತರ್ಕಶಕ್ತಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಗುಣ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನೇ ಆಧರಿಸಿ ಕೃತಕ ಬುದ್ಧಿಮತ್ತೆಯನ್ನು ತಂತ್ರಜ್ಞರು ಅಭಿವೃದ್ಧಿಪಡಿಸಿದ್ದಾರೆ. ಉದ್ಯಮಗಳಲ್ಲಿ ಇದರ ಬೆಳವಣಿಗೆ ಮತ್ತು ಅಳವಡಿಕೆಯು ಒಂದೆಡೆ ಆಶಾವಾದ ಹಾಗೂ ಮತ್ತೊಂದೆಡೆ ಆತಂಕವನ್ನು ಉಂಟು ಮಾಡಿದೆ. ಸಾಮಾಜಿಕ, ಆರ್ಥಿಕ ಮತ್ತು ಆಡಳಿತದ ಮೇಲೂ ಪರಿಣಾಮ ಬೀರಬಹುದು ಎಂಬ ಪ್ರಶ್ನೆ ಮೂಡಿಸಿದೆ ಎಂದು ಲಂಡನ್‌ನಲ್ಲಿ ನೆಲೆಸಿರುವ ಮೈಂಡ್‌ ಡೈನಾಮಿಕ್ಸ್‌ ಇಂಟರ್‌ನ್ಯಾಷನಲ್‌ ಕಂಪನಿಯ ನಿರ್ದೇಶಕ ಹಾಗೂ ಕೃತಕ ಬುದ್ಧಿಮತ್ತೆ ವಿಷಯದಲ್ಲಿ ಸಂಶೋಧನೆ ನಡೆಸುತ್ತಿರುವ ಹುಬ್ಬಳ್ಳಿ ಮೂಲದ ವಿವೇಕ್ ತೋಂಟದಾರ್ಯ ಹಾಗೂ ಅವರ ಪತ್ನಿ ವೀಣಾ ಯಸ್ಲೂರ್ ಅವರ ಅನಿಸಿಕೆ.

ವಿವಿಧ ಕ್ಷೇತ್ರಗಳನ್ನು ಗಮನಿಸುವುದಾದರೆ, ಕೃತಕ ಬುದ್ಧಿಮತ್ತೆ ಅಳವಡಿಸಿಕೊಳ್ಳುವುದರಿಂದ ಆರೋಗ್ಯ ಕ್ಷೇತ್ರದಲ್ಲಿ ತ್ವರಿತ ಮತ್ತು ನಿಖರ ಚಿಕಿತ್ಸೆ ಸಾಧ್ಯ. ಹಣಕಾಸು ಕ್ಷೇತ್ರದಲ್ಲಿ ವಂಚನೆ ಮತ್ತು ಅಪಾಯಗಳನ್ನು ಬೇಗನೆ ಗುರುತಿಸಿ ಸೋರಿಕೆ ತಡೆಗಟ್ಟಬಹುದು. ಕಾನೂನು ಕ್ಷೇತ್ರದಲ್ಲಿ ಪ್ರಕರಣದ ಅಧ್ಯಯನ, ದಾಖಲಾತಿ ತ್ವರಿತವಾಗಿ ಆಗಲಿದೆ. ಮಷಿನಲ್ ಲರ್ನಿಂಗ್ ಮೂಲಕ ನೂರಾರು ಪುಟಗಳ ದಾಖಲೆಗಳನ್ನು ಕೆಲವೇ ಕ್ಷಣಗಳಲ್ಲಿ ಓದಿ ಸಂಕ್ಷಿಪ್ತವಾಗಿ ವಿವರಿಸಲು ಸಾಧ್ಯವಿದೆ. ತಯಾರಿಕಾ ವಲಯ, ಸಾರಿಗೆ ಮತ್ತು ಸಂಶೋಧನಾ ಕ್ಷೇತ್ರ, ಸ್ವಯಂ ಚಾಲಿತ ವಾಹನ, ಡ್ರೋನ್‌ಗಳ ನಿರ್ವಹಣೆಯಿಂದ ರಕ್ಷಣಾ ಇಲಾಖೆಗೂ ನೆರವಾಗಲಿದೆ. ಶಿಕ್ಷಣ, ಮಾಧ್ಯಮಗಳಲ್ಲೂ ಇದರ ಬಳಕೆ ಪರಿಣಾಮಕಾರಿ.

ವಾರ್ಷಿಕ 250 ಶತಕೊಟಿ ಡಾಲರ್‌ನಷ್ಟು ವಹಿವಾಟನ್ನು ಭಾರತದ ಐಟಿ ಮತ್ತು ಬಿಪಿಒ ಕ್ಷೇತ್ರ ಹೊಂದಿದೆ. ಇದರ ಹಲವು ವಿಭಾಗಗಳು ಕೃತಕ ಬುದ್ಧಿಮತ್ತೆಯಿಂದ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬಹುದು. ಆದರೆ ಕೃತಕ ಬುದ್ಧಿಮತ್ತೆಯಿಂದ ಉದ್ಯಮ, ಉದ್ಯೋಗ ಹಾಗೂ ಸಮಾಜದಲ್ಲಿ ಬಹಳಷ್ಟು ಉತ್ತಮ ಬದಲಾವಣೆಗಳಾಗಲಿವೆ’ ಎನ್ನುವುದು ಅವರ ಮಾತು.

ಎಐನಿಂದ ಉಂಟಾಗಬಹುದಾದ ಅಪಾಯಗಳೇನು?

ಅತಿ ಹೆಚ್ಚು ವಾಟ್ಸ್‌ಆ್ಯಪ್‌ ಬಳಕೆದಾರರು ಭಾರತದಲ್ಲಿದ್ದಾರೆ. ಕಾರ್ಪೊರೇಟ್ ಕಂಪನಿಗಳು ಮಾಧ್ಯಮಗಳ ಮಾಲೀಕತ್ವ ಹೊಂದಿವೆ. ಧರ್ಮಾಧಾರಿತ ಸಂಘರ್ಷಗಳು ಸಾಮಾನ್ಯ ಎಂಬಂತಾಗಿದೆ. ಡಿಜಿಟಲ್ ಜ್ಞಾನ ಇನ್ನೂ ವ್ಯಾಪಿಸಬೇಕಿದೆ. ಇಂಥ ಪರಿಸ್ಥಿತಿಯಲ್ಲಿ ಸುಳ್ಳು ಮಾಹಿತಿ ಹರಡಲು ಕೃತಕ ಬುದ್ಧಿಮತ್ತೆ ಬಳಸುವ ಅಪಾಯ ದೊಡ್ಡದಾಗಿದೆ.

ಮನುಷ್ಯರೇ ತಮ್ಮ ಕೆಲಸಗಳನ್ನು ಯಂತ್ರಗಳಿಗೆ ಒಪ್ಪಿಸಿದರೆ ಏಕಾಗ್ರತೆ, ಹೊಸ ಆಲೋಚನೆ, ತಮ್ಮದೇ ಆದ ರಚನಾತ್ಮಕ ಕೆಲಸಗಳು ಮರೆಯಾಗುವ ಅಪಾಯವಿದೆ.

ತಯಾರಿಕೆ, ಚಿಲ್ಲರೆ, ಸರಕು ಸಾಗಣೆ ಮತ್ತು ಬಿಪಿಒ ಮಾದರಿಯ ಏಕತಾನತೆಯುಳ್ಳ ನೌಕರಿಗಳನ್ನು ಕೃತಕ ಬುದ್ಧಿಮತ್ತೆ ಆವರಿಸಲಿದೆ. ಇದರಿಂದ ಉದ್ಯೋಗಗಳ ಸ್ವರೂಪ ಬದಲು ಹಾಗೂ ಅಸಮಾನತೆ ಸೃಷ್ಟಿಯಾಗಲಿದೆ.

ಕೃತಕ ಬುದ್ಧಿಮತ್ತೆಗೆ ಸಂಬಂಧಿಸಿದಂತೆ ಜಗತ್ತಿನ ವಿವಿಧ ರಾಷ್ಟ್ರಗಳು ತಮ್ಮದೇ ಆದ ನೀತಿಯನ್ನು ಹೊಂದಿವೆ. ಇದರಲ್ಲಿ ಬ್ರಿಟನ್‌ ಮತ್ತು ಐರೋಪ್ಯ ಒಕ್ಕೂಟದಲ್ಲಿ ಎಐ ಸಮಿತಿ ಹಾಗೂ ಸಿಡಿಇಐ ಎಂಬುದು ನೈತಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕುರಿತು ಹೇಳುತ್ತದೆ. ಐರೋಪ್ಯ ಒಕ್ಕೂಟದ ಡಿಜಿಟಲ್ ಸೇವಾ ಕಾಯ್ದೆಯಡಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲು ಇದರಲ್ಲಿ ಅವಕಾಶವಿದೆ.

‘ಎಲ್ಲರಿಗೂ ಎಐ’ ಎಂಬ ದೂರದೃಷ್ಟಿಯನ್ನು ಭಾರತದ ನೀತಿ ಆಯೋಗ ಪ್ರಕಟಿಸಿದೆ. ಸಮಾನವಾದ ಬೆಳವಣಿಗೆ ಮತ್ತು ಜವಾಬ್ದಾರಿಯುತ ಬಳಕೆಗೆ ಇದರಲ್ಲಿ ಒತ್ತು ನೀಡಲಾಗಿದೆ.

ಹೀಗಾಗಿ ಭವಿಷ್ಯವು ಅಲ್ಗಾರಿದಮ್‌ ಮೇಲಲ್ಲ, ಮನುಷ್ಯನ ಆಲೋಚನಾ ಶಕ್ತಿಯ ಮೇಲೆ, ನೈತಿಕತೆ ಮತ್ತು ಆಡಳಿತದ ಮೇಲೆ ಅವಲಂಬಿತವಾಗಿದೆ. ಭವಿಷ್ಯದ ಪೀಳಿಗೆಯು ತಮ್ಮ ಆಲೋಚನಾ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರ ಜತೆಗೆ, ನೈತಿಕತೆ, ವ್ಯವಸ್ಥೆ ಕುರಿತು ಕಲ್ಪನೆ ಹೊಂದಿದಲ್ಲಿ, ತಮ್ಮಲ್ಲಿರುವ ಜ್ಞಾನದ ಜತೆಗೆ, ಪೂರಕವಾದ ಮತ್ತೊಂದು ಕ್ಷೇತ್ರದ ಜ್ಞಾನವನ್ನೂ ಹೊಂದಿರಬೇಕಾದ್ದು ಕಡ್ಡಾಯ. 

ಎಐ, ಜನರೇಟಿವ್ ಎಐ ಏನೇ ಬಂದರೂ ಕಸಿದುಕೊಳ್ಳಲಾಗದ ಉದ್ಯೋಗಗಳನ್ನೂ ತಂತ್ರಜ್ಞರು ಪಟ್ಟಿ ಮಾಡಿದ್ದಾರೆ. ತಜ್ಞ ವ್ಯಕ್ತಿಯ ಅಗತ್ಯವಿರುವ ವೈದ್ಯರು, ಶಸ್ತ್ರಚಿಕಿತ್ಸಕರು, ದುರಸ್ತಿ ಕೆಲಸ ಮಾಡುವವರು, ಸ್ವಾಸ್ಥ್ಯ ಮತ್ತು ಆರೈಕೆ ಕ್ಷೇತ್ರದಲ್ಲಿ ಕೆಲಸ ಮಾಡುವವರ ಅಗತ್ಯ ಸದಾ ಇದ್ದೇ ಇರುತ್ತದೆ.

ಆಹಾರ, ದೂರದೃಷ್ಟಿ, ಸೂಕ್ತ ನಿರ್ಧಾರ ಮತ್ತು ಸಂಬಂಧ ಈ ಮೂರು ವಿಷಯಗಳನ್ನು ನಿರ್ವಹಿಸುವ ವೃತ್ತಿಗಳಾದ ಕೃಷಿ, ಸ್ಟ್ರಾಟಜಿಸ್ಟ್‌, ಕ್ಲೈಂಟ್‌ ಮ್ಯಾನೇಜ್ಮೆಂಟ್‌, ಕ್ರಿಯೇಟಿವ್ ಲೀಡರ್‌ಶಿಪ್‌, ಶಿಕ್ಷಕರು, ಮಾರ್ಗದರ್ಶಕರು ಇವು ಇದ್ದೇ ಇರುತ್ತವೆ.

ಕಂಪನಿಗಳು ಅಳಿದರೂ ತಂತ್ರಜ್ಞಾನ ಉಳಿಯಲಿದೆ

3ರಿಂದ 6 ತಿಂಗಳ ಒಳಗಾಗಿ ಶೇ 90ರಷ್ಟು ಕೋಡಿಂಗ್ ಕೆಲಸವನ್ನು ಎಐ ವಹಿಸಿಕೊಳ್ಳಲಿದೆ ಎಂದಿದ್ದ (ಮಾರ್ಚ್‌ 2025) ಆಂಥ್ರೊಪಿಕ್ ಸಿಇಒ ಡೇರಿಯೊ ಅಮೋಡಿ ಅವರ ಮಾತು ಈವರೆಗೂ ನಡೆದಿಲ್ಲ. ಒಂದೊಮ್ಮೆ ಅವರ ಮಾತುಗಳು ನಿಜವಾಗಿದ್ದರೆ 6 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಟಿಸಿಎಸ್‌ ಈವರೆಗೂ 4.4 ಲಕ್ಷ ನೌಕರರನ್ನು ವಜಾಗೊಳಿಸಬೇಕಿತ್ತು. ಆದರೆ ಈವರೆಗೂ ಕಂಪನಿ 12 ಸಾವಿರ ನೌಕರರನ್ನು ಮಾತ್ರ ತೆಗೆದುಹಾಕಿದೆ ಎಂಬುದು ತಂತ್ರಜ್ಞಾನ ಪಂಡಿತರ ಲೆಕ್ಕಾಚಾರ.

ಚಾಟ್‌ಜಿಪಿಟಿ ಪ್ರವೇಶದ ನಂತರ ಕೃತಕ ಬುದ್ಧಿಮತ್ತೆ ಎಂಬ ಅತ್ಯಾಧುನಿಕ ತಂತ್ರಜ್ಞಾನವು ಸಾಕಷ್ಟು ಸದ್ದು ಮಾಡುತ್ತಿದೆ. ಬಹಳಷ್ಟು ಕಂಪನಿಗಳು ಮುನ್ನೆಲೆಗೆ ಬಂದಿವೆ. ಸಿಇಒಗಳೂ ಸಾಕಷ್ಟು ದೊಡ್ಡ ವಾಗ್ದಾನಗಳನ್ನು ಮಾಡುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯೂ ಈಗ ಉತ್ತುಂಗದಲ್ಲಿದೆ. ಡಾಟಾ ಸೆಂಟರ್‌, ಸರ್ವರ್‌ ಇತ್ಯಾದಿಗಳನ್ನು ಒಳಗೊಂಡು ಮೂಲಸೌಕರ್ಯಕ್ಕೆ 2018ರಲ್ಲಿ 100 ಶತಕೋಟಿ ಅಮೆರಿಕನ್‌ ಡಾಲರ್‌ ಹೂಡಿಕೆ ಕಂಡಿದ್ದ ಈ ಉದ್ಯಮ, 2026ರ ಹೊತ್ತಿಗೆ 500 ಶತಕೋಟಿ ಡಾಲರ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಇದರಿಂದ ಈವರೆಗೂ ಬಂದ ಆದಾಯ 12 ಶತಕೋಟಿ ಡಾಲರ್‌ ಮಾತ್ರ ಎಂಬುದು ಬೆರಗು ಮೂಡಿಸುತ್ತಿದೆ.

90ರ ದಶಕದ ಜೈವಿಕ ತಂತ್ರಜ್ಞಾನ, 2000ದಲ್ಲಿ ಮುನ್ನೆಲೆಗೆ ಬಂದ ಇಂಟರ್‌ನೆಟ್‌, 2008ರಲ್ಲಿ ಉಂಟಾಗಿದ್ದ ಬ್ಯಾಂಕಿಂಗ್‌ ಕ್ಷೇತ್ರ ಹಾಗೂ ಈಗಿನ ಕೃತಕ ಬುದ್ಧಿಮತ್ತೆವರೆಗೂ ನೀರ್ಗುಳ್ಳೆಗಳು ಏಳುತ್ತಲೇ ಇವೆ. ಆಯಾ ಸಂದರ್ಭದಲ್ಲಿ ಅವುಗಳು ಸಾಕಷ್ಟು ಸದ್ದು ಮಾಡುತ್ತವೆ. ಯೋಜನೆಗಳೇ ಇಲ್ಲದೆ ಹಲವು ಕಂಪನಿಗಳು ಹುಟ್ಟಿಕೊಳ್ಳುತ್ತವೆ. ಬಹಳಷ್ಟು ಉದ್ಯಮಿಗಳು ಹಣ ಹೂಡುತ್ತಾರೆ. ಅಂತಿಮವಾಗಿ ಗುಳ್ಳೆ ಒಡೆಯುತ್ತದೆ. ಹುಸಿ ಕಂಪನಿಗಳು ದಿವಾಳಿಯಾಗುತ್ತವೆ. ಆದರೆ ಜೈವಿಕ ತಂತ್ರಜ್ಞಾನದಿಂದ ಕೃತಕ ಬುದ್ಧಿಮತ್ತೆವರೆಗೂ ತಂತ್ರಜ್ಞಾನ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಅವುಗಳಿಗೆ ಮೂಲಧಾತುವಾದ ಸೃಜನಶೀಲತೆ ಎಂಬುದಷ್ಟೇ ಸತ್ಯ ಎಂಬುದು ಅಮೆಜಾನ್‌ ಕಂಪನಿಯ ಮುಖ್ಯಸ್ಥ ಜೆಫ್‌ ಬೆಜೋಸ್ ಅವರ ಮಾತು.

ಉದ್ಯೋಗ ನಷ್ಟ– ಗೋಲ್ಡ್‌ಮನ್‌ ಸ್ಯಾಕ್ಸ್ ವರದಿ

ಕೃತಕ ಬುದ್ಧಿಮತ್ತೆ ಪ್ರವೇಶದಿಂದ ಕೆಲ ಉದ್ಯೋಗಗಳು ರದ್ದಾಗಲಿವೆ. ಇನ್ನೂ ಕೆಲವು ಹುದ್ದೆಗಳನ್ನು ಸೃಜಿಸಲಿವೆ. ಯಾವೆಲ್ಲಾ ಕ್ಷೇತ್ರಗಳನ್ನು ಬಾಧಿಸಲಿದೆ ಎಂದು ಅಮೇರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವೆಗಳ ಸಂಸ್ಥೆ ಗೋಲ್ಡ್‌ಮನ್‌ ಸ್ಯಾಕ್ಸ್‌ ತನ್ನ ವರದಿಯಲ್ಲಿ ಹೇಳಿದೆ.

ಇದರಲ್ಲಿ ಪ್ರಮುಖವಾಗಿ ಕನ್ಸಲ್ಟಿಂಗ್‌, ಕಚೇರಿ ಕಾರ್ಯಕಲಾಪಗಳ ನಿರ್ವಹಣೆ ಮಾಡುವ ಅಡ್ಮಿನ್‌ಗಳು, ಕಾಲ್‌ಸೆಂಟರ್‌ ನೌಕರಿಗಳು ಮರೆಯಾಗಲಿವೆ ಎಂದಿದೆ.

ಯಾವೆಲ್ಲಾ ಕ್ಷೇತ್ರಗಳನ್ನು ಭಾದಿಸಲಿದೆ ಎಐ

ಕೈಗಾರಿಕಾ ಕ್ರಾಂತಿಯ ನಂತರ ವ್ಯಾಪಕ ಬಳಕೆಯಲ್ಲಿದ್ದ ಟೈಪ್‌ರೈಟರ್‌ ಅನ್ನು ತಾನು ಕಾಲಿಟ್ಟ ಕೆಲವೇ ದಶಕಗಳಲ್ಲಿ ಕಂಪ್ಯೂಟರ್‌ ಮೂಲೆಗುಂಪಾಗಿಸಿತು. ಆಗಲೂ ಉದ್ಯೋಗ ಕಸಿಯುವ ಚರ್ಚೆಯೇ ಮುನ್ನೆಲೆಗೆ ಬಂದಿತ್ತು. ಆದರೆ ಕಂಪ್ಯೂಟರ್‌ ಎಂಬುದು ಹಲವು ಹೊಸ ಉದ್ಯೋಗ ಗಳನ್ನು ಸೃಷ್ಟಿಸಿತು. ಈಗಲೂ ಕೃತಕ ಬುದ್ಧಿಮತ್ತೆ ಕಾಲಿಟ್ಟಿದ್ದು, ಹೊಸ ಕೈಗಾರಿಕಾ ಕ್ರಾಂತಿ ಎಂದೇ ನಂಬಲಾಗಿದೆ.

ಹಾಗಿದ್ದರೆ ಕೃತಕ ಬುದ್ಧಿಮತ್ತೆ ಯಾವೆಲ್ಲಾ ಕ್ಷೇತ್ರಗಳನ್ನು ಮೊದಲು ಆವರಿಸಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮಾಹಿತಿ ತಂತ್ರಜ್ಞಾನದ ಸೇವಾ ವಲಯಗಳಾದ ಕಾಲ್ ಸೆಂಟರ್, ಬಿಪಿಒ, ಗ್ರಾಹಕರ ನೆರವು ಕ್ಷೇತ್ರಗಳನ್ನು ಆರಂಭದಲ್ಲಿ ಎಐ ಆವರಿಸಲಿದೆ. 

ಮನರಂಜನೆ ಹಾಗೂ ಮಾಧ್ಯಮಗಳೂ ಎಐ ಸುನಾಮಿಗೆ ಸಿಲಕಿವೆ ಹಾಗೂ ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ. ಕಲೆ, ಛಾಹಾಗ್ರಹಣ, ಸಿನಿಮಾ, ದೃಶ್ಯ ಮಾಧ್ಯಮ, ಪತ್ರಿಕಾ ಮಾಧ್ಯಮ, ಡಿಜಿಟಲ್ ಮಾಧ್ಯಮಗಳನ್ನೂ ಒಳಗೊಂಡು ಈ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ವ್ಯಾಪಕವಾಗಿ ಬಳಕೆಯಾಗಲಿದೆ.

ವೈದ್ಯಕೀಯ ಕ್ಷೇತ್ರದಲ್ಲಿ ರೋಗಪತ್ತೆ ಕ್ಷೇತ್ರವಾದ ಡಯಾಗ್ನಾಸ್ಟಿಕ್‌ಗಳಲ್ಲಿ ರೇಡಿಯಾಲಜಿ ಹುದ್ದೆಗಳನ್ನು ಕೃತಕ ಬುದ್ಧಿಮತ್ತೆ ಆವರಿಸಲಿದೆ ಎಂದು ಅಂದಾಜಿಸಲಾಗಿದೆ. 

ಕೃತಕ ಬುದ್ಧಿಮತ್ತೆಯನ್ನು ಕರಗತ ಮಾಡಿಕೊಂಡರೆ, ಈ ಕ್ಷೇತ್ರಗಳು ಮತ್ತೊಂದು ಹಂತಕ್ಕೆ ತಲುಪಿ ಹೊಸ ಹುದ್ದೆಗಳನ್ನು ಸೃಜಿಸಲಿವೆ ಎಂಬ ಆಶಾಭಾವವೂ ತಜ್ಞರದ್ದು.

ವಿವೇಕ್ ತೋಂಟದಾರ್ಯ
ಕೃತಕ ಬುದ್ಧಿಮತ್ತೆಯಿಂದ ಉತ್ಪಾದಕತೆ ಸೇವಾ ವಲಯ ಸಂಶೋಧನೆಗಳು ಇನ್ನಷ್ಟು ಉತ್ತಮವಾಗಲಿವೆ. ಮನುಷ್ಯರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸಮ ಸಮಾಜ ನಿರ್ಮಾಣ ಮತ್ತು ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ’
– ವಿವೇಕ್ ತೋಂಟದಾರ್ಯ ನಿರ್ದೇಶಕ ಮೈಂಡ್‌ ಡೈನಾಮಿಕ್ಸ್‌ ಇಂಟರ್‌ನ್ಯಾಷನಲ್‌ ಲಂಡನ್‌
ಮದನ್ ಶ್ರೀನಿವಾಸನ್
‘ಕೃತಕ ಬುದ್ಧಿಮತ್ತೆ ನೌಕರಿಯನ್ನು ಕಸಿದುಕೊಳ್ಳುವುದಿಲ್ಲ. ಆದರೆ ಕೃತಕ ಬುದ್ಧಿಮತ್ತೆ ಬಳಸುವ ವ್ಯಕ್ತಿ ನೌಕರಿಯನ್ನು ಕಿತ್ತುಕೊಳ್ಳಬಲ್ಲ. ಕೃತಕ ಬುದ್ಧಿಮತ್ತೆ ಎಂಬುದು ದೇವರಲ್ಲ. ಅದೊಂದು ಮನುಷ್ಯನೇ ನಿರ್ಮಿಸಿದ ವಿನ್ಯಾಸ. ಇದು ಸಮಾಜವನ್ನು ಮೇಲ್ಮಟ್ಟಕ್ಕೆ ಏರಿಸುತ್ತದೆಯೇ ಹೊರತು ವಿಭಜಿಸುವುದಿಲ್ಲ. ಕ್ರಿಯಾತ್ಮಕ ಆಲೋಚನೆಯನ್ನು ಇನ್ನಷ್ಟು ವೃದ್ಧಿಸುತ್ತದೆ. ಬಹುತ್ವವನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತದೆ –  
ಡಾ. ಮದನ ಕುಮಾರ್ ಶ್ರೀನಿವಾಸನ್
ಶಿವರಾಂ
ಕೃತಕ ಬುದ್ಧಿಮತ್ತೆಯಿಂದ ಜನರ ಬದಕು ಇನ್ನಷ್ಟು ಉತ್ತಮವಾಗಲಿದೆ. ಆದರೆ ಇದರ ಬಳಕೆ ಮನುಕುಲಕ್ಕೆ ಪೂರಕವಾಗಿರಬೇಕು. ಉದ್ಯೋಗ ಸೃಜಿಸುವಂತಿರಬೇಕು ಜನರ ಜೀವನ ಮಟ್ಟ ಇನ್ನಷ್ಟು ಉತ್ತಮವಾಗುವಂತಿರಬೇಕು.
– ಕೆ.ಆರ್. ಶಿವರಾಮ್‌ ಸಿಇಒ ಹಾಗೂ ಸಹ ಸಂಸ್ಥಾಪಕ ಇನ್ನರ್‌ವರ್ಸ್‌ ಟೆಕ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.