ADVERTISEMENT

ಒಳನೋಟ | ರಾಜ್ಯದಲ್ಲಿ ಹೊಸದಾಗಿ 1,000 ಚಾರ್ಜಿಂಗ್ ಕೇಂದ್ರಗಳು: ಸುನಿಲ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 2:34 IST
Last Updated 10 ಅಕ್ಟೋಬರ್ 2021, 2:34 IST
ವಿ. ಸುನಿಲ್‌ ಕುಮಾರ್‌
ವಿ. ಸುನಿಲ್‌ ಕುಮಾರ್‌   

ಬೆಂಗಳೂರು: ‘ರಾಜ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗಾಗಿ ಈಗ 136 ರೀಚಾರ್ಜಿಂಗ್ ಕೇಂದ್ರಗಳಿವೆ. ಈ ವರ್ಷ ಹೊಸದಾಗಿ 1,000 ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಮುಖ್ಯವಾಗಿ, ಸರ್ಕಾರಿ ಕಚೇರಿಗಳು, ಹೆದ್ದಾರಿಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ಸ್ಥಾಪಿಸಲಾಗುವುದು. ನಂತರದ ಹಂತದಲ್ಲಿ ಮಾಲ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಮಾಡಲು ಉದ್ದೇಶಿಸಲಾಗಿದೆ’ ಎಂದು ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ತಿಳಿಸಿದರು.

‘ರಾಜ್ಯದಲ್ಲಿ ವಿವಿಧ ವಿದ್ಯುತ್‌ ಕಂಪನಿಗಳಿಂದಲೂ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದೇವೆ. ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ (ಪಿಪಿಪಿ) ಸ್ಥಾಪನೆಗೆ ಮುಂದೆ ಬಂದರೆ, ಅದಕ್ಕೂ ಅವಕಾಶ ನೀಡುತ್ತೇವೆ’ ಎಂದರು.

‘ಹದಿನೈದು ದಿನಗಳ ಹಿಂದೆ ಎಲೆಕ್ಟ್ರಿಕ್ ವಾಹನಗಳ ತಯಾರಕರ ಸಭೆಯೊಂದನ್ನು ನಡೆಸಲಾಗಿತ್ತು. ಅವರ ಸಮಸ್ಯೆಗಳನ್ನು ಆಲಿಸಲಾಯಿತು. ಅವರಿಂದ ಹಲವು ಸಲಹೆಗಳು ಬಂದಿವೆ. ಅವುಗಳನ್ನು ಅಳವಡಿಸಿಕೊಂಡು ಮುನ್ನಡೆಯುವ ಉದ್ದೇಶ ಹೊಂದಿದ್ದೇವೆ. ವಾಹನಗಳ ಬೆಲೆ ಜಾಸ್ತಿ ಇರುವುದರಿಂದ ಹೆಚ್ಚಿನವರು ಖರೀದಿಸಲು ಸಾಧ್ಯವಾಗುತ್ತಿಲ್ಲ. ಕಡಿಮೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದೇನೆ’ ಎಂದು ಹೇಳಿದರು.

ADVERTISEMENT

‘ವಾಹನಗಳ ಖರೀದಿದಾರರಿಗೆ ಸರ್ಕಾರ ಹೆಚ್ಚಿನ ಸಹಾಯಧನ ನೀಡುವುದರ ಜತೆಗೆ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಬೇಕು, ಚಾರ್ಜಿಂಗ್‌ ಶುಲ್ಕವನ್ನೂ ಕಡಿಮೆ ಮಾಡಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ. ಆದರೆ, ಇವೆಲ್ಲ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ಅವರಿಗೆ ತಿಳಿಸಿದ್ದೇವೆ.ಮುಂಬರುವ ದಿನಗಳಲ್ಲಿ ಇಂಧನ ಇಲಾಖೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನೇ ಖರೀದಿಸಬೇಕು ಎಂಬ ಚರ್ಚೆ ನಡೆಯುತ್ತಿದೆ’ ಎಂದು ಸುನಿಲ್ ಕುಮಾರ್ ಹೇಳಿದರು.

ಗ್ರಾಹಕರಿಗಿಂತ ಉದ್ಯಮಕ್ಕೇ ಹೆಚ್ಚು ಒತ್ತು
ರಾಜ್ಯದಲ್ಲಿ ವಿದ್ಯುತ್ ಚಾಲಿತ ವಾಹನಗಳ ಗ್ರಾಹಕರಿಗೆ ಸರ್ಕಾರದ ಕೊಡುಗೆ ಅತ್ಯಲ್ಪ. ಗುಜರಾತ್‌, ದೆಹಲಿ ಮತ್ತು ಮಹಾರಾಷ್ಟ್ರ ಸರ್ಕಾರಗಳೂ ವಾಹನ ಖರೀದಿಸುವವರಿಗೆ ಸಹಾಯಧನ ನೀಡುತ್ತಿವೆ. ಆದರೆ, ರಾಜ್ಯ ಸರ್ಕಾರ ಗ್ರಾಹಕರಿಗೆ ಸಹಾಯಧನ ನೀಡುತ್ತಿಲ್ಲ. ಸದ್ಯಕ್ಕೆ ಕೇಂದ್ರ ಸರ್ಕಾರ ನೀಡುವ ಸಹಾಯಧನವಷ್ಟೇ ಗ್ರಾಹಕರಿಗೆ ಸಿಗುತ್ತಿದೆ. ರಾಜ್ಯದಲ್ಲಿ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.

ರಾಜ್ಯದ ಎಲೆಕ್ಟ್ರಿಕ್‌ ವಾಹನಗಳ ನೀತಿಯು ಉದ್ಯಮಸ್ನೇಹಿಯಾಗಿದೆ. ಉದ್ಯಮಗಳನ್ನು ಸೆಳೆಯುವುದಕ್ಕಾಗಿಯೇ ಹೆಚ್ಚಿನ ಒತ್ತು ನೀಡಿವೆ. ಉತ್ಪಾದಕರಿಗೆ ಶೇ 15 ರಷ್ಟು ಬಂಡವಾಳ ಸಹಾಯಧನ ಸೇರಿದಂತೆ ವಿವಿಧ ರೀತಿಯ ರಿಯಾಯ್ತಿಗಳನ್ನು ನೀಡಿದೆ. ಈ ರೀತಿಯ ವಾಹನ ಖರೀದಿಸಲು ಗ್ರಾಹಕರಿಗೆ ಉತ್ತೇಜನ ನೀಡದೇ ಇರುವ ಬಗ್ಗೆ ಪ್ರಸ್ತಾಪಿಸಿದರೆ ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟದಿಂದ ಗ್ರಾಹಕರಿಗೆ ಸಹಾಯಧನ ನೀಡಲು ಸಾಧ್ಯವಿಲ್ಲ ಎನ್ನುವ ಉತ್ತರ ಅಧಿಕಾರಿಗಳದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.