ADVERTISEMENT

ಎಲೆಲೆ ಎಲೆಯೇ? ಏನು ನಿನ್ನ ಲೀಲೆ! ಎಲೆ ಅರಿವು ಕಾರ್ಯಕ್ರಮದ ಬಗ್ಗೆ ಲೇಖನ

ಮಂಗಳೂರಿನ ಸಾವಯವ ಬಳಗದ ‘ಎಲೆ ಅರಿವು’ ಕಾರ್ಯಕ್ರಮ ಸೊಪ್ಪಿನಿಂದ ಆಗುವ ಆರೋಗ್ಯ ಲಾಭ

ಸರೋಜಾ ಪ್ರಕಾಶ
Published 7 ಡಿಸೆಂಬರ್ 2024, 15:32 IST
Last Updated 7 ಡಿಸೆಂಬರ್ 2024, 15:32 IST
<div class="paragraphs"><p>ಮಂಗಳೂರಿನಲ್ಲಿ ನಡೆದ ‘ಎಲೆ ಅರಿವು’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಟ್ಟ ಸೊಪ್ಪಿನ ಸಸಿಗಳು</p></div>

ಮಂಗಳೂರಿನಲ್ಲಿ ನಡೆದ ‘ಎಲೆ ಅರಿವು’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕಿಟ್ಟ ಸೊಪ್ಪಿನ ಸಸಿಗಳು

   

ಮಂಗಳೂರಿನ ಸಾವಯವ ಬಳಗದ ‘ಎಲೆ ಅರಿವು’ ಕಾರ್ಯಕ್ರಮ ಸೊಪ್ಪಿನಿಂದ ಆಗುವ ಆರೋಗ್ಯ ಲಾಭಗಳು, ತಯಾರಿಸಬಹುದಾದ ಖಾದ್ಯಗಳು ಮತ್ತಿತರ ವಿಚಾರಗಳೊಂದಿಗೆ ಸಸ್ಯ ಪ್ರಪಂಚವನ್ನು ತೆರೆದಿಟ್ಟಿತ್ತು..

----

ADVERTISEMENT

ಅಲ್ಲಿ ಸಾಲಾಗಿ ಬೆಂಚ್ ಮೇಲೆ ಜೋಡಿಸಿಟ್ಟ ಐವತ್ತಕ್ಕೂ ಹೆಚ್ಚು ಸೊಪ್ಪುಗಳ ಕಂತೆಗಳು. ಪ್ರತಿಯೊಂದಕ್ಕೂ ಒಪ್ಪವಾಗಿ ಬರೆದ ಹೆಸರುಗಳು. ನೋಡುತ್ತಾ ಹೋದಂತೆ ಸಾಮಾನ್ಯವಾಗಿ ಪರಿಚಯವಿರುವ ಸಾಲಿನಲ್ಲಿ ಅಪರಿಚಿತವಾದ ಸೊಪ್ಪುಗಳೇ ಅಧಿಕವಿದ್ದವು. ಸಾಂಬ್ರಾಣಿ, ನುಗ್ಗೆ, ಬಸಳೆ, ನೆಲನೆಲ್ಲಿಗಳಂತಹ ಕೆಲವು ನಿತ್ಯ ಕಾಣಸಿಗುವಂಥವೂ ಇದ್ದವು. ಕಚೂರ, ಪಂಚಪತ್ರೆ ಮುಂತಾದ ಹೆಸರು ಕೇಳಿದ, ನಾಯಿ ತುಳಸಿ, ಇಲಿಕಿವಿ, ಸಾಲಿಗ ಬಳ್ಳಿ, ಹಾಡೆ ಬಳ್ಳಿ, ಪುಳಿಯರ‍್ಲಿ, ಸೀಗೆಕುಡಿ, ಕೊಡೆಗಿಡ ಮುಂತಾದ ಇನ್ನೂ ಕೆಲವು ಕಂಡರಿಯದ ಗಿಡಗಳು ಮಂಗಳೂರಿನ ಭಾರತಿ ಕಾಲೇಜಿನಲ್ಲಿ ಸಾವಯವ ಬಳಗವು ಹಮ್ಮಿಕೊಂಡ ‘ಎಲೆ ಅರಿವು’ ಕಾರ್ಯಕ್ರಮದಲ್ಲಿದ್ದವು.

ಅತಿಥಿಗಳಲ್ಲೊಬ್ಬರಾದ ಪಿಲಿಕುಳದ ಉದಯಕುಮಾರ್ ಶೆಟ್ಟಿ ಅವರು ಒಳಗೆ ಬಂದವರೇ ಚೀಟಿಯೊಂದನ್ನು ಪಡೆದು ಅದರಲ್ಲಿ ಹೆಸರು ಬರೆದು ತಮ್ಮ ಕೈಯ್ಯಲ್ಲಿದ್ದ ಗಿಡವನ್ನು ಉಳಿದ ಸೊಪ್ಪುಗಳ ಸಾಲಿನಲ್ಲಿ ಜೋಡಿಸಿಟ್ಟರು. ಅದೇ ಕೋಳಿಕಾಲಿನ ಗಿಡ. ‘ನಂಗೀಗ ಹೊರಗಡೆ ಅಂಗಳದಲ್ಲಿ ಕಾಣಿಸಿತು, ಸಾಂಬಾರ್‌ಗೆ ಇದು ತುಂಬ ಒಳ್ಳೆಯದಾಗುತ್ತೆ’ ಎಂದು ಆ ಗಿಡ ಕುರಿತು ವಿವರ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಿಬ್ಬರ ಹೆಸರೂ ಪಾರ್ವತಿ. ಇಬ್ಬರೂ ಎಲೆ, ಸಸ್ಯ ಮತ್ತು ಮನೆಮದ್ದಿನ ವಿಷಯಗಳಲ್ಲಿ ಅಪಾರ ತಿಳಿವಳಿಕೆ ಹೊಂದಿರುವವರು. ಎಲೆ, ದಂಟು ಬಾಡಿದರೂ ಮೂಸಿ ಇದು ಇಂಥದ್ದೇ ಎಂದು ಖಚಿತವಾಗಿ ಹೇಳಬಲ್ಲವರು.

ಅಂದು ಮೂರು ಜಾತಿಯ ಎಲೆಗಳನ್ನು ಸಭಿಕರಿಗೆ ತಿನ್ನಲೆಂದು ಹಂಚಲಾಯಿತು. ನಮ್ಮ ಸುತ್ತಲಿನ ಅನೇಕ ಗಿಡಗಳು ನಿರ್ಲಕ್ಷಿತ ಗಿಡಗಳು, ದೇಹದ ವಿಷ ಹೊರ ತೆಗೆಯುವಂತಹ ಉತ್ತರಣೆಯಂತಹ ಗಿಡಗಳಿವೆ. ನೋವನ್ನು ಮರೆಸುವ, ನಿವಾರಿಸುವ ಚರ್ಮರೋಗಕ್ಕೆ ರಾಮಬಾಣವಾಗುವ ಎದೆಹಾಲು ಹೆಚ್ಚಿಸುವ, ನಿತ್ರಾಣ ಹೋಗಲಾಡಿಸುವ ಸೊಪ್ಪುಗಳಿವೆ. ಸೊಪ್ಪುಗಳ ಮಹತ್ವದ ಬಗ್ಗೆ ಅರಿಯಿರಿ ಎಂದ ಆ ಹಿರಿಯರ ಪ್ರಕಾರ ‘ಒಳ್ಳೆಯದೆಂದು ಅತಿ ಬಳಕೆ ಸಲ್ಲದು, ಕ್ರಮಬದ್ಧವಾಗಿ, ನಿಯಮಿತವಾಗಿ ಸೇವಿಸಿದಾಗ ಮಾತ್ರ ಸೊಪ್ಪು ಔಷಧಿಯಾಗಿ ಪರಿವರ್ತನೆಯಾಗುತ್ತದೆ..’

ಉದಯಕುಮಾರ್ ಶೆಟ್ಟಿ ಅವರು ಮರಗಿಡಗಳ ಪರಿಣತರು, ಅಪಾರ ಓದು, ಓಡಾಟದ ಮೂಲಕ ದೇಶದ ಮೂಲೆಮೂಲೆಯ ಜನಪದ ಪದ್ಧತಿಗಳ ಬಗ್ಗೆ ಅರಿತವರು. ‘ವಿದೇಶಿಯರು ಇಲ್ಲಿಗೆ ಬಂದು ಕಾಡಿನ ಜನರೊಂದಿಗೆ ಮಾತನಾಡಿ ಅಧ್ಯಯನ ನಡೆಸುತ್ತಾರೆ. ಆದರೆ ನಾವು ಈ ಮೌಖಿಕ ಪರಂಪರೆಗೆ ಬೆಲೆ ಕೊಡುತ್ತಿಲ್ಲವಲ್ಲ, ದಾಖಲಾತಿ ಅಧ್ಯಯನ ನಡೆಯುತ್ತಿಲ್ಲವಲ್ಲ’ ಎಂದು ವಿಷಾದಿಸುವ ಅವರು, ‘ಹುಲ್ಲಿನಲ್ಲಿ ನೂರಾರು ವಿಧ ಇವೆ. ಭದ್ರಮುಷ್ಟಿ, ಗರಿಕೆಯ ಹೊರತಾಗಿ ಬೇರೆ ಹುಲ್ಲುಗಳ ಕುರಿತು ಸಂಶೋಧನೆ ನಡೆಯಬೇಕಾಗಿದೆ. ಗುಡ್ಡೆ ಕೇಪುಳ, ಕುಂಟಾಲ ಮುಂತಾದ ಬೆಟ್ಟಗುಡಗಳಲ್ಲಿ ಬಿಸಿಲಿಗೆ ಮೈಯ್ಯೊಡ್ಡಿ ಬೆಳೆಯುವ ಸಸ್ಯೌಷಧಗಳ ಬಗ್ಗೆ ಶೋಧಗಳು ನಡೆಯುತ್ತಿಲ್ಲ. ಆದರೆ ಇಡೀ ಗುಡ್ಡಗಳೇ ಕುಸಿದು ಮಣ್ಣಾಗುತ್ತಿವೆ’ ಎನ್ನುತ್ತಾ ಪರಿಸರವಿನಾಶದ ಕುರಿತು ಎಚ್ಚರಿಸಿದರು.

ದೇವಿಕಾ ಮತ್ತು ಮಂಜುಳಾ ಸೋದರಿಯರು ತಾವು ತಂದಿದ್ದ ಸೊಪ್ಪಿನ ಮೂಟೆಯಿಂದ ಬಿಡಿಬಿಡಿ ಸೊಪ್ಪಿನ ಕಂತೆಗಳನ್ನು ಚಕಚಕನೆ ಜೋಡಿಸಿಟ್ಟುಕೊಂಡು ಸುಮಾರು ಐವತ್ತು ವಿವಿಧ ಸೊಪ್ಪುಗಳ ಕನ್ನಡ, ಸಂಸ್ಕೃತ ಹಾಗೂ ವೈಜ್ಞಾನಿಕ ಹೆಸರುಗಳನ್ನು ಹೇಳಿದರು. ಬಳಕೆಯ ವಿಧಾನವನ್ನು ಚುಟುಕಾಗಿ, ಚುರುಕಾಗಿ ಆದರೆ ಸ್ಪಷ್ಟವಾಗಿ ವಿವರಣೆ ಕೊಟ್ಟರು. ಈ ಸೋದರಿಯರ ವಿಶೇಷವೆಂದರೆ, ಇಬ್ಬರೂ ಕೃಷಿ ಡಿಪ್ಲೊಮಾ ಓದಿದವರು. ಒಬ್ಬಾಕೆ ಜೇನು ಕೃಷಿ, ಇನ್ನೊಬ್ಬಾಕೆ ಕಸಿಕಟ್ಟುವ ಕಲೆಯಲ್ಲಿ ಆಳ ಅಧ್ಯಯನ ನಡೆಸುತ್ತ ವೃತ್ತಿಪರರಾಗುವತ್ತ ಹೆಜ್ಜೆಯನ್ನಿಡುತ್ತಿದ್ದಾರೆ. ಮಂಗಳೂರಿನ ಸಾವಯವ ಬಳಗ ಸೃಷ್ಟಿಸಿದ ಪೇಟೆ ಕೃಷಿಕ ಸಮುದಾಯಕ್ಕೆ ವಾರವಾರವೂ ಎಳೆಯ ತರಕಾರಿ ಮತ್ತು ಸೊಪ್ಪಿನ ಗಿಡಗಳನ್ನು ಪೂರೈಸುತ್ತಿದ್ದಾರೆ. ಇವರಿಗೆ ತಂದೆ ಹರಿಕೃಷ್ಣ ಕಾಮತ್ ಅವರೇ ಮಾರ್ಗದರ್ಶಕರು.

ಶಿಬಿರಾರ್ಥಿಗಳಿಗೂ ತಮ್ಮ ಅಂಗಳದ ಸೊಪ್ಪುಗಳ ಬಗ್ಗೆ ಹೇಳಿಕೊಳ್ಳಲು ತುಸು ಅವಕಾಶವಿತ್ತು. ನುಗ್ಗೆಸೊಪ್ಪಿನ ಚಟ್ನಿಪುಡಿ, ದಾಲ್ಚಿನ್ನಿ ಎಲೆಯಲ್ಲಿ ಬೇಯಿಸಿದ ಕಡುಬು, ಹತ್ತೆಂಟು ಚಿಗುರೆಲೆಗಳನ್ನು ಬಳಸಿ ಮಾಡಿದ ತೊಕ್ಕು, ವಿಧವಿಧ ತಂಬುಳಿ, ಚಟ್ನಿಗಳನ್ನು ತಯಾರಿಸಿ ತಂದವರಿದ್ದರು. ಸೊಪ್ಪುಗಳನ್ನು ಕಾಗದದಲ್ಲಿ ಸುತ್ತಿಟ್ಟು ಮೇಲೆ ನೀರು ಚಿಮುಕಿಸಿಟ್ಟರೆ ದೀರ್ಘಾವಧಿಯವರೆಗೆ ಕಾಪಿಡಬಹುದು ಎಂದು ತಾವು ಕೊಯ್ದು ತಂದ ನಳನಳಿಸುವ ಸೊಪ್ಪನ್ನು ತೋರಿದವರೊಬ್ಬರು. ತಮ್ಮ ಕೈತೋಟದಿಂದ ಕೀಟವಿಕರ್ಷಕ, ಮುದ ಹೆಚ್ಚಿಸುವ ಮತ್ತು ಅಲಂಕಾರಿಕವಾಗಿಯೂ ಬೆಳೆಯಬಹುದಾದ ಸುವಾಸನಾಯುಕ್ತ ಪಚ್ಚೆತೆನೆ, ಪುದಿನಾ, ವಾತಂಗಿ ಈ ಎಲೆಗಳನ್ನು ತಂದವರೊಬ್ಬರು. ಅಂಗಳದ ಸೊಪ್ಪುಗಳನ್ನು ಬಳಸಬೇಕು, ಬಳಸಬೇಕೆಂದರೆ ಮೊದಲು ಬೆಳೆಯಬೇಕು, ಇತರರಿಗೆ ಮಾಹಿತಿ ಮತ್ತು ಬೆಳೆ ಹಂಚಬೇಕು ಎಂಬ ಮಾತೂ ಅಲ್ಲಿ ಧ್ವನಿಸಿತು.

ಮಹಿಳೆಯೊಬ್ಬರು ವೇದಿಕೆಗೆ ಬಂದು ತಾವು ತಂದ ಸೊಪ್ಪಿನ ಚಟ್ನಿ ಮಾಡುವ ಬಗೆಯನ್ನು ವಿವರಿಸಿ ಜೊತೆಗೇ ‘ಬೀಟ್‌ರೂಟ್ ರಸ ತೆಗೆದು ಸಣ್ಣ ಉರಿಯಲ್ಲಿ ಕುದಿಸಿ ದಪ್ಪವಾದಾಗ ಹಸುವಿನ ತುಪ್ಪ ಒಂದೆರಡು ಹನಿ ಸೇರಿಸಿ ಲಿಪ್‌ಸ್ಟಿಕ್ ಆಗುತ್ತೆ’ ಎನ್ನುತ್ತ ತಮ್ಮ ಕೆಂಪುತುಟಿಯ ರಂಗಿನ ಗುಟ್ಟನ್ನು ಬಹಿರಂಗಗೊಳಿಸಿದಾಗ ನಗೆಬುಗ್ಗೆ ಚಿಮ್ಮಿತ್ತು.

ಮೊದ ಮೊದಲು ಹೆಸರು ಕೊಟ್ಟ ಮೂವತ್ತೈದು ಜನರಷ್ಟೇ ಸೇರಿದರೂ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ಕೊಠಡಿ ತುಂಬಿ ಪ್ರತಿಯೊಬ್ಬರ ಕೈಯ್ಯಲ್ಲೂ ಸೊಪ್ಪಿನ ಕಂತೆಗಳಿದ್ದವು!

ಅಡುಗೆ ಮಾಡಿ ನೋಡಿರಣ್ಣ ಈ ಸೊಪ್ಪಿನ ರುಚಿಯ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.