ADVERTISEMENT

ಒಳನೋಟ | ಎಂಎಸ್‌ಎಂಇ: ನಾನಾ ಸಮಸ್ಯೆ

ಸೂರ್ಯನಾರಾಯಣ ವಿ.
Published 18 ಮೇ 2025, 0:30 IST
Last Updated 18 ಮೇ 2025, 0:30 IST
<div class="paragraphs"><p>ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಾಮಗಾರಿಗಳಿಂದಾಗಿ ಸಾರ್ವಜನಿಕರು ವಾಹನ ಚಲಾಯಿಸಲು ಪರದಾಡುತ್ತಿರುವುದು</p></div>

ಬೆಂಗಳೂರಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಕಾಮಗಾರಿಗಳಿಂದಾಗಿ ಸಾರ್ವಜನಿಕರು ವಾಹನ ಚಲಾಯಿಸಲು ಪರದಾಡುತ್ತಿರುವುದು

   

ಚಿತ್ರ/ ಆನೇಕಲ್ ಶಿವಣ್ಣ

ಬೆಂಗಳೂರು: ‌‘ಕರ್ನಾಟಕದ ಆರ್ಥಿಕ ಬೆಳವಣಿಗೆ ಯಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು (ಎಂಎಸ್‌ಎಂಇ) ಪ್ರಮುಖ ಪಾತ್ರವಹಿಸುತ್ತಿವೆ. ನಿರುದ್ಯೋಗದ ಪ್ರಮಾಣ ತಗ್ಗಿಸುವಲ್ಲಿ ಇವುಗಳ ಕೊಡುಗೆ ಹಿರಿದು. ಲಕ್ಷಾಂತರ ಉದ್ಯೋಗಿಗಳಿಗೆ ಕೆಲಸ ನೀಡುವ ಮೂಲಕ ಅವರ ಕುಟುಂಬಗಳ ಬದುಕಿಗೆ ಭದ್ರತೆ ನೀಡಿವೆ. ಆದರೆ, ಈ ವಲಯ ಹಲವು ಸಮಸ್ಯೆಗಳಿಂದ ನರಳುತ್ತಿದೆ’

ADVERTISEMENT

– ಹೀಗೆಂದವರು ರಾಜ್ಯದ ಕೈಗಾರಿಕೆಗಳನ್ನು ಪ್ರತಿನಿಧಿಸುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ.

‘ನಾನು 25 ವರ್ಷಗಳಿಂದ ಬೆಂಗಳೂರಿನ ಪೀಣ್ಯಾ ಕೈಗಾರಿಕಾ ಪ್ರದೇಶದಲ್ಲಿ ತಯಾರಿಕಾ ಘಟಕವನ್ನು ನಡೆಸುತ್ತಿದ್ದೇನೆ. ಈ ಪ್ರದೇಶದಲ್ಲಿ 10 ಸಾವಿರ ಕೈಗಾರಿಕೆಗಳಿವೆ. ಇಂದಿಗೂ ಅಲ್ಲಿ ಮೂಲಸೌಕರ್ಯ ಇಲ್ಲ. ಸುಸಜ್ಜಿತ ರಸ್ತೆ ಇಲ್ಲ. ಚರಂಡಿ ವ್ಯವಸ್ಥೆಯಿಲ್ಲ. ಬೀದಿದೀಪದ ವ್ಯವಸ್ಥೆಯೂ ಇಲ್ಲ’

– ಇದು ಉದ್ಯಮಿ ಮುರಳೀಕೃಷ್ಣ ಅವರ ಮಾತು.

ಈ ಮಾತು ಆರ್ಥಿಕತೆ ಹಾಗೂ ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಕೊಡುಗೆ ನೀಡುತ್ತಿರುವ ಎಂಎಸ್‌ಎಂಇ ವಲಯ ಎದುರಿಸುತ್ತಿರುವ ಸವಾಲುಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತವೆ. ಹಲವು ಸಮಸ್ಯೆಗಳ ಕಾರಣಕ್ಕೆ ಆರ್ಥಿಕವಾಗಿ ಸದೃಢವಿಲ್ಲದ ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಮುಚ್ಚುವ ಹಂತಕ್ಕೆ ತಲುಪಿವೆ. ಇದು ಒಟ್ಟಾರೆಯಾಗಿ ರಾಜ್ಯದಲ್ಲಿ ಎಂಎಸ್‌ಎಂಇ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎನ್ನುವುದು ಈ ವಲಯದ ಉದ್ಯಮಿಗಳ ಅಳಲು.

ದೇಶದ ಒಟ್ಟು ಆಂತರಿಕ ಉತ್ಪನ್ನದಲ್ಲಿ (ಜಿಡಿಪಿ) ಎಂಎಸ್‌ಎಂಇಗಳ ಕೊಡುಗೆ ಶೇ 30ರಷ್ಟಿದೆ. ಒಟ್ಟಾರೆ ರಫ್ತಿನಲ್ಲಿ ಎಂಎಸ್‌ಎಂಇ ಉತ್ಪನ್ನಗಳ ರಫ್ತಿನ ಪ್ರಮಾಣ ಶೇ 46 ರಷ್ಟಿದೆ. ರಾಜ್ಯದ ಆದಾಯಕ್ಕೆ ಕೈಗಾರಿಕೆಗಳ ಕೊಡುಗೆ ಶೇ 20.15ರಷ್ಟು ಇದ್ದು, ಇದರಲ್ಲಿ ಎಂಎಸ್‌ಎಂಇಗಳ ಕೊಡುಗೆ ಗಣನೀಯವಾಗಿದೆ. ಆದರೆ, ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಕೊರತೆ, ಸಕಾಲದಲ್ಲಿ ಸಿಗದ ಹಣಕಾಸಿನ ಸೌಲಭ್ಯ, ಕುಶಲ ಕಾರ್ಮಿಕರ ಕೊರತೆ, ನಿರ್ವಹಣಾ ವೆಚ್ಚ ಅಧಿಕವಾಗಿರುವುದು, ಉದ್ದಿಮೆಗಳು ಟೈರ್‌–1 ನಗರಗಳನ್ನು ಕೇಂದ್ರಿತವಾಗಿರುವುದು ಸೇರಿದಂತೆ ಹಲವು ಸಮಸ್ಯೆಗಳು ಎಂಎಸ್‌ಎಂಇ ವಲಯದ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿವೆ. ಎಂಎಸ್‌ಎಂಇಗಳಿಗೆ ಉತ್ತೇಜನ ನೀಡುವುದಕ್ಕಾಗಿ ಸರ್ಕಾರಗಳು ವಿವಿಧ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ರೂಪಿಸಿವೆ.

ಕಲಬುರಗಿಯ ನಂದೂರ ಕೈಗಾರಿಕಾ ಪ್ರದೇಶದಲ್ಲಿ ಪ್ಲಾಸ್ಟಿಕ್‌ ಎಸೆಯುತ್ತಿರುವುದು

2024–25ನೇ ಸಾಲಿನ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಸಾಲ ಖಾತರಿ ಯೋಜನೆ ಘೋಷಿಸಿದ್ದು, ಅದರ ಅಡಿಯಲ್ಲಿ ಎಂಎಸ್‌ಎಂಇ ಉದ್ಯಮಿಗಳಿಗೆ ಯಂತ್ರೋಪಕರಣಗಳಿಗಾಗಿ ಅಡಮಾನ ಇಲ್ಲದೇ ₹100 ಕೋಟಿಯಷ್ಟು ಸಾಲ ಒದಗಿಸಲು ಖಾತರಿ ನೀಡಲಾಗುತ್ತದೆ. ಮುದ್ರಾ ಸಾಲ ವಿಸ್ತರಣೆ ಯೋಜನೆಯು ಒಮ್ಮೆ ಮುದ್ರಾ ಸಾಲ (₹10 ಲಕ್ಷ) ಪಡೆದು ಮರುಪಾವತಿ ಮಾಡಿದ ಉದ್ಯಮಿಗಳಿಗೆ ಈ ಯೋಜನೆ ಮತ್ತೆ ದುಪ್ಪಟ್ಟು ಮೊತ್ತದ (₹20 ಲಕ್ಷ) ಸಾಲ ನೀಡಲು ಅವಕಾಶ ಕಲ್ಪಿಸುತ್ತದೆ.

ಈ ವಲಯದಲ್ಲಿ ಹೂಡಿಕೆ ಹೆಚ್ಚು ಮಾಡುವ ಉದ್ದೇಶದಿಂದ ಶೇ 4ರಷ್ಟು ಬಡ್ಡಿಯಲ್ಲಿ ಸಹಾಯಧನವನ್ನೂ ಕೇಂದ್ರ ನೀಡುತ್ತದೆ. ರಾಜ್ಯ ಸರ್ಕಾರ ಕೂಡ ಈ ವಲಯಕ್ಕೆ ಅನುದಾನ ನೀಡುತ್ತಿದೆ. ಹಾಗಿದ್ದರೂ ಸರ್ಕಾರದ, ಬ್ಯಾಂಕುಗಳ ಕಠಿಣ ನಿಯಮಗಳು, ಅಧಿಕಾರಿಗಳ ಉದಾಸೀನ ಧೋರಣೆಯಿಂದಾಗಿ ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿಲ್ಲ ಎಂಬುದು ಉದ್ಯಮಿಗಳ ಅನಿಸಿಕೆ.

ಹಣಕಾಸಿನ ನಿರ್ಬಂಧ, ಸಿಗದ ಸಾಲ:

‘ರಾಷ್ಟ್ರಮಟ್ಟದಲ್ಲಿ ಎಂಎಸ್‌ಎಂಇಗಳಿಗೆ ಹಣಕಾಸು ಸಂಸ್ಥೆಗಳು ನೀಡುತ್ತಿರುವ ಸಾಲದ ಪ್ರಮಾಣ ಹೆಚ್ಚಾಗಿದೆ. 2023ರ ಅಕ್ಟೋಬರ್‌ ಹೊತ್ತಿಗೆ ಇದು ₹23.11 ಲಕ್ಷ ಕೋಟಿ ಇದ್ದಿದ್ದರೆ, ಕಳೆದ ವರ್ಷದ ಅಕ್ಟೋಬರ್‌ ಅಂತ್ಯಕ್ಕೆ ₹26.34 ಲಕ್ಷ ಕೋಟಿಗೆ ಏರಿಕೆಯಾಗಿತ್ತು. ಆದರೆ ಕರ್ನಾಟಕದಲ್ಲಿ ಎಂಎಸ್‌ಎಂಇಗಳಿಗೆ ಸಹಕಾರಿ ಬ್ಯಾಂಕುಗಳು ಹೆಚ್ಚು ಸಾಲ ನೀಡುತ್ತವೆ. ಒಟ್ಟಾರೆ ಸಾಲದಲ್ಲಿ ಈ ಬ್ಯಾಂಕುಗಳ ಪಾಲು ಶೇ 5ರಷ್ಟು ಮಾತ್ರ. ಈ ಅಂಕಿ ಅಂಶಗಳ ಹೊರತಾಗಿಯೂ ಉದ್ಯಮ ಸ್ಥಾಪನೆಗೆ ಬೇಕಾದಷ್ಟು ಸಾಲ ಪಡೆಯಲು ಉದ್ಯಮಿಗಳು ಕಷ್ಟಪಡಬೇಕು. ಸಾಲ ಮಂಜೂರಾದರೂ ಅದು ಸಕಾಲದಲ್ಲಿ ಸಿಗುವುದಿಲ್ಲ’ ಎಂದು ಹೇಳುತ್ತಾರೆ ಎಂ.ಜಿ.ಬಾಲಕೃಷ್ಣ.

ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡುವ ಬ್ಯಾಂಕ್ ಶಾಖೆಗಳ ಕೊರತೆ ಇದೆ. ಸಾಲಕ್ಕೆ ಹೆಚ್ಚಿನ ಬಡ್ಡಿದರ ವಿಧಿಸಲಾಗುತ್ತಿದೆ. ಸಾಲದ ಅರ್ಜಿ ಪ್ರಕ್ರಿಯೆಗಳು ದೀರ್ಘ ಸಮಯ ತೆಗೆದುಕೊಳ್ಳುತ್ತಿರುವುದು ಸಮಸ್ಯೆಯಾಗಿ ಕಾಡುತ್ತಿದೆ. ಉದ್ದಿಮೆದಾರರು ಮೈಕ್ರೊ ಫೈನಾನ್ಸ್‌ ಕಂಪನಿಗಳಿಂದಲೂ ಸಾಲ ಪಡೆಯುತ್ತಾರೆ. ಆದರೆ, ಮೈಕ್ರೊಫೈನಾನ್ಸ್‌ ಮೇಲಿನ ಸರ್ಕಾರದ ಕಠಿಣ ನಿಯಮಗಳು ಸಾಲ ಪಡೆಯುವುದಕ್ಕೆ ಅಡ್ಡಿಯಾಗಿದೆ. ಇವೆಲ್ಲವೂ ಬಂಡವಾಳ ಹರಿಯುವಿಕೆಯನ್ನು ತಡೆಯುತ್ತವೆ ಎಂದು ಹೇಳುತ್ತಾರೆ ಉದ್ಯಮಿಗಳು.

‘ಎಂಎಸ್‌ಎಂಇ ಸ್ಥಾಪಿಸಲು ಅಥವಾ ಪುನರುಜ್ಜೀವನ ಮಾಡಲು ಬ್ಯಾಂಕಿನಿಂದ ಸಾಲ ಕೇಳಿದರೆ ಕೃಷಿಯೇತರ (ಎನ್‌.ಎ) ಜಮೀನು ಹೊಂದಿರಬೇಕು ಎಂಬ ನಿಯಮವನ್ನು ಬ್ಯಾಂಕುಗಳು ಮಾಡಿವೆ. ಕೃಷಿಯೇತರ ಜಮೀನು ಖರೀದಿ ಮಾಡುವಷ್ಟು ಸಾಮರ್ಥ್ಯ ಈ ಕೈಗಾರಿಕೆಗಳಿಗೆ ಇಲ್ಲ. ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ 2 ಎಕರೆಗೂ ಹೆಚ್ಚಿರುವ ಪ್ರದೇಶವನ್ನು ಕೃಷಿಯೇತರ ಎಂದು ಮಾಡಲು ರಾಜ್ಯ ಸರ್ಕಾರದ ನಿಯಮಗಳು ಅಡ್ಡಬಂದಿವೆ. ಈ ಕಾರಣ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸಣ್ಣ ಕೈಗಾರಿಕೆಗಳು ಸಂಕಷ್ಟ ಎದುರಿಸುತ್ತಿವೆ’ ಎನ್ನುವುದು ಅವರ ವಾದ.

‘ಈ ವಲಯದಲ್ಲಿ ದುಡಿಮೆ ಬಂಡವಾಳವನ್ನು ನಿರ್ವಹಿಸುವುದು ಅತ್ಯಂತ ಮುಖ್ಯ. ಉದ್ದಿಮೆಗಳಿಗೆ ಇರುವ ಪ್ರಮುಖ ಸವಾಲು ಕೂಡ ಇದುವೇ. ಈ ಬಂಡವಾಳವನ್ನು ಅವಧಿ ಸಾಲದ ಒಂದು ಭಾಗವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸುತ್ತಾರೆ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಸಿ.ಜಿ.ಶ್ರೀನಿವಾಸನ್‌.

ಮೂಲಸೌಕರ್ಯಗಳ ಕೊರತೆ:

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಕೈಗಾರಿಕಾ ವಸಾಹತುಗಳಲ್ಲಿ ಮೂಲಸೌಕರ್ಯಗಳ ಕೊರತೆ ಬಾಧಿಸುತ್ತಿದ್ದು, ಇದು ವಲಯದ ಒಟ್ಟಾರೆ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತಿದೆ. ಬೆಂಗಳೂರು, ಮೈಸೂರು ಸೇರಿದಂತೆ ಪ್ರಮುಖ ನಗರಗಳಿಗೆ ಹೋಲಿಸಿದರೆ, ಜಿಲ್ಲೆಗಳು, ಗ್ರಾಮೀಣ ಭಾಗಗಳಲ್ಲಿರುವ ಕೈಗಾರಿಕೆ ವಸಾಹತುಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ರಸ್ತೆ, ನೀರು, ವಿದ್ಯುತ್‌, ಸಾರಿಗೆ, ಭದ್ರತಾ ವ್ಯವಸ್ಥೆಗಳು ಸಮರ್ಪಕವಾಗಿ ಇಲ್ಲದಿರುವುದು ಕೈಗಾರಿಕೆಗಳ ಕಾರ್ಯಾಚರಣೆ, ಉತ್ಪಾದನೆಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತಿದೆ.

ಕಲ್ಯಾಣ ಕರ್ನಾಟಕದ ವಿಜಯನಗರ, ಬಳ್ಳಾರಿ, ಯಾದಗಿರಿ, ಬೀದರ್, ರಾಯಚೂರು ಸೇರಿದಂತೆ ವಿಭಾಗೀಯ ಕೇಂದ್ರವಾದ ಕಲಬುರಗಿಯಲ್ಲಿನ ಕೈಗಾರಿಕಾ ಪ್ರದೇಶಗಳು ದಶಕಗಳಿಂದಲೂ ಮೂಲಸೌಕರ್ಯಗಳಿಂದ ವಂಚಿತವಾಗಿವೆ. ನೀರು ಸರಬರಾಜಿನಲ್ಲಿ ವ್ಯತ್ಯಯ, ಅಸಮರ್ಪಕ ರಸ್ತೆಯಂತಹ ಸಮಸ್ಯೆಗಳನ್ನು ಉದ್ಯಮಿಗಳು ಎದುರಿಸುತ್ತಿದ್ದಾರೆ. ಕಲಬುರಗಿಯ ಕೆಎಸ್‌ಎಸ್‌ಐಡಿಸಿ, ಎಂಎಸ್‍ಕೆ ಮಿಲ್ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ರಸ್ತೆ, ಒಳಚರಂಡಿ, ಬೀದಿ ದೀಪ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿಲ್ಲ. ನಂದೂರ ಕೈಗಾರಿಕಾ ಪ್ರದೇಶದಲ್ಲಿ ದಶಕಗಳ ಹಿಂದೆ ನಿರ್ಮಾಣವಾಗಿದ್ದ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಸರಿಯಾದ ಚರಂಡಿ, ನೀರಿನ ಸರಬರಾಜಿನ ವ್ಯವಸ್ಥೆ ಇಲ್ಲ. ಬೀದರ್‌ ಹೊರವಲಯದ ಕೊಳಾರ (ಕೆ) ಕೈಗಾರಿಕಾ ಪ್ರದೇಶವು ಮೂಲಸೌಕರ್ಯಗಳಿಲ್ಲದೇ ಬಡವಾಗಿದೆ. ಆರಂಭದಿಂದಲೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಆಯಾ ಕೈಗಾರಿಕೆಗಳವರೇ ಅದಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದಾರೆ.

‘ಕೈಗಾರಿಕಾ ಪ್ರದೇಶಗಳಲ್ಲಿನ ಘಟಕಗಳಲ್ಲಿ ಕಳ್ಳತನ ನಡೆಯುತ್ತಿದೆ. ಇದನ್ನು ತಡೆಯಲು ಪ್ರತ್ಯೇಕ ಪೊಲೀಸ್ ಠಾಣೆ ಸ್ಥಾಪಿಸುವ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ದಿನದ 24 ಗಂಟೆ ವಿದ್ಯುತ್ ಹಾಗೂ ನೀರು ಸರಬರಾಜು, ಹೊಸ ರಸ್ತೆಗಳ ನಿರ್ಮಾಣ ಮಾಡಬೇಕು. ಜಿಲ್ಲೆಯ ಭವಿಷ್ಯದ ಕೈಗಾರಿಕಾ ಅಭಿವೃದ್ಧಿಗಾಗಿ ನಗರದ ಸುತ್ತ ಕನಿಷ್ಠ 1,000 ಎಕರೆ ಭೂಮಿಯನ್ನು ಮೀಸಲಿಡಬೇಕು. ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿನ ಎಂಎಸ್‌ಎಂಇಗಳಿಗಾಗಿ ಪ್ರತ್ಯೇಕ ಕೈಗಾರಿಕಾ ನೀತಿ ಜಾರಿಗೆ ತರುವಂತೆ ಸರ್ಕಾರದ ಮುಂದೆ ಬೇಡಿಕೆ ಇರಿಸಿದ್ದೇವೆ’ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ ಹೇಳುತ್ತಾರೆ.

ಕೌಶಲಯುಕ್ತ ಕಾರ್ಮಿಕರ ಕೊರತೆ, ಹಳೆಯ ತಂತ್ರಜ್ಞಾನ:

ಬಹುತೇಕ ಎಂಎಸ್‌ಎಂಇಗಳು ಕುಶಲ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿವೆ. ನೇಮಕಗೊಂಡ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡುವ ವ್ಯವಸ್ಥೆ ರಾಜ್ಯದಲ್ಲಿ ಪರಿಣಾಮಕಾರಿಯಾಗಿಲ್ಲ. ಎಂಎಸ್‌ಎಂಇನಲ್ಲಿ ನಾವಿನ್ಯ ಕಲ್ಪನೆಗಳು ಮೂಡಿ ಬರುತ್ತಿಲ್ಲ. ಕನಿಷ್ಠ ಅರ್ಹತೆ ಹೊಂದಿರುವ ಕಾರ್ಮಿಕರನ್ನು ಗುರುತಿಸುವುದು ಮತ್ತು ತರಬೇತಿ ಸೌಲಭ್ಯ ನೀಡುವುದು ಮಾಲೀಕರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಹಲವು ಕೈಗಾರಿಕೆಗಳು ಇನ್ನೂ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿಲ್ಲ. ಹಳೆಯ ತಾಂತ್ರಿಕತೆಯನ್ನೇ ಅನುಸರಿಸುತ್ತಿವೆ. ಮಾಲೀಕರಿಗೆ, ಕಾರ್ಮಿಕರಿಗೆ ಹೊಸ ತಂತ್ರಜ್ಞಾನಗಳ ಬಗೆಗಿನ ಅರಿವು ಸೀಮಿತವಾಗಿದೆ. ದುಬಾರಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಅಸಾಧ್ಯ ಎನ್ನುವುದು ಒಂದು ಕಡೆಯಾದರೆ, ಅಳವಡಿಸಿಕೊಳ್ಳದಿದ್ದರೆ ಮಾರುಕಟ್ಟೆಯಲ್ಲಿ ಮೌಲ್ಯ ಕಳೆದುಕೊಳ್ಳುವ ಆತಂಕವನ್ನು ಕೈಗಾರಿಕೆಗಳು ಎದುರಿಸುತ್ತಿವೆ ಎಂಬುದು ಉದ್ಯಮದಲ್ಲಿ ತೊಡಗಿಕೊಂಡಿರುವವರ ಮಾತು.

ಮಂಗಳೂರಿನ ಗಂಜಿಮಠದಲ್ಲಿ ಕೆಐಎಡಿಬಿ

ಮಾರುಕಟ್ಟೆ ಮತ್ತು ಸ್ಪರ್ಧೆ:

ಎಂಎಸ್‌ಎಂಇಗಳಿಗೆ ಇರುವ ಸೀಮಿತ ಮಾರುಕಟ್ಟೆ ವ್ಯಾಪ್ತಿ, ದೊಡ್ಡ ಕೈಗಾರಿಕೆಗಳು ಒಡ್ಡುವ ಸ್ಪರ್ಧೆ ಮತ್ತು ಬ್ರ್ಯಾಂಡಿಂಗ್‌ನ ಕೊರತೆ ಎಂಎಸ್‌ಎಂಇ ಉತ್ಪನ್ನಗಳ ಮಾರಾಟದ ಮೇಲೆ ಪರಿಣಾಮ ಬೀರುತ್ತದೆ. ಗ್ರಾಹಕರನ್ನು ಸೆಳೆಯುವುದಕ್ಕೆ ಸಣ್ಣ ಉದ್ದಿಮೆಗಳು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ನಗರ ಬಿಟ್ಟು ಜಿಲ್ಲೆ, ಗ್ರಾಮೀಣ ಮಟ್ಟದಲ್ಲಿರುವ ಎಂಎಸ್‌ಎಂಇಗಳ ಉತ್ಪನ್ನಗಳಿಗೆ ಸಮರ್ಪಕ ಮಾರುಕಟ್ಟೆಯ ವ್ಯವಸ್ಥೆಯೇ ಇಲ್ಲ. ಅಮೆಜಾನ್‌, ಫ್ಲಿಪ್‌ಕಾರ್ಟ್‌ನಂಥ ಆನ್‌ಲೈನ್‌ ಮಾರುಕಟ್ಟೆಗಳನ್ನು ಕೆಲವರು ಆಶ್ರಯಿಸಿದ್ದಾರೆ. ಜವಳಿ ಕೈಗಾರಿಕೆಗಳಿಗೆ ಮಾತ್ರ ಇದರಲ್ಲಿ ಲಾಭ ಬರುತ್ತಿದೆ.

ನಿರ್ವಹಣಾ ವೆಚ್ಚ ಹೆಚ್ಚಳ:

‘ವಿದ್ಯುತ್‌ ಶುಲ್ಕ, ನೀರಿನ ಶುಲ್ಕ ಸೇರಿದಂತೆ ಸರ್ಕಾರ ವಿಧಿಸುವ ವಿವಿಧ ಶುಲ್ಕಗಳ ಹೆಚ್ಚಳವು ಎಂಎಸ್‌ಎಂಗಳ ಮೇಲೆ ಪರಿಣಾಮ ಬೀರುತ್ತಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆ, ಈಗ ಸರ್ಕಾರ ಹೊರಡಿಸಿರುವ ಕನಿಷ್ಠ ವೇತನದ ಅಧಿಸೂಚನೆಯಿಂದಾಗಿ ಘಟಕಗಳ ಒಟ್ಟು ನಿರ್ವಹಣಾ ವೆಚ್ಚದಲ್ಲಿ ಏರಿಕೆಯಾಗಲಿದೆ. ಇದರೊಂದಿಗೆ ಎಂಎಸ್‌ಎಂಇಗಳ ವರ್ಗೀಕರಣವನ್ನು ಪರಿಷ್ಕರಿಸಲಾಗಿದ್ದು, ₹500 ಕೋಟಿವರೆಗೆ ವಹಿವಾಟು ನಡೆಸುವ ಕಂಪನಿಗಳನ್ನು ಮಧ್ಯಮ ಗಾತ್ರದ ಉದ್ದಿಮೆಗಳು ಎಂದು ಗುರುತಿಸಿರುವುದರಿಂದ (ಮೊದಲು ₹250 ಕೋಟಿ ಇತ್ತು) ಎಂಎಸ್‌ಎಂಇಗಳು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಳ್ಳಲಿವೆ. ಇದು ಕೂಡ ವಲಯದ ಅಭಿವೃದ್ಧಿಗೆ ತಡೆ ಒಡ್ಡಲಿದೆ’ ಎಂದು ವಿವರಿಸುತ್ತಾರೆ ಸಿ.ಜಿ.ಶ್ರೀನಿವಾಸನ್‌.

ಡಾಂಬರ್ ಕಾಣದ ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ಫೈನ್ ಕಾಂಪ್ ರಸ್ತೆ

ನಗರ ಕೇಂದ್ರಿತ, ಭೂಮಿ ಕೊರತೆ:

ಕೈಗಾರಿಕೆಗಳು ಕೆಲವೇ ಕೆಲವು ನಗರಗಳಿಗೆ ಮಾತ್ರ ಕೇಂದ್ರೀಕೃತವಾಗಿ ಬೆಳೆಯುತ್ತಿರುವುದರಿಂದ ಕಿತ್ತೂರು ಕರ್ನಾಟಕ ಭಾಗದ ಹಲವು ಜಿಲ್ಲೆಗಳಲ್ಲಿ ಉದ್ಯಮಗಳು ಸ್ಥಾಪನೆಯಾಗಿಲ್ಲ. ಹೂಡಿಕೆದಾರರು ಈ ಕಡೆ ಬರಲು ಮನಸ್ಸು ಮಾಡುತ್ತಿಲ್ಲ.

‘ರಾಜ್ಯದ ಎರಡನೇ ಅತಿದೊಡ್ಡ ವ್ಯಾಪಾರ ಕೇಂದ್ರವಾದ ಹುಬ್ಬಳ್ಳಿ–ಧಾರವಾಡದಲ್ಲಿ ಕೈಗಾರಿಕೆಗಳು ನಿರೀಕ್ಷಿತ ಮಟ್ಟದಲ್ಲಿ ಬೆಳವಣಿಗೆ ಕಂಡಿಲ್ಲ. ಗೋಕುಲ, ತಾರಿಹಾಳ, ಗಾಮನಗಟ್ಟಿ, ರಾಯಾಪುರ, ಸತ್ತೂರು, ಲಕ್ಕಮನಹಳ್ಳಿ ಹಾಗೂ ಬೇಲೂರು ಸೇರಿ ಒಟ್ಟು ಏಳು ಕಡೆ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗಿದೆ. ಸಣ್ಣ ಮತ್ತು ಮಧ್ಯಮ ಉದ್ದಿಮೆಗಳು ಅಲ್ಲಲ್ಲಿವೆ. ಆದರೆ, ಇವುಗಳಿಗೆ ಕೈತುಂಬ ಕೆಲಸ ಕೊಡಬೇಕಾದ ಬೃಹತ್‌ ಕೈಗಾರಿಕೆಗಳು ಇಲ್ಲಿಲ್ಲ. ಹೀಗಾಗಿ ಸಣ್ಣ ಕೈಗಾರಿಕೆಗಳಿಗೆ ಬೆಳೆಯಲು ಅವಕಾಶ ಇಲ್ಲದಂತಾಗಿದೆ’ ಎನ್ನುತ್ತಾರೆ ಉದ್ಯಮಿ ಗಿರೀಶ ನಲವಡೆ.

ಬೆಳಗಾವಿ, ದಕ್ಷಿಣ ಕನ್ನಡ, ಉಡುಪಿ, ವಿಜಯ ನಗರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭೂಮಿ ಕೊರತೆ ಕಾಡುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಎಂಎಸ್‌ಎಂಇಗಳನ್ನು ಸ್ಥಾಪಿಸಲು ಪ್ರಸ್ತಾವಗಳು ಬಂದಿವೆ. ಆದರೆ, ಎಲ್ಲಿಯೂ ಸೂಕ್ತ ಭೂಮಿ ಸಿಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಮತ್ತು ನಗರಕ್ಕೆ ಹತ್ತಿರ ಇರುವ ಕೈಗಾರಿಕಾ ಪ್ರದೇಶಗಳು ಬೈಕಂಪಾಡಿ ಮತ್ತು ಯೆಯ್ಯಾಡಿ. ಇಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಬಹುತೇಕರು ಉತ್ಸುಕರಾಗಿದ್ದಾರೆ. ಆದರೆ ಅಲ್ಲಿ ಭೂಮಿ ಲಭ್ಯವಿಲ್ಲ. ದೂರದ ಪ್ರದೇಶಗಳಲ್ಲಿ ಬಸ್ ಸೌಲಭ್ಯ ಮುಖ್ಯ ರಸ್ತೆಗಳಿಗಷ್ಟೇ ಸೀಮಿತ. ಒಳಗಿನ ಪ್ರದೇಶಗಳಿಗೆ ಹೋಗಲು ಪರದಾಡಬೇಕಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ ಕೆಐಎಡಿಬಿಗೆ ಇರುವುದು 40 ಎಕರೆ ಜಾಗ. ಇದರಲ್ಲಿ ಹೊಸ ಉದ್ಯಮ ಆರಂಭಿಸಲು ಸಾಧ್ಯವಾಗುತ್ತಿಲ್ಲ.

‘ದಕ್ಷಿಣ ಕನ್ನಡದಲ್ಲಿ ಭೂಮಿಯ ಬೆಲೆಯೂ ಗಗನಕ್ಕೇರಿದೆ. ಎಲ್ಲ ಪ್ರದೇಶಗಳನ್ನು ಒಂದೇ ವಲಯವಾಗಿ ಪರಿಗಣಿಸಲಾಗಿದೆ. ಹೀಗಾಗಿ ಎಲ್ಲ ಕಡೆಯೂ ಒಂದೇ ಮಾರ್ಗಸೂಚಿ ದರ ನಿಗದಿ ಆಗಿದೆ. ಇದು ಉದ್ಯಮಿಗಳ ಭೂಮಿ ಖರೀದಿ ಕನಸನ್ನು ಭಗ್ನಗೊಳಿಸಿದೆ’ ಎಂದು ಹೇಳುತ್ತಾರೆ ಕೆನರಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಆನಂದ ಜಿ. ಪೈ.

ರಾಜ್ಯದಲ್ಲಿ ಎಂಎಸ್‌ಎಂಇಗಳು ಬೆಂಗಳೂರು ಕೇಂದ್ರಿತವಾಗಿದೆ. ಬೆಂಗಳೂರು ಬಿಟ್ಟರೆ ಮೈಸೂರು, ಮಂಗಳೂರಿನಂತಹ ದೊಡ್ಡ ನಗರ ಕೇಂದ್ರಿತವಾಗಿವೆ. ಇದರಿಂದಾಗಿ ಭೂಮಿಗೆ ಬೇಡಿಕೆ ಹೆಚ್ಚಾಗಿದೆ. ಜಿಲ್ಲಾ ಕೇಂದ್ರಗಳು ಸೇರಿದಂತೆ ಟೈರ್‌–2, ಟೈರ್‌–3 ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಯಾಗಿಲ್ಲ. ತಾಲ್ಲೂಕು, ಹೋಬಳ್ಳಿ ಮಟ್ಟದಲ್ಲೂ ಕೈಗಾರಿಕೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪೂರಕವಾಗಿ ಎಂಎಸ್‌ಎಂಇಗಳಿಗೆ ಕೆಲಸ ನೀಡುವ ದೊಡ್ಡ ಕೈಗಾರಿಕೆಗಳೂ ಸಹ ಸ್ಥಾಪನೆಯಾಗಬೇಕು ಎಂಬುದು ಉದ್ಯಮಿಗಳ ಆಗ್ರಹ.

ಎಂಎಸ್‌ಎಂಇ ವರ್ಗೀಕರಣ ಹೇಗೆ?

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ವರ್ಗೀಕರಣದ ವ್ಯಾಖ್ಯಾನವನ್ನು ಕೇಂದ್ರ ಸರ್ಕಾರ ಇದೇ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿದೆ

ಅದರ ಪ್ರಕಾರ,

* ಅತಿ ಸಣ್ಣ ಉದ್ಯಮ: ಘಟಕ ಮತ್ತು ಯಂತ್ರೋಪಕರಣಗಳಿಗಾಗಿ ಹೂಡಿಕೆ ಮಾಡುವ ಮೊತ್ತ ₹2.5 ಕೋಟಿಗಿಂತ ಕಡಿಮೆ ಇದ್ದು, ಉದ್ದಿಮೆಯ ವಾರ್ಷಿಕ ವಹಿವಾಟು ₹10 ಕೋಟಿ ಮೀರದ ಉದ್ಯಮ  

* ಸಣ್ಣ ಉದ್ಯಮ: ಬಂಡವಾಳ ಹೂಡಿಕೆ ₹25 ಕೋಟಿ ಮತ್ತು ವಾರ್ಷಿಕ ವಹಿವಾಟು ₹100 ಕೋಟಿ ಮೀರದ ಉದ್ಯಮ  

* ಮಧ್ಯಮ ಗಾತ್ರದ ಉದ್ಯಮ: ಹೂಡಿಕೆ ₹125 ಕೋಟಿ ಮತ್ತು ವಾರ್ಷಿಕ ವಹಿವಾಟು ₹500 ಕೋಟಿ ಮೀರದ ಉದ್ಯಮ

ಚರ್ಚಿಸಿ ಸೂಕ್ತ ತೀರ್ಮಾನ

ರಾಜ್ಯದಲ್ಲಿ ಎಂಎಸ್‌ಎಂಇ ವಲಯದಲ್ಲಿ ಹಲವು ತೊಂದರೆಗಳಿರುವುದು ಗಮನದಲ್ಲಿದೆ. ದೊಡ್ಡ ಉದ್ಯಮಕ್ಕೆ ಬ್ಯಾಂಕ್‌ಗಳು ಮನೆ ತನಕ ಹೋಗಿ ಸಾಲ ನೀಡುತ್ತವೆ. ಆದರೆ, ಸಣ್ಣ ಕೈಗಾರಿಕೆಗಳಿಗೆ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು
ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಇಲಾಖೆ ಸಚಿವ

ಶರಣಬಸಪ್ಪಗೌಡ ದರ್ಶನಾಪುರ

‘ಅವಶ್ಯಕತೆಗೆ ತಕ್ಕಂತೆ ಸಾಲ ಸೌಲಭ್ಯ ಬೇಕು’

ರಾಜ್ಯದಲ್ಲಿ ವಿಶೇಷವಾಗಿ ಟೈರ್‌–2 ಮತ್ತು ಟೈರ್‌–3 ನಗರಗಳಲ್ಲಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸಾಲ ಪಡೆಯಲು ಹರಸಾಹಸ ಪಡಬೇಕಾದ ಪರಿಸ್ಥಿತಿ ಇದೆ. ಹಣಕಾಸು ಸಂಸ್ಥೆಗಳ ಕಠಿಣ ಅಡಮಾನ ನಿಯಮಗಳು ಮತ್ತು ಸೀಮಿತ ಆರ್ಥಿಕ ಸಾಕ್ಷರತೆಯಿಂದಾಗಿ ಉದ್ಯಮಗಳು ತೊಂದರೆ ಎದುರಿಸುತ್ತಿವೆ. ಎಂಎಸ್ಎಂಇಗಳ ಅಗತ್ಯಗಳಿಗೆ ಅನುಸಾರ ಸಾಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಹಣಕಾಸು ಸಂಸ್ಥೆಗಳು ನೀತಿಗಳನ್ನು ರೂಪಿಸಬೇಕು. ಇದರೊಂದಿಗೆ, ಗ್ರಾಮೀಣ ಪ್ರದೇಶಗಳಲ್ಲಿ ಅತಿಸಣ್ಣ ಮತ್ತು ಸಣ್ಣ ಕೈಗಾರಿಕೆಗಳಿಗೆ ವಿಧಿಸುತ್ತಿರುವ ಬಡ್ಡಿ ದರ, ನಿರ್ವಹಣಾ ಶುಲ್ಕ ಮತ್ತು ನವೀಕರಣ ಶುಲ್ಕಗಳು ದುಬಾರಿಯಾಗಿದ್ದು, ಇದು ಉದ್ಯಮಿಗಳಿಗೆ ಆರ್ಥಿಕವಾಗಿ ಹೆಚ್ಚಿನ ಹೊರೆ ಉಂಟುಮಾಡುತ್ತಿದೆ. ಈ ಶುಲ್ಕಗಳನ್ನು ಕನಿಷ್ಠ ಮಟ್ಟಕ್ಕೆ ನಿಗದಿಪಡಿಸಿದರೆ ಅನುಕೂಲವಾಗುತ್ತದೆ. 
ಎಂ.ಜಿ.ರಾಜಗೋಪಾಲ್, ಕಾಸಿಯಾ ಅಧ್ಯಕ್ಷ

ರಾಜಗೋಪಾಲ್

ಕನಿಷ್ಠ ವೇತನ ಇನ್ನಷ್ಟು ಹೆಚ್ಚಿಸಬೇಕು

ಭಾರತೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ನಿಯಮ ಮತ್ತು ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿರುವ ಅಭಿಪ್ರಾಯದ ನಿಯಮಗಳ ಪ್ರಕಾರ, ಕಾರ್ಮಿಕರಿಗೆ ವೈಜ್ಞಾನಿಕವಾದ ಕನಿಷ್ಠ ವೇತನ ನೀಡಬೇಕು. ಪ್ರತಿ ಐದು ವರ್ಷಗಳಿಗೊಮ್ಮೆ ವೇತನವನ್ನು ಪರಿಷ್ಕರಿಸಬೇಕು. ಈ ಹಿಂದೆ 2017ರಲ್ಲಿ ಪರಿಷ್ಕರಣೆ ಆಗಿತ್ತು. ನಿಯಮದ ಪ್ರಕಾರ, 2022ರಲ್ಲಿ ವೇತನ ಪರಿಷ್ಕರಿಸಬೇಕಾಗಿತ್ತು. ಆದರೆ, ಆಗಿರಲಿಲ್ಲ. ಮೂರು ವರ್ಷ ಮುಂದಕ್ಕೆ ಹೋಗಿದೆ. 2021ರ ಡಿಸೆಂಬರ್‌ನಲ್ಲಿದ್ದ ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಮಾಡಬೇಕು ಎಂಬುದು ನಮ್ಮ ಬೇಡಿಕೆ. ಆದರೆ, ಸರ್ಕಾರ ಈಗ ಹೊರಡಿಸಿರುವ ಕರಡು ಅಧಿಸೂಚನೆಯಲ್ಲಿ 2024ರ ಬೆಲೆ ಗ್ರಾಹಕರ ಬೆಲೆ ಸೂಚ್ಯಂಕದ ಆಧಾರದಲ್ಲಿ ಕನಿಷ್ಠ ವೇತನ ನಿಗದಿ ಪಡಿಸಲಾಗಿದೆ. ಅದು ನಮ್ಮ ಬೇಡಿಕೆಗೆ ಸಮನಾಗಿ ಇಲ್ಲ.
ಮೀನಾಕ್ಷಿ ಸುಂದರಂ, ಎಐಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ

ಮೀನಾಕ್ಷಿ ಸುಂದರಂ

ಕನಿಷ್ಠ ವೇತನ ನಿಗದಿಗೆ ವಿರೋಧ

ರಾಜ್ಯದಲ್ಲಿ ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನ ದರವನ್ನು ನಿಗದಿ ಮಾಡಿ ರಾಜ್ಯ ಸರ್ಕಾರ ಇತ್ತೀಚೆಗೆ ಕಳೆದ ತಿಂಗಳು ಕರಡು ಅಧಿಸೂಚನೆ ಹೊರಡಿಸಿದ್ದು, ಉದ್ದಿಮೆದಾರರು ಇದನ್ನು ವಿರೋಧಿಸಿದ್ದಾರೆ.   

ಸುಪ್ರೀಂಕೋರ್ಟ್‌ ತೀರ್ಪಿನ ಅನ್ವಯ ಕನಿಷ್ಠ ವೇತನ ಪರಿಷ್ಕರಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ. ವಲಯವಾರು ಮತ್ತು ಕೌಶಲದ ಆಧಾರದಲ್ಲಿ ಕನಿಷ್ಠ ₹21 ಸಾವಿರದಿಂದ ಗರಿಷ್ಠ ₹31 ಸಾವಿರದವರೆಗೂ ವೇತನ ನಿಗದಿ ಪಡಿಸಲಾಗಿದೆ. 

‘ಈಗಾಗಲೇ ಸಂಕಷ್ಟದಲ್ಲಿರುವ ಎಂಎಸ್‌ಎಂಇಗಳಿಗೆ ಈಗಿನ ದುಬಾರಿ ನಿರ್ವಹಣಾ ವೆಚ್ಚದ ನಡುವೆ ಇಷ್ಟೊಂದು ವೇತನ ನೀಡಲು ಕಷ್ಟ. ಇದರಿಂದ ಕೈಗಾರಿಕೆಗಳ ಮೇಲೆ ಇನ್ನಷ್ಟು ಆರ್ಥಿಕ ಹೊರೆ ಬೀಳಲಿದೆ. ಇದಕ್ಕೆ ಪರ್ಯಾಯವಾಗಿ ಸರ್ಕಾರ ಎಂಎಸ್‌ಎಂಇಗಳಿಗೆ ಆರ್ಥಿಕವಾಗಿ ಅನುಕೂಲ ಕಲ್ಪಿಸುವಂತಹ ಕ್ರಮ ಕೈಗೊಳ್ಳಬೇಕು’ ಎಂದು ಉದ್ಯಮಗಳ ಸಂಘಟನೆಗಳು ಒತ್ತಾಯಿಸಿವೆ.  

‘ಕೇವಲ ನೀತಿ ಸಾಲದು, ಪರಿಣಾಮಕಾರಿ ಅನುಷ್ಠಾನ ಬೇಕು’ 

ರಾಜ್ಯದ ಪ್ರಗತಿಗೆ ಕೊಡುಗೆ ನೀಡುತ್ತಿರುವ ಉದ್ಯಮಿಗಳನ್ನು ಗುರುತಿಸಿ ಅವರಿಗೆ ಹಣಕಾಸಿನ ನೆರವು ನೀಡುವಂತಹ ಕ್ರಮ ರೂಪಿಸುವ ಅಗತ್ಯವಿದೆ. ಬಹಳಷ್ಟು ಎಂಎಸ್‌ಎಂಇಗಳಿಗೆ ಆಧುನಿಕ ತಂತ್ರಜ್ಞಾನ ಸೌಲಭ್ಯ ಕಲ್ಪಿಸಬೇಕಿದೆ. ಉದ್ದಿಮೆಗಳ ಸ್ಥಾಪನೆಗೆ ಅನುಮತಿ ಪಡೆಯಲು ಹರಸಾಹಸ ನಡೆಸಬೇಕು. ಪರವಾನಗಿ ಹಾಗೂ ಇತರೆ ಸೌಲಭ್ಯ ನೀಡಲು ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ಟೈರ್‌ 2 ಮತ್ತು 3 ನಗರಗಳಲ್ಲೂ ಎಂಎಸ್‌ಎಂಇ ವಲಯ ಸ್ಥಾಪಿಸಬೇಕು. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಸೃಷ್ಟಿಗೆ ನೆರವಾಗಲಿದೆ. ಜೊತೆಗೆ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವಿನ ಅಸಮಾನತೆಯ ಅಂತರ ಕಡಿಮೆಯಾಗಲಿದೆ. ಸರ್ಕಾರವು ಎಂಎಸ್‌ಎಂಇ ನೀತಿ ರೂಪಿಸಿದರಷ್ಟೆ ಸಾಲದು. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಅನುಕೂಲ ಕಲ್ಪಿಸಬೇಕು.
ಎಂ.ಜಿ.ಬಾಲಕೃಷ್ಣ, ಅಧ್ಯಕ್ಷ, ಎಫ್‌ಕೆಸಿಸಿಐ

ಎಂ.ಜಿ. ಬಾಲಕೃಷ್ಣ

ಪೂರಕ ಮಾಹಿತಿ: ಶ್ರೀಕಾಂತ್‌ ಕಲ್ಲಮ್ಮನವರ, ಕೆ.ಎಚ್‌.ಓಬಳೇಶ್‌, ವಿಕ್ರಂ ಕಾಂತಿಕೆರೆ,
ಆರ್‌.ಜಿತೇಂದ್ರ, ಮಲ್ಲಿಕಾರ್ಜುನ ನಾಲವಾರ

ಪರಿಕಲ್ಪನೆ: ಯತೀಶ್‌ ಕುಮಾರ್‌ ಜಿ.ಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.