ADVERTISEMENT

ವ್ಯವಹಾರ ಮೇಲೆತ್ತಿದ ಸಹಕಾರ: ಉತ್ತರ ಕನ್ನಡದಲ್ಲಿ ಸೂಪರ್ ಮಾರ್ಕೆಟ್‌ಗಳ ಯಶಸ್ಸು

ಒಳನೋಟ: ಸಹಕಾರ ಸಂಸ್ಥೆಗಳಿಗೆ ಆರ್ಥಿಕ ಬಲ

ಸದಾಶಿವ ಎಂ.ಎಸ್‌.
Published 17 ಸೆಪ್ಟೆಂಬರ್ 2022, 23:30 IST
Last Updated 17 ಸೆಪ್ಟೆಂಬರ್ 2022, 23:30 IST
ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ ಸೂಪರ್ ಮಾರ್ಕೆಟ್‌ನಲ್ಲಿ ವಿವಿಧ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುತ್ತಿರುವುದು
ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ ಸೂಪರ್ ಮಾರ್ಕೆಟ್‌ನಲ್ಲಿ ವಿವಿಧ ಉತ್ಪನ್ನಗಳನ್ನು ಗ್ರಾಹಕರು ಖರೀದಿಸುತ್ತಿರುವುದು   

ಕಾರವಾರ: ಸಹಕಾರ ಸಂಘಗಳ ಆವರಣದಲ್ಲಿರುವ ಅಂಗಡಿಗಳಲ್ಲಿ ಏನಿರುತ್ತವೆ? ಕಿರಾಣಿ ಉತ್ಪನ್ನಗಳು, ಗೃಹ ಬಳಕೆಯ ಒಂದೆರಡು ಉತ್ಪನ್ನಗಳಿರುವುದು ಸಾಮಾನ್ಯ. ಆದರೆ, ಉತ್ತರ ಕನ್ನಡದ ಹಲವು ಸಹಕಾರ ಸಂಘಗಳಲ್ಲಿ ಎಲ್ಲವೂ ಸಿಗುತ್ತವೆ! ‘ಎಲ್ಲವೂ ಇಲ್ಲೇ ಇವೆ’ ಎಂದು ಹೆಮ್ಮೆಯಿಂದ ಗ್ರಾಹಕರನ್ನು ಆಕರ್ಷಿಸುತ್ತಿವೆ.

ಸದಸ್ಯರಿಗೆ ಹಾಗೂ ಗ್ರಾಹಕರಿಗೆ ಒಂದೇ ಸೂರಿನಡಿ ಕಿರಾಣಿ, ಗೃಹ ಬಳಕೆಯ ಉತ್ಪನ್ನಗಳಿಂದ ಮೊದಲಾಗಿ,ಪ್ಲಾಸ್ಟಿಕ್, ಸ್ಟೀಲ್, ಹಣ್ಣು, ತರಕಾರಿ, ಔಷಧಿ, ಚಿನ್ನ– ಬೆಳ್ಳಿ ಆಭರಣಗಳು, ಕಟ್ಟಡ ನಿರ್ಮಾಣ ಸಾಮಗ್ರಿ, ಪಾದರಕ್ಷೆ, ಕೃಷಿ ಯಂತ್ರೋಪಕರಣಗಳ ತನಕ ಎಲ್ಲ ಉತ್ಪನ್ನಗಳನ್ನೂ ಇವು ಪೂರೈಕೆ ಮಾಡುತ್ತಿವೆ.

ದಶಕಕ್ಕೂ ಹಿಂದೆ ಹೊಸತನದ ವಹಿವಾಟು ಆರಂಭಿಸಿದಾಗ ಸಿಕ್ಕಿದ ಜನರ ಸ್ಪಂದನೆಯು, ಇದೀಗ ಸಹಕಾರ ಸಂಸ್ಥೆಗಳ ‘ಸೂಪರ್ ಮಾರ್ಕೆಟ್’ಗಳನ್ನು ಹಳ್ಳಿಗಳಿಗೂ ವಿಸ್ತರಿಸಲು ಪ್ರೇರೇಪಿಸಿದೆ.

ADVERTISEMENT

ಉತ್ತರ ಕನ್ನಡದ ಘಟ್ಟದ ಮೇಲಿನ ತಾಲ್ಲೂಕುಗಳು ದುರ್ಗಮ ಬೆಟ್ಟ ಗುಡ್ಡಗ ಳಿಂದ ಕೂಡಿವೆ. ಸಹಕಾರ ಸಂಘಗಳ ಸದಸ್ಯರು ದಿನಬಳಕೆಯ ವಸ್ತುಗಳು, ಕೃಷಿ ಚಟುವಟಿಕೆಗಳ ಸಲಕರಣೆಗಳು ಅಥವಾ ಮತ್ತ್ಯಾವುದನ್ನೇ ತರಲು 40–50 ಕಿಲೋಮೀಟರ್ ಪ್ರಯಾಣಿಸಬೇಕಾಗುತ್ತದೆ. ಗ್ರಾಮೀಣರ ದಿನದ ದುಡಿಮೆಯೇ ವ್ಯತ್ಯಯವಾಗುತ್ತದೆ.

ಜನರ ಈ ಬವಣೆಯನ್ನು ತಪ್ಪಿ ಸಲು ಅಗತ್ಯ ವಸ್ತುಗಳನ್ನು ಆದಷ್ಟು ಸಮೀಪ ದಲ್ಲಿ ದೊರಕಿಸುವುದು ಸಹಕಾರ ಸಂಸ್ಥೆಗಳ ಒಂದು ಉದ್ದೇಶವಾಗಿದೆ. ಸದ ಸ್ಯರು ವ್ಯಯಿಸುವ ಹಣವು ಪುನಃ ಸಹ ಕಾರ ಸಂಘಕ್ಕೇ ಸಿಗುವಂತೆ ಮಾಡಿ, ಸಂಸ್ಥೆಯ ಹಣಕಾಸು ವಹಿವಾಟು ಬಲಗೊಳಿ ಸುವುದು ಮತ್ತೊಂದು ಗುರಿಯಾಗಿದೆ.

ಜಿಲ್ಲೆಯಲ್ಲಿ ಅಡಿಕೆಯೇ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಮಾರುಕಟ್ಟೆಯಲ್ಲಿ ದರ ಆಗಾಗ ಏರಿಳಿತವಾಗುತ್ತಿರುತ್ತದೆ. ಇದರಿಂದ ಸಹಕಾರ ಸಂಸ್ಥೆಯ ಬೆಳವಣಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಷ್ಟವಾಗುತ್ತದೆ. ಸಂಸ್ಥೆಗೆ ಮತ್ತೊಂದು ಆರ್ಥಿಕ ಮೂಲವಾಗಿಯೂ ಸೂಪರ್ ಮಾರ್ಕೆಟ್‌ಗಳು ಕೆಲಸ ಮಾಡುತ್ತಿವೆ.

ಎಲ್ಲಿಂದಲೋ ಬಂದ ಹೂಡಿಕೆದಾರ, ಇಲ್ಲಿ ಲಾಭ ಮಾಡಿಕೊಂಡರೆ ಊರಿಗೇನು ಪ್ರಯೋಜನ ಎಂಬ ಯೋಚನೆಯೂ ಇದರ ಹಿಂದಿದೆ. ಈ ನಿಟ್ಟಿನಲ್ಲಿ ಕಾರ್ಯ ಆರಂಭ ಮಾಡಿದಸೂಪರ್ ಮಾರ್ಕೆಟ್‌ ಗಳು ಯಶಸ್ಸು ಕಂಡಿದ್ದು, ಸಹಕಾರ ಕ್ಷೇತ್ರದ ಆರ್ಥಿಕತೆಯ ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆಯನ್ನೇ ನೀಡುತ್ತಿವೆ.

ಹಳ್ಳಿಗಳಲ್ಲೂ ಸೂಪರ್ ಮಾರ್ಕೆಟ್‌ನ ಪರಿಕಲ್ಪನೆಯು ಗ್ರಾಮೀಣ ಗೃಹಿಣಿಯರ ವ್ಯವಹಾರ ಜ್ಞಾನಾಭಿವೃದ್ಧಿಗೂ ನೆರವಾ ಗಿದೆ ಎನ್ನುತ್ತಾರೆ ಶಿರಸಿಯ ಶಿರಗೋಡ ಗ್ರಾಮದ ಸವಿತಾ ಭಟ್.

‘ಕೆಲವು ವರ್ಷಗಳ ಹಿಂದೆ ದಿನಸಿ, ಕೆಲವು ದಿನಬಳಕೆ ವಸ್ತುಗಳ ಹೊರತಾಗಿ ಉಳಿದವುಗಳ ಖರೀದಿಗೆ ಹಳ್ಳಿಗರು ದೂರದ ಪಟ್ಟಣಕ್ಕೆ ಹೋಗಬೇಕಿತ್ತು. ಈಗ ಗ್ರಾಮೀಣ ಭಾಗದ ಸಹಕಾರ ಸಂಘಗಳು ಸೂಪರ್ ಮಾರ್ಕೆಟ್ ಆರಂಭಿಸಿವೆ. ಇದರಿಂದ ಹಳ್ಳಿಗಳ ಮಹಿಳೆ ಯರೂ ಶಾಪಿಂಗ್‌ಗೆ ಹೋಗಲು ಅನುಕೂಲವಾಗಿದೆ. ಮನೆಬಳಕೆಯ ಬಹುಪಾಲು ಸಾಮಗ್ರಿ ಇಲ್ಲಿ ಸಿಗುತ್ತಿವೆ. ಇದರಿಂದ ದೂರದ ಅಲೆದಾಟ ತಪ್ಪಿದೆ’ ಎನ್ನುತ್ತಾರೆ.

‘ಮಹಾನಗರಗಳಲ್ಲಿ ಕಾಣಸಿಗುತ್ತಿದ್ದ ಸೂಪರ್ ಮಾರ್ಕೆಟ್ ವ್ಯವಸ್ಥೆಯನ್ನು ಸಣ್ಣ ನಗರಕ್ಕೆ, ಹಳ್ಳಿಗಳಿಗೂ ಸಹಕಾರ ಸಂಘಗಳು ಪರಿಚಯಿಸಿದ್ದು ಮಾದರಿಯೇ ಸರಿ. ವಿಶೇಷವಾಗಿ ರೈತ ಕುಟುಂಬಗಳಿಗೆ ಹೊಂದಿಕೆಯಾಗುವಂತೆ ರೂಪುಗೊಂಡ ವ್ಯವಸ್ಥೆಯು ರೈತ ಮಹಿಳೆಯರಿಗೂ ಅನು ಕೂಲ ಮಾಡಿಕೊಟ್ಟಿದೆ’ ಎನ್ನುತ್ತಾರೆ ಉಂಬಳ ಮನೆ ಗ್ರಾಮದ ರೂಪಾ ಮಂಜುನಾಥ ಹೆಗಡೆ.

ಕೋಟ್ಯಂತರ ರೂಪಾಯಿ ವಹಿವಾಟು: ಈಗ ಶಿರಸಿ, ಯಲ್ಲಾಪುರ ಮತ್ತು ಸಿದ್ದಾಪುರ ತಾಲ್ಲೂಕುಗಳ ವಿವಿಧ ಹಳ್ಳಿ ಗಳಲ್ಲೂ ‘ಸೂಪರ್ ಮಾರ್ಕೆಟ್’ ಹಾಗೂ ‘ಮಿನಿ ಸೂಪರ್ ಮಾರ್ಕೆಟ್’ಗಳು ತಲೆಯೆತ್ತಿವೆ.

ವರ್ಷಕ್ಕೆ ಅಂದಾಜು ₹ 450 ಕೋಟಿಯಿಂದ ₹ 500 ಕೋಟಿಗಳ ವಹಿ ವಾಟು ನಡೆಸುತ್ತಿವೆ. ಹತ್ತಾರು ಕೋಟಿ ರೂಪಾಯಿಗಳ ಲಾಭ ಕಂಡುಕೊಂಡು ಅದರ ಪ್ರಯೋಜವನ್ನು ಸದಸ್ಯರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ವರ್ಗಾಯಿಸುತ್ತಿವೆ. ‘ನಮ್ಮ ಸಂಘದ ಕೃಷಿ ಮತ್ತು ಕಿರಾಣಿ ಸೂಪರ್‌ ಮಾರ್ಕೆಟ್‌ ಮೂಲಕ ಕಳೆದ ವರ್ಷ ₹ 275 ಕೋಟಿ ವ್ಯವಹಾರವಾಗಿದೆ. ಸಹಕಾರ ತತ್ವದಲ್ಲಿ ನಡೆಯುವ ಕಾರಣ ಸಂಸ್ಥೆಗೆ ಲಾಭಾಂಶ ಸ್ವಲ್ಪ ಕಡಿಮೆಯಿದೆ. ಆದರೆ, ಇದರಿಂದ ಗ್ರಾಹಕರಿಗೆ ಹೆಚ್ಚು ಪ್ರಯೋಜನವಾಗುತ್ತದೆ. ಅವರಿಗೆ ವರ್ಷದ ಒಟ್ಟು ಖರೀದಿ ಮೊತ್ತದ ಮೇಲೆ ಶೇ 2.5ರಷ್ಟು ರಿಯಾಯಿತಿ ಇದೆ. ಈ ರೀತಿ ಸಂಸ್ಥೆ ವರ್ಷಕ್ಕೆ ಹಂಚಿಕೆ ಮಾಡುವ ಮೊತ್ತವೇ ಸುಮಾರು ₹ 70 ಲಕ್ಷವಾಗುತ್ತದೆ’ ಎಂದು ಶಿರಸಿಯ ತೋಟಗಾರ್ಸ್ ಕೋ ಆಪರೇಟಿವ್ ಸೇಲ್ ಸೊಸೈಟಿಯ (ಟಿ.ಎಸ್.ಎಸ್) ಅಧ್ಯಕ್ಷ ರಾಮಕೃಷ್ಣ ಕಡವೆ ವಿವರಿಸುತ್ತಾರೆ.

‘ಈಗ ಸಂಸ್ಥೆಯಲ್ಲಿ 45 ಸಾವಿರ ಕೃಷಿಕ ಸದಸ್ಯರಿದ್ದಾರೆ. ಇನ್ನು, ರೈತರ ಹೊರತಾಗಿ ಶಿರಸಿ ತಾಲ್ಲೂಕಿನಿಂದಲೇ ಒಂದು ಲಕ್ಷಕ್ಕೂ ಅಧಿಕ ಗ್ರಾಹಕರು, ಉಳಿದ ತಾಲ್ಲೂಕುಗಳನ್ನು ಒಟ್ಟುಗೂಡಿಸಿದರೆ ಎರಡು ಲಕ್ಷಕ್ಕೂ ಹೆಚ್ಚು ಗ್ರಾಹಕರಿದ್ದಾರೆ’ ಎಂದು ಹೇಳುತ್ತಾರೆ.

‘ಟಿ.ಎಸ್.ಎಸ್ ಸಂಸ್ಥೆಯು ಶಿರಸಿಯಲ್ಲಿ 2011ರ ಏಪ್ರಿಲ್‌ನಲ್ಲಿ ಮೊದಲ ಸೂಪರ್ ಮಾರ್ಕೆಟ್ ತೆರೆಯಿತು. ಅಂದಿನಿಂದ ಸಿಕ್ಕಿರುವ ಯಶಸ್ಸನ್ನು ಆಧರಿಸಿ ಹಂತಹಂತವಾಗಿ ವಿಸ್ತರಣೆ ಮಾಡುತ್ತಿದ್ದೇವೆ’ ಎನ್ನುತ್ತಾರೆ ಅವರು.

ಹಳ್ಳಿಗಳಲ್ಲೂ ಶಾಖೆಗಳು: ಉತ್ತರ ಕನ್ನಡದಲ್ಲಿ ಸಹಕಾರ ಸಂಸ್ಥೆಗಳ ಸೂಪರ್ ಮಾರ್ಕೆಟ್‌ಗಳಲ್ಲಿ ನಡೆಯುವ ವ್ಯವಹಾರದಲ್ಲಿ ಟಿ.ಎಸ್.ಎಸ್ ಮುಂಚೂಣಿಯಲ್ಲಿದೆ. ಶಿರಸಿಯಲ್ಲಿ ಪ್ರಮುಖ ವಹಿವಾಟು ಕೇಂದ್ರ ಹೊಂದಿದ್ದು, ನಗರದಲ್ಲೇ ಎರಡು ಸೂಪರ್ ಮಾರ್ಕೆಟ್‌ಗಳನ್ನು ನಡೆಸುತ್ತಿದೆ. ಸಿದ್ದಾಪುರ, ಮುಂಡಗೋಡ, ಯಲ್ಲಾಪುರದಲ್ಲಿ ಶಾಖೆಗಳಿವೆ.

ಶಿರಸಿಯ ಹುಲೇಕಲ್ ಸೇವಾ ಸಹಕಾರ ಸಂಘದ ಜೊತೆಯಾಗಿ ಮಿನಿ ಸೂಪರ್ ಮಾರ್ಕೆಟ್, ಸಾಲ್ಕಣಿ, ದಾಸನಕೊಪ್ಪ, ಕೊರ್ಲಕಟ್ಟ, ಸಿದ್ದಾಪುರದ ಕೊರ್ಲಕೈ, ಶಿವಮೊಗ್ಗ ಜಿಲ್ಲೆ ಸೊರಬದ ನಿಸ್ರಾಣಿಯಲ್ಲಿ, ಬಾಡದಲ್ಲಿ ಸಹಭಾಗಿತ್ವದಲ್ಲಿ ಹಾಗೂ ಸಾಗರದ ಹೆಗ್ಗೋಡಿನಲ್ಲಿ ಕೂಡ ಶಾಖೆಗಳನ್ನು ಹೊಂದಿದೆ.

ಶಿರಸಿಯ ಕದಂಬ ಸೌಹಾರ್ದ ಮಾರ್ಕೆಟಿಂಗ್ ಸಹಕಾರ ಸಂಸ್ಥೆಯು ಹಲವು ವರ್ಷಗಳ ಹಿಂದೆಯೇ ಸಾವಯವ ಉತ್ಪನ್ನ, ಮಸಾಲೆ ಪದಾರ್ಥಗಳ ಮಾರಾಟದ ಮಳಿಗೆ ತೆರೆದಿದೆ. ಇಲ್ಲಿ ಸಾವಯವ ಉತ್ಪನ್ನಗಳ ಖರೀದಿ ಜತೆಗೆ ಅವುಗಳ ಮೌಲ್ಯವರ್ಧನೆ ಮಾಡಿ ಮಾರಾಟ ಮಾಡಲಾಗುತ್ತಿದೆ. ಈಚೆಗೆ ಉತ್ತರ ಕನ್ನಡ ಜಿಲ್ಲಾ ಸಾವಯವ ಒಕ್ಕೂಟ ಆರಂಭಿಸಲಾಗಿದ್ದು, ಅಲ್ಲಿಯೂ ಸಾವಯವ ತಿನಿಸು, ಉತ್ಪನ್ನಗಳ ವಹಿವಾಟು ಇದೆ.

ಇದೇ ಮಾದರಿಯಲ್ಲಿ ಶಿರಸಿಯ ಟಿ.ಎಂ.ಎಸ್. ಸಂಸ್ಥೆಯು 2021ರಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿದೆ. ಗ್ರಾಮೀಣ ಪ್ರದೇಶವಾದ ಭೈರುಂಬೆಯಲ್ಲಿ ಹುಳಗೋಳ ಸೇವಾ ಸಹಕಾರ ಸಂಘವು ರೈತರಿಗೆ ದಿನಸಿ, ಕೃಷಿ ಉಪಕರಣ ಸೇರಿದಂತೆ ಅಗತ್ಯ ಬಳಕೆ ವಸ್ತುಗಳನ್ನು ಸಂಸ್ಥೆಯ ಆವರಣದಲ್ಲೇ ಒದಗಿಸುತ್ತಿದೆ. ವಾನಳ್ಳಿ, ಸೋಂದಾ, ಹೆಗಡೆಕಟ್ಟಾ ಮುಂತಾದೆಡೆ ಕೂಡ ಸಹಕಾರ ಸಂಸ್ಥೆಗಳು ಇಂತಹ ಪ್ರಯೋಗಗಳಲ್ಲಿ ಯಶಸ್ವಿಯಾಗಿವೆ.

ಶಿರಸಿಯಿಂದ 40 ಕಿಲೋಮೀಟರ್ ದೂರದ ಮತ್ತಿಘಟ್ಟದಲ್ಲಿ ಮುಂಡಗನಮನೆ ಸೇವಾ ಸಹಕಾರ ಸಂಘ ಕೂಡ ಸೂಪರ್ ಮಾರ್ಕೆಟ್ ಮಾದರಿಯಲ್ಲೇ ಕಿರಾಣಿ ವಿಭಾಗ ಆರಂಭಿಸಿ ಹಲವು ವರ್ಷಗಳೇ ಕಳೆದವು. ಈ ಸಂಸ್ಥೆಯು ದೇವನಳ್ಳಿ, ಬೆಣಗಾಂವದಲ್ಲಿ ಶಾಖೆಗಳನ್ನು ಹೊಂದಿದೆ.

ರೈತರಿಂದಲೇ ಖರೀದಿ: ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟಕ್ಕೆ ಬೇಕಾದ ವಿವಿಧ ಬೇಳೆಕಾಳು, ತರಕಾರಿ, ಹಣ್ಣು ಮುಂತಾದವುಗಳನ್ನು ಅವು ಬೆಳೆಯುವ ಪ್ರದೇಶದಿಂದ, ನೇರವಾಗಿ ರೈತರಿಂದಲೇ ಖರೀದಿಸಲಾಗುತ್ತಿದೆ. ಬಳಿಕ ಅವುಗಳನ್ನು ವರ್ಗೀಕರಿಸಿ, ಸಂಸ್ಕರಿಸಿ ಪ್ಯಾಕೆಟ್‌ಗಳಲ್ಲಿ ತುಂಬಿ ಸಹಕಾರ ಸಂಸ್ಥೆಗಳ ‘ಬ್ರ್ಯಾಂಡ್’ ಮೂಲಕ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿದ್ದು, ಅಷ್ಟರ ಮಟ್ಟಿಗೆ ಆರ್ಥಿಕ ಹೊರೆಯು ಸಂಸ್ಥೆಗಳು ಮತ್ತು ಸದಸ್ಯರ ಮೇಲಿನಿಂದ ಇಳಿಕೆಯಾಗಿದೆ ಎನ್ನುತ್ತಾರೆ ಸಹಕಾರ ಧುರೀಣರು.

ನಗದುರಹಿತ ವಹಿವಾಟು

ಸಹಕಾರ ಸಂಸ್ಥೆಗಳ ಸೂಪರ್ ಮಾರ್ಕೆಟ್‌ಗಳಲ್ಲಿ ನಗದುರಹಿತ ವಹಿವಾಟು ನಡೆಯುವುದು ವಿಶೇಷವಾಗಿದೆ. ಗ್ರಾಹಕರು ಆ ಸಂಸ್ಥೆಯ ಸದಸ್ಯರಾಗಿದ್ದರೆ, ಅವರ ವಹಿವಾಟು ಖಾತೆಯೊಂದು ಅಲ್ಲಿರುತ್ತದೆ. ಸೂಪರ್ ಮಾರ್ಕೆಟ್‌ನಿಂದ ಏನಾದರೂ ಖರೀದಿಸಿದರೆ ಅವರ ಖಾತೆಯಿಂದಲೇ ಹಣ ಕಡಿತವಾಗುತ್ತದೆ. ಕೃಷಿಕರು ಸಂಸ್ಥೆಗೆ ಉತ್ಪನ್ನಗಳನ್ನು ಮಾರಾಟ ಮಾಡಿದರೂ ಅದೇ ಮಾದರಿಯಲ್ಲಿ ಹಣದ ನೇರ ವರ್ಗಾವಣೆಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.