ADVERTISEMENT

Elephant Attack | ಆನೆ ದಾಳಿ ಸಂತ್ರಸ್ತರ ಅರಣ್ಯ ರೋದನ

ಗಾಯಾಳುಗಳನ್ನು ನಿತ್ಯ ಕಾಡುತ್ತಿದೆ ನೋವು; ಎಲ್ಲದಕ್ಕೂ ಬೇರೆಯವರನ್ನೇ ಅವಲಂಬಿಸಿ ಬದುಕು

ಓದೇಶ ಸಕಲೇಶಪುರ
Published 30 ಆಗಸ್ಟ್ 2025, 23:30 IST
Last Updated 30 ಆಗಸ್ಟ್ 2025, 23:30 IST
<div class="paragraphs"><p>ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಪಾಪುರ ಗ್ರಾಮದ ಸಮೀಪ ಆನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ ದೃಶ್ಯ. &nbsp;ಪ್ರಜಾವಾಣಿ ಸಂಗ್ರಹ ಚಿತ್ರ: ಅನೂಪ್ ರಾಘ.ಟಿ.</p></div>

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಹಂಪಾಪುರ ಗ್ರಾಮದ ಸಮೀಪ ಆನೆಗಳ ಹಿಂಡು ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ ದೃಶ್ಯ.  ಪ್ರಜಾವಾಣಿ ಸಂಗ್ರಹ ಚಿತ್ರ: ಅನೂಪ್ ರಾಘ.ಟಿ.

   

ರಾಮನಗರ: ‘ಬೆಳಗ್ಗೆ 6 ಗಂಟೆಗೆ ತೋಟದ ಕಡೆಗೆ ವಾಕಿಂಗ್ ಹೋಗಿದ್ದೆ. ಸೇತುವೆ ಪಕ್ಕ ಏನೋ ಜೋರಾಗಿ ಕೂಗಿದಂತಾಯಿತು. ದನ ಇರಬೇಕು ಎಂದುಕೊಂಡು ನಾಲ್ಕೈದು ಹೆಜ್ಜೆ ಮುಂದಿಡುತ್ತಿದ್ದಂತೆ ದೊಡ್ಡ ಕಾಡಾನೆ ಎದುರಾಯಿತು. ಕಣ್ಮುಚ್ಚಿ ಬಿಡುವಷ್ಟರಲ್ಲಿ ನನ್ನನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಅಪ್ಪಳಿಸಿತು. ಅರೆಕ್ಷಣ ಪ್ರಜ್ಞೆ ತಪ್ಪಿ ಸೇತುವೆ ಪಕ್ಕ ಬಿದ್ದ ನನ್ನ ದೇಹವನ್ನು ಸೊಂಡಿಲಿನಿಂದ ಮೂಸಿತು. ನಾನು ಕಣ್ಣು ಬಿಡುತ್ತಿದ್ದಂತೆ ತಲೆ ಮೇಲೆ ಪಾದ ಇಡಲು ಕಾಲು ಎತ್ತಿತು. ನನ್ನ ಕಥೆ ಮುಗಿಯಿತೆಂದು ಜೋರಾಗಿ ಕಿರುಚಿಕೊಂಡೆ. ಆಗ ವಿಚಲಿತಗೊಂಡ ಆನೆ ನನ್ನ ಕಾಲಿನ ಮೇಲೆ ಪಾದ ಇಟ್ಟಿತು. ನೋವಿನಿಂದ ಜೋರಾಗಿ ಕೂಗಿಕೊಂಡು, ಪಕ್ಕಕ್ಕೆ ಹೊರಳಿದಾಗ ರಸ್ತೆ ಇಳಿಜಾರಿನಲ್ಲಿ ಕೆಳಕ್ಕೆ ಬಿದ್ದೆ. ಅಲ್ಲಿಗೆ ಬರಲಾಗದ ಆನೆ ಮೇಲಿಂದಲೇ ಕೆಲ ಹೊತ್ತು ದಿಟ್ಟಿಸಿ ಹೊರಟು ಹೋಯ್ತು...’

ಕಾಡಾನೆ ಕೈಗೆ ಸಿಲುಕಿ ಸಾವಿನ ಕದ ತಟ್ಟಿ ಬಂದ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದ 51 ವರ್ಷದ ಲಕ್ಷ್ಮಮ್ಮ ಮೂರು ವರ್ಷದ ಹಿಂದಿನ ಅನುಭವ ಹಂಚಿಕೊಳ್ಳುವಾಗ ಅವರ ಮೈ ನಡುಗುತ್ತಿತ್ತು. ಆ ಆಘಾತದಿಂದ ಹೊರಬರಲು ಅವರಿಗೆ ಇಂದಿಗೂ ಸಾಧ್ಯವಾಗಿಲ್ಲ. ಆ ಘಟನೆ ನೆನಪಿಸಿಕೊಂಡರೆ ಈಗಲೂ ಅವರ ಮೈ ಬೆವರುತ್ತದೆ. ಗಂಟಲು ಒಣಗಿ ದನಿ ಬಾರದಂತಾಗುತ್ತದೆ. 

ADVERTISEMENT

‘ಪಾದದಿಂದ ಮಂಡಿವರೆಗೆ ಮೂಳೆ ಮುರಿದಿದೆ. ಮೇಲ್ನೋಟಕ್ಕೆ ಏನು ಆಗಿಲ್ಲವೆಂಬಂತೆ ಕಂಡರೂ ಕಾಲು ಮತ್ತು ಕೈಗಳು ಅಷ್ಟಾಗಿ ಸ್ವಾಧೀನವಿಲ್ಲ. ಶೌಚಾಲಯದಲ್ಲಿ ಕೂರಲಾಗದ, ಚೊಂಬಿನಲ್ಲಿ ನೀರು ಕುಡಿಯಲಾಗದ ಸಹಾಯಕ ಸ್ಥಿತಿ ಇದೆ. ವೈಯಕ್ತಿಕ ಕೆಲಸಗಳಿಂದ ಹಿಡಿದು ಪ್ರತಿಯೊಂದಕ್ಕೂ ಮನೆಯವರನ್ನೇ ಅವಲಂಬಿಸಿದ್ದೇನೆ. ಕೂತರೂ, ನಿಂತರೂ, ಮಲಗಿದರೂ ಒಂದಲ್ಲ ಒಂದು ಕಡೆ ನೋವು. ಈ ರೀತಿ ಬದುಕಿಸುವ ಬದಲು ಆ ದೇವರು ನನ್ನನ್ನು ಒಮ್ಮೆಲೆ ಕರೆದುಕೊಂಡಿದ್ದರೆ ಚೆನ್ನಾಗಿರುತ್ತಿತ್ತು’ ಎಂದು ಲಕ್ಷ್ಮಮ್ಮ ಕಣ್ಣೀರಿಟ್ಟರು.

ಚನ್ನಪಟ್ಟಣ ತಾಲ್ಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕಾಡಾನೆ ಸೆರೆ ಕಾರ್ಯಾಚರಣೆಯ ದೃಶ್ಯ  (ಸಂಗ್ರಹ ಚಿತ್ರ)

ಬೆಳಗ್ಗೆ ಕಾಫಿ ತೋಟಕ್ಕೆ ಹೋದ ಕೂಲಿ ಕೆಲಸ ಮಾಡುವ ಮಹಿಳೆಯನ್ನು ಅಡ್ಡಗಟ್ಟಿದ ಒಂಟಿ ಸಲಗ ದಂತದಿಂದ ಚುಚ್ಚಿ ಕೊಲ್ಲಲು ಮುಂದಾಯಿತು. ಅದೃಷ್ಟವಶಾತ್ ದಂತ ತೊಡೆ ಮತ್ತು ಕೈಗೆ ಚುಚ್ಚಿಕೊಂಡಿತು. ಪ್ರಜ್ಞೆ ತಪ್ಪಿ ಬಿದ್ದ ಮಹಿಳೆ ಸತ್ತಿರಬಹುದು ಎಂದುಕೊಂಡ ಆನೆ ತೋಟದೊಳಗೆ ಮಾಯವಾಯಿತು. ದಂತದಿಂದ ಚುಚ್ಚಿದ ನೋವು ಇಂದಿಗೂ ವಾಸಿಯಾಗಿಲ್ಲ. ಓಡಾಡಲಾಗದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಸ್ಥಿತಿ. ಆ ಮಹಿಳೆಗೆ ಅನಾರೋಗ್ಯದಿಂದ ಬಳಲುತ್ತಿರುವ ಪತಿ ಜೊತೆಗೆ ಮೂವರು ಹೆಣ್ಣು ಮಕ್ಕಳು. ತಾಯಿಯ ಕೂಲಿ ಹಣದಲ್ಲೇ ಬದುಕುತ್ತಿದ್ದ ಕುಟುಂಬವೀಗ ಅತಂತ್ರವಾಗಿದೆ. ವಿಧಿ ಇಲ್ಲದೆ ಮಕ್ಕಳು ಕೂಲಿ ಮತ್ತು ಮನೆಗೆಲಸ ಮಾಡಿ ಕುಟುಂಬ ಸಲಹುತ್ತಿದ್ದಾರೆ.

ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಗ್ರಾಮದಲ್ಲಿ ಮೂರು ವರ್ಷದ ಹಿಂದೆ ಕಾಡಾನೆ ದಾಳಿಗೊಳಗಾದ ಫಾತಿಮಾ ಅವರ ಕರುಣಾಜನಕ ಸ್ಥಿತಿ ಇದು. ‘ಆ ಕಾಡಾನೆ ನನ್ನನ್ನು ಈ ಸ್ಥಿತಿಯಲ್ಲಿ ಬಿಡುವ ಬದಲು ಸಾಯಿಸಬೇಕಿತ್ತು. ಆಗ ನನಗೆ ಈ ನರಕದಿಂದ ಮುಕ್ತಿ ಸಿಗುತ್ತಿತ್ತು. ಆನೆ ದಾಳಿಯಿಂದ ಸತ್ತರೆ ಸಿಗುವ ಪರಿಹಾರದ ಮೊತ್ತದಿಂದ ಮಕ್ಕಳ ಭವಿಷ್ಯಕ್ಕಾದರೂ ಅನುಕೂಲವಾಗುತ್ತಿತ್ತು’ ಎಂದು ಫಾತಿಮಾ ನಿಟ್ಟುಸಿರು ಬಿಟ್ಟರು.

* * *

ನಾಡಿನತ್ತ ಮುಖ ಮಾಡಿರುವ ಕಾಡಾನೆಗಳು ಸೇರಿದಂತೆ ವನ್ಯಜೀವಿಗಳಿಂದ ದಾಳಿಗೊಳಗಾಗಿ ಅರೆಜೀವ ಹಿಡಿದು ಬದುಕುತ್ತಿರುವ ಸಂತ್ರಸ್ತರ ನೋವಿನ ಕತೆ ತೆರೆದುಕೊಳ್ಳುತ್ತದೆ. ಒಬ್ಬಬ್ಬರದ್ದೂ ಒಂದೊಂದು ಬಗೆಯ ಗೋಳು ಮತ್ತು ಕರುಣಾಜನಕ ಕತೆ. 

ರಾಜ್ಯದಲ್ಲಿ ವನ್ಯಜೀವಿಗಳ ದಾಳಿಗೆ ಕಳೆದ ಐದು ವರ್ಷಗಳಲ್ಲಿ 217 ಮಂದಿ ಬಲಿಯಾಗಿದ್ದಾರೆ. 1,355 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಕಾಡಾನೆ ದಾಳಿಯಿಂದಾದ ಸಾವು–ನೋವೇ ಹೆಚ್ಚು. ವಿವಿಧ ಹಂತದ ಅಂಗವೈಕಲ್ಯಕ್ಕೆ ತುತ್ತಾಗಿ ನಿತ್ಯವೂ ಆ ನೋವಿನಲ್ಲೇ ಕಣ್ಣೀರು ಹಾಕುತ್ತಾ ಬದುಕುತ್ತಿರುವ ಸಂತ್ರಸ್ತರ ಬದುಕನ್ನು ಕಣ್ಣಾರೆ ಕಂಡರೆ ಎಂಥವರ ಮನವಾದರೂ ಒಂದು ಕ್ಷಣ ಕಲುಕುತ್ತದೆ.

ಬಿಡಿಗಾಸಿನ ಪರಿಹಾರ: ಕಾಡಾನೆ ದಾಳಿಗೊಳಗಾಗಿ ಅಂಗವಿಕಲರಾದವರಿಗೆ ಅರಣ್ಯ ಇಲಾಖೆಯಿಂದ ಸಿಕ್ಕಿದ್ದು ಬಿಡಿಗಾಸಿನ ಪರಿಹಾರ. ಬಹುತೇಕ ಸಂತ್ರಸ್ತರು ಸುಧಾರಿಸಿಕೊಳ್ಳಲು ಕನಿಷ್ಠ ಆರು ತಿಂಗಳಿಂದ ಎರಡ್ಮೂರು ವರ್ಷಗಳವರೆಗೆ ಆಸ್ಪತ್ರೆಗೆ ಅಲೆದಿದ್ದಾರೆ. ಕಾಡಾನೆ ದಾಳಿಯಿಂದ ಶಾಶ್ವತ ಮತ್ತು ಭಾಗಶಃ ಅಂಗವೈಕಲ್ಯ, ಗಾಯಾಳುಗಳಿಗೆ ಅರಣ್ಯ ಇಲಾಖೆ ಅಲ್ಪ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದೆ. ವಾಸ್ತವದಲ್ಲಿ ಸಂತ್ರಸ್ತರು ತಮ್ಮ ಚಿಕಿತ್ಸೆಗೆ ಪರಿಹಾರದ ಮೊತ್ತದ ಎರಡರಿಂದ ಮೂರು ಪಟ್ಟು ಖರ್ಚು ಮಾಡಿದ್ದಾರೆ. ಇಂದಿಗೂ ಆಸ್ಪತ್ರೆಗೆ ಮತ್ತು ಔಷಧಕ್ಕೆ ಹಣ ಸುರಿಯುತ್ತಲೇ ಇದ್ದಾರೆ. ಇವರಲ್ಲಿ ಹೆಚ್ಚಿನ ಸಂತ್ರಸ್ತರು ಬಡ ರೈತರು ಹಾಗೂ ಕೂಲಿ ಕಾರ್ಮಿಕರು ಎನ್ನುವುದು ಗಮನಿಸಬೇಕಾದ ಅಂಶ.

ತಾರತಮ್ಯ: ಮಾನವ– ವನ್ಯಜೀವಿ ಸಂಘರ್ಷದಿಂದ ಪ್ರಾಣ ಹಾನಿ ಮತ್ತು ಅಂಗವೈಕಲ್ಯ ಪ್ರಕರಣಗಳ ಪರಿಹಾರದಲ್ಲೂ ಸಾರ್ವಜನಿಕರು ಮತ್ತು ಸಿಬ್ಬಂದಿ ಜೀವದ ವಿಷಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬುದು ಕೃಷಿ ಕಾರ್ಮಿಕರ ಆಕ್ರೋಶ. ಅರಣ್ಯದಿಂದ ಹೊರಗೆ ವನ್ಯಜೀವಿಗಳ ದಾಳಿಯಿಂದ ಸಾರ್ವಜನಿಕರು ಮೃತಪಟ್ಟರೆ ವರ್ಷದ ಹಿಂದೆ ₹15 ಲಕ್ಷ ನೀಡುತ್ತಿದ್ದ ಪರಿಹಾರ ಮೊತ್ತವನ್ನು ಈ ವರ್ಷ ₹20 ಲಕ್ಷಕ್ಕೆ ಏರಿಸಲಾಗಿದೆ. ಜೊತೆಗೆ ಮೃತರ ಒಬ್ಬರು ಅವಲಂಬಿತರಿಗೆ ಐದು ವರ್ಷದವರೆಗೆ ₹4 ಸಾವಿರ ಪಿಂಚಣಿ ಪಾವತಿಸಲಾಗುತ್ತಿದೆ. 

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಹೆಗ್ಗದೆ ಬಳಿ ಬೀಟಮ್ಮ 1 ಗುಂಪಿನ ಕಾಡಾನೆಗೆ ಗುರುವಾರ ರೇಡಿಯೋ ಕಾಲರ್ ಅಳವಡಿಸಲಾಯಿತು (ಸಂಗ್ರಹ ಚಿತ್ರ)

ಆದರೆ ಅರಣ್ಯ ಇಲಾಖೆಯ ಹೊರಗುತ್ತಿಗೆ ಸಿಬ್ಬಂದಿ ಕಾಡಿನಲ್ಲಿ ಆನೆ ಓಡಿಸುವಾಗ ಮೃತಪಟ್ಟರೆ ₹25 ಲಕ್ಷ ಪರಿಹಾರ ನೀಡಲಾಗುತ್ತದೆ. ಅವರ ಅವಲಂಬಿತರೊಬ್ಬರಿಗೆ ತಿಂಗಳಿಗೆ ₹5 ಸಾವಿರ ಪಿಂಚಣಿ ನೀಡಲಾಗುತ್ತದೆ. ಇಲಾಖೆ ಕಾಯಂ ಸಿಬ್ಬಂದಿಗೆ ವಿಮೆ ಇರುವುದರಿಂದ ಅವರೇನಾದರೂ ವನ್ಯಜೀವಿಗಳ ದಾಳಿಯಿಂದ ಮೃತಪಟ್ಟರೆ ₹50 ಲಕ್ಷ ಪರಿಹಾರ ಸಿಗುತ್ತದೆ. ಈ ತಾರತಮ್ಯವೇಕೆ ಎನ್ನುವ ಪ್ರಶ್ನೆ ಅರಣ್ಯದ ಅಂಚಿನಲ್ಲಿರುವವರಿಗಿದೆ.

ಕಾಡು ಪ್ರಾಣಿಯಿಂದ ಉಂಟಾಗುವ ಶಾಶ್ವತ ಅಂಗವಿಲಕತೆಗೆ ₹10 ಲಕ್ಷ ಪರಿಹಾರ, ಭಾಗಶಃ ಅಂಗವಿಕಲತೆಗೆ ₹5 ಲಕ್ಷ, ಕಾಡು ಪ್ರಾಣಿಗಳಿಂದ ಗಾಯಗೊಂಡ ಪ್ರತಿ ವ್ಯಕ್ತಿಗೆ ಗರಿಷ್ಠ ₹60 ಸಾವಿರದವರೆಗೆ ಪರಿಹಾರ, ಕಾಡಾನೆ ದಾಳಿಯಿಂದ ಉಂಟಾದ ಆಸ್ತಿ ನಷ್ಟವಾದ ಪ್ರತಿ ಪ್ರಕರಣಕ್ಕೆ ₹20 ಸಾವಿರ ನೀಡಲಾಗುತ್ತಿದೆ. ಹಾವಿನ ಕಡಿತದಿಂದ ಯಾವುದೇ ವ್ಯಕ್ತಿ ಮೃತಪಟ್ಟರೆ ಅವರಿಗೆ ಪರಿಹಾರವಾಗಲಿ, ಮಾಸಾಶನವಾಗಲಿ ಸಿಗುವುದಿಲ್ಲ. ವನ್ಯಜೀವಿಗಳ ದಾಳಿಯಿಂದ ಸಂಭವಿಸಿದ ಮನುಷ್ಯ ಮತ್ತು ಸಾಕುಪ್ರಾಣಿಗಳ ಸಾವು–ನೋವು, ಬೆಳೆ–ಆಸ್ತಿ ನಷ್ಟ ಹಾಗೂ ಮೃತರ ಅವಲಂಬಿತರ ಮಾಸಾಶನಕ್ಕೆ ಅರಣ್ಯ ಇಲಾಖೆ ಕಳೆದ ಐದು ವರ್ಷದಲ್ಲಿ ₹177.28 ಕೋಟಿ ವ್ಯಯಿಸಿದೆ!

ಮಾನದಂಡವೇನು?: ವನ್ಯಜೀವಿ ದಾಳಿಯಿಂದ ಮೃತಪಟ್ಟ ವ್ಯಕ್ತಿಯು ಅರಣ್ಯ ಪ್ರದೇಶದಲ್ಲಿ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರಬಾರದು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ವ್ಯಕ್ತಿ ವನ್ಯಜೀವಿಯಿಂದ ಮೃತನಾಗಿದ್ದಾನೆಂದು ದೃಢಪಟ್ಟಾಗ ಅವರ ವಾರಸುದಾರರಿಗೆ ₹20 ಲಕ್ಷ ಪರಿಹಾರ ನೀಡಲಾಗುತ್ತದೆ. ಈ ಪೈಕಿ ₹5 ಲಕ್ಷವನ್ನು ತಕ್ಷಣ ನೀಡಬೇಕು. ಉಳಿದ ಹಣವನ್ನು ಕ್ಷೇತ್ರ ವ್ಯಾಪ್ತಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಂತದಲ್ಲಿ ಅಥವಾ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಂದ ವಿಚಾರಣೆ ನಡೆಸಿ, ಅಗತ್ಯವಿರುವ ದಾಖಲೆ ಪಡೆದು ಪರಿಶೀಲಿಸಿ ಬಳಿಕ ಹಣ ಬಿಡುಗಡೆ ಮಾಡಲಾಗುತ್ತದೆ.

ಶೀಘ್ರ ಪರಿಹಾರ ನೀಡಬೇಕು ಎನ್ನುವುದು ಕಡತದಲ್ಲಿದೆ. ಆದರೆ ಇದೇನು ಸುಲಭವಾಗಿ ಬಿಡುಗಡೆಯಾಗುವುದಿಲ್ಲ. ‘ಕಾಡಾನೆ ದಾಳಿಗೆ ಸಿಲುಕಿ ಹಾಸಿಗೆ ಹಿಡಿದು ಸುಧಾರಿಸಿಕೊಂಡ ನಂತರ ನೋವಿನಲ್ಲೇ ಪರಿಹಾರಕ್ಕಾಗಿ ಅರಣ್ಯ ಇಲಾಖೆ ಕಚೇರಿಗೆ ಅಲೆದು ಸುಸ್ತಾದೆ. ಕಡೆಗೆ ನನ್ನ ಸ್ಥಿತಿಯನ್ನು ಅಳೆದು ತೂಗಿ ₹2.50 ಲಕ್ಷ ಪರಿಹಾರ ಕೊಟ್ಟರು. ನನ್ನ ದೇಹಕ್ಕೆ 27 ಹೊಲಿಗೆ ಹಾಕಲಾಗಿದೆ. ಕೈಗೆ ಬಂದ ಪರಿಹಾರಕ್ಕಿಂತ ಹೆಚ್ಚು ಹಣ ಆಸ್ಪತ್ರೆಗೆ ಖರ್ಚಾಯಿತು. ಮೂತ್ರಪಿಂಡ ವಿಫಲವಾಗಿದ್ದು ಆರು ತಿಂಗಳಿಗೊಮ್ಮೆ ತಪಾಸಣೆ ನಡೆಸಬೇಕೆಂದು ವೈದ್ಯರು ಹೇಳಿದ್ದಾರೆ. ಅದಕ್ಕೂ ನನ್ನ ಬಳಿ ಹಣವಿಲ್ಲದಂತಾಗಿದೆ’ ಎಂದು ಫಾತಿಮಾ ಅಳಲು ತೋಡಿಕೊಂಡರು.

‘ಆನೆ ದಾಳಿಯಿಂದ ನಿಮಗೆ ಅಷ್ಟೇನು ತೊಂದರೆಯಾಗಿಲ್ಲ ಎಂದ ಅರಣ್ಯ ಇಲಾಖೆಯವರು ಪರಿಹಾರವಾಗಿ ಕೊಟ್ಟಿದ್ದು ಕೇವಲ ₹35 ಸಾವಿರ. ಆದರೆ, ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿ ವೆಚ್ಚವಾಗಿದೆ. ನೋವು ನಿವಾರಣೆಗೆ ಅಂದಿನಿಂದ ತಿಂಗಳಿಗೆ ₹600 ಮೊತ್ತದ ಮಾತ್ರೆಗಳನ್ನು  ಸೇವಿಸುತ್ತಿದ್ದೇನೆ. ಏನೇ ಆದರೂ ಬಡವರಿಗೆ ಇಂತಹ ಸ್ಥಿತಿ ಬರಬಾರದು. ಇದ್ದರೆ ಚೆನ್ನಾಗಿರಬೇಕು. ಇಲ್ಲದಿದ್ದರೆ ಸತ್ತು ಹೋಗಿ ಬಿಡಬೇಕು’ ಎಂದು ಲಕ್ಷ್ಮಮ್ಮ ನೋವಿನಿಂದ ನುಡಿದರು.

ಅಭಿವೃದ್ದಿಯ ಸಂಘರ್ಷ: ಮನುಷ್ಯ ಒಂದೆಡೆ ತನ್ನ ಅಭಿವೃದ್ಧಿ ನೆಲೆಯನ್ನು ಕಾಡಿನತ್ತ ವಿಸ್ತರಿಸುತ್ತಿದ್ದರೆ ಮತ್ತೊಂದೆಡೆ ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳು ತಮ್ಮ ಆವಾಸಸ್ಥಾನ ಮತ್ತು ಆಹಾರವನ್ನು ನಾಡಿನಲ್ಲಿ ಹುಡುಕತೊಡಗಿವೆ. ಕಾಡಿನಲ್ಲಿ ಇಲ್ಲವೇ ಮೃಗಾಲಯ ಹಾಗೂ ವನ್ಯಜೀವಿಧಾಮದಲ್ಲಷ್ಟೇ ಈ ಹಿಂದೆ ಆನೆ, ಚಿರತೆ, ಕರಡಿಗಳ ದರ್ಶನ ಸಿಗುತ್ತಿತ್ತು. ಆದರೆ, ಕಳೆದ ಒಂದೂವರೆ ದಶಕದಲ್ಲಿ ಅದೇ ಆನೆಗಳು ಈಗ ಮನೆ ಮತ್ತು ಜಮೀನುಗಳಿಗೆ ನುಗ್ಗುತ್ತಿವೆ. ಚಿರತೆಗಳು ಗ್ರಾಮಗಳಿಗೆ ನುಗ್ಗಿ ಮನೆಯ ಮುಂದೆ ಮಲಗಿದ ನಾಯಿ, ಕೊಟ್ಟಿಗೆಯಲ್ಲಿರುವ ಹಸುಗಳನ್ನು ಎಳೆದೊಯ್ಯುತ್ತಿವೆ. ಎದುರಿಗೆ ಸಿಕ್ಕವರ ಮೇಲೆರಗಿ ಜೀವ ತೆಗೆಯುತ್ತಿವೆ. ಗಾಯಗೊಳಿಸಿ ಜೀವನಪೂರ್ತಿ ನರಳುವಂತೆ ಮಾಡಿದ ಅನೇಕ ಪ್ರಕರಣಗಳಿವೆ.

ಬೆಳೆಹಾನಿ ಸಾಮಾನ್ಯ: ಹಾಸನ, ಬೆಂಗಳೂರು ದಕ್ಷಿಣ (ರಾಮನಗರ), ಕೊಡಗು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು, ಧಾರವಾಡ, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾಡಾನೆ ಹಾವಳಿ ಇದೆ. ಜೀವ ಹಾನಿ, ಗಾಯಗೊಳಿಸುವುದು ಹಾಗೂ ಬೆಳೆಹಾನಿ ಸಾಮಾನ್ಯವಾಗಿದೆ.

ಹೆಸರಿಗಷ್ಟೇ ಆನೆ ಕಾರಿಡಾರ್ ಅಸ್ತಿತ್ವದಲ್ಲಿವೆ. ಎಲ್ಲಾ ಕಡೆ ಒತ್ತುವರಿಯಾಗಿ ಕಾರಿಡಾರ್‌ ತುಂಡುತುಂಡಾಗಿದೆ. ಆನೆಗಳ ಆವಾಸಸ್ಥಾನವಾಗಿರುವ ರಾಷ್ಟ್ರೀಯ ಉದ್ಯಾನ, ವನ್ಯಜೀವಿಧಾಮ, ಅಭಯಾರಣ್ಯ, ಮೀಸಲು ಅರಣ್ಯ, ಪಶ್ಚಿಮ ಘಟ್ಟದ ಕಾಡು, ನದಿಯಂಚಿನ ಪ್ರದೇಶಗಳನ್ನು ದಾಟಿ ಕಾಡಾನೆಗಳು ನಾಡಿಗೆ ಬರುತ್ತಿವೆ.

‘ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲು ಮತ್ತು ಕುಶಾಲನಗರದ ದುಬಾರೆಯಲ್ಲಿ ಆನೆ ಶಿಬಿರಗಳಿದ್ದು ವಿವಿಧೆಡೆ ಸೆರೆ ಹಿಡಿದ ಪುಂಡಾನೆಗಳನ್ನು ಇಲ್ಲಿ ಪಳಗಿಸಲಾಗುತ್ತದೆ. ಜೀವ ಹಾನಿ ಜೊತೆಗೆ ಹೆಚ್ಚಿನ ಬೆಳೆ ಹಾನಿ ಮಾಡುವ ಪುಂಡಾನೆಗಳನ್ನು ಸೆರೆ ಕಾರ್ಯಾಚರಣೆಗೆ ಈ ಶಿಬಿರದಲ್ಲಿ ಪಳಗಿಸಿದ ಸಾಕಾನೆಗಳನ್ನು ಬಳಸಲಾಗುತ್ತದೆ’ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಮಾಹಿತಿ ನೀಡಿದರು.

ಕನಕಪುರ ತಾಲ್ಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದಲ್ಲಿ ಮೇ ತಿಂಗಳಲ್ಲಿ ಕಾಡಾನೆ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಶಿವಲಿಂಗಯ್ಯ

ಆನೆಗಳನ್ನು ಹಿಡಿದು ಬೇರೆ ಕಾಡಿಗೆ ಬಿಡುವುದು ಅವೈಜ್ಞಾನಿಕ. ಹುಟ್ಟಿದೂರಲ್ಲಿ ಬೆಳೆದ ಮಗುವನ್ನು ಬೇರೆಲ್ಲೊ ಬಿಟ್ಟು ಬಂದರೆ ತಬ್ಬಲಿಗಳನ್ನು ಮತ್ತು ಭಿಕ್ಷುಕರನ್ನು ಸೃಷ್ಟಿಸಿದಂತಲ್ಲವೇ? ಎಲ್ಲೇ ಬಿಟ್ಟರೂ ಅವು ಮತ್ತೆ ಹಿಂದಿರುಗಿ ಬಂದಿರುವ ಹಲವು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ ಎನ್ನುತ್ತಾರೆ ವನ್ಯಜೀವಿ ವಿಜ್ಞಾನಿ ಕೃಪಾಕರ.

ಮೂಲನೆಲೆಗೆ ವಾಪಸಾಗುವ ಧಾವಂತದಲ್ಲಿರುವ ಕಾಡನೆಗಳು ತಮಗೆ ಪರಿಚಯವಿಲ್ಲದ ಹಾದಿಯಲ್ಲಿ ಸಿಗುವ ಜಮೀನು-ಗ್ರಾಮಗಳಲ್ಲಿ ಮನುಷ್ಯರನ್ನು ಕಂಡಾಗ ಅವು ಅನುಭವಿಸಿದ್ದ ಮಾನಸಿಕ ಕಿರಿಕಿರಿಯು ಸಹಜವಾಗಿಯೇ ಆಟಾಟೋಪದ ರೂಪದಲ್ಲಿ ವ್ಯಕ್ತವಾಗುತ್ತದೆ ಎಂದು ವಿಶ್ಲೇಷಿಸುತ್ತಾರೆ.

ಆವಾಸಸ್ಥಾನ ರಕ್ಷಣೆಯೇ ಪರಿಹಾರ: ‘ಜನಸಂಖ್ಯೆ ಹೆಚ್ಚಿದಂತೆ ಹೇಗೆ ನಗರ ಮತ್ತು ಪಟ್ಟಣಗಳನ್ನು ವಿಸ್ತರಿಸಿ ಮೂಲಸೌಕರ್ಯಗಳನ್ನು ವಿಸ್ತರಿಸಲು ಸರ್ಕಾರ ರೂಪುರೇಷೆ ಸಿದ್ದಪಡಿಸಿ ಯೋಜನೆ ರೂಪಿಸುತ್ತದೊ, ಅದೇ ರೀತಿ ವನ್ಯಜೀವಿಗಳ ವಿಷಯದಲ್ಲೂ ಚಿಂತನೆ ನಡೆಸಬೇಕು. 2010ರಲ್ಲಿ ರಾಜ್ಯದಲ್ಲಿ 5,740 ಇದ್ದ ಕಾಡಾನೆಗಳ ಸಂಖ್ಯೆ ಈಗ 6,395ಕ್ಕೆ ಏರಿಕೆಯಾಗಿದೆ. ಕಾಡಿನಲ್ಲಿ ಅವುಗಳ ಆವಾಸಸ್ಥಾನ ಕಿರಿದಾಗುತ್ತಾ ಬಂದಿದೆ. ಆಹಾರ ಸೇರಿದಂತೆ ವಿವಿಧ ಕಾರಣಗಳಿಗಾಗಿ ಆನೆಗಳು ನಾಡಿನತ್ತ ಮುಖ ಮಾಡಿವೆ. ಅವುಗಳ ಸ್ವಾಭಾವಿಕ ಆವಾಸಸ್ಥಾನ ಸಂರಕ್ಷಿಸಿ ಹೊರಗೆ ಬಾರದಂತೆ ನೋಡಿಕೊಳ್ಳುವುದೊಂದೇ ಇದಕ್ಕಿರುವ ಪರಿಹಾರ’ ಎನ್ನುತ್ತಾರೆ ಚನ್ನಪಟ್ಟಣ ರೈತ ಮುಖಂಡ ಸಿ. ಪುಟ್ಟಸ್ವಾಮಿ.

ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ

ಪೂರಕ ಮಾಹಿತಿ: ಬ್ಯುರೊಗಳಿಂದ

ಈಶ್ವರ ಖಂಡ್ರೆ ಅರಣ್ಯ ಸಚಿವ
ಮುಖಪುಟ ಆನೆ ಹಾವಳಿ ನಿಯಂತ್ರಣಕ್ಕೆ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಎರಡು ವರ್ಷದಿಂದ ವೇಗವಾಗಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುತ್ತಿದೆ. ಆನೆಧಾಮ ಸ್ಥಾಪನೆಗೆ ಕ್ರಮದ ಜೊತೆಗೆ ಆನೆ ಕಾರಿಡಾರ್ ಪುನಶ್ಚೇತನಕ್ಕೆ ಒತ್ತು ನೀಡಲಾಗಿದೆ
– ಈಶ್ವರ ಖಂಡ್ರೆ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ
ಆನೆಯನ್ನು ಸೆರೆ ಹಿಡಿದು ರೆಡಿಯೋ ಕಾಲರ್‌ ಅಳವಡಿಸಿ ಮತ್ತದೇ ಜಾಗದಲ್ಲಿ ಬಿಡಲಾಗುತ್ತಿದೆ. ಅದೇ ಹಣವನ್ನು ಬಳಸಿ ಆನೆಗಳಿಗೆ ಕಾರಿಡಾರ್‌ ಅಥವಾ ಆನೆಧಾಮ ನಿರ್ಮಿಸಿದರೆ ಸಮಸ್ಯೆ ಬಹುತೇಕ ಪರಿಹಾರವಾಗಬಹುದು
– ಕಿಶೋರ್‌ ಕುಮಾರ್ ಪರಿಸರವಾದಿ ಹಾಸನ
ಕಾಡಾನೆಗಳ ಹಾವಳಿಗೆ ಬೇಸತ್ತು ಅರಣ್ಯದಂಚಿನ ಗ್ರಾಮಗಳ ರೈತರು ತಮ್ಮ ಕೃಷಿ ಭೂಮಿಗಳನ್ನು ಪಾಳು ಬಿಟ್ಟಿದ್ದಾರೆ. ಅಂತಹ ಭೂಮಿಗಳನ್ನು ಅರಣ್ಯ ಇಲಾಖೆ ಭೋಗ್ಯಕ್ಕೆ ಪಡೆದು ರೈತರಿಗೆ ಇಂತಿಷ್ಟು ಮೊತ್ತ ಪಾವತಿಸಬೇಕು
– ಸಿ. ಪುಟ್ಟಸ್ವಾಮಿ ರೈತ ಮುಖಂಡ ಚನ್ನಪಟ್ಟಣ
ಕೊಡಗಿನ ಕಾಫಿ ತೋಟದಲ್ಲಿ ಕಾಡಾನೆ ಹಿಂಡು

ಆನೆ ಕಾರಿಡಾರ್‌ಗೆ ಭೂಮಿ ಖರೀದಿಸಲಿ’

‘ಹಿಂದೆ ಕಾಡು ಸಮೃದ್ಧವಾಗಿತ್ತು. ಕಾಡಂಚಿನಲೂ ರೈತರಿಗೆ ಕಾಡಾನೆ ಸೇರಿ ವನ್ಯಜೀವಿಗಳಿಂದ ಸಮಸ್ಯೆ ಇರಲಿಲ್ಲ. ಅರಣ್ಯ ನಾಶದಿಂದ ಕಾಡು ಪ್ರಾಣಿಗಳು ನಾಡಿಗೆ ಬರಬೇಕಾದ ಸ್ಥಿತಿ ಬಂದಿದೆ.

ಪ್ರವಾಸೋದ್ಯಮ ಕೇಂದ್ರಿತ ಅಭಿವೃದ್ಧಿಯೇ ಸರ್ಕಾರಕ್ಕೆ ಮುಖ್ಯವಾಗಿದೆ. ಹೀಗಾಗಿ ಅರಣ್ಯದಂಚಿನಲ್ಲಿ ನಿಯಮ ಮೀರಿ ರೆಸಾರ್ಟ್ ಹೋಂಸ್ಟೇಗಳು ನಿರ್ಮಾಣವಾಗಿವೆ. ಆನೆಗಳು ಕೊಡಗು ಭಾಗದಲ್ಲಿ ತೋಟದಲ್ಲಿಯೇ ಮರಿ ಹಾಕಿ ಅಲ್ಲಿಯೇ ಜೀವಿಸುತ್ತಿವೆ. ಕಾಡಾನೆಗಳು ತೋಟದಾನೆಗಳಾಗಿ ಮಾಡಿದವರು ನಾವೇ ಅಲ್ಲವೆ! ಆನೆ ಮಾನವ ಸಂಘರ್ಷ ಕೊನೆಗೊಳಿಸಲು ದೊಡ್ಡಿ ಮಾಡಿ ಆನೆಗಳನ್ನು ದನಗಳಂತೆ ಕೂಡಿ ಹಾಕುವುದು ವಿವೇಕಿಗಳು ಮಾಡುವ ಕೆಲಸವಲ್ಲ.

ಇದು ಹಣದ ಲೂಟಿಯ ಮಾರ್ಗವಷ್ಟೇ. ಅದರ ಬದಲು ಅದೇ ಹಣದಲ್ಲಿ ಆನೆಗಳ ಕಾರಿಡಾರ್‌ ರಕ್ಷಣೆಯಾಗಲಿ. ಬಂಡವಾಳಶಾಹಿಗಳಿಗೆ ಕೈಗಾರಿಕೆ ಸ್ಥಾಪಿಸಲು ರೈತರ ಭೂಮಿ ಕಸಿಯುವ ಕೆಲಸ ಮಾಡುವ ಬದಲು ಆನೆಗಳ ಕಾರಿಡಾರ್‌ ರಕ್ಷಿಸಬೇಕು. ಹೆದ್ದಾರಿ ಗಣಿಗಾರಿಕೆ ಪ್ರವಾಸೋದ್ಯಮದ ಹೆಸರಿನಲ್ಲಿ ಕಾರಿಡಾರ್‌ ನಾಶ ಮಾಡಲಾಗಿದೆ. ಆನೆಮಾನವ ಸಂಘರ್ಷ ತಪ್ಪಿಸಲು ಸರ್ಕಾರ ಪ್ರಾಮಾಣಿಕ ಕಾರ್ಯ ಮಾಡಬೇಕು. – ಬಡಗಲಪುರ ನಾಗೇಂದ್ರ ಅಧ್ಯಕ್ಷ ರಾಜ್ಯ ರೈತ ಸಂಘ

ಸಂಘರ್ಷಕ್ಕೆ ಮಾನವನ ಹಸ್ತಕ್ಷೇಪ ಕಾರಣ

ಕಾಡಾನೆಗಳೇಕೆ ನಾಡಿಗೆ ಬರುತ್ತಿವೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಈ ಬಗ್ಗೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸಡ್‌ ಸ್ಟಡೀಸ್‌(ನಿಯಾಸ್‌) ವಿಜ್ಞಾನಿ ಡಾ. ವಿದ್ಯಾ ಈ ಕುರಿತು ಸಮಗ್ರ ಸಂಶೋಧನೆ ನಡೆಸಿದ್ದಾರೆ.

‘17 ವರ್ಷಗಳಿಂದ ಆನೆಗಳ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗಿಲ್ಲ. ನಾಡಿಗೆ ಬರಲು ಅವುಗಳ ಸಾಂದ್ರತೆಯೂ ಕಾರಣವಲ್ಲ. ಮಾನವನ ಹಸ್ತಕ್ಷೇಪದಿಂದಾಗಿ ಕೆಲ ದಶಕಗಳಿಂದ ಕಾಡಿನ ಮೂಲಸ್ವರೂಪಕ್ಕೆ ಧಕ್ಕೆಯಾಗಿದೆ. ವಿದೇಶದಿಂದ ತಂದ ಲಂಟಾನ ಸೆನ್ನಾ ಕಳೆಗಳು ಆನೆಗಳಿರುವ ಕಾಡಿನ ಶೇ 50ಕ್ಕಿಂತ ಹೆಚ್ಚು ಪ್ರದೇಶವನ್ನು ಆಕ್ರಮಿಸಿವೆ. ನಮ್ಮ ಜೀವ ಪರಿಸರಕ್ಕೆ ಸಂಬಂಧವಿಲ್ಲದ ಈ ಗಿಡಗಳು ಆನೆಗಳ ಆಹಾರದ ಆಯ್ಕೆಯನ್ನು ಮಿತಿಗೊಳಿಸಿರಬಹುದು’ ಎನ್ನುವುದು ಅವರ ವಾದ.

ಈಗಾಗಲೇ ಪಶ್ಚಿಮ ಘಟ್ಟದ ಸಾವಿರಾರು ಎಕರೆ ಕಾಡುಗಳು ಒತ್ತುವರಿಯಾಗಿ ತೋಟಗಳಾಗಿವೆ. ಬಹುತೇಕ ಅರಣ್ಯಗಳನ್ನು ಸೀಳಿದಂತೆ ರಸ್ತೆಗಳು ಬೇರ್ಪಡಿಸಿವೆ. ಅಳಿದುಳಿದ ನೆಲೆಗಳನ್ನು ಅಣೆಕಟ್ಟೆಗಳು ಮತ್ತು ಹೆದ್ದಾರಿ ಕಾರಿಡಾರ್‌ ಕತ್ತರಿಸಿ ಹಾಕಿವೆ. ಈಗ ಕಾಡಾನೆ ತಡೆಯಲು ನಾವು ಕಂದಕ ಮತ್ತು ಬೇಲಿಗಳ ಮೊರೆ ಹೋಗಿದ್ದೇವೆ. ಈ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ಒಳನೋಟದ ಕೊರತೆ ಇದೆ. ವಿವಿಧ ಕಾರಣಗಳಿಗೆ ವನ್ಯಜೀವಿಗಳು ಬಳಸುವ ವಲಸೆ ಹಾದಿಗಳನ್ನೇ ಅಳಿಸಿ ಹೋಗಿವೆ. ಯಾವುದಾದರೊಂದು ಆನೆ ಕಾಡಂಚಿನ ಜಮೀನಿಗೆ ಹೋಗಲು ಶುರು ಮಾಡಿದರೆ ಕ್ರಮೇಣ ಇಡೀ ಗುಂಪು ಆಹಾರದ ಹೊಸ ಮೂಲ ಕಂಡುಕೊಳುತ್ತದೆ. ಬೆಳೆಯ ಅವುಗಳಿಗೆ ಆಹಾರವಷ್ಟೆ.

ಫಸಲು ನಾಶ ಆನೆ ದಾಳಿ ಎಂಬುದು ನಮ್ಮ ತೀರ್ಮಾನ. ಆನೆಗಳು ಸಂವೇದನಾಶೀಲ ಸಾಮಾಜಿಕ ಪ್ರಾಣಿಗಳು. ಮಾನವ ಸಮಾಜದಂತೆಯೇ ಅವುಗಳ ಸಮಾಜದ ಒಳಗೆ ಸಾಕಷ್ಟು ಒತ್ತಡಗಳು ಕಟ್ಟುಪಾಡುಗಳು ಇರುತ್ತವೆ. ದೊಡ್ಡಿ ಮಾಡಿ ಕೂಡಿಡುವುದಾಗಲಿ ಅವುಗಳ ವಲಸೆಯ ದಾರಿಗಳನ್ನು ನಮ್ಮಿಷ್ಟಕ್ಕೆ ಬದಲಿಸುವುದಾಗಲಿ ಮಾಡಿದರೆ ಅದು ಅಮಾನವೀಯ. ಮಾನವೀಯತೆಯ ಹೆಸರಿನಲ್ಲಿ ಕೌರ್ಯವನ್ನು ಪ್ರತಿಪಾದಿಸುವುದು ನಾಗರಿಕ ಸಮಾಜಕ್ಕೆ ಸಲ್ಲದ ನಡವಳಿಕೆ. 1990ರಲ್ಲಿ ವಿಜ್ಞಾನಿ ಅಜಯ್‌ ದೇಸಾಯಿ ಅವರು ಆನೆಗಳ ಕಾರಿಡಾರ್ ಬಗ್ಗೆ ತಿಳಿಸುವವರೆಗೂ ಕಾರಿಡಾರ್ ಎಷ್ಟು ಮುಖ್ಯವೆಂದು ಗೊತ್ತಿರಲಿಲ್ಲ. ಅಷ್ಟೊತ್ತಿಗಾಗಲೇ ಕಾರಿಡಾರ್‌ಗಳನ್ನು ದುರಸ್ತಿ ಮಾಡುವುದೂ ಕಷ್ಟವೆನಿಸುವಷ್ಟು ನಾಶವಾಗಿತ್ತು. ಕಿರಿದಾಗಿರುವ ಇಕ್ಕಟ್ಟಾಗಿರುವ ಹದಗೆಟ್ಟಿರುವ ಮತ್ತು ಕ್ಷೋಭೆಗೊಳಗಾದ ಕಾರಿಡಾರ್‌ಗಳನ್ನು ವಿಸ್ತರಿಸುವ ಇಚ್ಛಾಶಕ್ತಿ ಆಡಳಿತ ವ್ಯವಸ್ಥೆಗೆ ಬೇಕು. ಆಗ ಕಾಡಾನೆ–ಮಾನವ ಸಂಘರ್ಷ ನಿಧಾನವಾಗಿ ತಗ್ಗಲಿದೆ. – ಕೃಪಾಕರ ಸೇನಾನಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಚಿತ್ರ ನಿರ್ಮಾಪಕರು

ಗುಂಡ್ಲುಪೇಟೆ ತಾಲ್ಲೂಕಿನ ಹಿಮವದ್ ಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಈಚೆಗೆ ಕಾಡಾನೆ ಜನರನ್ನು ಅಟ್ಟಿಸಿಕೊಂಡು ಬಂದಿದ್ದ ದೃಶ್ಯ

ಆನೆ ಕಾರ್ಯಾಚರಣೆ ಎಂಬ ಹರಸಾಹಸ

ಕರ್ನಾಟಕದಲ್ಲಿ ಒಟ್ಟು 38724 ಚದರ ಕಿ.ಮೀ. ಅರಣ್ಯ ಪ್ರದೇಶವಿದೆ. 2023ರ ಆನೆ ಗಣತಿ ಪ್ರಕಾರ ರಾಜ್ಯದಲ್ಲಿ 6395 ಆನೆಗಳಿವೆ.

ಇದು ದೇಶದಲ್ಲೇ ಅತಿ ಹೆಚ್ಚು. ಒಂದೆಡೆ ಆನೆ ಸಂತತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದರೆ ಮತ್ತೊಂದೆಡೆ ಕಾಡು ಕಡಿಮೆಯಾಗುತ್ತಿದೆ. ಕಾಡಾನೆಗಳು ಆಹಾರ ಸಿಗದೇ ನಾಡಿನತ್ತ ಬರುತ್ತಿವೆ. ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂಧಲೆ ನಡೆಸುವ ಆನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮರಳಿ ಕಾಡಿಗೆ ಬಿಡುವ ಕಾರ್ಯಾಚರಣೆಯನ್ನು ಕೈಗೊಂಡಿದೆ. 2015ರಿಂದ 2024ರವರೆಗೆ ಒಟ್ಟು 115 ಪುಂಡಾನೆಗಳನ್ನು ಸೆರೆ ಹಿಡಿದು ಪಳಗಿಸಲಾಗಿದೆ. 130 ಆನೆಗಳನ್ನು ಸ್ಥಳಾಂತರಿಸಲಾಗಿದೆ. ಸುಮಾರು 110 ಆನೆಗಳನ್ನು ವಿವಿಧ ರಾಜ್ಯಗಳಿಗೆ ಕೊಡುಗೆಯಾಗಿ ನೀಡಲಾಗಿದೆ. 350ಕ್ಕೂ ಅಧಿಕ ಆನೆಗಳಿಗೆ ರೇಡಿಯೋ ಕಾಲರ್‌ ಅಳವಡಿಸಿ ನಿಗಾ ಇಡಲಾಗಿದೆ. ಈ ಕಾರ್ಯಾಚರಣೆ ಹರಸಾಹಸದ ಜೊತೆಗೆ ದುಬಾರಿ ಕೂಡ. ‘ಒಂದು ಆನೆಗೆ ರೇಡಿಯೋ ಕಾಲರ್ ಅಳವಡಿಸಲು ₹18 ಲಕ್ಷದಿಂದ ₹22 ಲಕ್ಷದವರೆಗೆ ವೆಚ್ಚವಾಗುತ್ತಿದೆ. ಆಮದು ಮಾಡಿಕೊಳ್ಳುವ ರೇಡಿಯೋ ಕಾಲರ್‌ಗಳಿಗೆ ₹7 ಲಕ್ಷ ದೇಶಿಯ ರೇಡಿಯೋ ಕಾಲರ್‌ಗೆ ₹1.8 ಲಕ್ಷ ದರವಿದೆ. ಕಾರ್ಯಾಚರಣೆಗೆ ₹15 ಲಕ್ಷದಿಂದ ₹16 ಲಕ್ಷ ವೆಚ್ಚವಾಗುತ್ತದೆ. ಪ್ರಮುಖವಾಗಿ ಹೆಣ್ಣಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತಿದೆ. ಅವುಗಳ ಸುತ್ತ ಗಂಡಾನೆಗಳು ಗುಂಪಾಗಿ ಸಂಚರಿಸುತ್ತಿರುವುದರಿಂದ ಹಿಂಡಿನ ಮೇಲೆ ನಿಗಾ ಇಡಬಹುದು. ಚಾಣಾಕ್ಷ ಬುದ್ದಿಯಿರುವ ಆನೆಗಳನ್ನು ಸ್ಥಳಾಂತರಿಸಿದರೂ ಮತ್ತೆ ತಮ್ಮ ಮೂಲಸ್ಥಳಗಳಿಗೆ ವಾಪಸಾಗುತ್ತವೆ. ಹಾಸನ ಜಿಲ್ಲೆಯಲ್ಲಿ ಭೀಮ ಎಂಬ ಆನೆಯನ್ನು ಹಿಡಿದು ನಾಗರಹೊಳೆ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು.

ಮೂಡಿಗೆರೆಯ ಬಿದರುತಳ; ವಧು ಸಿಗದೆ ಪರದಾಟ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಿದರುತಳ ಗ್ರಾಮದಲ್ಲಿ ಕಾಡಾನೆ ಹಾವಳಿ ತೀವ್ರವಾಗಿದೆ. ಗ್ರಾಮದ ಕೆಲವರು ಊರು ಬಿಟ್ಟು ಬೇರೆಡೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ಗದ್ದೆ ಮತ್ತು ತೋಟಗಳು ಪಾಳು ಬಿದ್ದಿವೆ. ಕಾಫಿ ತೋಟಗಳು ಕುರುಚಲು ಕಾಡಿನಂತಾಗಿವೆ. ಗ್ರಾಮಕ್ಕೆ ಹೆಣ್ಣು ಕೊಡಲು ಜನ ಹಿಂದೇಟು ಹಾಕುತ್ತಿದ್ದಾರೆ. 45 ವರ್ಷ ದಾಟಿದರೂ ಇಲ್ಲಿನ ವಿವಾಹ ಭಾಗ್ಯವಿಲ್ಲವಾಗಿದೆ. ಜಮೀನು ಪಾಳು ಬಿಟ್ಟಿರುವವರು ಕೊಟ್ಟಿಗೆಹಾರ ಸೇರಿದಂತೆ ಬೇರೆಡೆ ಕೂಲಿ ಮಾಡಿ ಬದುಕುತ್ತಿದ್ದಾರೆ. ಒಂದು ಕಾಲದಲ್ಲಿ ಭೂಮಾಲೀಕರಾಗಿದ್ದವರು ಈಗ ಕಾಫಿತೋಟ ಹೋಂಸ್ಟೆ ರೆಸಾರ್ಟ್‌ ಹೋಟೆಲ್‌ಗಳಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ‘ನಮ್ಮೂರಿನ ಹೆಸರು ಕೇಳಿದರೆ ಸುತ್ತಲಿನ ಯಾವ ಹಳ್ಳಿಯಲ್ಲೂ ವಧು ಸಿಗುವುದಿಲ್ಲ. ಇದರಿಂದ ಮದುವೆ ಕನಸೇ ಕಮರಿ ಹೋಗಿದೆ’ ಎಂದು ರೆಸಾರ್ಟ್‌ವೊಂದರಲ್ಲಿ ಚಾಲಕನಾಗಿರುವ ಗ್ರಾಮದ ಸತೀಶ್ ಕೂಲಿ ಕಾರ್ಮಿಕ ಗಿರೀಶ್ ಬೇಸರ ವ್ಯಕ್ತಪಡಿಸಿದರು.

8 ಆನೆ ಕಾರ್ಯಪಡೆ, 9 ಕಾರಿಡಾರ್

ಕಾಡಾನೆಗಳ ಉಪಟಳ ಹೆಚ್ಚಾಗಿರುವ ರಾಜ್ಯದ ಜಿಲ್ಲೆಗಳಾದ ಹಾಸನ ಚಾಮರಾಜನಗರ ಕೊಡಗು ಬೆಂಗಳೂರು ದಕ್ಷಿಣ (ರಾಮನಗರ) ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಚಿಕ್ಕಮಗಳೂರು ಬಂಡೀಪುರ ಮೈಸೂರು ಸೇರಿ 8 ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಯನ್ನು ಅರಣ್ಯ ಇಲಾಖೆ ರಚಿಸಿದೆ. ಪ್ರತಿ ಪಡೆಯಲ್ಲಿ ಇಲಾಖೆ ಅಧಿಕಾರಿ ಮತ್ತು ಸ್ಥಳೀಯ ಯುವಜನರನ್ನು ಒಳಗೊಂಡಂತೆ 40 ಮಂದಿ ಇದ್ದಾರೆ. ರಾಜ್ಯದಾದ್ಯಂತ 340 ಮಂದಿ ಕಾರ್ಯಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರಿಡಾರ್: ರಾಜ್ಯದಲ್ಲಿ ಆನೆಗಳ ಸಹಜ ಸಂಚಾರ ಆಧರಿಸಿ ಅರಣ್ಯ ಇಲಾಖೆಯು 9 ಕಡೆ ಆನೆ ಕಾರಿಡಾರ್‌ಗಳನ್ನು ಗುರುತಿಸಿದೆ. ಇವು ಪಕ್ಕದ ತಮಿಳುನಾಡು ಮತ್ತು ಕೇರಳಕ್ಕೆ ಹೊಂದಿಕೊಂಡಿವೆ. ಕರಡಿಕಲ್-ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್ ಎಂದೂ ಕರೆಯುತ್ತಾರೆ) ತಾಳ್ಳಿ-ಬಿಳಿಕ್ಕಲ್ (ತ.ನಾಡು ಮತ್ತು ಕರ್ನಾಟಕ) ಬಿಳಿಕಲ್-ಜವಳಗಿರಿ (ತ.ನಾಡು– ಕರ್ನಾಟಕ) ಎಡಯರಹಳ್ಳಿ-ಗುತ್ತಿಯಾಲತ್ತೂರು (ತ.ನಾಡು-ಕರ್ನಾಟಕ) ಎಡಯರಹಳ್ಳಿ ಪೂಜ್ಯನಗರ ಚಾಮರಾಜನಗರ-ದೊಡ್ಡಮನಹಳ್ಳಿ (ಕರ್ನಾಟಕ ಮತ್ತು ತ.ನಾಡು) ಚಾಮರಾಜನಗರ-ತಲಮಲೈ ಮುದ್ದಹಳ್ಳಿ (ತ.ನಾಡು–ಕರ್ನಾಟಕ) ಕಣಿಯನಪುರ-ಮೊಯಾರ್ (ಕರ್ನಾಟಕ) ಹಾಗೂ ಬೇಗೂರು-ಬ್ರಹ್ಮಗಿರಿ (ಕರ್ನಾಟಕ ಮತ್ತು ಕೇರಳ). ಬ್ಯಾರಿಕೇಡ್: ಅರಣ್ಯದಂಚಿನಲ್ಲಿರುವ ಗ್ರಾಮಗಳಿಗೆ ಕಾಡಾನೆಗಳು ಬಾರದಂತೆ ಅರಣ್ಯ ಇಲಾಖೆಯು ರಾಜ್ಯದಾದ್ಯಂತ 433 ಕಿ.ಮೀ. ಉದ್ದ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿದೆ. ಪ್ರಸಕ್ತ ಸಾಲಿನಲ್ಲಿ 156 ಕಿ.ಮೀ. ಬ್ಯಾರಿಕೇಡ್ ನಿರ್ಮಿಸಲು ₹225 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಪ್ರತಿ ಕಿ.ಮೀ. ಬ್ಯಾರಿಕೇಡ್ ನಿರ್ಮಾಣಕ್ಕೆ ₹1.50 ಕೋಟಿ ವೆಚ್ಚವಾಗುತ್ತದೆ.

ಮೈಸೂರು ಜಿಲ್ಲೆಯ ಎಚ್‌.ಡಿ. ಕೋಟೆ ತಾಲ್ಲೂಕಿನ ಬೂದನೂರು ಗ್ರಾಮದಲ್ಲಿ ಓಡಾಡಿದ್ದ ಕಾಡಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.