ADVERTISEMENT

ಡಯಾಲಿಸಿಸ್‌: ಕೆ.ಆರ್. ಆಸ್ಪತ್ರೆಯ ಮೇಲೆ ಹೆಚ್ಚಿದ ಅವಲಂಬನೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:45 IST
Last Updated 16 ಜನವರಿ 2021, 19:45 IST
ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ನಾರಾಯಣಗೌಡ ಡಯಾಲಿಸಿಸ್ ಮತ್ತು ಐಸಿಯು ಘಟಕಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಿದ್ದರು
ಕೆ.ಆರ್.ಪೇಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಾಸಕ ನಾರಾಯಣಗೌಡ ಡಯಾಲಿಸಿಸ್ ಮತ್ತು ಐಸಿಯು ಘಟಕಕ್ಕೆ ಎರಡು ವರ್ಷಗಳ ಹಿಂದೆ ಚಾಲನೆ ನೀಡಿದ್ದರು   

ಮೈಸೂರು/ಮಂಡ್ಯ: ಹಾಸನ, ಮಡಿಕೇರಿ, ಮಂಡ್ಯ, ಚಾಮರಾಜನಗರ ಜಿಲ್ಲಾ ಆಸ್ಪತ್ರೆ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್‌ ಕೇಂದ್ರಗಳಿದ್ದರೂ ಅಲ್ಲಿಯ ಬಹುತೇಕ ರೋಗಿಗಳು ಮೈಸೂರಿನ ಕೆ.ಆರ್‌.ಆಸ್ಪತ್ರೆಯಲ್ಲಿರುವ ಘಟಕಗಳನ್ನೇ ಅವಲಂಬಿಸಿದ್ದಾರೆ.

ಕೆ.ಆರ್.ಆಸ್ಪತ್ರೆಯ ಡಯಾಲಿಸಿಸ್ ಘಟಕದಲ್ಲಿ ನಿತ್ಯ 20ರಿಂದ 25 ಮಂದಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದಾರೆ. ಜೊತೆಗೆ, ಆಸ್ಪತ್ರೆಯಲ್ಲೇ ಇರುವ ಇನ್‌ಸ್ಟಿಟ್ಯೂಟ್‌ ಆಫ್ ನೆಫ್ರೊ–ಯೂರಾಲಜಿಗೆ ಸೇರಿದ ಡಯಾಲಿಸಿಸ್‌ ಘಟಕದಲ್ಲಿ ನಿತ್ಯ 50ರಿಂದ 60 ಮಂದಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ, ಕೊಡಗು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳ ಕೋವಿಡ್‌ ರೋಗಿಗಳು ಡಯಾಲಿಸಿಸ್ ಅಗತ್ಯವಾದರೆ ಇಲ್ಲಿಗೇ ಬರಬೇಕಿದೆ. ಹೀಗಾಗಿ ಈ ಆಸ್ಪತ್ರೆಯ ಮೇಲೆ ಹೆಚ್ಚು ಒತ್ತಡವಿದೆ.

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಮೂತ್ರಪಿಂಡ ಸಮಸ್ಯೆಯಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಆದರೆ ಮಡಿಕೇರಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದಲ್ಲಿ ಡಯಾಲಿಸಿಸ್‌ ಯಂತ್ರ ಹಾಗೂ ಇತರ ಪರಿಕರಗಳ ಕೊರತೆಯಿದ್ದು, ರೋಗಿಗಳು ತಮ್ಮ ಹೆಸರು ನೋಂದಣಿ ಮಾಡಿಸಿಕೊಳ್ಳುವುದೇ ಕಷ್ಟವಾಗಿದೆ. ಹೀಗಾಗಿ ಜನರು ದುಬಾರಿ ಶುಲ್ಕ ತೆತ್ತು ಖಾಸಗಿ ಆಸ್ಪತ್ರೆಗಳ ಮೊರೆಹೋಗುತ್ತಿದ್ದಾರೆ.

ADVERTISEMENT

ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ 15 ಯಂತ್ರಗಳಿದ್ದು, ನಿತ್ಯ 30 ಮಂದಿ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಾರೆ. ಆಲೂರು ತಾಲ್ಲೂಕಿನಲ್ಲಿ ಈ ಸೌಲಭ್ಯವಿಲ್ಲದ ಕಾರಣ ರೋಗಿಗಳು ಜಿಲ್ಲಾ ಆಸ್ಪತ್ರೆಗೇ ಬರುತ್ತಾರೆ. ಅರಕಲಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ಪೂರೈಸುತ್ತಿಲ್ಲವಾದ್ದರಿಂದ, ಹೊರಗಿನಿಂದ ಔಷಧ ತರುವ ಪರಿಸ್ಥಿತಿ ಇದೆ.

ಮಂಡ್ಯದ ಹಿರಿಯ ಸಾಹಿತಿ, ಗಾಂಧಿವಾದಿ ಸೀತಾಸುತ (ಪುಟ್ಟಚ್ಚಿ ಸಿದ್ದೇಗೌಡ) ಅವರ ಮಕ್ಕಳು, ಜಿಲ್ಲಾ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಕೇಂದ್ರದ ಕಟ್ಟಡ ಕಟ್ಟಿಸಿಕೊಟ್ಟಿದ್ದಾರೆ. ಜೊತೆಗೆ 2 ಯಂತ್ರಗಳನ್ನೂ ಕೊಡಿಸಿದ್ದಾರೆ. ಇಲ್ಲಿ ಒಟ್ಟು 19 ಯಂತ್ರಗಳಿವೆ, ಆದರೆ ಜಾಗದ ಕೊರತೆಯಿಂದ ಎಲ್ಲಾ ಯಂತ್ರಗಳ ಸೇವೆ ಪಡೆಯಲು ಸಾಧ್ಯವಾಗುತ್ತಿಲ್ಲ.

ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 6 ಯಂತ್ರಗಳಿದ್ದು, ಮೂರು ಪಾಳಿಯಲ್ಲಿ ಡಯಾಲಿಸಿಸ್‌ ಮಾಡಲಾಗುತ್ತಿದೆ. ಕೊಳ್ಳೇಗಾಲ ತಾಲ್ಲೂಕು ಆಸ್ಪತ್ರೆಯಲ್ಲಿ 5 ಯಂತ್ರಗಳಲ್ಲಿ ಒಂದು ಕೆಟ್ಟಿದೆ. ಗುಂಡ್ಲುಪೇಟೆ ಆಸ್ಪತ್ರೆಯಲ್ಲಿ ಮೂರು ಯಂತ್ರಗಳಿವೆ.

***

ಚಾಮರಾಜನಗರ, ಮಂಡ್ಯ, ಕೊಡಗು ಜಿಲ್ಲೆಗಳಿಂದಲೂ ಕೆ.ಆರ್. ಆಸ್ಪತ್ರೆಗೆ ಡಯಾಲಿಸಿಸ್‌ಗಾಗಿ ರೋಗಿಗಳು ಬರುತ್ತಾರೆ. ಇಲ್ಲಿಯವರೆಗೆ ಒಟ್ಟು 116 ಮಂದಿ ಕೋವಿಡ್ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗಿದೆ.

– ಕೆ.ಆರ್. ಆಸ್ಪತ್ರೆಯ ಮೂತ್ರಪಿಂಡ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.