ADVERTISEMENT

ಕಾಶ್ಮೀರ ಕಣಿವೆ; ಚೆಲ್ಲು ಚೆದುರಾದ ಚಿತ್ತಾರ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 20:03 IST
Last Updated 23 ಫೆಬ್ರುವರಿ 2019, 20:03 IST
   

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ–ಪಾಕಿಸ್ತಾನದ ನಡುವಣ ಸಂಘರ್ಷವು 1947ರಷ್ಟು ಹಿಂದೆಯೇ ಆರಂಭವಾಗಿತ್ತು. ಸ್ವಾತಂತ್ರ್ಯದ ಹೊತ್ತಿಗೆ ದೇಶದಲ್ಲಿ 500ಕ್ಕೂ ಹೆಚ್ಚು ಸಂಸ್ಥಾನಗಳಿದ್ದವು. ಭಾರತದೊಂದಿಗೆ ವಿಲೀನವಾಗಬೇಕೇ ಬೇಡವೇ ಎಂಬುದನ್ನು ನಿರ್ಧರಿಸುವ ಮುಕ್ತ ಅವಕಾಶವನ್ನು ಈ ಸಂಸ್ಥಾನಗಳಿಗೆ ಭಾರತ ಸರ್ಕಾರವು ನೀಡಿತ್ತು. ಏನು ಮಾಡಬೇಕು ಎಂಬುದನ್ನು ಸಂಸ್ಥಾನದ ಜನರೇ ನಿರ್ಧರಿಸುವ ಅವಕಾಶವೂ ಇತ್ತು.

ಈ ಸಂದರ್ಭದಲ್ಲಿ ಕಾಶ್ಮೀರವನ್ನು ಆಳುತ್ತಿದ್ದ ರಾಜಾ ಹರಿಸಿಂಗ್ ಎರಡೂ ದೇಶಗಳ ಜತೆ ಸೇರದೆ ಸ್ವತಂತ್ರವಾಗಿರುವ ನಿರ್ಧಾರ ತೆಗೆದುಕೊಂಡಿದ್ದರು. ಆದರೆ ಮುಸ್ಲಿಮರೇ ಬಹುಸಂಖ್ಯಾತರಾಗಿದ್ದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಸೇರಿಸಬೇಕು ಎಂಬುದು ಅಲ್ಲಿನ ಬಹುಜನರ ಅಭಿಪ್ರಾಯವಾಗಿತ್ತು. ಇದೇ ಸಂದರ್ಭದಲ್ಲಿ (1947) ಕಾಶ್ಮೀರವನ್ನು ಪಾಕಿಸ್ತಾನದಸೇನೆ ಆಕ್ರಮಿಸಿತ್ತು. ಆ ದಾಳಿಯನ್ನು ಎದುರಿಸಲಾಗದೆ ಹರಿಸಿಂಗ್ ಕಾಶ್ಮೀರವನ್ನು ಭಾರತದ ಜತೆ ವಿಲೀನ ಮಾಡಲು ಮುಂದಾದರು. ವಿಲೀನ ಪ್ರಕ್ರಿಯೆಯೂ ಮುಗಿಯಿತು. ಆಗ ಕಾಶ್ಮೀರವು ಭಾರತದ ಭಾಗವಾದಂತಾಯಿತು. ಹೀಗಾಗಿ ಭಾರತೀಯ ಸೇನೆ ಪಾಕಿಸ್ತಾನ ಸೇನೆಯನ್ನು ಹಿಮ್ಮೆಟ್ಟಿಸಲು ಕಾರ್ಯಾಚರಣೆ ಆರಂಭಿಸಿತು. ಕಾರ್ಯಾಚರಣೆ ಆರಂಭವಾದ ಕೆಲವೇ ದಿನಗಳಲ್ಲಿ ವಿಶ್ವಸಂಸ್ಥೆಯು ಕದನ ವಿರಾಮ ಘೋಷಿಸಿತು. ಕಾಶ್ಮೀರವನ್ನು ವಿವಾದಿತ ಪ್ರದೇಶ ಎಂದು ಹೆಸರಿಸಿತು.ಆಯಾ ದೇಶದ ಸೇನೆಗಳ ಹದ್ದುಬಸ್ತಿನಲ್ಲಿರುವ ಪ್ರದೇಶ ಆಯಾ ದೇಶಗಳ ಬಳಿಯೇ ಇರಲಿ ಎಂದು ವಿಶ್ವಸಂಸ್ಥೆ ಹೇಳಿತ್ತು. ಹೀಗಾಗಿ ಪಾಕ್ ಆಕ್ರಮಿತ ಕಾಶ್ಮೀರವು ಪಾಕಿಸ್ತಾನದ ಬಳಿಯೇ ಉಳಿಯಿತು. ಈಗಲೂ ಈ ವಿವಾದ ಹಾಗೇ ಉಳಿದಿದೆ.

1965ರ ಯುದ್ಧ
ಪಾಕಿಸ್ತಾನ ಸೇನೆಯು ಕಾಶ್ಮೀರವನ್ನು ಆಕ್ರಮಿಸಿಕೊಳ್ಳಲು ಮುಂದಾಯಿತು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ದಾಳಿ ನಡೆಸಿತು. ಆದರೆ ಈ ಯುದ್ಧದಿಂದ ವಿವಾದ ಬಗೆಹರಿಯಲಿಲ್ಲ

1971ರ ಯುದ್ಧ
ಸ್ವಾತಂತ್ರ್ಯದ ಸಂದರ್ಭದಲ್ಲಿ ಬಾಂಗ್ಲಾದೇಶವು ಪಾಕಿಸ್ತಾನದ ಭಾಗವಾಗಿತ್ತು. ಅದನ್ನು ಪೂರ್ವ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಪಾಕಿಸ್ತಾನದಿಂದ ಬೇರೆಯಾಗುವ ಉದ್ದೇಶದಿಂದ ಅಲ್ಲಿನ ಜನರು ಬಾಂಗ್ಲಾ ವಿಮೋಚನಾ ಚಳವಳಿ ನಡೆಸಿದರು. ಆ ಚಳವಳಿಯನ್ನು ಹತ್ತಿಕ್ಕಲು ಪಾಕಿಸ್ತಾನ ಸೇನೆ ಮುಂದಾಯಿತು. ಬಾಂಗ್ಲಾದ ನೆರವಿಗೆ ಭಾರತೀಯ ಸೇನೆ ಧಾವಿಸಿತು. ಪಾಕಿಸ್ತಾನ ಸೇನೆಯು ಭಾರತೀಯ ಸೇನೆಗೆ ಶರಣಾಯಿತು.

1999 ಕಾರ್ಗಿಲ್ ಕದನ
ಕಾರ್ಗಿಲ್ ಪಟ್ಟಣವು ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿದೆ. ಇಲ್ಲಿನಪರ್ವತಗಳಲ್ಲಿ ಭಾರತೀಯ ಗಡಿಠಾಣೆಗಳಿವೆ. ಚಳಿಗಾಲದಲ್ಲಿ ವಿಪರೀತ ಹಿಮ ಮುಚ್ಚಿಕೊಳ್ಳುವುದರಿಂದ ಈ ಠಾಣೆಗಳನ್ನು ತೆರವು ಮಾಡಲಾಗುತ್ತದೆ. 1999ರಲ್ಲಿ ಭಾರತೀಯ ಯೋಧರು ಇಲ್ಲದಿದ್ದ ಸಂದರ್ಭದಲ್ಲಿ ಪಾಕಿಸ್ತಾನದ ಸೈನಿಕರು ಈ ಠಾಣೆಗಳನ್ನು ಆಕ್ರಮಿಸಿಕೊಂಡಿದ್ದರು. ಈ ಅತಿಕ್ರಮಣವನ್ನು ತೆರವು ಮಾಡಲು ನಡೆಸಿದ ಕಾರ್ಯಾಚರಣೆಯೇ ‘ಆಪರೇಷನ್ ವಿಜಯ್’. ಇದರಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿತ್ತು.

ನಿರ್ದಿಷ್ಟ ದಾಳಿ
2016ರ ಸೆಪ್ಟೆಂಬರ್‌ನಲ್ಲಿ ಕಾಶ್ಮೀರದ ಉರಿ ಸೇನಾನೆಲೆಗೆ ನುಗ್ಗಿದ್ದ ಉಗ್ರರು, 19 ಯೋಧರನ್ನು ಹತ್ಯೆ ಮಾಡಿದ್ದರು. ಈ ಹತ್ಯೆಗೆ ಭಾರತೀಯ ಸೇನೆಯು ನಿರ್ದಿಷ್ಟ ದಾಳಿಯ ಮೂಲಕ ಪ್ರತೀಕಾರ ಮಾಡಿತ್ತು. ಗಡಿನಿಯಂತ್ರಣ ರೇಖೆಯನ್ನು ದಾಟಿ ಉಗ್ರರ ನೆಲೆಗಳನ್ನು ಭಾರತೀಯ ಸೈನಿಕರು ಧ್ವಂಸ ಮಾಡಿ ಬಂದಿದ್ದರು.

***
ಉಗ್ರರ ಜೊತೆ ಪ್ರಕೃತಿಯೂ ಸವಾಲು
ಉಗ್ರರು ಸಾಯಲೆಂದೇ ಮನೆಯಿಂದ ಹೊರ ಬಂದಿರುತ್ತಾರೆ. ಸೈನ್ಯದ ತಪಾಸಣೆ ವೇಳೆಯೂ ತಮ್ಮನ್ನು ತಾವು ಸ್ಫೋಟಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಬಸ್‌ ಪ್ರಯಾಣಿಕ, ಇಲ್ಲವೇ ಕಾರು, ಬೈಕ್‌ಗಳಲ್ಲಿ, ಕೆಲವೊಮ್ಮೆ ಪಾದಚಾರಿ ಸೋಗಿನಲ್ಲೂ ಸಾವು ಬರಬಹುದಿತ್ತು. ಆಗೆಲ್ಲಾ ಎರಡು ಕಿ.ಮೀ ದೂರದಲ್ಲಿ ಸ್ಫೋಟಕವಿದ್ದರೂ ಅದನ್ನು ಪತ್ತೆ ಹಚ್ಚಿ ಮುನ್ನೆಚ್ಚರಿಕೆ ನೀಡುವ ಇ.ಡಿ (ಎಕ್ಸ್‌ಪ್ಲೋಸಿವ್ ಡಿಟೆಕ್ಟರ್) ಸಾಧನವೇ ನಮ್ಮ ಸುರಕ್ಷೆಗೆ ಮಾರ್ಗದರ್ಶಿ.

ಹೆದ್ದಾರಿಯಲ್ಲಿನ ಈ ಕೊಲ್ಲುವ–ಕಾಯುವ ಆಟದಲ್ಲಿ ಸೇನೆಯ ಜವಾನರೇ ಉಗ್ರರ ಟಾರ್ಗೆಟ್. ನಮಗೆ ಅವರ ಸಂಭಾವ್ಯ ದಾಳಿ ನಿಭಾಯಿಸುವ ಜೊತೆಗೆ ಅಲ್ಲಿ ಕ್ಷಣ ಕ್ಷಣಕ್ಕೂ ಬದಲಾಗುವ ಹವಾಮಾನ ವೈಪರಿತ್ಯದೊಂದಿಗೆ ಸೆಣಸುವ ಸವಾಲು ಎದುರಾಗುತ್ತಿತ್ತು. ಹಿಮಪಾತದ ವೇಳೆ ಕೈಯಳತೆ ದೂರವಿರುವ ಮನುಷ್ಯ ಕಾಣುವುದೂ ಕಷ್ಟ. ಮಳೆಗಾಲದಲ್ಲಿ ಭೂಕುಸಿತದ ಭೀತಿ..ಆಗೆಲ್ಲಾ ಭಾರತೀಯ ಸೇನೆಯ ಭಾಗ ಎಂಬ ಭಾವನೆಯೇ ನಮಗೆ ಪ್ರೇರಕವಾಗಿರುತ್ತಿತ್ತು.

ಜಮ್ಮು–ಶ್ರೀನಗರ ಹೆದ್ದಾರಿಯ ರಾಮಬನ್‌ ಪ್ರದೇಶದಿಂದ ನೀಥಲ್ ಬ್ರಿಜ್‌ವರೆಗಿನ 25 ಕಿ.ಮೀ ದೂರ ಕಾಯುವ ಹೊಣೆಯನ್ನು ನಮ್ಮ ರೆಜಿಮೆಂಟ್‌ನ ತಲಾ 160 ಮಂದಿಯ ಮೂರು ಬೆಟಾಲಿಯನ್‌ಗೆ ವಹಿಸಲಾಗಿತ್ತು. ಮೂರು ಪಾಳಿಯಲ್ಲಿ ಕೆಲಸ. ಬೆಳಿಗ್ಗೆ 4.30ಕ್ಕೆ ದಿನಚರಿ ಆರಂಭ. ಮೂವರು ಸೈನಿಕರು ತಲಾ ಎರಡು ಕಿ.ಮೀ ಪಹರೆ ಮಾಡಬೇಕಿತ್ತು. ಒಬ್ಬರು ಮೆಟಲ್ ಡಿಟೆಕ್ಟರ್ ಸಾಧನ ಹೊಂದಿದ್ದರೆ, ಇನ್ನಿಬ್ಬರು ಅವರಿಗೆ ಬೆಂಗಾವಲು. ರಸ್ತೆಯ ಇಂಚಿಂಚೂ ತಪಾಸಣೆ ಮಾಡುತ್ತಿದ್ದೆವು. ನಮ್ಮಿಂದ ಸೂಚನೆ ಸಿಕ್ಕಿದರೆ ಮಾತ್ರ ಸೈನಿಕರು, ಸೇನಾಧಿಕಾರಿಗಳನ್ನು ಹೊತ್ತ ವಾಹನಗಳು ಮುಂದೆ ಸಾಗುತ್ತಿದ್ದವು. ಹೆದ್ದಾರಿಯಲ್ಲಿ ಸಂಚರಿಸುವ ಪ್ರತೀ ವಾಹನದ ಮೇಲೂ ಕಣ್ಣಿಡುತ್ತಿದ್ದೆವು. ವೀಕ್ಷಣಾ ಗೋಪುರದಲ್ಲಿ ನಿಂತು ಬೈನಾಕ್ಯುಲರ್ ಮೂಲಕವೂ ಎರಡು ಕಿ.ಮೀ ದೂರದವರೆಗೂ ಕಣ್ಣಾಯಿಸುತ್ತಿದ್ದೆವು. ಹೀಗಿತ್ತು ನಮ್ಮ ಬದುಕು.
-ಪಾಂಡುರಂಗ ಬ್ಯಾಳಿ,ನಿವೃತ್ತ ಹವಾಲ್ದಾರ್ (ಜಮ್ಮು–ಶ್ರೀನಗರ ಹೆದ್ದಾರಿಯ ಭದ್ರತೆ ಹೊಣೆ ಹೊತ್ತಿದ್ದ ಭಾರತೀಯ ಸೇನೆಯ 47ಎಡಿ ರೆಜಿಮೆಂಟ್‌ನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಬ್ಯಾಳಿ, ಸದ್ಯ ಬಾಗಲಕೋಟೆಯಲ್ಲಿ ನೆಲೆಸಿದ್ದಾರೆ)

ಇದನ್ನೂ ಓದಿ...ಕಣಿವೆಗೆ ಸೇನೆ ರವಾನೆ

***
‘ಆಂತರಿಕ ಸರ್ಜಿಕಲ್‌ ಸ್ಟ್ರೈಕ್‌ ನಡೆಯಲಿ’
ಪುಲ್ವಾಮಾ ದಾಳಿಯ ಬಳಿಕ ದೇಶದಲ್ಲಿ ‘ಸರ್ಜಿಕಲ್‌ ಸ್ಟ್ರೈಕ್‌’ ಕುರಿತು ಹೆಚ್ಚಿನ ಚರ್ಚೆ ನಡೆಯುತ್ತಿದೆ. ಮತ್ತೊಮ್ಮೆ ‘ಸರ್ಜಿಕಲ್‌ ಸ್ಟ್ರೈಕ್‌’ ನಡೆದರೆ ನಮಗೇ ಹೆಚ್ಚಿನ ಅಪಾಯ. ದಾಳಿಗೆ ಹೋದ ನಮ್ಮ ಕೆಲವು ಸೈನಿಕರು ವಾಪಸ್‌ ಬಾರದಿದ್ದರೆ ಮತ್ತಷ್ಟು ಮಕ್ಕಳನ್ನು (ಸೈನಿಕರು) ಕಳೆದುಕೊಳ್ಳುವ ಸ್ಥಿತಿ ಬರಲಿದೆ. ಈಗಿನ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಎಲ್ಲ ಕ್ಯಾಂಪ್‌ಗಳೂ ತಯಾರಾಗಿವೆ. ಪ್ರಬುದ್ಧ ರಾಜಕೀಯ ನಿರ್ಧಾರಗಳ ಮೂಲಕವೇ ಬುದ್ಧಿ ಕಲಿಸಬೇಕು.

ಶ್ರೀನಗರ, ಬಾರಾಮುಲ್ಲಾ ಪ್ರದೇಶಗಳಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸಿಗುತ್ತಿದೆ. ಉಗ್ರರಿಗೆ ಶಸ್ತ್ರಾಸ್ತ್ರ ಅಡಗಿಸಿಡಲು ಜಾಗವನ್ನೂ ನೀಡುತ್ತಿದ್ದಾರೆ. ಜಮ್ಮು ಕಾಶ್ಮೀರದ ಬೇರೆ ಪ್ರದೇಶಗಳಲ್ಲಿ ಇಂತಹ ಪರಿಸ್ಥಿತಿಯಿಲ್ಲ. ಆದ್ದರಿಂದ, ಮೊದಲು ಈ ಎರಡು ಪ್ರದೇಶಗಳಲ್ಲಿ ಆಂತರಿಕ ಸರ್ಜಿಕಲ್‌ ಸ್ಟ್ರೈಕ್‌ ನಡೆಸಬೇಕು. ಭಾರತೀಯರು ಆರು ತಿಂಗಳ ಕಾಲ ಅವರ (ಪಾಕಿಸ್ತಾನ) ಖರ್ಜೂರ, ಈರುಳ್ಳಿ, ಸಿಮೆಂಟ್‌ ಬಳಸದಿದ್ದರೆ ತಕ್ಕಪಾಠ ಕಲಿಸಿದಂತೆ ಆಗಲಿದೆ. ಆಗ ಪಾಕಿಸ್ತಾನದವರು ಹಣಕ್ಕಾಗಿ ಅನ್ಯ ರಾಷ್ಟ್ರಗಳಲ್ಲಿ ಬೇಡುವ ಸ್ಥಿತಿ ಬರಲಿದೆ.

ನಾನೂ ಹಲವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದೇನೆ. ದೇಶದ ಭದ್ರತೆ ದೃಷ್ಟಿಯಿಂದ ಈಗ ಎಲ್ಲವನ್ನೂ ಬಹಿರಂಗ ಪಡಿಸುವುದಿಲ್ಲ. 1981–82ರಲ್ಲಿ ಭಾರತೀಯ ಸೇನೆಗೆ ಸೇರಿದಾಗ ಪಾಕಿಸ್ತಾನದ ಸೇನೆಯು ಗಡಿಭಾಗಯಲ್ಲಿ ಪದೇ ಪದೇ ಹುಚ್ಚಾಟ ನಡೆಸುತ್ತಿತ್ತು. ಅಲ್ಲಿಗೆ ಒಂದು ನಾಯಿ ಹೋದರೂ ಗುಂಡು ಹಾರಿಸುತ್ತಿದ್ದರು.

ಜಮ್ಮು–ಕಾಶ್ಮೀರದ ಕೆಲವು ಭಾಗದಲ್ಲಿ ಭಾರತೀಯ ಸೇನೆಯ ಮೇಲೆ ಪ್ರೀತಿ ಬದಲಿಗೆ ವೈರತ್ವವಿತ್ತು. ಆ ಸಂದರ್ಭದಲ್ಲಿ ಜಮ್ಮುವಿನಲ್ಲಿ ‘ಮಿಲಿಟರಿ ಸ್ಕೂಲ್‌’ ಆರಂಭಗೊಂಡಿತು. ಸ್ಕೂಲ್‌ ಸ್ಥಾಪನೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೆ. ಜಮ್ಮು–ಕಾಶ್ಮೀರದ ಸಂಸ್ಕೃತಿ, ಸ್ಥಳೀಯರಿಗೆ ನೋವಾಗದಂತೆ ನಡೆದುಕೊಳ್ಳುವುದು ಹೇಗೆ ಎಂಬುದನ್ನು ನಮ್ಮ ಸೈನಿಕರಿಗೆ ಅಲ್ಲಿ ಕಲಿಸುತ್ತಿದ್ದೆವು. 20 ವರ್ಷಗಳ ಕಾಲ ಸೈನಿಕರು ಹಾಗೂ ಸ್ಥಳೀಯರ ನಡುವೆ ಹೊಂದಾಣಿಕೆಗೆ ಶ್ರಮಿಸಿದ್ದೆವು. ನಾವೆಲ್ಲಾ ಒಂದೇ ಎನ್ನುವ ಭಾವನೆ ಮೂಡಿಸುತ್ತಿದ್ದೆವು. ಆದರೆ, ಕೆಲವು ಸ್ಥಳೀಯರು ಅದನ್ನು ಹೃದಯಕ್ಕೆ ತೆಗೆದುಕೊಳ್ಳಲಿಲ್ಲ. ಈಗಲೂ ಅದೇ ಸ್ಥಿತಿಯಿದೆ.

ಶ್ರೀನಗರ ಹಾಗೂ ಬಾರಾಮುಲ್ಲಾ ಪ್ರದೇಶದಲ್ಲಿ ಶೇ 30 ಜನರು ವ್ಯಾಪಾರ ಹಾಗೂ ರಾಜಕೀಯ ಜೀವನಕ್ಕಾಗಿ ಶತ್ರು ರಾಷ್ಟ್ರದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ದುರಂತ. ಹೀಗಾಗಿ, ಮೊದಲು ಆಂತರಿಕವಾಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಯಲಿ.
-ಬಿದ್ದಂಡ ಅಯ್ಯಪ್ಪ ನಂಜಪ್ಪ,ನಿವೃತ್ತ ಮೇಜರ್‌ (ಶ್ರೀನಗರ ಮತ್ತು ಬಾರಾಮುಲ್ಲಾ ಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ನಂಜಪ್ಪ, ಸದ್ಯ ಮಡಿಕೇರಿಯಲ್ಲಿ ನೆಲೆಸಿದ್ದಾರೆ)

***
ಪಾಕ್‌ ದಾಳಿಯಿಂದ ಕಾಲು ಛಿದ್ರವಾಗಿತ್ತು...

ಅದು 2000 ಇಸವಿಯ ಜೂನ್‌ ತಿಂಗಳ ಒಂದು ದಿನ. ಪೂಂಛ್‌ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಸೈನಿಕರು ಶೆಲ್‌ ದಾಳಿ ನಡೆಸುತ್ತಿದ್ದರು. ಕತ್ತಲು ಆವರಿಸುತ್ತಿದ್ದಂತೆಯೇ ದಾಳಿಯ ತೀವ್ರತೆ ಹೆಚ್ಚಿತ್ತು. ಪಾಕ್‌ ಕಡೆಯಿಂದ ಬಂದ ಶೆಲ್‌ ಸ್ಫೋಟಗೊಂಡು ನನ್ನ ಕಾಲು ಛಿದ್ರಗೊಂಡಿತ್ತು.

ಎಲ್‌ಒಸಿ ಬಳಿ ದಾಳಿ, ಪ್ರತಿದಾಳಿ ಸಾಮಾನ್ಯ. ಗುಂಡಿನ ದಾಳಿಯನ್ನು ಬಂಕರ್‌ ಒಳಗೆ ಕುಳಿತು ಮಾಡಬಹುದು. ಶೆಲ್‌ ದಾಳಿ ನಡೆಸಲು ಬಂಕರ್‌ನಿಂದ ಆಚೆ ಬರಬೇಕು. ಬಂಕರ್‌ನಿಂದ ಹೊರಬಂದು ಪ್ರತಿದಾಳಿಗೆ ಸಿದ್ಧತೆ ನಡೆಸುತ್ತಿದ್ದಾಗ ಪಾಕ್‌ ಸೇನೆ ಸಿಡಿಸಿದ್ದ ಶೆಲ್‌ ನಮ್ಮ ಬಳಿ ಬಂದು ಬಿದ್ದಿತ್ತು.

ಆಗ ಸಮಯ ರಾತ್ರಿ ಸುಮಾರು 8 ಗಂಟೆ ಆಗಿತ್ತು. ಶೆಲ್‌ ಸಿಡಿದು ಕಾಲಿಗೆ ಗಂಭೀರ ಗಾಯವಾಗಿತ್ತು. ಜತೆಗಿದ್ದ ಇತರ ಸೈನಿಕರು ಗಾಯಗೊಳ್ಳದೆ ಪಾರಾಗಿದ್ದರು. ಎಲ್‌ಒಸಿ ಬಳಿ ನಾವು ಇದ್ದ ಸ್ಥಳದಿಂದ ರಸ್ತೆ ತಲುಪಬೇಕಾದರೆ ಎರಡು ಗಂಟೆ ಕಾಲ್ನಡಿಗೆಯಲ್ಲೇ ಸಾಗಬೇಕಿತ್ತು. ಸಹ ಸೈನಿಕರು ನನ್ನನ್ನು ಸ್ಟ್ರೆಚರ್‌ನಲ್ಲಿ ಹೊತ್ತುಕೊಂಡೇ ಸಾಗಿದ್ದರು. ರಾತ್ರಿಯಲ್ಲಿ ಟಾರ್ಚ್‌ ಲೈಟ್‌ ಬಳಸುವಂತೆಯೂ ಇರಲಿಲ್ಲ. ಬೆಳಕು ಕಂಡರೆ ಅದನ್ನು ಗುರಿಯಾಗಿಸಿ ಪಾಕ್‌ ಕಡೆಯಿಂದ ದಾಳಿ ನಡೆಯುತ್ತದೆ. ಕತ್ತಲಲ್ಲೇ ನನ್ನನ್ನು ಹೊತ್ತುಕೊಂಡು ಹೆಜ್ಜೆಹಾಕಿದ್ದರು.

ಪೂಂಛ್‌ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ರಜೌರಿಯಲ್ಲಿರುವ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಏಳು ತಿಂಗಳ ಚಿಕಿತ್ಸೆಯ ಬಳಿಕ ಗುಣಮುಖನಾಗಿದ್ದೆ.
-ಸುಬೇದಾರ್‌ ಪಿ.ಬಿ.ಸುಬ್ರಮಣಿ,(ಎರಡು ದಶಕ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಸುಬ್ರಮಣಿ ಅವರು ಇದೀಗ ಮೈಸೂರಿನ ಕುವೆಂಪುನಗರದಲ್ಲಿ ನೆಲೆಸಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.