ADVERTISEMENT

ಸಾಗು ಮಸಾಲೆ ದೋಸೆ ರುಚಿ ಬಲ್ಲಿರಾ

ಶಶಿಕುಮಾರ್ ಸಿ.
Published 5 ಸೆಪ್ಟೆಂಬರ್ 2018, 19:30 IST
Last Updated 5 ಸೆಪ್ಟೆಂಬರ್ 2018, 19:30 IST
   

ಕೆಂಪು ಮಸಾಲೆ ಮೆತ್ತಿ, ಆಲೂಗಡ್ಡೆ ಪಲ್ಯ ತುಂಬಿದ ಮಸಾಲೆ ದೋಸೆ ಎಲ್ಲರಿಗೂ ಚಿರಪರಿಚಿತ. ಆದರೆ, ಭಿನ್ನ ರುಚಿಯ ಸಾಗು ಮಸಾಲೆ ದೋಸೆಯ ಬಗ್ಗೆ ಗೊತ್ತಾ… ತಿಳಿದುಕೊಳ್ಳಲು ಬಸವನಗುಡಿಗೆ ಬರಬೇಕು.

ಬಸವನಗುಡಿಯ ಕಹಳೆ ಬಂಡೆ ರಸ್ತೆ ಬಳಿ ಇರುವ ಮೈಲಾರಿ ಹೋಟೆಲ್‌ನಲ್ಲಿ ವಿಶಿಷ್ಟ ಸಾಗು ಮಸಾಲೆ ದೋಸೆ ದೊರೆಯುತ್ತದೆ. ತುಪ್ಪ ಸವರಿದ ಆಲೂಗಡ್ಡೆ ಬದಲಿಗೆ ವಿಶಿಷ್ಟ ರುಚಿಯ ಸಾಗು ತುಂಬಿಟ್ಟು, ಹೆಂಚಿನ ಮೇಲೆ ಕಾಯಿಸಿ ಮೇಲೊಂದಿಷ್ಟು ಬೆಣ್ಣೆ ಹಾಕಿ ಕೊಡುವ ಸಾಗು ಮಸಾಲೆ ತಿಂದಷ್ಟು, ನಾಲಿಗೆ ಮತ್ತೆ ಮತ್ತೆ ಬೇಕೆನ್ನುತ್ತದೆ.

ವಿಶಿಷ್ಟವಾಗಿ ಮಸಾಲೆ ದೋಸೆಯನ್ನು ಉಣಬಡಿಸಬೇಕೆಂಬ ಆಲೋಚನೆಯಿಂದಲೇ ಸಾಗು ಮಸಾಲೆ ದೋಸೆ ಮೆನು ಲಿಸ್ಟ್‌ಗೆ ಸೇರಿಸಿದ್ದಾರೆ ಹೋಟೆಲ್‌ನ ಮಾಲೀಕ ವಿನೋದ್. ಇಲ್ಲಿನ ಯಾವುದೇ ತಿಂಡಿಗೆ ಬೆಳ್ಳುಳ್ಳಿ ಬಳಸುವುದಿಲ್ಲವಂತೆ.ತೀರಾ ದ್ರವವಾಗಿಯೂ ಅಲ್ಲದ, ಪಲ್ಯದಂತೆ ತೀರಾ ಗಟ್ಟಿಯಾಗೂ ಅಲ್ಲದ ಸಾಗು ದೋಸೆಗೆ ವಿಶಿಷ್ಟ ಸವಿಯನ್ನು ನೀಡುತ್ತದೆ. ಜೊತೆಗೆ ನೀಡುವ ಚಟ್ನಿಯೂ ವಿಶಿಷ್ಟವೇ. ಅಷ್ಟೇನೂ ಖಾರವಲ್ಲದ ತೆಂಗಿನ ಕಾಯಿ ತುರಿ, ಮೆಣಸಿನಕಾಯಿ ಮಾತ್ರವೇ ಹಾಕಿ ಮಾಡಿದ ಚಟ್ನಿ, ಸಾಗು, ಮಸಾಲೆ ದೋಸೆಗೆ ಸರಿಯಾದ ಜೊತೆ.

ADVERTISEMENT

ದೋಸೆ ಮಾತ್ರವಲ್ಲ ಇಲ್ಲಿನ ಇಡ್ಲಿ ಸಹ ತುಸು ವಿಶಿಷ್ಟವೇ. ಮೃದುವಾದ ಪುಟ್ಟ ಇಡ್ಲಿಯ ಮೇಲೆ ಬೆಣ್ಣೆ ಹಚ್ಚಿ ಕೊಡುತ್ತಾರೆ. ಇಡ್ಲಿಗೆ ಚಟ್ನಿಯ ಜೊತೆಗೆ ಸಾಗು ನೀಡುತ್ತಾರೆ. ಇಡ್ಲಿ ತಿಂದು ಮುಗಿಸಿದರೂ ಬೆಣ್ಣೆಯ ಜಿಡ್ಡು ಕೈಗಂಟಿ ಮತ್ತೊಂದು ಇಡ್ಲಿಯತ್ತ ಕೈಚಾಚುವಂತೆ ಮಾಡುತ್ತದೆ. ದೋಸೆ, ಇಡ್ಲಿಯ ಜೊತೆಗೆ ಚೌ-ಚೌ ಬಾತ್ ಸಹ ಹೋಟೆಲ್‌ನ ಸಿಗ್ನೇಚರ್ ಡಿಶ್. ಗೋಡಂಬಿ ಢಾಳಾಗಿ ಹಾಕಿದ, ತರಕಾರಿಯನ್ನು ಸೇರಿಸಿ, ತುಸು ಸಿಹಿ, ತುಸು ಖಾರದ ಅನುಭವ ನೀಡುವ ಉಪ್ಪಿಟ್ಟು, ಸಂಜೆಗೆ ಉತ್ತಮ ಸಂಗಾತಿ.

ಇಲ್ಲಿಮೂರು ವಿಧದ ಕೇಸರಿ ಬಾತ್ ಮಾಡುತ್ತಾರೆ. ಹಲಸಿನಹಣ್ಣಿನ ಕೇಸರಿಬಾತ್, ಬಾಳೆಹಣ್ಣಿನ ಕೇಸರಿಬಾತ್ ಮತ್ತೊಂದು ಪೈನಾಪಲ್ ಕೇಸರಿ ಬಾತ್.

ಬಿಸಿ ಬಿಸಿ ದೋಸೆ, ಇಡ್ಲಿ, ಚೌ-ಚೌ ಬಾತ್‌ಗಳು ತಿಂದ ನಾಲಿಗೆ ಕಾಫಿಯನ್ನು ಕೇಳದೇ ಇರುತ್ತದೆಯೇ. ಅದಕ್ಕೆಂದೆ ಇಲ್ಲಿ ಕಾಫಿ, ಟೀ ಹಾಗೂ ಬಾದಾಮಿ ಹಾಲು ಲಭ್ಯ. ಬಂದಗ್ರಾಹಕ ಸಂತೃಪ್ತವಾಗಿ ತಿಂಡಿ ಸವಿದು ಹೋಗಬೇಕೆಂಬುದು ಹೋಟೆಲ್‌ ಮಾಲೀಕ ವಿನೋದ್ ಕಾಳಜಿ.

ಸ್ವತಃ ಆಹಾರ ಪ್ರಿಯರಾದ ವಿನೋದ್ ನೀಡುವ ಆಹಾರದಲ್ಲಿ ಗುಣಮಟ್ಟಕ್ಕೆಪ್ರಥಮ ಆದ್ಯತೆಯನ್ನು ನೀಡಿರುವುದಾಗಿ ಹೇಳುತ್ತಾರೆ. ಗ್ರಾಹಕರಿಗೆ ಆಹಾರದ ಜೊತೆಗೆ ಹೋಟೆಲ್‌ನ ವಾತಾವರಣವೂ ಹಿಡಿಸಬೇಕೆಂದು ಒಳಾಂಗಣವನ್ನು ಸುಂದರವಾಗಿ ನವೀಕರಿಸಿದ್ದಾರೆ. ಗೋಡೆಯ ಮೇಲೆ ತೂಗು ಹಾಕಿರುವ ಬೆಂಗಳೂರಿನ ಹಳೆಯ ಚಿತ್ರಗಳು ಮನಸೆಳೆಯುತ್ತವೆ.

ಮೈಲಾರಿ ಹೋಟೆಲ್‌ ತಿನಿಸುಗಳು ಜೇಬಿಗೂ ಭಾರವಾಗದು. ₹ 40ಕ್ಕೆ ಸಾಗು ಮಸಾಲೆ ದೋಸೆ ತಟ್ಟೆಗೆ ಬೀಳುತ್ತದೆ. ಇಡ್ಲಿ ಒಂದಕ್ಕೆ ₹ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.