ADVERTISEMENT

ಒಳನೋಟ | ಬಗರ್ ಹುಕುಂ ಲಕ್ಷ ಲಕ್ಷ ಅರ್ಜಿ ವಜಾ ಏಕೆ?

ಎಸ್.ರವಿಪ್ರಕಾಶ್
Published 19 ಏಪ್ರಿಲ್ 2025, 23:30 IST
Last Updated 19 ಏಪ್ರಿಲ್ 2025, 23:30 IST
<div class="paragraphs"><p>ಬಗರ್ ಹುಕುಂ </p></div>

ಬಗರ್ ಹುಕುಂ

   

ಚಿತ್ರ: ಭಾವು ಪತ್ತಾರ್

ಬೆಂಗಳೂರು: ಪಶ್ಚಿಮಘಟ್ಟದ ತಪ್ಪಲಿಗೆ ಹೊಂದಿಕೊಂಡಿರುವ ಉಡುಪಿ ಜಿಲ್ಲೆಯ ಪುಟ್ಟ ಹಳ್ಳಿ ಅದು. ಅಲ್ಲಿ ಸರ್ಕಾರಿ ಜಮೀನಿನಲ್ಲಿ ಹಲವು ದಶಕಗಳಿಂದ ಅನಧಿಕೃತವಾಗಿ ಉಳುಮೆ ಮಾಡಿಕೊಂಡಿದ್ದ ರೈತನಿಗೆ ಉಳುಮೆ ಮಾಡಿದ ಜಮೀನು ಈಗ ತನ್ನ ಪಾಲಿಗೆ ಸಿಗುತ್ತದೆಯೇ ಇಲ್ಲವೇ ಎಂಬ ಆತಂಕ ಕಾಡಿದೆ. ಇದಕ್ಕೆ ಕಾರಣವಿಷ್ಟೇ, ಅಕ್ರಮ– ಸಕ್ರಮಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ಅರ್ಜಿಗಳನ್ನು ಕಂದಾಯ ಇಲಾಖೆ ತಿರಸ್ಕರಿಸುತ್ತಿದೆ. ಸಕ್ರಮಕ್ಕಾಗಿ ಈಗಾಗಲೇ ತಾನು ಸಲ್ಲಿಸಿರುವ ಅರ್ಜಿಯ ಕಥೆ ಏನಾಗಬಹುದು, ಪುರಸ್ಕೃತಗೊಳ್ಳುತ್ತದೆಯೇ ಎಂಬ ಆತಂಕ ಆತನನ್ನು ಕಾಡಿದೆ. ಇದೇ ವ್ಯಥೆ ರಾಜ್ಯದ ಉದ್ದಗಲಕ್ಕೂ ಕೇಳಿ ಬರುತ್ತಿದೆ.

ADVERTISEMENT

ಹಲವು ವರ್ಷಗಳಿಂದ ಭಾರಿ ಸಂಖ್ಯೆಯಲ್ಲಿ ವಿಲೇ ಆಗದೇ ಉಳಿದಿದ್ದ ಬಗರ್‌ಹುಕುಂ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಗುರಿ ನಿಗದಿ ಮಾಡಿದ್ದಾರೆ. ಈ ಮಧ್ಯೆ ಅರ್ಜಿ ವಿಲೇಯಲ್ಲಿ ಬಗರ್‌ಹುಕುಂ ಸಮಿತಿಗಳ ಅಧ್ಯಕ್ಷರು ಅಂದರೆ ಶಾಸಕರಿಗಿದ್ದ ಅಧಿಕಾರವನ್ನು ಮೊಟಕು ಮಾಡಲಾಗಿದೆ ಎಂಬ ಆರೋಪ ಕೆಲ ಶಾಸಕರಿಂದ ಕೇಳಿ ಬಂದಿದೆ. ಇದು ಕೆಲವು ಶಾಸಕರ ಅಸಮಾಧಾನಕ್ಕೂ ಕಾರಣವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ತಿರಸ್ಕಾರಗೊಳ್ಳಲು ಇದುವೇ ಮುಖ್ಯ ಕಾರಣ ಎನ್ನುವುದು ಅಂತಹ ಶಾಸಕರ ವಾದ. ಆದರೆ, ಕಂದಾಯ ಸಚಿವರು ಇದನ್ನು ಒಪ್ಪುವುದಿಲ್ಲ, ‘ಮೊಟಕು ಆಗಿದೆ ಎನ್ನುವವರು ಒಮ್ಮೆ ಕಾನೂನು ಅಧ್ಯಯನ ಮಾಡಿಕೊಂಡು ನನ್ನ ಬಳಿ ಚರ್ಚೆಗೆ ಬರಲಿ. ಅದರಲ್ಲಿ ಎಲ್ಲವೂ ಸ್ಪಷ್ಟವಾಗಿದೆ. ಕಾನೂನಿನ ಪ್ರಕಾರವೇ ಎಲ್ಲವೂ ನಡೆಯುತ್ತಿದೆ’ ಎನ್ನುತ್ತಾರೆ.

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ಸಾಕಷ್ಟು ಪ್ರಕರಣಗಳಲ್ಲಿ ನಮೂನೆ 50, 53 ಮತ್ತು 57 ರ ಅರ್ಜಿಗಳು ಭಾರಿ ಪ್ರಮಾಣದಲ್ಲಿ ಇತ್ಯರ್ಥಗೊಳ್ಳದೇ ಉಳಿದ ಕಾರಣ 2020 ರಲ್ಲಿ ಕರ್ನಾಟಕ ಹೈಕೋರ್ಟ್‌, ಬಗರ್‌ಹುಕುಂ ಸಮಿತಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು ಮತ್ತು ಇದನ್ನು ಗಂಭೀರವಾಗಿ ಪರಿಗಣಿಸಿತ್ತು. ಇದರ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿ ಕಂದಾಯ ಇಲಾಖೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಿರ್ಬಂಧಿತ ಅಂತರದಲ್ಲಿ ಬರುವ ಜಮೀನಿನ ಅನಧಿಕೃತ ಸಾಗುವಳಿ ಸಕ್ರಮಗೊಳಿಸುವುದನ್ನು ನಿರ್ಬಂಧಗೊಳಿಸಿತು. ಅಲ್ಲದೇ, 94–ಬಿ, 94–ಎ(4) ಅಡಿ ಸ್ವೀಕೃತಗೊಂಡ ಅರ್ಜಿಗಳ ಪೈಕಿ ಅನರ್ಹ ಅರ್ಜಿಗಳನ್ನು ತಿರಸ್ಕರಿಸಲು ಕರ್ನಾಟಕ ಭೂಕಂದಾಯ ನಿಯಮಗಳು, 1969 ರ ನಿಯಮ 108 ಸಿಸಿ ಮತ್ತು 108 ಸಿಸಿಸಿ ತಿದ್ದುಪಡಿ ತಂದು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಯಿತು.

ಈ ಹಿನ್ನೆಲೆಯಲ್ಲಿ ನಮೂನೆ 50, 53, ಮತ್ತು 57 ರ ಅಡಿ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ಶೀಘ್ರವಾಗಿ ಮತ್ತು ಕಾಲಮಿತಿಯಲ್ಲಿ ವಿಲೇವಾರಿ ಮಾಡಬೇಕು ಮತ್ತು ಜಿಲ್ಲಾಧಿಕಾರಿಗಳು ಅನರ್ಹ ಅರ್ಜಿಗಳನ್ನು ಕೂಡಲೇ ತಿರಸ್ಕರಿಸಿ ಅರ್ಜಿಯಲ್ಲಿ ಕೋರಿರುವ ಜಮೀನನ್ನು ಸರ್ಕಾರದ ಸ್ವಾದೀನಕ್ಕೆ ತೆಗೆದುಕೊಳ್ಳಬೇಕು ಎಂದು ಕಂದಾಯ ಇಲಾಖೆಯ ಸುತ್ತೋಲೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.

‘ರೈತರು ಅಕ್ರಮ– ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿ, ಸಾಗುವಳಿ ಮಾಡುತ್ತಿರುವ ಜಮೀನಿನ ಹಕ್ಕು ದಾಖಲೆಗಳ ನಿರೀಕ್ಷೆಯಲ್ಲಿದ್ದಾರೆ.  ಆದರೆ, ಸರ್ಕಾರ ಅರ್ಜಿ ಮಂಜೂರಾತಿ ಪ್ರಕ್ರಿಯೆಗೆ ಕಠಿಣ ನಿಯಮಾವಳಿಗಳನ್ನು ರೂಪಿಸಿದ್ದು, ವಿವಿಧ ಕಾರಣಗಳಿಗೆ ಈ ಅರ್ಜಿಗಳನ್ನು ಬಗರ್‌ ಹುಕುಂ ಸಮಿತಿ ಮುಂದೆ ಮಂಡಿಸದೇ, ಅಧಿಕಾರಿಗಳಿಗೆ ಗುರಿಯನ್ನು ನಿಗದಿಪಡಿಸಿ ಜಿಲ್ಲಾಧಿಕಾರಿಗಳ ಹಂತದಲ್ಲೇ ತರಾತುರಿಯಲ್ಲಿ ಜಿಲ್ಲಾಧಿಕಾರಿಗಳ ಹಂತದಲ್ಲೇ ತಿರಸ್ಕರಿಸಲಾಗುತ್ತಿದೆ. ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಚಿಕ್ಕ ಚಿಕ್ಕ ತುಂಡು ಹಿಡುವಳಿ ಜಮೀನುಗಳಿದ್ದು, ಹೆಚ್ಚಿನ ಸರ್ಕಾರಿ ಜಮೀನುಗಳು ಕುಮ್ಕಿಯ ಕಾರಣಕ್ಕಾಗಿ ಹಾಗೂ ಇತರ ಕಾರಣಗಳಿಗಾಗಿ ಶೇ 90 ಕ್ಕಿಂತ ಹೆಚ್ಚಿನ ಅರ್ಜಿಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಇದರಿಂದ ರೈತರು ತಾವು ಸುಮಾರು ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಸ್ವಾಧೀನ ಹೊಂದಿರುವ ಜಮೀನಿನ ಹಕ್ಕು ದಾಖಲೆ ಪಡೆಯುವುದು ಕಷ್ಟವಾಗಿದೆ’ ಎಂಬುದು ಕರಾವಳಿ ಭಾಗದ ಶಾಸಕರ ದೂರು.

‘ಮಲೆನಾಡು, ಕರಾವಳಿ ಭಾಗಗಳು ಸೇರಿ ರಾಜ್ಯದ ಬಹುತೇಕ ಎಲ್ಲ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ ಹುಕುಂ ಸಮಿತಿ ರಚಿಸಲಾಗಿದೆ. ಅರ್ಜಿಗಳ ಅಂಗೀಕಾರ ಅಥವಾ ತಿರಸ್ಕಾರ ಈ ಸಮಿತಿಯಿಂದಲೇ ಆಗಬೇಕು. ಆದರೆ, ಅಧಿಕಾರಿಗಳು ಈ ವಿಚಾರವನ್ನು ಸಮಿತಿಯ ಸಭೆಯಲ್ಲಿ ಪ್ರಸ್ತಾಪಿಸದೇ ಏಕಪಕ್ಷೀಯವಾಗಿ ನಿರಾಕರಿಸುತ್ತಿದ್ದಾರೆ. ಲಕ್ಷಾಂತರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎಂದು ಬಿಜೆಪಿ ಶಾಸಕ ವಿ.ಸುನಿಲ್‌ಕುಮಾರ್‌ ಆರೋಪಿಸುತ್ತಾರೆ‌.

‘ಕಂದಾಯ ಸಚಿವರು ಬಗರ್‌ ಹುಕುಂ ವಿಚಾರ ಇತ್ಯರ್ಥಗೊಳಿಸಲು ಬದ್ಧ ಎಂದು ಹೇಳಿಕೆ ಕೊಟ್ಟಿದ್ದಾರೆ. ಆದರೆ, ಸಚಿವರ ಸೂಚನೆ ಮೇರೆಗೇ ಅರ್ಜಿ ಕೈಬಿಡಲಾಗಿದೆ ಎಂದು ಅಧಿಕಾರಿಗಳು ಸಬೂಬು ನೀಡುತ್ತಿದ್ದಾರೆ. ಹಲವು ವರ್ಷಗಳಿಂದ ಈ ಜಮೀನಿನಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರು ಇದರಿಂದ ಕಂಗಾಲಾಗಿದ್ದಾರೆ. ಅರ್ಜಿ ತಿರಸ್ಕರಿಸುವಾಗ ಅಧಿಕಾರಿಗಳು ರೈತರ ಹೇಳಿಕೆ ದಾಖಲಿಸಿಕೊಳ್ಳುತ್ತಿಲ್ಲ. ಇಂಥ ಏಕಪಕ್ಷೀಯ ನಡವಳಿಕೆಯನ್ನು ತಕ್ಷಣ ನಿಲ್ಲಿಸಿ ರೈತರಿಗೆ ನ್ಯಾಯ ನೀಡಬೇಕು. ಅರ್ಹರಲ್ಲದ ಅರ್ಜಿಗಳನ್ನು ಕೈಬಿಟ್ಟರೆ ಪರವಾಗಿಲ್ಲ. ಆದರೆ ನೈಜ ಮತ್ತು ಅರ್ಹ ರೈತರನ್ನು ಸಣ್ಣಪುಟ್ಟ ಲೋಪಗಳನ್ನು ಮುಂದಿಟ್ಟುಕೊಂಡು ಕೈಬಿಡಬಾರದು’ ಎನ್ನುತ್ತಾರೆ ಸುನಿಲ್.

ಅಧಿಕಾರ ಮೊಟಕಾಗಿದೆ ಎನ್ನಲು ಆಗಲ್ಲ

ಶಾಸಕರ ಅಧಿಕಾರ ಮೊಟಕುಗೊಳಿಸಲಾಗಿದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಕೆಲವೊಮ್ಮೆ ಬಡವರು ಎರಡು–ಮೂರು ಸೆಂಟ್‌ ಜಾಗದಲ್ಲಿ ಸಕ್ರಮ ಮಾಡಿಕೊಂಡು ಮನೆ ಕಟ್ಟಿದ್ದರೂ ಕೆಡಹುವ ಪರಿಸ್ಥಿತಿ ಉಂಟಾದರೆ, ನಾವು ಬಡವರ ನೆರವಿಗೆ ನಿಲ್ಲಬೇಕಾಗುತ್ತದೆ. ಹಾಗಾಗಿ ಅಧಿಕಾರ ಇಲ್ಲ ಎಂದು ಹೇಳಲಾಗದು ಎನ್ನುತ್ತಾರೆ ಮೂಡಬಿದಿರೆ ಬಿಜೆಪಿ ಶಾಸಕ ಉಮಾನಾಥ್‌ ಕೋಟ್ಯಾನ್‌.

‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಗರ್ ಹುಕುಂ ಸಮಿತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅಧಿಕಾರ ಕೊಡಲು ಶಾಸಕರ ಹಕ್ಕನ್ನು ಮೊಟಕುಗೊಳಿಸಿದೆ. ಸಮಿತಿಯ ತೀರ್ಮಾನಗಳಿಗೆ ಜಿಲ್ಲಾಧಿಕಾರಿಯ ಅನುಮೋದನೆ ಪಡೆಯಬೇಕಿದೆ. ಇದರಿಂದ ಶಾಸಕರಿಗೆ ವಿವೇಚನಾ ಅಧಿಕಾರ ಇಲ್ಲದಂತಾಗಿ ಬಡವರಿಗೆ ಸಣ್ಣ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಕಂದಾಯ ಸಚಿವರು ಬಡವರಿಗೆ ಭೂಮಿ ಮಂಜೂರಾತಿ ವಿಚಾರದಲ್ಲಿ ಬೆಂಗಳೂರು ಹಾಗೂ ಸುತ್ತಲಿನ ಜಿಲ್ಲೆಗಳ ಹೊರತಾಗಿ ರಾಜ್ಯದ ಇತರೆ ಜಿಲ್ಲೆಗಳತ್ತ ಗಮನಹರಿಸಲಿ’ ಎನ್ನುತ್ತಾರೆ ಜನತಾದಳ (ಎಸ್‌) ಪಕ್ಷದ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ.

‘ಬಗರ್‌ ಹುಕುಂ’ ಹಕ್ಕುಪತ್ರ ನೀಡಲು ಅಧಿಕಾರಿಗಳು ಕ್ರಮ ವಹಿಸುತ್ತಿಲ್ಲ. ಸುಮಾರು 40 ವರ್ಷಗಳಿಂದ ಎರಡು ಎಕರೆ  ಜಮೀನು ಸಾಗುವಳಿ ಮಾಡುತ್ತಿದ್ದೇವೆ. 1999ರಲ್ಲಿ ಫಾರಂ ನಂ ‘50’,  2016ರಲ್ಲಿ ಫಾರಂ ನಂ ‘53’ ಹಾಗೂ 2022ರಲ್ಲಿ ಫಾರಂ ನಂ ‘57’ ಸಲ್ಲಿಸಿ, ಸ್ವೀಕೃತಿ ಪಡೆದಿದ್ದೇವೆ.  ಒಟ್ಟು 16 ರೈತರು ತಲಾ ಎರಡು ಎಕರೆಯಂತೆ 32 ಎಕರೆ ಸಾಗುವಳಿ ಮಾಡುತ್ತಿದ್ದೇವೆ. ಆದರೆ, ಕಂದಾಯ  ಇಲಾಖೆಯವರು ಅದನ್ನು ಗೋಮಾಳ ಜಾಗ ಎಂದು ಹೇಳಿ, ನಮ್ಮನ್ನು ಅಲ್ಲಿಂದ ಖಾಲಿ ಮಾಡಿಸಲು ಮುಂದಾಗಿದ್ದಾರೆ. ನಾವು ಸಾಗುವಳಿ ಮಾಡುತ್ತಿರುವ ಜಮೀನಿನ ಪಕ್ಕದಲ್ಲೇ ಇಲಾಖೆಯೊಂದಕ್ಕೆ 60 ಎಕರೆ ಜಾಗ ಮಂಜೂರು ಮಾಡಿದ್ಧಾರೆ. ನಮಗೆ ನೋಟಿಸ್‌ ಕೊಟ್ಟು ‌ಕಿರುಕುಳ ನೀಡಲು ಆರಂಭಿಸಿದ್ದಾರೆ’ ಎನ್ನುವುದು ಧಾರವಾಡ ತಾಲ್ಲೂಕು ಮುಮ್ಮಿಗಟ್ಟಿಯ ಮಲ್ಲೇಶಪ್ಪ ಬಸಪ್ಪ ಕಿತ್ತೂರು ಆರೋಪಿಸುತ್ತಾರೆ.

ಕಂದಾಯ ಇಲಾಖೆ ಪರಿಚಯಿಸಿದ್ದ ‘ಬಗರ್ ಹುಕುಂ ತಂತ್ರಾಂಶ’ (ಆ್ಯಪ್) ಮೂಲಕ ರಾಜ್ಯದಲ್ಲೇ ಮೊದಲ ಬಾರಿಗೆ ಕಳೆದ ವರ್ಷ ಶಿರಸಿಯಲ್ಲಿ ನಾಲ್ವರು ರೈತರಿಗೆ ಡಿಜಿಟಲ್ ಸಾಗುವಳಿ ಚೀಟಿ ನೀಡಲಾಗಿತ್ತು. ಹಲವು ದಶಕಗಳಿಂದ ಸರ್ಕಾರಿ ಪಡಾದಲ್ಲಿ ಸಾಗುವಳಿ ಮಾಡಿಕೊಂಡು ಬಂದ ರೈತರಿಗೆ ಭೂಮಿ ಹಕ್ಕು ಒದಗಿಸಲು ವಿಳಂಬ ಮಾಡಲಾಗುತ್ತಿದೆ. ಶಾಸಕರ ಅಧ್ಯಕ್ಷತೆಯ ಸಮಿತಿಯಲ್ಲಿ ಸ್ಥಳೀಯ ಸಮಸ್ಯೆಗಳ ಅರಿವಿರುವವರನ್ನೇ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಲಾಗುತ್ತದೆ. ನಿಯಮಾವಳಿ ಪ್ರಕಾರ ಓರ್ವ ಅರ್ಜಿದಾರನಿಗೆ ಗರಿಷ್ಠ 4.38 ಎಕರೆ ಜಾಗ ಮಂಜೂರು ಮಾಡಲು ಅವಕಾಶ ಇದೆ. ಆದರೆ, ಅಧಿಕಾರಿಗಳು ಇಲ್ಲಸಲ್ಲದ ನಿಯಮ ಹೇರಿ ರೈತರಿಗೆ ಭೂಮಿ ಹಕ್ಕು ಸಿಗದಂತೆ ತಡೆಹಿಡಿಯುತ್ತಾರೆ ಎನ್ನುವುದು ಉತ್ತರ ಕನ್ನಡ ಜಿಲ್ಲೆ ಕಿರವತ್ತಿಯ ರೈತ ರಾಘವೇಂದ್ರ ನಾಯ್ಕ ಅವರ ಆಪಾದನೆ. 

‘ಬಗರ್‌ಹುಕುಂ ಅರ್ಜಿಗಳು ಭಾರಿ ಸಂಖ್ಯೆಯಲ್ಲಿ ತಿರಸ್ಕೃತಗೊಳ್ಳಲು ಅನರ್ಹರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವುದೇ ಕಾರಣ. ಅನರ್ಹರು ಯಾರು ಎಂಬುದನ್ನು ಕಾಯ್ದೆ ಸ್ಪಷ್ಟಪಡಿಸಿದೆ. ಅದರಲ್ಲಿ ಇರುವುದನ್ನು ಅಧಿಕಾರಿಗಳು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಒಂದು ವೇಳೆ ಅಧಿಕಾರಿಗಳಿಂದ ತಪ್ಪುಗಳು ಆಗಿದ್ದರೆ, ಅದನ್ನು ಸರಿ‍ಪಡಿಸಲು ಅವಕಾಶವಿದೆ. ದುರಾದೃಷ್ಟವೆಂದರೆ, ಸರ್ಕಾರಿ ಭೂಮಿ ಹೊಡೆಯಬಹುದೆಂದು ಅನರ್ಹರೇ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಹಾಕುತ್ತಿದ್ದಾರೆ. ಈ ಕಾರಣಕ್ಕೆ ಅರ್ಜಿಗಳು ತಿರಸ್ಕಾರಗೊಳ್ಳುತ್ತಿವೆ. ಯಾವ ಕಾರಣಗಳಿಗೆ ಅರ್ಜಿಗಳು ತಿರಸ್ಕೃತಗೊಂಡಿವೆ ಎಂಬ ಪಟ್ಟಿಯೇ ಇದೆ’ ಎನ್ನುತ್ತಾರೆ ಕಂದಾಯ ಇಲಾಖೆ ಆಯುಕ್ತ ಸುನಿಲ್ ಕುಮಾರ್.

ಬಗರ್‌ ಹುಕುಂ ಅಡಿ ನೈಜ ಅರ್ಜಿದಾರರಿಗೆ ಅನ್ಯಾಯ ಆಗಬಾರದು ಎಂಬ ಕಾರಣಕ್ಕೆ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಇದರಿಂದ ಭೂಮಾಫಿಯಾ ಮತ್ತು ಅನರ್ಹರು ಸರ್ಕಾರಿ ಭೂಮಿ ಕಬಳಿಸುವುದನ್ನು ತಡೆಯಬಹುದಾಗಿದೆ ಎನ್ನುತ್ತಾರೆ ಅವರು.

ಅರ್ಹ ರೈತರಿಗೆ ಅನ್ಯಾಯವಾಗದು: ಸಚಿವ ಕೃಷ್ಣ ಬೈರೇಗೌಡ ಭರವಸೆ

‘ಕಾನೂನಿನ ಚೌಕಟ್ಟಿನ ಅಡಿ, ಯಾವುದೇ ಅರ್ಹ ರೈತನ ಅರ್ಜಿಯನ್ನು ತಿರಸ್ಕಾರ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಅರ್ಹರ ಅರ್ಜಿ ತಿರಸ್ಕಾರಗೊಂಡಿದ್ದರೆ, ಅಂತಹ ರೈತರಿಗೆ ನ್ಯಾಯ ಒದಗಿಸಲು ನಾನು ಸಿದ್ಧನಿದ್ದೇನೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟಪಡಿಸಿದರು.

‘ಶಾಸಕರ ಅಧಿಕಾರವೂ ಮೊಟಕು ಆಗಿಲ್ಲ. ಕಾನೂನು ಹೇಳಿದೆಯೋ ಅದೇ ಪ್ರಕಾರ ನಡೆಯುತ್ತಿದೆ. ಬಗರ್‌ಹುಕುಂ ಅಡಿ ಸ್ವೀಕೃತವಾಗಿರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ನಿರ್ದಿಷ್ಟ ಮಾರ್ಗಸೂಚಿ ಪ್ರಕಾರವೇ ನಡೆಯುತ್ತಿದೆ. ಆ ಮಾರ್ಗಸೂಚಿಯ ಪ್ರಕಾರ ಅರ್ಜಿ ಅರ್ಹವಾಗಿದ್ದರೆ ಪುರಸ್ಕಾರಗೊಳ್ಳುತ್ತದೆ. ಅರ್ಜಿಗಳು ಭಾರಿ ಪ್ರಮಾಣದಲ್ಲಿ ವಿಲೇವಾರಿ ಆಗದೇ ಉಳಿದಿವೆ. 1991 ರಲ್ಲಿ ಸಲ್ಲಿಸಿದ ಅರ್ಜಿಯೂ ವಿಲೇವಾರಿ ಆಗಿಲ್ಲ. ಹೀಗಾಗಿ 2 ತಿಂಗಳಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಸರ್ಕಾರದ ಜಮೀನು ಸಿಗುತ್ತದೆ ಎಂದು ಸಾಕಷ್ಟು ಅನರ್ಹರೂ ಅರ್ಜಿ ಹಾಕುತ್ತಾರೆ. ಅವರ ಉದ್ದೇಶ ಏನು ಎಂಬುದು ಗೊತ್ತಾಗುತ್ತದೆ ಅಲ್ಲವೇ. ಒಟ್ಟಿನಲ್ಲಿ ಇವೆಲ್ಲಕ್ಕೂ ತೆರೆ ಎಳೆಯಬೇಕಾಗಿದೆ’ಎಂದು ವಿವರಿಸಿದರು.

ಕಾಯ್ದೆಯ ಪ್ರಮುಖ ಅಂಶಗಳು

* ಬಗರ್‌ಹುಕುಂ ಅರ್ಜಿ ಪರಿಶೀಲಿಸುವಾಗ ತಹಶೀಲ್ದಾರರು ಅರ್ಜಿದಾರರ ಪಡಿತರ ಚೀಟಿ, ಆಧಾರ್ ಸಂಖ್ಯೆ, ಚುನಾವಣಾ ಗುರುತಿನ ಚೀಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ ಪತ್ರವನ್ನು ಗ್ರಾಮ ಆಡಳಿತಾಧಿಕಾರಿ/ರಾಜಸ್ವ ನಿರೀಕ್ಷಕರು/ಶಿರಸ್ತೆದಾರರ ವರದಿಗಳನ್ನು ಉಪಗ್ರಹ ಆಧಾರಿತ ಚಿತ್ರ ಪರಿಗಣಿಸಿ ಅರ್ಜಿ ಬಗ್ಗೆ ಸ್ಪಷ್ಟ ಅಭಿಪ್ರಾಯ ದಾಖಲಿಸಬೇಕು.

* ಗೋಮಾಳ, ಮೀಸಲುಕಾಡು, ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಮೀನು, ದೇವರಕಾಡು, ಉರ್ದುವೆ, ಗುಂಡುತೋಪು, ಕೆರೆಯ ತಳಪಾಯ, ಪೋಟ್ ಖರಾಬ್ ಹಳ್ಳ, ಸ್ಮಶಾನ ಜಾಗವನ್ನು ಮಂಜೂರಾತಿ ಮಾಡುವಂತಿಲ್ಲ.

*ಜಿಲ್ಲಾಧಿಕಾರಿ ಅನರ್ಹ ಅರ್ಜಿಯನ್ನು ಒಂದು ತಿಂಗಳೊಳಗೆ ತಿರಸ್ಕರಿಸಬೇಕು. ಈ ಅರ್ಜಿಯಲ್ಲಿ ನಮೂದಿಸಿದ ಭೂಮಿಯನ್ನು ಸರ್ಕಾರ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು

* ಬಗರ್ ಹುಕುಂ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಸದಸ್ಯ ಕಾರ್ಯದರ್ಶಿ(ತಹಶೀಲ್ದಾರ್) ಅವರ ಆಧಾರ್‌ ಇ–ಕೆವೈಸಿ ಅನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಬಯೋಮೆಟ್ರಿಕ್‌ ಆಧಾರ್‌ ಇ–ಕೆವೈಸಿ ನಂತರವೇ ಸಭೆ ನಡೆಸಬೇಕು.

*ಬಗರ್‌ಹುಕುಂ ಸಮಿತಿ ರಚನೆ ಆದ ನಂತರ ಸಮಿತಿಗಳು ಕನಿಷ್ಠ ವಾರಕ್ಕೊಮ್ಮೆ ಸಭೆ ಸೇರಿ ಅರ್ಜಿ ಇತ್ಯರ್ಥಪಡಿಸಬೇಕು

ಭೂಮಿ ಪಡೆಯಲು ಇರುವ ಅರ್ಹತೆಗಳೇನು?:

*ಅನಧಿಕೃತ ಸಾಗುವಳಿ ಮಾಡುವ ಅವಧಿಗೆ ಅರ್ಜಿದಾರನಿಗೆ ವಯಸ್ಸು 18 ವರ್ಷ ಆಗಿರಬೇಕು.

*ಅರ್ಜಿದಾರನು ಭೂಮಿಯು ಇರುವ ಅಥವಾ ಪಕ್ಕದಲ್ಲಿರುವ ತಾಲ್ಲೂಕಿನಲ್ಲಿ ಆ ತಾಲೂಕಿನ ಪರಿಮಿತಿಯೊಳಗೆ ಕಾಯಂ ನಿವಾಸಿ ಆಗಿರಬೇಕು.

* ನಮೂನೆ 50 ಮತ್ತು 53 ರ ಅರ್ಜಿಗಳನ್ನು ಪರಿಗಣಿಸುವಾಗ ಅರ್ಜಿದಾರನು 1990 ರ 14 ನೇ ಏಪ್ರಿಲ್‌ ದಿನಕ್ಕೆ ಕಡೆಯ ಪಕ್ಷ ಹಿಂದಿನ ಮೂರು ವರ್ಷಗಳು ಕಡಿಮೆ ಇಲ್ಲದ ಅವಧಿಯ ನಿರಂತರ ಭೂಮಿಯ ಅನಧಿಕೃತ ಅಧಿಭೋಗದಾರನಾಗಿರಬೇಕು.

*ನಮೂನೆ 57 ಅರ್ಜಿಗಳನ್ನು ಪರಿಗಣಿಸುವಾಗ 2005 ರ ಜನವರಿ ಮೊದಲ ದಿನಕ್ಕೆ  ಮೂರು ವರ್ಷಕ್ಕಿಂತ ಕಡಿಮೆ ಇಲ್ಲದ ಅವಧಿಯವರೆಗೆ ನಿರಂತರವಾಗಿ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರಬೇಕು.

* ಅನುಸೂಚಿತ ಜಾತಿ ಮತ್ತು ಪಂಗಡಗಳಿಗೆ ಸೇರಿದ ವ್ಯಕ್ತಿಗಳ ಸಂದರ್ಭದಲ್ಲಿ ಅಂತಹ ಅವಧಿಯು ಒಂದು ವರ್ಷಕ್ಕಿಂತ ಕಡಿಮೆ ಇರಬಾರದು.

* ನಮೂನೆ 50, 53 ಮತ್ತು 57

ಕಂದಾಯ ಭೂಮಿಯನ್ನು ಅಕ್ರಮವಾಗಿ ಸಾಗುವಳಿ ಮಾಡಿದ ಭೂರಹಿತರು, ಸಣ್ಣ ಅಥವಾ ಬಡ ರೈತರಿಗೆ 4.35 ಎಕರೆವರೆಗಿನ ಜಮೀನಿನ ಸಾಗುವಳಿ ಹಕ್ಕು ನೀಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳ ಅನ್ವಯ 1991–92ರಲ್ಲಿ ನಮೂನೆ 50 ಅಡಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಯಿತು. 

ನಮೂನೆ 53ರಲ್ಲಿ ಅರ್ಜಿ ಸಲ್ಲಿಸಲು 1998–1999ರಲ್ಲಿ ಅವಕಾಶ ನೀಡಲಾಯಿತು. ಕರ್ನಾಟಕ ಭೂಕಂದಾಯ ಕಾಯ್ದೆ 1964 ರ ಕಲಂ 94 ಎ(4) ಅಡಿ ನಮೂನೆ 57ರ ಅಡಿ ಅರ್ಜಿ ಸಲ್ಲಿಸಲು 2018ರಲ್ಲಿ ಸರ್ಕಾರ ಮತ್ತೆ ಅವಕಾಶ ನೀಡಿತ್ತು.

* 94–ಬಿ, 94 ಎ(4)

94–ಬಿ: ಕೆಲವು ವಿಶೇಷ ಸಂದರ್ಭಗಳಲ್ಲಿ ಫಲಾನುಭವಿಗಳಿಗೆ ಭೂಮಿ ಮಂಜೂರು ಕರ್ನಾಟಕ ಭೂ ಕಂದಾಯ ಕಾಯ್ದೆ–1998ಗೆ ಸೆಕ್ಷನ್‌ 94–ಬಿ ಸೇರಿಸಲಾಗಿದೆ. 

94–ಎ (4): 2005 ಕ್ಕಿಂತ ಮೊದಲು ಅನಧಿಕೃತವಾಗಿ ಆಕ್ರಮಿಸಿಕೊಂಡಿದ್ದ ಕಂದಾಯ (ಸರ್ಕಾರಿ) ಭೂಮಿಯನ್ನು 94–ಎ (4)ರ ಪ್ರಕಾರ ಒತ್ತುವರಿದಾರರಿಗೆ ಮಂಜೂರು ಮಾಡಬಹುದು.  ಮಿತಿ 4.35 ಎಕರೆ.

108ಸಿಸಿ: ಭೂಕಂದಾಯ ನಿಯಮಕ್ಕೆ 108ಸಿಸಿ ಸೇರಿಸಿ ನಮೂನೆ 50ರ ಅಡಿ ಬಗರ್‌ಹುಕುಂಗೆ ಅರ್ಜಿ ಸಲ್ಲಿಸಲು 108ಸಿಸಿಸಿ ಮೂಲಕ ನಮೂನೆ 53 ಅಡಿ ಮತ್ತೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಯಿತು.

ಒಮ್ಮೆ ಅನರ್ಹಗೊಂಡರೆ ಶಾಶ್ವತ ಅನರ್ಹ

ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯಲ್ಲಿ ರೈತ ಮನೆ ಕಟ್ಟಿಕೊಂಡಿದ್ದರೆ ಅರ್ಜಿ ಅನರ್ಹವಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ರೈತರು ಸಾಗುವಳಿ ಭೂಮಿಯಲ್ಲಿ ಮನೆ ಕಟ್ಟಿಕೊಳ್ಳದೇ ಇರಲು ಸಾಧ್ಯವೇ? ಹಲವು ದಶಕಗಳಿಂದ ಮನೆ ಕಟ್ಟಿಕೊಂಡು ಸಾಗುವಳಿ ಮಾಡುತ್ತಿರುವವರನ್ನು ಈ ನೆಪದಲ್ಲಿ ಒಮ್ಮೆ ಅರ್ಜಿ ತಿರಸ್ಕರಿಸಿದರೆ, ಶಾಶ್ವತವಾಗಿ ಅರ್ಜಿ ಸಲ್ಲಿಸಲು ಅನರ್ಹರಾಗುತ್ತಾರೆ. ಈ ಹಿಂದಿನಂತೆ ಅಧ್ಯಕ್ಷರೇ (ಶಾಸಕರು) ಅರ್ಜಿ ಪುರಸ್ಕರಿಸುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಹೊಂದಿದ್ದಾಗ, ಇಂತಹ ಸೂಕ್ಷ್ಮ ವಿಷಯಗಳನ್ನು ಪರಿಗಣಿಸಿ ನ್ಯಾಯ ಒದಗಿಸಲು ಸಾಧ್ಯವಾಗುತ್ತಿತ್ತು. ಈಗಿನ ವ್ಯವಸ್ಥೆಯಲ್ಲಿ ಇದು ಸಾಧ್ಯವಾಗುತ್ತಿಲ್ಲ 

ವಿ.ಸುನಿಲ್ ಕುಮಾರ್‌, ಶಾಸಕ, ಕಾರ್ಕಳ

ಬಗರ್‌ ಹುಕುಂ ತಿರಸ್ಕಾರ ಆದ ಪಟ್ಟಿ

* 7,792 : 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಲ್ಲಿಸಿದ ಅರ್ಜಿ

* 712 : ಕೃಷಿಕರಲ್ಲದ ಕೃಷಿ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ ಅರ್ಜಿ

* 296 : ತಾಲ್ಲೂಕಿನಲ್ಲಿ ಕಾಯಂ ನಿವಾಸಿ ಅಲ್ಲದೇ ಅರ್ಜಿ ಸಲ್ಲಿಸಿದವರು

* 3,661 : ಸ್ವಾಧೀನದಲ್ಲಿ ಇಲ್ಲದ ರೈತರ ಅರ್ಜಿಗಳು

* 302 : 4 ಎಕರೆ 38 ಗುಂಟೆಗೂ ಹೆಚ್ಚು ಭೂಮಿ ಹೊಂದಿದ ಅರ್ಜಿದಾರರು

* 44,094 : ನಗರ ಮಿತಿಯ ಬಫರ್‌ ವಲಯದಲ್ಲಿ ಭೂಒತ್ತುವರಿ ಮಾಡಿದವರು

*  20,718 : ಅರಣ್ಯ ಭೂಮಿ

* 1,28,991 : ಇತರೆ ಭೂಮಿ

* 1,04,668 : ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಭೂಮಿ ಲಭ್ಯವಿಲ್ಲದಿರುವುದು

* 25,662 : ಕೆಎಲ್‌ಆರ್‌ ಕಾಯ್ದೆ 1964 ರ ಪ್ರಕಾರ ಒತ್ತುವರಿ ಮಾಡಿದವರಿಗೆ ಭೂಮಂಜೂರಿಗೆ ಅವಕಾಶವಿಲ್ಲ. ಈ ರೀತಿ ಅರ್ಜಿ ಸಲ್ಲಿಸಿದವರು ಸಂಖ್ಯೆ

ಜಿಲ್ಲೆಗಳಲ್ಲಿ ಬಗರ್‌ಹುಕುಂ ಸ್ಥಿತಿಯೇನು?

ದಕ್ಷಿಣಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರ್ಚ್ 3ರ ವರೆಗೆ ಒಟ್ಟು 12,4,414 ಅರ್ಜಿಗಳು ಸಲ್ಲಿಕೆಯಾಗಿದ್ದು ಕೇವಲ 10,573 ಅರ್ಜಿಗಳು ಅರ್ಹವಾಗಿದ್ದವು. ಈ ಪೈಕಿ 1089 ಅರ್ಜಿಗಳನ್ನು ಪರಿಗಣಿಸಲು ಗುರಿ ಇತ್ತು. 654 ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದ್ದು ಒಟ್ಟು 60.06 ಗುರಿ ಸಾಧನೆ ಆಗಿದೆ. 

10,0,183 ಅರ್ಜಿಗಳು ಪರಿಶೀಲನೆಗಾಗಿ ಗ್ರಾಮ ಲೆಕ್ಕಿಗಳ ಬಳಿ ಉಳಿದಿವೆ. 1210 ಅರ್ಜಿಗಳನ್ನು ಮಾತ್ರ ಗ್ರಾಮ ಲೆಕ್ಕಿಗರು ವಿಲೇವಾರಿ ಮಾಡಿದ್ದಾರೆ. 72 ಅರ್ಜಿಗಳು ತಹಶೀಲ್ದಾರ್ ಬಳಿ ಉಳಿದಿವೆ. 136 ಅರ್ಜಿಗಳು ಸಮಿತಿಯಲ್ಲೂ 9 ಅರ್ಜಿಗಳು ಡಿಎಫ್‌ಒ ಬಳಿಯೂ ಉಳಿದುಕೊಂಡಿವೆ. ಹಕ್ಕುಪತ್ರ ಸಿದ್ಧಗೊಳ್ಳಲು ತಹಶೀಲ್ದಾರ್ ಬಳಿ 122 ಅರ್ಜಿಗಳು ಉಳಿದುಕೊಂಡಿವೆ.

ಉಡುಪಿ: ಜಿಲ್ಲೆಯಲ್ಲಿ ಅಕ್ರಮ ಸಕ್ರಮದಡಿ ನಮೂನೆ 50ರಲ್ಲಿ 50,358 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 11,186 ಅರ್ಜಿಗಳು ಮಂಜೂರಾಗಿವೆ. ನಮೂನೆ 53ರಲ್ಲಿ 58,382 ಅರ್ಜಿಗಳು ಸ್ವೀಕೃತವಾಗಿವೆ ಅವುಗಳಲ್ಲಿ 13,284 ಅರ್ಜಿಗಳು ಮಂಜೂರಾಗಿವೆ. ನಮೂನೆ 57ರಲ್ಲಿ 62,344 ಅರ್ಜಿಗಳು ಸ್ವೀಕೃತವಾಗಿವೆ.

ಶಿವಮೊಗ್ಗ:  ಕಳೆದ ನಾಲ್ಕು ವರ್ಷಗಳಿಂದ ಶಿವಮೊಗ್ಗ ಜಿಲ್ಲಾಡಳಿತಕ್ಕೆ ಬಗರ್‌ಹುಕುಂ ಅಡಿ (ಫಾರಂ 57ರಲ್ಲಿ) 1.17 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಅದರಲ್ಲಿ ಇಲ್ಲಿಯವರೆಗೂ (ಮಾರ್ಚ್ 11) 50 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 98 ಅರ್ಜಿಗಳು ಮಾತ್ರ ಪುರಸ್ಕೃತಗೊಂಡಿವೆ. ತಿರಸ್ಕೃತಗೊಂಡ ಅರ್ಜಿಗಳಲ್ಲಿ ಬಹುತೇಕ ಅರಣ್ಯ ಭೂಮಿ, ಕೆಪಿಸಿ, ನಿಗಮ ಮಂಡಳಿ, ಖಾಸಗಿ ಭೂಮಿಗೆ ಸಲ್ಲಿಸಿದ ಅರ್ಜಿಗಳಾಗಿವೆ. 18 ವರ್ಷ ತುಂಬದವರೂ ಅರ್ಜಿ ಸಲ್ಲಿಸಿದ್ದು, ಅವು ಕೂಡ ತಿರಸ್ಕೃತಗೊಂಡಿವೆ.

ಹಾಸನ: ಜಿಲ್ಲೆಯಲ್ಲಿ 1,67,348 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಗರಹುಕುಂ ಸಮಿತಿಯಿಂದ 11,953 ಅರ್ಜಿಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. 99,031 ಅರ್ಜಿಗಳನ್ನು ತಿರಸ್ಕರಿಸಲು ತಹಶೀಲ್ದಾರರು ಶಿಫಾರಸು ಮಾಡಿದ್ದಾರೆ. 

ಉತ್ತರಕನ್ನಡ: ಬಗರ್ ಹುಕುಂ ಸಮಿತಿಗೆ ಭೂಮಿ ಹಕ್ಕು ಮಂಜೂರಾತಿಗೆ 4,830 ಅರ್ಜಿಗಳು ಸಲ್ಲಿಕೆಯಾಗಿದ್ದು, 109 ಜನರ ಜಮೀನು ಸಕ್ರಮಗೊಳಿಸಲಾಗಿದೆ. ಅವರ ಪೈಕಿ 4 ಕುಟುಂಬಗಳಿಗೆ ಮಾತ್ರ ಹಕ್ಕುಪತ್ರ ಸಿಕ್ಕಿದೆ. ಬೆಟ್ಟ ಭೂಮಿ, ನಗರ ವ್ಯಾಪ್ತಿಯ ಪ್ರದೇಶದಲ್ಲಿರುವ ಭೂಮಿ ಸೇರಿದಂತೆ ಬಗರ್ ಹುಕುಂ ಅಡಿಯಲ್ಲಿ ಮಂಜೂರಾತಿಗೆ ಅವಕಾಶ ಇಲ್ಲದ ಕಾರಣಕ್ಕೆ 2,441 ಅರ್ಜಿಗಳು ತಿರಸ್ಕೃತಗೊಂಡಿವೆ. 2,280 ಅರ್ಜಿಗಳು ಇನ್ನೂ ಬಗರ್ ಹುಕುಂ ಸಮಿತಿ ಎದುರು ವಿಲೇವಾರಿಗೆ ಬಾಕಿ ಉಳಿದುಕೊಂಡಿವೆ.

ಹೊಸ ಸುತ್ತೋಲೆಯಿಂದಾಗಿ ಅರ್ಜಿ ತಿರಸ್ಕೃತಗೊಂಡ ಸಂದರ್ಭದಲ್ಲಿ ಮೇಲ್ಮನವಿ ಸಲ್ಲಿಸಲು ರೈತರು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಬದಲಿಗೆ, ಕೆಎಟಿ ಮತ್ತು ಹೈಕೋರ್ಟ್‌ಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿ.ಶಿವರಾಂ, ಮಾಜಿ ಸಚಿವ
ಸರ್ಕಾರವು ಸುತ್ತೋಲೆ ಬದಲು ಮಾಡಿ, ಅರ್ಜಿ ಸಲ್ಲಿಸಿದ ಎಲ್ಲರಿಗೂ ಭೂ ಮಂಜೂರಾತಿ ಮಾಡುವಂತೆ ಆದೇಶ ಮಾಡಬೇಕು. ತಿರಸ್ಕಾರವಾಗಿರುವ ಅರ್ಜಿಗಳನ್ನೂ ಪರಿಶೀಲಿಸಿ ಜಮೀನು ಮಂಜೂರು ಮಾಡಬೇಕು.
ಎಚ್‌.ಕೆ. ಸುರೇಶ್, ಶಾಸಕ ಬೇಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.