ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಮೂರು ಕಿ.ಮೀ. ದೂರದಲ್ಲಿರುವ ಹಳಕಾರ ಗ್ರಾಮದಲ್ಲಿ ಹಸಿರಿನಿಂದ ನಳನಳಿಸುವ ಕಾಡಿದೆ. ಈ ಕಾಡನ್ನು ಕಾಪಿಡಲು ಸೈನಿಕರಿದ್ದಾರೆ. ಅರಣ್ಯದ ಮುತುವರ್ಜಿ ವಹಿಸಲು ಸ್ಥಳೀಯರೇ ರಚಿಸಿಕೊಂಡ ಚುನಾಯಿತ ಸರ್ಕಾರವಿದೆ!
‘ಸರ್ಕಾರ’ ಎಂದರೆ ಗ್ರಾಮಸ್ಥರಿಂದಲೇ ಆಯ್ಕೆಯಾದ ನಿರ್ದೇಶಕರು ಮತ್ತು ‘ಸೈನಿಕರು’ ಇಲ್ಲಿನ ಗ್ರಾಮಸ್ಥರು. ಪ್ರತಿ ಮೂರು ವರ್ಷಕ್ಕೊಮ್ಮೆ ಗ್ರಾಮದ ಜನರಿಂದಲೇ ಆಯ್ಕೆಯಾಗುವ ಒಂಬತ್ತು ನಿರ್ದೇಶಕರು ಅರಣ್ಯ ರಕ್ಷಣೆಯ ಹೊಣೆ ನಿಭಾಯಿಸುತ್ತಾರೆ. ಒಂದಿಂಚೂ ಜಾಗ ಅತಿಕ್ರಮಣವಾಗದಂತೆ, ಒಂದೇ ಗಿಡಕ್ಕೂ ಕೊಡಲಿ ಪೆಟ್ಟು ಬೀಳದಂತೆ ಕಣ್ಗಾವಲು ಇಡುತ್ತಾರೆ. ಅಂದ ಹಾಗೆ, ಇದು ದೇಶದ ಏಕೈಕ ‘ಗ್ರಾಮ ಅರಣ್ಯ ಪಂಚಾಯಿತಿ’ (ವಿಲೇಜ್ ಫಾರೆಸ್ಟ್ ಪಂಚಾಯಿತಿ).
ರಾಜ್ಯದ ಪಶ್ಚಿಮಘಟ್ಟದ ಅರಣ್ಯ ಪ್ರದೇಶವು 10 ವರ್ಷದಲ್ಲಿ 153.80 ಹೆಕ್ಟೇರ್ ಇಳಿಕೆಯಾಗಿದೆ ಎಂಬ ಭಾರತೀಯ ಅರಣ್ಯ ಸ್ಥಿತಿಗತಿಯ ಈಚಿನ ವರದಿಯು ಮೂಡಿಸಿದ ಆತಂಕದ ನಡುವೆಯೂ ರಾಜ್ಯದ ಅಲ್ಲಲ್ಲಿ ಅರಣ್ಯ ರಕ್ಷಣೆಗೆ ಸ್ಥಳೀಯರೇ ಟೊಂಕಕಟ್ಟಿ ನಿಂತಿರುವ ಕಥೆ ಭವಿಷ್ಯದ ದಿನಗಳಿಗೆ ಹೊಸ ಭರವಸೆ ಹುಟ್ಟಿಸುವಂತಿದೆ.
ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಸ ಎಸೆಯದಂತೆ ಎಚ್ಚರಿಸುವ ಫಲಕವನ್ನು ಗ್ರಾಮ ಅರಣ್ಯ ಪಂಚಾಯಿತಿಯಿಂದ ಅಳವಡಿಸಲಾಗಿದೆ
ಉತ್ತರ ಕನ್ನಡದಲ್ಲಿ ‘ಕೆನರಾ ಪ್ರಿವಿಲೇಜ್ ಆ್ಯಕ್ಟ್‘ ಅಡಿ ರೈತರ ಬಳಕೆಗೆ ಬಿಟ್ಟಿರುವ ಸಾಮೂಹಿಕ ಬೆಟ್ಟ ಭೂಮಿಯನ್ನು ರೈತರು ಕಾಪಿಟ್ಟುಕೊಂಡ ಬಗೆ, ಶಿವಮೊಗ್ಗ ಜಿಲ್ಲೆಯ ಹೊಳೆಮರೂರಿನಲ್ಲಿ ರೈತರೇ 380 ಎಕರೆ ಅರಣ್ಯವನ್ನು ಸಂರಕ್ಷಿಸಿಕೊಂಡು ಬಂದ ಕಥೆ ಪ್ರೇರಣೆ ನೀಡುತ್ತವೆ.
1924ರಲ್ಲಿ ಬ್ರಿಟಿಷ್ ಕಾಲದಲ್ಲಿ ರಚನೆಯಾದ ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಯಲ್ಲಿ ಕೃಷಿಯೇತರ ಭೂಮಿ ಹೊಂದಿರುವವರಿಗೆ ಸದಸ್ಯತ್ವ ಇಲ್ಲ. ಕಾಡಿಗೆ ಹಾನಿಯಾದರೆ, ಸದಸ್ಯತ್ವ ರದ್ದುಪಡಿಸಲಾಗುತ್ತದೆ. ಕಾಡಿಗೆ ಹಾನಿಯಾಗಿರುವ ವಿಷಯ ತಿಳಿದೂ ಸುಮ್ಮನಿರುವ ಗ್ರಾಮಸ್ಥ ಶಿಕ್ಷೆಗೆ ಗುರಿಯಾಗಬೇಕು. ಇಂತಹ ಕಟ್ಟುಪಾಡು ಇಂದಿಗೂ ಪಾಲನೆ ಆಗುತ್ತಿದೆ. ಇಂತಹ ನಿಯಮಗಳೇ ಕಾಡು ಉಳಿಯಲು ಮೂಲ ಪ್ರೇರಣೆಯಾಗಿದೆ.
ಹಳಕಾರ ಅರಣ್ಯದಲ್ಲಿ ಗ್ರಾಮಸ್ಥರೇ ಗಸ್ತು ತಿರುಗುತ್ತಾರೆ. ಕತ್ತಿ, ಕೊಡಲಿ, ಗರಗಸ ಹೀಗೆ ಯಾವುದೇ ಆಯುಧ ಹಿಡಿದು ಕಾಡಿನೊಳಗೆ ಬರಲು ಯಾರಿಗೂ ಬಿಡುವುದಿಲ್ಲ. ಆಯುಧ ಸಮೇತ ಊರಿನವರೂ ಕಾಡಿಗೆ ಹೋಗುವುದಿಲ್ಲ. ಇದು ಶತಮಾನದಿಂದ ನಡೆದು ಬಂದಿರುವ ಅಘೋಷಿತ ಪದ್ಧತಿ. ಈ ಪದ್ಧತಿಗೆ ಚ್ಯುತಿ ಬರದಂತೆ ಗ್ರಾಮಸ್ಥರು ನಡೆದು ಬಂದಿರುವ ಪರಿಣಾಮದಿಂದಲೇ 219 ಎಕರೆ ವಿಶಾಲವಾಗಿ ಅರಣ್ಯ ಹಸಿರಿನಿಂದ ನಳನಳಿಸುತ್ತಲೇ ಹಸನಾಗಿ ಉಳಿದಿದೆ.
ಕುಮಟಾ ಪಟ್ಟಣದ ಜನರು ಶುದ್ಧ ಆಮ್ಲಜನಕಕ್ಕೆ ನಿತ್ಯ ಮುಂಜಾನೆ ಮತ್ತು ಸಂಜೆ ಪಟ್ಟಣದಿಂದ ಮೂರು ಕಿಲೋ ಮೀಟರ್ ದೂರದಲ್ಲಿರುವ ಹಳಕಾರ ಗ್ರಾಮದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳುತ್ತಾರೆ. ಹೀಗೆ ಬರುವವರು ಗ್ರಾಮದ ರಸ್ತೆಯ ಇಕ್ಕೆಲದಲ್ಲೂ ಹರಡಿಕೊಂಡ ಅರಣ್ಯವನ್ನು ಆಸ್ವಾದಿಸುತ್ತಾರೆ.
ಆದರೆ, ಯಾರೇ ಆದರೂ ಕಾಡಿನ ಒಳಹೊಕ್ಕು ಮರ ಕಡಿದರೆ, ಕನಿಷ್ಠಪಕ್ಷ ಮರದ ಒಂದೇ ಟೊಂಗೆಯನ್ನು ಮುರಿದರೂ ಅವರು ದಂಡ ತೆರಬೇಕು. ಇಲ್ಲವೇ, ಗ್ರಾಮಸ್ಥರು ವಿಧಿಸುವ ಶಿಕ್ಷೆಗೆ ಗುರಿಯಾಗಬೇಕು!
ಹೀಗೆ, ಶಿಕ್ಷೆಗೆ ಗುರಿಯಾದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ನಸುಕಿನ ಜಾವ, ತಡರಾತ್ರಿಯಲ್ಲೋ ಕಾಡಿನ ಮರ ಕಡಿಯಲು ಬಂದರೂ ಗ್ರಾಮಸ್ಥರು ಅವರನ್ನು ಹುಡುಕಿ ಹಿಡಿದಿದ್ದಾರೆ. ‘ಕುಮಟಾದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಮರದ ದಿಮ್ಮಿ ಅಗತ್ಯವಿದೆ ಎಂಬ ಕಾರಣಕ್ಕೆ ಗುಂಪೊಂದು ರಾತ್ರೋರಾತ್ರಿ ಕಾಡಿಗೆ ನುಗ್ಗಿತ್ತು. ಗ್ರಾಮಸ್ಥರೊಬ್ಬರು ತಕ್ಷಣ ಮಾಹಿತಿ ನೀಡಿದರು. ಹತ್ತಾರು ಜನ ಒಟ್ಟಾಗಿ ಸೇರಿ ಮರ ಕಡಿಯಲು ಬಂದವರನ್ನು ಹಿಡಿದು, ಆಯುಧಗಳನ್ನು ವಶಕ್ಕೆ ಪಡೆದೆವು. ಎಚ್ಚರಿಕೆ ನೀಡಿ ಕಳುಹಿಸಿದೆವು. ಮತ್ತೆ ಅವರೆಂದೂ ಊರಿನತ್ತ ಹಾಯಲಿಲ್ಲ’ ಎಂದು ಹಳಕಾರ ಗ್ರಾಮಸ್ಥ ಅನಂತ ಪಟಗಾರ ಹೇಳಿದರು.
ಶಿವಮೊಗ್ಗ ಜಿಲ್ಲೆಯ ತೋರಣಗೊಂಡನಕೊಪ್ಪ ಗ್ರಾಮಸ್ಥರು ತಾವೇ ಮುಂದಾಗಿ ಅರಣ್ಯಾಧಿಕಾರಿಗಳ ನೆರವಿನಿಂದ ಅರಣ್ಯ ಗಡಿ ಗುರುತಿಸಿ ಕಂದಕ ತೋಡಿಸಿದ ಸಂದರ್ಭ.
‘ಊರಿನ ಕಾಡು ಕಾಯುವುದು ಜವಾಬ್ದಾರಿ ಎಂಬುದು ನಮಗೆ ಗ್ರಾಮದ ಹಿರಿಯರು ಹೇಳಿಕೊಟ್ಟ ಪಾಠ. ಅದನ್ನು ಪಾಲಿಸುತ್ತಿದ್ದೇವೆ. ಇಡೀ ಗ್ರಾಮದ ಕಾಡನ್ನು ವಾರಕ್ಕೊಮ್ಮೆಯಾದರೂ ಒಬ್ಬೊಬ್ಬ ಸದಸ್ಯರು ಸುತ್ತುತ್ತಾರೆ. ಪಾಳಿ ಆಧಾರದಲ್ಲಿ ಕೆಲಸ ನಡೆಯುತ್ತದೆ. ಕಾಡಿನ ಒಳಗೆ ಅಪರಿಚಿತರು ಯಾರೇ ಹೊಕ್ಕರೂ, ಊರಿನವರೇ ಆಯುಧ ಹಿಡಿದು ಸಾಗಿದರೂ ಒಬ್ಬರಲ್ಲ ಒಬ್ಬರು ಗಮನಿಸಿ ಮಾಹಿತಿ ನೀಡುತ್ತಾರೆ. ಆಯುಧಗಳ ಹೊಡೆತಕ್ಕೆ ಮರವಷ್ಟೇ ಅಲ್ಲ, ಮರದ ಟೊಂಗೆಯೂ ಕಡಿತಗೊಳ್ಳಲು ಬಿಟ್ಟಿಲ್ಲ’ ಎಂದರು.
‘ಗ್ರಾಮದಲ್ಲಿ ವಿಭಿನ್ನ ಸಮುದಾಯದ, ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡುವ ಜನರಿದ್ದಾರೆ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಇರಬಹುದು. ಆದರೆ, ಗ್ರಾಮದ ಅರಣ್ಯ ರಕ್ಷಿಸುವ ವಿಚಾರದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಈ ಕಾರಣದಿಂದ ಸುರಗಿ, ನೇರಲೆ, ಹಳಚರಿ, ತಾರಿ, ಮತ್ತಿ, ನೀಲಗಿರಿ ಸೇರಿ ಸಾವಿರಾರು ಮರಗಳು ಮಟ್ಟಸವಾಗಿ ಬೆಳೆದು ನಿಂತಿವೆ’ ಎನ್ನುತ್ತಲೇ ಸಮೃದ್ಧ ಅರಣ್ಯದತ್ತ ಕೈ ತೋರಿಸಿದರು.
‘ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಯು, ಸರ್ಕಾರವೊಂದು ರಾಜ್ಯದ ಆಡಳಿತ ನೋಡಿಕೊಳ್ಳುವಂತೆ, ಗ್ರಾಮದ ಅರಣ್ಯ ಭೂಮಿಯನ್ನು ಕಾಯುವ ಕೆಲಸ ಮಾಡುತ್ತಿದೆ. ಗ್ರಾಮದಲ್ಲಿನ 262 ಮನೆಗಳಿಂದ ತಲಾ ಒಬ್ಬರ ಸದಸ್ಯರು ಸಮಿತಿಯಲ್ಲಿ ಇದ್ದಾರೆ. ಪ್ರತಿಯೊಬ್ಬರಿಗೂ ಮತದಾನದ ಹಕ್ಕು ಇದೆ. ಮೂರು ವರ್ಷಕ್ಕೊಮ್ಮೆ 9 ಮಂದಿ ನಿರ್ದೇಶಕರನ್ನು ಆರಿಸುತ್ತೇವೆ. ಅವರು ಗ್ರಾಮ ಅರಣ್ಯದ ರಕ್ಷಣೆಯ ಜವಾಬ್ದಾರಿ ನಿಭಾಯಿಸುತ್ತಾರೆ. ಅವರೊಟ್ಟಿಗೆ ಉಳಿದ ಸದಸ್ಯರು ಪಾಳಿ ಆಧಾರದಲ್ಲಿ ಕಾಡು ಕಾಯುತ್ತಾರೆ’ ಎಂದು ಅರಣ್ಯದ ಆಡಳಿತ ವಿವರಿಸಿದರು ಗ್ರಾಮ ಅರಣ್ಯ ಪಂಚಾಯಿತಿ ಅಧ್ಯಕ್ಷ ನಾಗರಾಜ ಭಟ್ಟ.
‘ಕಾಡನ್ನು ಗ್ರಾಮಸ್ಥರು ಕೃಷಿಗಾಗಿ ಬಳಸಿಕೊಳ್ಳುತ್ತಾರೆ. ಗೊಬ್ಬರಕ್ಕಾಗಿ ಬಿದ್ದ ತರಗೆಲೆಗಳನ್ನು ಸಂಗ್ರಹಿಸುತ್ತಾರೆ. ಮುರಿದು ಬಿದ್ದ ಒಣ ಕಟ್ಟಿಗೆಗಳನ್ನು ಸಂಗ್ರಹಿಸಲಾಗುತ್ತದೆ. ಯಾರೂ ಆಯುಧ ಒಯ್ಯದೆ, ಬಿದ್ದ ಟೊಂಗೆ, ಎಲೆಗಳನ್ನು ಮಾತ್ರ ಆರಿಸಿಕೊಳ್ಳಬಹುದು. ಹೀಗೆ ಕಾಡು ಬಳಕೆಗೆ ಪ್ರತಿ ಮನೆಯಿಂದ ತಲಾ ₹30 ಶುಲ್ಕವನ್ನು ವಾರ್ಷಿಕವಾಗಿ ಸಂಗ್ರಹಿಸಿ, ಅವರಿಗೆ ಪಾಸ್ ನೀಡಲಾಗುತ್ತದೆ. ಸಂಗ್ರಹವಾದ ಮೊತ್ತದಲ್ಲಿ ಕಾಡಿನಲ್ಲಿ ಗಸ್ತು ತಿರಗಲು ಓಬ್ಬ ಕಾವಲುಗಾರನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.
ಹಸಿರು ಸಮೃದ್ಧವಾಗಿ ಹರಡಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ
‘ಕಾಡಿನಲ್ಲಿರುವ ಸುರಗಿ ಮರದಲ್ಲಿ ಬಿಡುವ ಹೂವನ್ನು ಹರಾಜು ಮೂಲಕ ಮಾರುತ್ತೇವೆ. ಉರುವಲುಗಳನ್ನು ಸಂಗ್ರಹಿಸಿ, ಕೆ.ಜಿ ಲೆಕ್ಕದಲ್ಲಿ ಮಾರಲಾಗುತ್ತದೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಬಿದ್ದ ಮರಗಳಿಂದ ಸಂಗ್ರಹಿಸಿದ 5 ಕ್ವಿಂಟಲ್ ಉರುವಲು ಒದಗಿಸಲಾಗುತ್ತದೆ. ಇವೆಲ್ಲವನ್ನೂ ನಿಭಾಯಿಸಲು ಒಬ್ಬ ಕಾರ್ಯದರ್ಶಿಯನ್ನು ನಿಯೋಜಿಸಲಾಗಿದೆ. ಕಾಡಿಗೆ ಹಾನಿ ಮಾಡದಂತೆ ಪ್ರತಿ ಕ್ಷಣವೂ ಗ್ರಾಮಸ್ಥರೇ ಎಚ್ಚರ ವಹಿಸುತ್ತಿದ್ದೇವೆ’ ಎಂದೂ ವಿವರಿಸಿದರು.
‘ಕಾಡಿನ ಕುರಿತು ಭಾವನಾತ್ಮಕ ನಂಟು ಇರುವ ಕಾರಣದಿಂದ ಅದರ ರಕ್ಷಣೆ, ಜನರಿಂದ ನಡೆಯುತ್ತಿದೆ. ನಮ್ಮಪ್ಪ, ನಮ್ಮಜ್ಜ ಕಾಡು ಉಳಿಸಲು ಪ್ರೇರೇಪಿಸಿದ್ದರು. ಅದನ್ನು ನಾವೂ ನಮ್ಮ ಮಕ್ಕಳಿಗೆ ಕಲಿಸಿದ್ದೇವೆ. ರಜೆಯ ದಿನಗಳಲ್ಲಿ ಮಕ್ಕಳು ಕಾಡಿಗೆ ಗಸ್ತು ತಿರುಗಲು ಹಿರಿಯರೊಂದಿಗೆ ಹೋಗುತ್ತಾರೆ. ಶಾಲೆ, ಕಾಲೇಜಿಗೆ ತೆರಳುವ ವೇಳೆ ರಸ್ತೆಯಲ್ಲಿ ಯಾರಾದರೂ ಕಾಡಿನೊಳಗೆ ಸಾಗಿದರೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಾರೆ. ಪಟ್ಟಣಕ್ಕೆ ಸಮೀಪದಲ್ಲಿರುವ ಕಾರಣಕ್ಕೆ ಕಸ ಎಸೆದು ಹೋಗುವವರನ್ನು ಊರಿನ ಮಕ್ಕಳೇ ತಡೆದು ಓಡಿಸಿದ ಘಟನೆಯೂ ನಡೆದಿವೆ’ ಎಂದು ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯ ಅನಿಲ ಮಡಿವಾಳ ಹೇಳಿದರು.
ಕೇವಲ ನೈಸರ್ಗಿಕವಾಗಿ ಬೆಳೆದು ನಿಂತ ಅರಣ್ಯವನ್ನು ರಕ್ಷಿಸುವುದಕ್ಕಷ್ಟೆ ಅವರ ಕೆಲಸ ಸೀಮಿತವಾಗಿಲ್ಲ. ವರ್ಷಕ್ಕೊಮ್ಮೆ ‘ಹಂತಿ ಧರೆ’ (ಶ್ರಮದಾನ) ನಡೆಸಿ, ಅರಣ್ಯದ ಖಾಲಿ ಜಾಗದಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಡುವ ರೂಢಿ ಇದೆ. ಈಚಿನ ವರ್ಷದಲ್ಲಿ ಹಣ್ಣು ಹಂಪಲುಗಳ ಗಿಡಗಳನ್ನು ಬೆಳೆಸಲು ಆದ್ಯತೆ ನೀಡುತ್ತಿದ್ದಾರೆ. ಅದರ ನಡುವೆ ನೈಸರ್ಗಿಕ ಅರಣ್ಯದಲ್ಲಿರುವ ತಳಿಗಳ ಸಸಿಗಳನ್ನು, ಔಷಧೀಯ ಸಸಿಗಳನ್ನೂ ನೆಟ್ಟು ಪೋಷಿಸುತ್ತಿದ್ದಾರೆ.
ಶಿರಸಿ, ಸಿದ್ದಾಪುರ ತಾಲ್ಲೂಕಿನಲ್ಲಿ ಗ್ರಾಮದ ಬಳಕೆಗೆ ಬಿಟ್ಟಿರುವ ಸಾಮೂಹಿಕ ಬೆಟ್ಟ ಸಂರಕ್ಷಣೆ ಕಾರ್ಯ ಮಾದರಿಯಾಗಿದೆ. ಆಯಾ ಗ್ರಾಮದ ರೈತರೇ ಬೆಟ್ಟದಲ್ಲಿ ಸಸಿಗಳ ನಾಟಿ, ಕಾಲುವೆ ನಿರ್ಮಾಣ, ತರಗೆಲೆ ಸಂಗ್ರಹಿಸಿ ಸ್ವಚ್ಛತೆ ಕಾಯ್ದುಕೊಳ್ಳುವ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ.
ಶಿರಸಿ ತಾಲ್ಲೂಕಿನ ಭೈರುಂಬೆ ಹಾಗೂ ಸದಾಶಿವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಿಸಿರುವ ಕೈಲಾಸಗುಡ್ಡ ಅರಣ್ಯ ಶ್ರೇಣಿಯನ್ನು ಸುತ್ತಲಿನ ಗ್ರಾಮಸ್ಥರು ಚೆನ್ನಾಗಿ ಕಾಪಾಡಿಕೊಂಡು ಬರುತ್ತಿದ್ದಾರೆ. ಸುಮಾರು 200 ಹೆಕ್ಟೇರ್‌ಗೂ ಅಧಿಕ ವಿಸ್ತೀರ್ಣದ ಸಮೃದ್ಧ ಕಾಡು ಇಲ್ಲಿದೆ. ಇಲ್ಲಿ ಸ್ವಲ್ಪವೂ ಅತಿಕ್ರಮಣ, ಮರ ಕಡಿತ ಇತ್ಯಾದಿ, ಕಾಡಿಗೆ ಬೆಂಕಿ ಇತ್ಯಾದಿ ಸಮಸ್ಯೆ ಇಲ್ಲ. ಇದಕ್ಕೆ ಕಾರಣ ಸುತ್ತಲಿನ ಗ್ರಾಮಸ್ಥರು. ಸುತ್ತಲಿನ ಊರುಗಳಾದ ತಾರಗೋಡು, ಕೆರೆಯೊಡಲು, ನಿಡಗೋಡು, ಕಾಳಿಸರ, ಅಶೀಶರ, ಭೈರುಂಬೆ, ಗಡಿಗೆಹೊಳೆ, ಅಗಸಾಲ, ಬೊಮ್ಮನಳ್ಳಿ ಗ್ರಾಮದ ಜನರು ಒಟ್ಟಾಗಿ ಇದನ್ನು ರಕ್ಷಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಮಲೆನಾಡು, ಅರೆಮಲೆನಾಡು ಭಾಗದಲ್ಲಿ ಕಾಡು ಕಣ್ಮರೆಯಾಗಿ ಅಡಿಕೆ ತೋಟಗಳು ರೂಪುಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಗ್ರಾಮೀಣರು ಹಾಗೂ ಅರಣ್ಯದಂಚಿನ ನಿವಾಸಿಗಳು ಕಾಡು ಉಳಿಸಿಕೊಳ್ಳುವ ಪ್ರಯತ್ನದ ಬೆಳ್ಳಿ ಗೆರೆಗಳು ಕಾಣಸಿಗುತ್ತವೆ.
ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯ ಕಾಯಲು ನಿಂತಿರುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು ಹಾಗೂ ಅರಣ್ಯ ಪಂಚಾಯಿತಿ ನೇಮಿಸಿದ ಕಾವಲುಗಾರ
ಚಂದ್ರಗುತ್ತಿ ಹೋಬಳಿಯ ತೋರಣಗೊಂಡನಕೊಪ್ಪದಲ್ಲಿ 150 ಎಕರೆಯಷ್ಟು ಅರಣ್ಯ ಪ್ರದೇಶದ ಸುತ್ತಲೂ ಗ್ರಾಮಸ್ಥರೇ ಆಗಳ (ಕಂದಕ) ಹೊಡೆದು ರಕ್ಷಣೆಗೆ ಮುಂದಾಗಿದ್ದಾರೆ. ಹೊಳೆ ಮರೂರಿನಲ್ಲಿ 380 ಎಕರೆ ಮತ್ತು ಹರೂರಿನಲ್ಲಿ 60 ಎಕರೆ ಅರಣ್ಯ ಗ್ರಾಮಸ್ಥರ ಪ್ರಯತ್ನದಿಂದ ಉಳಿದಿದೆ. ಅವರಿಗೆ ಸ್ಥಳೀಯವಾಗಿ ಪರಿಸರ ಜಾಗೃತಿ ಟ್ರಸ್ಟ್‌ನವರು ಬೆನ್ನೆಲುಬಾಗಿದ್ದಾರೆ.
ಸಾಗರ ತಾಲ್ಲೂಕಿನ ಯಲಕುಂದಲಿಯಲ್ಲಿ ಬೀರದೇವರ ಬನದ ರೂಪದಲ್ಲಿ 35 ಎಕರೆಯನ್ನು ಕಾರೇ ಹೊಂಡ ಅರಣ್ಯದ ಹೆಸರಿನಲ್ಲಿ ಉಳಿಸಿಕೊಂಡಿದ್ದಾರೆ. ದೇವರು ಸ್ವತ್ತು ಎಂಬ ಭಾವದಿಂದ ಅಲ್ಲಿಂದ ಒಂದು ಕಡ್ಡಿಯನ್ನು ಯಾರೂ ಹೊರೆಗೆ ಒಯ್ಯುವುದಿಲ್ಲ. ಹೀಗಾಗಿ ಆ ಜಾಗದಲ್ಲಿ ಅರಣ್ಯ ದಟ್ಟವಾಗಿದೆ.
ಉಳಿವಿ ಹೋಬಳಿಯ ಕರ್ಜಿಕೊಪ್ಪ, ಈಡೂರು ಮತ್ತು ಕುಂಟಗಳಲಿಯಲ್ಲಿ ಗ್ರಾಮ ಅರಣ್ಯ ಸಮಿತಿಯ ಒತ್ತಾಸೆಯಿಂದ ಕಾಡು ಉಳಿದಿದೆ. ಕೆರೆ, ಕುಂಟೆಗಳಲ್ಲಿ ಪ್ರಾಣಿಗಳು ಇಳಿದು ನೀರು ಕುಡಿಯುವ ವ್ಯವಸ್ಥೆ ಸ್ಥಳೀಯರು ಮಾಡಿದ್ದಾರೆ. ಅಲ್ಲಿಯೇ ಯಕ್ಷಿಯಲ್ಲಿ ಹುಲಿಯಪ್ಪ ದೇವರ ಬನದ ಹೆಸರಿನಲ್ಲಿ ಅಲ್ಲಿನ ಕೃಷಿಕರು ಅರಣ್ಯ ಉಳಿಸಿಕೊಂಡಿದ್ದಾರೆ. ವರ್ಷಕ್ಕೊಮ್ಮೆ ಹುಲಿಯಪ್ಪನ ಆರಾಧನೆ ಕೂಡ ಮಾಡುತ್ತಾರೆ. ಅಲ್ಲಿಯೇ ರಸ್ತೆಗೆ ಅಂಟಿಕೊಂಟಂತೆ ಮಾಸ್ತಿಯ ಆರಾಧನೆ ನಡೆಯುತ್ತದೆ. ಉಳವಿ ಹೋಬಳಿ ಹುನವಳ್ಳಿಯಲ್ಲಿ ಹುಲಿಯಪ‍್ಪನ ಕಣಿವೆ 600 ಎಕರೆಗೂ ಹೆಚ್ಚು ವಿಸ್ತಾರ ಹೊಂದಿದೆ. ಸಾಗರ ತಾಲ್ಲೂಕಿನ ಬರೂರು ಗುಡ್ಡ ಶ್ರೇಣಿಯಲ್ಲಿ ಸ್ಥಳೀಯರ ಪ್ರಯತ್ನದಿಂದ ನಿತ್ಯಹರಿದ್ವರ್ಣ ಕಾಡು ಉಳಿದುಕೊಂಡಿದೆ. ಹಳೇ ಸೊರಬ ದೇವರ ಕಾಡು ಪಾರಂಪರಿಕ ಅರಣ್ಯ ಎಂದು ಗುರುತಿಸುವಲ್ಲೂ ಸ್ಥಳೀಯರ ಕಾಳಜಿ ಕಾಣಸಿಗುತ್ತದೆ.
ಕಾಡು ಬೆಳೆಸಬಹುದು, ಕಡಿಯುವಂತಿಲ್ಲ, ಮರಗಳ್ಳತನಕ್ಕೆ ಅವಕಾಶವೇ ಇಲ್ಲ, ಸೌದೆಗೂ ಅರಣ್ಯಕ್ಕೆ ಹೊಗುವಂತಿಲ್ಲ...ಇದು ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆಗಳಲ್ಲಿ ಗ್ರಾಮಸ್ಥರೇ ತಮಗೆ ತಾವೇ ನಿಯಮ ಮಾಡಿಕೊಂಡು ಅರಣ್ಯ ರಕ್ಷಣೆ ಮಾಡುತ್ತಿರುವ ಪರಿ.
ಈ ರೀತಿ ಅರಣ್ಯ ರಕ್ಷಣೆಯನ್ನು ಗ್ರಾಮಸ್ಥರೇ ಮಾಡುತ್ತಿರುವ ಹಲವು ಉದಾಹರಣೆಗಳು ಕೊಪ್ಪ ತಾಲ್ಲೂಕಿನಲ್ಲಿವೆ. 25 ವರ್ಷಗಳ ಹಿಂದಿನಿಂದಲೂ ಅರಣ್ಯ ಸಮಿತಿಗಳು ಅಸ್ಥಿತ್ವದಲ್ಲಿದ್ದು, ಇಂದಿಗೂ ಅರಣ್ಯವನ್ನು ಕಾಪಿಡುತ್ತಿವೆ. ಕೊಪ್ಪ ತಾಲ್ಲೂಕಿನಲ್ಲಿ ಸದ್ಯ 14 ಗ್ರಾಮ ಅರಣ್ಯ ಸಮಿತಿಗಳಿವೆ. ಅರಣ್ಯದ ಅಂಚಿನಲ್ಲಿರುವ ಸುತ್ತಮುತ್ತಲ ಎರಡು–ಮೂರು ಗ್ರಾಮಗಳು ಸೇರಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಒಂದೊಂದು ಗ್ರಾಮ ಅರಣ್ಯ ಸಮಿತಿ ರಚನೆ ಮಾಡಿಕೊಂಡಿವೆ.
ಕುಮಟಾ ತಾಲ್ಲೂಕಿನ ಹಳಕಾರ ಗ್ರಾಮದ ಅರಣ್ಯವನ್ನು ನಿರಂತರವಾಗಿ ಕಾಯುವ ಗ್ರಾಮ ಅರಣ್ಯ ಪಂಚಾಯಿತಿಯ ಸದಸ್ಯರು
ಸಮಿತಿಗೆ ಊರಿನ ಎಲ್ಲರೂ ಸದಸ್ಯರಾಗಿದ್ದು, ಸದಸ್ಯರೇ ಸೇರಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ. ವಲಯ ಅರಣ್ಯ ಅಧಿಕಾರಿ ಈ ಸಮಿತಿಗೆ ಕಾರ್ಯದರ್ಶಿ ಆಗಿರುತ್ತಾರೆ. ತಮ್ಮ ಸುತ್ತಮುತ್ತಲಿನ ವ್ಯಾಪ್ತಿಯ ಅರಣ್ಯವನ್ನು ಕಾಪಾಡುವುದು ಈ ಸಮಿತಿಯ ಮೊದಲ ಕೆಲಸ. ಸಸಿ ನೆಡುವುದು, 20 ವರ್ಷಗಳ ಬಳಿಕ ಕಡಿತಲೆಗೆ ಬರುವ ಮರಗಳನ್ನು ಕಟಾವು ಮಾಡುವುದು, ಮರಗಳನ್ನು ಸೌದೆಗಾಗಿ ಕಡಿಯದಂತೆ ನೋಡಿಕೊಳ್ಳುವುದು, ಸೋಲಾರ್ ಲೈಟ್‌ಗಳನ್ನು ವಿತರಿಸುವುದು, ಗ್ಯಾಸ್ ಸ್ಟವ್‌ಗಳನ್ನು ವಿತರಿಸುವ ಮೂಲಕ ಅರಣ್ಯ ರಕ್ಷಣೆ ಮಾಡುತ್ತಿದ್ದಾರೆ. ನರ್ಸರಿ ಮೂಲಕ ಸಸಿ ಬೆಳಸಿ ಮಾರಾಟ ಮಾಡುವುದು, ಬೆಳೆಸಿದ ಅರಣ್ಯ ಕಡಿತಲೆಗೆ ಬಂದಾಗ ಸಮಿತಿ ಮೂಲಕವೇ ಕಟಾವು ಮಾಡಿಸುವುದು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದು, ಈ ಎಲ್ಲಾ ಕೆಲಸದಿಂದ ಬಂದ ಅದಾಯವನ್ನು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೇ ಉಪಯೋಗಿಸುವುದು ಸಮಿತಿಯ ಕೆಲಸ.
ಗ್ರಾಮದ ಎಲ್ಲರೂ ಸಮಿತಿ ಸದಸ್ಯರೇ ಆಗಿರುವುದರಿಂದ ಯಾರೊಬ್ಬರೂ ಕಾಡು ಕಡಿಯುವುದಿಲ್ಲ. ಮರಗಳ್ಳತನಕ್ಕೂ ಅವಕಾಶ ಕೊಡುವುದಿಲ್ಲ. ಎಲ್ಲರಿಗೂ ಈ ಕಾಡು ನಮ್ಮದು ಎಂಬ ಭಾವನೆ ಬೆಳೆದು ಹೋಗಿದೆ. ಈ ಕೆಲಸಗಳ ಮೂಲಕ ಸಮಿತಿಗೆ ಬಂದ ಎಲ್ಲಾ ಹಣವನ್ನೂ ಜಂಟಿ ಖಾತೆಗೆ ಜಮೆಯಾಗಲಿದ್ದು, ಉಪಅರಣ್ಯ ಸಂರಕ್ಷಣಾಧಿಕಾರಿಯ ಅನುಮತಿ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.
ಹಿರೇಕೂಡಿಗೆ ಮತ್ತು ಗೋಳಾಪುರ ಗ್ರಾಮಸ್ಥರು ಸೇರಿ ಕವಿಶೈಲ ಹೆಸರಿನಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಿಕೊಂಡಿದ್ದಾರೆ. 25 ವರ್ಷಗಳಿಂದ ಈ ಸಮಿತಿ ಸಕ್ರಿಯವಾಗಿದೆ. ಸಮಿತಿಯಲ್ಲಿ 160 ಸದಸ್ಯರಿದ್ದು, ಯಾರೊಬ್ಬರು ಅರಣ್ಯ ನಾಶ ಮಾಡದಂತೆ ಈ ಸಮಿತಿ ನೋಡಿಕೊಳ್ಳುತ್ತಿದೆ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿದರೆ ಅದನ್ನೂ ಸಮಿತಿಗೇ ಒಪ್ಪಿಸಬೇಕು ಎಂಬ ನಿಯಮಗಳನ್ನು ಮಾಡಿಕೊಂಡಿದೆ.
‘20 ವರ್ಷದ ನಂತರ ಕಡಿತಲೆ ಆಗಬೇಕಿರುವ ಮರಗಳಿದ್ದರೆ ಸಮಿತಿ ಸಭೆ ನಡೆಸಿ, ನಿರ್ಧರಿಸುತ್ತದೆ. ಇದರಿಂದ ಬಂದ ಆದಾಯದಲ್ಲಿ ಗ್ರಾಮದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಸದ್ಯ ಸೌರಶಕ್ತಿ ವಿತರಿಸಲಾಗಿದೆ. ಅಡಿಕೆ ಬೇಯಿಸುವ ಸೌದೆಯನ್ನು ಹೆಚ್ಚು ಬಳಸಬೇಕಾಗುತ್ತದೆ. ಅದರ ಬದಲಿಗೆ ಅಡಿಕೆ ಒಲೆಗಳನ್ನು ತರಿಸಿ ಕೊಡಲಾಗಿದೆ. ಇದರಿಂದ ಸೌದೆ ಬಳಕೆಗೆ ಕಡಿವಾಣ ಬಿದ್ದಿದೆ’ ಎಂದು ಸಮಿತಿಯ ಅಧ್ಯಕ್ಷ ಎಚ್.ಕೆ.ವಿಶ್ವನಾಥ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಭರಣಿ ಗ್ರಾಮದಲ್ಲಿ ಅರಣ್ಯದ ಅಂಚಿನಲ್ಲಿ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ
‘ಸಮಿತಿಯಲ್ಲಿ ಈಗ ₹25 ಲಕ್ಷಕ್ಕೂ ಹೆಚ್ಚು ಹಣ ಇದೆ. ತಿಂಗಳಿಗೊಮ್ಮೆ ಸಭೆ ನಡೆಯಲಿದ್ದು, ಅಲ್ಲಿ ಎಲ್ಲಾ ವಿಷಯವೂ ಚರ್ಚೆಯಾಗಲಿದೆ. ಸಮುದಾಯ ಭವನ ಅಭಿವೃದ್ಧಿ ಮಾಡಬೇಕೆಂಬ ಆಲೋಚನೆ ಇದೆ. ಹಣಕಾಸಿನ ವ್ಯವಹಾರವೆಲ್ಲವೂ ಅರಣ್ಯ ಇಲಾಖೆ ಅಧಿಕಾರಿಗಳ ಜಂಟಿ ಖಾತೆ ಮೂಲಕವೇ ನಡೆಯುತ್ತಿದೆ. ಸಹಕಾರ ಸಂಘಗಳ ಮಾದರಿಯಲ್ಲಿ ಲೆಕ್ಕಪರಿಶೋಧನೆಯೂ ನಡೆಯುತ್ತದೆ. ಸಮಿತಿಯಿಂದ ಅರಣ್ಯವೂ ಉಳಿದಿದೆ. ಅರಣ್ಯದಿಂದ ಗ್ರಾಮ ಅಭಿವೃದ್ಧಿಯನ್ನೂ ಕಂಡಿದೆ’ ಎಂದು ವಿವರಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕೆಲವು ಊರುಗಳಲ್ಲಿ ನಾಗರ ಬನಗಳು ಹಾಗೂ ದೇವರಕಾಡುಗಳು ಕಾಣ ಸಿಗುತ್ತವೆ. ಇವುಗಳನ್ನು ನೂರಾರು ವರ್ಷಗಳಿಂದ ಸ್ಥಳೀಯರೇ ಕಾಪಾಡಿಕೊಂಡು ಬರುತ್ತಿದ್ದಾರೆ. ಸಾಮಾನ್ಯವಾಗಿ ವರ್ಷದಲ್ಲಿ ಒಂದೆರಡು ದಿನ ಮಾತ್ರ ಧಾರ್ಮಿಕ ಆಚರಣೆಗಳಿಗಾಗಿ ನಾಗರ ಬನ ಅಥವ ದೇವರ ಕಾಡುಗಳಿಗೆ ಪ್ರವೇಶ. ಉಳಿದ ಅಷ್ಟೂ ದಿನಗಳು ಇವುಗಳಿಗೆ ಮಾನವ ಹಸ್ತಕ್ಷೇಪ ಇರುವುದಿಲ್ಲ. ಇಲ್ಲಿ ಜೀವ ಜಂತುಗಳು ಪಶುಪಕ್ಷಗಳು ಸ್ವಚ್ಛಂದವಾಗಿರುತ್ತವೆ. ಕೆಲವು ದೇವರ ಕಾಡುಗಳ ಬಳಿ ಅಪರೂಪದ ಪ್ರಾಣಿ ಹಾಗೂ ಪಕ್ಷಿಗಳ ಪ್ರಬೇಧಗಳು ಇರುವುದು ಅಧ್ಯಯನಗಳಲ್ಲೂ ದಾಖಲಾಗಿದೆ.
ಅನವಶ್ಯಕ ಅಭಿವೃದ್ಧಿಗೆ ಕಡಿವಾಣ ಹಾಕಿದರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಶಿಸುತ್ತಿರುವ ಕಾಡಿಗೆ ಕಡಿವಾಣ ಹಾಕಬಹುದು. ಇದರ ಜೊತೆಯಲ್ಲಿ ಅರಣ್ಯ ಇಲಾಖೆ ಮತ್ತು ಕಾಡಿನ ಮಡಿಲಿನಲ್ಲಿರುವ ಗ್ರಾಮಸ್ಥರು ಮನಸ್ಸು ಮಾಡಿದರೆ ಹಸಿರು ಉಳಿಸುವುದು ಕಷ್ಟವೇನಲ್ಲ.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಣ್ಯ ವಿಭಾಗದ ವ್ಯಾಪ್ತಿಯ ಮಂಚಿಕೇರಿ ವಲಯ ವ್ಯಾಪ್ತಿಯ ಕುಂದರಗಿ ಉಮ್ಮಚಗೇರಿ ಭರಣಿ ಮತ್ತು ಹೆಮ್ಮಾಡಿ ಅರಣ್ಯ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಅವುಗಳ ವೆಚ್ಚವನ್ನು ಗ್ರಾಮ ಅರಣ್ಯ ಸಮಿತಿ ಭರಿಸಿದೆ. ಈ ಪ್ರದೇಶದಲ್ಲಿ ಬೆಲೆಬಾಳುವ ಸಾಗವಾನಿ ಮರಗಳು ಹೆಚ್ಚಿನ ಪ್ರಮಾಣದಲ್ಲಿವೆ. ಕೆಲ ವರ್ಷಗಳ ಹಿಂದೆ ಮರ ಕಳ್ಳತನ ಪ್ರಕರಣ ಹೆಚ್ಚಿತ್ತು ಎಂಬುದಾಗಿ ಸ್ಥಳಿಯರು ಹಾಳುತ್ತಾರೆ. ಅವುಗಳ ತಡೆಗೆ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ.
‘ಬೆಲೆಬಾಳುವ ಮರಗಳನ್ನು ಕಳವು ಮಾಡುವ ಕೆಲಸ ಹಲವು ವರ್ಷಗಳ ಹಿಂದೆ ಜೋರಾಗಿತ್ತು. ಈಗ ಜನಜಾಗೃತಿ ಮೂಡಿದೆ. ಆದರೂ ದಿಢೀರ್ ಹಣ ಮಾಡುವ ಹಂಬಲದಿಂದ ಮರಗಳನ್ನು ಕಳವು ಮಾಡುವ ಕೃತ್ಯ ನಡೆಯುವ ಸಾಧ್ಯತೆ ಅಲ್ಲಗಳೆಯಲಾಗದು. ಹೀಗಾಗಿ ನಿಗಾ ಇಡಲು ಗ್ರಾಮ ಅರಣ್ಯ ಸಮಿತಿಯ ಲಾಭಾಂಶದಲ್ಲಿ ಸಿಸಿಟಿವಿ ಖರೀದಿಸಿ ಒದಗಿಸಲಾಗಿದೆ’ ಎಂದು ಭರಣಿ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ವಿನಾಯಕ ಭಟ್ಟ ತಿಳಿಸಿದರು.
‘ಭರಣಿ ಹೆಮ್ಮಾಡಿ ಗ್ರಾಮ ಅರಣ್ಯ ಸಮಿತಿಯ ನೆರವಿನಿಂದ ಕುಂದರಿ ಉಪ ವಲಯ ಅರಣ್ಯ ವ್ಯಾಪ್ತಿಯ 10 ಕಡೆಯಲ್ಲಿ ಸಿಸಿಟಿವಿ ಅಳವಡಿಕೆಯಾಗಿದೆ. ಸೌರಶಕ್ತಿಯಿಂದ ಅವು ನಿರ್ವಹಣೆ ಆಗುತ್ತವೆ. ಗ್ರಾಮದಲ್ಲಿ ಕೂಡು ರಸ್ತೆಗಳಿರುವ ಕಡೆ ಅರಣ್ಯ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿ ಅಳವಡಿಕೆ ಮಾಡಿದ್ದು ಕಾಡಿನ ಉತ್ಪನ್ನ ಒಯ್ಯದಂತೆ ನಿಗಾ ಇಡಲಾಗುತ್ತಿದೆ’ ಎಂದು ಕುಂದರಗಿ ಉಪ ವಲಯ ಅರಣ್ಯಾಧಿಕಾರಿ ಬಿ.ಎಂ.ಪಟಗಾರ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಶರಾವತಿ ನದಿಕಣಿವೆಯ ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಅರಣ್ಯ ಪ್ರದೇಶದ ಹುಳಕೋಡಿನಲ್ಲಿ ಗ್ರಾಮಸ್ಥರೇ ಮೂರು ದಶಕಗಳಿಂದ ಅಪರೂಪದ ‘ನೀರುನೇರಳೆ’ ಮರದ ಪ್ರಭೇದಗಳಿರುವ ಕಾಡಿನ ಸಂರಕ್ಷಣೆ ಮಾಡುತ್ತಿದ್ದಾರೆ.
ಎಡಜಿಗಳೆಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳಕೋಡು ಗ್ರಾಮದ ರಾಮೇಶ್ವರ ದೇವಸ್ಥಾನದ ಹಿಂಬದಿಯ 180 ಎಕರೆಯಷ್ಟು ವಿಶಾಲವಾದ ಕಾನು ಅರಣ್ಯದಲ್ಲಿ ವಿರಳವೂ ಆಗಿರುವ ‘ರಾಮಪತ್ರೆ ಜಡ್ಡಿ’ ಜೌಗುಗಳಿವೆ. ಇಲ್ಲಿ ತೀರಾ ವಿನಾಶದ ಅಂಚಿನಲ್ಲಿರುವ ನೀರುನೇರಳೆ ಮರಗಳೇ ಹೆಚ್ಚಿರುವದು ಈ ಜೌಗುಗಳ ಮಹತ್ವವನ್ನು ಇನ್ನೂ ಹೆಚ್ಚಿಸಿವೆ. ದಕ್ಷಿಣ ಭಾರತದಲ್ಲೇ ಕೆಲವೇ ಉಳಿದಿರುವ ನೈಸರ್ಗಿಕ ನೀರುನೇರಳೆ ಮರಗಳಿರುವ ತಾಣವನ್ನು ಗ್ರಾಮಸ್ಥರು ನಾಶವಾಗದಂತೆ ಕಾಪಿಟ್ಟುಕೊಂಡು ಬಂದಿದ್ದಾರೆ. 50 ಮೀಟರಿಗಿಂತ ಎತ್ತರದವರೆಗೆ ಬೆಳೆದ ಬೃಹದಾಕಾರದ ಮರಗಳೂ ಇಲ್ಲಿವೆ.
‘ಗ್ರಾಮ ಅರಣ್ಯ ಸಮಿತಿಗಳು ರಚನೆಯಾಗುವ ಮುಂಚಿನ ದಿನಗಳಿಂದಲೂ ಗ್ರಾಮಸ್ಥರೇ ಸೇರಿ ಅರಣ್ಯ ರಕ್ಷಣೆಯ ಕಾರ್ಯದಲ್ಲಿ ಸಕ್ರಿಯರಾಗಿದ್ದೆವು. ಗ್ರಾಮದ ರಾಮೇಶ್ವರ ದೇವಸ್ಥಾನದ ಹಿಂಬದಿಯಲ್ಲಿದ್ದ ಅರಣ್ಯವನ್ನು ದೇವರ ಕಾಡು ಎಂದು ಪರಿಗಣಿಸುತ್ತಲೇ ಆ ನಂಬಿಕೆಯೊಂದಿಗೆ ಕಾಡಿನ ಗಿಡ ಮರ ಕಡಿಯದಂತೆ ಸಂರಕ್ಷಿಸಲಾಗುತ್ತಿದೆ. ಪಶ್ಚಿಮ ಘಟ್ಟ ಕಾರ್ಯಪಡೆಯ ನೆರವಿನಿಂದ 2010ರಲ್ಲಿ ಕಾಡಿನಲ್ಲಿ ಒತ್ತುವರಿ ನಾಶ ತಡೆಗೆ ಕಾಲುವೆ ನಿರ್ಮಿಸಲಾಯಿತು’ ಎಂದು ಅರಣ್ಯ ಸಂರಕ್ಷಣೆಯಲ್ಲಿ ಮುಖ್ಯಪಾತ್ರವಹಿಸಿರುವ ಆನೆಗೋಳಿ ಸುಬ್ಬರಾವ್ ತಿಳಿಸಿದರು.
‘ಗಿಡಮರಗಳ ಸಂರಕ್ಷಣೆಯಾಗಿರುವ ಕಾರಣಕ್ಕೆ ಕಾಡಿನ ಜೌಗು ಪ್ರದೇಶದಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಗರಿಷ್ಠ ಮಟ್ಟದಲ್ಲಿದೆ. ಇಲ್ಲಿಂದ ಚಿಕ್ಕ ಝರಿಯೊಂದು ಸದಾ ಕೆಳಮುಖವಾಗಿ ಹರಿಯುತ್ತಿದ್ದು ಹುಳಕೋಡು ಗ್ರಾಮಕ್ಕೆ ವರ್ಷದುದ್ದಕ್ಕೂ ನೀರು ಪೂರೈಸುತ್ತಿದೆ’ ಎಂದರು.
ಶಿವಮೊಗ್ಗ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿರುವ ‘ಕಾನು’ (ಕಂದಾಯ ಇಲಾಖೆ ಜಾಗದ ವ್ಯಾಪ್ತಿಯಲ್ಲಿರುವ ಅರಣ್ಯ) ಸಂರಕ್ಷಣೆಗೆ ಈ ಹಿಂದೆ ನೀಡಲಾಗುತ್ತಿದ್ದ ಅನುದಾನವನ್ನು ರಾಜ್ಯ ಸರ್ಕಾರ ಈಚಿನ ವರ್ಷದಲ್ಲಿ ಬಿಡುಗಡೆ ಮಾಡಿಲ್ಲ ಎಂಬ ಆರೋಪಗಳಿವೆ.
2010 ರಿಂದ 2013ರ ಅವಧಿಯಲ್ಲಿ ಪಶ್ಚಿಮ ಘಟ್ಟ ಕಾರ್ಯಪಡೆಯು ಕಾನು ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ಜಾರಿಗೆ ತಂದಿತ್ತು. ಕಾನುಗಳಲ್ಲಿ ಸಸಿಗಳ ನಾಟಿ ಬೆಂಕಿರೇಖೆ ರಚನೆ ಒತ್ತುವರಿ ಆಗದಂತೆ ಆಗಳ ನಿರ್ಮಾಣ ಸೇರಿ ಹಲವು ಕ್ರಮಗಳಿಗೆ ಅನುದಾನ ಬಳಕೆ ಆಗುತ್ತಿತ್ತು.
‘ನಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ಕಾನು ಸಂರಕ್ಷಣೆ ಯೋಜನೆ ಜಾರಿಗೆ ತಂದು ಅನುದಾನವನ್ನೂ ಒದಗಿಸಲಾಗಿತ್ತು. ಐದು ವರ್ಷಗಳಿಂದ ಈ ಯೋಜನೆಗೆ ಅನುದಾನವನ್ನು ಸರ್ಕಾರ ಒದಗಿಸಿಲ್ಲ ಎಂಬ ಮಾಹಿತಿ ಇದೆ. ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಕಾನುಗಳ ಸಂರಕ್ಷಣೆ ಅತಿ ಮಹತ್ವದ್ದಾಗಿದೆ. ಹೀಗಾಗಿ ಅನುದಾನ ಬಿಡುಗಡೆಗೆ ವಿಳಂಬ ಮಾಡಬಾರದು’ ಎಂದು ಪಶ್ಚಿಮ ಘಟ್ಟ ಕಾರ್ಯಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಆಗ್ರಹಿಸಿದರು.
ಸ್ಥಳೀಯ ಜನರು ಒಂದಾಗಿ ಕೆಲಸ ಮಾಡಿದರೆ ಪಶ್ಚಿಮಘಟ್ಟದ ಸಮೃದ್ಧ ಕಾಡನ್ನು ಯಶಸ್ವಿಯಾಗಿ ಸಂರಕ್ಷಿಸಲು ಸಾಧ್ಯ. ಅರಣ್ಯ ಇಲಾಖೆಯ ‘ಜಂಟಿ ಅರಣ್ಯ ನಿರ್ವಹಣೆ’ ಹಾಗೂ ’ಸಾಮಾಜಿಕ ಅರಣ್ಯ’ ಯೋಜನೆಗಳು ಜನರ ಸಹಯೋಗದಿಂದ ಕಾಡನ್ನು ರಕ್ಷಿಸಬಹುದು.ಕೇಶವ ಎಚ್.ಕೊರ್ಸೆ, ಶಿರಸಿ ಸಂರಕ್ಷಣಾ ಜೀವಶಾಸ್ತ್ರಜ್ಞ
ಕಾಡನ್ನು ಅರಣ್ಯ ಇಲಾಖೆಯೊಂದೇ ರಕ್ಷಿಸುವುದಿಲ್ಲ. ಸ್ಥಳೀಯ ಗ್ರಾಮಸ್ಥರು ಕಾಡಂಚಿನಲ್ಲಿ ವಾಸವಿರುವ ಜನರಿಗೆ ಊರಿನ ಕಾಡಿನ ಬಗ್ಗೆ ಗೌರವ ಮತ್ತು ಹೆಮ್ಮೆ ಇದ್ದೇ ಇರುತ್ತದೆ. ಅವರು ಕೂಡ ಅರಣ್ಯ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.ಸುರೇಶ ಹೆಬ್ಳಿಕರ್, ಪರಿಸರವಾದಿ
ಶಿವಮೊಗ್ಗ ಜಿಲ್ಲೆಯ ಕಂದಾಯ ಅರಣ್ಯಗಳು ವಿನಾಶದ ಅಂಚಿನಲ್ಲಿವೆ. ಅವುಗಳ ಸಂರಕ್ಷಣೆ ಜೊತೆಗೆ ಭದ್ರಾವತಿಯಲ್ಲಿರುವ ಎಂಪಿಎಂ ಕಾರ್ಖಾನೆ ಕೆಪಿಸಿ ಸುಪರ್ದಿಯಲ್ಲಿರುವ ಅರಣ್ಯ ಭೂಮಿಯನ್ನು ಸರ್ಕಾರ ವಶಕ್ಕೆ ಪಡೆದು ಜನರ ಸಹಭಾಗಿತ್ವದಲ್ಲಿ ಸಂರಕ್ಷಣೆ ಆಗಬೇಕು.ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ವೃಕ್ಷಲಕ್ಷ ಆಂದೋಲನ ಸಮಿತಿ
ಹಳಕಾರ ಗ್ರಾಮ ಅರಣ್ಯ ಪಂಚಾಯಿತಿಯ ಗಡಿ ಅಂತಿಮಗೊಳಿಸಲು ಸರ್ವೆ ನಡೆಸಿ ಅರಣ್ಯ ಅಂಚಿಗೆ ಸಂರಕ್ಷಣೆ ಉದ್ದೇಶದಿಂದ ಕಾಂಪೌಂಡ್ ನಿರ್ಮಿಸಲು ಸರ್ಕಾರ ಅನುದಾನ ನೀಡಬೇಕು. ಹಳೆಯ ಕಾಲುವೆಯಿಂದ ಸದ್ಯ ಅರಣ್ಯ ಒತ್ತುವರಿಗೆ ಅವಕಾಶ ಆಗುತ್ತಿಲ್ಲ.ನಾಗರಾಜ ಭಟ್ಟ, ಅಧ್ಯಕ್ಷ, ಹಳಕಾರ ಗ್ರಾಮ ಅರಣ್ಯ ಪಂಚಾಯಿತಿ
ಮಂಚಿಕೇರಿ ವಲಯ ಅರಣ್ಯ ವ್ಯಾಪ್ತಿಯ ಭರಣಿ ಹೆಮ್ಮಾಡಿ ವ್ಯಾಪ್ತಿಯಲ್ಲಿ ಕಾಡಿನಲ್ಲಿ ಸಿಸಿಟಿವಿ ಅಳವಡಿಸಿ ಮರಕಳವು ನಡೆಯದಂತೆ ಕಣ್ಗಾವಲಿಡಲಾಗಿದೆ. ತಂತ್ರಜ್ಞಾನ ಬಳಕೆ ಮಾಡಿ ಕಾಡು ಸಂರಕ್ಷಣೆಗೆ ಇದು ಮುನ್ನುಡಿಯಾಗಿದೆ.ಹರ್ಷ ಬಾನು, ಯಲ್ಲಾಪುರ ಡಿಸಿಎಫ್
ಗ್ರಾಮ ಅರಣ್ಯವನ್ನು ಹಗಲು ರಾತ್ರಿ ಪಾಳಿ ಆಧಾರದಲ್ಲಿ ಕಾವಲು ಕಾಯುತ್ತೇವೆ. ಇದಕ್ಕಾಗಿ ಯಾವುದೇ ಹಣ ಪಡೆಯುವುದಿಲ್ಲ. ಮರಗಿಡಗಳ ಸಂರಕ್ಷಿಸುವುದು ಪೂರ್ವಜರಿಂದಲೂ ನಡೆದುಕೊಂಡು ಬಂದ ಜವಾಬ್ದಾರಿ.ಅನಂತ ಪಟಗಾರ, ಹಳಕಾರ ಗ್ರಾಮಸ್ಥ
ಮೂರು ದಶಕಗಳ ಹಿಂದೆ ದೊಡ್ಡ ಮರಗಳನ್ನೊಳಗೊಂಡ ಕಾಡಿನಲ್ಲಿ ನೀರುನೇರಳೆ ರಾಮಪತ್ರೆ ಮರಗಳು ವಿನಾಶದ ಅಂಚಿನಲ್ಲಿದ್ದವು. ಆಗ ಗ್ರಾಮಸ್ಥರೆಲ್ಲ ಸಂಘಟಿತಗೊಂಡು ಸಂರಕ್ಷಣೆ ಮಾಡಿದ ಫಲವಾಗಿ ಸಮೃದ್ಧ ಅರಣ್ಯ ಇಂದಿಗೂ ಉಳಿದುಕೊಂಡಿದೆ. ಇಡೀ ಗ್ರಾಮಕ್ಕೆ ವರ್ಷಾವಧಿ ಸಾಲುವಷ್ಟು ನೀರು ಕಾಡಿನಿಂದ ಹರಿಯುವ ತೊರೆಯಿಂದ ಸಿಗುತ್ತಿದೆ.ಆನೆಗೋಳಿ ಸುಬ್ಬ ರಾವ್, ಹುಳಕೋಡು ಗ್ರಾಮಸ್ಥ
ಪೂರಕ ಮಾಹಿತಿ: ವೆಂಕಟೇಶ್ ಜಿ.ಎಚ್., ವಿಜಯಕುಮಾರ್ ಎಸ್.ಕೆ.
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.