ಸಾಂದರ್ಭಿಕ ಚಿತ್ರ
ಎಐ ಚಿತ್ರ: ಕಣಕಾಲಮಠ
ಬೆಂಗಳೂರು: ‘ಈಜು ಕ್ರೀಡೆ ಬಹಳ ದುಬಾರಿ. ಉನ್ನತ ಸಾಧನೆ ಮಾಡುತ್ತ ಹೋದಂತೆ ವೆಚ್ಚವೂ ಜಾಸ್ತಿ. ಆದರೆ ಕರ್ನಾಟಕ ಸರ್ಕಾರವು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಗೆದ್ದು ಬಂದಾಗಲೂ ದೊಡ್ಡ ಮೊತ್ತ ಕೊಡುವುದಿಲ್ಲ. ತರಬೇತಿಗಾಗಿ ವಿಶೇಷ ಅನುದಾನಗಳೂ ಕಡಿಮೆ. ನಾನು ರೈಲ್ವೆ ಇಲಾಖೆಯಲ್ಲಿದ್ದೇನೆ. ವೇತನ ಬರುವುದರಿಂದ ಖರ್ಚುಗಳನ್ನು ನಿಭಾಯಿಸುತ್ತೇನೆ. ನೌಕರಿ ಇಲ್ಲದ ಈಜುಪಟುಗಳ ಕಥೆ ಏನು? ಅದಕ್ಕಾಗಿಯೇ ನಾನು ಕೇರಳ ರಾಜ್ಯವನ್ನು ರಾಷ್ಟ್ರೀಯ ಕೂಟದಲ್ಲಿ ಪ್ರತಿನಿಧಿಸುತ್ತಿದ್ದೇನೆ. ಪದಕ ಜಯಿಸಿದಾಗ ಕೇರಳದಲ್ಲಿ ಹೆಚ್ಚು ಮೊತ್ತ ನೀಡುತ್ತಾರೆ' ಎನ್ನುವುದು ರಾಷ್ಟ್ರೀಯ ಈಜು ಚಾಂಪಿಯನ್, ಕರ್ನಾಟಕದ ಹರ್ಷಿಕಾ ಜಯರಾಮ್ ಅವರ ನುಡಿ.
ಭುವನೇಶ್ವರದಲ್ಲಿ ನಡೆದ 78ನೇ ರಾಷ್ಟ್ರೀಯ ಸೀನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಹಿಳೆಯರ ವಿಭಾಗದಲ್ಲಿ ಬೆಳ್ಳಿ ಗೆದ್ದ ಶ್ರೀನಿಧಿ ನಟೇಶನ್, ಪುರುಷರ 50 ಮೀಟರ್ಸ್ ಬಟರ್
ಫ್ಳೈನಲ್ಲಿ ಹೊಸ ದಾಖಲೆ ಬರೆದ ಬೆನೆಡಿಕ್ಟ್ ರೋಹಿತ್, 4X100 ಮೀ ಮೆಡ್ಲೆಯಲ್ಲಿ ನೂತನ ದಾಖಲೆ ಬರೆದ ಜೋಶುವಾ ಥಾಮಸ್ ಅವರು ತಮಿಳುನಾಡು ರಾಜ್ಯವನ್ನು ಪ್ರತಿನಿಧಿಸಿದ್ದರು. ಆದರೆ ಅವರೆಲ್ಲರಿಗೂ ಈಜು ಕೌಶಲಗಳ ಕಲಿಕೆ ಮಾತ್ರ ಬೆಂಗಳೂರಿನಲ್ಲಿ ಆಗಿತ್ತು. ಮೆಡ್ಲೆಯಲ್ಲಿ ಥಾಮಸ್ ಅವರಿದ್ದ ತಂಡವು ಹಿಂದಿಕ್ಕಿದ್ದು ಕರ್ನಾಟಕ ತಂಡವನ್ನೇ. ಇವರೆಲ್ಲರೂ ಹೋದ ವರ್ಷ ನಡೆದಿದ್ದ ನ್ಯಾಷನಲ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದಿದ್ದರು. ಇವರಿಗೆ ಸುಮಾರು ₹ 12 ರಿಂದ ₹ 15 ಲಕ್ಷದವರೆಗೆ ಪುರಸ್ಕಾರವನ್ನು ಅಲ್ಲಿಯ ಸರ್ಕಾರ ನೀಡಿತ್ತು.
ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಏಕಲವ್ಯ ಇತ್ಯಾದಿ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರದಿಂದ ನೀಡಲಾಗುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಈ ಪ್ರಶಸ್ತಿಗಳನ್ನೇ ಕೊಟ್ಟಿಲ್ಲ. ಈ ಅವಧಿಯಲ್ಲಿ ರಾಜ್ಯದ ಹಲವು ಆಟಗಾರರು ಬೇರೆ ಬೇರೆ ಕೂಟಗಳಲ್ಲಿ ಸಾಧನೆ ಮಾಡಿದ್ದಾರೆ. ರಾಜ್ಯದ ಅತ್ಯುನ್ನತ ಕ್ರೀಡಾ ಗೌರವಗಳು ತಮಗೆ ಲಭಿಸಿಲ್ಲವೆಂಬ ಬೇಸರ ಅವರಲ್ಲಿ ಮನೆ ಮಾಡಿದೆ.
ಈಜು ಕ್ರೀಡೆಯ ‘ಕಾಶಿ’ ಎಂದೇ ಖ್ಯಾತವಾಗಿರುವ ಬೆಂಗಳೂರಿನ ಈಜುಕೊಳಗಳಲ್ಲಿ ಈಗ ಆತಂಕದ ಅಲೆಗಳು ಏಳುತ್ತಿವೆ. ಇಲ್ಲಿಯ ಪ್ರತಿಭೆಗಳು ಹೊರರಾಜ್ಯಕ್ಕೆ ವಲಸೆ ಹೋಗುತ್ತಿರುವುದು ಒಂದು ಸಂಕಟ ವಾದರೆ, ಇಲ್ಲಿಯ ಉತ್ಕೃಷ್ಟ ತರಬೇತಿ ಪದ್ಧತಿಯ ಒಳ ಹೊರಗನ್ನು ಅರಿತ ಈಜುಪಟುಗಳು ಬೇರೆ ರಾಜ್ಯಗಳನ್ನು ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರತಿನಿಧಿಸುತ್ತಿರುವುದು, ಇಲ್ಲಿಯ ತರಬೇತುದಾರರ ಮುಖದಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸಿದೆ.
ಹೀಗೆ ಪಟ್ಟಿ ಮಾಡುತ್ತ ಹೋದರೆ; ರಾಜ್ಯದ ಮೂಲೆಮೂಲೆಗಳಿಂದಲೂ ಕ್ರೀಡಾಕ್ಷೇತ್ರದ ಹಿನ್ನಡೆಗೆ ಉದಾಹರಣೆಗಳು ಸಾಲುಗಟ್ಟುತ್ತವೆ. ಇವಕ್ಕೆಲ್ಲ ಕಾರಣ ಹುಡುಕುತ್ತ ಸಾಗಿದರೆ ಸರ್ಕಾರದ ಕೆಲವು ಅಧಿಕಾರಿಗಳು ‘ದುಡ್ಡಿನ ಕೊರತೆ. ಅನುದಾನ ಕಡಿಮೆ’ ಎಂದು ಪಿಸುಗುಟ್ಟುತ್ತಾರೆ. ಆದರೆ ಇದರಿಂದಾಗಿ ಕರ್ನಾಟಕವು ಮೊದಲಿನಿಂದಲೂ ಪಾರಮ್ಯ ಸಾಧಿಸಿ ರುವ ಕೆಲವು ಕ್ರೀಡೆಗಳ ಮೇಲಿನ ಹಿಡಿತ ಮೆಲ್ಲಗೆ ಸಡಿಲವಾಗುತ್ತಿದೆ.
ಸೈಕ್ಲಿಸ್ಟ್‌ಗಳ ಕಣಜವೆಂದೇ ಪ್ರಸಿದ್ಧವಾದ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಬಹುವರ್ಷಗಳ ಕನಸು ಅತ್ಯಾಧುನಿಕ ವೆಲೋಡ್ರಮ್ ನಿರ್ಮಾಣ ಕಾರ್ಯವು ಸರಿಸುಮಾರು ಒಂದೂವರೆ ದಶಕದಿಂದ ಕುಂಟುತ್ತಲೇ ಸಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ ವಿವಿಧ ಪಕ್ಷಗಳು ಆಡಳಿತ ನಡೆಸಿವೆ. ಆದರೆ ವಿಜಯಪುರದಲ್ಲಿ ನಿರ್ಮಾಣವಾಗುತ್ತಿರುವ ವೆಲೊಡ್ರಮ್ ಕಾಮಗಾರಿ ಮುಗಿದಿಲ್ಲ. ಹೀಗಾಗಿ ಇಲ್ಲಿ ಸೈಕ್ಲಿಸ್ಟ್‌ಗಳು ರಸ್ತೆಗಳನ್ನೇ ಅವಲಂಬಿಸಬೇಕಾಗಿದೆ. ಇದರಿಂದಾಗಿ ರಸ್ತೆ ಅಪಘಾತಗಳಲ್ಲಿ ಸೈಕ್ಲಿಸ್ಟ್‌ಗಳು ಗಂಭೀರ ಗಾಯಕ್ಕೊಳಗಾದ ನಿದರ್ಶನಗಳೂ ಇವೆ.
ಟ್ರ್ಯಾಕ್ ಸೈಕ್ಲಿಂಗ್ ವಿಭಾಗದಲ್ಲಿಯೂ ಸೂಕ್ತ ತರಬೇತಿ ಪಡೆಯಲು ವೆಲೋಡ್ರಮ್ ಅಗತ್ಯವಿದೆ. ಈ ಸೌಲಭ್ಯದ ಕೊರತೆಯಿಂದಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಇಲ್ಲಿಯವರಿಗೆ ನಿರೀಕ್ಷಿತ ಫಲಿತಾಂಶ ಸಾಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಗಾಯದ ಸಮಸ್ಯೆಗಳು ಈ ಕ್ರೀಡೆಗಳಲ್ಲಿ ಹೆಚ್ಚು. ಅದಕ್ಕಾಗಿ ಸೈಕ್ಲಿಂಗ್ ಗಾಯ ನಿರ್ವಹಣೆ ಮತ್ತು ಕ್ರೀಡಾ ವಿಜ್ಞಾನ ಕೇಂದ್ರದ ಅಗತ್ಯವೂ ಈ ಭಾಗಕ್ಕೆ ಇದೆ ಎಂಬ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ.
‘ನಮ್ಮ ವಿಜಯಪುರದ ಸೈಕ್ಲಿಸ್ಟ್‌ಗಳು ರಸ್ತೆ ರೇಸ್‌ನಲ್ಲಿ ಕಿಂಗ್, ಆದರೆ ಟ್ರ್ಯಾಕ್‌ನಲ್ಲಿ ಜೀರೊ. ಏಕೆಂದರೆ ಇಲ್ಲಿ ಟ್ರ್ಯಾಕ್‌ಗೆ ಅಗತ್ಯ ಇರುವ ವೆಲೋಡ್ರಮ್ ಇಲ್ಲ. ಸುಮಾರು 15–16 ವರ್ಷಗಳಿಂದ ಅಂತರರಾಷ್ಟ್ರೀಯ ದರ್ಜೆಯ ವೆಲೋಡ್ರಮ್ ನಿರ್ಮಾಣ ನಡೆಯುತ್ತಿದೆ. ಆದರೆ ಒಂದಿಲ್ಲೊಂದು ದೋಷಗಳಿಂದಾಗಿ ಅದು ಪೂರ್ಣವಾಗುತ್ತಿಲ್ಲ. ಇದರಿಂದಾಗಿ ನಮ್ಮ ಭಾಗದ ಮಕ್ಕಳಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಆದರೂ ನಮ್ಮ ಕೆಲವು ಸೈಕ್ಲಿಸ್ಟ್‌ಗಳು ತಮ್ಮ ಸ್ವಪ್ರಯತ್ನದಿಂದ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಪದಕ ಗೆದ್ದ ಉದಾಹರಣೆಗಳಿವೆ. ಇಲ್ಲಿಯ ಪ್ರತಿಭಾನ್ವಿತರು ಬೇರೆ ರಾಜ್ಯಗಳಿಗೆ ವಲಸೆ ಹೋಗುವುದನ್ನು ತಕ್ಕಮಟ್ಟಿಗೆ ನಾವು ತಡೆದಿದ್ದೇವೆ. ಆದರೆ ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯ ಮತ್ತು ಉದ್ಯೋಗ ಮೀಸಲಾತಿಗಳು ಹೆಚ್ಚಬೇಕು. ಏಕೆಂದರೆ, ಬಹುತೇಕ ಬಡಕುಟುಂಬಗಳ ಮಕ್ಕಳೇ ಹೆಚ್ಚಾಗಿ ಸೈಕ್ಲಿಂಗ್‌ಗೆ ಬರುತ್ತಾರೆ. ಆದ್ದರಿಂದ ಪ್ರೋತ್ಸಾಹ ಯೋಜನೆಗಳು ಜಾಸ್ತಿಯಾಗಬೇಕು. ವೆಲೋಡ್ರಮ್ ಸೌಲಭ್ಯಗಳು ಬೇಕು’ ಎಂದು ಕರ್ನಾಟಕ ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ ಹೇಳುತ್ತಾರೆ.
ವಿಜಯಪುರದಲ್ಲಿ ನಡೆದಿದ್ದ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಗುರಿಯತ್ತ ಸೈಕಲ್ ಸವಾರಿ ಮಾಡಿದ ಬೆಂಗಳೂರಿನ ಸೈಕ್ಲಿಸ್ಟ್ ನವೀನ್ ಜಾನ್
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಒಂದು ಚಿನ್ನ ಗೆದ್ದರೆ ₹ 5 ಲಕ್ಷ, ಬೆಳ್ಳಿ ಪದಕಕ್ಕೆ ₹ 3 ಲಕ್ಷ ಮತ್ತು ಕಂಚಿನ ಪದಕಕ್ಕೆ ₹ 2 ಲಕ್ಷ ನಗದು ಬಹುಮಾನ ನೀಡುವ ಯೋಜನೆ ಕರ್ನಾಟಕ ಸರ್ಕಾರದಲ್ಲಿದೆ. ಆದರೆ ಒಬ್ಬ ಕ್ರೀಡಾಪಟು ಎರಡು ಅಥವಾ ಮೂರು ಚಿನ್ನ ಗೆದ್ದರೂ ಸಿಗುವುದು ಗರಿಷ್ಠ ಐದು ಲಕ್ಷ ರೂಪಾಯಿ ಮಾತ್ರ. ಅಲ್ಲದೇ ಒಂದೊಮ್ಮೆ ಕ್ರೀಡಾಪಟು ಎರಡು ಬೆಳ್ಳಿ, ಒಂದು ಕಂಚು ಗೆದ್ದರೆ ₹ 8 ಲಕ್ಷ ಕೊಡುವುದಿಲ್ಲ. ಆಗಲೂ ಗರಿಷ್ಠ ₹5 ಲಕ್ಷ ಮಾತ್ರ ಕೊಡಲಾಗುತ್ತದೆ. ಈಜು ಹಾಗೂ ಅಥ್ಲೆಟಿಕ್ಸ್ ವಿಭಾಗಗಳಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲುವ ಅವಕಾಶಗಳು ಹೆಚ್ಚು. ಆದರೂ ₹ 5 ಲಕ್ಷ ಗರಿಷ್ಠ ಬಹುಮಾನ ಕೊಡುವುದಕ್ಕಷ್ಟೇ ಸರ್ಕಾರ ನಿಯಮ ಮಾಡಿದೆ. ಆದರೆ, ಬೇರೆ ರಾಜ್ಯಗಳಲ್ಲಿ ಈ ರೀತಿಯಿಲ್ಲ. ಪ್ರತಿ ಪದಕಕ್ಕೂ ಅದರದ್ದೇ ಆದ ಮೌಲ್ಯ ನೀಡಲಾಗುತ್ತದೆ. ಒಂದೊಮ್ಮೆ ಕ್ರೀಡಾಪಟು ನಾಲ್ಕು ಚಿನ್ನ ಗೆದ್ದರೆ ₹ 20 ಲಕ್ಷ ಪಡೆದ ನಿದರ್ಶನಗಳು ಇವೆ.
‘ಒಲಿಂಪಿಕ್ಸ್ ಕ್ರೀಡೆಗಳಿಗೆ ನಗದು ಬಹುಮಾನ ನೀಡಲಾಗುತ್ತದೆ. ಕೆಲವು ಕ್ರೀಡೆಗಳಲ್ಲಿ ಮೂರು–ನಾಲ್ಕು ಪದಕ ಗೆಲ್ಲುವ ಅವಕಾಶ ಇದೆ. ಇನ್ನೂ ಕೆಲವು ಕ್ರೀಡೆಗಳಲ್ಲಿ ಅಥವಾ ತಂಡ ವಿಭಾಗಗಳಲ್ಲಿ ಒಂದೊಂದೇ ಪದಕ ಜಯಿಸಲು ಮಾತ್ರ ಸಾಧ್ಯ. ಆದ್ದರಿಂದ ಅವರಿಗೆ ಒಂದು ಪದಕದ ಮೌಲ್ಯ ನೀಡಬೇಕು. ಕೆಲವೇ ಕ್ರೀಡೆಗಳಲ್ಲಿ ಹೆಚ್ಚು ಪದಕ ಗೆದ್ದವರಿಗೆ ದೊಡ್ಡ ಮೊತ್ತ ಕೊಟ್ಟರೆ ಅದು ಸರಿಯಾಗುವುದಿಲ್ಲ. ಎಲ್ಲರಿಗೂ ಸಮಾನವಾಗಿ ಪರಿಗಣಿಸಲು ಒಂದು ಗರಿಷ್ಠ ಮಿತಿಯನ್ನು (₹ 5 ಲಕ್ಷ) ನಿಗದಿ ಮಾಡಲಾಗಿದೆ’ ಎಂದು ಹೆಸರು ಹೇಳಲು ಬಯಸದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ವಿವರಿಸುತ್ತಾರೆ. ಆದರೆ ಸರ್ಕಾರದ ಈ ನಿಯಮದ ಬಗ್ಗೆ ಕ್ರೀಡಾಪಟುಗಳು, ಕೋಚ್‌ಗಳು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಾರೆ.
‘ಈಜು, ಅಥ್ಲೆಟಿಕ್ಸ್ ಮತ್ತಿತರ ಕ್ರೀಡೆಗಳಲ್ಲಿ ಉನ್ನತ ಹಂತಕ್ಕೆ ಹೋದಂತೆ ವೆಚ್ಚಗಳೂ ಹೆಚ್ಚು. ಆದರೆ ಕರ್ನಾಟಕ ದಲ್ಲಿ ಸಾಧನೆಗೆ ತಕ್ಕಂತೆ ಪ್ರೋತ್ಸಾಹ ಯೋಜನೆಗಳು, ಪುರಸ್ಕಾರಗಳು ಮತ್ತು ಸೌಲಭ್ಯಗಳು ಸಿಗುತ್ತಿಲ್ಲ. ಅದೇ ಬೇರೆ ರಾಜ್ಯಗಳಲ್ಲಿ ಕ್ರೀಡಾಪ್ರೋತ್ಸಾಹಕ್ಕೆ ಯಥೇಚ್ಛ ಹಣ ವಿನಿಯೋಗಿಸಲಾಗುತ್ತಿದೆ. ನಮ್ಮ ರಾಜ್ಯದ ಈಜುಪಟುಗಳು ರಾಷ್ಟ್ರೀಯ ಕೂಟ, ಖೇಲೊ ಇಂಡಿಯಾ, ಏಷ್ಯನ್ ಗೇಮ್ಸ್, ಏಷ್ಯನ್ ವಯೋಮಿತಿ ಸ್ಪರ್ಧೆಗಳು ಹಾಗೂ ನ್ಯಾಷನಲ್ ಗೇಮ್ಸ್‌ಗಳಲ್ಲಿ ಪದಕಗಳನ್ನು ಜಯಿಸಿ ಬಂದಿದ್ದಾರೆ. ಆದರೆ, ಒಬ್ಬ ಕ್ರೀಡಾಪಟು ಎಷ್ಟೇ ಪದಕ ಗೆದ್ದರೂ ಕೇವಲ ₹ 5 ಲಕ್ಷಕ್ಕೆ ಗರಿಷ್ಠ ಮಿತಿ ನಿಗದಿಪಡಿಸಿರುವುದು ಸಮಂಜಸವಲ್ಲ. ಆ ಕ್ರೀಡಾಪಟುವು ಪ್ರತಿಯೊಂದು ವಿಭಾಗದಲ್ಲಿ ಸ್ಪರ್ಧಿಸಲು ಪ್ರತ್ಯೇಕ ಸಿದ್ಧತೆ ಮಾಡಿಕೊಳ್ಳಬೇಕು. ಅದಕ್ಕಾಗಿ ತರಬೇತಿ, ಆಹಾರ ರೂಢಿಸಿಕೊಳ್ಳಲು ಪ್ರತ್ಯೇಕ ಬಜೆಟ್ ಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದು ವಿಭಾಗದ ಪದಕಕ್ಕೂ ಪ್ರತ್ಯೇಕ ಬಹುಮಾನ ಮೊತ್ತವನ್ನೇ ನೀಡಬೇಕು. ತಮಿಳುನಾಡು ಸರ್ಕಾರವು ಸ್ಪರ್ಧೆಗಳು ಮುಗಿದ 15 ದಿನಗಳೊಳಗೆ ಈಜುಪಟುಗಳಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿದೆ. ನಮ್ಮಲ್ಲಿ ಇರುವುದನ್ನು ಕೊಡಲೂ ವಿಳಂಬ ಮಾಡಲಾಗುತ್ತಿದೆ’ ಎಂದು ಕರ್ನಾಟಕ ಈಜು ಸಂಸ್ಥೆಯ ಉಪಾಧ್ಯಕ್ಷ ಸುನೀಲ ಕುಮಾರ್ ಬೇಸರ ವ್ಯಕ್ತಪಡಿಸುತ್ತಾರೆ.
ಕರ್ನಾಟಕವು ದಶಕಗಳಿಂದಲೂ ರಾಷ್ಟ್ರಮಟ್ಟದ ಈಜುಸ್ಪರ್ಧೆಗಳಲ್ಲಿ ಅಗ್ರಸ್ಥಾನವನ್ನು ಬೇರೆಯವರಿಗೆ ಬಿಟ್ಟುಕೊಟ್ಟಿಲ್ಲ. ನಿಶಾ ಮಿಲೆಟ್, ಶಿಖಾ ಟಂಡನ್, ರೆಹಾನ್ ಪೂಂಚಾ, ಸಜನ್ ಪ್ರಕಾಶ್ ಅವರೂ ಸೇರಿದಂತೆ ಹಲವು ಈಜುಪಟುಗಳು ಕರ್ನಾಟಕದಲ್ಲಿ ಬೆಳೆದವರು. ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಬೆಳಗಿದವರು. ಇತ್ತೀಚಿನ ವರ್ಷಗಳಲ್ಲಿ ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಗು ಅವರು ಒಲಿಂಪಿಕ್ ಕೂಟದಲ್ಲಿಯೂ ಭಾಗವಹಿಸಿದರು. ಧಿನಿಧಿ 14ನೇ ವಯಸ್ಸಿನಲ್ಲಿಯೇ ಒಲಿಂಪಿಕ್ ಕೂಟಕ್ಕೆ ಆಯ್ಕೆಯಾದ ಸಾಧನೆ ಮಾಡಿದ ಬಾಲಕಿ. ಇಂತಹ ಈಜುಪಟುಗಳಿಗೆ ಉತ್ಕೃಷ್ಠ ಮಟ್ಟದ ತರಬೇತಿ ನೀಡುವ ಪರಿಣತ ಕೋಚ್‌ಗಳು ಇಲ್ಲಿದ್ದಾರೆ. ಆದರೆ ತರಬೇತುದಾರರನ್ನು ಗುರುತಿಸುವಲ್ಲಿಯೂ ಸರ್ಕಾರ ಹಿಂದುಳಿದಿದೆ. ಇದೇ ಧೋರಣೆ ಮುಂದುವರಿದರೆ ಹೆಚ್ಚು ಸೌಲಭ್ಯಗಳು, ಪ್ರೋತ್ಸಾಹ ಸಿಗುವತ್ತ ತರಬೇತುದಾರರು ಮತ್ತು ಕ್ರೀಡಾಪಟುಗಳು ವಲಸೆ ಹೊರಟರೆ ರಾಜ್ಯಕ್ಕೇ ನಷ್ಟ ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ.
‘ಬೇರೆ ರಾಜ್ಯಗಳಲ್ಲಿ ರಾಷ್ಟ್ರೀಯ ಗೇಮ್ಸ್ ಪದಕವಿಜೇತರಿಗೆ ನೀಡುತ್ತಿರುವ ನಗದು ಪುರಸ್ಕಾರ ಹೆಚ್ಚು. ಆದರೆ ನಮ್ಮಲ್ಲಿ ಆ ರೀತಿ ಇಲ್ಲ. ಇದರಿಂದಾಗಿ ಇಲ್ಲಿಯ ಈಜುಪಟುಗಳು ಬೇರೆ ರಾಜ್ಯಗಳಿಗೆ ಹೋಗುವ ಆತಂಕ ಹೆಚ್ಚಾಗಿದೆ. ನಾವು ಕೂಡ ರಾಜ್ಯ ಸರ್ಕಾರಕ್ಕೆ ಈ ಕುರಿತು ಮನವಿ ಸಲ್ಲಿಸಿದ್ದೇವೆ’ ಎಂದು ಕರ್ನಾಟಕ ಈಜು ಸಂಸ್ಥೆ ಅಧ್ಯಕ್ಷ ಗೋಪಾಲ್ ಬಿ. ಹೊಸೂರ್ ಹೇಳುತ್ತಾರೆ.
ರಾಜ್ಯದಲ್ಲಿ ಈಜು ಸೇರಿದಂತೆ ಕೆಲವು ಕ್ರೀಡೆಗಳ ತರಬೇತಿಗೆ ಉತ್ತಮ ಅವಕಾಶಗಳಿವೆ. ದಶಕಗಳ ಹಿಂದೆ ಉದ್ಯಮಿ ನೀಲಕಂಠರಾವ್ ಜಗದಾಳೆ ಅವರು ಬಸವನಗುಡಿ ಈಜುಕೇಂದ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಷ್ಟ್ರಮಟ್ಟದ ಮತ್ತು ವಿದೇಶದ ಪರಿಣತ ಕೋಚ್‌ಗಳನ್ನು ಕರೆತಂದು ಇಲ್ಲಿಯ ಪ್ರತಿಭಾವಂತರಿಗೆ ತರಬೇತಿ ಕೊಡಿಸಿದರು. ಅಲ್ಲಿಂದ ಈಜು ಕ್ರೀಡೆ ಬೆಳೆಯಿತು.
‘ ಜಗದಾಳೆ ಅವರೇ ನನ್ನನ್ನು ಕೋಚ್ ಆಗಿ ನೇಮಕ ಮಾಡಿದ್ದರು. ಸುಮಾರು ಮೂರು ದಶಕಗಳಿಂದ ಇಲ್ಲಿದ್ದೇನೆ. ಬೆಂಗಳೂರಿನಲ್ಲಿ ಈಜು ಕ್ರೀಡೆ ಬೆಳೆಯಲು ಜಗದಾಳೆಯವರ ಕೊಡುಗೆ ದೊಡ್ಡದು. ಈಜಿನಲ್ಲಿ ಕರ್ನಾಟಕ ಅಗ್ರಮಾನ್ಯವಾಗಿದ್ದರೂ ಇಲ್ಲಿವರೆಗೆ ಸರ್ಕಾರದಿಂದ ನೇಮಕಗೊಂಡ ಪರಿಣತ ತರಬೇತುದಾರರು ಇಲ್ಲ. ಬೆಂಗಳೂರು ಮಾತ್ರ ಖಾಸಗಿ ಈಜು ತರಬೇತಿ ಕೇಂದ್ರಗಳಿಂದಾಗಿ ಉತ್ತಮ ಫಲಿತಾಂಶ ತರುತ್ತಿದೆ. ಆದರೆ ರಾಜ್ಯದ ಗ್ರಾಮಾಂತರ ಭಾಗಗಳಲ್ಲಿರುವ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹ ಬೇಕಲ್ಲವೇ? ಬೇರೆ ಬೇರೆ ಜಿಲ್ಲೆಗಳಿಂದಲೇ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಪದಕ ಜಯಿಸುವಂತಹ ಈಜುಪಟುಗಳನ್ನು ಬೆಳೆಸುವ ವ್ಯವಸ್ಥೆ ನಿರ್ಮಾಣಗೊಳ್ಳಬೇಕು. ಆಗ ರಾಜ್ಯದೊಳಗೇ ಇನ್ನಷ್ಟು ಸ್ಪರ್ಧೆ ಏರ್ಪಡುತ್ತದೆ. ಪ್ರಶಸ್ತಿ, ಪ್ರೋತ್ಸಾಹ ಧನಗಳು ಹೆಚ್ಚಿದರೆ ಇಲ್ಲಿಯ ಮಕ್ಕಳು ಬೇರೆ ಕಡೆ ವಲಸೆ ಹೋಗುವುದು ತಪ್ಪಲಿದೆ. ಇತ್ತೀಚಿನ ದಿನಗಳಲ್ಲಿ ಕೇರಳ, ತಮಿಳುನಾಡು, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಈಜು ಕ್ರೀಡೆಗೆ ಸೌಲಭ್ಯಗಳು ಚೆನ್ನಾಗಿವೆ. ತರಬೇತುದಾರರು ಇದ್ದಾರೆ. ಅಲ್ಲದೇ ಪ್ರಶಸ್ತಿ, ಪುರಸ್ಕಾರಗಳ ಮೊತ್ತವೂ ದೊಡ್ಡದು’ ಎಂದು ಅಂತರರಾಷ್ಟ್ರೀಯ ಈಜು ತರಬೇತುದಾರ ಎಸ್. ಪ್ರದೀಪ ಕುಮಾರ್ ಹೇಳುತ್ತಾರೆ.
ಇನ್ನುಳಿದ ಕ್ರೀಡೆಗಳ ಬೆಳವಣಿಗೆಯಲ್ಲಿಯೂ ಕೆಲವು ಖಾಸಗಿ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ಬ್ಯಾಡ್ಮಿಂಟನ್ ಒಲಿಂಪಿಯನ್ ಪ್ರಕಾಶ್ ಪಡುಕೋಣೆ ಹಾಗೂ ಕ್ರಿಕೆಟಿಗ ರಾಹುಲ್ ದ್ರಾವಿಡ್ ಜಂಟಿಯಾಗಿ ಆರಂಭಿಸಿರುವ ಅಕಾಡೆಮಿ, ಪ್ರಕಾಶ್ ನಂಜಪ್ಪ ಅವರ ಶೂಟಿಂಗ್ ಅಕಾಡೆಮಿ, ಅಶ್ವಿನಿ ನಾಚಪ್ಪ ಅವರು ಕೊಡಗು ಜಿಲ್ಲೆಯಲ್ಲಿ ಆರಂಭಿಸಿರುವ ಕ್ರೀಡಾ ಶಾಲೆ, ಬೆಂಗಳೂರು ಹೊರವಲಯದಲ್ಲಿರುವ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಅವರ ಅಕಾಡೆಮಿ, ಬಳ್ಳಾರಿಯ ತೋರಣಗಲ್‌ನಲ್ಲಿ ಜೆಎಸ್‌ಡಬ್ಲ್ಯು ಕ್ರೀಡಾ ತರಬೇತಿ ಅಕಾಡೆಮಿ, ಬೆಂಗಳೂರಿನ ಜೈನ್ ಕ್ರೀಡಾ ಶಾಲೆ, ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ವಸತಿ ಶಾಲೆ ಸೇರಿದಂತೆ ಹಲವು ಸಂಸ್ಥೆಗಳು ಕ್ರೀಡಾಪಟುಗಳಿಗೆ ಉನ್ನತ ದರ್ಜೆಯ ತರಬೇತಿ ನೀಡುವ ಕಾರ್ಯ ಮಾಡುತ್ತಿವೆ. ತರಬೇತಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರದ ಸಂಸ್ಥೆಗಳು ಸ್ಪರ್ಧೆ ನೀಡಬೇಕು ಎನ್ನುವುದು ಕ್ರೀಡಾ ಪ್ರೇಮಿಗಳ ಆಶಯ.
ಆದರೆ ಸರ್ಕಾರ ಮಾತ್ರ ತಾನೇ ಘೋಷಣೆ ಮಾಡಿದ ಬಹುಮಾನ ಮೊತ್ತವನ್ನು ಕೊಡುವಲ್ಲಿಯೂ ಹಿಂದೆ ಬಿದ್ದಿದೆ. ಎರಡೂ ಕೈಗಳಿಲ್ಲದ ಈಜುಪಟು ವಿಶ್ವಾಸ್ ಅವರಿಗೆ ₹ 6 ಲಕ್ಷ ನೀಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಅದರಲ್ಲಿ ₹ 1.26 ಲಕ್ಷ ಬಾಕಿ ಉಳಿಸಿಕೊಂಡಿತ್ತು. ಅದಕ್ಕಾಗಿ ವಿಶ್ವಾಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಇತ್ತೀಚೆಗೆ ಈ ಪ್ರಕರಣದ ತೀರ್ಪು ನೀಡಿರುವ ರಾಜ್ಯ ಹೈಕೋರ್ಟ್ ‘ವಿಶ್ವಾಸ್ ಅವರಿಗೆ ಬಾಕಿ ಹಣ ಮತ್ತು ₹ 2 ಲಕ್ಷ ಪರಿಹಾರ ನೀಡಬೇಕು’ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
‘ಜೀವನದ ಅಡೆತಡೆಗಳ ವಿರುದ್ಧ ಈಜಿ ಜಯಿಸಿದ ವಿಶ್ವಾಸ್ ಸಾಧನೆಗೆ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ವಿಶೇಷ ಪ್ರತಿಭೆಯ ಚೈತನ್ಯಗಳಿಗೆ ಸರ್ಕಾರವು ಅಂತಃಕರಣ ತೋರಬೇಕು. ಈ ಪ್ರಕರಣದಲ್ಲಿ ಅರ್ಜಿದಾರರ ಮನವಿಯನ್ನು ನಿರಾಕರಿಸುವ ಮೂಲಕ ಸರ್ಕಾರ ನಿರ್ದಯತೆ ತೋರಿದೆ. ಇದು ನ್ಯಾಯದ ಘನತೆ ಕುಗ್ಗಿಸಿದೆ. ಇದಕ್ಕೆ ಕಾರಣವಾದ ಅಧಿಕಾರಿಗಳನ್ನು ಎಚ್ಚರಿಸಲು ಇದು ಸಕಾಲ’ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ರಾಜ್ಯ ಕ್ರೀಡಾ ಇಲಾಖೆಯ ಕಾರ್ಯವೈಖರಿಗೆ ಇದೊಂದೇ ಉದಾಹರಣೆ ಸಾಕು.
‘ಇಲಾಖೆಗೆ ಪ್ರತಿವರ್ಷವೂ ನೀಡುವ ಅನುದಾನದಲ್ಲಿ ಗಣನೀಯ ಹೆಚ್ಚಳವೇನೂ ಆಗಿಲ್ಲ. ಆದರೆ ಖರ್ಚುಗಳು ಮಾತ್ರ ಏರುಮುಖವಾಗಿವೆ. ಆದ್ದರಿಂದ ಸಮತೋಲನ ಕಾಪಾಡಿಕೊಳ್ಳುವುದು ಸವಾಲಿನ ಕೆಲಸ‘ ಎಂದು ಕೆಲವು ಅಧಿಕಾರಿಗಳು ಹೇಳುತ್ತಾರೆ.
ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೂ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದವರಿಗೆ ಶೇ 2ರಷ್ಟು ಕ್ರೀಡಾ ಕೋಟಾ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಹಿಂದೆ ಭರವಸೆ ನೀಡಿದ್ದರು. ಆದರೆ ಅದಿನ್ನೂ ಜಾರಿಯಾಗಿಲ್ಲ.
‘ಪೊಲೀಸ್ ಇಲಾಖೆಯಲ್ಲಿ ಮಾತ್ರ ಶೇ 2ರಷ್ಟು ಕ್ರೀಡಾಕೋಟಾ ಉದ್ಯೋಗಗಳನ್ನು ನೀಡಲಾಗುತ್ತಿದೆ. ಉಳಿದ ಇಲಾಖೆಗಳಿಗೂ ಇದನ್ನು ವಿಸ್ತರಿಸುವ ಪ್ರಸ್ತಾವ ಇದ್ದು, ಪರಿಶೀಲನೆಯಲ್ಲಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ ಅಥ್ಲೀಟ್‌ಗಳಿಗೆ ಎ ಮತ್ತು ಬಿ ಗುಂಪಿನ ಹುದ್ದೆಗಳು, ಇನ್ನುಳಿದ ಸಾಧಕರಿಗೆ ಸಿ ಮತ್ತು ಡಿ ಗುಂಪಿನ ಉದ್ಯೋಗಗಳನ್ನು ನೀಡಲಾಗುವುದು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೂಲಗಳು ತಿಳಿಸಿವೆ.
ಇಲಾಖೆಯ ಕ್ರೀಡಾ ವಸತಿ ನಿಲಯಗಳು ಮತ್ತು ತರಬೇತಿ ಕೇಂದ್ರಗಳಲ್ಲಿಯೂ 178 ತರಬೇತುದಾರರ ನೇಮಕಕ್ಕೆ ಸಿದ್ಧತೆ ಆರಂಭವಾಗಿದೆ. ಎನ್‌ಐಎಸ್ ಪದವಿ, ಡಿಪ್ಲೋಮಾ ಪಡೆದವರಿಗೆ ಆದ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕ್ರೀಡಾ ಕೋಟಾದ ಉದ್ಯೋಗಗಳು ಲಭಿಸುತ್ತಿದ್ದವು. ಆದರೆ ಇತ್ತೀಚೆಗೆ ಪ್ರಮುಖ ಬ್ಯಾಂಕುಗಳು ವಿಲೀನವಾದ ನಂತರ ಉದ್ಯೋಗಾವಕಾಶಗಳು ಕಡಿತವಾಗಿವೆ.
ಕೇಂದ್ರ ಸರ್ಕಾರದ ರೈಲ್ವೆ, ಅಂಚೆ ಮತ್ತು ರಕ್ಷಣಾ ಇಲಾಖೆಗಳಲ್ಲಿ ಮಾತ್ರ ಅವಕಾಶಗಳು ಸಿಗುತ್ತಿವೆ. ‘ಇವತ್ತಿನ ಕಾಲಘಟ್ಟದಲ್ಲಿ ಶ್ರೀಮಂತ ಮನೆತನದ ಮಕ್ಕಳಿಗೆ ಮಾತ್ರ ಕ್ರೀಡೆಗಳಲ್ಲಿ ಉನ್ನತ ಸಾಧನೆ ಮಾಡಲು ಸಾಧ್ಯವಾಗುತ್ತಿದೆ. ಕ್ರಿಕೆಟ್‌ನಲ್ಲಿರುವ ವ್ಯವಸ್ಥೆ ಬೇರೆ ಕ್ರೀಡೆಗಳಲ್ಲಿ ಇಲ್ಲ. ಬೇರೆ ಬೇರೆ ಕ್ರೀಡೆಗಳಲ್ಲಿ ವೃತ್ತಿಪರವಾಗಿ ಬೆಳೆಯುವ ಗುರಿಯೊಂದಿಗೆ ಬರುವ ಮಕ್ಕಳಿಗೆ ಒಂದೊಂದೇ ಹಂತ ಮೇಲಕ್ಕೆ ಹೋದಂತೆ ದುಬಾರಿ ವೆಚ್ಚ ಭರಿಸುವುದು ಸುಲಭವಲ್ಲ. ಅದಕ್ಕೆ ಕೌಟುಂಬಿಕವಾಗಿ ಉತ್ತಮ ಆರ್ಥಿಕ ಹಿನ್ನೆಲೆ ಇರಬೇಕು. ಇಲ್ಲವೇ ಲಭ್ಯವಿರುವ ಧನಸಹಾಯಗಳ ಮೊರೆ ಹೋಗಬೇಕು. ಅದರೆ ಇದು ಎಷ್ಟು ಜನಕ್ಕೆ ಲಭಿಸುತ್ತದೆ ಎನ್ನುವುದೇ ಪ್ರಶ್ನೆ’ ಎಂದು ಇತ್ತೀಚೆಗೆ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಹೇಳಿದ್ದರು.
ಕ್ರೀಡಾಪ್ರೋತ್ಸಾಹ, ಚಟುವಟಿಕೆ ನಡೆಸಲು ಕೊರತೆಯಾಗದಂತ ಅನುದಾನ, ಪ್ರಶಸ್ತಿ ಗೆದ್ದವರಿಗೆ ಪುರಸ್ಕಾರ, ತರಬೇತುದಾರರಿಗೆ ಪ್ರಶಸ್ತಿ ನೀಡಲು ವಿಶಾಲ ಮನೋಭಾವ ಇಲ್ಲವಾದರೆ ಕೆಲವೇ ವರ್ಷಗಳಲ್ಲಿ ಪ್ರಶಸ್ತಿ ಪಟ್ಟಿಯಲ್ಲಿ ರಾಜ್ಯವನ್ನು ಹುಡುಕುವ ಸ್ಥಿತಿ ಎದುರಾದರೆ ಆಶ್ಚರ್ಯವಿಲ್ಲ.
ಒಲಿಂಪಿಕ್ಸ್ ಪದಕವಿಜೇತರಿಗೆ ₹ 6 ಕೋಟಿ ಬಹುಮಾನ ನೀಡುತ್ತೇವೆ. ಏಷ್ಯನ್ ಗೇಮ್ಸ್ ಮತ್ತಿತರ ಕೂಟಗಳ ವಿಜೇತರಿಗೂ ಉತ್ತಮ ಮೊತ್ತ ನೀಡಲಾಗುತ್ತಿದೆ. ರಾಷ್ಟ್ರೀಯ ಕ್ರೀಡಾಕೂಟದ ಪದಕವಿಜೇತರಿಗೆ ಪುರಸ್ಕಾರ ಮೊತ್ತದ ಕುರಿತು ತೀರ್ಮಾನ ತೆಗೆದುಕೊಳ್ಳುತ್ತೇವೆನವೀನ್ ರಾಜ್ ಸಿಂಗ್,ಪ್ರಧಾನ ಕಾರ್ಯದರ್ಶಿ, ಯುವ ಸಬಲೀಕರಣ, ಕ್ರೀಡಾ ಇಲಾಖೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡವು 18 ವರ್ಷಗಳ ನಂತರ ಐಪಿಎಲ್ ಪ್ರಶಸ್ತಿ ಗೆದ್ದು ಹತ್ತು ಗಂಟೆ ಕಳೆಯುವಷ್ಟರಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರವು ವಿಧಾನಸೌಧಕ್ಕೆ ಕರೆಸಿ ಸನ್ಮಾನ ಮಾಡಿತು. ತನ್ನನ್ನು ಕ್ರೀಡಾ ಪ್ರೋತ್ಸಾಹಕ ಎಂದು ತೋರಿಸಿಕೊಳ್ಳುವ ಭರಾಟೆ ಜನರ ಗಮನ ಸೆಳೆಯಿತು.
ಆದರೆ ಸರ್ಕಾರದ ಈ ನಡೆಯು ಬೇರೆ ಬೇರೆ ಕ್ರೀಡೆಗಳಲ್ಲಿರುವ ಅಥ್ಲೀಟ್‌ಗಳಿಗೆ ಸಿಟ್ಟು, ಬೇಸರ ತರಿಸಿದೆ. ‘ ಒಂದು ಫ್ರ್ಯಾಂಚೈಸಿ ಲೀಗ್ ಕ್ರಿಕೆಟ್ ಬಗ್ಗೆ ಇರುವ ಅಕ್ಕರೆ ಉಳಿದ ಕ್ರೀಡೆಗಳಿಗೆ ಯಾಕಿಲ್ಲ. ಸರ್ಕಾರವು ರಾಜ್ಯದಲ್ಲಿ ಬೇರೆ ಬೇರೆ ಕ್ರೀಡೆಗಳತ್ತ ನೋಡುತ್ತಿಲ್ಲ. ಮೂಲಸೌಲಭ್ಯಗಳ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ’ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹುಬ್ಬಳ್ಳಿಯು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು. ಇಲ್ಲಿಯ ಸೆಟ್ಲಮೆಂಟ್ ಪ್ರದೇಶದಲ್ಲಿ ಮನೆಗೊಬ್ಬರು ಹಾಕಿ ಆಟಗಾರ ಸಿಗುತ್ತಾರೆ. ಈ ಹಿಂದೆ ಭಾರತ ತಂಡವನ್ನು ಪ್ರತಿನಿಧಿಸಿದವರೂ ಇಲ್ಲಿದ್ದಾರೆ. ಇಲ್ಲಿಯ ಹಾಕಿ ಕ್ರೀಡೆಗೆ ಬ್ರಿಟಿಷ್ ಕಾಲದ ನಂಟಿದೆ. ಆದರೆ, ಇಲ್ಲಿ ಇಂದಿಗೂ ಆಸ್ಟ್ರೊಟರ್ಫ್ ಹಾಕಿ ಮೈದಾನವಿಲ್ಲ. ಇಲ್ಲಿನ ಮಣ್ಣಿನ ಮೈದಾನದಲ್ಲಿಯೇ ಅಭ್ಯಾಸ ಮಾಡುವ ಪರಿಸ್ಥಿತಿ ಇದೆ. ಅನುದಾನ, ಪ್ರೋತ್ಸಾಹ ಕೊರತೆಯಿಂದ ಕಳೆದ ಎರಡು ವರ್ಷಗಳಿಂದ ಯಾವುದೇ ಟೂರ್ನಿಗಳು ನಡೆದಿಲ್ಲ.
ಸ್ಮಾರ್ಟ್ ಸಿಟಿ ಯೋಜನೆಯಡಿ ಲೋಹಿಯಾನಗರದಲ್ಲಿ ನಿರ್ಮಾಣವಾಗುತ್ತಿರುವ ಕ್ರೀಡಾ ಸಂಕೀರ್ಣದಲ್ಲಿ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್‌ಐಎಚ್) ನಿಯಮಗಳಿಗೆ ಅನುಗುಣವಾಗಿ ಹಾಕಿ ಟರ್ಫ್ ಮೈದಾನ ನಿರ್ಮಿಸಲಾಗುತ್ತಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
‘ಲೋಹಿಯಾನಗರದ ಕ್ರೀಡಾ ಸಂಕೀರ್ಣದಲ್ಲಿ ಡ್ರೈ ಟರ್ಫ್ ಹಾಕಿ ಮೈದಾನ ನಿರ್ಮಿಸಲಾಗುತ್ತಿದೆ. ಇದರಿಂದ ಆಟಗಾರರಿಗೆ ದೈಹಿಕವಾಗಿ ತುಂಬಾ ತೊಂದರೆಯಾಗುತ್ತದೆ. ಅದನ್ನು ಬದಲಿಸಿ ವೆಟ್ ಟರ್ಫ್ ಅಳವಡಿಸಬೇಕು ಎಂದು ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸಿಲ್ಲ’ ಎನ್ನುತ್ತಾರೆ ಧಾರವಾಡ ಹಾಕಿಯ ಗೌರವ ಕಾರ್ಯದರ್ಶಿ ಚಂದ್ರಶೇಖರ ಗೋಕಾಕ.
18 ವರ್ಷಗಳಿಂದ ತಂಡವಿಲ್ಲ: ಕಳೆದ 18 ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಾಕಿ ತಂಡವೇ ಇಲ್ಲ. ಹಾಕಿಗಾಗಿ ಪ್ರತ್ಯೇಕ ಮೈದಾನವೂ ಇಲ್ಲ. ಆಸಕ್ತ ವಿದ್ಯಾರ್ಥಿಗಳು ಜಿಲ್ಲಾ ಕ್ರೀಡಾಂಗಣದ ಒಂದು ಮಗ್ಗುಲಲ್ಲೇ ಹಾಕಿ ಆಟದ ಅಭ್ಯಾಸ ಮಾಡುತ್ತಿದ್ದರು.
‘ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಕೆಎಲ್‌ಇ ಸಂಸ್ಥೆಯ ಜಾಗ ಗುತ್ತಿಗೆ ಪಡೆಯಲಾಗಿತ್ತು. ಇನ್ನು ಕೆಲವು ತಿಂಗಳಿಗೆ ಗುತ್ತಿಗೆ ಅವಧಿ ಮುಗಿಯುತ್ತಿದೆ. ರಾಮತೀರ್ಥ ನಗರದಲ್ಲಿ ಹೊಸ ಕ್ರೀಡಾಂಗಣ ನಿರ್ಮಾಣಕ್ಕೆ 16.37 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಹಾಕಿ ಕ್ರೀಡೆಗಾಗಿ ಪ್ರತ್ಯೇಕ ಮೈದಾನ ರೂಪಿಸುವ ಯೋಚನೆ ಇದೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಬಿ.ಶ್ರೀನಿವಾಸ ತಿಳಿಸಿದರು.
ಎಐ ಚಿತ್ರ: ಕಣಕಾಲಮಠ
ಎಷ್ಟೋ ಖ್ಯಾತನಾಮ ಅಥ್ಲೀಟ್‌ಗಳು ವಿಶ್ವವಿದ್ಯಾಲಯಗಳ ಅಂಗಳಗಳಿಂದಲೇ ಹೊರಹೊಮ್ಮಿದವರು. ಈಗಲೂ ಅಂತಹ ಕ್ರೀಡಾಪಟುಗಳು ಇದ್ದಾರೆ. ಆದರೆ ಅವರಿಗೆ ಪ್ರೋತ್ಸಾಹವಿಲ್ಲ. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯದಲ್ಲಿ ನಡೆದ ಘಟನೆಯೇ ಇದಕ್ಕೆ ಸಾಕ್ಷಿ.
ಜರ್ಮನಿಯಲ್ಲಿ ಈಚೆಗೆ ನಡೆದ ಜಾಗತಿಕ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಮಂಗಳೂರು ವಿ.ವಿಯ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಉಡುಪಿಯ ತೆಂಕನಿಡಿಯೂರು ಸರ್ಕಾರಿ ಸ್ನಾತಕೋತ್ತರ ಕೇಂದ್ರದ ಎಂ.ಎ. ವಿದ್ಯಾರ್ಥಿನಿ, ಹೈಜಂಪ್ ಅಥ್ಲೀಟ್ ಪಲ್ಲವಿ ಪಾಟೀಲ ಕೂಡ ಅದರಲ್ಲಿ ಒಬ್ಬರಾಗಿದ್ದರು.
ಆದರೆ, ಅವರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ವಿಶ್ವವಿದ್ಯಾಲಯದಿಂದ ನೆರವು ದೊರೆಯದ ಕಾರಣ ಜರ್ಮನಿಗೆ ತೆರಳುವ ಕನಸು ಕಮರುವುದರಲ್ಲಿತ್ತು. ಈ ಸಂದರ್ಭದಲ್ಲಿ ಊರ ಜನರು ಒಗ್ಗಟ್ಟಾಗಿ ಹಣ ಹೊಂದಿಸಿದರು. ಹೀಗಾಗಿ ಕೊನೆಯ ದಿನದ ಒಳಗಾಗಿ ನೋಂದಣಿ ಶುಲ್ಕ ಪಾವತಿಸಲು ಸಾಧ್ಯವಾಯಿತು.
‘ತಕ್ಷಣಕ್ಕೆ ಕಾಲೇಜು, ಊರ ಜನರು ಹಾಗೂ ಕ್ರೀಡಾಪಟುವಿನ ಪಾಲಕರು ಸೇರಿ ಹಣ ಹೊಂದಿಸಿದ್ದಾರೆ. ₹ 2.5 ಲಕ್ಷ ನೋಂದಣಿ ಶುಲ್ಕ ಪಾವತಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗುವುದು ಎಂದು ಕ್ರೀಡಾ ಇಲಾಖೆಯ ಆಯುಕ್ತರು ಭರವಸೆ ನೀಡಿದ್ದಾರೆ. ಉಡುಪಿ ಜಿಲ್ಲಾ ಪಂಚಾಯಿತಿಯಿಂದ ₹ 20 ಸಾವಿರ ಮತ್ತು ವಿಶ್ವವಿದ್ಯಾಲಯದಿಂದ ₹ 75 ಸಾವಿರ ನೀಡಿದ್ದಾರೆ’ ಎಂದು ತೆಂಕನಿಡಿಯೂರು ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ರೋಷನ್ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
ಪೂರಕ ಮಾಹಿತಿ: ವಿಕ್ರಂ ಕಾಂತಿಕೆರೆ, ಸತೀಶ.ಬಿ, ಕೆ.ಎಂ.ಸತೀಶ ಬೆಳ್ಳಕ್ಕಿ, ಸಂತೋಷ ಚಿನಗುಡಿ, ಬಸವರಾಜ್ ಸಂಪಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.