ADVERTISEMENT

ಒಳನೋಟ: ಮುಕ್ಕಾದ ಇತಿಹಾಸದ ಕೊಂಡಿ

ಅನುದಾನ ಕೊರತೆ– ಪಾಳು ಬಿದ್ದ ಪುರಾತನ ಸ್ಮಾರಕಗಳ ಪುನಶ್ಚೇತನ ಕಾರ್ಯ ವಿಳಂಬ

ಎಂ.ಜಿ.ಬಾಲಕೃಷ್ಣ
Published 1 ಮಾರ್ಚ್ 2025, 19:11 IST
Last Updated 1 ಮಾರ್ಚ್ 2025, 19:11 IST
<div class="paragraphs"><p>ಹಂಪಿ ಬಜಾರ್‌ನ ಸಾಲುಮಂಟಪಗಳ ಇಂದಿನ ಸ್ಥಿತಿ&nbsp; </p></div>

ಹಂಪಿ ಬಜಾರ್‌ನ ಸಾಲುಮಂಟಪಗಳ ಇಂದಿನ ಸ್ಥಿತಿ 

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ಹಂಪಿ ಉತ್ಸವಕ್ಕೆ ಸಿದ್ಧತೆಗಳು ನಡೆದಿರುವಾಗಲೇ ಫ್ರಾನ್ಸ್‌ನಿಂದ ನಾಲ್ವರು ಮಹಿಳಾ ಪ್ರವಾಸಿಗರು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಹಂಪಿಗೆ ಬಂದಿದ್ದರು. ವಿರೂಪಾಕ್ಷ ದೇವಸ್ಥಾನ, ಸಾಲು ಮಂಟಪಗಳು, ಎದುರು ಬಸವಣ್ಣ ಮಂಟಪ ನೋಡಿಕೊಂಡು ಅಚ್ಯುತರಾಯ ದೇವಸ್ಥಾನ ನೋಡಿದ ಸ್ವಾಸ್ವಾಸ್ ಮತ್ತು ಸೆಲ್ವಿ ಅವರಿಗೆ ಮೂತ್ರ ವಿಸರ್ಜಿಸುವ ತುರ್ತು ಎದುರಾಯಿತು. ಸುತ್ತಮುತ್ತ ಎಲ್ಲೂ ಶೌಚಾಲಯ ಇಲ್ಲ. ಗೈಡ್‌ ಮುಖ ಬಿಳಿಚಿಕೊಂಡಿತು. ಈ ಒಂದು ಕಾರಣಕ್ಕೆ ಭಾರತದ ಮಾನ ಕಳೆಯುವುದು ಅವರಿಗೆ ಬೇಕಿರಲಿಲ್ಲ. ಬನ್ನಿ ಇಲ್ಲೇ ಮುಂದೆ ಶೌಚಾಲಯ ಇದೆ ಎಂದು ಹೇಳುತ್ತ, ಮಾತನಾಡುತ್ತ, ಪಕ್ಕದಲ್ಲಿದ್ದ ಇತರ ಸ್ಮಾರಕಗಳನ್ನು ತೋರಿಸದೆ ಸುಮಾರು ಎರಡು ಕಿಲೋಮೀಟರ್ ನಡೆಸಿ ವಿಜಯ ವಿಠ್ಠಲ ದೇವಸ್ಥಾನ ಬಳಿಯ ಶೌಚಾಲಯ ತೋರಿಸಿದರು!

ADVERTISEMENT

ಅಮೆರಿಕದ ದಂಪತಿ ತಿಂಗಳ ಹಿಂದೆ ಹಂಪಿಗೆ ಪ್ರವಾಸ ಬಂದಿದ್ದರು. ರಾಣಿ ಸ್ನಾನಗೃಹದ ಬಳಿ ಇರುವ ಶೌಚಾಲಯಕ್ಕೆ ತೆರಳಲು ಬಯಸಿದ್ದರು. ಅಂದು ನೀರಿಲ್ಲದ ಕಾರಣ ಶೌಚಾಲಯ ಬಂದ್ ಆಗಿತ್ತು. ಅವರು ಮತ್ತೆ ಕಮಲಾಪುರದಲ್ಲಿ ತಾವು ಉಳಿದುಕೊಂಡಿದ್ದ ಹೋಟೆಲ್‌ಗೆ ತೆರಳಿ ದೇಹಬಾಧೆ ತೀರಿಸಿಕೊಂಡು ಬರಬೇಕಾಯಿತು.

ಇದು ನಿತ್ಯ ಹಂಪಿಯಲ್ಲಿ ಪ್ರವಾಸಿಗರು ಎದುರಿಸುತ್ತಿರುವ ಸಮಸ್ಯೆ. ಸುಮಾರು 10 ಚದರ ಕಿಲೋಮೀಟರ್ ಸ್ಥಳದಲ್ಲಿ ಹಂಪಿಯ ಪ್ರಮುಖ ಸ್ಮಾರಕಗಳು ಚಾಚಿಕೊಂಡಿವೆ. ಇವುಗಳನ್ನು ಒಂದು ದಿನದಲ್ಲಿ ನೋಡಿಬಿಡುವುದು ಬಹಳ ಕಷ್ಟ. ಇಷ್ಟು ವಿಶಾಲ ಸ್ಥಳದಲ್ಲಿ ಇರುವ ಶೌಚಾಲಯಗಳು ಸಂಖ್ಯೆ ಐದು ಮಾತ್ರ. ಇನ್ನೂ ಒಂದೆರಡು ಕಡೆ ನಿರ್ವಹಣೆ ಇಲ್ಲದೆ ಮುಚ್ಚಿಕೊಂಡಿವೆ. ಇರುವ ಶೌಚಾಲಯಗಳೂ ಎಲ್ಲಾ ಕಾಲದಲ್ಲಿ ಶುಚಿಯಾಗಿರುವುದಿಲ್ಲ.

ಇಂತಹ ಸ್ಥಿತಿ ಇರುವಾಗಲೇ ಮತ್ತೊಂದು ವರ್ಷದ ಹಂಪಿ ಉತ್ಸವ ಆರಂಭವಾಗಿದೆ. ಉತ್ಸವ ನೋಡಲು ಬರುವ ಲಕ್ಷಾಂತರ ಪ್ರೇಕ್ಷಕರ ಪೈಕಿ ಕೆಲವರಂತೂ ಸ್ಮಾರಕಗಳನ್ನು ನೋಡುತ್ತಾರೆ. ನಮ್ಮ ಸಂಸ್ಕೃತಿ, ಕಲೆ ತೋರಿಸಲು ಸಿಕ್ಕ ಅತ್ಯುತ್ತಮ ಅವಕಾಶದ ಜತೆ ಜತೆಗೇ ನಮ್ಮ ಹುಳುಕುಗಳೂ ಪ್ರದರ್ಶನಗೊಳ್ಳುತ್ತವೆ.

ವರ್ಷದ ಮೂರು, ನಾಲ್ಕು ತಿಂಗಳು  ಪ್ರತಿದಿನ ಸರಾಸರಿ 30ರಿಂದ 40 ಸಾವಿರ ಪ್ರವಾಸಿಗರು ಬರುವ ಹಂಪಿಯಲ್ಲಿ ಒಂದು ಸುಸಜ್ಜಿತ ಶೌಚಾಲಯ, ಸ್ನಾನಗೃಹ, ಶುದ್ಧ ಕುಡಿಯುವ ನೀರು ವ್ಯವಸ್ಥೆ ಇದ್ದಿದ್ದರೆ ಅದನ್ನೇ ಹೇಳಿಕೊಳ್ಳಬಹುದಿತ್ತು. ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಇರುವ ಕಡೆಗಳಲ್ಲಿ ನಿರ್ವಹಣೆಯೇ ಸರಿಯಿಲ್ಲ. ಹಂಪಿ ಸುತ್ತಮುತ್ತ ಮಧ್ಯಮ ವರ್ಗದವರಿಗೆ ತಕ್ಕುದಾದ ಸೂಕ್ತ ವಸತಿ ವ್ಯವಸ್ಥೆ ಇಲ್ಲ, ಬ್ಯಾಟರಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲ. ಇಲ್ಲಗಳ ಸಾಲುಗಳ ನಡುವೆ ಏನಿದೆ ಎಂದು ಕೇಳಿದರೆ ಸಿಗುವ ಉತ್ತರ ವಿಜಯನಗರದ ಭವ್ಯ ಇತಿಹಾಸ ಸಾರುವ ಸ್ಮಾರಕಗಳು ಮಾತ್ರ. ‘ಯುನೆಸ್ಕೊ’ದ ನೆಪ ಹೇಳುತ್ತಲೇ ಪ್ರವಾಸಿಗರಿಗೆ ಮೂಲಸೌಲಭ್ಯ ಒದಗಿಸಲು ನಿರಾಕರಿಸುತ್ತಲೇ ಇರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್‌ಐ) ಹಂಪಿಯ ಸ್ಮಾರಕಗಳ ರಕ್ಷಣೆಯ ಹೊಣೆ ಇದೆ. ಆದರೆ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಒದಗಿಸುವ ಹೊಣೆ ಬಗ್ಗೆ ಕಣ್ಮುಚ್ಚಿ ಕುಳಿತಿದೆ. ‘ಸ್ವದೇಶ್‌ ದರ್ಶನ 2.0’ ಬಂದಾಗ ಎಲ್ಲಾ ಸೌಲಭ್ಯಗಳೂ ಬರಲಿವೆ ಎಂದು ಹೇಳುತ್ತಲೇ ವರ್ಷಗಟ್ಟಲೆ ಮೂಲಸೌಲಭ್ಯ ಕೊರತೆಯನ್ನು ಮುಂದೂಡುತ್ತಲೇ ಬರಲಾಗಿದೆ. ‘ಯುನೆಸ್ಕೊ’ ತಂಡ ಪರಿಶೀಲನೆಗೆ ಬರುವುದು ಐದು ವರ್ಷಕ್ಕೋ, ಹತ್ತು ವರ್ಷಕ್ಕೋ ಒಮ್ಮೆ. ಅವರು ಬರುವ ಸಮಯದಲ್ಲಿ ಇಲ್ಲಿ ಶೌಚಾಲಯ ಶುಭ್ರವಾಗಿರುತ್ತದೆ, ನೀರು ಶುದ್ಧೀಕರಣ ಘಟಕಗಳಲ್ಲಿ ಶುದ್ಧ ನೀರೇ ಇರುತ್ತದೆ. ಅವರು ಹೊರಟು ಹೋದ ಬಳಿಕ ಹಳೆಯ ಸ್ಥಿತಿ ಮರಳುತ್ತದೆ.

ಪ್ರವಾಸೋದ್ಯಮ ಇಲಾಖೆ, ಹಂಪಿ ವಿಶ್ವ ಪರಂಪರೆ ತಾಣ ನಿರ್ವಹಣಾ ಪ್ರಾಧಿಕಾರ (ಹವಾಮ), ಗ್ರಾಮ ಪಂಚಾಯಿತಿ, ಅರಣ್ಯ ಇಲಾಖೆ.. ಹೀಗೆ ಹೊಣೆ ದಾಟಿಸುತ್ತಾ ಹೋಗುತ್ತಾರೆ. ಪ್ರವಾಸಿಗರು ಹೈರಾಣರಾಗುತ್ತಾರೆ. ಇದು ವರ್ಷಗಳಿಂದ ಆಗುತ್ತಿರುವ ತೊಂದರೆ. ಸಾವಿರಗಟ್ಟಲೆ ವಿದೇಶಿಯರು ಬರುತ್ತಾರೆ, ನೋಡುತ್ತಾರೆ ಎಂಬ ಕನಿಷ್ಠ ವಿವೇಚನೆಯೂ ಇಲ್ಲದೆ ಇಲ್ಲಿ ಪ್ರವಾಸಿಗರನ್ನು ಕಡೆಗಣಿಸಲಾಗಿದೆ.

ಮೂಲಸೌಲಭ್ಯದ ಜತೆಗೆ ಸ್ಮಾರಕಗಳ ರಕ್ಷಣೆ ವಿಚಾರದಲ್ಲೂ ಹಂಪಿಯಲ್ಲಿ ಆಮೆ ನಡಿಗೆಯಷ್ಟೇ ಕಾಣಿಸುತ್ತಿದೆ. ಅನುದಾನ ಕೊರತೆಯಿಂದ ಸ್ಮಾರಕಗಳ ರಕ್ಷಣಾ ಕಾರ್ಯಗಳಿಗೆ ವೇಗ ಸಿಗುತ್ತಲೇ ಇಲ್ಲ. ಹಂಪಿಯ ವಿರೂಪಾಕ್ಷ ದೇವಾಲಯದ ರಥಬೀದಿಯ ಸಾಲುಮಂಟಪಗಳ ಪೈಕಿ ಒಂದು ಮಂಟಪ ಕಳೆದ ವರ್ಷ ಮೇ ತಿಂಗಳಲ್ಲಿ ಕುಸಿದಿತ್ತು. ಅದು ಮತ್ತೆ ಯಥಾಸ್ಥಿತಿಯಲ್ಲಿ ಎದ್ದು ನಿಲ್ಲಲು ಎಂಟು ತಿಂಗಳು ಬೇಕಾಗಿತ್ತು.

ಎಎಸ್‌ಐ ನಿರ್ವಹಣೆಯ ರಾಜ್ಯದ ಇತರ ಸ್ಮಾರಕಗಳಿಗೂ ಹಂಪಿಯದೇ ಸ್ಥಿತಿ ಒದಗಿರುವುದು ದುರಂತ. ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇವಾಲಯ ಕಳೆದ ವರ್ಷ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆ ಆಯಿತು. ಆದರೆ, ಅದರ ಶಿಲ್ಪಕಲೆಗಳು ಕಿಡಿಗೇಡಿಗಳಿಂದ ವಿರೂಪಗೊಳ್ಳುವುದು ಕೊನೆಯಾಗಲಿಲ್ಲ. ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಸ್ಮಾರಕಗಳು 2019ರಲ್ಲಿ ಪ್ರವಾಹದಿಂದ ಜಲಾವೃತವಾಗಿದ್ದವು. ಸುತ್ತಮುತ್ತಲಿನ 813 ಮನೆಗಳ ಸ್ಥಳಾಂತರಕ್ಕೆ ಒತ್ತಾಯ ವ್ಯಕ್ತವಾಯಿತು. ಆದರೆ, ಯಾವ ಪ್ರಗತಿಯೂ ಆಗಲಿಲ್ಲ.

ಹಂಪಿಯ ಅಚ್ಯುತರಾಯ ದೇವಸ್ಥಾನದ ನೋಟ

‘ಅನುದಾನ ಇಲ್ಲದೆ ಯಾವ ಕೆಲಸವೂ ಆಗದು’ ಎಂಬುದಕ್ಕೆ ಇವು ಒಂದಿಷ್ಟು ಸಾಕ್ಷಿಗಳು. ಸಂಸ್ಕೃತಿ ಪ್ರತಿನಿಧಿಸುವ ಸ್ಮಾರಕಗಳ ಸಂರಕ್ಷಣಾ ಕಾರ್ಯ ಹೇಳಿಕೊಳ್ಳುವ ರೀತಿಯಲ್ಲಿ ನಡೆದಿಲ್ಲ. ರಾಜ್ಯದ ಪಶ್ಚಿಮಘಟ್ಟ ಪ್ರದೇಶ, ಹೊಸಪೇಟೆ ತಾಲ್ಲೂಕಿನ ಹಂಪಿ, ಬಾದಾಮಿ ತಾಲ್ಲೂಕಿನ ಪಟ್ಟದಕಲ್ಲು, ತಿ.ನರಸೀಪುರ ತಾಲ್ಲೂಕಿನ ಸೋಮನಾಥಪುರದ ಚನ್ನಕೇಶವ ದೇವಾಲಯ, ಬೇಲೂರು ತಾಲ್ಲೂಕಿನ ಚನ್ನಕೇಶವ ದೇವಾಲಯ ಮತ್ತು ಹಳೇಬೀಡಿನ ಹೊಯ್ಸಳೇಶ್ವರ ದೇವಾಲಯ ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಆದರೆ, ಅವುಗಳ ಮಹತ್ವ ಸಾರುವ ಮತ್ತು ವೈಶಿಷ್ಟ್ಯವನ್ನು ಕಾಪಾಡುವ ಕಾರ್ಯ ನಡೆಯುತ್ತಿಲ್ಲ.

ವಿಜಯಪುರದ ಆದಿಲ್‌ಶಾಹಿ ಅರಸು ನಿರ್ಮಿಸಿದ ಗೋಳಗುಮ್ಮಟ ಪ್ರಪಂಚದ ಅದ್ಭುತಗಳಲ್ಲಿ ಒಂದು. ‘ಪಿಸುಗುಟ್ಟುವ ಗೋಪುರ’ ಎಂದೇ ಪ್ರಸಿದ್ಧಿ. ಈ ಸ್ಮಾರಕದಲ್ಲಿ ದ್ವನಿ ಏಳು ಬಾರಿ ಪ್ರತಿದ್ವನಿಸುತ್ತದೆ. ಮಾನವ ನಿರ್ಮಿತ ಇಂತಹ ಅದ್ಬುತ ಜಗತ್ತಿನಲ್ಲೇ ಅಪರೂಪದ್ದು. ನಾಲ್ಕು ದಿಕ್ಕಿನಿಂದಲೂ ಸ್ಮಾರಕ ಒಂದೇ ರೀತಿ ಕಾಣುತ್ತದೆ. ಯಾವುದೇ ಆಸರೆ ಇಲ್ಲದೇ ಕಟ್ಟಿದ ಗೋಪುರ ಅಂದಿನ ವಾಸ್ತುಶಿಲ್ಪದ ಅಗಾಧತೆಗೆ ಸಾಕ್ಷಿ. ಆದರೆ, ಜಗತ್ತಿಗೆ ಇದರ ಮಹತ್ವ ಸಾರುವ ಕಾರ್ಯ ನಿರೀಕ್ಷಿತ ಮಟ್ಟದಲ್ಲಿ ಈವರೆಗೆ ಆಗಿಲ್ಲ. ಯುನೆಸ್ಕೊ ಪಾರಂಪರಿಕ ಪಟ್ಟಿಗೆ ಗೋಳಗುಮ್ಮಟ ಇನ್ನೂ ಸೇರ್ಪಡೆಯಾಗಿಲ್ಲ.

‘ಗೋಳಗುಮ್ಮಟವನ್ನು ಯುನೆಸ್ಕೊ ಪಟ್ಟಿಗೆ ಸೇರ್ಪಡೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಈವರೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವವನ್ನೇ ಸಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದ್ದರೆ, ಈ ವೇಳೆಗೆ ಯುನೆಸ್ಕೋ ಪಟ್ಟಿಗೆ ಗೋಳಗುಮ್ಮಟ ಸೇರ್ಪಡೆ ಆಗುತ್ತಿತ್ತು’ ಎಂದು ಇತಿಹಾಸ ತಜ್ಞ ಪ್ರೊ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳುತ್ತಾರೆ.

ಹಂಪಿಯಲ್ಲಿ ಹೈಕೋರ್ಟ್ ಆದೇಶನ್ವಯ 13 ವರ್ಷದ ಹಿಂದೆಯೇ ಒತ್ತುವರಿ ತೆರವುಗೊಳಿಸಿ, 350 ಕುಟುಂಬಗಳಿಗೆ ಬದಲಿ ನಿವೇಶನ ನೀಡಲಾಗಿದೆ. ಸದ್ಯ ಹಂಪಿಯಲ್ಲಿ ಒತ್ತುವರಿ ಸಮಸ್ಯೆ ಇಲ್ಲ. ಆದರೆ, ಸ್ಮಾರಕಗಳ ನಿರ್ವಹಣೆ ಸಮರ್ಪಕವಾಗಿಲ್ಲ. ವಿರೂಪಾಕ್ಷ ದೇವಾಲಯದ ಮುಂಭಾಗದ ಸಾಲು ಮಂಟಪ ವಿಜಯನಗರ ಕಾಲದ ಬಜಾರ್‌ ಆಗಿತ್ತು. ಚಿನ್ನ, ವಜ್ರ, ಹವಳಗಳನ್ನು ಇಲ್ಲಿ ಸೇರುಗಳಲ್ಲಿ ಅಳತೆ ಮಾಡಿ ಮಾರಲಾಗುತ್ತಿತ್ತು. ಇಂತಹ ಶ್ರೀಮಂತಿಕೆಯ ಸಾಲು ಮಂಟಪಗಳ ಪುನಶ್ಚೇತನ ಕಾಮಗಾರಿಗೆ ಹಣದ ಕೊರತೆ ಎದುರಾಗಿದೆ. ಸಾಲು ಮಂಟಪಗಳು ವಾಲಿಕೊಂಡಿವೆ, ಅವು ಯಾವುದೇ ಕ್ಷಣದಲ್ಲಿ ಕುಸಿದು ಬೀಳಬಹುದು ಎಂದು ಮೇಲ್ತೋರಿಕೆಗೇ ಕಾಣಿಸುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಮಳೆಯಲ್ಲಿ ಕುಸಿದುದು ಸಹ ಇದೇ ಸಾಲು ಮಂಟಪದ ಒಂದು ಭಾಗ. ಆಗ ಒಮ್ಮೆ ದೊಡ್ಡ ಸದ್ದಾಯಿತು, ಸ್ಮಾರಕಗಳ ರಕ್ಷಣೆಯ ಆತಂಕ ಎದುರಾಯಿತು. ಮತ್ತೆ ಅದೆಲ್ಲವೂ ಮರೆತೇ ಹೋಯಿತೇನೋ ಎಂಬಂತೆ ಜಾಣ ಮರೆವು ಸಹ ಇಲ್ಲಿ ಆವರಿಸಿಬಿಟ್ಟಿದೆ.

ಸ್ಮಾರಕಗಳ ಪುನಶ್ಚೇತನ ಕಾರ್ಯ ವಿಳಂಬವಾಗುತ್ತಿರುವುದಕ್ಕೆ ಕಾರಣ ಏನು ಎಂದು ಕೇಳಿದರೆ, ಎಎಸ್‌ಐ ಅಧಿಕಾರಿಗಳಿಂದ ಸಿಗುವ ಚುಟುಕು ಉತ್ತರ ‘ಕಾಸು ಇಲ್ಲ’. ಪ್ರವಾಸಿಗರ ಅನುಕೂಲ, ಸೌಲಭ್ಯಕ್ಕೆ ಶೌಚಾಲಯ, ವಿಶ್ರಾಂತಿ ಕೊಠಡಿ ನಿರ್ಮಿಸುವ ಬಗ್ಗೆ ಹೇಳುತ್ತಲೇ ಇದ್ದಾರೆ, ಆದರೆ, ಅದು ಕೂಡಾ ವೇಗವಾಗಿ ಕಾರ್ಯಗತ ಆಗುತ್ತಿಲ್ಲ.

ಕೇವಲ ₹8 ಕೋಟಿ: 'ಎಎಸ್‌ಐ ಹಂಪಿ ವೃತ್ತದಲ್ಲಿ 94 ಸ್ಮಾರಕಗಳು ಬರುತ್ತವೆ. ಅವುಗಳ ವಾರ್ಷಿಕ ನಿರ್ವಹಣೆಗೆ ಲಭಿಸುವ ಮೊತ್ತ ಕೇವಲ ₹8 ಕೋಟಿ. ಇದರಲ್ಲೇ ಎಲ್ಲವನ್ನೂ ನಿರ್ವಹಿಸಬೇಕು. ಹಂಪಿ ವಿರೂಪಾಕ್ಷ ದೇವಾಲಯದ ಎದುರುಗಡೆಯ ಸಾಲು ಮಂಟಪವೊಂದನ್ನೇ ತೆಗೆದುಕೊಂಡರೂ ಅದರ ಪುನಶ್ಚೇತನಕ್ಕೇ ₹8 ಕೋಟಿ ಬೇಕು, ಸದ್ಯ ಹಂತ ಹಂತವಾಗಿ ಕೆಲಸ ಮಾಡುತ್ತ ₹4 ಕೋಟಿ ವೆಚ್ಚ ಮಾಡಿ ವಿರೂಪಾಕ್ಷ ದೇವಸ್ಥಾನ ಬಳಿ ಇರುವ ಸಾಲುಮಂಟಪಗಳನ್ನು ಪುನಶ್ಚೇತಗೊಳಿಸಲಾಗಿದೆ. ಅಲ್ಲೇ ಒಂದಿಷ್ಟು ಉತ್ಖನನ ಕೆಲಸ ನಡೆದಿದೆ. ಯಾವ ಕೆಲಸ ಅಗತ್ಯವಾಗಿ ಆಗಬೇಕೋ ಅದಕ್ಕೆ ಆದ್ಯತೆ ಕೊಟ್ಟು ಲಭ್ಯ ಅನುದಾನದಲ್ಲಿ ಕೆಲಸ ಮಾಡಿಸಲಾಗುತ್ತಿದೆ’ ಎಂದು ಎಎಸ್‌ಐ ಹಂಪಿ ವೃತ್ತದ ಅಧೀಕ್ಷಕ ನಿಹಿಲ್‌ ದಾಸ್‌ ಹೇಳುತ್ತಾರೆ.

ಹಂಪಿಯಲ್ಲಿ ಸ್ಮಾರಕಗಳ ರಕ್ಷಣಾ ಕಾರ್ಯಗಳಿಗಾಗಿಯೇ ವಾರ್ಷಿಕ ₹6ರಿಂದ ₹8 ಕೋಟಿ ಹಣ ಬೇಕು. ಆದರೆ ಸದ್ಯ ಸಿಗುತ್ತಿರುವುದು ಸುಮಾರು ₹2 ಕೋಟಿ ಮಾತ್ರ. ಪಾನ್‌ ಸುಪಾರಿ ಬಜಾರ್‌ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಉತ್ಖನನ ಬಿಟ್ಟರೆ ಬೇರೆ ಯಾವ ಉತ್ಖನನ ಯೋಜನೆಯನ್ನೂ ಸದ್ಯ ಎಎಸ್‌ಐ ಹಾಕಿಕೊಂಡಿಲ್ಲ. ಅನುದಾನ ಕೊರತೆಯೇ ಇದಕ್ಕೆ ಕಾರಣ ಎಂದು ಹೇಳಲು ಅಧಿಕಾರಿಗಳು ಮರೆಯುವುದಿಲ್ಲ.

ಹಂಪಿ ಬಜಾರ್‌ನ ಸಾಲುಮಂಟಪಗಳ ಇಂದಿನ ಸ್ಥಿತಿ 

ಐಹೊಳೆ: ಐಹೊಳೆಯಲ್ಲಿ 70ಕ್ಕೂ ಹೆಚ್ಚು ಸ್ಮಾರಕಗಳಿಗೆ ಹೊಂದಿಕೊಂಡೇ ಮನೆಗಳನ್ನು ನಿರ್ಮಿಸಲಾಗಿದೆ. ಅಲ್ಲಿಯೇ ದನ ಕಟ್ಟುವುದು, ಬಟ್ಟೆ ಒಣ ಹಾಕುವುದು ಸೇರಿ ದೈನಂದಿನ ಚಟುವಟಿಕೆಗಳು ಸಾಮಾನ್ಯವಾಗಿವೆ. ಇದರಿಂದ ಸ್ಮಾರಕಗಳಿಗೆ ಧಕ್ಕೆಯಾಗುತ್ತಿದೆ. ‘ಸ್ಮಾರಕಗಳು ಸಂರಕ್ಷಿತ ಪ್ರದೇಶ’ ಎಂದು ಎಎಸ್‌ಐ ಘೋಷಿಸಿದೆ. ಇಲ್ಲಿ ಮನೆಗಳು ಬಿದ್ದರೂ ದುರಸ್ತಿಗೆ ಅವಕಾಶವಿಲ್ಲ. ಇದರಿಂದ ಬೇಸತ್ತ ಜನರು, ಗ್ರಾಮ ಸ್ಥಳಾಂತರಕ್ಕೆ ಒಪ್ಪಿದ್ದಾರೆ. ಆದರೆ, ಜನಪ್ರತಿನಿಧಿಗಳು ಮತ್ತು ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದ ಪೂರಕ ಕಾರ್ಯಗಳು ನಡೆದಿಲ್ಲ.

ಆರಂಭದಲ್ಲಿ 9 ದೇವಾಲಯಗಳ ಸಂಕೀರ್ಣಗಳ ಸುತ್ತಮುತ್ತಲಿನ 144 ಮನೆಗಳ ಸ್ಥಳಾಂತರಕ್ಕೆ ಎಎಸ್‌ಐ ಮುಂದಾಗಿತ್ತು. 2006ರಲ್ಲಿ ಸಲ್ಲಿಸಲಾದ ₹30 ಕೋಟಿ ವೆಚ್ಚದ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿತ್ತು. ಆದರೆ, ‘ಎಲ್ಲರನ್ನೂ, ಎಲ್ಲವನ್ನೂ’ ಸ್ಥಳಾಂತರಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸ್ಥಳಾಂತರದ ಲಕ್ಷಣಗಳು ಗೋಚರಿಸಿದವು. ₹56 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಯಿತು. ನಂತರ ಯಾವುದೂ ನೆರವೇರಲಿಲ್ಲ. ‘ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮನೆಗಳಿದ್ದು, ಗ್ರಾಮ ಸ್ಥಳಾಂತರಕ್ಕೆ ₹362 ಕೋಟಿ ಬೇಕು’ ಎಂಬ ಹೊಸ ಪ್ರಸ್ತಾವ ಸರ್ಕಾರಕ್ಕೆ 2016ರಲ್ಲಿ ಸಲ್ಲಿಸಲಾಯಿತು. ಈಗ ಅದರ ಮೊತ್ತ ಮತ್ತೆ ಹೆಚ್ಚಾಗಿದೆ.

ಸದ್ಯಕ್ಕೆ ರಾಜ್ಯ ಸರ್ಕಾರವು ಮೊದಲ ಹಂತದ ರೂಪದಲ್ಲಿ ದೇವಾಲಯಕ್ಕೆ ಹೊಂದಿಕೊಂಡ 114 ಮನೆಗಳ ಸ್ಥಳಾಂತರಕ್ಕೆ ನಿರ್ಧರಿಸಿದೆ. ಭೂಮಿ ಸ್ವಾಧೀನಕ್ಕೆ ₹3.30 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್‌.ಕೆ. ಪಾಟೀಲ ತಿಳಿಸಿದ್ದಾರೆ. ಭೂಮಿ ಖರೀದಿ ಪ್ರಕ್ರಿಯೆಯೂ ನಡೆದಿದೆ. ಆದರೆ, ಇದನ್ನು ವಿರೋಧಿಸಿರುವ ಗ್ರಾಮಸ್ಥರು, ‘ಸಂಪೂರ್ಣ ಗ್ರಾಮ ಸ್ಥಳಾಂತರ ಮಾಡಬೇಕು’ ಎಂದು ಮತ್ತೆ ಪಟ್ಟು ಹಿಡಿದಿದ್ದಾರೆ.

‘ಪಟ್ಟದಕಲ್ಲು ಸುತ್ತಮುತ್ತ ಮೂಲಸೌಲಭ್ಯಗಳ ಕೊರತೆ ಇದೆ. ಪಾರ್ಕಿಂಗ್‌ ವ್ಯವಸ್ಥೆಯಿಲ್ಲ. ಪಾರ್ಕಿಂಗ್ ಕಟ್ಟಡ ಅರ್ಧಕ್ಕೆ ನಿಂತಿದೆ. ಪ್ರವಾಸಿಗರಿಗೆ ದೊಡ್ಡ ಪ್ರಮಾಣದಲ್ಲಿ ವಸತಿಗೆ ವ್ಯವಸ್ಥೆಯಿಲ್ಲ. ಸೋಮನಾಥಪುರದ ಚನ್ನಕೇಶವ ದೇಗುಲದ ‘ಸಹಜ ಸೌಂದರ್ಯ’ಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿಲ್ಲ. ಈ ವಿಚಾರದಲ್ಲಿ ಅಧಿಕಾರಿಗಳ ಧೋರಣೆ ಸರಿ ಇಲ್ಲ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಬೇಸರ ವ್ಯಕ್ತಪಡಿಸುತ್ತಾರೆ.

ಹಂಪಿಯು ವಿಜಯ ವಿಠ್ಠಲ ದೇವಸ್ಥಾನದ ಸಂಗೀತ ಮಂಟಪಕ್ಕೆ ಫೈಬರ್‌ ಚಾವಣಿ ಹೊದೆಸುವ ಯೋಜನೆಗೆ ಚಾಲನೆ ಸಿಕ್ಕಿಲ್ಲ 

‘ಸೋಮನಾಥಪುರದಲ್ಲಿ ಹೋಟೆಲ್‌ ಇಲ್ಲ. ಸಮೀಪದಲ್ಲಿದ್ದ ಪ್ರವಾಸೋದ್ಯಮ ಇಲಾಖೆಯ ಹೋಟೆಲ್‌ ಅನ್ನು ಹಲವು ವರ್ಷಗಳ ಹಿಂದೆಯೇ ಮುಚ್ಚಲಾಗಿದೆ. ಕುಡಿಯುವ ನೀರಿನ ಸೌಲಭ್ಯ ಹಾಗೂ ಕ್ಯಾಂಟೀನ್‌ ಬೇಕು. ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ನೀಡಬಾರದೇ’ ಎಂದು ಪ್ರಶ್ನಿಸುತ್ತಾರೆ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು.

ಲಕ್ಕುಂಡಿಯ ಕೆಲ ಪಾರಂಪರಿಕ ದೇವಾಲಯಗಳು ಅತಿಕ್ರಮಣವಾಗಿದ್ದು, ಹಾನಿ ಆಗಿದೆ. ನನ್ನೇಶ್ವರ ದೇವಾಲಯ, ಕಾಶಿ ವಿಶ್ವನಾಥ ದೇವಾಲಯ, ಜೈನ ಬಸದಿ, ಮುಸ್ಕಿನಬಾವಿ ಸೇರಿ 8 ತಾಣಗಳನ್ನು ಮಾತ್ರ ಎಎಸ್‌ಐ ನಿರ್ವಹಿಸುತ್ತಿದೆ. ಸದ್ಯಕ್ಕೆ ಅವುಗಳ ನಿರ್ವಹಣೆಯಲ್ಲಿ ತೊಂದರೆ ಇಲ್ಲ. ಆದರೂ ಶಿಲ್ಪಕಲೆಗಳನ್ನು ವಿರೂಪಗೊಳಿಸುವ ಕಿಡಿಗೇಡಿಗಳ ಕೃತ್ಯ ಮುಂದುವರಿದಿದೆ. ಕುಂಬಾರೇಶ್ವರ ದೇವಾಲಯ ಸೇರಿ ಸಾಕಷ್ಟು ದೇವಸ್ಥಾನಗಳು ಜನವಸತಿ ಪ್ರದೇಶದಲ್ಲಿವೆ. ಕೆಲವು ದೇವಾಲಯಗಳು ಶೆಡ್‌ ಸ್ವರೂಪ ಪಡೆದಿವೆ. ಅಲ್ಲಿ ಸಾಕಷ್ಟು ಮನೆಗಳಿದ್ದು, ಹಲವು ವರ್ಷಗಳಿಂದ ಜನರು ವಾಸವಿದ್ದಾರೆ.

‘ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಲಕ್ಕುಂಡಿಯನ್ನು ಸೇರ್ಪಡೆ ಮಾಡಬೇಕು ಎಂಬ ಆಶಯದೊಂದಿಗೆ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗಿದೆ. ₹5 ಕೋಟಿ ವೆಚ್ಚದಲ್ಲಿ 15 ದೇವಾಲಯಗಳು ಸೇರಿ ಹಲವು ಬಾವಿಗಳಿಗೆ ಕಾಯಕಲ್ಪ ನೀಡಲಾಗುವುದು. ಅತಿಕ್ರಮಣ ಎಂದು ಗುರುತಿಸಲಾದ ಆಸ್ತಿ ಅವರ ಹೆಸರಿನಲ್ಲಿ ಇದ್ದರೆ ಪರಿಹಾರ ಕೊಟ್ಟು ಸ್ವಾಧೀನಕ್ಕೆ ಪಡೆಯಲಾಗುವುದು. ಅತಿಕ್ರಮಣ ಆಗಿದ್ದರೆ ತೆರೆವುಗೊಳಿಸಲಾಗುವುದು’ ಎಂದು ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.

ಚಿತ್ರದುರ್ಗದ ಕಲ್ಲಿನ ಕೋಟೆಯ ಬಳಿ ಮನೆಗಳು

ಚಿತ್ರದುರ್ಗದ ಕಲ್ಲಿನ ಕೋಟೆ: ಶಾತವಾಹನರಿಂದ ಆರಂಭವಾಗಿ ‘ನಾಯಕ’ರವರೆಗಿನ ಪರಂಪರೆಯನ್ನು ಸಾದರಪಡಿಸುವ ಚಿತ್ರದುರ್ಗದ ಕಲ್ಲಿನ ಕೋಟೆ ಇಂದಿಗೂ ಅಭೇದ್ಯವಾಗಿದೆ. ಆದರೆ, ಏಳು ಸುತ್ತಿನ ಕೋಟೆಯ ಒಂದೊಂದು ಸುತ್ತು ಹಾಕಿದಾಗಲೂ ನಿರಾಸೆ ಆವರಿಸುತ್ತದೆ. ಏಳುಸುತ್ತುಗಳಲ್ಲಿ 2 ಸುತ್ತು ಒತ್ತುವರಿಯಾಗಿದ್ದು, ಅಲ್ಲಿ ಕಾಂಕ್ರೀಟ್‌ ಕಟ್ಟಡಗಳಿವೆ.

211 ವರ್ಷಗಳ ಆಳ್ವಿಕೆ ನೀಡಿದ್ದ ನಾಯಕ ಅರಸರು ಸಾವಿರ ಎಕರೆಯಲ್ಲಿ ಕೋಟೆ ಕಟ್ಟಿಕೊಂಡಿದ್ದರು ಎಂದು ಇತಿಹಾಸ ಹೇಳುತ್ತದೆ. ಈಗಿನ ಕೋಟೆಯ ವ್ಯಾಪ್ತಿ 300 ಎಕರೆಗೆ ಕುಸಿದಿದೆ. ಕೋಟೆಯ ನೆಲದಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ನಗರ ವ್ಯಾಪ್ತಿಯಲ್ಲಿರುವ ಐತಿಹಾಸಿಕ ‘ಬಾಗಿಲುಗಳು’ ಕಳಚಿ ಹೋಗಿವೆ.

ಅಳಿದು ಉಳಿದ ಕೋಟೆ ಭಾಗಕ್ಕೆ ಈಗಲೂ ರಕ್ಷಣೆ ಇಲ್ಲ. ಕೋಟೆ ಸಮೀಪದಲ್ಲೇ ಮನೆ ಕಟ್ಟಿಕೊಳ್ಳಲು ನಗರಸಭೆಯೇ ಅನುಮತಿ ಕೊಟ್ಟಿದೆ!. ಕೇಂದ್ರ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಗಳ ನೀತಿ ಅನ್ವಯ ಈ ಹಿಂದೆ ಜಿಲ್ಲಾಡಳಿತ ಹಲವು ಮನೆಗಳನ್ನು ತೆರವುಗೊಳಿಸಲು ಪ್ರಯತ್ನಿಸಿದೆ. ಆದರೆ ಫಲಪ್ರದ ಆಗುವುದೇ ಎಂಬುದಕ್ಕೆ ಸ್ಪಷ್ಟ ಉತ್ತರ ಇನ್ನೂ ಸಿಕ್ಕಿಲ್ಲ.

ಅಕ್ರಮ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವುದರಿಂದ ಸ್ಮಾರಕದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಕೋಟೆಯ ಹಲವೆಡೆ ಬತೇರಿ, ಬುರುಜುಗಳವರೆಗೂ ಅಕ್ರಮ ಕಟ್ಟಡಗಳು ತಲೆಯೆತ್ತಿವೆ. ರಂಗಯ್ಯನಬಾಗಿಲು ದಾಟಿ ಉತ್ಸವಾಂಬಾ ದೇವಾಲಯದ ಮುಂದೆ ನಿಂತು ಕೋಟೆಯತ್ತ ಕಣ್ಣು ಹಾಯಿಸಿದರೆ ತುದಿಯ ಬುರುಜಿನವರೆಗೂ ಮನೆಗಳು ಇವೆ.

ಪುರಾತತ್ವ ಇಲಾಖೆಗಳ ನೀತಿಗಳ ಅನುಸಾರ ಕೋಟೆಯ ಸುತ್ತಲೂ 3 ಹಂತದ ನಿರ್ಬಂಧ ವಿಧಿಸಲಾಗಿದೆ. ಮೊದಲ ಹಂತದಲ್ಲಿ 100 ಮೀಟರ್‌ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡಗಳು ಇರುವಂತಿಲ್ಲ. ಆದರೆ ಇಲ್ಲಿಯ ಕೋಟೆಗೆ ಹೊಂದಿಕೊಂಡಂತೆ ಹಲವು ಕಟ್ಟಡಗಳಿವೆ. ಕೋಟೆಯ ಪ್ರವೇಶದ್ವಾರದಲ್ಲೇ ಹೋಟೆಲ್‌ಗಳಿವೆ. ಕೋಟೆ ಎದುರೇ ವಿದ್ಯಾಸಂಸ್ಥೆಯೊಂದರ ಶಾಲಾ, ಕಾಲೇಜುಗಳಿವೆ.

‘ಕೆಲ ಮಾಲೀಕರು ತಮ್ಮ ಕಟ್ಟಡ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ತೆರವಿಗೆ ಜಿಲ್ಲಾಡಳಿತ ನಿರ್ಲಕ್ಷ್ಯವಹಿಸಿರುವ ಕಾರಣ ತೆರವು ಕಾರ್ಯ ಆಗಿಲ್ಲ. ಎಎಸ್‌ಐ ಕೂಡ ಕೋಟೆಯನ್ನು ರಕ್ಷಿಸುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಚಿತ್ರದುರ್ಗ ಕೋಟೆಯನ್ನು ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿಸಬೇಕು ಎಂಬ ನಮ್ಮ ಕನಸು ಕನಸಾಗಿಯೇ ಉಳಿದಿದೆ’ ಎಂದು ಸಂಶೋಧಕ ಎಂ.ಮೃತ್ಯುಂಜಯಪ್ಪ ಬೇಸರದಿಂದ ಹೇಳುತ್ತಾರೆ.

ಕಲಬುರಗಿಯ ಬಹಮನಿ ಕೋಟೆಯಲ್ಲೇ ಕಂಡುಕೊಂಡ ಸೂರು

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಹಲವು ಸ್ಮಾರಕಗಳು ಪಾಳು ಬಿದ್ದಿವೆ. ಇಚ್ಛಾಶಕ್ತಿಯ ಕೊರತೆ, ಸೂಕ್ತ ಅನುದಾನ ಸಿಗದ ಕಾರಣ ಅವು ಅವಸಾನದ ಸ್ಥಿತಿಯಲ್ಲಿವೆ. ಕಲಬುರಗಿಯ ಐತಿಹಾಸಿಕ ಬಹಮನಿ ಕೋಟೆಯ ಒಳಗಡೆಯೇ ದಶಕಗಳಿಂದ 282 ಕುಟುಂಬಗಳು ಅತಿಕ್ರಮಣ ಮಾಡಿಕೊಂಡು ವಾಸವಾಗಿದ್ದರೂ ಇನ್ನೂ ಅವರನ್ನು ತೆರವುಗೊಳಿಸಿ ಕೋಟೆಗೆ ರಕ್ಷಣೆ ಒದಗಿಸುವ ಕೆಲಸ ಆಗಿಲ್ಲ.

ಅಕ್ರಮ ವಾಸಿಗಳನ್ನು ಅಲ್ಲಿಂದ ತೆರವುಗೊಳಿಸುವಂತೆ ಸಾಮಾಜಿಕ ಕಾರ್ಯಕರ್ತ ಶರಣ್ ದೇಸಾಯಿ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್ ಅವರನ್ನು ಹೊರಗೆ ಹಾಕುವಂತೆ ನಿರ್ದೇಶನ ನೀಡಿದೆ. ಆದೇಶ ಪಾಲನೆ ಆಗಿಲ್ಲ. ದುಡ್ಡಿಲ್ಲದಿರುವುದೇ ಇದಕ್ಕೆ ಕಾರಣ. ಮಳಖೇಡದ ರಾಷ್ಟ್ರಕೂಟರ ಕೋಟೆಯಲ್ಲೂ ಹಲವು ಕುಟುಂಬಗಳು ದಶಕಗಳಿಂದ ವಾಸ ಇವೆ. ಅವರನ್ನು ತೆರವುಗೊಳಿಸಿ ಪ್ರವಾಸಿಗರಿಗೆ ಕೋಟೆಯನ್ನು ಮುಕ್ತಗೊಳಿಸುವ ಕೆಲಸ ಇನ್ನೂ ಆಗಿಲ್ಲ.

ಬೀದರ್‌ನ ಬಹಮನಿ ಕೋಟೆ ವೀಕ್ಷಣೆಗೆ ದೇಶ–ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ, ಸ್ಮಾರಕಗಳ ಬಗ್ಗೆ ಮಾಹಿತಿ ನೀಡಲು ಗೈಡ್‌ಗಳೇ ಇಲ್ಲ. ಯಾರಾದರೂ ಗಣ್ಯರು ಭೇಟಿ ನೀಡಿದರೆ ಇತಿಹಾಸ ವಿಷಯದ ಶಿಕ್ಷಕರು ಹಾಗೂ ಪ್ರಾಧ್ಯಾಪಕರನ್ನು ಕರೆತಂದು ಅವರ ಮೂಲಕ ಸ್ಮಾರಕಗಳ ಪರಿಚಯ ಮಾಡಿಸಿಕೊಡುತ್ತಾರೆ.

‘ನಾವು ಉಳಿಸುವ ಕೆಲಸ ಮಾಡುತ್ತಿದ್ದರೂ ಅದಕ್ಕೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳೇ ಅಡ್ಡಿಪಡಿಸಿದ ಉದಾಹರಣೆಗಳೂ ಇವೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಲಬುರಗಿಯ ಇತಿಹಾಸತಜ್ಞ ಶಂಭುಲಿಂಗ ವಾಣಿ.

ಕರಾವಳಿಯಲ್ಲಿರುವ ಐತಿಹಾಸಿಕ ಸ್ಮಾರಕಗಳು ಬಹುತೇಕ ಸುಸ್ಥಿತಿಯಲ್ಲಿವೆ. ಕಡಲ ತಡಿಯ ಜಿಲ್ಲೆಗಳಲ್ಲಿರುವ ಇವುಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯುವ ಅವಕಾಶಗಳು ಇದ್ದರೂ, ಅದು ನೆರವೇರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಟಕೇರಿ ಜೈನ ಬಸದಿಯ ಮುಂದಿರುವ ಸ್ತಂಭ, ಬೋಳೂರು- ಸುಲ್ತಾನ್ ಬತ್ತೇರಿ, ಮಂಗಳಾದೇವಿ ದೇವಾಲಯ, ಬೆಳ್ತಂಗಡಿ ಜಮಾಲಾಬಾದ್ ಕೋಟೆ ಎಎಸ್ಐ ಸುಪರ್ದಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ಒದಗಿಸಲು ಅಧಿಕೃತ ಗೈಡ್‌ಗಳು ಇಲ್ಲ.

ಉಡುಪಿ ಜಿಲ್ಲೆಯ ಬಾರ್ಕೂರಿನ ಕತ್ತಲೆ ಬಸದಿ, ಕಾರ್ಕಳದ ಚತುರ್ಮುಖ ಬಸದಿ, ವರಂಗ ಜೈನ ಬಸದಿ, ಉಡುಪಿ ಅನಂತೇಶ್ವರ ದೇವಾಲಯ, ಕೊಕ್ಕರ್ಣೆ ಸಮೀಪದ ಸೂರಾಲುವಿನ ಮಣ್ಣಿನ ಅರಮನೆ ಇಂದಿಗೂ ಸುಸ್ಥಿತಿಯಲ್ಲಿವೆ.

ಸಂಸ್ಕೃತಿ ಉಳಿಸಿಕೊಳ್ಳುವ ಬಗ್ಗೆ ಕಾಳಜಿ ಇರುವ ಅಧಿಕಾರಿಗಳಿಗೆ ಸ್ಥಳೀಯರ ಸಹಕಾರದ ಜೊತೆಗೆ ಕೇಳಿದಷ್ಟು ಅನುದಾನ ದೊರೆತರೆ ಮಾತ್ರ ಸ್ಮಾರಕಗಳು ಮುಂದಿನ ತಲೆಮಾರಿಗೆ ಉಳಿಯಬಹುದು. ಇಲ್ಲವಾದರೆ ಚಿತ್ರಗಳಲ್ಲಿ ಮಾತ್ರ ಉಳಿಯುತ್ತವೆ. ಸ್ಮಾರಕಗಳ ಸಂರಕ್ಷಣೆ ಆಗಬೇಕು, ಜತೆಗೆ ಸ್ಮಾರಕಗಳನ್ನು ನೋಡಲು ಬರುವ ಪ್ರವಾಸಿಗರಿಗೆ ಕನಿಷ್ಠ ಸೌಲಭ್ಯ ಕಲ್ಪಿಸುವ ಕೆಲಸ ಆಗಬೇಕು ಎಂಬುದು ಜನರ ಒತ್ತಾಯ.

ಗದಗ ಜಿಲ್ಲೆ ಲಕ್ಕುಂಡಿಯ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಮನೆ ಕಟ್ಟಿಕೊಂಡಿರುವುದು 

ಸ್ಮಾರಕಗಳ ಸಂರಕ್ಷಣೆಯೇ ಎಎಸ್‌ಐ ಮುಖ್ಯ ಕೆಲಸ. ಸಿಗುವ ಅನುದಾನದಲ್ಲಿ ಹಂತ ಹಂತವಾಗಿ ಸಂರಕ್ಷಣಾ ಕಾರ್ಯ ನಡೆದಿದೆ.
–ನಿಹಿಲ್‌ ದಾಸ್‌, ಅಧೀಕ್ಷಕ ಎಎಸ್‌ಐ ಹಂಪಿ ವೃತ್ತ
ಸ್ಮಾರಕಗಳ ವೀಕ್ಷಣೆಗೆ ಕೆಲ ಕಡೆ ಇ–ಟಿಕೆಟ್ ವ್ಯವಸ್ಥೆ ಮಾಡಿದ್ದು ಸರಿಯಲ್ಲ. ಎಲ್ಲಾ ಕಡೆ ಸಾಮಾನ್ಯವಾಗಿ ನಗದು ಪಾವತಿಸಿ ಕೌಂಟರ್‌ನಲ್ಲಿ ಟಿಕೆಟ್ ಪಡೆಯುವ ವ್ಯವಸ್ಥೆ ಇರಬೇಕು.
–ಪ್ರೊ. ಎನ್.ಎಸ್.ರಂಗರಾಜು, ಇತಿಹಾಸ ತಜ್ಞ
ಹಳೇಬೀಡಿನ ಕೋಟೆ ಸಂರಕ್ಷಣೆ ಆಗಬೇಕಿದೆ. ಪುರಾತತ್ವ ಇಲಾಖೆಗೆ ಒಳಪಡದ ಕೋಟೆ ಸ್ಮಾರಕಗಳನ್ನು ಉಳಿಸುವಲ್ಲಿ ಸ್ಥಳೀಯರು ಕೈಜೋಡಿಸಬೇಕು.
–ಪಿ.ಅರವಝಿ, ಉಪಾಧೀಕ್ಷಕ ಎಎಸ್‌ಐ ಮಹಾನಿರ್ದೇಶಕರ ಕಚೇರಿ
ಬೇಲೂರು ಮತ್ತು ಹಳೇಬೀಡಿನಲ್ಲಿ ಪ್ರವಾಸಿಗರಿಗೆ ಮೂಲಸೌಲಭ್ಯ ಇನ್ನಷ್ಟು ಹೆಚ್ಚಿಸಬೇಕು. ಈ ಸಂಬಂಧ ಸೂಕ್ತ ಯೋಜನೆಯನ್ನು ರೂಪಿಸಬೇಕಿದೆ.
–ಶ್ರೀವತ್ಸ ಎಸ್. ವಟಿ, ಸಂಶೋಧಕ

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ನೀರು ಕುಡಿಯುತ್ತ ಸಾಗಿದ ವಿದೇಶಿ ಪ್ರವಾಸಿ 

‘ಎಎಸ್ಐಗೆ ರಾಜ್ಯದವರೇ ಅಧೀಕ್ಷಕರಾಗಲಿ’

‘ರಾಜ್ಯದ ಇತಿಹಾಸ ಕಲೆ ಸಂಸ್ಕೃತಿಗಳ ಕುರಿತು ಸ್ಪಷ್ಟ ಮಾಹಿತಿ ಇರುವ ಪ್ರೀತಿ ಇರುವ ತಜ್ಞರನ್ನೇ ಎಎಸ್ಐ ಅಧೀಕ್ಷಕರನ್ನಾಗಿ ನಿಯೋಜಿಸಬೇಕು. ಆಗ ಸ್ಮಾರಕಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಹೊರಗಿನಿಂದ ಬಂದವರಿಂದ ಇದನ್ನು ನಿರೀಕ್ಷಿಸಲು ಆಗದು’ ಎಂದು ಎಎಸ್‌ಐ ನಿವೃತ್ತ ಅಧೀಕ್ಷಕ ಟಿ.ಎಂ.ಕೇಶವ ಹೇಳುತ್ತಾರೆ.

‘ಸರ್ಕಾರವನ್ನಷ್ಟೇ ದೂರದೇ ಸ್ಥಳೀಯರು ಮತ್ತು ಯುವಜನರು ಸಹ ಸ್ಮಾರಕಗಳ ಸಂರಕ್ಷಣೆಯಲ್ಲಿ ತೊಡಗಬೇಕು. ಸ್ಥಳೀಯ ಆಡಳಿತ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಮಾರಕಗಳ ಕುರಿತು ಪ್ರೀತಿ ಬೆಳೆಸುವ ವಾತಾವರಣ ಸೃಷ್ಟಿಸಬೇಕು’ ಎನ್ನುವ ಅವರು ಹಂಪಿಯಲ್ಲಿ 20 ವರ್ಷ ಕಾಲ ಉತ್ಖನನ ಸ್ಮಾರಕಗಳ ಸಂರಕ್ಷಣೆಗೆ ಶ್ರಮಿಸಿದ್ದಾರೆ.

‘ಹಂಪಿಯನ್ನು ವಿಜಯನಗರ ಸಾಮ್ರಾಜ್ಯದ ರಾಜಧಾನಿ ಎಂದಷ್ಟೇ ಪರಿಗಣಿಸದೆ ಅದರ ಹಿಂದಿನ ಇತಿಹಾಸದ ಬಗ್ಗೆಯೂ ತಿಳಿವಳಿಕೆ ಇರಬೇಕು. ರಾಮಾಯಣದಲ್ಲಿ ಬರುವ ಕಿಷ್ಕಿಂದಾ ಪ್ರದೇಶ ಇದೇ. ಪ್ರಾಗೈತಿಹಾಸಿಕ ಕಾಲದ ಚಿತ್ರಗಳು ಚಿತ್ರಕಲೆ. ಕುಟ್ಟು ಶಿಲ್ಪಗಳು ಸುತ್ತಮುತ್ತ ಇವೆ. ಇವೆಲ್ಲವನ್ನೂ ತಿಳಿದುಕೊಂಡು ಸ್ಮಾರಕಗಳ ರಕ್ಷಣೆಗೆ ಮುಂದಾದಾಗ ಒಂದು ಭವ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಅದೇ ರೀತಿ ಉಳಿಸಿ ಹಸ್ತಾಂತರಿಸುವುದು ಸಾಧ್ಯವಾಗುತ್ತದೆ. ಹಂಪಿಯಲ್ಲಿನ ಸಾಲು ಮಂಟ‍‍ಪಗಳ ಉದ್ದ 45 ಕಿ.ಮೀ.ಇದೆ. ಈ ಸಾಲುಮಂಟಪಗಳಲ್ಲಿ ವಿಶೇಷ ಕೆತ್ತನೆಗಳಿಲ್ಲ. ಶಿಥಿಲ ಸ್ಥಿತಿಯಲ್ಲಿ ಇರುವ ಸಾಲು ಮಂಟಪಗಳನ್ನು ಕಡಿಮೆ ಖರ್ಚಿನಲ್ಲಿ ಪುನಶ್ಚೇತನ ಮಾಡಬಹುದು’ ಎಂಬ ಅಭಿಪ್ರಾಯ ಅವರದ್ದು.

ಹಂಪಿಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಬಿರು ಬಿಸಿಲಲ್ಲಿ ಬಸವಳಿದು ಮುಂದೆ ಸಾಗಿದ ಪ್ರವಾಸಿ ಕುಟುಂಬ 

‘ಗೈಡ್‌ಗಳಿಗೆ ಉದ್ಯೋಗ ಬದುಕಿನ ಭದ್ರತೆ ಕೊಡಿ

’ ಸ್ಮಾರಕಗಳ ನಿಜವಾದ ರಾಯಭಾರಿಗಳು ಪ್ರವಾಸಿ ಮಾರ್ಗದರ್ಶಿಗಳು. ನೆಲದ ಇತಿಹಾಸ ಪರಂಪರೆ ಕಲೆ ಸಂಸ್ಕೃತಿ ಬಗ್ಗೆ ಮಾಹಿತಿಯನ್ನು ಒಂದು ಪುಸ್ತಕವನ್ನು ಓದಿದಷ್ಟೇ ಜ್ಞಾನ ಕೊಡುವಂತಹವರು. ಬಹುತೇಕ 6 ತಿಂಗಳು ಅವರಿಗೆ ಯಾವುದೇ ಸಂಪಾದನೆ ಇರುವುದಿಲ್ಲ. ಅಂತಹ ದಿನಗಳಲ್ಲಿ ಅಧಿಕೃತ ಗೈಡ್‌ಗಳಿಗೆ ಸರ್ಕಾರ ನೀಡುವ ₹5 ಸಾವಿರ ಗೌರವಧನವೇ ಆಧಾರ. ಉಳಿದ ದಿನಗಳಲ್ಲಿ ಜಿಲ್ಲಾಡಳಿತ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಹಣ ಪಡೆಯುವುದಿಲ್ಲ.

‘ಸರ್ಕಾರದ ನಿಯಮಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಅದಕ್ಕೆ ಗೌರವಧನವನ್ನು ಕನಿಷ್ಠ ₹7500ಕ್ಕೆ ಹೆಚ್ಚಿಸಬೇಕು ಮತ್ತು ಈಗಾಗಲೇ ತರಬೇತಿ ಪೂರ್ಣಗೊಳಿಸಿದವರಿಗೆ ಅಧಿಕೃತ ಮಾನ್ಯತೆ ನೀಡಬೇಕು ಎಂಬ ಬೇಡಿಕೆ ನಮ್ಮದು. ಕುಡಿಯುವ ನೀರು ಶೌಚಾಲಯದಂತಹ ಅಗತ್ಯದ ಸೌಲಭ್ಯ ಕಲ್ಪಿಸಬೇಕು. ಎಎಸ್‌ಐ ಸ್ಮಾರಕಗಳು ಇರುವ ಕಡೆ ನಿಯಮದಂತೆ ಪದವೀಧರರಿಗೆ ಮಾತ್ರ ಗೈಡ್‌ಗಳನ್ನಾಗಿ ನೇಮಿಸಬೇಕು. ಇದರಿಂದ ಇತಿಹಾಸವನ್ನು ಇತರರಿಗೆ ತಿಳಿಸಿ ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ’ ಎಂಬ ಕೋರಿಕೆ ಹಂಪಿ ಪ್ರವಾಸಿ ಮಾರ್ಗದರ್ಶಿಗಳ ಒಕ್ಕೂಟದ ಅಧ್ಯಕ್ಷ ವಿಶ್ವನಾಥ ಮಾಳಗಿ ಅವರದ್ದು.

‘ದಿನಕ್ಕೆ 4 ರಿಂದ 5 ಬಾರಿ ಕೋಟೆಯನ್ನು ಹತ್ತಿ ಇಳಿಯುತ್ತೇವೆ. ಸರ್ಕಾರವು ನಮಗೆ ಆರೋಗ್ಯ ಭದ್ರತೆ ಒದಗಿಸಬೇಕು. ಉದ್ಯೋಗ ಭದ್ರತೆ ಜತೆಗೆ ಜೀವ ಭದ್ರತೆಯೂ ಇಲ್ಲ. ಗೈಡ್‌ಗಳಿಗೂ ನಿವೃತ್ತಿ ವಯಸ್ಸು ನಿಗದಿ ಮಾಡಬೇಕು. ಇದರಿಂದ ಹೊಸ ಪೀಳಿಗೆಯ ಯುವಜನರು ಈ ಕಾಯಕಕ್ಕೆ ಬರಲು ದಾರಿಯಾಗುತ್ತದೆ’ ಎಂದು ಚಿತ್ರದುರ್ಗದ ಪ್ರವಾಸಿ ಮಾರ್ಗದರ್ಶಿ ಕೃಷ್ಣಪ್ರಸಾದ್‌ ಹೇಳುತ್ತಾರೆ.

ಮೈಸೂರು ಜಿಲ್ಲೆ ತಿ.ನರಸೀಪುರದ ಸೋಮನಾಥ ಕಂಬದ ಮೇಲೆ ಬರೆದು ವಿರೂಪಗೊಳಿಸಿರುವುದು

ರಾ‌ಜ್ಯದಲ್ಲಿ ಎಎಸ್‌ಐ ಅಧೀನಕ್ಕೆ ಒಳಪಟ್ಟ ಸ್ಮಾರಕಗಳು

  • 608: ಒಟ್ಟು ಸ್ಮಾರಕಗಳು

  • 291: ದೇವಾಲಯಗಳು

  • 75: ಮಸೀದಿ, ದರ್ಗಾ ಇತ್ಯಾದಿ

  • 22: ಪುರಾತತ್ವ ನಿವೇಶನಗಳು

  • 17: ಕೋಟೆಗಳು

  • 2: ಅರಮನೆಗಳು

  • 1: ಪರಂಪರಾ ಕಟ್ಟಡ

  • 200: ಇತರ ಸ್ಮಾರಕಗಳು

  • ₹25 ಕೋಟಿ: ಈ ಎಲ್ಲ ಸ್ಮಾರಕಗಳ ನಿರ್ವಹಣೆಗೆ ಸಿಗುವ ಕೇಂದ್ರದ ವಾರ್ಷಿಕ ಅನುದಾನ

ಪೂರಕ ಮಾಹಿತಿ: ಬಸವರಾಜ ಹವಾಲ್ದಾರ್‌, ಎಂ.ಮಹೇಶ್‌, ಎಂ.ಎನ್‌.ಯೋಗೇಶ್‌, ಸತೀಶ್ ಬೆಳ್ಳಕ್ಕಿ, ಬಸವರಾಜ ಸ‍ಂಪಳ್ಳಿ, ಚಿದಂಬರಪ್ರಸಾದ, ಮನೋಜಕುಮಾರ್‌ ಗುದ್ದಿ, ಶಶಿಕಾಂತ ಎಸ್‌. ಶೆಂಬೆಳ್ಳಿ, ಸಂಧ್ಯಾ ಹೆಗಡೆ
ಪರಿಕಲ್ಪನೆ: ಯತೀಶ್ ಕುಮಾರ್ ಜಿ.ಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.