ADVERTISEMENT

ಒಳನೋಟ: ಕಾಫಿ ನಾಡಿನಲ್ಲಿ ಹೊರ ರಾಜ್ಯದ ಕಾರ್ಮಿಕರ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 19:12 IST
Last Updated 20 ಫೆಬ್ರುವರಿ 2021, 19:12 IST
ಕೊಡಗಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ ಕಾರ್ಮಿಕರು (ಸಂಗ್ರಹ ಚಿತ್ರ)
ಕೊಡಗಿನಲ್ಲಿ ಕೂಲಿ ಕೆಲಸಕ್ಕೆ ತೆರಳಿದ ಕಾರ್ಮಿಕರು (ಸಂಗ್ರಹ ಚಿತ್ರ)   

ಮಡಿಕೇರಿ/ಮಂಗಳೂರು: ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಬಳಿಕ ಕೃಷಿ ಕಾರ್ಮಿಕರ ಕೊರತೆ ತೀವ್ರವಾಗಿದೆ. ಸ್ಥಳೀಯವಾಗಿ ಕಾರ್ಮಿಕರ ಕೊರತೆಯಿದ್ದು, ಉತ್ತರ ಭಾರತದ ರಾಜ್ಯಗಳಿಂದ ಕಾರ್ಮಿಕರು ವಲಸೆ ಬರುತ್ತಾರೆ.

ಕಾಫಿ ಹಾಗೂ ಕಾಳು ಮೆಣಸಿನ ಧಾರಣೆ ಏರಿಕೆ ಕಂಡ ಬಳಿಕ, ಹೊರ ರಾಜ್ಯಗಳಿಂದ ಬರುವ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಆದರೆ, ಲಾಕ್‌ಡೌನ್‌ ಅವಧಿಯಲ್ಲಿ ತಮ್ಮೂರಿಗೆ ತೆರಳಿದ್ದ ಈಶಾನ್ಯ ಭಾರತದ ಕಾರ್ಮಿಕರು ಇನ್ನೂ ವಾಪಸ್ಸಾಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ತೋಟ ಕಾರ್ಮಿಕರು 14,489 ಮಂದಿ (ಕಾರ್ಮಿಕ ಇಲಾಖೆ ಪ್ರಕಾರ) ಇದ್ದಾರೆ. ಕೃಷಿ, ತೋಟ ಚಟುವಟಿಕೆಗಳಿಗೆ ಇನ್ನು 15 ಸಾವಿರಕ್ಕೂ ಹೆಚ್ಚು ಕಾರ್ಮಿಕರ ಬೇಡಿಕೆ ಇದೆ.

ADVERTISEMENT

‘ಕಂಪನಿ ಎಸ್ಟೇಟ್‌ಗಳಲ್ಲಿ (ಟಾಟಾ, ಎಂಆರ್‌ಎಫ್‌…) ಕಾರ್ಮಿಕರ ಸಮಸ್ಯೆ ಇಲ್ಲ. ಆದರೆ, ಕಂಪನಿಗಳಂತೆ ಸವಲತ್ತುಗಳನ್ನು ಇತರರು ಕೊಡುವುದಿಲ್ಲ. ನಿರಂತರ ಕೆಲಸ ಹಾಗೂ ಕೂಲಿಯೂ ಕಡಿಮೆ ಇರುತ್ತದೆ. ವಲಸೆ ಕಾರ್ಮಿಕರು ವಾಪಸ್‌ ಬಾರದಿರಲು ಇದೂ ಒಂದು ಕಾರಣ’ ಎಂದು ಯುನೈಟೆಡ್‌ ಪ್ಲಾಂಟೇಷನ್‌ ವರ್ಕರ್ಸ್‌ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಕೆ.ಗುಣಶೇಖರ್‌ ಹೇಳುತ್ತಾರೆ.

‘ವೇತನ ಕೊಟ್ಟರೂ ಕೆಲಸಕ್ಕೆ ಕೂಲಿಕಾರರು ಸಿಗುತ್ತಿಲ್ಲ. ಸ್ಥಳೀಯ ಕೂಲಿಕಾರರನ್ನು ಅವಲಂಬಿಸಬೇಕಾದ ಸ್ಥಿತಿ ಇದೆ’ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಡಾ.ಎಚ್‌.ಟಿ. ಮೋಹನಕುಮಾರ್‌ ಹೇಳುತ್ತಾರೆ.

ಲೈನ್ ‌ಮನೆ ವಾಸವೇ ಗತಿ: ‘ಪ್ರತಿವರ್ಷ ಕಾಫಿ, ಕಾಳು ಮೆಣಸು ಕೊಯ್ಲು ಸಂದರ್ಭದಲ್ಲಿ ಹೊರ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಕೊಡಗು ಜಿಲ್ಲೆಗೆ ವಲಸೆ ಬರುತ್ತಾರೆ. ಕಾರ್ಮಿಕರನ್ನು ಕರೆತರಲು ಮ್ಯಾನೇಜರ್‌ಗಳಿದ್ದಾರೆ. ಬಂದ ಕಾರ್ಮಿಕರು, ದೊಡ್ಡ ದೊಡ್ಡ ಕಾಫಿ ಎಸ್ಟೇಟ್‌ನ ಲೈನ್‌ಮನೆಗಳಲ್ಲಿ ನೆಲೆಸುತ್ತಾರೆ. ಕೆಲವು ಎಸ್ಟೇಟ್‌ಗಳಲ್ಲಿ ಉತ್ತಮ ಕೂಲಿ ನೀಡಿದರೆ, ಮತ್ತೆ ಕೆಲವು ತೋಟಗಳಲ್ಲಿ ಸರಿಯಾದ ಕೂಲಿ ಹಣವನ್ನೇ ನೀಡುತ್ತಿಲ್ಲ. ಅವರು ಬದುಕು ಸಾಗಿಸಲು ಹಗಲಿರುಳೂ ಶ್ರಮಿಸುತ್ತಾರೆ’ ಎನ್ನುತ್ತಾರೆ ಕಾರ್ಮಿಕ ಮುಖಂಡ ಭರತ್‌.

‘ಸಾಕಷ್ಟು ಲೈನ್‌ಮನೆಗಳಲ್ಲಿ ವಿದ್ಯುತ್‌ ವ್ಯವಸ್ಥೆಯೇ ಇಲ್ಲ. ಸೀಮೆಎಣ್ಣೆ ದೀಪದಲ್ಲಿಯೇ ರಾತ್ರಿ ಕಳೆಯುವ ಸ್ಥಿತಿಯಿದೆ. ಮಳೆಗಾಲದಲ್ಲಿ ಈ ಮನೆಗಳು ಸೋರುತ್ತವೆ. ಈ ಸಂಕಷ್ಟದ ಸಂಕೋಲೆಯಲ್ಲಿ, ಹೊರ ರಾಜ್ಯದ ಕಾರ್ಮಿಕರು ದಿನದೂಡುವ ಸ್ಥಿತಿಯಿದೆ. ಮಾಲೀಕರನ್ನು ಪ್ರಶ್ನೆ ಮಾಡಲು ಸಾಧ್ಯವಾಗುವುದಿಲ್ಲ’ ಎಂದೂ ಅವರು ಹೇಳುತ್ತಾರೆ.

‘ಕೆಲವು ಎಸ್ಟೇಟ್‌ಗಳಲ್ಲಿ ಕಾರ್ಮಿಕರ ದಾಖಲೆ ವಶಕ್ಕೆ ಪಡೆದು, ಮುಂಗಡವಾಗಿ ಒಂದಷ್ಟು ಸಾಲ ನೀಡುತ್ತಾರೆ. ಆ ಸಾಲ ತೀರಿಸಲು ಪ್ರತಿನಿತ್ಯ ಅದೇ ಎಸ್ಟೇಟ್‌ಗೆ ಕೂಲಿಗೆ ತೆರಳಬೇಕು. ಸಾಲ ತೀರಿಸದ ಹೊರತು ದಾಖಲೆ ಪತ್ರಗಳನ್ನು ವಾಪಸ್‌ ನೀಡುವುದಿಲ್ಲ. ಊರಿಗೆ ಮರಳಲೂ ಸಾಧ್ಯವಾಗುವುದಿಲ್ಲ. ಜೀವನಾಂಶಕ್ಕೆ ಒಂದಷ್ಟು ಹಣ ಗಳಿಸಬಹುದೆಂಬ ಆಸೆಯಿಂದ ಊರು ಬಿಟ್ಟುಬಂದು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದೇವೆ’ ಎಂದು ನೊಂದ ಕಾರ್ಮಿಕರೊಬ್ಬರು ಅಳಲು ತೋಡಿಕೊಂಡರು.

‘ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿತ್ತು. ಅಸ್ಸಾಂ ಮೂಲದ ವಲಸಿಗ ಕಾರ್ಮಿಕರು, ಕೂಲಿ ಕೆಲಸಕ್ಕಾಗಿ ಇತ್ತ ಬರತೊಡಗಿದಂತೆ ಬೆಳೆಗಾರರ ಸಮಸ್ಯೆಗೆ ಒಂದಷ್ಟು ಪರಿಹಾರ ದೊರಕಿತ್ತು. ಕಾಫಿ ಕೊಯ್ಲು, ಮರ ಕಸಿ, ಗೊಬ್ಬರ ಹಾಕುವುದು, ಕಾಫಿ ಗಿಡಗಳ ಕಸಿ... ಹೀಗೆ ಸಾಕಷ್ಟು ಕೆಲಸಕ್ಕೆ ಕಾರ್ಮಿಕರು ಲಭಿಸಿದ್ದು, ನೆರೆಯ ಜಿಲ್ಲೆಗಳಿಂದ ಕಾರ್ಮಿಕರನ್ನು ಕರೆತರುವ ಜವಾಬ್ದಾರಿಯೂ ತಪ್ಪಿತ್ತು. ಕೊರೊನಾ ಸಂಕಷ್ಟದಿಂದ ಅಸ್ಸಾಂ ವಲಸಿಗ ಕಾರ್ಮಿಕರು ಕಳೆದ ಏಪ್ರಿಲ್– ಮೇನಲ್ಲಿ ಊರಿಗೆ ತೆರಳಿದ್ದು, ವಾಪಸ್‌ ಬಂದಿಲ್ಲ. ಈಗ ತೋಟದಲ್ಲಿ ಕೆಲಸಕ್ಕೆ ತೊಂದರೆಯಾಗಿದೆ’ ಎಂದು ಕುಂಜಿಲದ ಬೆಳೆಗಾರ ಪಿ.ವಿ.ಮಂಜುನಾಥ್‌ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.