
ಬೆಂಗಳೂರು: ಡಿಸೆಂಬರ್ 20 ಶನಿವಾರ, ನಸುಕು 2.17ರ ಹೊತ್ತು. ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಮಿಜೋರಾಂನ ಸಾಯಿರಂಗ್ ಮತ್ತು ನವದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್ ರೈಲು ವೇಗವಾಗಿ ಸಂಚರಿಸುತ್ತಿತ್ತು. ಅಂದಾಜು 100 ಸಂಖ್ಯೆಯಲ್ಲಿದ್ದ ಆನೆಗಳ ಹಿಂಡೊಂದು ಮಾರ್ಗದ ಇನ್ನೊಂದು ಬದಿಗೆ ಇದ್ದ ಭತ್ತದ ಗದ್ದೆಯತ್ತ ನುಗ್ಗಲು ಹಳಿ ದಾಟುತ್ತಿತ್ತು. ದಟ್ಟ ಮಂಜು ಆವರಿಸಿದ್ದರಿಂದ ಲೋಕೋ ಪೈಲಟ್‌ಗೆ ದೂರದಿಂದ ಏನೂ ಕಾಣಿಸುತ್ತಿರಲಿಲ್ಲ. ರೈಲು ಹತ್ತಿರ ಹತ್ತಿರ ಬರುವಾಗ ಆನೆಗಳು ಹಳಿ ದಾಟುಸುತ್ತಿರುವುದು ಕಂಡಿತು. ತಕ್ಷಣವೇ ತುರ್ತು ಬ್ರೇಕ್ ಹಾಕಿದರೂ, ಮರಿಗಳ ಸಹಿತ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟರೆ, ಇನ್ನೊಂದು ಆನೆ ನಂತರ ಕೊನೆಯುಸಿರೆಳೆಯಿತು.
ಅಪಘಾತ ನಡೆದ ಸ್ಥಳ ಅರಣ್ಯ ಪ್ರದೇಶದಲ್ಲಿದೆ. ರಾಜಧಾನಿ ಗುವಾಹಟಿಯಿಂದ 125 ಕಿ.ಮೀ ದೂರದಲ್ಲಿದೆ. ದೇಶದಲ್ಲೇ ಹೆಚ್ಚು ಆನೆಗಳನ್ನು ಹೊಂದಿರುವ ಎರಡನೇ ರಾಜ್ಯ ಅಸ್ಸಾಂ. ಹಾಗಾಗಿ, ಅಲ್ಲಿನ ಅರಣ್ಯ ಹಾಗೂ ಅದಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಆನೆಗಳ ಓಡಾಟ ಸಾಮಾನ್ಯ. ಅಪಘಾತ ನಡೆದ ಸ್ಥಳವು ಆನೆಯ ಆವಾಸವಾಗಿ ಗುರುತಿಸಿಕೊಂಡಿದೆ. ಈ ಪ್ರದೇಶ ಘೋಷಿತ ಆನೆ ಕಾರಿಡಾರ್ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಅದಕ್ಕೆ ಹತ್ತಿರದಲ್ಲೇ ಇದೆ. ಸಾಮಾನ್ಯವಾಗಿ ಆನೆ ಕಾರಿಡಾರ್ ಪ್ರದೇಶದಲ್ಲಿ ರೈಲುಗಳಿಗೆ ವೇಗದ ಮಿತಿ ಇರುತ್ತದೆ. ಆನೆಗಳು ಹಳಿ ದಾಟುವುದನ್ನು ಗುರುತಿಸುವ ಲೇಸರ್ ಆಧಾರಿತ ತಂತ್ರಜ್ಞಾನ ಅಳವಡಿಸಲಾಗಿರುತ್ತದೆ. ಆದರೆ, ಇದು ಆನೆಗಳು ಸಂಚರಿಸುವ ಪಥ ಕಾರಿಡಾರ್ ಅಲ್ಲ ಎಂಬ ಒಂದೇ ಕಾರಣಕ್ಕೆ ಈ ಮುನ್ನೆಚ್ಚರಿಕೆ ಕ್ರಮಗಳು ಇರಲಿಲ್ಲ.
‘ಅಭಿವೃದ್ಧಿ’ಯ ದ್ಯೋತಕವಾಗಿರುವ ರೈಲ್ವೆ ಮಾರ್ಗವು ಎಂಟು ಆನೆಗಳ ಜೀವವನ್ನು ತೆಗೆಯಿತು.
ಅಸ್ಸಾಂ ಏಕೆ? ನಮ್ಮದೇ ರಾಜ್ಯದ ಚಿಕ್ಕಮಗಳೂರಿನ ಉದಾಹರಣೆಯನ್ನೇ ನೋಡಿ. ನವೆಂಬರ್ ತಿಂಗಳ ಆರಂಭದಲ್ಲಿ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಬರುವ ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ವಲಯದಲ್ಲಿ ಅರಣ್ಯ ಇಲಾಖೆ ಪ್ರಯಾಸಪಟ್ಟು ಸಲಗವೊಂದನ್ನು ಸೆರೆ ಹಿಡಿಯಿತು. ಆ ಆನೆಯು ಶಿವಮೊಗ್ಗ ಜಿಲ್ಲೆಯ ಆಗುಂಬೆ ಮತ್ತು ಕೊಡಗು ಜಿಲ್ಲೆಯ ಭಾಗಮಂಡಲದ ನಡುವೆ ಹಿಂದಿನಿಂದಲೂ ಓಡಾಡುತ್ತಿತ್ತು ಎಂಬುದು ಅಧಿಕಾರಿಗಳ ಹೇಳಿಕೆ. ಇತ್ತೀಚಿನ ವರ್ಷಗಳಲ್ಲಿ ತನ್ನ ಪ್ರಯಾಣದ ಮಧ್ಯೆ ಅದು ಕೃಷಿ ಭೂಮಿಗಳಿಗೆ ದಾಳಿ ಮಾಡುತ್ತಿತ್ತು. ಜನ ವಸತಿ ಪ್ರದೇಶಕ್ಕೂ ನುಗ್ಗುತ್ತಿತ್ತು. ಆದರೆ, ಈ ವರ್ಷದವರೆಗೂ ಅದು ಜನರ ಮೇಲೆ ದಾಳಿ ಮಾಡಿದ ಉದಾಹರಣೆ ಇರಲಿಲ್ಲ. ಇದೇ ಮೊದಲ ಬಾರಿಗೆ ಆ ಕಾಡಾನೆ ಮನುಷ್ಯರ ಮೇಲೂ ದಾಳಿ ನಡೆಸಿದೆ.
ಇದಕ್ಕೆ ಪ್ರಮುಖ ಕಾರಣ; ಅದಕ್ಕೆ ಅಡೆತಡೆ ಇಲ್ಲದೆ ಓಡಾಡುವಂತಹ ದಾರಿ ಇಲ್ಲದೇ ಇದ್ದುದು. ಅರಣ್ಯದ ಪರಿಭಾಷೆಯಲ್ಲಿ ಈ ದಾರಿಯನ್ನು ‘ಕಾರಿಡಾರ್’ ಎಂದು ಕರೆಯುತ್ತಾರೆ. ಆಗುಂಬೆ ಮತ್ತು ಕೊಡಗಿನ ಭಾಗಮಂಡಲದ ನಡುವೆ ಆನೆಗಳ ಓಡಾಡಕ್ಕಾಗಿಯೇ ಪ್ರತ್ಯೇಕ ಹಾದಿ ಇದ್ದಿದ್ದರೆ ಆನೆಯು ಕೃಷಿ ಜಮೀನುಗಳಿಗೆ ದಾಂಗುಡಿ ಇಡುತ್ತಿರಲಿಲ್ಲ, ಮನುಷ್ಯರ ಮೇಲೆ ದಾಳಿಯೂ ಮಾಡುತ್ತಿರಲಿಲ್ಲ.
ಕಾಡಾನೆಗಳ ಉಪಟಳವಿರುವ ರಾಜ್ಯದ ಎಲ್ಲ ಕಡೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಮಾನವ–ಕಾಡಾನೆ ಸಂಘರ್ಷಕ್ಕೆ ಮುಖ್ಯ ಕಾರಣವೇ ಆನೆಗಳ ಕಾರಿಡಾರ್ ಇಲ್ಲದಿರುವುದು. ದಶಕಗಳ ಹಿಂದೆ ಅರಣ್ಯ ಪ್ರದೇಶಗಳ ನಡುವೆ ಪರಸ್ಪರ ಸಂಪರ್ಕ ಬೆಸೆಯುವಂತಹ ಕಾಡಿನ ದಾರಿಗಳಿದ್ದವು. ಆನೆಗಳು ಹಾಗೂ ಇತರ ವನ್ಯಜೀವಿಗಳು ಹೊಸ ಆವಾಸಗಳನ್ನು ಹುಡುಕಿಕೊಂಡು ಅದೇ ಹಾದಿಯಲ್ಲಿ ಸಾಗುತ್ತಿದ್ದವು. ಅಭಿವೃದ್ಧಿಯ ಆರ್ಭಟ, ಕೃಷಿ ಪ್ರದೇಶದ ವಿಸ್ತರಣೆ, ಗಣಿಗಾರಿಕೆ, ಪ್ರವಾಸೋದ್ಯಮದಂತಹ ವಾಣಿಜ್ಯ ಚಟುವಟಿಕೆಗಳು ಕಾಡಿನ ಹಾದಿಗಳನ್ನು ಆಪೋಶನ ತೆಗೆದುಕೊಂಡಿವೆ.
ಆನೆಗಳು ತಮ್ಮ ಹಿಂದಿನ ತಲೆಮಾರಿನವರು ಶತಮಾನಗಳಿಂದಲೂ ಕ್ರಮಿಸಿದ ದಾರಿಯ ಜಾಡನ್ನೇ ಹಿಡಿದು ಈಗ ಅದೇ ದಾರಿಯಲ್ಲಿ ಸಾಗುತ್ತಿವೆ. ಆದರೆ, ಈಗ ಅಲ್ಲಿ ಮರಗಿಡಗಳಿಲ್ಲ. ಕಟ್ಟಡಗಳು, ಹೋಟೆಲ್, ರೆಸಾರ್ಟ್‌ಗಳಿವೆ. ಗಜಗಳು ಅನಿವಾರ್ಯವಾಗಿ ಆ ಹಾದಿಯಲ್ಲೇ ಸಂಚರಿಸಬೇಕಾಗಿದೆ. ಆಗಲೇ ಈ ಸಂಘರ್ಷಗಳು ನಡೆಯುವುದು. ಈ ಸಂಘರ್ಷದಲ್ಲಿ ಜನರೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ, ಆನೆಗಳೂ ಸಾಯುತ್ತಿವೆ. ನಾಲ್ಕೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಮಾನವನೊಂದಿಗಿನ ಸಂಘರ್ಷದಲ್ಲಿ 65 ಆನೆಗಳು ಮೃತಪಟ್ಟಿವೆ. ಈ ಪೈಕಿ ವಿದ್ಯುತ್ ತಂತಿ ತಗುಲಿ ಸತ್ತ ಆನೆಗಳದ್ದೇ ಸಿಂಹಪಾಲು. ಇದೇ ಅವಧಿಯಲ್ಲಿ ಕಾಡಾನೆಗಳ ದಾಳಿಗೆ ಸಿಲುಕಿ 153 ಜನರು ಅಸುನೀಗಿದ್ದಾರೆ.
ದೇಶದಲ್ಲೇ ಅತಿ ಹೆಚ್ಚು ಆನೆಗಳಿರುವ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕದ್ದು. ಕೇಂದ್ರ ಸರ್ಕಾರದ ಅಂಕಿ ಅಂಶಗಳ ಪ್ರಕಾರ, 6,013 ಗಜಗಳು ಇಲ್ಲಿ ಆಶ್ರಯ ಪಡೆದಿವೆ. ಇರುವ ಆನೆಗಳಿಗೆ ಅಡ್ಡಿ ಆತಂಕಗಳಿಲ್ಲದೆ ಓಡಾಡಲು ಜಾಗವೇ ಇಲ್ಲ. ಕರ್ನಾಟಕ, ಕೇರಳ, ತಮಿಳುನಾಡು ಮಹಾರಾಷ್ಟ್ರಗಳಲ್ಲಿ ಹರಡಿರುವ ಪಶ್ಚಿಮ ಘಟ್ಟಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. ಆದರೆ, ಹಿಂದಿನ ಅಂಕಿ ಅಂಶಗಳಿಗೆ ಹೋಲಿಸಿದರೆ, ಇತ್ತೀಚಿನ ವರ್ಷಗಳಲ್ಲಿ ಆನೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ‘ಪಶ್ಚಿಮ ಘಟ್ಟದ ಅರಣ್ಯದಲ್ಲಿ ಆಶ್ರಯ ಪಡೆದಿರುವ ಆನೆಗಳಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಓಡಾಡಲು ಕಾರಿಡಾರ್ ಇಲ್ಲದಂತೆ ಆಗಿದೆ. ಕಾಫಿ, ಚಹಾ ತೋಟಗಳು ವಿಸ್ತರಣೆಯಾಗುತ್ತಿವೆ. ಮಾನವನ ಹಸ್ತಕ್ಷೇಪ, ಒತ್ತುವರಿ, ಅಭಿವೃದ್ಧಿ ಯೋಜನೆಗಳು ಆನೆಗಳಿಗೆ ಮಾರಕವಾಗುತ್ತಿದೆ’ ಎಂದು ಇತ್ತೀಚೆಗೆ ಬಿಡುಗಡೆಯಾಗಿರುವ ‘ಆನೆಗಳ ಸ್ಥಿತಿಗತಿ ವರದಿ–2025’ ಕಳವಳ ವ್ಯಕ್ತಪಡಿಸಿದೆ.
ರಾಜ್ಯದ ಬಹುಪಾಲು ಅರಣ್ಯ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿದೆ. ಅತಿ ಹೆಚ್ಚು ಆನೆಗಳನ್ನು ಹೊಂದಿರುವ ಮೈಸೂರು ಆನೆ ಸಂರಕ್ಷಿತ ವಲಯ ಈ ಪ್ರದೇಶದಲ್ಲೇ ಇದೆ. ಇದರ ವ್ಯಾಪ್ತಿಗೆ ಬರುವ ಮೈಸೂರು, ಚಾಮರಾಜನಗರ, ರಾಮನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಿದೆ. ಉತ್ತರದ ದಾಂಡೇಲಿ ಆನೆ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಜಿಲ್ಲೆಗಳಲ್ಲೂ ಮಾನವ ವನ್ಯಜೀವಿ ಸಂಘರ್ಷಗಳು ವರದಿಯಾಗುತ್ತಲೇ ಇರುತ್ತವೆ. ಈ ಪ್ರದೇಶದಲ್ಲಿರುವ ಆನೆಗಳು ಶಿರಸಿ, ಬೆಳಗಾವಿ, ಹಳಿಯಾಳ, ಯಲ್ಲಾಪುರ, ಧಾರವಾಡ ವ್ಯಾಪ್ತಿಯಲ್ಲಿ ಹಾವಳಿ ಸೃಷ್ಟಿಸುತ್ತಿವೆ.
ಬೇಕಿದೆ ಕಾರಿಡಾರ್‌ಗಳು
ಕಾಡಾನೆಗಳ ಕಾಟ ತಡೆಗೆ ಅರಣ್ಯ ಇಲಾಖೆಯು ಅವುಗಳನ್ನು ಸೆರೆ ಹಿಡಿಯುವುದು, ಸೋಲಾರ್ ಬೇಲಿ, ರೈಲು ಕಂಬಿ ಬೇಲಿ, ಕಂದಕ ನಿರ್ಮಾಣದಂತಹ ಪರಿಹಾರಗಳನ್ನೇನೋ ಕಂಡುಕೊಂಡಿದೆ. ಆದರೆ, ಇದು ತಾತ್ಕಾಲಿಕಷ್ಟೇ. ಇದಕ್ಕೆ ಹೆಚ್ಚು ಪರಿಣಾಮಕಾರಿಯಾದಂತಹ ಪರಿಹಾರ ಇದ್ದರೆ ಅದು ಆನೆ ಕಾರಿಡಾರ್‌ಗಳ ನಿರ್ಮಾಣ ಅಥವಾ ಈಗಿರುವ ಕಾರಿಡಾರ್‌ಗಳ ಸಂರಕ್ಷಣೆ ಮಾತ್ರ ಎಂಬುದು ಅರಣ್ಯ ಇಲಾಖೆಯೇ ಕಂಡುಕೊಂಡಿರುವ ‘ಸತ್ಯ’. ಆದರೆ, ಈ ಸತ್ಯ ಲಿಖಿತವಾಗಿ ದಾಖಲಿಸಿರುವ ಅಭಿಪ್ರಾಯಗಳಲ್ಲಿ ಮಾತ್ರ ಇದೆ! ಕಾರ್ಯಗತವಾಗಿಲ್ಲ.
ರಾಜ್ಯದಲ್ಲಿರುವ ಅಧಿಕೃತ ಆನೆ ಕಾರಿಡಾರ್‌ಗಳು ಒಂಬತ್ತು ಮಾತ್ರ. ಇವುಗಳೆಲ್ಲವೂ ಇರುವುದು ದಕ್ಷಿಣದ ಜಿಲ್ಲೆಗಳಲ್ಲಿ. ಚಾಮರಾಜನಗರ ಜಿಲ್ಲೆಯಲ್ಲಿ ಐದು ಕಾರಿಡಾರ್‌ಗಳಿದ್ದರೆ, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮೂರು ಇವೆ. ಇನ್ನೊಂದು ಕೊಡಗು ಜಿಲ್ಲೆಯಲ್ಲಿದೆ. ರಾಜ್ಯವು ಐದು ಕಾರಿಡಾರ್‌ಗಳನ್ನು ನೆರೆಯ ತಮಿಳುನಾಡು ಮತ್ತು ಎರಡು ಕಾರಿಡಾರ್‌ಗಳನ್ನು ಕೇರಳದೊಂದಿಗೆ ಹಂಚಿಕೊಂಡಿದೆ. ಈ ಕಾರಿಡಾರ್‌ಗಳು ಆನೆಗಳ ಬಳಕೆಗೆ ಸಂಪೂರ್ಣವಾಗಿ ಸಿಗುತ್ತಿಲ್ಲ. ಎರಡು ಕಾರಿಡಾರ್‌ಗಳನ್ನು ಸಂರಕ್ಷಿಸಲು ಮಾತ್ರ ಅರಣ್ಯ ಇಲಾಖೆಗೆ ಸಾಧ್ಯವಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ ಮತ್ತು ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್‌ಟಿ) ಹುಲಿ ಸಂರಕ್ಷಿತ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಎಡೆಯಾರಹಳ್ಳಿ–ದೊಡ್ಡಸಂಪಿಗೆ ಆನೆ ಕಾರಿಡಾರ್ ಅನ್ನು ಖಾಸಗಿಯವರಿಂದ 25.37 ಎಕರೆ ಜಮೀನು ಖರೀದಿ ಮಾಡಿ ಪುನರುಜ್ಜೀವನಗೊಳಿಸಲಾಗಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕಣಿಯನಪುರ–ಮೊಯಾರ್ ಆನೆ ಕಾರಿಡಾರ್ ಕೂಡ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿದೆ. ಕಾರಿಡಾರ್ ವ್ಯಾಪ್ತಿಯಲ್ಲಿ ಮೂರು ಕಂದಾಯ ಗ್ರಾಮಗಳು, ಕೃಷಿ ಜಮೀನುಗಳು, ರೆಸಾರ್ಟ್‌ನಂತಹ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶ ಮತ್ತು ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ನಡುವೆ ಸಂಪರ್ಕ ಕಲ್ಪಿಸುವ ಮೂಡಹಳ್ಳಿ–ತಲಮಲೆ ಕಾರಿಡಾರ್ ಅನ್ನು ಸಂರಕ್ಷಿಸುವ ಪ್ರಯತ್ನ ಸರ್ಕಾರೇತರ ಸಂಸ್ಥೆಗಳಿಂದ ನಡೆದಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಆನೆ ಸಂರಕ್ಷಣೆ ಕಾರ್ಯಕ್ರಮದ ಅಡಿಯಲ್ಲಿ ದೇಶದಲ್ಲಿರುವ ಆನೆ ಕಾರಿಡಾರ್‌ಗಳ ಸ್ಥಿತಿಗತಿಗಳ ಬಗ್ಗೆ 2023ರಲ್ಲಿ ವರದಿ ಬಿಡುಗಡೆ ಮಾಡಿದೆ. ರಾಜ್ಯದ ಒಂಬತ್ತು ಕಾರಿಡಾರ್‌ಗಳ ಪರಿಸ್ಥಿತಿಗಳನ್ನು ಅದರಲ್ಲಿ ವಿವರಿಸಲಾಗಿದೆ. ಕಾರಿಡಾರ್ ವ್ಯಾಪ್ತಿಯಲ್ಲಿ ಜನವಸತಿ, ಕೃಷಿ ಭೂಮಿ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವುದನ್ನು ವರದಿ ಉಲ್ಲೇಖಿಸಿದೆ. ಅರಣ್ಯ ಇಲಾಖೆಯು ಆ ಪ್ರದೇಶವು ಕಾರಿಡಾರ್ ಎಂದು ಅಧಿಕೃತವಾಗಿ ಅಧಿಸೂಚನೆ ಹೊರಡಿಸಿ ಸಂರಕ್ಷಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.
ಉತ್ತರದಲ್ಲಿ ಪಥಗಳೇ ಇಲ್ಲ
ರಾಜ್ಯದ ದಕ್ಷಿಣಕ್ಕಿರುವ ಕೆಲವು ಜಿಲ್ಲೆಗಳಲ್ಲಿ ಹೇಳುವುದಕ್ಕಾದರೂ ಕಾರಿಡಾರ್‌ಗಳಿವೆ. ಆದರೆ, ಕಡಿಮೆ ಸಂಖ್ಯೆಯ ಆನೆಗಳಿದ್ದರೂ, ಅವುಗಳ ಹಾವಳಿ ಹೆಚ್ಚಾಗಿರುವ ರಾಜ್ಯದ ಮಧ್ಯ ಭಾಗ ಮತ್ತು ಉತ್ತರದ ಕೆಲವು ಜಿಲ್ಲೆಗಳಲ್ಲಿ ಗಜ ಪಥಗಳೇ ಇಲ್ಲ.
ಉದಾಹರಣೆಗೆ, ಆನೆ–ಮಾನವ ಸಂಘರ್ಷ ತೀವ್ರವಾಗಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಘೋಷಿತ ಆನೆ ಕಾರಿಡಾರ್ ಇಲ್ಲ. ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶ ಮತ್ತು ಸುತ್ತಮುತ್ತಲ ಪ್ರದೇಶ ಮೈಸೂರು ಆನೆ ವಿಸ್ತರಿತ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. 2002ರಲ್ಲಿ ಈ ಅಧಿಸೂಚನೆ ಹೊರಡಿಸಲಾಗಿದ್ದು, ಆನೆಗಳ ವಾಸಸ್ಥಾನ ವಿಸ್ತರಣೆಗೊಳ್ಳುತ್ತಿರುವ ಪ್ರದೇಶ ಎಂದು ಹೇಳಲಾಗಿದೆ. 2002ಕ್ಕೆ ಹೋಲಿಸಿದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಆನೆಗಳು ಮೂಡಿಗೆರೆ, ನರಸಿಂಹರಾಜಪುರ, ಕೊಪ್ಪ, ಶೃಂಗೇರಿ ತನಕ ಓಡಾಡುತ್ತವೆ. ಆನೆ ಮತ್ತು ಮಾನವ ಸಂಘರ್ಷ ಆಗಾಗ ಸಂಭವಿಸುತ್ತಿವೆ. ನೆರೆಯ ಹಾಸನ ಜಿಲ್ಲೆಯಿಂದಲೂ ಚಿಕ್ಕಮಗಳೂರು ಜಿಲ್ಲೆಯ ಕಡೆಗೆ ಆನೆಗಳು ಆಗಾಗ ಬಂದು ಹೋಗುತ್ತಿವೆ.
ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಜಿಲ್ಲೆಗಳನ್ನು ಬೆಸೆಯುವ ಭದ್ರಾ, ಶೆಟ್ಟಿಹಳ್ಳಿ, ಶರಾವತಿ ಅಭಯಾರಣ್ಯಗಳು, ಸೋಮೇಶ್ವರ ಹಾಗೂ ಮೂಕಾಂಬಿಕಾ ವನ್ಯಜೀವಿಧಾಮಗಳ ನಡುವೆ ಮೊದಲು ಆನೆ ಪಥ ಇತ್ತು. 1972ರಲ್ಲಿ ಗಾಜನೂರು ಬಳಿ ತುಂಗಾ ಜಲಾಶಯ ನಿರ್ಮಾಣದ ನಂತರ ಭದ್ರಾ ಹಾಗೂ ಶೆಟ್ಟಿಹಳ್ಳಿ ಅಭಯಾರಣ್ಯದ ನಡುವಿನ ಕಾರಿಡಾರ್ ಬಹುತೇಕ ಮುಚ್ಚಿ ಹೋಗಿದೆ. ಮಳೆಗಾಲದಲ್ಲಿ ಸಂಪರ್ಕ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ.
ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತಾರಣ್ಯ ಮತ್ತು ಬೆಳಗಾವಿ ಜಿಲ್ಲೆಯ ಭೀಮಗಡ ಅಭಯಾರಣ್ಯ ವ್ಯಾಪ್ತಿಯಿಂದ ಮಳೆಗಾಲ ಮುಗಿದೊಡನೆ ಹೊರಡುವ ಕಾಡಾನೆಗಳ ಹಿಂಡುಗಳು ಜಿಲ್ಲೆಯಲ್ಲಿ ಸಾಗುತ್ತವೆ. ಹೀಗೆ ಸಾಗುವ ಹಿಂಡು, ಕಬ್ಬು, ಭತ್ತದ ಗದ್ದೆ ನಾಶಪಡಿಸುವ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ.
ಪ್ರಸ್ತಾವಿತ ಹುಬ್ಬಳ್ಳಿ–ಅಂಕೋಲಾ ರೈಲು ಮಾರ್ಗವು ಅರಣ್ಯ ಪ್ರದೇಶದಲ್ಲಿ ಹಾದು ಹೋಗಲಿದೆ. ಇಲ್ಲಿ ಘೋಷಿತ ಆನೆ ಕಾರಿಡಾರ್ ಇಲ್ಲ. ಆದರೆ, ಆನೆಗಳ ಓಡಾಟ ಇದೆ. ರೈಲು ಮಾರ್ಗ ನಿರ್ಮಾಣವಾದರೆ, ಆನೆಗಳು ಸೇರಿದಂತೆ ವನ್ಯಪ್ರಾಣಿಗಳ ಓಡಾಟಕ್ಕೆ ಅಡಚಣೆಯಾಗಲಿದೆ.
ವಿಳಂಬ ಧೋರಣೆ
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಹಲವು ತಿಂಗಳುಗಳಿಂದ ಕಾರಿಡಾರ್‌ಗಳ ರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ 52 ಆನೆ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಸಂರಕ್ಷಣೆಯ ಕೆಲಸ ಕಣ್ಣಿಗೆ ಕಾಣುವಂತೆ ಶುರುವಾಗಿಲ್ಲ ಎನ್ನುವುದು ಪರಿಸರವಾದಿಗಳ ಆರೋಪ.
ರಾಜ್ಯದಲ್ಲಿ ಹಿಂದೆ ನಡೆದಿದ್ದ ಕಾರಿಡಾರ್ ಪುನರುಜ್ಜೀವನ ಪ್ರಯತ್ನವೇ ಸಾಕಾರಗೊಂಡಿಲ್ಲ. ಇದಕ್ಕೆ ಹಾಸನ ಜಿಲ್ಲೆಯೇ ತಾಜಾ ಉದಾಹರಣೆ.
ಸಕಲೇಶಪುರ ತಾಲ್ಲೂಕಿನಲ್ಲಿ ಕಾರಿಡಾರ್ ರಚಿಸಬೇಕು ಎಂದು ಕಾಡಾನೆಗಳ ಕಾಟದಿಂದ ನೊಂದಿರುವ ಹೆತ್ತೂರು ಹೋಬಳಿಯ ಅರಣಿ, ಬಟ್ಟೆಕುಮರಿ, ಬಾಜೆಮನೆ, ಬಾಳೆಹಳ್ಳ, ಮಂಕನಹಳ್ಳಿ, ಬೋರನಮನೆ, ಯತ್ತಹಳ್ಳ, ಯಡಕುಮರಿ ಗ್ರಾಮಗಳ ಜನರು ದಶಕದಿಂದಲೂ ಹೇಳುತ್ತಾ ಬಂದಿದ್ದಾರೆ. ‘ರಕ್ಷಿತಾರಣ್ಯ ವಿಸ್ತರಿಸಿ, ಕಾಡಾನೆ ಸಮಸ್ಯೆ ಕೊನೆಗಾಣಿಸಿ. ಅಗತ್ಯ ಜಮೀನನ್ನು ಸ್ವಯಂಪ್ರೇರಿತವಾಗಿ ಬಿಟ್ಟು ಕೊಡುತ್ತೇವೆ’ ಎಂದೂ ಅವರು ಹೇಳಿದ್ದಾರೆ. 2012ರಿಂದಲೇ ಸಚಿವರು ಹಾಗೂ ಅಧಿಕಾರಿಗಳಿಗೆ ಪತ್ರ ಬರೆಯುತ್ತಲೇ ಇದ್ದಾರೆ. 2013ರಲ್ಲಿ ಆಗಿನ ಜಿಲ್ಲಾಧಿಕಾರಿಯು ಗ್ರಾಮಸ್ಥರ ಸಭೆ ನಡೆಸಿ ಜಮೀನು ಬಿಟ್ಟುಕೊಡುವ ನಿರ್ಣಯವನ್ನು ಸರ್ಕಾರಕ್ಕೂ ಕಳುಹಿಸಿದ್ದರು. ಬೇಲೂರು, ಸಕಲೇಶಪುರ ತಾಲ್ಲೂಕಿನ 7 ಮೀಸಲು ಅರಣ್ಯಕ್ಕೆ ಹೊಂದಿಕೊಂಡಂತೆ ಇರುವ 30 ಗ್ರಾಮಗಳ ವ್ಯಾಪ್ತಿಯ ಒಟ್ಟು 25,424 ಎಕರೆ ಅರಣ್ಯ ಲಕ್ಷಣ ಹೊಂದಿರುವ ಸರ್ಕಾರಿ ಜಮೀನು ಹಾಗೂ ರೈತರ ಹಿಡುವಳಿಯ 2,500 ಎಕರೆ ಪ್ರದೇಶವನ್ನೂ ಸೇರಿಸಲು ಹಾಗೂ ಖಾಸಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಂಡು, ಅರಣ್ಯ ಇಲಾಖೆಗೆ ವರ್ಗಾಯಿಸಲು ತೀರ್ಮಾನಿಸಲಾಗಿತ್ತು. ಆದರೆ, ಖಾಸಗಿ ಜಮೀನು ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆಗೆ ಒಪ್ಪಿಗೆ ದೊರೆಯದೇ 2014ರಲ್ಲಿ ಆನೆ ಕಾರಿಡಾರ್ ಯೋಜನೆ ಕೈಬಿಡಲಾಗಿತ್ತು.
ಕಾಡಾನೆ–ಮಾನವ ಸಂಘರ್ಷ ಹೆಚ್ಚಾಗುತ್ತಿರುವುದು, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಡಕ್ಕೆ ದೂಡಿದೆ. ಕಾರಿಡಾರ್‌ಗಳ ಪುನರುಜ್ಜೀವನ ಸುಲಭದ ಕೆಲಸವಲ್ಲ ಎಂದು ಹೇಳುತ್ತಾರೆ ಅವರು. ಒತ್ತುವರಿ ಮಾಡಿಕೊಂಡವರು, ಅದರ ಆಸುಪಾಸಿನಲ್ಲಿ ವಾಣಿಜ್ಯ ಚಟುವಟಿಕೆ ಮತ್ತು ತೋಟಗಳನ್ನು ವಿಸ್ತರಿಸಿಕೊಂಡವರು, ಗಣಿಗಾರಿಕೆ ನಡೆಸುತ್ತಿರುವವರು ಎಲ್ಲರೂ ಪ್ರಭಾವಿಗಳು ಮತ್ತು ರಾಜಕಾರಣಿಗಳೇ ಆಗಿರುತ್ತಾರೆ. ಕ್ರಮಕ್ಕೆ ಮುಂದಾದರೆ ಒತ್ತಡ ಹಾಕಿಸಿ ಕಾರ್ಯಾಚರಣೆಯನ್ನು ತಡೆಯುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ. ಹೀಗಾಗಿ ಕಾರಿಡಾರ್ ರಚನೆ ಮತ್ತು ಒತ್ತುವರಿ ತೆರವು ಎನ್ನುವುದು ಅಸಾಧ್ಯವೇ ಆಗುತ್ತಿದೆ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.
ಪೂರಕ ಮಾಹಿತಿ: ಉಮೇಶ ಭಟ್ಟ ಪಿ.ಎಚ್., ಚಿದಂಬರ ಪ್ರಸಾದ, ಬಾಲಚಂದ್ರ ಜಿ.ಎಚ್., ಓದೇಶ ಸಕಲೇಶಪುರ, ಕೆ.ಎಸ್.ಗಿರೀಶ, ಗಣಪತಿ ಹೆಗಡೆ, ಸಂತೋಷ ಈ. ಚಿನಗುಡಿ, ವಿಜಯಕುಮಾರ್ ಎಸ್.ಕೆ., ವೆಂಕಟೇಶ್.ಜಿ.ಎಚ್
ಮೂರು ತಿಂಗಳಲ್ಲಿ ವರದಿ: ಖಂಡ್ರೆ
‘ರಾಜ್ಯದಲ್ಲಿರುವ ಕಾಡಾನೆ ಮಾನವ ಸಂಘರ್ಷ ತಗ್ಗಿಸುವ ನಿಟ್ಟಿನಲ್ಲಿ ಇಲಾಖೆ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಲೇ ಇದೆ. ಇದರಲ್ಲಿ ಆನೆ ಕಾರಿಡಾರ್‌ಗಳ ಸಂರಕ್ಷಣೆಯೂ ಒಂದು. ಆದರೆ ಒತ್ತುವರಿ, ಭೂಪ್ರದೇಶಗಳ ಅಡ್ಡಿ ಸೇರಿ ವಿವಿಧ ಕಾರಣಗಳಿಂದ ಕಾರಿಡಾರ್‌ಗಳು ಮುಕ್ತವಾಗಿಲ್ಲ. ಇವುಗಳನ್ನು ತೆರವುಗೊಳಿಸಲು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಹೇಗೆ ಯೋಜನೆ ರೂಪಿಸಬಹುದು ಎಂಬ ಬಗ್ಗೆ ಇಲಾಖೆಯು ಅಧ್ಯಯನ ನಡೆಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ತಜ್ಞರೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ’ ಎಂದು ಹೇಳುತ್ತಾರೆ ಅರಣ್ಯ ಸಚಿವ ಈಶ್ವರ ಖಂಡ್ರೆ.
‘ಆನೆ ತಜ್ಞರಾಗಿರುವ ಆರ್.ಸುಕುಮಾರ್ ನೇತೃತ್ವದ ತಜ್ಞರ ತಂಡವು ವರದಿ ನೀಡಲಿದೆ. ಪರಿಸರ ಸಂಶೋಧನೆ ಮತ್ತು ಕ್ಷೇತ್ರ ಅನುಷ್ಠಾನವನ್ನು ಸಮನ್ವಯಗೊಳಿಸುವ ಮೂಲಕ, ಆನೆಪಥ, ಆವಾಸಸ್ಥಾನಗಳ ಸಂರಕ್ಷಣೆಗೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಏಷಿಯನ್ ಆನೆಗಳ ಭೂಪ್ರದೇಶ ನಿರ್ವಹಣೆಗಾಗಿ ಐದು ವರ್ಷಗಳ ಸಹಯೋಗದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಸಮಿತಿ ಮೂರು ತಿಂಗಳಲ್ಲಿ ವರದಿ ನೀಡಲಿದ್ದು, ವರದಿ ಆಧರಿಸಿ ಕಾರ್ಯ
ಯೋಜನೆಯನ್ನು ಇಲಾಖೆ ರೂಪಿಸಲಿದೆ’ ಎಂಬುದು ಅವರ ಮಾತು.
ರಾಜ್ಯದಲ್ಲಿರುವ ಆನೆ ಕಾರಿಡಾರ್‌ಗಳು
1. ಕರಡಿಕ್ಕಲ್– ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್)(ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ) (ಬೆಂಗಳೂರು ದಕ್ಷಿಣ ಜಿಲ್ಲೆ)
2. ತಾಳ್ಳಿ –ಬಿಳಿಕಲ್ (ಕರ್ನಾಟಕ–ತಮಿಳುನಾಡು) (ಬೆಂಗಳೂರು ದಕ್ಷಿಣ ಜಿಲ್ಲೆ)
3. ಬಿಳಿಕಲ್–ಜವಳಗಿರಿ (ಕರ್ನಾಟಕ–ತಮಿಳುನಾಡು) (ಬೆಂಗಳೂರು ದಕ್ಷಿಣ ಜಿಲ್ಲೆ)
4. ಎಡೆಯಾರಹಳ್ಳಿ–ಗುತ್ತಿಯಾಲತ್ತೂರು (ಕರ್ನಾಟಕ–ತಮಿಳುನಾಡು) (ಚಾಮರಾಜನಗರ ಜಿಲ್ಲೆ)
5. ಎಡೆಯಾರಹಳ್ಳಿ–ದೊಡ್ಡಸಂಪಿಗೆ (ಮಲೆ ಮಹದೇಶ್ವರ ವನ್ಯಧಾಮ ಮತ್ತು ಬಿಆರ್‌ಟಿ ಹುಲಿಸಂರಕ್ಷಿತ ಪ್ರದೇಶ) (ಚಾಮರಾಜನಗರ ಜಿಲ್ಲೆ)
6. ಪುಣಜನೂರಿನಲ್ಲಿರುವ ಚಾಮರಾಜನಗರ–ತಲಮಲೆ (ಕರ್ನಾಟಕ–ತಮಿಳುನಾಡು) (ಚಾಮರಾಜನಗರ ಜಿಲ್ಲೆ)
7. ಮೂಡಹಳ್ಳಿಯಲ್ಲಿರುವ ಚಾಮರಾಜನಗರ–ತಲಮಲೆ (ಕರ್ನಾಟಕ–ತಮಿಳುನಾಡು) (ಚಾಮರಾಜನಗರ ಜಿಲ್ಲೆ)
8. ಕಣಿಯನಪುರ–ಮೊಯಾರ್ (ಬಂಡೀಪುರ) (ಚಾಮರಾಜನಗರ ಜಿಲ್ಲೆ)
9. ಬೇಗೂರು- ಬ್ರಹ್ಮಗಿರಿ (ಕರ್ನಾಟಕ–ಕೇರಳ) (ಕೊಡಗು ಜಿಲ್ಲೆ)
ರಾಜ್ಯದಲ್ಲಿ ಆನೆಗಳ ಅಸಹಜ ಸಾವು
ವರ್ಷ;ಅಸಹಜ ಸಾವು
(ಆವರಣದಲ್ಲಿರುವುದು ಒಟ್ಟು ಸಾವಿನ ಪ್ರಕರಣಗಳು)
2021;15 (82)
2022;16 (72)
2023;15 (98)
2024;13 (109)
2025*;6 (33)
* ಜುಲೈ 15ರ ವರೆಗೆ
‘ತಾತ್ಕಾಲಿಕ ಪರಿಹಾರ ಸಾಲದು’
ರಾಜ್ಯದಲ್ಲಿ ಕೃಷಿ ಜಮೀನು, ಜನವಸತಿ ಪ್ರದೇಶಗಳಿಗೆ ನುಗ್ಗಿ ದಾಂದಲೆ ನಡೆಸುವ ಆನೆಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿಯುತ್ತಿದೆ. 2015 ರಿಂದ 2024 ರವರೆಗೆ ಒಟ್ಟು 115 ದೈತ್ಯ ಆನೆಗಳನ್ನು ಸೆರೆ ಹಿಡಿದು, ಪಳಗಿಸಲಾಗಿದೆ. 130 ಆನೆಗಳನ್ನು ಸ್ಥಳಾಂತರಿಸಲಾಗಿದೆ. 110 ಆನೆಗಳನ್ನು ವಿವಿಧ ರಾಜ್ಯಗಳಿಗೆ ಹಸ್ಡಾಂತರಿಸಲಾಗಿದೆ. 350ಕ್ಕೂ ಅಧಿಕ ಆನೆಗಳಿಗೆ ರೆಡಿಯೋ ಕಾಲರ್ ಅಳವಡಿಸಲಾಗಿದೆ. ಅಲ್ಲದೇ ಸಂಘರ್ಷ ಇರುವ ಜಾಗದಲ್ಲಿ ತಡೆ ಬೇಲಿ, ಕಂದಕಗಳನ್ನು ನಿರ್ಮಿಸಲು ಇಲಾಖೆ ಆದ್ಯತೆ ನೀಡುತ್ತದೆ.
ಆದರೆ, ಹಾವಳಿ ಸೃಷ್ಟಿಸುತ್ತಿರುವ ಆನೆಗಳನ್ನು ಸೆರೆ ಹಿಡಿಯುವುದು, ಬೇಲಿಗಳನ್ನು ನಿರ್ಮಿಸುವುದು ಸಂಘರ್ಷ ತಡೆಯುವ ಶಾಶ್ವತ ಪರಿಹಾರವಲ್ಲ. ಎರಡು ಅರಣ್ಯಗಳನ್ನು ಬೆಸೆಯುವ ಕಾರಿಡಾರ್‌ಗಳನ್ನು ನಿರ್ಮಿಸುವುದು ಅಥವಾ ಈಗ ಇರುವ ಕಾರಿಡಾರ್‌ಗಳನ್ನೇ ಪುನರುಜ್ಜೀವನ ಗೊಳಿಸುವುದರಿಂದ ಕಾಡಾನೆಗಳ ಉಪಟಳವನ್ನು ಬಹುಪಾಲು ಇಲ್ಲವಾಗಿಸಬಹುದು ಎಂಬುದು ವನ್ಯಜೀವಿ ತಜ್ಞರ ಅಭಿಪ್ರಾಯ.
‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮನಸ್ಸು ಮಾಡಿದ್ದರೆ ರೈತರಿಂದ ಜಮೀನು ಖರೀದಿ ಮಾಡಿ ಕಾರಿಡಾರ್‌ಗಳನ್ನು ಅಭಿವೃದ್ಧಿ ಮಾಡಬಹುದು. ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಅಧೀನದಲ್ಲಿರುವ ಪರಿಹಾರಾತ್ಮಕ ಅರಣ್ಯೀಕರಣ ನಿಧಿಯಲ್ಲಿ (ಕಾಂಪಾ) ಸಾಕಷ್ಟು ಹಣ ಇದೆ. ಈ ಹಣವನ್ನು ಹೊಸ ಕಾರಿಡಾರ್ ಅಭಿವೃದ್ಧಿ ಸೇರಿದಂತೆ ರಾಜ್ಯದಾದ್ಯಂತ ಇರುವ ಕಾರಿಡಾರ್‌ಗಳ ಸಂರಕ್ಷಣೆಗೆ ಬಳಸಬಹುದು’ ಎಂಬುದು ವನ್ಯಪ್ರೇಮಿಗಳ ಅಭಿಪ್ರಾಯ.
‘ಈಗ ಆನೆ ಕಾರಿಡಾರ್ ಬಗ್ಗೆ ಸರ್ಕಾರ ಈಗ ಯೋಚನೆ ಮಾಡುತ್ತಿದೆ. ಆನೆಗಳು ಓಡಾಡುವ ಜಾಗ ಗುರುತಿಸಿ ಕಾರಿಡಾರ್ ಎಂದು ಘೋಷಿಸುವ ಕೆಲಸ ಹಿಂದೆಯೇ ಆಗಬೇಕಿತ್ತು’ ಎನ್ನುತ್ತಾರೆ ವೈಲ್ಡ್ ಕ್ಯಾಟ್ ಸೀ ಸಂಸ್ಥೆಯ ಅಧ್ಯಕ್ಷ ಡಿ.ವಿ.ಗಿರೀಶ್.
ಪಥ ಸಂರಕ್ಷಣೆಗೆ ಎನ್‌ಜಿಒ ಪ್ರಯತ್ನ
ನಾಲ್ಕು ಸಂರಕ್ಷಿತ ಅರಣ್ಯವನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಐದು ಆನೆ ಕಾರಿಡಾರ್‌ಗಳಿವೆ. ಇವುಗಳಲ್ಲಿ ಮೂರನ್ನು ನೆರೆಯ ತಮಿಳುನಾಡಿನೊಂದಿಗೆ ಹಂಚಿಕೊಂಡಿದೆ. ಜಿಲ್ಲೆಯಲ್ಲಿ ಎರಡು ಕಾರಿಡಾರ್‌ಗಳನ್ನು ಸಂರಕ್ಷಿಸಲಾಗಿದೆ. ಎಡೆಯಾರಳ್ಳಿ–ದೊಡ್ಡ ಸಂಪಿಗೆ ಕಾರಿಡಾರ್ ಪೂರ್ಣವಾಗಿ ಸಂರಕ್ಷಿಸಲಾಗಿದ್ದು ಮತ್ತು ಕಣಿಯನಪುರ–ಮೊಯಾರ್ ಕಾರಿಡಾರ್‌ಗಳು ಸ್ವಲ್ಪ ಮಟ್ಟಿಗೆ ಸುಸ್ಥಿತಿಯಲ್ಲಿದೆ. ಉಳಿದ ಕಾರಿಡಾರ್‌ಗಳನ್ನು ಸಂರಕ್ಷಿಸುವ ಪ್ರಯತ್ನಗಳೂ ಜಾರಿಯಲ್ಲಿದೆ. ಇದಕ್ಕೆ ಸರ್ಕಾರೇತರ ಸಂಸ್ಥೆಗಳು ಪ್ರಯತ್ನಿಸುತ್ತಿವೆ.
ಬಿಳಿಗಿರಿರಂಗನಬೆಟ್ಟದ ಸ್ವಾಮಿ ವಿವೇಕಾನಂದ ಟ್ರಸ್ಟ್ ದಶಕಗಳಿಂದಲೂ ಆನೆ ಕಾರಿಡಾರ್‌ಗಳ ರಕ್ಷಣೆ ವಿಚಾರವಾಗಿ ಜನಜಾಗೃತಿ ಮೂಡಿಸುತ್ತಿದೆ.
‘ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಸಂಸ್ಥೆಯ ಆರ್ಥಿಕ ನೆರವಿನೊಂದಿಗೆ ಜಿಲ್ಲೆಯಲ್ಲಿರುವ ಆನೆ ಕಾರಿಡಾರ್‌ಗಳನ್ನು ಉಳಿಸುವ ಕೆಲಸ ನಡೆಯುತ್ತಿದೆ’ ಎಂದು ಹೇಳುತ್ತಾರೆ ಟ್ರಸ್ಟ್ ಸಂಸ್ಥಾಪಕ, ಬಿಳಿಗಿರಿರಂಗನ ಬೆಟ್ಟದಲ್ಲಿರುವ ಪರಿಸರವಾದಿ ಜಿ.ಮಲ್ಲೇಶಪ್ಪ.
‘ಜಿಲ್ಲೆಯಲ್ಲಿರುವ ಮೂಡಹಳ್ಳಿ ಹಾಗೂ ಎಡೆಯಾರಹಳ್ಳಿ ಆನೆ ಕಾರಿಡಾರ್‌ಗಳ ವ್ಯಾಪ್ತಿಯಲ್ಲಿಯೇ ಹಿಂದೆ ಸರ್ಕಾರದಿಂದ ಸ್ಥಳೀಯರಿಗೆ ಭೂಮಿ ಹಂಚಿಕೆ ಮಾಡಲಾಗಿತ್ತು. ಪರಿಣಾಮ ಕಾರಿಡಾರ್ ವ್ಯಾಪ್ತಿಯಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿತ್ತು. ಈ ಸಮಸ್ಯೆಗೆ ಪರಿಹಾರವಾಗಿ ಟ್ರಸ್ಟ್ ವತಿಯಿಂದ ಕಾರಿಡಾರ್‌ಗಳ ವ್ಯಾಪ್ತಿಯಲ್ಲಿ ಸರ್ಕಾರದಿಂದ ಭೂಮಿ ಮಂಜೂರಾತಿ ಪಡೆದುಕೊಂಡಿರುವ ರೈತರನ್ನು ಸಂಪರ್ಕಿಸಿ, ಅವರಿಗೆ ಆನೆ ಕಾರಿಡಾರ್ ಮಹತ್ವವನ್ನು ತಿಳಿಸಲಾಯಿತು. ಕಾರಿಡಾರ್ ವ್ಯಾಪ್ತಿಯಲ್ಲಿ ಕೃಷಿ ಚಟುವಟಿಕೆಗಳು ನಡೆದರೆ ರೈತರಿಗಾಗುವ ನಷ್ಟ ಹಾಗೂ ಆನೆಗಳಿಗೆ ಆಗುವ ತೊಂದರೆಯ ಕುರಿತು ಮನವರಿಕೆ ಮಾಡಿಕೊಡಲಾಯಿತು. ಬಳಿಕ ರೈತರ ಮನವೊಲಿಸಿ ಅಂದಿನ ಮಾರುಕಟ್ಟೆ ಬೆಲೆ ನೀಡಿ ಅವರಿಂದ 100 ಎಕರೆಯಷ್ಟು ಭೂಮಿಯನ್ನು ಖರೀದಿಸಿ ಅರಣ್ಯ ಇಲಾಖೆಯ ಸುಪರ್ದಿಗೆ ಒಪ್ಪಿಸಲಾಗಿದೆ’ ಎಂದು ವಿವರಿಸುತ್ತಾರೆ ಅವರು.
‘ಆನೆಗಳ ಪಥ ರಕ್ಷಣೆ ಮಾಡುವ ಮೂಲಕ ಮುಕ್ತ ಓಡಾಟಕ್ಕೆ ಪೂರಕ ವಾತಾವರಣ ಸೃಷ್ಟಿಸಬೇಕು. ಕಾರಿಡಾರ್‌ನೊಳಗೆ ಜನರ ಓಡಾಟ ತಗ್ಗಿಸಬೇಕು, ರೆಸಾರ್ಟ್ ಸೇರಿದಂತೆ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು. ಆನೆ ಕಾರಿಡಾರ್ ಸುತ್ತಮುತ್ತ ಅವೈಜ್ಞಾನಿಕ ಹಾಗೂ ನಿಯಮಬಾಹಿರವಾಗಿ ಭೂಮಿ ಹಂಚಿಕೆ ಮಾಡಿದ್ದರೆ ಕಾನೂನಾತ್ಮಕವಾಗಿ ಹಿಂಪಡೆಯಬೇಕು. ಸೋಲಾರ್ ಬೇಲಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ ಸಮಸ್ಯೆಗೆ ತಾತ್ಕಾಲಿಕ ಪರಿಹಾರವೇ ಹೊರತು ಶಾಶ್ವತ ಪರಿಹಾರವಲ್ಲ’ ಎನ್ನುವುದು ಅವರ ಅಭಿಪ್ರಾಯ.
ತಮಿಳುನಾಡಿನ ಸಿಗೂರು ಕಾರಿಡಾರ್: ರೆಸಾರ್ಟ್‌ಗಳ ತೆರವಿಗೆ ಸೂಚನೆ
ತಮಿಳುನಾಡಿನ ಮುದುಮಲೆ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಸಿಗೂರು ಆನೆ ಕಾರಿಡಾರ್‌ನಲ್ಲಿ ನಿರ್ಮಿಸಿರುವ ಹೋಟೆಲ್, ರೆಸಾರ್ಟ್‌ನಂತಹ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್‌ನಲ್ಲಿ ಸೂಚಿಸಿದೆ.
ಕಾರಿಡಾರ್‌ಗೆ ಸೇರಿದ ಪ್ರದೇಶದಲ್ಲಿ ಜಮೀನು ಖರೀದಿ ಅಕ್ರಮ ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿ ಹೇಳಿತ್ತು. ಸಮಿತಿಯ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
39 ರೆಸಾರ್ಟ್‌ಗಳು, 390 ಮನೆಗಳು, 27 ಸಾಮಾನ್ಯ ಕಟ್ಟಡಗಳು, ಒಂಬತ್ತು ಎಸ್ಟೇಟ್‌ಗಳು, 77 ಕೃಷಿ ಜಮೀನುಗಳು, 9 ಇತರ ಕಟ್ಟಡಗಳು ಸೇರಿದಂತೆ 821 ಕಟ್ಟಡಗಳು ಸಿಗೂರು ಆನೆ ಕಾರಿಡಾರ್‌ನಲ್ಲಿವೆ ಎಂದು ನೀಲಗಿರಿ ಜಿಲ್ಲಾಧಿಕಾರಿಯವರ ವರದಿ ಹೇಳಿದೆ. ಇದು ಕರ್ನಾಟಕಕ್ಕೆ ಮಾದರಿಯಾಗಬೇಕು.ರೆಸಾರ್ಟ್‌ಗಳ ತೆರವಿಗೆ ಸೂಚನೆ
ತಮಿಳುನಾಡಿನ ಮುದುಮಲೆ ಮತ್ತು ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಸಿಗೂರು ಆನೆ ಕಾರಿಡಾರ್‌ನಲ್ಲಿ ನಿರ್ಮಿಸಿರುವ ಹೋಟೆಲ್, ರೆಸಾರ್ಟ್‌ನಂತಹ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೆಪ್ಟೆಂಬರ್‌ನಲ್ಲಿ ಸೂಚಿಸಿದೆ.
ಕಾರಿಡಾರ್‌ಗೆ ಸೇರಿದ ಪ್ರದೇಶದಲ್ಲಿ ಜಮೀನು ಖರೀದಿ ಅಕ್ರಮ ಎಂದು ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿ ಹೇಳಿತ್ತು. ಸಮಿತಿಯ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
39 ರೆಸಾರ್ಟ್‌ಗಳು, 390 ಮನೆಗಳು, 27 ಸಾಮಾನ್ಯ ಕಟ್ಟಡಗಳು, ಒಂಬತ್ತು ಎಸ್ಟೇಟ್‌ಗಳು, 77 ಕೃಷಿ ಜಮೀನುಗಳು, 9 ಇತರ ಕಟ್ಟಡಗಳು ಸೇರಿದಂತೆ 821 ಕಟ್ಟಡಗಳು ಸಿಗೂರು ಆನೆ ಕಾರಿಡಾರ್‌ನಲ್ಲಿವೆ ಎಂದು ನೀಲಗಿರಿ ಜಿಲ್ಲಾಧಿಕಾರಿಯವರ ವರದಿ ಹೇಳಿದೆ. ಇದು ಕರ್ನಾಟಕಕ್ಕೆ ಮಾದರಿಯಾಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.