ದಾವಣಗೆರೆ: ನಮಗೆ ಇಬ್ಬರು ಮಕ್ಕಳು. ಭವಿಷ್ಯ ಉಜ್ವಲವಾಗಿ ರಲೆಂಬ ಆಸೆಯಿಂದ ಅವರನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ದೊಡ್ಡ ಮಗನನ್ನು 1ನೇ ತರಗತಿಗೆ ದಾಖಲು ಮಾಡಿದಾಗ ₹22,000 ಶುಲ್ಕ ಇತ್ತು. ಈ ವರ್ಷ ₹45,000 ಪಾವತಿಸಿದ್ದೇವೆ. ಕಿರಿಯ ಮಗನನ್ನು ಹೋದ ವರ್ಷ ಎಲ್‌ಕೆಜಿಗೆ ಸೇರಿಸಿದಾಗ ಶಾಲೆಯವರು ₹18,000 ಪಡೆದಿದ್ದರು. ಯುಕೆಜಿಗೆ ₹23,000 ಕಟ್ಟಿಸಿಕೊಂಡಿದ್ದಾರೆ. ಹೀಗೆ ವರ್ಷದಿಂದ ವರ್ಷಕ್ಕೆ ಶುಲ್ಕ ಏರಿಸುತ್ತಲೇ ಇರುವುದರಿಂದ ದುಡಿದದ್ದನ್ನೆಲ್ಲಾ ಮಕ್ಕಳ ಶಿಕ್ಷಣಕ್ಕೇ ಮೀಸಲಿಟ್ಟು, ಜೀವನ ನಿರ್ವಹಣೆಗೆ ಅವರಿವರ ಬಳಿ ಸಾಲ ಮಾಡಬೇಕಾದ ಸ್ಥಿತಿ ಎದುರಾಗಿದೆ....
ದಾವಣಗೆರೆಯ ಎಂಸಿಸಿ ‘ಎ’ ಬ್ಲಾಕ್‌ನಲ್ಲಿ ನೆಲೆಸಿರುವ ಶ್ರೀಧರ್ ಮತ್ತು ಮಮತಾ ದಂಪತಿಯ ಮಾತುಗಳಿವು. ಇವರಂತೆ ಮಕ್ಕಳ ಶಾಲೆ, ಕಾಲೇಜು ಶುಲ್ಕ ಕಟ್ಟಲು ಪಡಿಪಾಟಲು ಪಡುತ್ತಿರುವ ಅದೆಷ್ಟೋ ಪಾಲಕರು ನಮ್ಮ ನಡುವೆ ಇದ್ದಾರೆ. ನಿಯಂತ್ರಣವೇ ಇಲ್ಲದ ಶುಲ್ಕ ಹೆಚ್ಚಳವೆಂಬ ಪಿಡುಗು ಪಾಲಕರನ್ನು ಪೆಡಂಭೂತವಾಗಿ ಕಾಡುತ್ತಿದ್ದು, ‘ಕೆ.ಜಿ’ ಯಿಂದ ‘ಪಿ.ಜಿ’ವರೆಗೂ ತನ್ನ ಕಬಂಧ ಬಾಹುಗಳನ್ನು ಚಾಚಿಕೊಂಡಿದೆ.
‘ಪ್ರತಿಷ್ಠಿತ’ ಎಂಬ ಹಣೆಪಟ್ಟಿ ಹೊಂದಿರುವ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೇ ಕನಿಷ್ಠ ₹52,000 ಶುಲ್ಕ ಪಡೆಯಲಾಗುತ್ತಿದೆ. ಪಿಯುಸಿಗೆ ₹1.5 ಲಕ್ಷದಿಂದ ₹ 5 ಲಕ್ಷ, ಎಂಜಿನಿಯರಿಂಗ್‌ಗೆ ₹7 ಲಕ್ಷದಿಂದ ₹30 ಲಕ್ಷ, ಎಂಬಿಬಿಎಸ್‌ಗೆ ₹25 ಲಕ್ಷದಿಂದ ಕೋಟಿವರೆಗೂ ‘ದರ’ ನಿಗದಿಪಡಿಸಲಾಗಿದೆ. ಬೇರೆ ಬೇರೆ ನಗರಗಳಲ್ಲಿ ಶಾಖೆ ಹೊಂದಿರುವ ಕೆಲ ಶಿಕ್ಷಣ ಸಂಸ್ಥೆಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಶುಲ್ಕ ನಿಗದಿ ಮಾಡುತ್ತಿವೆ.
ಖಾಸಗಿ ಕಾಲೇಜುಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಪ್ರತಿ ವಿದ್ಯಾರ್ಥಿಯಿಂದ ಕ್ರಮವಾಗಿ ₹2,126 ಮತ್ತು ₹3,132 ಶುಲ್ಕ ಪಡೆಯಬೇಕು. ವಿದ್ಯಾರ್ಥಿ ಗಳಿಂದ ಸಂಗ್ರಹಿಸಲಾ ಗುವ ಬೋಧನಾ ಶುಲ್ಕದಲ್ಲಿ ಅರ್ಧದಷ್ಟು ಮೊತ್ತವನ್ನು ಸರ್ಕಾರಕ್ಕೆ ಜಮೆ ಮಾಡ ಬೇಕು. ಪಾಲಕರ ಸಮ್ಮತಿ ಮೇರೆಗೆ ಆಯಾ ಸಂಸ್ಥೆಗಳು ಕಾಲೇಜು ಅಭಿವೃದ್ಧಿ ಶುಲ್ಕ ಪಡೆಯಲು ನಿಯಮಗಳಲ್ಲೇ ಅವಕಾಶ ಇದೆ. ಇದನ್ನೇ ‘ಅಸ್ತ್ರ’ ಮಾಡಿ ಕೊಂಡಿರುವ ರಾಜ್ಯದ ಬಹುಪಾಲು ಪ್ರತಿಷ್ಠಿತ ಪದವಿಪೂರ್ವ ಕಾಲೇಜುಗಳು ವಿಜ್ಞಾನ ಹಾಗೂ ಕಾನೂನು ವಿದ್ಯಾರ್ಥಿ ಗಳಿಂದ ವರ್ಷಕ್ಕೆ ₹1 ಲಕ್ಷದಿಂದ ₹3 ಲಕ್ಷದವರೆಗೂ ಶುಲ್ಕ ವಸೂಲಿ ಮಾಡುತ್ತಿವೆ. ಕಲಾ ಹಾಗೂ ವಾಣಿಜ್ಯ ಕಾಲೇಜುಗಳಲ್ಲಿ ಈ ಮೊತ್ತ ₹40,000ದಿಂದ ₹1.5 ಲಕ್ಷದವರೆಗೂ ಇದೆ ಎಂಬುದು ಹಲವು ಪೋಷಕರ ದೂರು.
‘ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100ರಷ್ಟು ಫಲಿತಾಂಶದ ಗರಿಮೆ ಹೊಂದಿದ್ದ ನಗರದ ಕಾಲೇಜೊಂದರಲ್ಲಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದೆವು. ಮಗ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 95ರಷ್ಟು ಅಂಕ ಗಳಿಸಿದ್ದರಿಂದ ಸೀಟೂ ಸಿಕ್ಕಿತ್ತು. ವಸತಿ ಸೇರಿ ವಾರ್ಷಿಕ ₹ 5 ಲಕ್ಷ ಕಟ್ಟಬೇಕೆಂದು ಹೇಳಿದರು. ಅದನ್ನು ಕೇಳಿ ಗಾಬರಿಗೊಂಡ ನಾವು ₹ 1.5 ಲಕ್ಷ ಕೊಟ್ಟು ಬೇರೆ ಕಾಲೇಜಿಗೆ ಸೇರಿಸಿದೆವು. ಈ ಕುರಿತು ದೂರು ನೀಡಿದರೂ ಸಂಬಂಧಪಟ್ಟ ಕಾಲೇಜಿನ ವಿರುದ್ಧ ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ’ ಎಂದು ಬೆಂಗಳೂರಿನ ಜೆ.ಪಿ. ನಗರದ ನಿವಾಸಿ ಆರ್.ಶಿವರಾಜ್ ಬೇಸರ ವ್ಯಕ್ತಪಡಿಸಿದರು.
‘ಮಗಳು ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿದ್ದಳು. ಆಡಳಿತ ಮಂಡಳಿಯವರು ₹ 40,000 ಇದ್ದ ಶುಲ್ಕವನ್ನು ಒಂದೇ ವರ್ಷಕ್ಕೆ ₹ 64,000ಕ್ಕೆ ಹೆಚ್ಚಿಸಿದ್ದರು. ಅಷ್ಟು ಹಣ ಕಟ್ಟಿ ಅವಳನ್ನು ಅಲ್ಲಿ ಓದಿಸುವ ಶಕ್ತಿ ಇರಲಿಲ್ಲ. ಹೀಗಾಗಿ ಸರ್ಕಾರಿ ಶಾಲೆಗೆ ಸೇರಿಸಿದೆ’ ಎಂದು ಶಿವಮೊಗ್ಗದ ಬಾಪೂಜಿನಗರ ನಿವಾಸಿ ಆರ್.ಮನೋಜ್ ಕುಮಾರ್ ಹೇಳಿದರು.
ಖಾಸಗಿ ಹಾಗೂ ಅನುದಾನಿತ ಶಾಲೆ– ಕಾಲೇಜುಗಳು ಶುಲ್ಕ ಹೆಚ್ಚಳದ ಮೂಲಕ ‘ಹಗಲು ದರೋಡೆ’ ನಡೆಸುತ್ತಿವೆ ಎಂಬ ಆರೋಪ ನಿರಂತರವಾಗಿ ಕೇಳಿಬರುತ್ತಲೇ ಇದೆ. ಶುಲ್ಕ ಕಟ್ಟಲಾಗದೆ ಪಾಲಕರು ಹಾಗೂ ವಿದ್ಯಾರ್ಥಿಗಳು ಅವಮಾನಕ್ಕೀಡಾದ, ಆತ್ಮಹತ್ಯೆ ಮಾಡಿಕೊಂಡ ಘಟನೆಗಳೂ ಸಾಕಷ್ಟು ನಡೆದಿವೆ. ಈಚೆಗೆ ಕಲಬುರಗಿಯ ತಾಜ್ ಸುಲ್ತಾನಪುರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದಕ್ಕೊಂದು ತಾಜಾ ಉದಾಹರಣೆ.
ಶಿಕ್ಷಣ ಹಕ್ಕು ಕಾಯ್ದೆಯ ಆಧಾರದಲ್ಲಿ ಕ್ರಿಯಾ ಯೋಜನೆ ರೂಪಿಸಬೇಕು. ಸೆಕ್ಷನ್– 34ರ ಪ್ರಕಾರ ಶಾಲಾ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ಮಂಡಳಿ ರಚಿಸಿ ಶಿಕ್ಷಣ ಕಾಯ್ದೆಯ ಅನುಷ್ಠಾನ ಪರಾಮರ್ಶಿಸಬೇಕು.– ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ
‘₹1.25 ಲಕ್ಷ ಕೊಟ್ಟು ಮಗಳನ್ನು ಎಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದೆವು. 3ನೇ ಸೆಮಿಸ್ಟರ್ ಶುಲ್ಕ ಕಟ್ಟಲು ಸೆಪ್ಟೆಂಬರ್ 10 ಕೊನೆ ದಿನವಾಗಿತ್ತು. ಅಷ್ಟರೊಳಗೆ ಹಣ ಹೊಂದಿಸಲು ಆಗಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಮೃತ ಯುವತಿಯ ತಾಯಿ, ಅಂಗನವಾಡಿ ಶಿಕ್ಷಕಿ ಮಹಾನಂದಾ ಚಿಟಗುಪ್ಪಿ ಕಣ್ಣೀರಿಟ್ಟರು.
ಕೇಂದ್ರ ಸರ್ಕಾರ 2010ರಲ್ಲಿ ಜಾರಿಗೆ ತಂದ ‘ಶಿಕ್ಷಣ ಹಕ್ಕು ಕಾಯ್ದೆ’ಯನ್ನು ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಕಾಯ್ದೆಯ ಸೆಕ್ಷನ್– 13ರ ಪ್ರಕಾರ ಡೊನೇಷನ್ ಪಡೆಯುವ, ಅಧಿಕ ಶುಲ್ಕ ವಸೂಲಿ ಮಾಡುವ ಶಾಲೆಗಳಿಗೆ ಅವು ವಸೂಲಿ ಮಾಡಿದ ಮೊತ್ತದ 10 ಪಟ್ಟು ದಂಡ ವಿಧಿಸಲು ಅವಕಾಶವಿದೆ. ಆದರೆ, ಯಾರೂ ಇದನ್ನು ಪಾಲಿಸುತ್ತಿಲ್ಲ. ಶುಲ್ಕ ಹೆಚ್ಚಳ ಖಂಡಿಸಿ ನಾನಾ ರೀತಿಯ ಪ್ರತಿಭಟನೆ ನಡೆಸಿದರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಕುಂಭಕರ್ಣ ನಿದ್ರೆಯಿಂದ ಮೇಲೇಳುತ್ತಿಲ್ಲ ಎಂದು ಪಾಲಕರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಇದೇ ಕಾಯ್ದೆಯ ಸೆಕ್ಷನ್ 2 ‘ಬಿ’ ಪ್ರಕಾರ ಶುಲ್ಕದ ವಿವರಗಳನ್ನು ಆಯಾ ಶಾಲೆಯವರು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಪ್ರವೇಶದ ಅರ್ಜಿಯ ಜತೆಗೆ ವಿದ್ಯಾರ್ಥಿಗಳಿಗೆ ನೀಡುವ ಕಿರುಹೊತ್ತಿಗೆಯಲ್ಲೂ ಅದನ್ನು ಮುದ್ರಿಸಬೇಕು. ಶಿಕ್ಷಣ ಇಲಾಖೆಯೂ ಶಾಲೆಗಳ ಶುಲ್ಕದ ವಿವರವನ್ನು ಆಯಾ ವರ್ಷ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಇಷ್ಟೆಲ್ಲಾ ಇದ್ದರೂ, ಶಿಕ್ಷಣ ಸಂಸ್ಥೆಗಳು ಈ ನಿಯಮಗಳನ್ನೆಲ್ಲಾ ಗಾಳಿಗೆ ತೂರಿವೆ ಎಂಬುದೂ ಪಾಲಕರ ಅಳಲು.
‘ರಾಜ್ಯದಲ್ಲಿರುವ ಬಹುಪಾಲು ಖಾಸಗಿ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಒಡೆತನದಲ್ಲಿದ್ದು, ‘ಬೇಲಿಯೇ ಎದ್ದು ಹೊಲ ಮೇಯ್ದಂತೆ’ ಎಂಬ ಸ್ಥಿತಿ ಇದೆ. ‘ಶಿಕ್ಷಣ ಹಕ್ಕು ಕಾಯ್ದೆ’ ಅತ್ಯಂತ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಯಾವ ಶಿಕ್ಷಣ ಸಂಸ್ಥೆಗಳೂ ಪಾಲಿಸುತ್ತಿಲ್ಲ. ಇಂತಹ ಸಂಸ್ಥೆಗಳ ವಿರುದ್ಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಮ ಜರುಗಿಸಿದ ಉದಾಹರಣೆಯೂ ಇಲ್ಲ. ಡಿಡಿಪಿಐ ಹಾಗೂ ಬಿಇಒ ಇಂತಹ ಶಾಲೆಗಳ ಒಳಗೆ ಹೋಗಿ ತಪಾಸಣೆ ನಡೆಸುವ ಧೈರ್ಯವನ್ನೂ ತೋರುವುದಿಲ್ಲ’ ಎಂದು ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಹೇಳುತ್ತಾರೆ.
ಜೀವನ ನಡೆಸಲೇ ನಾವು ಕಷ್ಟ ಅನುಭವಿಸುತ್ತಿದ್ದೇವೆ. ಆದರೆ, ನಮ್ಮಂತೆ ನಮ್ಮ ಮಕ್ಕಳು ಕಷ್ಟಪಡುವುದು ಬೇಡ ಎಂದು ಖಾಸಗಿ ಶಾಲೆಗೆ ಸೇರಿಸಿದ್ದೇವೆ. ಅಲ್ಲಿ ಒಳ್ಳೆಯ ಫಲಿತಾಂಶ ಪಡೆದವರನ್ನು ನೋಡಿದ್ದೇವೆ. ಅವರಂತೆಯೇ ನಮ್ಮ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇದೆ.– ಶಿವಾನಂದ ಗೊರಜನವರ, ಗೋಕುಲ ನಿವಾಸಿ, ಹುಬ್ಬಳ್ಳಿ
ರಾಜ್ಯ ಸರ್ಕಾರದ ಅಂಕುಶದಿಂದ ತಪ್ಪಿಸಿಕೊಳ್ಳಲು ಬಹುತೇಕ ಶಾಲೆಗಳು ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮದ ಮೊರೆ ಹೋಗುತ್ತಿವೆ. ಒಮ್ಮೆ ಎನ್‌ಒಸಿ ಸಿಕ್ಕರೆ ತಮ್ಮ ಮೇಲೆ ರಾಜ್ಯದ ಶಿಕ್ಷಣ ಇಲಾಖೆ ನಿಯಂತ್ರಣ ಸಾಧಿಸುವುದು ಕಷ್ಟ ಎಂಬ ಕಾರಣಕ್ಕೆ ಅವು ಈ ‘ಜಾಣ ನಡೆ’ ಅನುಸರಿಸುತ್ತಿವೆ. ಆದರೆ, ಕಾಯ್ದೆಯ ಸೆಕ್ಷನ್–3 ಹೇಳುವುದೇ ಬೇರೆ. ಇದರ ಪ್ರಕಾರ ಶಾಲೆಗಳನ್ನು ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಎಂದು ವಿಭಜಿಸಲಾಗಿದೆಯೇ ಹೊರತು ರಾಜ್ಯ ಪಠ್ಯ, ಕೇಂದ್ರ ಪಠ್ಯ ಎಂಬ ವಿಭಜನೆ ಇಲ್ಲ. ಆದ್ದರಿಂದ ರಾಜ್ಯ ಸರ್ಕಾರ ಎಲ್ಲ ಪಠ್ಯಕ್ರಮ ಅನುಸರಿಸುವ ಶಾಲೆಗಳ ಮೇಲೂ ನಿಯಂತ್ರಣ ಸಾಧಿಸಬಹುದು. ಇಷ್ಟಾದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಶಿಕ್ಷಣ ತಜ್ಞರ ಆರೋಪ.
ಶೂ, ಸಾಕ್ಸ್ ಹೆಸರಲ್ಲೂ ಸುಲಿಗೆ: ಶಾಲೆಗಳು ಸಮವಸ್ತ್ರ, ಶೂ, ಸಾಕ್ಸ್ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಬಾರದೆಂದು 1983ರ ಶಿಕ್ಷಣ ಕಾಯ್ದೆ ಹೇಳುತ್ತದೆ. ಆದರೆ ಸಂಸ್ಥೆಗಳು ಇದಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ. ಬೋಧನಾ ಶುಲ್ಕ, ಇತರೆ ಶುಲ್ಕ, ವಿಶೇಷ ಅಭಿವೃದ್ಧಿ ಶುಲ್ಕ, ವಾಹನ ಶುಲ್ಕ, ಕೌಶಲಾಭಿವೃದ್ಧಿ ಮತ್ತು ಕ್ರೀಡಾ ಶುಲ್ಕ ಹೀಗೆ ನಾನಾ ರೂಪದಲ್ಲಿ ಪಾಲಕರಿಂದ ಸಾವಿರಾರು ರೂಪಾಯಿ ಕಟ್ಟಿಸಿಕೊಳ್ಳುತ್ತಿವೆ. ಸಮವಸ್ತ್ರ, ಶೂ, ಸಾಕ್ಸ್ ಹೆಸರಿನಲ್ಲಿ ಪ್ರತ್ಯೇಕವಾಗಿ ಸಾವಿರಾರು ರೂಪಾಯಿ ಪಡೆಯುತ್ತಿವೆ. ಈ ಮೊತ್ತ ವರ್ಷದಿಂದ ವರ್ಷಕ್ಕೆ ಏರುತ್ತಲೇ ಇದೆ.
‘ಶಾಲೆಯವರು ವಾಹನ ಶುಲ್ಕದ ರೂಪದಲ್ಲಿ ಮಾಸಿಕ ಸರಾಸರಿ ₹ 2,000 ದಿಂದ ₹ 3,000 ಶುಲ್ಕ ಪಡೆಯುತ್ತಿದ್ದಾರೆ. ಇದರ ಜೊತೆಗೆ ನಾವು ತಿಂಗಳಿಗೆ ₹ 300ರಿಂದ ₹ 500 ಮೊತ್ತವನ್ನು ಹೆಚ್ಚುವರಿಯಾಗಿ ಕೊಡಬೇಕಿದೆ’ ಎಂದು ದಾವಣಗೆರೆಯ ನಿಟುವಳ್ಳಿಯ ಅಂಜಲಿ ಹೇಳುತ್ತಾರೆ.
‘ರಾಜ್ಯದ ಬಹುತೇಕ ಖಾಸಗಿ ಶಾಲೆಗಳಲ್ಲಿ 2024-25ನೇ ಸಾಲಿನಲ್ಲಿ ಪ್ರವೇಶ ಶುಲ್ಕದ ಜೊತೆಗೆ ವಿವಿಧ ಶುಲ್ಕಗಳನ್ನೂ ಹೆಚ್ಚಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆ ಉಲ್ಲಂಘಿಸಿ ಬಟ್ಟೆ, ಶೂ, ಸಾಕ್ಸ್, ನೋಟ್ ಬುಕ್ ಅನ್ನು ಶಾಲೆಗಳಲ್ಲೇ ಮಾರಾಟ ಮಾಡಲಾಗುತ್ತಿದೆ. ಕಾನೂನು ಬಾಹಿರವಾಗಿ ಈ ಕಾರ್ಯದಲ್ಲಿ ತೊಡಗಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ವೆಂಕಟರಮಣ ಒತ್ತಾಯಿಸುತ್ತಾರೆ.
‘ರಾಜ್ಯದ ಬಹುತೇಕ ಅನುದಾನಿತ ಶಾಲೆಗಳು 2024–25ನೇ ಸಾಲಿನ ಶುಲ್ಕವನ್ನು ಶೇ 30ರಿಂದ 40ರಷ್ಟು ಹೆಚ್ಚಿಸಿವೆ. ಒಂದೇ ಬಾರಿಗೆ ಇಷ್ಟು ಪ್ರಮಾಣದಲ್ಲಿ ಶುಲ್ಕ ಏರಿಕೆ ಮಾಡಿರುವುದರಿಂದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಹೊರೆಯಾಗಿದೆ. ಖಾಸಗಿ ಶಾಲೆಗಳಿಗೆ ಮೂಗುದಾರ ಹಾಕುವ ಉದ್ದೇಶದಿಂದ ಶಿಕ್ಷಣ ಇಲಾಖೆ ಹೊರಡಿಸಿದ್ದ ಆದೇಶವನ್ನು ಕಳೆದ ವರ್ಷ ಹೈಕೋರ್ಟ್ ವಜಾಗೊಳಿಸಿತ್ತು. ಅದಾದ ಬಳಿಕ ಕೆಲ ಅನುದಾನರಹಿತ ಶಾಲೆಗಳಿಗೆ ಲಂಗು–ಲಗಾಮೇ ಇಲ್ಲದಂತಾಗಿದೆ’ ಎಂದು ಹಲವು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಬಡ, ಮಧ್ಯಮ ವರ್ಗದವರಿಗೆ ಬಿಸಿ ತುಪ್ಪ: ಶುಲ್ಕ ಹೆಚ್ಚಳವು ಬಡ ಮತ್ತು ಮಧ್ಯಮ ವರ್ಗದವರಿಗೆ ನುಂಗಲಾರದ ಮತ್ತು ಉಗುಳಲಾರದ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಹೆಚ್ಚೆಂದರೆ ತಿಂಗಳಿಗೆ ₹30,000 ದಿಂದ ₹40,000 ವೇತನ ಸಿಗುತ್ತಿದೆ. ಮಕ್ಕಳನ್ನು ಎಲ್‌ಕೆಜಿಗೆ ಸೇರಿಸುವುದಕ್ಕೇ ಕನಿಷ್ಠ ₹ 20,000 ದಿಂದ ಗರಿಷ್ಠ ₹ 1 ಲಕ್ಷದವರೆಗೂ ಶುಲ್ಕ ಪಾವತಿಸಬೇಕಿದೆ. ರೈತರ ವಾರ್ಷಿಕ ಆದಾಯ, ಉದ್ಯೋಗಿಯ ವೇತನ ಹೆಚ್ಚಳಕ್ಕಿಂತಲೂ ಶಿಕ್ಷಣ ಶುಲ್ಕವೇ ಅಧಿಕವಾಗಿದೆ.
‘ನಾನು ಕೆಲಸ ಮಾಡುವ ಕಂಪನಿ ವರ್ಷಕ್ಕೆ ಶೇ 4ರಿಂದ ಶೇ 6ರಷ್ಟು ವೇತನ ಹೆಚ್ಚಿಸಿದರೆ ದೊಡ್ಡ ಮಾತು. ಆದರೆ ಶಾಲೆಯವರು ಶೇ 15ರಿಂದ ಶೇ 30ರವರೆಗೂ ಶುಲ್ಕ ಹೆಚ್ಚಳ ಮಾಡುತ್ತಿದ್ದಾರೆ. ಹೀಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದೇ ಸವಾಲಿನ ಕೆಲಸವಾಗಿದೆ’ ಎಂದು ಚಿತ್ರದುರ್ಗದ ಲಿಂಗರಾಜ್ ಹೇಳುತ್ತಾರೆ.
ನಾನು ಕಲಿತದ್ದು ಸರ್ಕಾರಿ ಶಾಲೆಯಲ್ಲೇ. ನನ್ನ ಮಗನನ್ನೂ ಅದೇ ಶಾಲೆಯಲ್ಲಿ ಓದಿಸಬೇಕೆಂದಿದ್ದೆ. ನಾವು ಕಲಿಯುವಾಗ 400ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲೀಗ 80 ಮಕ್ಕಳಿದ್ದಾರೆ. ಒಂದರಿಂದ ಏಳನೇ ತರಗತಿಗೆ ಇಬ್ಬರೇ ಶಿಕ್ಷಕಿಯರಿದ್ದಾರೆ. ಇಂತಹ ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣ ಸಿಗಲು ಸಾಧ್ಯ. ಹಾಗಾಗಿ ಖಾಸಗಿ ಶಾಲೆಗೆ ಸೇರಿಸಿರುವೆ.– ದೀಪಕ್ ಬಜಾಲ್, ಪಕ್ಕಲಡ್ಕ, ಮಂಗಳೂರು
‘ಬಹುತೇಕ ಖಾಸಗಿ ಶಾಲೆಗಳಲ್ಲಿ ಶೇ 85ರಷ್ಟು ಶುಲ್ಕವನ್ನು ಒಂದೇ ಬಾರಿಗೆ ಭರಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಕೆಲವೆಡೆ, 3–4 ಕಂತುಗಳಲ್ಲಿ ಕಟ್ಟಿಸಿಕೊಳ್ಳುವ ಪದ್ಧತಿ ಇದ್ದು, ಅದಕ್ಕೆ ಬಡ್ಡಿಯನ್ನೂ ವಿಧಿಸುತ್ತಾರೆ. ಮೊದಲ ಬಾರಿಗೆ ಶಾಲೆಗೆ ದಾಖಲು ಮಾಡುವಾಗ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ಸರಾಸರಿ 30,000 ದಿಂದ 60,000ದವರೆಗೂ ಹಣ ಪಡೆಯುತ್ತಿವೆ’ ಎಂದು ಮೈಸೂರಿನ ಹಲವು ಪೋಷಕರು ದೂರಿದ್ದಾರೆ.
ಚಿತ್ರ: ಗುರು ನಾವಳ್ಳಿ
ಹೆಸರಿಗಷ್ಟೇ ಶಿಕ್ಷಣ ನಿಯಂತ್ರಣ ಪ್ರಾಧಿಕಾರ: ಬಲವಂತವಾಗಿ ಅಧಿಕ ಶುಲ್ಕ ವಸೂಲಿ ಮಾಡುವ ಖಾಸಗಿ ಶಾಲೆಗಳ ವಿರುದ್ಧ ಪಾಲಕರು ದೂರು ನೀಡಲೆಂದೇ ರಚಿಸಲಾಗಿರುವ ‘ಜಿಲ್ಲಾ ಮಟ್ಟದ ಶಿಕ್ಷಣ ನಿಯಂತ್ರಣ ಪ್ರಾಧಿಕಾರ’ ಹೆಸರಿಗಷ್ಟೇ ಎನ್ನುವಂತಾಗಿದೆ. ಅಧಿಕಾರಿಗಳು ‘ಶಾಸ್ತ್ರ’ಕ್ಕೆ ಎಂಬಂತೆ ಪ್ರಾಧಿಕಾರ ರಚಿಸಿ ಕೈತೊಳೆದುಕೊಂಡಿದ್ದಾರೆ. ಬಹುತೇಕ ಪಾಲಕರು ಯಾವ ಹೋರಾಟದ ಗೊಡವೆಯೂ ಬೇಡವೆಂದು ದೂರು ಕೊಡುವುದಕ್ಕೂ ಮುಂದಾಗುತ್ತಿಲ್ಲ.
ಮೈಸೂರು, ಮಂಡ್ಯ, ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲಿ ಈಚಿನ ವರ್ಷಗಳಲ್ಲಿ ತಲಾ ಒಂದು ದೂರಷ್ಟೆ ದಾಖಲಾಗಿದೆ. ಚಾಮರಾಜನಗರ, ಹಾಸನ, ಕೊಡಗು, ದಕ್ಷಿಣ ಕನ್ನಡ, ತುಮಕೂರು, ಕೊಪ್ಪಳ, ದಾವಣಗೆರೆ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳಲ್ಲಿ ಪ್ರಾಧಿಕಾರಕ್ಕೆ ದೂರುಗಳೇ ಬಂದಿಲ್ಲ. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯ ವಿರುದ್ಧವೂ ಗುರುತರವಾದ ಕ್ರಮ ಕೈಗೊಂಡ ಉದಾಹರಣೆಗಳಿಲ್ಲ. ‘ಸಾರ್ವಜನಿಕರು ದೂರು ಸಲ್ಲಿಸಿದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು’ ಎನ್ನುವ ಸಿದ್ಧ ಉತ್ತರ ಜಿಲ್ಲಾಧಿಕಾರಿಗಳಿಂದ ಬರುತ್ತದೆ. ಪಾಲಕರು ದೂರು ಕೊಡುವಂತೆ ಜಾಗೃತಿ ಮೂಡಿಸುವ ಕೆಲಸವನ್ನು ಶಾಲಾ ಶಿಕ್ಷಣ ಇಲಾಖೆಯಾಗಲಿ, ಜಿಲ್ಲಾಡಳಿತಗಳಾಗಲಿ ಮಾಡುತ್ತಿಲ್ಲ.
‘ಕಲಬುರಗಿಯಲ್ಲಿ ಕೆಲವು ಪಾಲಕರು ದೂರು ನೀಡಿದ್ದರು. ಶಾಲಾ ಆಡಳಿತ ಮಂಡಳಿಯೊಂದು ಅವರು ಭರಿಸಬೇಕಿದ್ದ ಶುಲ್ಕದ ಮೊತ್ತದಲ್ಲಿ ವಿನಾಯಿತಿ ನೀಡುತ್ತಿದ್ದಂತೆಯೇ ದೂರು ಹಿಂದೆ ಪಡೆದು ವಿಚಾರಣೆ ನಡೆಸದಂತೆಯೂ ಕೋರಿದ್ದರು’ ಎಂದು ಡಿಡಿಪಿಐ ಸೂರ್ಯಕಾಂತ ಮದಾನೆ ಹೇಳಿದರು.
ಖಾಸಗಿ ಶಾಲೆಗಳ ಬಗ್ಗೆ ಏಕಿಷ್ಟು ವ್ಯಾಮೋಹ: ‘ಶುಲ್ಕ ಹೆಚ್ಚಳದ ‘ಬರೆ’ ಬೀಳುತ್ತಿದ್ದರೂ ಬಹುಪಾಲು ಪಾಲಕರು ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ತೊರೆದಿಲ್ಲ. ಸರ್ಕಾರ ಬಿಸಿಯೂಟ, ಪಠ್ಯಪುಸ್ತಕ, ಸೈಕಲ್, ಸಮವಸ್ತ್ರ, ಲ್ಯಾಪ್‍ಟಾಪ್ ಹೀಗೆ ವಿವಿಧ ಸೌಕರ್ಯಗಳನ್ನು ಕಲ್ಪಿಸುತ್ತಿದೆ. ತರಬೇತಿ ಪಡೆದ ನುರಿತ ಶಿಕ್ಷಕರನ್ನೂ ನಿಯೋಜಿಸಿದೆ. ಇಷ್ಟಾದರೂ ಪಾಲಕರಲ್ಲಿ ಸರ್ಕಾರಿ ಶಾಲೆಗಳ ಬಗೆಗಿನ ತಾತ್ಸಾರ ಮನೋಭಾವ ದೂರವಾಗಿಲ್ಲ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂಬುದನ್ನು ಅರಿಯದೇ ಮಕ್ಕಳ ಶಿಕ್ಷಣಕ್ಕೆ ದೂರದ ಊರುಗಳಲ್ಲಿರುವ ಖಾಸಗಿ ಶಾಲೆಗಳನ್ನೇ ಆರಿಸಿಕೊಳ್ಳುತ್ತಿದ್ದಾರೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಬೇಸರ ವ್ಯಕ್ತಪಡಿಸುತ್ತಾರೆ.
‘ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಯಲ್ಲಿ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಎಲ್ಲಾ ಆಗುಹೋಗುಗಳ ಕುರಿತೂ ಪಾಲಕರಿಗೆ ತಿಳಿಸಿ, ತಿದ್ದುತ್ತಾರೆ. ‘ಪ್ರತಿಷ್ಠಿತ’ ಶಾಲೆ, ಕಾಲೇಜುಗಳಲ್ಲಿ ಕಲಿತರೆ, ಮಕ್ಕಳಿಗೆ ‘ಪ್ರತಿಷ್ಠಿತ’ ಕಂಪನಿಗಳಲ್ಲಿ ಸುಲಭವಾಗಿ ಉದ್ಯೋಗವೂ ಸಿಗುತ್ತದೆ’ ಎಂದು ಹುಬ್ಬಳ್ಳಿಯ ಮಯೂರ ನಗರದ ಆನಂದ ಶಿಂಧೆ ಹೇಳುತ್ತಾರೆ.
ಅಕ್ಕಪಕ್ಕದ ಮನೆಯವರು ತಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ದಾಖಲಿಸಿದ್ದಾರೆ. ನಾವು ಮಗನನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಅವರು ಕೀಳಾಗಿ ನೋಡುತ್ತಾರೆ. ಈ ಕಾರಣಕ್ಕೆ ಇದ್ದಿದ್ದರಲ್ಲೇ ಕಡಿಮೆ ಶುಲ್ಕ ಇರುವ ಶಾಲೆಗೆ ಸೇರಿಸಿದ್ದೇವೆ.– ಪ್ರಕಾಶ್ ಕುಮಾರ್, ಶಾಮನೂರು ನಿವಾಸಿ, ದಾವಣಗೆರೆ
‘ಮಗನನ್ನು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲೇ ಕಲಿಸಬೇಕೆಂಬ ಆಸೆ ಇತ್ತು. ಆದರೆ, ಅಲ್ಲಿ ತರಗತಿಗಳನ್ನು ವ್ಯವಸ್ಥಿತವಾಗಿ ನಡೆಸುವುದಿಲ್ಲ. ಈ ಹಿಂದೆ ಶಿಸ್ತು ಇತ್ತು. ಈಗ ಅದೂ ಉಳಿದಿಲ್ಲ. ಈ ಕಾರಣಕ್ಕೆ ಮಗನನ್ನು ಖಾಸಗಿ ಶಾಲೆಗೆ ದಾಖಲಿಸಿದ್ದೇನೆ’ ಎಂದು ಮಂಗಳೂರಿನ ಕೃಷ್ಣಾಪುರದ ಶ್ರೀನಾಥ್ ಕುಲಾಲ್ ತಮ್ಮ ನಿರ್ಧಾರ ಸಮರ್ಥಿಸಿಕೊಳ್ಳುತ್ತಾರೆ.
ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಕಲಿಕಾ ವಾತಾವರಣ ಇಲ್ಲ ಎಂಬುದು ಬಹುತೇಕ ಪಾಲಕರ ದೂರು. ಹೀಗಾಗಿ, ಮಕ್ಕಳನ್ನು ಸಿಬಿಎಸ್‌ಇ ಪಠ್ಯಕ್ರಮ ಹೊಂದಿರುವ ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದಾಗಿ ಅವರು ಹೇಳುತ್ತಾರೆ. ಇದರ ನಡುವೆ ಶುಲ್ಕ ಹೆಚ್ಚಳದಿಂದ ಕಂಗೆಟ್ಟ ಅನೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ದಾಖಲಿಸಿದ ಉದಾಹರಣೆಗಳೂ ಇವೆ.
‘ನನ್ನ ಮಗ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ. ಶುಲ್ಕ ಕಟ್ಟುವುದು ತಡವಾದರೆ, ಆತನನ್ನು ಶಾಲೆಯಿಂದ ಹೊರಗಡೆ ನಿಲ್ಲಿಸುತ್ತಿದ್ದರು. ಆಗಾಗ ಮನೆಗೂ ಕಳುಹಿಸುತ್ತಿದ್ದರು. ಪ್ರತಿ ವರ್ಷ ಅವೈಜ್ಞಾನಿಕವಾಗಿ ಶುಲ್ಕ ಹೆಚ್ಚಳ ಮಾಡುತ್ತಿದ್ದರು. ಅದರಿಂದ ಬೇಸತ್ತು ಅವನನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇನೆ’ ಎಂದು ಮಂಡ್ಯ ಜಿಲ್ಲೆಯ ಸಾತನೂರು ಗ್ರಾಮದ ಶಶಿಕುಮಾರ್ ತಿಳಿಸಿದರು.
ಹೈಕೋರ್ಟ್‌ನಲ್ಲಿ ಸರ್ಕಾರಕ್ಕೆ ಹಿನ್ನಡೆ
ಈ ಹಿಂದೆ ಶಿಕ್ಷಣ ಇಲಾಖೆಯು ಕರ್ನಾಟಕ ಶಿಕ್ಷಣ ಕಾಯ್ದೆ–1983ರ ಅನ್ವಯ ಆದೇಶ ಹೊರಡಿಸಿ, ಶುಲ್ಕ ನಿಗದಿ ಸೇರಿದಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಕೆಲ ಚಟುವಟಿಕೆಗಳನ್ನು ನಿಯಂತ್ರಿಸಿತ್ತು. ಇದರಿಂದ ಖಾಸಗಿ ಶಾಲೆಗಳು ಪ್ರತಿ ವರ್ಷ ಶುಲ್ಕ ಹೆಚ್ಚಳ ಮಾಡುವುದಕ್ಕೆ ಕಡಿವಾಣ ಬಿದ್ದಿತ್ತು. ಇದರ ವಿರುದ್ಧ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ಕುಸ್ಮಾ) ಎರಡೂವರೆ ದಶಕದ ಹಿಂದೆಯೇ ಹೈಕೋರ್ಟ್ ಮೊರೆ ಹೋಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ‘ಸರ್ಕಾರದ ಅನುದಾನ ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವಂತಿಲ್ಲ’ ಎಂದು ತೀರ್ಪು ನೀಡಿತ್ತು. ಇದರ ವಿರುದ್ಧ ಶಿಕ್ಷಣ ಇಲಾಖೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂಕೋರ್ಟ್ ಸೂಚನೆಯಂತೆ ಮತ್ತೆ ಹೈಕೋರ್ಟ್‌ನಲ್ಲೇ ಮೇಲ್ಮನವಿಯ ವಿಚಾರಣೆ ನಡೆದಿತ್ತು. 2017ರಲ್ಲಿ ಮರು ಆದೇಶ ಹೊರಡಿಸಿದ್ದ ಇಲಾಖೆಯು ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಮತ್ತೆ ಹಿಡಿತ ಸಾಧಿಸಿತ್ತು. ಆದರೆ ಹೈಕೋರ್ಟ್ ಈ ಎರಡು ಆದೇಶಗಳನ್ನೂ ವಜಾಗೊಳಿಸಿತ್ತು.
‘ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುವುದಿಲ್ಲ. ಮೂಲ ಸೌಕರ್ಯ, ಶಿಕ್ಷಕರಿಗೆ ವೇತನ ಸೇರಿದಂತೆ ಎಲ್ಲ ವೆಚ್ಚವನ್ನೂ ಸಂಸ್ಥೆಗಳೇ ಭರಿಸಬೇಕಿದೆ. ಹಾಗಾಗಿ, ಶುಲ್ಕ ಹೆಚ್ಚಳ ಅನಿವಾರ್ಯ. ಎಷ್ಟು ಪ್ರಮಾಣದಲ್ಲಿ ಹೆಚ್ಚಳ ಮಾಡಬೇಕು ಎನ್ನುವ ಕುರಿತು ಆಯಾ ಸಂಸ್ಥೆಗಳೇ ನಿರ್ಧಾರ ತೆಗೆದುಕೊಳ್ಳುತ್ತವೆ’ ಎಂದು ಕುಸ್ಮಾ ಕಾರ್ಯದರ್ಶಿ ಎ.ಮರಿಯಪ್ಪ ಹೇಳಿದ್ದರು.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ
ಪೂರಕ ಮಾಹಿತಿ: ಚಂದ್ರಹಾಸ ಹಿರೇಮಳಲಿ, ಎಂ.ಮಹೇಶ್, ಪ್ರವೀಣ್ ಕುಮಾರ್ ಪಿ.ವಿ, ಕೆ.ಜೆ.ಮರಿಯಪ್ಪ, ನಾಗರಾಜ ಚಿನಗುಂಡಿ, ಮಲ್ಲಿಕಾರ್ಜುನ ನಾಲವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.