
ಅಹಂಕಾರ ತ್ಯಾಗ, ಆತ್ಮಶುದ್ಧಿ ಮತ್ತು ಶಿವಭಕ್ತಿಗೆ ಅರ್ಪಿತವಾದ ಶಿವರಾತ್ರಿಯು ಸಾಮಾನ್ಯವಾಗಿ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿ ದಿನ ಬರುತ್ತದೆ. ಚಳಿಗಾಲದ ಅಂತ್ಯದಲ್ಲಿ ಬರುವ ಶಿವರಾತ್ರಿ, ಸೂರ್ಯ– ಚಂದ್ರರ ಚಲನೆಯಿಂದಾಗುವ ಬದಲಾವಣೆಗೆ ದೇಹವನ್ನು ಹೊಂದಿಸಿಕೊಳ್ಳಲು ಮತ್ತು ಹೆಚ್ಚಿನ ಶಕ್ತಿ ಪಡೆಯಲು ನಮಗೆ ನೆರವಾಗುತ್ತದೆ.
ಭಕ್ತರು ಈ ದಿನದಂದು ಉಪವಾಸವಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತಾರೆ. ದೇಹಶುದ್ಧಿ, ಮನಃಶುದ್ಧಿಗಾಗಿ ಮಾಡುವ ಉಪವಾಸ ವ್ರತವನ್ನು ಹಲವಾರು ರೀತಿಯಲ್ಲಿ ಆಚರಿಸುತ್ತಾರೆ. ಪ್ರತಿಯೊಬ್ಬರ ಮನೆಯಲ್ಲೂ ಪೂಜೆ, ಉಪವಾಸ, ವ್ರತಕ್ಕೆ ಬಳಸುವ ಸಾಮಗ್ರಿಗಳು ಒಂದೇ ರೀತಿ ಇದ್ದರೂ ಪಾಲಿಸುವ ಪದ್ಧತಿಯಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಇದ್ದೇ ಇರುತ್ತದೆ. ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಸಾಬುದಾನಿ ಅಥವಾ ಸಬ್ಬಕ್ಕಿ ಬಳಸಿದ ತಿಂಡಿ– ತಿನಿಸುಗಳನ್ನು ಅಂದು ಹೆಚ್ಚಾಗಿ ಮಾಡುತ್ತಾರೆ. ಸಾಬುದಾನಿಯಲ್ಲಿ ಕಾರ್ಬೊಹೈಡ್ರೇಟ್ ಅಂಶ ಹೆಚ್ಚಾಗಿ ಇರುವುದರಿಂದ, ಉಪವಾಸದ ಸಮಯದಲ್ಲಿ ದೇಹಕ್ಕೆ ಅಗತ್ಯವಿರುವ ಶಕ್ತಿ ಅದರಿಂದ ಲಭ್ಯವಾಗುತ್ತದೆ.
ತಂಬಿಟ್ಟು, ಶೇಂಗಾ ಉಂಡೆ, ಕಡಲೆಕಾಳು ಉಸುಲಿ, ಹೆಸರುಕಾಳು ಉಸುಲಿಯು ದೇವರ ನೈವೇದ್ಯಕ್ಕೆ ಶ್ರೇಷ್ಠ ಎನಿಸಿಕೊಂಡಿವೆ. ಯಾವುದೇ ಸಿಹಿತಿಂಡಿಯ ನೈವೇದ್ಯ ಮಾಡಲಿ, ಅದಕ್ಕೆ ತುಪ್ಪ, ಬೆಲ್ಲ ಬಳಸುವುದು ಸಾಮಾನ್ಯ.
ಬೇಕಾಗುವ ಸಾಮಗ್ರಿ: ನೈಲಾನ್ ಸಾಬುದಾನಿ / ಸಬ್ಬಕ್ಕಿ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ, ಶೇಂಗಾ, ಕರಿಬೇವು, ಸ್ವಲ್ಪ ಗೋಡಂಬಿ ಮತ್ತು ಒಣದ್ರಾಕ್ಷಿ, ಕರಿಯಲು ಬೇಕಾದಷ್ಟು ಎಣ್ಣೆ, ಸೈಂಧವ ಲವಣ, ಸ್ವಲ್ಪ ಸಕ್ಕರೆ ಪುಡಿ.
ವಿಧಾನ: ಮೊದಲು ಎಣ್ಣೆಯಲ್ಲಿ ಸ್ವಲ್ಪ ಸ್ವಲ್ಪ ನೈಲಾನ್ ಸಾಬುದಾನಿಯನ್ನು ಹಾಕಿ ದೊಡ್ಡ ಉರಿಯಲ್ಲಿ ಕರಿಯಬೇಕು. ಚಟಪಟ ಎಂದು ಸಿಡಿಯುವ ಶಬ್ದ ನಿಂತಿತು ಎಂದರೆ ಸಬ್ಬಕ್ಕಿ ಚೆನ್ನಾಗಿ ಅರಳಿದೆ ಎಂದರ್ಥ. ಎಣ್ಣೆಯಿಂದ ಚೆನ್ನಾಗಿ ಬಸಿದು ತೆಗೆದು ಒಂದು ಟಿಶ್ಯೂ ಪೇಪರ್ ಮೇಲೆ ಹಾಕಬೇಕು. ಎಣ್ಣೆಯಲ್ಲಿ ಒಟ್ಟಿಗೆ ಜಾಸ್ತಿ ಸಾಬುದಾನಿ ಹಾಕಿ ಫ್ರೈ ಮಾಡಬಾರದು. ಆಗ ಅವು ಚೆನ್ನಾಗಿ ಅರಳುವುದಿಲ್ಲ. ಇದೇ ರೀತಿ ಉಳಿದ ಸಾಬುದಾನಿಯನ್ನು ಕೂಡಾ ಕರಿಯಬೇಕು.
ನಂತರ ಅದೇ ಎಣ್ಣೆಯಲ್ಲಿ ಕಡಲೆಬೀಜವನ್ನು ಕರಿದು ತೆಗೆಯಿರಿ. ಬಳಿಕ ಗೋಡಂಬಿ, ಒಣದ್ರಾಕ್ಷಿ, ಸಣ್ಣದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು ಹೀಗೆ ಒಂದೊಂದಾಗಿ ಎಲ್ಲ ಸಾಮಗ್ರಿಗಳನ್ನು ಫ್ರೈ ಮಾಡಬೇಕು. ಕರಿದ ಸಾಬುದಾನಿ ತಣ್ಣಗಾದ ಮೇಲೆ ಅದರಲ್ಲಿ ಸ್ವಲ್ಪ ಸಕ್ಕರೆ ಪುಡಿ, ರುಚಿಗೆ ತಕ್ಕಷ್ಟು ಸೈಂಧವ ಉಪ್ಪು ಹಾಕಿ ನಿಧಾನವಾಗಿ ಚೆನ್ನಾಗಿ ಮಿಕ್ಸ್ ಮಾಡಬೇಕು. ನಂತರ ಉಳಿದ ಎಲ್ಲಾ ಸಾಮಗ್ರಿಗಳನ್ನು ಹಾಕಿ ಮತ್ತೆ ಒಂದು ಬಾರಿ ಚೆನ್ನಾಗಿ ಕಲಸಿದರೆ ಗರಿಗರಿಯಾದ ಚೂಡಾ ಸಿದ್ಧ. ಗಾಳಿ ಆಡದ ಡಬ್ಬದಲ್ಲಿ ಒಂದು ತಿಂಗಳವರೆಗೆ ಶೇಖರಿಸಿ ಇಡಬಹುದು.
ಬೇಕಾಗುವ ಸಾಮಗ್ರಿ: 1 ಬಟ್ಟಲು ಪುಟಾಣಿ ಅಥವಾ ಹುರಿಗಡಲೆ ಪುಡಿ, ಅರ್ಧ ಬಟ್ಟಲು ತುರಿದ ಒಣಕೊಬ್ಬರಿ, ಅರ್ಧ ಬಟ್ಟಲು ಹುರಿದ ಶೇಂಗಾ ಪುಡಿ (ತರಿತರಿ), ಕಾಲು ಚಮಚ ಏಲಕ್ಕಿ ಪುಡಿ,1 ಚಮಚ ತುಪ್ಪ, 2 ದೊಡ್ಡ ಚಮಚ ಹುರಿದ ಎಳ್ಳು, ಮುಕ್ಕಾಲು ಬಟ್ಟಲು ಬೆಲ್ಲ (ತುರಿದದ್ದು).
ಹೀಗೆ ಮಾಡಿ: ಅಗಲವಾದ ಪಾತ್ರೆಯಲ್ಲಿ ಹುರಿಗಡಲೆ ಪುಡಿ, ಶೇಂಗಾ ಪುಡಿ, ಹುರಿದ ಒಣಕೊಬ್ಬರಿ, ಹುರಿದ ಎಳ್ಳು ಮತ್ತು ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಡಿ. ನಂತರ ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ಬೆಲ್ಲ ಹಾಕಿ ಅದು ಮುಳುಗುವಷ್ಟು ನೀರು ಹಾಕಿ ಕಾಯಿಸಿ. ಬೆಲ್ಲ ಕರಗುವವರೆಗೆ ಕೈಬಿಡದೆ ತಿರುವುತ್ತಾ ಇರಬೇಕು. ಬೆಲ್ಲ ಸಂಪೂರ್ಣ ಕರಗಿದರೆ ಸಾಕು, ಒಲೆ ಆರಿಸಿ (ಪಾಕ ತೆಗೆಯುವ ಅವಶ್ಯಕತೆ ಇಲ್ಲ). ಕರಗಿಸಿದ ಬೆಲ್ಲವನ್ನು ಸೋಸಿಕೊಳ್ಳಿ. ಮೊದಲು ಸಿದ್ಧ ಮಾಡಿ ಇಟ್ಟುಕೊಂಡಿರುವ ಹುರಿಗಡಲೆ ಪುಡಿಯಲ್ಲಿ ಸೋಸಿದ ಬೆಲ್ಲದ ನೀರನ್ನು ಸ್ವಲ್ಪ ಸ್ವಲ್ಪ ಹಾಕುತ್ತಾ ಕಲಸಬೇಕು. 1– 2 ಚಮಚ ಕರಗಿಸಿದ ತುಪ್ಪ ಸೇರಿಸಿ ಸರಿಯಾಗಿ ನಾದಿ. ಆ ಮಿಶ್ರಣವನ್ನು ತೆಗೆದುಕೊಂಡು ಚೆನ್ನಾಗಿ ಒತ್ತಿ ಉಂಡೆ ಕಟ್ಟಿದರೆ ಆಯಿತು, ತಂಬಿಟ್ಟು ನೈವೇದ್ಯಕ್ಕೆ ಸಿದ್ಧ. ಗಾಳಿ ಆಡದ ಡಬ್ಬದಲ್ಲಿ 4– 5 ದಿನ ಸಂಗ್ರಹಿಸಿ ಇಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.