ADVERTISEMENT

ಒಳನೋಟ: ಕೋವಿಡ್‌ ನಂತರ ಉಕ್ಕಿದ ಹಾಲು: ಒಕ್ಕೂಟಕ್ಕೆ ಸವಾಲು

ಪ್ರದೀಶ್ ಎಚ್.ಮರೋಡಿ
Published 5 ಫೆಬ್ರುವರಿ 2022, 19:30 IST
Last Updated 5 ಫೆಬ್ರುವರಿ 2022, 19:30 IST

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಕೋವಿಡ್‌ ನಂತರ ಹೈನುಗಾರರ ಸಂಖ್ಯೆ ಮತ್ತು ಹಾಲು ಉತ್ಪಾದನೆ ಗಣನೀಯವಾಗಿ ಏರಿಕೆಯಾಗಿದೆ. ಇದು ಆಶಾದಾಯಕ ಬೆಳವಣಿಗೆಯಾದರೂ ಉತ್ಪಾದನೆಯಾಗುವ ಹೆಚ್ಚುವರಿ ಹಾಲಿನ ನಿರ್ವಹಣೆಯು ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ ಸವಾಲಾಗಿ ಪರಿಣಮಿಸಿದೆ.

2020ರ ಫೆಬ್ರುವರಿ ವೇಳೆಗೆ ಒಕ್ಕೂಟದಲ್ಲಿ 61 ಸಾವಿರ ಸಕ್ರಿಯ ಸದಸ್ಯರಿದ್ದರು. ಪ್ರತಿನಿತ್ಯ 4.23 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿ, 3.41 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿತ್ತು. ಈಗ ಸದಸ್ಯರ ಸಂಖ್ಯೆ 67,496ಕ್ಕೆ ಏರಿಕೆಯಾಗಿದೆ. ದಿನನಿತ್ಯ 5.02 ಲಕ್ಷ ಲೀಟರ್‌ ಸಂಗ್ರಹವಾಗುತ್ತಿದೆ. 3.55 ಲಕ್ಷ ಲೀಟರ್‌ ಹಾಲು ಮಾರಾಟವಾಗುತ್ತಿದೆ. ಹಾಲು ಸಂಗ್ರಹದಲ್ಲಿ ಆಗಿರುವ ಏರಿಕೆ ಪ್ರಮಾಣಕ್ಕೆ ಅನುಗುಣವಾಗಿ ಮಾರಾಟ ಪ್ರಮಾಣದಲ್ಲಿ ಏರಿಕೆ ಆಗಿಲ್ಲ.

2021ರ ಜೂನ್‌ನಲ್ಲಿ ದಿನನಿತ್ಯ 5.70 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗಿ ದಾಖಲೆ ನಿರ್ಮಾಣವಾಗಿತ್ತು. ಆ ತಿಂಗಳಲ್ಲಿ ಹೆಚ್ಚುವರಿ ಹಾಲನ್ನು ಗ್ರಾಹಕರಿಗೆ ಕೊಡುಗೆಯಾಗಿ ನೀಡಲಾಗಿತ್ತು. ಅರ್ಧ ಲೀಟರ್‌ ಹಾಲಿಗೆ 20 ಎಂ.ಎಲ್‌, 1 ಲೀಟರ್‌ಗೆ 40 ಎಂ.ಎಲ್‌. ಹೆಚ್ಚುವರಿ ಹಾಲನ್ನು ಪ್ಯಾಕೆಟ್‌ನಲ್ಲೇ ತುಂಬಿಸಿ ಗ್ರಾಹಕರಿಗೆ ಉಚಿತವಾಗಿ ನೀಡಲಾಗಿತ್ತು.

ADVERTISEMENT

ಕೋವಿಡ್‌, ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡವರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವುದು ಹಾಲು ಉತ್ಪಾದನೆ ಹೆಚ್ಚಲು ಪ್ರಮುಖ ಕಾರಣ. ಜತೆಗೆ ಹೋಟೆಲ್‌, ಇತರೆಡೆ ಹಾಲು ಮಾರುತ್ತಿದ್ದ ಹಲವರು ಮಾರುಕಟ್ಟೆಯ ಗೊಂದಲದಿಂದಾಗಿ ಒಕ್ಕೂಟವನ್ನು ಅವಲಂಬಿಸಿದ್ದಾರೆ. ಕೆಲವೆಡೆ ಹೊಸ ಡೇರಿಗಳ ಸ್ಥಾಪನೆಯಾಗಿರುವುದು ಕೂಡ ಉತ್ಪಾದನೆ ಹೆಚ್ಚಳಕ್ಕೆ ಕಾರಣ.

‘ಕೋವಿಡ್‌ ನಂತರದಲ್ಲಿ ಹಾಲಿನ ಸಂಗ್ರಹ ಶೇ 12ರಿಂದ 15ರಷ್ಟು ಜಾಸ್ತಿಯಾಗಿದೆ. ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆಯಲ್ಲಿ ಹಾಲಿನ ಬೇಡಿಕೆಗೆ ತೊಂದರೆಯಾದ ಕಾರಣ, ದಿನನಿತ್ಯ ಲಕ್ಷಕ್ಕೂ ಅಧಿಕ ಲೀಟರ್‌ ಹಾಲು ಉಳಿಕೆಯಾಗುತ್ತಿತ್ತು. ಹೀಗಾಗಿ, ಉಳಿಕೆ ಹಾಲನ್ನು ಪುಡಿಯಾಗಿ ಪರಿವರ್ತಿಸುವುದು ಅನಿವಾರ್ಯವಾಗಿದೆ. ಅದಕ್ಕೆ ಲೀಟರ್‌ಗೆ ₹ 10ರಿಂದ ₹12 ಹೆಚ್ಚುವರಿ ಖರ್ಚು ತಗಲುವುದರಿಂದ ಒಕ್ಕೂಟಕ್ಕೆ ಹೊರೆಯಾಗಿದೆ’ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.