ಮಂಗಳೂರು: ದಿನಬಳಕೆ ಸಾಮಗ್ರಿ, ವಿದ್ಯುತ್, ಅಡುಗೆ ಅನಿಲ ದರ ಏರಿಕೆ ಹಾಗೂ ಗ್ರಾಹಕರ ಕೊರತೆಯಿಂದ ಹೋಟೆಲ್ ಉದ್ಯಮ ದಿಕ್ಕು ತಪ್ಪಿದಂತಾಗಿತ್ತು. ಸದ್ಯ ಸ್ವಲ್ಪ ಚೇತರಿಕೆಯ ಹಾದಿಯಲ್ಲಿದ್ದರೂ, ಕೋವಿಡ್–19ಗಿಂತ ಮೊದಲಿನ ಸ್ಥಿತಿಗೆ ತಲುಪಲು ಇನ್ನೂ ಒಂದೆರಡು ವರ್ಷ ಬೇಕು ಎನ್ನುವುದು ಕರಾವಳಿಯ ಹೋಟೆಲ್ ಉದ್ಯಮಿಗಳ ಮಾತು.
ಎರಡೂ ಲಾಕ್‌ಡೌನ್ ವೇಳೆ ದಿನಬಳಕೆಯ ಸಾಮಗ್ರಿ ಹಾಳಾಗಿ ಅಪಾರ ನಷ್ಟವಾಗಿದೆ. ಹೊರ ರಾಜ್ಯ, ಹೊರ ಜಿಲ್ಲೆಯವರು ಅಧಿಕ ಸಂಖ್ಯೆಯಲ್ಲಿ ಪ್ರವಾಸಕ್ಕೆ ಬಂದರೆ ಮಾತ್ರ ನಮಗೆ ಹೆಚ್ಚು ವ್ಯಾಪಾರವಾಗುತ್ತದೆ ಎಂದು ಹೋಟೆಲ್ ಉದ್ಯಮಿಗಳು ಹೇಳುತ್ತಿದ್ದಾರೆ.
‘ನಾವು ನಮ್ಮ ಹೋಟೆಲ್‌ನಲ್ಲಿ ಕಡಿಮೆ ಬೆಲೆಗೆ ಊಟ, ಚಹಾ, ತಿಂಡಿ ತಿನಿಸುಗಳನ್ನು ನೀಡುತ್ತಿದ್ದೇವೆ. ಜನನಿಬಿಡ ಪ್ರದೇಶದಲ್ಲಿರುವ ಹೋಟೆಲ್ ಆಗಿದ್ದರೂ ನಿರೀಕ್ಷಿಸಿದಷ್ಟು ವ್ಯಾಪಾರವಿಲ್ಲ’ ಎಂದು ಹೋಟೆಲ್ ಮಾಲೀಕ ಇಮ್ತಿಯಾಜ್ ಹೇಳುತ್ತಾರೆ.
ಕೆಲ ಹೋಟೆಲ್ ಮಾಲೀಕರು, ಬ್ಯಾಂಕ್, ಫೈನಾನ್ಸ್, ಸೊಸೈಟಿಗಳಿಂದ ಸಾಲ ಪಡೆದಿದ್ದು, ಇನ್ನೂ ಕೆಲವರು ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದಾರೆ. ಇದೀಗ ಸಾಲದ ಕಂತು ಪಾವತಿಸಲಾಗದೇ, ಅಡವಿಟ್ಟ ಚಿನ್ನಾಭರಣ ಬಿಡಿಸಲಾಗದೇ, ಕೆಲವರು ಹೋಟೆಲ್‌ಗಳನ್ನು ಮುಚ್ಚಿದ್ದಾರೆ. ಅವಳಿ ಜಿಲ್ಲೆಗಳಲ್ಲಿ ಶೇ 25 ರಷ್ಟು ಹೋಟೆಲ್‌ಗಳು ಬಾಗಿಲು ಹಾಕಿವೆ.
‘ಕರಾವಳಿಯ ಹೋಟೆಲ್ ಉದ್ಯಮ ಪ್ರವಾಸಿಗರ ಮೇಲೆಯೇ ಅವಲಂಬಿತವಾಗಿದ್ದು, ಲಾಕ್‌ಡೌನ್ ನಿಂದಾಗಿ ಎರಡು ವರ್ಷಗಳಿಂದ ಜಿಲ್ಲೆಗೆ ನಿರೀಕ್ಷಿತ ಪ್ರಮಾಣದ ಪ್ರವಾಸಿಗರು ಬಂದಿಲ್ಲ. ಹೋಟೆಲ್ ಮಾಲೀಕರಾಗಿದ್ದವರು ಗೋಡಂಬಿ ಕಾರ್ಖಾನೆಗಳಲ್ಲಿ ಕಾರ್ಮಿಕರಾಗಿ ದುಡಿಯತ್ತಿದ್ದಾರೆ. ಕೆಲವರು ಅನ್ಯ ಉದ್ಯೋಗಗಳತ್ತ ಮುಖ ಮಾಡಿದ್ದಾರೆ’ ಎಂದರು ಉಡುಪಿ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.