ADVERTISEMENT

ಚಹದ ಜೋಡಿಗೆ ಗಿರ್‌ಮಿಟ್‌, ಚುಡುವ

ಜಾನಕಿ ಎಸ್.
Published 10 ಜುಲೈ 2020, 19:30 IST
Last Updated 10 ಜುಲೈ 2020, 19:30 IST
ಗಿರಮಿಟ್
ಗಿರಮಿಟ್   
""
""
""

ಕೊರೊನಾ ಕಾರಣದಿಂದ ಮನೆಯಿಂದ ಹೊರ ಹೋಗುವುದು ಕಷ್ಟ ಸಾಧ್ಯವಾಗಿದೆ. ಮನೆಯಲ್ಲೇ ಇರುವ ಮಕ್ಕಳು ಬಗೆ ಬಗೆಯ ತಿಂಡಿ–ತಿನಿಸುಗಳನ್ನು ಕೇಳುತ್ತಿರುತ್ತಾರೆ. ಅದರಲ್ಲೂ ಇದು ಮಳೆಗಾಲ ಬೇರೆ. ಸಂಜೆ ಹೊತ್ತಿಗೆ ಬಾಯಿಗೆ ರುಚಿ ಎನ್ನಿಸುವ ತಿನಿಸುಗಳಿದ್ದರೆ ಹಿತ. ಆ ಕಾರಣಕ್ಕೆ ಮನೆಯಲ್ಲೇ ಸುಲಭವಾಗಿ ಆರೋಗ್ಯಕರವಾಗಿರುವ ಘಮಘಮಿಸುವ ಈ ಸ್ನ್ಯಾಕ್ಸ್‌ಗಳನ್ನು ಮಾಡಿಟ್ಟುಕೊಂಡರೆ ಬೇಕಾದಾಗ ತಿನ್ನಬಹುದು ಎನ್ನುತ್ತಾರೆ ಜಾನಕಿ ಎಸ್.

**

ಗಿರಮಿಟ್

ಬೇಕಾಗುವ ಸಾಮಗ್ರಿಗಳು:
ಮಂಡಕ್ಕಿ – 1 ಬಟ್ಟಲು, ಟೊಮೆಟೊ – 2 , ಈರುಳ್ಳಿ – 3, ಹಸಿಮೆಣಸು – 1, ಒಣಮೆಣಸಿನ ಪುಡಿ – 1 ಚಮಚ ಜೀರಿಗೆ , ಸಾಸಿವೆ, ಬೆಲ್ಲ, ಅರಿಸಿನ, ಹುಣಸೆಹುಳಿ – ಸ್ವಲ್ಪ, ಪುಟಾಣಿ ಹಿಟ್ಟು – 2-3 ಚಮಚ, ಕೊತ್ತಂಬರಿ ಸೊಪ್ಪು – ಸ್ವಲ್ಪ, ಎಣ್ಣೆ – 5 ಚಮಚ.

ADVERTISEMENT

ತಯಾರಿಸುವ ವಿಧಾನ: ಎಣ್ಣೆ ಒಗ್ಗರಣೆಗೆ ಇಟ್ಟು ಜೀರಿಗೆ, ಸಾಸಿವೆ, ಅರಿಸಿನ ಹಾಕಿ ಕಾದ ನಂತರ ಸಣ್ಣಗೆ ಹೆಚ್ಚಿದ ಟೊಮೆಟೊ, 2 ಈರುಳ್ಳಿ ಸೇರಿಸಿ. ಬೆಲ್ಲ, ಹುಣಸೆರಸ, ಒಣಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕಾಯಿಸಿ. ಬಾಣಲೆಯಲ್ಲಿ ತಣಿಯಲು ಬಿಡಿ. ಗರಿಯಾದ ಮಂಡಕ್ಕಿ, ಮೇಲೆ ತಿಳಿಸಿದ ಮಸಾಲೆ ಹಾಗೂ ಪುಟಾಣಿ ಹಿಟ್ಟು ಹಾಕಿ ಕಲಸಿ. ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಸೇವು ಮೇಲಿನಿಂದ ಅಲಂಕರಿಸಿದರೆ ರುಚಿ ಗಿರಮಿಟ್ ರೆಡಿ. ಮಸಾಲೆ ಎರಡು ದಿನದವರೆಗೆ ಫ್ರಿಜ್‌ನಲ್ಲಿ ಇಡಬಹುದು.

**


ರಾಜ್ಮಾ ಉಸುಳಿ

ಬೇಕಾಗುವ ಸಾಮಗ್ರಿಗಳು: ರಾಜ್ಮಾ ಕಾಳು – 1 ಕಪ್, ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನತುರಿ – 4 ಚಮಚ, ಮಸಾಲೆಪುಡಿ – 1 ಚಮಚ, ಎಣ್ಣೆ – 3 ಚಮಚ, ಖಾರದಪುಡಿ 1 ಚಮಚ, ಸಾಸಿವೆ, ಇಂಗು, ಲಿಂಬೆಹಣ್ಣು – 1/2, ಉಪ್ಪು ಸ್ವಲ್ಪ.

ತಯಾರಿಸುವ ವಿಧಾನ: ನೆನೆಸಿ ತೊಳೆದ ರಾಜ್ಮಾ ಕಾಳನ್ನು ಮುಳುಗುವಷ್ಟು ನೀರು ಹಾಗೂ ಉಪ್ಪು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ಬೆಂದಿರುವ ಕಾಳುಗಳನ್ನು ಎರಡು ಭಾಗವಾಗಿ ಕತ್ತರಿಸಿ. ಒಗ್ಗರಣೆಗೆ ಸಾಸಿವೆ, ಇಂಗು, ಮಸಾಲೆ ಪುಡಿ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಒಂದೊಂದಾಗಿ ಸೇರಿಸಿ ಲಿಂಬೆರಸ ಕೊನೆಗೆ ಹಾಕಿ ಚೆನ್ನಾಗಿ ಕಲೆಸಿದರೆ ಆರೋಗ್ಯಕರ ತಿಂಡಿ ಸಿದ್ಧ.

**

ಜೋಳದ ಅವಲಕ್ಕಿ ಬಾಜಿ

ಬೇಕಾಗುವ ಸಾಮಗ್ರಿಗಳು: ಜೋಳದ ಅವಲಕ್ಕಿ – 1ಕಪ್, ಎಣ್ಣೆ, ಖಾರದ ಪುಡಿ, ಉಪ್ಪು, ಆಲೂಗೆಡ್ಡೆ – 2, ಈರುಳ್ಳಿ – 2, ಬಟಾಣಿಕಾಳು – 1/4 ಕಪ್, ಬೆಳ್ಳುಳ್ಳಿ, ಶುಂಠಿ, ಟೊಮೆಟೊ – 2, ಕೊತ್ತಂಬರಿ ಸೊಪ್ಪು, ಪಾವ್ ಬಾಜಿ ಮಸಾಲೆ ಪುಡಿ – 1ಚಮಚ.

ತಯಾರಿಸುವ ವಿಧಾನ: ಅವಲಕ್ಕಿ ಕರಿದು ಸ್ವಲ್ಪ ಉಪ್ಪು, ಮೆಣಸಿನ ಪುಡಿ ಸೇರಿಸಿ ಕಲೆಸಿಡಬೇಕು. ಒಗ್ಗರಣೆಗೆ ಸಾಸಿವೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ ಹಾಕಿ ಹುರಿದುಕೊಳ್ಳಿ. ಬೇಯಿಸಿದ ಆಲೂ ಬಟಾಣಿ ಚೆನ್ನಾಗಿ ಹಿಸುಕಿ ಅದಕ್ಕೆ ಸೇರಿಸಿ. ಅದಕ್ಕೆ ಪಾವ್ ಬಾಜಿ ಮಸಾಲೆ ಪುಡಿ ಸೇರಿಸಿ ನೀರು, ಉಪ್ಪು ಹಾಕಿ ಕುದಿಸಿ ಬಾಜಿ ತಯಾರಿಸಬೇಕು. ಪ್ಲೇಟಲ್ಲಿ ತಯಾರಿಸಿದ ಅವಲಕ್ಕಿ ಹರಡಿ ಅದರ ಮೇಲೆ ಬಿಸಿ ಬಾಜಿ ಹಾಕಿ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಹಾಕಿಕೊಂಡು ಸವಿಯಿರಿ. ಜೋಳದ ಅವಲಕ್ಕಿ ಕರಿದು ಶೇಖರಿಸಿಡಬಹುದು.

**


ಕಡಕ್‌ ಚುಡುವ

ಬೇಕಾಗುವ ಸಾಮಗ್ರಿಗಳು: ಕಟಿ (ಗರಿ) ಜೋಳದ ರೊಟ್ಟಿ – 2, ಶೇಂಗಾ – 3 ಚಮಚ, ಖಾರದಪುಡಿ – ಸ್ವಲ್ಪ, ಕರಿಬೇವು – 2 ಕಡ್ಡಿ, ಉಪ್ಪು, ಎಣ್ಣೆ – 2ಚಮಚ, ಸಾಸಿವೆ, ಅರಿಸಿನ, ಮೊಸರು, ಈರುಳ್ಳಿ, ಕೊತ್ತಂಬರಿ ಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ: ಜೋಳದ ರೊಟ್ಟಿಯನ್ನು ಒತ್ತಿ ಪುಡಿ ಮಾಡಿಕೊಳ್ಳಿ. ಒಗ್ಗರಣೆಗೆ ಸಾಸಿವೆ, ಕರಿಬೇವು, ಅರಿಸಿನ, ಶೇಂಗಾ, ಬೇಕಿದ್ದರೆ 1/2 ಚಮಚ ಮಸಾಲೆ ಪುಡಿ ಹಾಕಿ ಕೈಯಾಡಿಸಿ. ರೊಟ್ಟಿ ಚೂರುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮೊಸರು, ಈರುಳ್ಳಿ ಸೇರಿಸಿದ ಬಜ್ಜಿಯೊಂದಿಗೆ ಸವಿಯಿರಿ. ಚುಡುವ ವಾರದವರೆಗೂ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.