ADVERTISEMENT

ರಸಾಸ್ವಾದ: ಮಜ್ಜಿಗೆ ಪ್ರಯೋಜನ ಬಗೆ ಬಗೆ

ವೇದಾವತಿ ಎಚ್.ಎಸ್.
Published 20 ಫೆಬ್ರುವರಿ 2026, 23:30 IST
Last Updated 20 ಫೆಬ್ರುವರಿ 2026, 23:30 IST
   

ಬೇಸಿಗೆ ಬಂತೆಂದರೆ ಹೆಚ್ಚಿನವರ ಮನಸ್ಸು ಬೇಡುವುದು ದೇಹ ತಂಪಾಗಿಸುವ ಮಜ್ಜಿಗೆಯನ್ನು. ಆಯುರ್ವೇದದಲ್ಲಿ ‘ಭೂಮಿಯ ಮೇಲಿನ ಅಮೃತ’ ಎಂದೇ ಕರೆಯಲಾಗುವ ಮಜ್ಜಿಗೆಯನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ?

ಮಜ್ಜಿಗೆ ಅದರಲ್ಲೂ ಹಸುವಿನ ಮಜ್ಜಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ಹಲವು ಬಗೆಯ ವ್ಯಾಧಿಯನ್ನು ಉಪಶಮನಗೊಳಿಸುತ್ತದೆ. ಪಿತ್ತವಾಂತಿ, ಹೊಟ್ಟೆಯುಬ್ಬರ, ಸ್ಥೂಲಕಾಯದಂತಹ ಸಮಸ್ಯೆಗಳು ಇರುವವರು ಮಜ್ಜಿಗೆ ಸೇವನೆ ಮಾಡುವುದರಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಮಜ್ಜಿಗೆಯನ್ನು ಘೋಲ, ಮಥಿತ, ತಕ್ರ ಹಾಗೂ ಉದಧಿತ ಎಂದು ನಾಲ್ಕು ವಿಧಗಳನ್ನಾಗಿ ವಿಂಗಡಿಸಲಾಗಿದೆ. ವಾತ, ಪಿತ್ತನಾಶಕ, ಪೌಷ್ಟಿಕ ಹಾಗೂ ಶಕ್ತಿವರ್ಧಕವಾದ ಮಜ್ಜಿಗೆಯನ್ನು ‘ಘೋಲ’ ಮಜ್ಜಿಗೆ ಎಂದು ಕರೆಯಲಾಗುತ್ತದೆ. ಈ ಬಗೆಯ ಮಜ್ಜಿಗೆಯನ್ನು ತಯಾರಿಸುವಾಗ ಸ್ವಲ್ಪವೂ ನೀರನ್ನು ಬೆರೆಸದೆ, ಬೆಣ್ಣೆಯನ್ನು ತೆಗೆಯದೆ ಮೊಸರನ್ನು ಕಡೆದು, ದಪ್ಪ ದ್ರವವಾಗಿ ಉಪಯೋಗಿಲಾಗುತ್ತದೆ. ಚಿಟಿಕೆ ಇಂಗು ಮತ್ತು ಜೀರಿಗೆ ಸೇರಿಸಿ ಕುಡಿದರೆ ಮೂಲವ್ಯಾಧಿ, ಅತಿಸಾರ, ಕಫ, ವಾತವಿಕಾರ, ಮಲ-ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೆ ಈ ಮಜ್ಜಿಗೆಯು ದಿವ್ಯೌಷಧಿಯಾಗಿದೆ. ಚಳಿಗಾಲದಲ್ಲಿ ಇದು ದೇಹಕ್ಕೆ ಒಳ್ಳೆಯದು.

ADVERTISEMENT

ಇನ್ನು ಮೊಸರಿಗೆ ನೀರನ್ನು ಸೇರಿಸದೇ ಕಡೆದು ಬೆಣ್ಣೆಯನ್ನು ತೆಗೆದು ಉಪಯೋಗಿಸುವುದನ್ನು ‘ಮಥಿತ’ ಎಂದು ಕರೆಯುತ್ತಾರೆ. ಹೀಗೆ ತಯಾರಿಸಿದ ಮಜ್ಜಿಗೆಯನ್ನು ಉಪಯೋಗಿಸುವುದು ಕಫನಾಶಕ ಹಾಗೂ ಕೆಮ್ಮಿನಲ್ಲಿ ಕಫ ಕಟ್ಟುವುದನ್ನು ತಡೆಯುತ್ತದೆ.

ಮೊಸರಿನ ಕಾಲು ಭಾಗದಷ್ಟು ನೀರನ್ನು ಸೇರಿಸಿ ಕಡೆದು ಬೆಣ್ಣೆ ತೆಗೆದರೆ ಅದನ್ನು ‘ತಕ್ರ’ ಎಂದು ಕರೆಯುತ್ತಾರೆ.

ಮೊಸರಿನ ಅರ್ಧದಷ್ಟು ನೀರು ಸೇರಿಸಿ, ಮೊಸರನ್ನು ಕಡೆದು ಬೆಣ್ಣೆ ತೆಗೆದಾಗ ಅದನ್ನು ‘ಉದಧಿತ’ ಎಂದು ಕರೆಯುತ್ತಾರೆ. ಈ ರೀತಿಯಲ್ಲಿ ತಯಾರಿಸಿದ ಮಜ್ಜಿಗೆಯು ಕಣ್ಣುಗಳಿಗೆ ಶಕ್ತಿ ನೀಡುತ್ತದೆ.

ಹುಳಿ ಮಜ್ಜಿಗೆಗೆ ಉಪ್ಪನ್ನು ಸೇರಿಸಿ ಸೇವಿಸುವುದರಿಂದ ವಾತ ರೋಗ ಕಡಿಮೆಯಾಗುತ್ತದೆ. ಸಿಹಿ ಮಜ್ಜಿಗೆಗೆ ಸಕ್ಕರೆ ಸೇರಿಸಿ ಕುಡಿಯುವುದರಿಂದ ಪಿತ್ತ ಮಾಯವಾಗುತ್ತದೆ. ಉದಧಿತ ಮಜ್ಜಿಗೆಗೆ ಶುಂಠಿ, ಕಾಳುಮೆಣಸಿನ ಪುಡಿ, ಉಪ್ಪನ್ನು ಬೆರೆಸಿ ಸೇವಿಸುವುದರಿಂದ ಕಫ ಕಡಿಮೆಯಾಗುತ್ತದೆ.

ಸಿಹಿ ಮಜ್ಜಿಗೆಯನ್ನು ಎಲ್ಲಾ ಬಗೆಯ ರೋಗಿಗಳು ದಿನವೂ ಉಪಯೋಗಿಸಬಹುದು. ಹೆಚ್ಚು ಖರ್ಚಿಲ್ಲದ, ಪ್ರತಿಯೊಬ್ಬರ ಮನೆಯಲ್ಲೂ ಉಪಯೋಗಿಸಬಹುದಾದ ಮಜ್ಜಿಗೆಯನ್ನು, ಅದರಿಂದಾಗುವ ಪ್ರಯೋಜನಗಳ ದೃಷ್ಟಿಯಿಂದ ನಿಜಕ್ಕೂ ಭೂಮಿಯ ಮೇಲಿನ ಅಮೃತ ಎಂದೇ ಹೇಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.