ADVERTISEMENT

ಒಳನೋಟ: ಗಾಂಜಾ ಸುಳಿಯಲ್ಲಿ ರಾಜ್ಯ– ಮಂಗಳೂರಿಗೆ ದಶಕದಿಂದ ಕಾಡಿದ ಡ್ರಗ್ಸ್‌ ದಂಧೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2022, 20:45 IST
Last Updated 12 ಫೆಬ್ರುವರಿ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಂಗಳೂರು: ಕಳೆದ ಒಂದು ದಶಕದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ಕರಾವಳಿಯಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿ ನಡೆದಿತ್ತು. ಕೋವಿಡ್–19 ನಿರ್ಬಂಧ, ಲಾಕ್‌ಡೌನ್‌ನ ಸಂದರ್ಭದಲ್ಲಿ ಇಳಿಮುಖವಾಗಿದೆ.

ಮಾದಕ ವಸ್ತು ದಂಧೆಯಲ್ಲಿ ನಟರು, ನಿರೂಪಕರು ಪಾಲ್ಗೊಂಡಿರುವುದು ಇತ್ತೀಚಿನ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಅವರಿಂದ ದೊರೆತ ಮಾಹಿತಿಯ ಮೇಲೆ ನೈಜೀರಿಯಾದ ಪ್ರಜೆಗಳನ್ನೂ ನಗರದ ಪೊಲೀಸರು ಬಂಧಿಸಿದ್ದಾರೆ.

ಹೊರ ಜಿಲ್ಲೆ, ಹೊರ ರಾಜ್ಯದ ವಿದ್ಯಾರ್ಥಿಗಳನ್ನಷ್ಟೇ ಗುರಿಯಾಗಿಟ್ಟುಕೊಂಡು ಕರಾವಳಿ ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿದೆ. ಈ ಡ್ರಗ್ಸ್ ವಹಿವಾಟು ಗ್ರಾಮಾಂತರ ಪ್ರದೇಶಗಳ ಜತೆಗೆ ಶಾಲಾ-ಕಾಲೇಜು ಕ್ಯಾಂಪಸ್‌ಗಳನ್ನೂ ಆವರಿಸಿದೆ.

ADVERTISEMENT

ನೆರೆಯ ಕೇರಳದ ಕಾಸರಗೋಡು, ಗೋವಾ, ಮಹಾರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಪ್ರಮುಖವಾಗಿ ಗಾಂಜಾ ಪೂರೈಕೆಯಾಗುತ್ತಿದೆ. ವೆಬ್‌ಸೈಟ್, ಇ–ಮೇಲ್, ವಾಟ್ಸ್‌ಆ್ಯಪ್‌ನಲ್ಲೂ ಡ್ರಗ್ಸ್ ಬುಕ್ಕಿಂಗ್ ದಂಧೆ ನಡೆಯುತ್ತಿದೆ.

ಮಂಗಳೂರಿನಲ್ಲಿ ಡ್ರಗ್ಸ್‌ ದಂಧೆ ಆಳವಾಗಿ ಬೇರೂರಿದ್ದು, 6 ವರ್ಷಗಳಲ್ಲಿ 850ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. 1,200ಕ್ಕೂ ಅಧಿಕ ಮಂದಿ ಬಂಧಿತರಾಗಿದ್ದಾರೆ. ಕೋಟ್ಯಂತರ ಮೌಲ್ಯದ ಮಾದಕ ವಸ್ತುಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿವೆ.

ವೃತ್ತಿ ಶಿಕ್ಷಣಕ್ಕೆ ಮಂಗಳೂರು ಹೆಸರಾಗಿದ್ದು, ಇಲ್ಲಿರುವ ದೇಶ, ವಿದೇಶಗಳ ವಿದ್ಯಾರ್ಥಿಗಳು ಮತ್ತು ಇತರ ಯುವಜನರು ಡ್ರಗ್ಸ್‌ನ ಪ್ರಮುಖ ಗ್ರಾಹಕರು. ಗಾಂಜಾ ಮತ್ತು ಸಿಂಥೆಟಿಕ್‌ ಡ್ರಗ್‌ಗಳಾದ ಎಂಡಿಎಂಎ, ಕೊಕೇನ್‌, ಚರಸ್‌, ಹಶೀಶ್‌ ಇತ್ಯಾದಿ ವಿವಿಧ ಭಾಗಗಳಿಂದ ಸರಬರಾಜಾಗುತ್ತಿವೆ. 2019ರಿಂದ ಸಿಂಥೆಟಿಕ್‌ ಡ್ರಗ್‌ಗಳು ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವುದು ಪೊಲೀಸರ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ.

ಉಭಯ ಜಿಲ್ಲೆಗಳ ಪೊಲೀಸರು ವಶಪಡಿಸಿಕೊಂಡ ಸುಮಾರು ₹1.50 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಕಳೆದ ವರ್ಷ ನಾಶ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.