ADVERTISEMENT

ಆರೋಗ್ಯಕರ ಆಹಾರ | ಯಾವ ಪಾತ್ರೆ ಬಳಕೆ ಸೂಕ್ತ?

​ಪ್ರಜಾವಾಣಿ ವಾರ್ತೆ
Published 7 ಜೂನ್ 2025, 0:30 IST
Last Updated 7 ಜೂನ್ 2025, 0:30 IST
   
ಅಡುಗೆ ಮಾಡಲು ನಾವು ಬಳಸುವ ಪಾತ್ರೆಗಳು, ಆಹಾರ ಪದಾರ್ಥಗಳನ್ನು ತುಂಬಿಸಿಡುವ ಡಬ್ಬಿಗಳು ನಮ್ಮ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ. ವಿಶ್ವ ಆಹಾರ ಸುರಕ್ಷಾ ದಿನದ (ಜೂನ್‌ 7) ಈ ಸಂದರ್ಭದಲ್ಲಿ, ಯಾವ ರೀತಿಯ ಪಾತ್ರೆ ಮತ್ತು ಡಬ್ಬಿಗಳ ಬಳಕೆ ಸೂಕ್ತ ಎಂಬ ಕುರಿತು ಆಹಾರ ತಜ್ಞೆ ಹೆಚ್.ಎಸ್. ಪ್ರೇಮಾ ಮಾಹಿತಿ ನೀಡಿದ್ದಾರೆ

ಡಾ. ಹೆಚ್‌.ಎಸ್‌. ಪ್ರೇಮಾ

ಅಡುಗೆ ಮಾಡಲು ಯಾವ ಬಗೆಯ ಪಾತ್ರೆ ಬಳಸುವುದು ಒಳ್ಳೆಯದು?

ಪ್ರಕೃತಿಸಹಜ ಲೋಹಗಳಿಂದ ತಯಾರಿಸಿದ ಪಾತ್ರೆಗಳನ್ನು ಬಳಸುವುದು ಸೂಕ್ತ. ಅಂದರೆ, ಚಿನ್ನ, ಬೆಳ್ಳಿ, ಕಬ್ಬಿಣ, ತಾಮ್ರ, ಗಾಜಿನ ಪಾತ್ರೆಗಳಾದರೆ ಉತ್ತಮ. ಚಿನ್ನ, ಬೆಳ್ಳಿಯ ಪಾತ್ರೆಗಳನ್ನು ಆಹಾರ ತಯಾರಿಸಲು ಬಳಸುತ್ತೇವೋ ಇಲ್ಲವೋ ಎನ್ನುವುದು ಬೇರೆ ಮಾತು, ಆದರೆ ಅವು ಬಳಕೆಗೆ ಯೋಗ್ಯವಂತೂ ಹೌದು. ಮಿಶ್ರಲೋಹಗಳಾದ ಕಂಚು, ಹಿತ್ತಾಳೆ ಪಾತ್ರೆಗಳು ಕಿಲುಬು ಕಟ್ಟುವುದರಿಂದ ಅವುಗಳನ್ನು ಬಳಸುವಾಗ ಎಚ್ಚರ ವಹಿಸಬೇಕು. ಈ ಪಾತ್ರೆಗಳಿಗೆ ಕಲಾಯಿ ಮಾಡಲು ಬಳಸುವ ಪದಾರ್ಥಗಳಂತೂ ಅತ್ಯಂತ ವಿಷಯುಕ್ತವಾಗಿರುತ್ತವೆ. ಅಲ್ಯೂಮಿನಿಯಂ ಮತ್ತು ಸೀಸದ ಪಾತ್ರೆಗಳ ಬಳಕೆ ಆರೋಗ್ಯಕ್ಕೆ ಹಾನಿಕಾರಕ. ಅಲ್ಯೂಮಿನಿಯಂ ಶಾಖಕ್ಕೆ ಬೇಗ ಪ್ರತಿಕ್ರಿಯಿಸುತ್ತದೆ. ಬಳಸುತ್ತಾ ಬಳಸುತ್ತಾ ಕರಗತೊಡಗುತ್ತದೆ. ಹಾಗೆ ಕರಗುವ ಆ ಅಂಶ ನಮ್ಮ ದೇಹವನ್ನು ಸೇರುತ್ತದೆ. ಹೀಗಾಗಿ, ಅಲ್ಯೂಮಿನಿಯಂ ಪಾತ್ರೆಗಳನ್ನು ಅಡುಗೆ ತಯಾರಿಸಲು ನಿರಂತರವಾಗಿ ಬಳಸುವುದು ತರವಲ್ಲ. 

ADVERTISEMENT

ಸ್ಟೀಲ್ ಕೂಡ ಮಿಶ್ರಲೋಹ. ಆದರೆ ಮನುಷ್ಯ ಅದನ್ನು ಬಳಕೆಗೆ ಸೂಕ್ತವಾಗಿ ಮಾರ್ಪಡಿಸಿದ್ದಾನೆ. ಸ್ಟೇನ್‌ಲೆಸ್ ಸ್ಟೀಲ್‌ನಿಂದ ತೊಂದರೆಯಾಗಿರುವ ಬಗ್ಗೆ ಇದುವರೆಗೆ ಯಾವುದೇ ದಾಖಲೆಯಿಲ್ಲ. ಅದು ಕರಗಿ ದೇಹವನ್ನು ಸೇರುವುದಿಲ್ಲ. ಹಾಗಾಗಿ, ಸ್ಟೀಲ್ ಬಳಸಬಹುದು. ಇನ್ನು ಮಣ್ಣು, ಕಲ್ಲು, ಮರದ ತೊಗಟೆಯಂತಹ ಪಂಚಭೂತಗಳ ಮೂಲದಿಂದ ತಯಾರಿಸಿದ ವಸ್ತುಗಳಲ್ಲಿ ಮಾಡುವ ಅಡುಗೆಯಂತೂ ನಮ್ಮ ದೇಹದಲ್ಲಿ ಯಾವುದೇ ರೀತಿಯ ವಿಷವನ್ನೂ ಉತ್ಪತ್ತಿ ಮಾಡುವುದಿಲ್ಲ.

ಸಿಲಿಕಾನ್, ಪ್ಲಾಸ್ಟಿಕ್, ನಾನ್‌ಸ್ಟಿಕ್ ಪಾತ್ರೆಗಳ ಬಳಕೆ ಬಗ್ಗೆ ಹೇಳುವುದಾದರೆ...

ಈಚೆಗೆ ಸಿಲಿಕಾನ್ ಕುಕ್‌ವೇರ್‌ಗಳ ಬಳಕೆ ಹೆಚ್ಚಾಗಿದೆ. ಇದು ಕೂಡ ಆಹಾರದೊಂದಿಗೆ ಕರಗಿ ದೇಹವನ್ನು ಸೇರುತ್ತದೆ. ಉದಾಹರಣೆಗೆ, ಹೆಂಚಿಗೆ ಎಣ್ಣೆ ಹಾಕಲು ಸಿಲಿಕಾನ್ ಬ್ರಷ್ ಬಳಸುತ್ತೇವೆ. ಆದರೆ ಚಮಚದಲ್ಲಿಯೇ ಎಣ್ಣೆ ಹಾಕಬಹುದಲ್ಲ? ಹೀಗೆ ಅಗತ್ಯವೇ ಇಲ್ಲದೆ ಕೆಲವನ್ನು ಬಳಸಿ ಆರೋಗ್ಯವನ್ನು ನಾವೇ ಕೆಡಿಸಿಕೊಳ್ಳುತ್ತಿದ್ದೇವೆ.

ನಾನ್‌ಸ್ಟಿಕ್‌ ಸಾಮಗ್ರಿಗಳಲ್ಲಿ ಮಿಶ್ರಲೋಹದ ಮೇಲೆ ಪ್ಲಾಸ್ಟಿಕ್ ಕೋಟಿಂಗ್ ಹಾಕಲಾಗಿರುತ್ತದೆ. ಇದರ ಬಳಕೆ ಆರೋಗ್ಯಕ್ಕೆ ಮಾರಕ. ಪ್ಲಾಸ್ಟಿಕ್ ಸಾಮಗ್ರಿಗಳು ಮತ್ತೂ ದೂರ ಇಡಬೇಕಾದವು. ಇವ್ಯಾವೂ ಪ್ರಕೃತಿಯಿಂದ ಬಂದವಲ್ಲ, ಮಾನವನ ಸೃಷ್ಟಿ ಎಂಬುದನ್ನು ನೆನಪಿಡಬೇಕು.

ಭಾರತೀಯ ಸಂಸ್ಕೃತಿಯಲ್ಲಿ ಆಹಾರ ಹಾಗೂ ಆಹಾರ ಸಾಮಗ್ರಿಗಳ ವಿಷಯ ಈ ಮೊದಲು ಮಾರುಕಟ್ಟೆಕೇಂದ್ರಿತ ಆಗಿರಲಿಲ್ಲ, ಆರೋಗ್ಯಕೇಂದ್ರಿತವಾಗಿತ್ತು. ಆದರೆ ಈಗ ಮಾರುಕಟ್ಟೆಕೇಂದ್ರಿತ ಸಾಮಗ್ರಿಗಳೇ ಹೆಚ್ಚು ಬಳಕೆಯಲ್ಲಿವೆ.

ಅನಾರೋಗ್ಯಕರ ಎಂದು ಪರಿಗಣಿಸಲಾಗುವ ಪಾತ್ರೆಗಳ ಬಳಕೆಯಿಂದ ಆಗುವ ಗಂಭೀರ ಅಪಾಯಗಳೇನು?

ಈ ಪಾತ್ರೆಗಳಲ್ಲಿ ಕಾರ್ಬನ್ ಚೈನ್ ಬಹುಬೇಗ ತುಂಡಾಗುತ್ತದೆ. ಈ ರಾಸಾಯನಿಕ ಪ್ರಕ್ರಿಯೆಯಲ್ಲಿ ಒಂದೊಂದು ಕೊಂಡಿ ಕಳಚಿದಾಗಲೂ ಇಂಚಿಂಚು ವಿಷ ಬಿಡುಗಡೆಯಾಗುತ್ತಾ ಹೋಗುತ್ತದೆ. ಆ ವಿಷ ನಮ್ಮ ದೇಹ ಸೇರಿ ಜೀವಕೋಶಗಳಿಗೆ ಕಂಟಕವಾಗುತ್ತದೆ. ಕ್ಯಾನ್ಸರ್, ಸಂತಾನಹೀನತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಆಹಾರ ತಯಾರಿ ಹೊರತಾಗಿ, ಆಹಾರ ಸಾಮಗ್ರಿಗಳ ಶೇಖರಣೆಗೆ ಯಾವುದು ಉತ್ತಮ?

ಆಹಾರ ಸಾಮಗ್ರಿಗಳ ಶೇಖರಣೆಗೆ ಸ್ಟೀಲ್, ಅಲ್ಯೂಮಿನಿಯಂ, ಗಾಜು, ಮಣ್ಣಿನ ಜಾಡಿಗಳು, ಸೆರಾಮಿಕ್ ಜಾಡಿಗಳನ್ನು ಬಳಸಬಹುದು. ಆಹಾರ ತಯಾರಿಕೆಗೆ ಅಲ್ಲದಿದ್ದರೂ ಶೇಖರಣೆಗೆ ಅಲ್ಯೂಮಿನಿಯಂ ಬಳಸುವುದರಿಂದ ತೊಂದರೆ ಇಲ್ಲ. ಆದರೆ ಪ್ಲಾಸ್ಟಿಕ್‌ ಮಾತ್ರ ಆಹಾರ ಸಾಮಗ್ರಿಗಳನ್ನು ಇಡಲು ಸಹ ಅಪಾಯಕಾರಿ.

ಸಂದರ್ಶನ: ಸುಮಲತಾ ಎನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.