ADVERTISEMENT

ಕರ್ನಾಟಕದ ಕ್ರೀಡಾಂಗಣ ಭಣ ಭಣ

ಗುರುವೂ ಇಲ್ಲ ಗುರಿಯೂ ಇಲ್ಲ l ದೂರ ದೃಷ್ಟಿಯ ಕೊರತೆ l ತಂತ್ರಜ್ಞಾನದ ಬರ

ಗಿರೀಶದೊಡ್ಡಮನಿ
Published 8 ಜೂನ್ 2019, 19:44 IST
Last Updated 8 ಜೂನ್ 2019, 19:44 IST
ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವುದು ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್
ಕಂಠೀರವ ಕ್ರೀಡಾಂಗಣದ ಸಿಂಥೆಟಿಕ್‌ ಟ್ರ್ಯಾಕ್‌ ಹಾಳಾಗಿರುವುದು ಪ್ರಜಾವಾಣಿ ಚಿತ್ರ/ಕೃಷ್ಣಕುಮಾರ್‌ ಪಿ.ಎಸ್   

ಬೆಂಗಳೂರು: ವಿಶ್ವ ವಾಣಿಜ್ಯ ಭೂಪಟದ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ. ಶಿಕ್ಷಣ, ತಂತ್ರಜ್ಞಾನ, ವೈದ್ಯಕೀಯ ಮತ್ತಿತರ ಕ್ಷೇತ್ರಗಳಲ್ಲಿ ಉದ್ಯಾನನಗರಿ ಬೆಂಗಳೂರಿನ ಹೆಸರು ಹೆಮ್ಮೆ ಮೂಡಿಸುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕಂತೂ ನಮ್ಮೂರೇ ರಾಜ. ಆದರೆ ಕ್ರೀಡಾ ಭೂಪಟದ ಮೇಲೊಮ್ಮೆ ನೋಟ ಬೀರಿದರೆ ..

ಬೇರೆಲ್ಲ ಕ್ಷೇತ್ರಗಳಲ್ಲಿ ಅಮೆರಿಕ, ಚೀನಾ ಮುತ್ತು ಯುರೋಪ್‌ನ ದೇಶಗಳೊಂದಿಗೆ ನಿಕಟ ಪೈಪೋಟಿಯೊಡ್ಡಿರುವ ಈ ರಾಜ್ಯದ ರಾಜಧಾನಿಯು ಕ್ರೀಡಾಭಿವೃದ್ಧಿಯಲ್ಲಿ ಇನ್ನೂ ಮೂರ್ನಾಲ್ಕು ದಶಕ ಹಿಂದುಳಿದಿದೆ. ವಿದೇಶಗಳಲ್ಲಿ ಈಗ ಕ್ರೀಡಾಪಟುಗಳು ಪ್ರಯೋಗಾಲಯಗಳಲ್ಲಿ ಸಿದ್ಧಗೊಳ್ಳುತ್ತಿದ್ದಾರೆ. ಆಧುನಿಕ ತಂತ್ರಜ್ಞಾನ, ವೈದ್ಯಕೀಯ ಸೌಲಭ್ಯ ಮತ್ತು ಅಹಾರ ವಿಜ್ಞಾನವನ್ನು ಬಳಸಿಕೊಂಡು ಬೆಳೆಯುತ್ತಿದ್ದಾರೆ. ಆದರೆ ನಮ್ಮಲ್ಲಿ ಇನ್ನೂ ಒಂದು ಒಳ್ಳೆಯ ಸಿಂಥೆಟಿಕ್ ಟ್ರ್ಯಾಕ್, ಸುಸಜ್ಜಿತ ಜಿಮ್ನಾಷಿಯಂ, ಪೌಷ್ಟಿಕ ಆಹಾರ ನೀಡುವ ಮೂಲಕಾರ್ಯಗಳೇ ಸಂಪೂರ್ಣವಾಗಿ ನಡೆಯುತ್ತಿಲ್ಲ.

ಬೆಂಗಳೂರಿನಂತಹ ಊರಿನಲ್ಲಿಯೇ ಕಿತ್ತು ಹೋಗಿರುವ ಸಿಂಥೆಟಿಕ್ ಟ್ರ್ಯಾಕ್, ಹಾಳಾಗಿರುವ ಕ್ರೀಡಾಂಗಣಗಳು, ಹಾವು, ಹಲ್ಲಿಗಳು ಓಡಾಡುವ ಒಳಾಂಗಣ ಕ್ರೀಡಾಂಗಣಗಳು ಇವೆ. ಇನ್ನೂ ಗ್ರಾಮೀಣ ಭಾಗದಲ್ಲಿ ಕೇಳುವುದೇ ಬೇಡ. ಕಳೆದ ಹತ್ತು ವರ್ಷಗಳಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಜೆಟ್‌ ಹೆಚ್ಚುತ್ತಲೇ ಹೋಗಿದೆ. ಆದರೆ, ಅದಕ್ಕೆ ತಕ್ಕಂತೆ ಸೌಲಭ್ಯಗಳು ಮಾತ್ರ ಅಭಿವೃದ್ಧಿಯಾಗಿಲ್ಲ.

ADVERTISEMENT

ಇಲಾಖೆಯಲ್ಲಿರುವ ತರಬೇತುದಾರರು ಸಂಬಳಕ್ಕಾಗಿ, ವರ್ಗಾವಣೆ ರದ್ದತಿಗಾಗಿ, ಬಡ್ತಿಗಾಗಿ ಹೋರಾಟ, ಪ್ರತಿಭಟನೆಗಳನ್ನು ಮಾಡುವುದು ತಪ್ಪಿಲ್ಲ. ಇವೆಲ್ಲದರ ನಡುವೆಯೂ ತಮ್ಮ ಪ್ರತಿಭೆ ಮತ್ತು ಸ್ವಪ್ರಯತ್ನದಿಂದ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಸೂಕ್ತ ಮನ್ನಣೆ ಇಲ್ಲ. ಉದ್ಯೋಗವೂ ಇಲ್ಲ. ಹಣವೂ ಇಲ್ಲದಂತಾಗಿದೆ.

ಹೋದ ವರ್ಷ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದಕೊಟ್ಟಿದ್ದ ಕರ್ನಾಟಕದ ವೇಟ್‌ಲಿಫ್ಟರ್‌ ಗುರುರಾಜ್ ಅವರಿಗೆ ಕರ್ನಾಟಕ ಸರ್ಕಾರವು ನಗದು ಬಹುಮಾನ ನೀಡುವುದಾಗಿ ಘೋಷಿಸಿತ್ತು. ಅದರೆ, ಅದನ್ನು ಸುದೀರ್ಘ ಅವಧಿಯ ನಂತರ ಮಾಧ್ಯಮಗಳು ಗಮನ ಸೆಳೆದಾಗಲೇ ಕೊಟ್ಟಿದ್ದು. ಇಂತಹ ಉದಾಹರಣೆಗಳು ನೂರಾರು ಆಗಿಹೋಗಿವೆ. ದಶಕದ ಹಿಂದೆ ಒಲಿಂಪಿಯನ್ ಶೋಭಾ ಜಾವೂರ್ ಅವರಂತಹ ಉತ್ತಮ ಅಥ್ಲೀಟ್‌ಗೆ ರಾಜ್ಯದಲ್ಲಿಯೇ ನೌಕರಿ ಕೊಟ್ಟು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅವರು ಸಿಕಂದರಾಬಾದ್‌ ರೈಲ್ವೇ ವಿಭಾಗಕ್ಕೆ ವಲಸೆ ಹೋದರು. ಹಲವು ಕನ್ನಡಿಗ ಕ್ರೀಡಾಪಟುಗಳು ದೇಶದ ಬೇರೆ ಬೇರೆ ರಾಜ್ಯ ಗಳಲ್ಲಿ ನೌಕರಿ ಮಾಡುತ್ತಿದ್ದಾರೆ. ಈಗಂತೂ ಪೊಲೀಸ್ ಇಲಾಖೆ ಬಿಟ್ಟರೆ ಬೇರಾವುದೇ ಇಲಾಖೆಯಲ್ಲಿಯೂ ಕ್ರೀಡಾ ಕೋಟಾದ ನೌಕರಿಗಳು ಉಳಿದಿಲ್ಲ.

ತಾರೆಗಳ ಕೊರತೆ: ಕರ್ನಾಟಕದ ಅಥ್ಲೆಟಿಕ್ಸ್‌ ಅಂಗಳದಲ್ಲಿ ಕಣ್ಮನ ಕೊರೆಸುವ ತಾರೆಗಳ ದಂಡು ಇತ್ತು. ಅಶ್ವಿನಿ ನಾಚಪ್ಪ, ವಂದನಾ ರಾವ್‌, ವಂದನಾ ಶಾನಭಾಗ್, ರೀತ್ ಅಬ್ರಹಾಂ, ಉದಯ್ ಪ್ರಭು, ಅರ್ಜುನ್ ದೇವಯ್ಯ, ಎಸ್‌.ಡಿ. ಈಶನ್ ಹೀಗೆ ಹತ್ತಾರು ಹೆಸರುಗಳು ಇದ್ದವು. ಆದರೆ ಇವತ್ತು ಅಂತಹ ದೊಡ್ಡ ಹೆಸರುಗಳು ಕಾಣುತ್ತಿಲ್ಲ.

ತಾರಾ ವರ್ಚಸ್ಸಿನ ಕ್ರೀಡಾಪಟುಗಳನ್ನು ಬೆಳೆಸದ ಹೊರತು ಕ್ರೀಡೆ ಹೇಗೆ ಬೆಳೆಯಲು ಸಾಧ್ಯ? ಉದಾಹರಣೆಗೆ ಕ್ರಿಕೆಟ್‌ ನೋಡಿ. ಕಪಿಲ್ ದೇವ್ ಬಳಗವು 1983ರಲ್ಲಿ ಮಾಡಿದ ಸಾಧನೆಯನ್ನು ಬಳಸಿಕೊಂಡ ರೀತಿ, ಬಿಸಿಸಿಐ ಶ್ರೀಮಂತ ಸಂಸ್ಥೆ ಯಾಗಿ ಬೆಳೆದ ಪರಿ ನೋಡಿದರೆ ಕಣ್ಣುಕುಕ್ಕುತ್ತದೆ. ಅದಕ್ಕೆ ಕಾರಣ ಸತತವಾಗಿ ಸ್ಟಾರ್‌ ಆಟಗಾರರು ಇಲ್ಲಿ ಬೆಳಗುತ್ತಿರುವುದು.

ಬಿಸಿಸಿಐ ಜೂನಿಯರ್ ಹಂತದಿಂದಲೇ ಕ್ರಿಕೆಟಿಗರನ್ನು ಬೆಳೆಸುವ ಸದೃಢವಾದ ವ್ಯವಸ್ಥೆ ಹೊಂದಿದೆ. ರಾಜ್ಯದ ವಯೋಮಿತಿಯ ತಂಡಗಳಿಗೆ ಆಡುವ ಆಟಗಾರರಿಗೂ ಸಂಭಾವನೆ, ಉತ್ತಮ ಸೌಲಭ್ಯಗಳು ದೊರೆಯುತ್ತಿವೆ. ಕ್ರಿಕೆಟ್‌ ಕೆಲವು ವೃತ್ತಿಗಳನ್ನೂ ಸೃಷ್ಟಿಸಿ
ರುವುದರಿಂದ ಪೋಷಕರು ಮಕ್ಕಳ ಭವಿಷ್ಯ ರೂಪಿಸಲು ಕ್ರಿಕೆಟ್‌ನತ್ತ ಹೋಗುವುದು ಸಹಜವಾಗಿದೆ.

ಪ್ರೊ ಕಬಡ್ಡಿ ಬಂದ ಮೇಲೆ ಅಲ್ಲಿಯೂ ಒಂದಿಷ್ಟು ಬೆಳಕು ಬೀಳುತ್ತಿದೆ. ಫುಟ್‌ಬಾಲ್ ಕೂಡ ಲೀಗ್ ಟೂರ್ನಿಗಳಿಂದಾಗಿ ತುಸು ಬೆಳೆಯುತ್ತಿದೆ. ಆದರೆ, ಉಳಿದ ಆಟಗಳಲ್ಲಿ ಇದು ಕಾಣುತ್ತಿಲ್ಲ. ಅಥ್ಲೆಟಿಕ್ಸ್, ವೇಟ್‌ಲಿಫ್ಟಿಂಗ್, ದೇಹದಾರ್ಢ್ಯ, ಈಜು ಮತ್ತಿತರ ಕ್ರೀಡೆಗಳಿಗೆ ಬರುವವರು ಗ್ರಾಮೀಣ ಪ್ರದೇಶದ ಕುಟುಂಬಗಳ ಮಕ್ಕಳು. ಪ್ರತಿಭೆಗಳಿಗೆ ಕೊರತೆಯಿಲ್ಲ. ಆದರೆ, ಅವರಿಗೆ ಸೂಕ್ತ ಸೌಲಭ್ಯ ಮತ್ತು ಉತ್ತಮ ಭವಿಷ್ಯದ ದಾರಿ ತೋರಿಸುವ ಕೆಲಸ ಆಗುತ್ತಿಲ್ಲ.

ಮುಂದುವರಿದ ದೇಶಗಳಲ್ಲಿ ಕ್ರೀಡೆಯ ಸಫಲತೆಯು ಅಲ್ಲಿಯ ಸಂತಸದ ಬಾಳಿನ ಸಂಕೇತ ಮತ್ತು ದೇಶದ ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅಮೆರಿಕ, ರಷ್ಯಾ, ಚೀನಾ, ಜಪಾನ್, ಕೊರಿಯಾ ದೇಶಗಳು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿವೆ. ಆದರೆ, ಕ್ರೀಡೆಯನ್ನು ಬಿಟ್ಟುಕೊಟ್ಟಿಲ್ಲ. ಮುಂದಿನ ವರ್ಷ ಜಪಾನ್‌ ಒಲಿಂಪಿಕ್ಸ್‌ ಕೂಟವನ್ನು ಆಯೋಜಿಸಲು ಸನ್ನದ್ಧವಾಗಿದೆ. ಆದರೆ ಆ ಕೂಟದಲ್ಲಿ ನಾಡಿನ ಎಷ್ಟು ಜನ ಅಥ್ಲೀಟ್‌ಗಳು ಭಾರತ ಧ್ವಜ ದೊಂದಿಗೆ ಓಡಲಿದ್ದಾರೆ ಎನ್ನುವುದು ತಿಳಿದಿಲ್ಲ!

ಒಡಿಶಾ ಮಾದರಿ

ಆರು ವರ್ಷಗಳ ಹಿಂದಿನ ಮಾತು. ಕಟಕ್‌ನ ಬಾರಾಬಾತಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಣಜಿ ಕ್ರಿಕೆಟ್ ಪಂದ್ಯ ನಡೆಯಬೇಕಿತ್ತು. ಆದರೆ, ಅಲ್ಲಿ ಬಾಲಕಿಯರ ಅಂತರರಾಜ್ಯ ಫುಟ್‌ಬಾಲ್ ಟೂರ್ನಿಯನ್ನು ಆಯೋಜಿಸಲು ಅಂತಿಮ ಹಂತದಲ್ಲಿ ಫುಟ್‌ಬಾಲ್ ಸಂಸ್ಥೆ ಕೋರಿತ್ತು. ರಣಜಿ ಪಂದ್ಯವನ್ನು 25 ಕಿ.ಮೀ ದೂರದ ಡ್ರೀಮ್ಸ್‌ ಕ್ರೀಡಾಂಗಣಕ್ಕೆ ಸ್ಥಳಾಂತರಿಸಿ ಫುಟ್‌ಬಾಲ್‌ಗೆ ಅವಕಾಶ ಮಾಡಿಕೊಡಲಾಯಿತು.

ಒಡಿಶಾ ರಾಜ್ಯವು ಕ್ರೀಡೆಗಳಿಗೆ ನೀಡುವ ಮನ್ನಣೆಯ ಒಂದು ಉದಾಹರಣೆ ಇದು. ಹಿಂದುಳಿದ ರಾಜ್ಯವೆಂಬ ಹಣೆಪಟ್ಟಿ ಇದ್ದರೂ ವಿಶ್ವಕಪ್ ಹಾಕಿ ಟೂರ್ನಿಯನ್ನು ಭುವನೇಶ್ವರದಲ್ಲಿ ಅಚ್ಚುಕಟ್ಟಾಗಿ ಆಯೋಜಿಸಿದ ಕೀರ್ತಿ ಒಡಿಶಾದ್ದು. ತನ್ನ ಕಾಡುಗಳ ಒಡಲಲ್ಲಿರುವ ಬುಡಕಟ್ಟು ಜನಾಂಗದ ಪ್ರತಿಭೆಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ಕ್ರೀಡೆಯ ಮುಖ್ಯವಾಹಿನಿಗೆ ತರುತ್ತಿರುವ ಒಡಿಶಾ, ವಿಶ್ವ ಭೂಪಟದಲ್ಲಿ ಹೆಸರು ಮಾಡುತ್ತಿದೆ.

90ರ ದಶಕದಲ್ಲಿ ಕರ್ನಾಟಕದಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಿ, ಕುಣಬಿ ಜನಾಂಗದ ಕ್ರೀಡಾಪಟುಗಳನ್ನು ಬೆಳೆಸಲು ವಿಶೇಷ ಕ್ರೀಡಾ ವಲಯ ಯೋಜನೆ ರೂಪಿಸಲಾಗಿತ್ತು. ಆದರೆ ಅದು ವಿಫಲವಾಯಿತು. ಆ ಜನಾಂಗಗಳು ಇರುವ ಪರಿಸರದಲ್ಲಿಯೇ ಸೌಲಭ್ಯ ಅಭಿವೃದ್ಧಿಪಡಿಸಿ ತರಬೇತಿ ನೀಡಲು ತಜ್ಞರು ವರದಿ ನೀಡಿದ್ದರು. ಆದರೆ, ಸರ್ಕಾರವು ಅಲ್ಲಿಯ ಕ್ರೀಡಾಪಟುಗಳನ್ನು ಆಯ್ಕೆ ಮಾಡಿಕೊಂಡು ಬೆಂಗಳೂರಿಗೆ ತಂದಿರಿಸಿತು. ನಂತರ ಯೋಜನೆ ಸ್ಥಗಿತವಾಯಿತು.

ಭಾರತೀ ಕ್ರೀಡಾ ಪ್ರಾಧಿಕಾರವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ವಸತಿ ಶಾಲೆಗಳನ್ನು ನಡೆಸುತ್ತಿದೆ. ಧಾರವಾಡದಂತಹ ಊರಿನಲ್ಲಿ ಸ್ವಂತ ಸೂರು ಕಟ್ಟಿಕೊಳ್ಳಲು ಸಾಯ್‌ಗೆ ಜಾಗ ಲಭಿಸುತ್ತಿಲ್ಲ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಇದು ದೊಡ್ಡ ಮಾತಲ್ಲ. ಅಲ್ಲಿಯ ಹಳೆಯ ಶಿಥಿಲ ಕಟ್ಟದಲ್ಲಿಯೇ ಕ್ರೀಡಾಪಟುಗಳು ವಸತಿ ಮಾಡಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಸಾಧನೆ ಮಾಡುತ್ತಿದ್ದಾರೆ.

‘ನಮಗೆ ಭೂಮಿ ಕೊಟ್ಟರೆ ಸಾಕು. ನಮ್ಮ ಇಲಾಖೆಯು ದುಡ್ಡು ವಿನಿಯೋಗಿಸಿ ಸೌಲಭ್ಯಗಳನ್ನು ನಿರ್ಮಿಸುತ್ತದೆ. ಅದರಿಂದ ಉತ್ತರ ಕರ್ನಾಟಕದ ಕ್ರೀಡಾಪಟುಗಳು, ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚು ಲಾಭವಾಗುತ್ತದೆ’ ಎಂದು ಸಾಯ್‌ನ ಕೆಲವು ಅಧಿಕಾರಿಗಳು ಹೇಳುತ್ತಾರೆ.

ಬೆಂಗಳೂರಿನ ಸಾಯ್‌ನಲ್ಲಿ ಈಗ ರಾಷ್ಟ್ರೀಯ ತಂಡಗಳ ಶಿಬಿರಗಳು ನಡೆಯುತ್ತಿವೆ. ಅದೇ ಮಾದರಿಯಲ್ಲಿ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಆಯಾ ವಲಯದ ಪ್ರಮುಖ ಕ್ರೀಡೆಗಳ ತರಬೇತಿ ಕೇಂದ್ರಗಳು ಸ್ಥಾಪನೆಯಾಗಬೇಕು ಎಂಬ ಬೇಡಿಕೆ ಬಹುಕಾಲದಿಂದಲೂ ಇದೆ.

ವೈಜ್ಞಾನಿಕ ಮಸಾಜ್ ಥೆರಪಿ ಮುಖ್ಯ

‘ನಾವಿನ್ನೂ ಹಳೆಯ ಕಾಲದಲ್ಲಿದ್ದೇವೆ. ಗಾಯವಾದರೆ, ಪೆಟ್ಟು ಬಿದ್ದರೆ ಕ್ರೀಡಾವೈದ್ಯರ ಬಳಿ ಆಟಗಾರರನ್ನು ಕರೆದೊಯ್ಯುವುದಿಲ್ಲ. ಸಾಮಾನ್ಯ ವೈದ್ಯರೇ ಚಿಕಿತ್ಸೆ ನೀಡುತ್ತಾರೆ. ಇದರಿಂದ ಎಷ್ಟೋ ಕ್ರೀಡಾಪಟುಗಳ ವೃತ್ತಿಜೀವನಕ್ಕೆ ಪೂರ್ಣವಿರಾಮ ಬಿದ್ದಿದೆ. ಕ್ರೀಡಾ ವೈದ್ಯಕೀಯದ ಚಿಕಿತ್ಸಾ ವಿಧಾನವೇ ಬೇರೆ. ಅದಕ್ಕೆ ಪರಿಣತಿ ಅಗ್ಯ. ಇಂದಿನ ಯುಗದಲ್ಲಿ ಮಸಾಜ್ ಥೆರಪಿ ಕೂಡ ಮುಖ್ಯ. ಕ್ರಿಕೆಟ್, ಫುಟ್‌ಬಾಲ್‌, ಟೆನಿಸ್‌ನಲ್ಲಿ ಇದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಅಥ್ಲೆಟಿಕ್ಸ್‌ನಲ್ಲಿ ಆಗಿಲ್ಲ. ಈ ಬಗ್ಗೆ ಜಾಗೃತಿ ಮೂಡಬೇಕು’ ಎಂದು ನಾಗರಬಾವಿಯಲ್ಲಿರುವ ಕ್ರೀಡಾ ಮಸಾಜ್ ತಜ್ಞ ಆಶೀಶ್ ಹೇಳುತ್ತಾರೆ. ಅವರು ಮಾಜಿ ಅಂತರರಾಷ್ಟ್ರೀಯ ಕ್ರೀಡಾಪಟುವೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.