ರಾಯಿಟರ್ಸ್ ಚಿತ್ರ
ಕೆಲವು ಘಟನೆಗಳನ್ನು ನೆನಪಿಸಿಕೊಳ್ಳಿ... ಒಂದು ವರ್ಷದ ಹಿಂದೆ ಹಾವೇರಿ ಜಿಲ್ಲೆಯಲ್ಲಿ. ಹೊಟ್ಟೆನೋವೆಂದು ಬಂದ ಮಹಿಳೆಯರ ಗರ್ಭಕೋಶ ತೆಗೆಯಲಾಗಿತ್ತು. ಎರಡು ವರ್ಷಗಳ ಹಿಂದೆ, ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಕೂಲಿ ಕಾರ್ಮಿಕ ಮಹಿಳೆಯರಿಗೆ ಕೆಲಸ ನೀಡುವ ನೆಪದಲ್ಲಿ ಗರ್ಭಕೋಶ ತೆಗೆಯಲು ಹೇಳಲಾಗಿತ್ತು. ಅವರಲ್ಲಿ ಬಹುತೇಕ ಹೆಣ್ಣುಮಕ್ಕಳು ಗರ್ಭಾಶಯವನ್ನು ತೆಗೆಸಿಕೊಂಡಿದ್ದರು. ಕೆಲದಿನಗಳ ಹಿಂದೆ, ನಿತ್ಯ ಪೂಜೆ ಮಾಡಲು ಕಷ್ಟವಾಗುವುದೆಂದು ಮಕ್ಕಳಾದ ವಿವಾಹಿತೆಯರು ಗರ್ಭಕೋಶ ತೆಗೆಸಿಕೊಳ್ಳುತ್ತಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಹ ಹರಿದಾಡಿತ್ತು.
ಗರ್ಭಕೋಶದ ಕ್ಯಾನ್ಸರ್ ಆಗುವ ಸಾಧ್ಯತೆ ಇದ್ದುದರಿಂದ ತೆಗೆಯುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಹೆಣ್ಣುಮಕ್ಕಳು ಹೇಳುತ್ತಾರೆ. ಆದರೆ ಇದು ಎಲ್ಲ ಸಂದರ್ಭದಲ್ಲಿಯೂ ಸತ್ಯವಲ್ಲ ಎಂಬದುನ್ನು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಯೋನಿಸ್ರಾವವನ್ನು ಈಗಲೂ ಚರ್ಚಿಸದ ಮನೋಭಾವವೇ ಸಮಸ್ಯೆ ಉಲ್ಬಣಗೊಳ್ಳಲು ಮುಖ್ಯ ಕಾರಣವಾಗಿದೆ. ವೈದ್ಯರೊಂದಿಗೆ ಮುಚ್ಚುಮರೆಯಿಲ್ಲದೆ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರೆ ಕ್ಯಾನ್ಸರ್‌ನ ಮೊದಲ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬಹುದಾಗಿದೆ ಎಂಬುದು ತಜ್ಞರ ಕಾಳಜಿಯಾಗಿದೆ.
ಹುಬ್ಬಳ್ಳಿಯ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ರಿಸರ್ಚ್ ಇನ್‌ಸ್ಟಿಟ್ಯೂಟ್ (ಕೆಸಿಟಿಆರ್‌ಐ)ನ ಕನ್ಸಲ್ಟಂಟ್ ರೇಡಿಯೇಶನ್ ಅಂಕಾಲೊಜಿಸ್ಟ್ ಡಾ.ಸಾಯಿಕುಮಾರಿ ಆರ್.ಟಿ. ಅವರು ಮಹಿಳೆಯರ ಮುಂಜಾಗ್ರತೆಯೇ ಇದಕ್ಕೆ ಉತ್ತಮ ಪರಿಹಾರವಾಗಲಿದೆ ಎಂದು ಪ್ರತಿಪಾದಿಸುತ್ತಾರೆ.
ಗರ್ಭಕೋಶದ ಕ್ಯಾನ್ಸರ್ ಗರ್ಭಾಶಯದ ಒಳಪದರಿನಲ್ಲಿ (ಎಂಡೊಮೆಟ್ರಿಯಂನಲ್ಲಿ) ಕಾಣಿಸಿ ಕೊಳ್ಳುವ ಕ್ಯಾನ್ಸರ್ ಆಗಿದೆ. ಇದು ದೇಹದ ಇತರ ಭಾಗಗಳಿಗೆ ಹರಡಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕೋಶಗಳ ಅಸಹಜ ಬೆಳವಣಿಗೆಯ ಪರಿಣಾಮವಾಗಿದೆ. ಸ್ನಾಯುಗಳಲ್ಲಿ ಪ್ರಾರಂಭವಾಗುವ ಗರ್ಭಾಶಯದ ಕ್ಯಾನ್ಸರ್‌ಗೆ ಗರ್ಭಾಶಯದ ಸಾರ್ಕೋಮಾ ಎಂದು ಕರೆಯಲಾಗುತ್ತದೆ.
ಮುಖ್ಯವಾಗಿ ಗರ್ಭಕೋಶದ ಕ್ಯಾನ್ಸರ್‌ಗೆ ಪ್ರಮುಖ ಕಾರಣ ಎಚ್‌ಪಿವಿ ವೈರಸ್ (ಹ್ಯೂಮನ್ ಪ್ಯಾಪಿಲೋಮಾ ವೈರಸ್). ಬಹುಸಂಗಾತಿಯೊಂದಿಗೆ ಲೈಂಗಿಕತೆ ಹೊಂದಿರುವವರಿಗೆ ಈ ಕ್ಯಾನ್ಸರ್ ಬಾಧಿಸುವ ಸಾಧ್ಯತೆಯಿದೆ. ಹೆಚ್ಚು ಮಕ್ಕಳಿಗೆ ಜನ್ಮನೀಡುವುದರಿಂದ ಹಾರ್ಮೋನ್‌ಗಳಲ್ಲಿ ಹೆಚ್ಚಿನ ವ್ಯತ್ಯಾಸವಾಗಿ ಗರ್ಭಕೋಶದ ಕ್ಯಾನ್ಸರ್ ಬಾಧಿಸಲೂಬಹುದು ಎಂದು ಸಾಯಿಕುಮಾರಿ ವಿವರಿಸುತ್ತಾರೆ.
ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಅತಿಯಾದ ರಕ್ತಸ್ರಾವವಾದಾಗ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಖಲಾಗಿ ತೊಂದರೆಯ ಪೂರ್ವಾಪರ ವಿಚಾರಕ್ಕೆ ಮುಂದಾಗದೆ ಗರ್ಭಕೋಶ ಶಸ್ತ್ರಚಿಕಿತ್ಸೆಗೆ ಒಳಪಡುತ್ತಾರೆ. ಇಂಥ ನಿರ್ಧಾರಕ್ಕೆ ಮುನ್ನ ಒಂದಾದರೂ ಸ್ಕ್ಯಾನಿಂಗ್ ಅತ್ಯವಶ್ಯವಾಗಿರುತ್ತದೆ. ಸ್ಕ್ಯಾನಿಂಗ್‌ಗೆ ಒಳಪಡುವುದರಿಂದ ಗರ್ಭಕೋಶದಲ್ಲಿ ಗಂಟುಗಳಿದ್ದರೆ ತಿಳಿಯುತ್ತದೆ.
ಗರ್ಭಕೋಶ ತೆಗೆಯಲೇಬೇಕೆಂಬ ಹಟ ಏಕೆ?
ಸಾಮಾನ್ಯವಾಗಿ ಅತಿಯಾದ ರಕ್ತಸ್ರಾವಕ್ಕೆ ಕಾರಣ ಗುರುತಿಸಲಾಗದೆ ಮಹಿಳೆಯರು ಪರದಾಡುತ್ತಾರೆ. ನಿರಂತರವಾಗಿ ಹೆಚ್ಚಿನ ಸ್ರಾವಕ್ಕೆ ಒಳಗಾದಾಗ ನಿಶ್ಯಕ್ತಿಯಿಂದ ಬಳಲುತ್ತಾರೆ. ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪ್ರತಿ ಸಲ ಸ್ರಾವವಾದಾಗಲೂ ಸೋಂಕಿಗೆ ಒಳಗಾಗುತ್ತಾರೆ. ಈ ಎಲ್ಲ ಬಳಲಿಕೆಯಿಂದ ಒಂದೇ ಸಲ ಮುಕ್ತಿ ಪಡೆಯಬಹುದು ಎಂದು ಭಾವಿಸಿ, ಗರ್ಭಕೋಶ ತೆಗೆಯಲು ಒತ್ತಾಯಿಸುತ್ತಾರೆ.
ಕೆಲವು ಕೂಲಿ ಕಾರ್ಮಿಕರೂ ತಮ್ಮ ದಿನಗೂಲಿಗೆ ಕತ್ತರಿ ಬೀಳುವ ಆತಂಕದಿಂದ ಗರ್ಭಕೋಶ ತೆಗೆಯಲು ಒತ್ತಾಯಿಸುತ್ತಾರೆ. ‘ಭಾಳ ತ್ರಾಸದರಿ. ತಡ್ಕೊಳ್ಳಾಕ ಆಗೂದಿಲ್ರಿ’ ಎಂಬ ಮಾತನ್ನೇ ಅವರು ಪುನುರಚ್ಚರಿಸುತ್ತಾರೆ.
ಹಾರ್ಮೋನುಗಳ ಏರುಪೇರು ಸರಿಪಡಿಸುವ ಚಿಕಿತ್ಸೆಗೆ ಒಳಪಡುವುದರ ಬದಲು, ಸಮಸ್ಯೆಯ ಮೂಲವನ್ನೇ ಕಿತ್ತು ಹಾಕಬೇಕು ಎಂಬ ಹಟಕ್ಕೆ ಬೀಳುತ್ತಾರೆ. ಇಂಥ ಮಧ್ಯವಯಸ್ಸಿನ ಮಹಿಳೆಯರಿಗೆ ದುಡಿಯುವ ಅನಿವಾರ್ಯ ಮತ್ತು ನೋವು ನಿರ್ವಹಣೆಯ ಬದಲು ನಿವಾರಣೆಯೇ ಮೂಲ ಉದ್ದೇಶವಾಗಿರುತ್ತದೆ. ಚಿಕಿತ್ಸಕ ದೃಷ್ಟಿಯಿಂದ ಅಗತ್ಯವಿಲ್ಲದಿದ್ದಲ್ಲಿ ಗರ್ಭಕೋಶ ತೆಗೆಯಲು ನಿರಾಕರಿಸಿದಾಗ, ಅವರು ಮತ್ತೆ ಇಲ್ಲಿ ಬರುವುದೇ ಇಲ್ಲ ಎಂದು ಧಾರವಾಡದ ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ ಆಫ್ ಇಂಡಿಯಾದ ವ್ಯವಸ್ಥಾಪಕರಾದ ಸುಜಾತಾ ಅನಿಶೆಟ್ಟರ ಅವರು ಸ್ಪಷ್ಟಪಡಿಸುತ್ತಾರೆ.
ಮಹಿಳೆಯ ಕೌಟುಂಬಿಕ ಕಾರಣಗಳು, ಪರಿಸರ, ದುಡಿಮೆ, ನೋವು, ಯಾತನೆ, ಆಯಾಸಗಳ ನಿವಾರಣೆಗೆ ಇದು ಸುಲಭೋಪಾಯವೆಂಬಂತೆ ಕಾಣುತ್ತದೆ. ಆ ಕಾರಣಕ್ಕಾಗಿಯೇ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಅಂಥ ಮಹಿಳೆಯರು ಬಂದಾಗ ಪವರ್‌ಪಾಯಿಂಟ್ ಪ್ರಸೆಂಟೇಷನ್ ಮೂಲಕ ಜಾಗೃತಿ ನೀಡಲಾಗುತ್ತಿದೆ. ಸಮಾಲೋಚನೆಯ ಮೂಲಕ ಮೊದಲು ಚಿಕಿತ್ಸೆಗೆ ಒಳಪಡಲು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ತಮ್ಮ ಪ್ರಯತ್ನಗಳ ಕುರಿತು ಬಿಚ್ಚಿಡುತ್ತಾರೆ.
ಗಂಟುಗಳ ಬಗ್ಗೆ ನಿಗಾ ಇಡಿ: ಸ್ಕ್ಯಾನಿಂಗ್ ಮಾಡಿದಾಗ ಗರ್ಭಕೋಶದಲ್ಲಿ ಗಂಟು ಕಂಡು ಬಂದಾಗ ಗರ್ಭಕೋಶ ತೆಗೆಸಬೇಕಾ ಎಂಬ ಆತಂಕದಿಂದ ಹಲವು ಮಹಿಳೆಯರು ಬರುತ್ತಾರೆ. ಗಂಟುಗಳಿದ್ದಾಗಲೂ ಅವುಗಳಿಂದ ಯಾವುದೇ ಆರೋಗ್ಯ ಸಮಸ್ಯೆ, ತ್ರಾಸು, ಸುಸ್ತು, ಸಂಕಟ ಕಂಡು ಬರದಿದ್ದಾಗ ಹೆದರಬೇಕಾಗಿಲ್ಲ. ವೈದ್ಯರು ಸೂಚಿಸಿದ ಔಷಧ ನಿಯಮಿತವಾಗಿ ಸೇವಿಸಬೇಕು. ವರ್ಷಕ್ಕೊಮ್ಮೆ ಸ್ಕ್ಯಾನಿಂಗ್ ಮಾಡಿಸಿ ಗಂಟುಗಳು ಬೆಳೆಯುತ್ತಿವೆಯೇ ಎಂಬ ಬಗ್ಗೆ ನಿಗಾ ವಹಿಸುವುದು ಅಗತ್ಯ ಎಂದು ಹುಬ್ಬಳ್ಳಿಯ ಸಿಟಿ ಕ್ಲಿನಿಕ್‌ನ ಹೆರಿಗೆ ಮತ್ತು ಸ್ತ್ರೀ ತಜ್ಞೆ ಡಾ.ವಿದ್ಯಾ ಜೋಷಿ ಅಭಿಪ್ರಾಯಪಟ್ಟರು.
ಗಂಟುಗಳು ತೀವ್ರವಾಗಿ ಬೆಳೆಯುತ್ತಿರುವುದು ಕಂಡು ಬಂದರೆ ಅಥವಾ ಗಂಟುಗಳು ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆಗಳು ಇದ್ದರೆ ಮಾತ್ರ ವೈದ್ಯರು ಗರ್ಭಕೋಶ ತೆಗೆಯಲು ಸೂಚಿಸುತ್ತಾರೆ. ಯುವತಿಯರ ಗರ್ಭಕೋಶದಲ್ಲಿ ಗಂಟುಗಳು ಕಂಡು ಬಂದರೂ ಅವುಗಳಿಂದ ಏನೂ ಆರೋಗ್ಯ ಸಮಸ್ಯೆ ಉಂಟಾಗದಿದ್ದರೆ ಗರ್ಭಕೋಶ ತೆಗೆಸಬೇಕಾದ ಅಗತ್ಯವೂ ಬರುವುದಿಲ್ಲ. ಅಂಡಾಶಯ ಹಾಗೆಯೇ ಇರಿಸಿ ಗರ್ಭಕೋಶ ತೆಗೆಯುವುದರಿಂದ ಹಾರ್ಮೋನ್ ಸಮತೋಲನ ತಪ್ಪುವ ಅಪಾಯವೂ ಇರುವುದಿಲ್ಲ. ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವುದಿಲ್ಲ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ವಿಪರೀತದ ರಕ್ತಸ್ರಾವ, ಎಂದರೆ ದಿನಕ್ಕೆ ನಾಲ್ಕಾರು ಸ್ಯಾನಿಟರಿ ಪ್ಯಾಡುಗಳನ್ನು ಬದಲಿಸುತ್ತಿದ್ದಲ್ಲಿ, ರಕ್ತದ ಕರಣೆಗಳು ಸ್ರಾವದಲ್ಲಿ ಕಂಡು ಬಂದರೆ ಅದಕ್ಕೆ ವಿಪರೀತದ ಸ್ರಾವ ಎಂದು ಕರೆಯಲಾಗುತ್ತದೆ. ಈ ಸ್ಥಿತಿ ಇದ್ದಲ್ಲಿ, ಹೆರಿಗೆ ನೋವಿನಂತೆ ತೀವ್ರವಾದ ನೋವು ಕಂಡು ಬಂದಲ್ಲಿ, ಸೂಕ್ತ ಚಿಕಿತ್ಸೆಗೂ ಸ್ಪಂದಿಸದೇ ಈ ನೋವು ಮುಂದುವರಿದಲ್ಲಿ ಮಾತ್ರ ತಜ್ಞರೊಂದಿಗೆ ಸಮಾಲೋಚಿಸಿ, ಗರ್ಭಕೋಶ ತೆಗೆಯುವ ನಿರ್ಧಾರ ಕೈಗೊಳ್ಳಬಹುದಾಗಿದೆ.
ಹೆಣ್ಣುಮಕ್ಕಳಲ್ಲಿ ಋತುಸ್ರಾವ ಮತ್ತು ಋತುಬಂಧದಲ್ಲಿ ಆಗುವ ವ್ಯತ್ಯಾಸಗಳಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗುವ ಸಾಧ್ಯತೆಗಳಿರುತ್ತವೆ. ಇವುಗಳಿಂದ ಪಾರಾಗಲು ಗರ್ಭಕೋಶಕ್ಕೆ ಕತ್ತರಿ ಹಾಕುವತ್ತ ಹೆಚ್ಚು ಒಲವು ತೋರುತ್ತಾರೆ. ಗ್ರಾಮೀಣ ಭಾಗದಲ್ಲಿಯಂತೂ ಮಕ್ಕಳಾದ ಮೇಲೆ ’ಮಕ್ಕಳ ಚೀಲ‘ದ್ದೇನು ಕೆಲಸ ಎಂಬ ತರ್ಕವನ್ನೂ ಒಡ್ಡುತ್ತಾರೆ. ಗ್ರಾಮೀಣ ಭಾಗದ ಮಹಿಳೆಯರು ಬಡಮಹಿಳೆಯರು ಋತು ಸ್ರಾವದ ಸಣ್ಣ ಪುಟ್ಟ ತೊಂದರೆಗಳನ್ನು ನಿಭಾಯಿಸದೆ ಮಕ್ಕಳಾದ ನಂತರ ಗರ್ಭಕೋಶ ಬೇಡವೆಂಬ ತೀರ್ಮಾನಕ್ಕೆ ಬರುತ್ತಾರೆ. ಅಂಥವರಿಗೆ ಅದೆಷ್ಟೋ ಸಲ ಮನ ಒಲಿಸಿ, ಹಾರ್ಮೋನುಗಳ ಏರುಪೇರಾಗುವ ಸ್ಥಿತಿಯನ್ನು ತಿಳಿಸಿ ಕಳುಹಿಸಲಾಗುತ್ತದೆ ಎಂದು ಸುಜಾತಾ ಅನಿಶೆಟ್ಟರ ತಿಳಿಸುತ್ತಾರೆ.
ಗರ್ಭಕಂಠ ಕ್ಯಾನ್ಸರ್: ಗರ್ಭಕಂಠವು ಗರ್ಭಾಶಯದ ಕೆಳಗಿನ ಭಾಗವಾಗಿದ್ದು, ಅದು ಯೋನಿಯೊಂದಿಗೆ ಸಂಪರ್ಕಿಸುತ್ತದೆ. ‘ಹ್ಯೂಮನ್ ಪ್ಯಾಪಿಲೋಮ ವೈರಸ್’ನ (ಎಚ್‌ಪಿವಿ) ವಿವಿಧ ತಳಿಗಳು ಗರ್ಭಕಂಠ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿವೆ. ಎಚ್‌ಪಿವಿ ಲೈಂಗಿಕ ಸಂಪರ್ಕದ ಮೂಲಕ ಹರಡುವ ಸಾಮಾನ್ಯ ವೈರಾಣುವಾಗಿದೆ. ಈ ಸೋಂಕು ಪದೇ ಪದೇ ಗರ್ಭಕಂಠವನ್ನು ಘಾಸಿ ಮಾಡುತ್ತಾ ಹೋದರೆ ಸಾಮಾನ್ಯ ಜೀವಕೋಶಗಳು ನಾಶವಾಗಿ, ಆ ಸ್ಥಾನದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯುವ ಸಾಧ್ಯತೆಗಳು ಇರುತ್ತವೆ. ಗರ್ಭಕಂಠದಲ್ಲಿ ಆಗುವ ಬದಲಾವಣೆಯನ್ನು ತಪಾಸಣೆ ಮೂಲಕ ಮಾತ್ರ ಪತ್ತೆ ಮಾಡಲು ಸಾಧ್ಯ ಎನ್ನುತ್ತಾರೆ ಕ್ಯಾನ್ಸರ್ ತಜ್ಞರು.
ಪ್ರಮುಖ ಕಾರಣಗಳು: ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು, ರೋಗನಿರೋಧಕ ಶಕ್ತಿ ಇಳಿಕೆ, ಅಪೌಷ್ಟಿಕತೆ, ಅಶುಚಿತ್ವ, ಹೆಚ್ಚು ಬಾರಿ ಗರ್ಭಧರಿಸುವುದು, ಗರ್ಭನಿರೋಧಕಗಳ ಬಳಕೆ, ಧೂಮಪಾನ, ಮದ್ಯಪಾನ, ಮಾದಕ ದ್ರವ್ಯಗಳ ವ್ಯಸನ, ಸ್ಟೀರಾಯ್ಡ್ ಔಷಧಗಳ ಚಿಕಿತ್ಸೆ, ಎಚ್‌ಐವಿಯಂತಹ ಕಾಯಿಲೆ
ಪ್ರಮುಖ ಲಕ್ಷಣಗಳು: ಯೋನಿಯಲ್ಲಿ ರಕ್ತಸ್ರಾವ, ಸಂಭೋಗದ ಸಮಯದಲ್ಲಿ ನೋವು ಹಾಗೂ ಹೊಟ್ಟೆಯ ಕೆಳಭಾಗದಲ್ಲಿ ಅಸಹಜತೆ, ಬೆನ್ನಿನ ಕೆಳಭಾಗ ನೋವು, ನಿಶ್ಯಕ್ತಿ, ಯೋನಿ ಭಾಗದಲ್ಲಿ ತುರಿಕೆ ಹಾಗೂ ಉರಿ, ಕಾಲಿನ ಭಾಗದಲ್ಲಿ ಊತ ಇವೆಲ್ಲ ಕಂಡು ಬಂದಾಗ ಋತುಸ್ರಾವದ ಸಹಜ ಸಮಸ್ಯೆಗಳಿವು ಎಂದು ನಿರ್ಲಕ್ಷ್ಯ ಮಾಡಬಾರದು.
ಗರ್ಭಕೋಶ ತೆಗೆಯುವುದು ಶಾಶ್ವತ ಪರಿಹಾರವೇ?
ಚಿಕಿತ್ಸೆ ಲಭ್ಯ ಇರುವಾಗಲೂ, ಅಂಡಾಶಯ ಸಮೇತ ಗರ್ಭಕೋಶವನ್ನು ತೆಗೆದುಹಾಕುವುದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತವೆ. ಅಂಡಾಶಯ ಉಳಿಸಿದರೆ ಒಳಿತು. ಆದರೆ ಅದನ್ನೂ ತೆಗೆದರೆ ಹೃದ್ರೋಗ ಸಮಸ್ಯೆಗೆ ಒಳಗಾಗಬಹುದು. ಎಲುಬಿನ ಸಾಂದ್ರತೆ ಕಡಿಮೆಯಾಗಿ ಎಲುವು ಮುರಿತವುಂಟಾಗಲಿದೆ. ತಲೆ ಕೂದಲ ಬೆಳವಣಿಗೆ ಕುಂಠಿತವಾಗಲಿದೆ. ಚರ್ಮ ಒಣವಾಗಿ ಸುಕ್ಕುಗಟ್ಟಲಿದೆ ಇತ್ಯಾದಿ ಸಮಸ್ಯೆಗಳನ್ನು ಮಹಿಳೆ ಎದುರಿಸಬೇಕಾಗುತ್ತದೆ.
ವಿಪರೀತ ರಕ್ತಸ್ರಾವ, ಸಹಿಸಲಸಾಧ್ಯ ನೋವು, ಸುಸ್ತು, ಗರ್ಭಕೋಶದಲ್ಲಿ ಗಂಟುಗಳು ಕಂಡು ಬಂದ ಶೇ 95ರಷ್ಟು ಪ್ರಕರಣಗಳಲ್ಲೂ ಗರ್ಭಕೋಶ ತೆಗೆಸುವ ಅನಿವಾರ್ಯತೆ
ಬರುವುದಿಲ್ಲ. ಈಚೆಗೆ ವೈದ್ಯಕೀಯ ಹಾಗೂ ಔಷಧ ಕ್ಷೇತ್ರಗಳಲ್ಲಿ
ಆಗಿರುವ ಆವಿಷ್ಕಾರಗಳಿಂದಾಗಿ ಹಲವು ಉತ್ತಮ ಚಿಕಿತ್ಸೆ
ಹಾಗೂ ಪರಿಹಾರ ಕ್ರಮಗಳು ಇವೆ. ಈ ಕಡೆಗೆ ಹೆಚ್ಚು ಗಮನವಹಿಸಬೇಕಾಗಿದೆ.
ಗರ್ಭಕೋಶ ತೆಗೆಸಲೇ ಬೇಕಾದಾಗಲೂ ಆತಂಕ ಪಡಬೇಕಿಲ್ಲ. ಶಸ್ತ್ರಚಿಕಿತ್ಸೆ ಆದ ನಂತರ ಮಲಗಿಯೇ ಇರಬೇಕಾದ ಅಗತ್ಯವಿಲ್ಲ. ನಿತ್ಯದ ಲಘು ಕೆಲಸಗಳನ್ನು ಮಾಡಬೇಕು. ದೇಹವನ್ನು ಚಟುವಟಿಕೆಯಿಂದ ಇಡಬೇಕು. ತೂಕ ಹೆಚ್ಚಳವಾಗದಂತೆ ಎಚ್ಚರಿಕೆ ವಹಿಸಬೇಕು.
ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಗರ್ಭಕಂಠದ ಕ್ಯಾನ್ಸರ್ ತಡೆಯಲು ‘ಹ್ಯೂಮನ್ ಪ್ಯಾಪಿಲೋಮ ವೈರಸ್’ (ಎಚ್‌ಪಿವಿ) ಲಸಿಕೆ ಸಹಕಾರಿಯಾಗಿದೆ.
ಈ ಲಸಿಕೆಯು ಕ್ಯಾನ್ಸರ್ ಕೋಶಗಳ ವಿರುದ್ಧ ನಿರೋಧಕ ಶಕ್ತಿ ವೃದ್ಧಿಸಲಿದೆ. ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ಈ ಲಸಿಕೆ ಎರಡು ಡೋಸ್‌ಗಳನ್ನು ಹೊಂದಿದ್ದು, ಮೊದಲ ಹಾಗೂ ಎರಡನೇ ಡೋಸ್ ನಡುವಿನ ಅಂತರ ಆರು ತಿಂಗಳು ಇರಲಿದೆ. ಕೇಂದ್ರ ಸರ್ಕಾರವೂ ಇದಕ್ಕೆ ಅನುಮೋದನೆ ನೀಡಿದ್ದು, ಖಾಸಗಿ ವೈದ್ಯಕೀಯ ವ್ಯವಸ್ಥೆಯಡಿ ಒದಗಿಸಲಾಗುತ್ತಿದೆ. ಸರ್ಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ಕೆಲ ಖಾಸಗಿ ಶಾಲೆಗಳಲ್ಲಿ 9ರಿಂದ 15 ವರ್ಷದೊಳಗಿನ ಬಾಲಕಿಯರಿಗೆ ಎರಡು ಡೋಸ್ ಎಚ್‌ಪಿವಿ ಲಸಿಕೆ ಒದಗಿಸುತ್ತಿವೆ. ಈ ಲಸಿಕೆಯು ಸರ್ಕಾರಿ ವ್ಯವಸ್ಥೆಯಡಿ ಸದ್ಯ ದೊರೆಯುತ್ತಿಲ್ಲ.
9ರಿಂದ 15 ವರ್ಷದೊಳಗಿನವರಿಗೆ ಎರಡು ಡೋಸ್, 15ರಿಂದ 30 ವರ್ಷದೊಳಗಿನವರಿಗೆ ಮೂರು ಡೋಸ್‌ಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಈ ಲಸಿಕೆಯು ದುಬಾರಿಯಾಗಿದ್ದು, ಸದ್ಯ ಖಾಸಗಿ ವ್ಯವಸ್ಥೆಯಡಿ ಒಂದು ಡೋಸ್‌ಗೆ ₹ 10 ಸಾವಿರದವರೆಗೂ ಬೆಲೆ ನಿಗದಿಪಡಿಸಲಾಗಿದೆ. ‘ಸರ್ವಾರಿಕ್ಸ್’ ಮತ್ತು ‘ಗಾರ್ಡಾಸಿಲ್’ ಎಂಬ ಕಂಪನಿಗಳ ಲಸಿಕೆಗಳು ರಾಜ್ಯದಲ್ಲಿ ದೊರೆಯುತ್ತಿವೆ.
‘ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ ಸಹಕಾರಿ. ಲೈಂಗಿಕ ಸಂಬಂಧಗಳನ್ನು ಪ್ರಾರಂಭಿಸುವ ಮೊದಲು ಲಸಿಕೆ ನೀಡಿದಾಗ ಅದು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ. ಆದ್ದರಿಂದ 9ರಿಂದ 15 ವರ್ಷದೊಳಗಿನವರಿಗೆ ಲಸಿಕೆಗೆ ಕ್ರಮವಹಿಸಬೇಕಿದೆ. ಲಸಿಕೆ ಪಡೆದವರಲ್ಲಿ ಕೆಲವರಿಗೆ ಜ್ವರ, ತಲೆನೋವು, ಊತದಂತಹ ಸಾಮಾನ್ಯ ಅಡ್ಡ ಪರಿಣಾಮಗಳು ಮಾತ್ರ ಕಾಣಿಸಿಕೊಳ್ಳುತ್ತವೆ’
– ಡಾ.ಸಿ.ರಾಮಚಂದ್ರ,ಮಾಜಿ ನಿರ್ದೇಶಕ, ಕಿದ್ವಾಯಿ ಗಂಥಿ ಕೇಂದ್ರ
ಗರ್ಭಕೋಶ ದೇಹದ ಅನಗತ್ಯ ಅಂಗವಲ್ಲ. ಅದು ಪ್ರಮುಖವಾದ ಅಂಗ. ಅನಿವಾರ್ಯ ಕಾರಣಗಳಿರದೇ ಇದ್ದಲ್ಲಿ ಅದು ನಿಮ್ಮ ದೇಹದ ಪ್ರಮುಖ ಅಂಗವಾಗಿದೆ. ಗರ್ಭಾಶಯದ ಸಮಸ್ಯೆಗಳಿಗೆ ಮುಖ್ಯವಾಗಿ ಹಾರ್ಮೋನ್‌ಗಳ ಅಸಮತೋಲನವೇ ಕಾರಣ. ಇವುಗಳನ್ನು ನಿಯಂತ್ರಣದಲ್ಲಿಡಲು ಮೂರು ಸೂತ್ರಗಳನ್ನು ಅನುಸರಿಸಿ.
ಈ ಮೂರು ಸೂತ್ರಗಳಿದ್ದರೆ ಲವಲವಿಕೆಯಿಂದ ಬದುಕುವುದು ಸರಳವಾಗುತ್ತದೆ. ಅನಗತ್ಯದ ಶಸ್ತ್ರಚಿಕಿತ್ಸೆಗೆ ಒಳಗಾಗುವುದು ತಪ್ಪುತ್ತದೆ. ಹೆಣ್ತನದ ಪ್ರತೀಕವಾಗಿರುವ ಗರ್ಭಕೋಶಕ್ಕೆ ಅನಗತ್ಯವಾಗಿ ಕತ್ತರಿಹಾಕುವುದು ತಪ್ಪುತ್ತದೆ.
– ಡಾ. ವಿದ್ಯಾ ಜೋಷಿ
ಅತಿ ರಕ್ತಸ್ರಾವ, ಬಿಳಿ ಮುಟ್ಟು, ಪೆಲ್ವಿಕ್ ನೋವು, ಅನಿಯಮಿತ ಋತುಚಕ್ರ ಇವೆಲ್ಲವೂ ಗರ್ಭಾಶಯ ಕ್ಯಾನ್ಸರ್‌ನ ಮುಖ್ಯ ಲಕ್ಷಣವೆನಿಸಿವೆ. ನಿರ್ಲಕ್ಷಿಸದೇ ವೈದ್ಯರಿಂದ ತಪಾಸಣೆಗೆ ಒಳಪಡಬೇಕು. ಪ್ರಾಥಮಿಕ ಹಂತದಲ್ಲಿ ನಿರ್ಲಕ್ಷಿಸಿ, ಮಿತಿ ಮೀರಿದಾಗ 3ನೇ ಹಂತದಲ್ಲಿ ವೈದ್ಯರ ಬಳಿ ಬರುವವರೇ ಹೆಚ್ಚು. ಗುಣವಾಗುವಿಕೆ ಸಂಭವ ಶೇ 75ರಿಂದ 80ರಷ್ಟಿರಲಿದೆ. ಮೊದಲ ಹಂತದಲ್ಲಾದರೆ ಸಂಪೂರ್ಣ ಗುಣಮುಖವಾಗಬಹುದು.
ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುವವರಿಗೆ ನೀಡಲಾಗುವ ಸುದೀರ್ಘ ಕಾಲದ (5 ಅಥವಾ ಅದಕ್ಕಿಂದ ಹೆಚ್ಚು ವರ್ಷ) ಹಾರ್ಮೊನ್ ಗುಳಿಗೆಗಳಿಂದ ಗರ್ಭಕೋಶದ ಕ್ಯಾನ್ಸರ್ ಅಪಾಯ ಹೆಚ್ಚುವುದು ಸಹಜ. ಇವು ಗರ್ಭಾಶಯದ ಒಳಪದರವನ್ನು ದಪ್ಪಗೊಳಿಸುತ್ತವೆ. ಅದು ಗರ್ಭಕೋಶದ ಕ್ಯಾನ್ಸರ್‌ಗೆ ದಾರಿಯಾಗಲಿದೆ. ಸ್ತನ ಕ್ಯಾನ್ಸರ್ ಸಂತ್ರಸ್ತೆಯರು ವರ್ಷಕ್ಕೊಮ್ಮೆ ಗರ್ಭಕೋಶದ ಒಳಪದರಿನ ನಿಗಾವಹಿಸಬೇಕು.
ಗರ್ಭಕೋಶದ ಕ್ಯಾನ್ಸರ್ ಗೆ ಮುಂಜಾಗ್ರತೆಯೇ ಮೇಲು. ಯೋನಿಗೆ ಸಂಬಂಧಿಸಿದ ಸಮಸ್ಯೆಗಳೆಂದು ನಾಚಿ, ಹಿಂಜರಿದು ಸುಮ್ಮನಾಗದೆ ವೈದ್ಯರ ಬಳಿ ಚರ್ಚಿಸುವುದು ಸೂಕ್ತ. ಸಮಸ್ಯೆ ಆರಂಭಿಕ ಹಂತದಲ್ಲಿದ್ದರೆ ಕಡಿಮೆ ಅವಧಿ, ಕಡಿಮೆ ಖರ್ಚಿನಲ್ಲಿ ಸಂಪೂರ್ಣವಾಗಿ ಗುಣಹೊಂದಬಹುದು.
– ಡಾ. ಸಾಯಿಕುಮಾರಿ ಆರ್.ಟಿ
ಪೂರಕ ಮಾಹಿತಿ: ಸ್ಮಿತಾ ಶಿರೂರ, ಕೃಷ್ಣಿ ಶಿರೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.