ಸ್ವೀಟ್ ಕಾರ್ನ್ ಪುಲಾವ್
ಸ್ವೀಟ್ ಕಾರ್ನ್ ಪುಲಾವ್
ಬೇಕಾಗುವ ಸಾಮಗ್ರಿ: ಸ್ವೀಟ್ ಕಾರ್ನ್ ಒಂದು ಕಪ್, ಪುಲಾವಿನ ಅಕ್ಕಿ ಒಂದು ಕಪ್, ಕ್ಯಾಪ್ಸಿಕಂ ಹೋಳು ಅರ್ಧ ಕಪ್, ಹಾಲು ಒಂದು ಕಪ್, ಹಸಿಮೆಣಸಿನ ಕಾಯಿ ಎರಡರಿಂದ ಮೂರು, ತೆಂಗಿನಕಾಯಿ ತುರಿ ಕಾಲು ಕಪ್, ಬೆಳ್ಳುಳ್ಳಿ ಆರು ಎಸಳು, ಜೀರಿಗೆ ಒಂದು ಚಮಚ, ಕೊತ್ತಂಬರಿ ಸೊಪ್ಪು ಒಂದು ಮುಷ್ಟಿ, ಶುಂಠಿ ಒಂದು ಅಂಗುಲ, ಚಕ್ಕೆ ಸ್ವಲ್ಪ, ಲವಂಗ ಎರಡು, ಏಲಕ್ಕಿ ಎರಡು, ರುಚಿಗೆ ಉಪ್ಪು, ಲಿಂಬೆ ಹುಳಿ ಒಂದು ದೊಡ್ಡ ಚಮಚ, ಒಗ್ಗರಣೆಗೆ ತುಪ್ಪ ಮೂರು ಚಮಚ, ಜೀರಿಗೆ ಅರ್ಧ ಚಮಚ, ಪುಲಾವಿನ ಎಲೆ ಒಂದು, ಈರುಳ್ಳಿ ಸಣ್ಣದಾಗಿ ಕೊಚ್ಚಿಕೊಂಡಿದ್ದು ಅರ್ಧ ಕಪ್.
ಮಾಡುವ ವಿಧಾನ: ತೆಂಗಿನಕಾಯಿ ತುರಿಗೆ ಜೀರಿಗೆ, ಹಸಿಮೆಣಸು, ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ ಸೇರಿಸಿ ಸ್ವಲ್ಪವೆ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಕುಕ್ಕರಿಗೆ ತುಪ್ಪ ಹಾಕಿ, ಬಿಸಿ ಆದ ಮೇಲೆ ಜೀರಿಗೆ, ಈರುಳ್ಳಿ, ಪುಲಾವಿನ ಎಲೆ ಹಾಕಿ ಒಂದು ನಿಮಿಷ ಹುರಿದು, ಸ್ವೀಟ್ ಕಾರ್ನ್ ಮತ್ತು ಕ್ಯಾಪ್ಸಿಕಂ ಹೋಳು ಹಾಕಿ ಮತ್ತೊಂದು ನಿಮಿಷ ಹಾಗೆ ಫ್ರೈ ಮಾಡಿ, ರುಬ್ಬಿಕೊಂಡ ಮಸಾಲೆ ಪದಾರ್ಥ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ ತೊಳೆದ ಅಕ್ಕಿ ಸೇರಿಸಿ ಮತ್ತೆರಡು ನಿಮಿಷ ಫ್ರೈ ಮಾಡಿ.ನಂತರ ಇದಕ್ಕೆ ಹಾಲು ಹಾಕಿ ಬೇಕಾಗುವಷ್ಟು ನೀರು ಸೇರಿಸಿ, ಉಪ್ಪು, ಹುಳಿ ಬೆರೆಸಿ ಕುಕ್ಕರಿನ ಮುಚ್ಚಳ ಮುಚ್ಚಿ ಮೂರು ಕೂಗು ಹಾಕಿಸಿಕೊಳ್ಳಿ. ಯಾವುದೆ ರಾಯತದ ಅವಶ್ಯಕತೆಯಿಲ್ಲದೆ ಇದನ್ನು ಸವಿಯಬಹುದು.
ಸ್ವೀಟ್ ಕಾರ್ನ್ ಎಣ್ಣೆ ರೊಟ್ಟಿ
ಬೇಕಾಗುವ ಸಾಮಗ್ರಿ: ಸ್ವೀಟ್ ಕಾರ್ನ್ ಒಂದು ಕಪ್, ಸಬ್ಬಕ್ಕಿ ಒಂದು ಕಪ್, ಅಕ್ಕಿಹಿಟ್ಟು ಅರ್ಧ ಕಪ್, ಚಿರೋಟಿ ರವೆ ಕಾಲು ಕಪ್, ಕೊಚ್ಚಿಕೊಂಡ ಕೊತ್ತಂಬರಿ ಸೊಪ್ಪು ಸ್ವಲ್ಪ, ಸಣ್ಣಗೆ ಕೊಚ್ಚಿದ ಶುಂಠಿ ಸ್ವಲ್ಪ, ಕರಿಬೇವಿನ ಎಸಳು ಎರಡು ಎಸಳು ಕೊಚ್ಚಿದ್ದು, ಕೊಚ್ಚಿದ ಹಸಿಮೆಣಸು ಎರಡು ಅಥವಾ ಕೆಂಪು ಮೆಣಸಿನ ಪುಡಿ ಒಂದು ಚಮಚ, ರುಚಿಗೆ ಉಪ್ಪು, ಲಿಂಬೆರಸ ಒಂದು ಚಮಚ, ಬೇಯಿಸಲು ಎಣ್ಣೆ.
ಮಾಡುವ ವಿಧಾನ: ಸಬ್ಬಕ್ಕಿಯನ್ನು ಮೂರು ಗಂಟೆ ನೆನೆಸಿಕೊಂಡು, ನೀರು ಬಾಗಿಸಿ, ಇದಕ್ಕೆ ಮೇಲೆ ತಿಳಿಸಿದ ಎಲ್ಲ ಸಾಮಗ್ರಿಗಳನ್ನೂ ಹಾಕಿ ಚೆನ್ನಾಗಿ ಕಿವುಚಿ ಕಲಸಿಕೊಳ್ಳಬೇಕು. ನೀರನ್ನು ಬೇಕಿದ್ದರೆ ಮಾತ್ರ ಸೇರಿಸಿಕೊಳ್ಳಿ. ಹಿಟ್ಟನ್ನು ಸರಿಯಾಗಿ ಹದ ಮಾಡಿಕೊಂಡು ಬಾಳೆ ಎಲೆ ಅಥವಾ ಬಟರ್ ಪೇಪರಿನ ಮೇಲೆ ಕೈಯಲ್ಲಿ ಹದವಾಗಿ ತಟ್ಟಿಕೊಂಡು ಕಾದ ತವಾದ ಮೇಲೆ ಹಾಕಿ ಎರಡೂ ಕಡೆ ಎಣ್ಣೆ ಹಾಕಿ ಸರಿಯಾಗಿ ಬೇಯಿಸಿಕೊಳ್ಳಿ. ಬಿಸಿ ಇರುವಾಗಲೆ ಕಾಯಿ ಚಟ್ನಿಯೊಂದಿಗೆ ಸವಿಯಿರಿ.
ಸ್ವೀಟ್ ಕಾರ್ನ್ ಪಕೋಡ
ಬೇಕಾಗುವ ಸಾಮಗ್ರಿ: ಸ್ವೀಟ್ ಕಾರ್ನ್ ಒಂದು ಕಪ್, ಅಕ್ಕಿಹಿಟ್ಟು ಅರ್ಧ ಕಪ್, ಕಡ್ಲೆ ಹಿಟ್ಟು ಕಾಲು ಕಪ್, ಉದ್ದುದ್ದ ಕೊಚ್ಚಿಕೊಂಡ ಈರುಳ್ಳಿ ಒಂದು ಕಪ್, ಕೊಚ್ಚಿದ ಕೊತ್ತಂಬರಿ ಸೊಪ್ಪು ಕಾಲು ಕಪ್, ಶುಂಠಿ ಕೊಚ್ಚಿಕೊಂಡಿದ್ದು ಸ್ವಲ್ಪ, ಕೆಂಪು ಮೆಣಸಿನ ಪುಡಿ ಒಂದು ಚಮಚ, ರುಚಿಗೆ ಉಪ್ಪು, ಲಿಂಬೆರಸ ಅರ್ಧ ಚಮಚ, ಕರಿಯಲು ಎಣ್ಣೆ.
ಮಾಡುವ ವಿಧಾನ: ಒಂದು ಪಾತ್ರೆಗೆ ಸ್ವೀಟ್ ಕಾರ್ನ್ ಹಾಕಿ ಒಮ್ಮೆ ಕೈಯಲ್ಲಿ ಚೆನ್ನಾಗಿ ಕಿವುಚಿಕೊಳ್ಳಿ. ನಂತರ ಇದಕ್ಕೆ ಉಳಿದ ಎಲ್ಲ ಸಾಮಗ್ರಿಗಳನ್ನೂ ಸೇರಿಸಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನೀರು ಬೇಕಿದ್ದರೆ ಮಾತ್ರ ಸೇರಿಸಿಕೊಂಡು ಹಿಟ್ಟನ್ನು ಹದ ಮಾಡಿಕೊಳ್ಳಿ. ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಕಾದ ಮೇಲೆ ಚಿಕ್ಕ ಚಿಕ್ಕದಾಗಿ ಪಕೋಡ ಬಿಟ್ಟು ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಕರಿಯುವಾಗ ಬಾಣಲೆಗೆ ಜರಡಿಯನ್ನು ಮುಚ್ಚಿ ಕರಿಯಬೇಕು. ಸ್ವೀಟ್ ಕಾರ್ನ್ ಸಿಡಿಯುವ ಸಾಧ್ಯತೆಯಿರುತ್ತದೆ. ಇಲ್ಲದಿದ್ದರೆ ಸ್ವೀಟ್ ಕಾರ್ನ್ ಅನ್ನು ತರಿ ತರಿಯಾಗಿ ನೀರು ಹಾಕದೆ ರುಬ್ಬಿಕೊಂಡೂ ಮಾಡಬಹುದು. ಇದನ್ನು ಬಿಸಿ ಇರುವಾಗಲೆ ಟೊಮೆಟೊ ಸಾಸ್ ನೊಂದಿಗೆ ಸವಿಯಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.