ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆಗೆ 18,600 ಕೋಟಿ ಬೇಕು, ಕೊಟ್ಟಿದ್ದು ಮಾತ್ರ 1 ಕೋಟಿ

ಪ್ರವೀಣ ಕುಮಾರ್ ಪಿ.ವಿ.
Published 16 ಫೆಬ್ರುವರಿ 2020, 1:08 IST
Last Updated 16 ಫೆಬ್ರುವರಿ 2020, 1:08 IST
   
""
""
""

ಬೆಂಗಳೂರು: ಸಿಲಿಕಾನ್‌ ಸಿಟಿಗೆ ಪ್ರತ್ಯೇಕ ರೈಲು ಸೇವೆ ಬೇಕು ಎಂಬುದು ಮೂರೂವರೆ ದಶಕಗಳ ಕೂಗು. ಸಂಚಾರ ದಟ್ಟಣೆಯ ಕೂಪದಲ್ಲಿ ಸಿಲುಕಿ ಅನುಭವಿಸುತ್ತಿರುವ ಯಾತನೆಗೆ ಉಪನಗರ ರೈಲು ಮುಕ್ತಿ ನೀಡಬಲ್ಲುದು ಎಂದು ಬೆಂಗಳೂರಿನ ಜನ ಕನವರಿಸುತ್ತಲೇ ಇದ್ದಾರೆ. ‘ಈ ಬೇಡಿಕೆ ಶೀಘ್ರವೇ ಈಡೇರಲಿದೆ’ ಎಂದು ‘ಹಳಿ ಇಲ್ಲದ ರೈಲು’ ಓಡಿಸಲಾಗುತ್ತಿದೆಯೇ ಹೊರತು ಯೋಜನೆ ಇನ್ನೂ ಸಾಕಾರಗೊಂಡಿಲ್ಲ.

ನಗರಕ್ಕೆ ಪ್ರತ್ಯೇಕವಾಗಿ ರೈಲು ಸೇವೆ ಆರಂಭಿಸುವ ಬಗ್ಗೆ ರೈಲ್ವೆ ಇಲಾಖೆ 1983ರಲ್ಲೇ ಪ್ರಸ್ತಾಪ ಹೊಂದಿತ್ತು. 2010ರಲ್ಲಿ ಸಿಸ್ಟಪ್‌–ಪ್ರಜಾ ಸಂಘಟನೆಗಳ ಒತ್ತಾಸೆಯಿಂದ ಈ ಕೂಗು ತೀವ್ರಗೊಂಡಿತು. 2014ರಲ್ಲಿ ಡಿ.ವಿ.ಸದಾನಂದಗೌಡ ಅವರು ರೈಲ್ವೆ ಸಚಿವರಾಗಿದ್ದಾಗ ಬಜೆಟ್‌ನಲ್ಲೇ ಈ ಅಗತ್ಯದ ಬಗ್ಗೆ ಪ್ರಸ್ತಾಪಿಸಿದ್ದರು. ಆ ಬಳಿಕ ಕೇಂದ್ರದಲ್ಲಿ ಅವರದೇ ಸರ್ಕಾರವಿದ್ದರೂ ಉಪನಗರ ರೈಲಿಗಾಗಿಯೇ ಪ್ರತ್ಯೇಕ ಮಾರ್ಗ ರೂಪಿಸುವ ಬೇಡಿಕೆ ಕಾರ್ಯರೂಪಕ್ಕೆ ಬರಲೇ ಇಲ್ಲ.

2016ರಲ್ಲಿ ‘ಚುಕುಬುಕು ಬೇಕು’ ಎಂಬ ಹೋರಾಟ ಸಾಮಾಜಿಕ ಜಾಲತಾಣಗಳಲ್ಲೂ ಮಾರ್ದನಿಸಿತು. ಹೋರಾಟಗಾರರು, ರೈಲ್ವೆ ಇಲಾಖೆ ಮತ್ತು ಜನಪ್ರತಿನಿಧಿಗಳ ಬೆನ್ನುಬಿದ್ದು ಒತ್ತಡ ಹೇರಿದ ಪರಿಣಾಮ ಕೇಂದ್ರ ಸರ್ಕಾರ 2018–19ರ ಬಜೆಟ್‌ನಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆಗೆ ₹17ಸಾವಿರ ಕೋಟಿ ಮಂಜೂರು ಮಾಡುವುದಾಗಿ ಪ್ರಕಟಿಸಿತು. ವೆಚ್ಚ ಭರಿಸುವ ಬಗ್ಗೆ ಕೇಂದ್ರ–ರಾಜ್ಯ ಸರ್ಕಾರಗಳ ನಡುವೆ ಹಗ್ಗ ಜಗ್ಗಾಟ ನಡೆಯಿತೇ ಹೊರತು ಯಾರು, ಎಷ್ಟು ಪಾಲು ಭರಿಸಬೇಕು ಎಂಬ ನಿರ್ಧಾರಕ್ಕೆ ಬರಲು ಸಾಧ್ಯವಾಗಲೇ ಇಲ್ಲ.

ADVERTISEMENT

2018ರ ನವೆಂಬರ್‌ನಲ್ಲಿ ಸಮಗ್ರ ಯೋಜನಾ ವರದಿ (ಡಿಪಿಆರ್‌) ಕರಡು ಸಿದ್ಧವಾಯಿತು. 2019ರಲ್ಲಿ ಇನ್ನೇನು ಲೋಕಸಭಾ ಚುನಾವಣೆ ಸಮೀಪದಲ್ಲಿದೆ ಎನ್ನುವಾಗ ರೈಲ್ವೆ ಸಚಿವ ಪಿಯೂಷ್‌ ಗೋಯೆಲ್‌ ‘ಯೋಜನೆಯನ್ನು ಈ ವರ್ಷವೇ ಜಾರಿಗೊಳಿಸುತ್ತೇವೆ’ ಎಂಬ ಭರವಸೆ ನೀಡಿದರು. ಯೋಜನೆಗೆ ಅಗತ್ಯ ಇರುವ ರೈಲ್ವೆ ಭೂಮಿಯನ್ನು ಉಚಿತವಾಗಿ ಬಿಟ್ಟುಕೊಡುವ ಬಗ್ಗೆ ಒಪ್ಪಂದವೂ ಏರ್ಪಟ್ಟಿತು. 2019ರಲ್ಲಿ ಪಿಂಕ್ ಬುಕ್‌ನಲ್ಲಿ ಈ ಯೋಜನೆಗೆ ₹ 10 ಕೋಟಿ ಹಂಚಿಕೆಯಾಯಿತು. ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮವನ್ನು (ಕೆ–ರೈಡ್‌) ಯೋಜನೆ ಅನುಷ್ಠಾನದ ವಿಶೇಷ ಉದ್ದೇಶದ ಘಟಕವನ್ನಾಗಿ (ಎಸ್‌ಪಿವಿ) ಗೊತ್ತುಪಡಿಸಲಾಯಿತು.

ರೈಟ್ಸ್‌ ಸಂಸ್ಥೆ ತಾನು ಹಿಂದೆ ತಯಾರಿಸಿದ್ದ ಡಿಪಿಆರ್‌ ಅನ್ನು ಕೇಂದ್ರದ ಸೂಚನೆ ಮೇರೆಗೆ ಪರಿಷ್ಕರಿಸಿತು. ಯೋಜನಾ ವೆಚ್ಚವನ್ನು ₹19,500 ಕೋಟಿಯಿಂದ ₹16,500 ಕೋಟಿಗೆ ತಗ್ಗಿಸಿತು. ಚಿಕ್ಕಬಾಣಾವರದಿಂದ ನೆಲಮಂಗಲ ನಡುವಿನ ಮಾರ್ಗವನ್ನು ಕೈಬಿಡಲಾಯಿತು. ರೈಲು ಹಳಿಗಳ ಒಟ್ಟು ಉದ್ದವನ್ನು 161 ಕಿ.ಮೀ.ದಿಂದ 148 ಕಿ.ಮೀ.ಗೆ ಹಾಗೂ ನಿಲ್ದಾಣಗಳ ಸಂಖ್ಯೆಯನ್ನು 86ರಿಂದ 57ಕ್ಕೆ ಇಳಿಸಲಾಯಿತು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು 2020–21ನೇ ಸಾಲಿನ ಬಜೆಟ್‌ನಲ್ಲಿ ₹18,621 ಕೋಟಿ ವೆಚ್ಚದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಪ್ರಕಟಿಸಿ ಕನಸು ಮತ್ತೆ ಗರಿಗೆದರುವಂತೆ ಮಾಡಿದರು. ಆದರೆ, ಪಿಂಕ್‌ ಬುಕ್‌ನಲ್ಲಿ ಈ ಯೋಜನೆಗೆ ಹಂಚಿಕೆ ಮಾಡಿದ್ದು ಕೇವಲ ₹1 ಕೋಟಿ. ಕೇಂದ್ರದ ಈ ನಡೆ ಈ ಯೋಜನೆ ಬಗ್ಗೆ ಇಟ್ಟುಕೊಂಡಿದ್ದ ನಿರೀಕ್ಷೆಗಳನ್ನು ಮತ್ತೆ ಹುಸಿ ಮಾಡಿತು.

₹500 ಕೋಟಿಗಿಂತ ಹೆಚ್ಚು ಅನುದಾನ ಬಯಸುವ ಯೋಜನೆಗಳಿಗೆ ಹಣಕಾಸು ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ಅಗತ್ಯ. ಈ ಒಪ್ಪಿಗೆ ಸಿಗುವವರೆಗೆ ಈ ಯೋಜನೆಯ ಸಾಕಾರ ಕನಸಿನ ಗಂಟು.

‘ಬಿಬಿಎಂಪಿಯಿಂದ ಹಿಡಿದು ಸಂಸತ್ತಿವರೆಗೂ ಬಿಜೆಪಿಯದ್ದೇ ಆಳ್ವಿಕೆ ಇದೆ. ಬೆಂಗಳೂರು ವ್ಯಾಪ್ತಿಯ ಮೂರು ಲೋಕಸಭಾ ಕ್ಷೇತ್ರಗಳಲ್ಲೂ ದಶಕಗಳಿಂದ ಬಿಜೆಪಿಯವರೇ ಸಂಸದರಾಗಿ ಆಯ್ಕೆಗುತ್ತಿದ್ದಾರೆ. ಕಾರಣಗಳ ಹಿಂದೆ ಮರೆಯಾಗುವುದನ್ನು ಬಿಟ್ಟು ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳು ಪ್ರದರ್ಶಿಸಬೇಕು’ ಎಂದು ಒತ್ತಾಯಿಸುತ್ತಾರೆ ರೈಲ್ವೆ ಹೋರಾಟಗಾರರು.

ಯೋಜನೆ ಪೂರ್ಣಗೊಳ್ಳಲು ಬೇಕಿವೆ ಆರು ವರ್ಷಗಳು
ಈ ವರ್ಷವೇ ಕಾಮಗಾರಿ ಆರಂಭವಾದರೂ ಉಪನಗರ ರೈಲು ಪ್ರತ್ಯೇಕ ಹಳಿಯಲ್ಲಿ ಸಂಚಾರ ಆರಂಭಿಸಲು ಕನಿಷ್ಠ ಆರು ವರ್ಷ ಕಾಯಬೇಕಿದೆ. ಆದರೆ, ಕೆಎಸ್‌ಆರ್‌ ರೈಲು ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಆದ್ಯತಾ ಕಾರಿಡಾರ್ ಮಾತ್ರ ಮೂರು ವರ್ಷಗಳಲ್ಲೇ ಕಾರ್ಯಾರಂಭಗೊಳ್ಳಬಹುದು. ‘ರೈಲಿನ ಎಲ್ಲಾ ಬೋಗಿಗಳು ಹವಾನಿಯಂತ್ರಿತ ಸೌಕರ್ಯ ಹೊಂದಿರಲಿವೆ. ನಿತ್ಯ ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ರೈಲು ಸೇವೆ ಲಭ್ಯವಾಗಲಿದೆ’ ಎಂದು ಕೆ–ರೈಡ್ ಅಧಿಕಾರಿಗಳು ತಿಳಿಸಿದ್ದಾರೆ.

ಕಡಿಮೆಯಾಗಲಿದೆ ವಾಹನ ಬಳಕೆ
ಉಪನಗರ ರೈಲು ಸಂಚಾರ ಆರಂಭಗೊಂಡರೆ ಖಾಸಗಿ ವಾಹನಗಳ ಬಳಕೆ ಪ್ರಮಾಣ ಗಣನೀಯವಾಗಿ ಕಡಿಮೆಯಾಗಲಿದೆ ಎಂಬುದು ಸಾರಿಗೆ ತಜ್ಞರ ಅಭಿಪ್ರಾಯ.

ಮುಂಬೈ ನಗರದಲ್ಲಿ ಬೆಳಿಗ್ಗೆ 4 ಗಂಟೆಯಿಂದ ರಾತ್ರಿ 1 ರವರೆಗೆ ಪ್ರತಿ ಮೂರು ನಿಮಿಷಕ್ಕೊಂದು ಪ್ರಯಾಣಿಕ ರೈಲು ಸಂಚರಿಸುತ್ತದೆ. 75 ಲಕ್ಷ ಜನರು ಈ ಸೌಲಭ್ಯ ಬಳಸುತ್ತಾರೆ. ಹಾಗಾಗಿ, ಅಲ್ಲಿ ಖಾಸಗಿ ವಾಹನಗಳ ಸಂಖ್ಯೆ 40 ಲಕ್ಷಕ್ಕಿಂತಲೂ ಕಡಿಮೆ ಇದೆ.

ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಹೆಚ್ಚು ಮಂದಿ ರೈಲು ಬಳಸುವಂತೆ ಮಾಡಲು ಸಾಧ್ಯವಿದೆ. ಇದರಿಂದ ಪ್ರಸ್ತುತ ಬಳಕೆಯಾಗುತ್ತಿರುವ ಕಾರು ಹಾಗೂ ದ್ವಿಚಕ್ರ ವಾಹನಗಳ ಪೈಕಿ ಅರ್ಧದಷ್ಟು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಬಹುದು ಎಂದು ಸಲಹೆ ನೀಡುತ್ತಾರೆ ತಜ್ಞರು.

ಇಚ್ಛಾ ಶಕ್ತಿಯ ಕೊರತೆ
‘ಕೇಂದ್ರದ ಇಚ್ಛಾ ಶಕ್ತಿಯ ಕೊರತೆಯೇ ವಿಳಂಬಕ್ಕೆ ಕಾರಣ. ಕನಿಷ್ಠ ಪಕ್ಷ ₹100 ಕೋಟಿ ಮಂಜೂರು ಮಾಡಿದ್ದರೆ ಯೋಜನೆ ಅನುಷ್ಠಾನದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಬಹುದಿತ್ತು. ಬಜೆಟ್‌ನಲ್ಲಿ ಅನುದಾನ ನೀಡದ ಕಾರಣ ಈ ವರ್ಷವೂ ಯೋಜನೆ ಜಾರಿ ಅನುಮಾನ’ ಎನ್ನುತ್ತಾರೆ ಹೋರಾಟಗಾರರು.

‘ಕೇಂದ್ರ ಸರ್ಕಾರ ಮೂಗಿಗೆ ತುಪ್ಪ ಸವರುತ್ತಲೇ ಬರುತ್ತಿದೆ. 2018–19ರ ಬಜೆಟ್‌ನಲ್ಲೂ ಈ ಯೋಜನೆ ಪ್ರಕಟಿಸಿದ್ದರು. ಆದರೂ ಇನ್ನೂ ಏಕೆ ಯೋಜನೆಯ ಕಾಮಗಾರಿ ಆರಂಭವಾಗಿಲ್ಲ’ ಎಂದು ಖಾರವಾಗಿಯೇ ಪ್ರಶ್ನಿಸುತ್ತಾರೆ ಪ್ರಜಾ ರಾಗ್‌ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

*
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿ ಇದೆ. ಯಾವುದೇ ನೆಪ ಹೇಳದೆ ಕೂಡಲೇ ಉಪನಗರ ರೈಲು ಯೋಜನೆಗೆ ಸಿಸಿಇಎ ಅನುಮೋದನೆ ನೀಡಬೇಕು.
-ಕೃಷ್ಣಪ್ರಸಾದ್, ಕರ್ನಾಟಕ ರೈಲ್ವೆ ವೇದಿಕೆ

*
ಸಿಸಿಇಎ ಅನುಮೋದನೆ ಸಿಗಲಿದೆ ಎಂದು ಪ್ರತಿ ಬುಧವಾರ ಕಾಯುತ್ತಲೇ ಇದ್ದೇವೆ. ಈ ಬುಧವಾರವಾದರೂ ಬೆಂಗಳೂರು ನಗರದ ಜನರಿಗೆ ಶುಭ ಸುದ್ದಿ ಸಿಗಲಿ ಎಂದು ಹಾರೈಸುವೆ.
-ಆರ್. ಅಭಿಷೇಕ್, ರೈಲ್ವೆ ಹೋರಾಟಗಾರ

ಬೆಂಗಳೂರಿನ ವೈಟ್‌ಫೀಲ್ಡ್‌ ರೈಲು ನಿಲ್ದಾಣದಲ್ಲಿ ನಿತ್ಯ ಕಾಣಸಿಗುವ ನೋಟವಿದು. ಲಭ್ಯವಿರುವ ಕೆಲವೇ ರೈಲುಗಳಲ್ಲಿ ಪ್ರತಿದಿನವೂ ಜನಜಂಗುಳಿ ಮಾಮೂಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.