ADVERTISEMENT

ರಸಸ್ವಾದ | ಆಹಾ... ಪರಿಮಳ!

ಸುಮಾ ಬಿ.
Published 14 ಜೂನ್ 2025, 1:00 IST
Last Updated 14 ಜೂನ್ 2025, 1:00 IST
   

‘ಅಡುಗೆ ಮನೆಯೇ ನನ್ನ ಪ್ರಪಂಚ. ಹೊಸ ಬಗೆಯ ಅಡುಗೆಗಳನ್ನು ಕಲಿತು ಪ್ರಯೋಗಿಸುವುದೆಂದರೆ ಮೊದಲಿನಿಂದಲೂ ನನಗೆ ಎಲ್ಲಿಲ್ಲದ ಆಸ್ಥೆ. ಹವ್ಯಾಸವಾಗಿದ್ದ ಆ ತುಡಿತ ಇದೀಗ ಆದಾಯದ ಮೂಲವೇ ಆಗಿದೆ. ಪ್ರೀತಿ, ಶ್ರಮ, ಶ್ರದ್ಧೆ, ಸಂಯಮದಿಂದ ಮಾಡಿದ ಯಾವುದೇ ಕೆಲಸ ಫಲ ಕೊಟ್ಟೇ ಕೊಡುತ್ತದೆ. ಅದರ ಪ್ರತಿಫಲವೇ ಇದು...’

‘ಪರಿಮಳಾ ಕಿಚನ್’ ಯೂಟ್ಯೂಬ್‌ ಚಾನೆಲ್‌ನ ಒಡತಿ ಪರಿಮಳಾ ಅವರ ಹೆಮ್ಮೆಯ ಮಾತಿದು. ಮಗ ಸುಧೀಂದ್ರ ಅವರ ಒತ್ತಾಸೆಯಿಂದ ನಾಲ್ಕು ವರ್ಷಗಳ ಹಿಂದೆ ಶುರು ಮಾಡಿದ ಅಡುಗೆ ಚಾನೆಲ್‌ನಲ್ಲಿ ಈವರೆಗೆ ಅವರು 955 ಪಾಕಗಳನ್ನು ವೀಕ್ಷಕರಿಗೆ ಉಣಬಡಿಸಿದ್ದಾರೆ. 5.36 ಲಕ್ಷ ಚಂದಾದಾರರನ್ನು ಹೊಂದಿರುವ ಚಾನೆಲ್‌ ಈವರೆಗೆ 15 ಕೋಟಿ ವ್ಯೂಸ್‌ ಪಡೆದಿದೆ.

ನಿತ್ಯ ಅಡುಗೆಗೆ ಬಳಸುವ ಪದಾರ್ಥಗಳಲ್ಲೇ ಆರೋಗ್ಯಕರವಾದ, ರುಚಿಕರವಾದ, ಸುಲಭದಲ್ಲಿ ತಯಾರಿಸುವ ರೆಸಿಪಿಗಳು ಅವರಲ್ಲಿ ಆದ್ಯತೆ ಪಡೆದಿವೆ. ಉದ್ಯೋಗಸ್ಥ ಮಹಿಳೆಯರು, ಹೊಸದಾಗಿ ಅಡುಗೆ ಕಲಿಯುವವರು, ಮದುವೆ ಆಗದಂತಹವರಿಗಾಗಿ ದಿಢೀರ್‌ ತಿಂಡಿ, ದಿಢೀರ್‌ ಸಾಂಬಾರ್‌ ತಯಾರಿಕೆಯಂತಹ ವಿಧಾನಗಳು ಇಲ್ಲಿ ಲಭ್ಯವಿವೆ.

ADVERTISEMENT

‘ಬೆಣ್ಣೆದೋಸೆ ನಗರಿ’ ದಾವಣಗೆರೆಯವರಾದ ಪರಿಮಳಾ ಅವರಿಗೆ ವೈವಿಧ್ಯಮಯ ದೋಸೆಗಳನ್ನು ಪ್ರಯೋಗಿಸುವುದೆಂದರೆ ಹೆಚ್ಚು ಖುಷಿ. ಈವರೆಗೆ 75ಕ್ಕೂ ಹೆಚ್ಚು ಬಗೆಯ ದೋಸೆ ರೆಸಿಪಿಗಳ ಪಾಠವನ್ನು ಅವರು ಮಾಡಿದ್ದಾರೆ. ಮಲೆನಾಡು, ಬಯಲುಸೀಮೆ, ರಾಯಲಸೀಮೆ... ಹೀಗೆ ವಿವಿಧ ಭಾಗಗಳ ಅಡುಗೆಗಳ ಜೊತೆಗೆ ಸಿಹಿ ಖಾದ್ಯ, ತರಹೇವಾರಿ ಸಾಂಬಾರ್, ಬಾಂಡ್ಲಿ ರೊಟ್ಟಿ, ತಾಲಿಪಟ್ಟು, ಸಾಂಪ್ರದಾಯಿಕ ಹಬ್ಬದ ಅಡುಗೆಗಳು ಅವರ ಚಾನೆಲ್‌ ಅನ್ನು ಶ್ರೀಮಂತಗೊಳಿಸಿವೆ. ವರ್ಷದೊಳಗಿನ ಮಕ್ಕಳಿಗಾಗಿ ತಯಾರಿಸುವ ಪೌಷ್ಟಿಕಾಂಶಯುಕ್ತ ಆಹಾರದಿಂದ ಹಿಡಿದು ವಯಸ್ಸಾದವರಿಗೆ ಕೊಡುವ ಮೃದು ಆಹಾರದವರೆಗೆ ನಾನಾ ಬಗೆಯ ಖಾದ್ಯಗಳು ಸ್ಥಾನ ಪಡೆದಿವೆ.

ಶೇಂಗಾ ಚಿಕ್ಕಿ, ಚಕ್ಕುಲಿಯಂತಹ ಕುರುಕಲು ತಿನಿಸುಗಳ ತಯಾರಿಕೆಯಲ್ಲಿ ಪರಿಮಳಾ ಅವರಿಗೆ ಎಲ್ಲಿಲ್ಲದ ಆಸಕ್ತಿ. ಚಾನೆಲ್‌ ಪಯಣ ಆರಂಭಕ್ಕೂ ಮುನ್ನ ಸಂಬಂಧಿಕರು, ಸ್ನೇಹಿತರಿಗೆ ಅವುಗಳನ್ನು ಮಾಡಿಕೊಟ್ಟು ಖುಷಿಪಡುತ್ತಿದ್ದರು. ಅದರ ಮುಂದುವರಿದ ಭಾಗವಾಗಿ, ತಮ್ಮ ಚಾನೆಲ್‌ನ ಪಯಣವನ್ನು ಅವರು ಆರಂಭಿಸಿದ್ದು ಶೇಂಗಾ ಚಿಕ್ಕಿ ಮಾಡುವ ವಿಡಿಯೊದಿಂದಲೇ. 

‘ಸೀಸನ್‌ಗೆ ತಕ್ಕಂತೆ ವೀಕ್ಷಕರು ರೆಸಿಪಿಗಳನ್ನು ಬಯಸುತ್ತಾರೆ. ಬೇಸಿಗೆಯಲ್ಲಿ ಸಂಡಿಗೆ, ಹಪ್ಪಳ, ಮಾವಿನಕಾಯಿ ಉಪ್ಪಿನಕಾಯಿ ರೆಸಿಪಿಗಳು ಹೆಚ್ಚು ವೀಕ್ಷಣೆ ಪಡೆಯುತ್ತವೆ. ಮಳೆಗಾಲದಲ್ಲಿ ಚಕ್ಕುಲಿ, ಕೋಡುಬಳೆ, ನಿಪ್ಪಟ್ಟಿನಂತಹ ತಿನಿಸುಗಳಿಗೆ ಬೇಡಿಕೆ ಇರುತ್ತದೆ. ಬಹುತೇಕ ವೀಕ್ಷಕರ ಬೇಡಿಕೆಯಂತೆಯೇ ರೆಸಿಪಿಗಳನ್ನು ತಯಾರಿಸುತ್ತೇನೆ. ‘ನಿಮ್ಮಿಂದ ಅಡುಗೆ ಕಲಿತೆವು. ಹಪ್ಪಳ, ಸಂಡಿಗೆ ರೀತಿಯ ಸಾಂಪ್ರದಾಯಿಕ ರೆಸಿಪಿಗಳು ಇಷ್ಟವಾಗುತ್ತವೆ’ ಎಂದು ವೀಕ್ಷಕರು ಪ್ರತಿಕ್ರಿಯಿಸಿದಾಗ ಸಾರ್ಥಕತೆಯ ಭಾವ ಮೂಡುತ್ತದೆ ಎನ್ನುತ್ತಾರೆ ಪರಿಮಳಾ. ಗಂಡು– ಹೆಣ್ಣೆಂಬ ಭೇದವಿಲ್ಲದೆ ಎಲ್ಲರೂ ಅಡುಗೆ ಕಲಿಯಲೇಬೇಕು ಎಂಬುದು ಅವರ ಸಲಹೆ.

ಏಕಾದಶಿ ‘ಹತ್ತಿ’ ದೋಸೆ

ಪರಿಮಳ ಅವರ ಚಾನಲ್‌ನಲ್ಲಿ ದೋಸೆ ರೆಸಿಪಿಗಳೇ ಪ್ರಧಾನ್ಯ. ಅವರು ಮೂರು ವರ್ಷಗಳ ಹಿಂದೆ ತಯಾರಿಸಿದ್ದ ಹತ್ತಿ ದೋಸೆ 54 ಲಕ್ಷ ವೀಕ್ಷಣೆ ಪಡೆದಿದೆ. ಕಡಿಮೆ ಸಾಮಗ್ರಿಗಳಲ್ಲಿ ದೋಸೆ ತಯಾರಿಸುವ ವಿಧಾನ ನಿಮಗಾಗಿ.

ಬೇಕಾಗುವ ಸಾಮಗ್ರಿಗಳು

  • ಎರಡು ಬಟ್ಟಲು ಚಿರೋಟಿ ರವಾ

  • ಒಂದು ಬಟ್ಟಲು ಹಸಿ ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ನೀರು.

ಮಾಡುವ ವಿಧಾನ: ಒಂದು ಪಾತ್ರೆಗೆ ಚಿರೋಟಿ ರವೆ, ಒಂದು ಬಟ್ಟಲು ನೀರು ಹಾಕಿ ಮಿಕ್ಸ್ ಮಾಟಿ ಹತ್ತು ನಿಮಿಷ ತಟ್ಟೆ ಮುಚ್ಚಿ ಇಡಿ. ರವೆ ನೆಂದ ಬಳಿಕ ಮಿಕ್ಸಿಗೆ ಹಾಕಿ ಹಸಿ ತೆಂಗಿನ ಕಾಯಿ ತುರಿ, ಅರ್ಧ ಬಟ್ಟಲು ನೀರು, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಮಿಶ್ರಣಕ್ಕೆ ಕಾಲು ಕಪ್‌ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ಇಡೀ ರಾತ್ರಿ ಹಿಟ್ಟು ಹುದುಗಲು ಬಿಡಬೇಕು. ಬೆಳಿಗ್ಗೆ ಚೆನ್ನಾಗಿ ಕಲೆಸಿ ದೋಸೆ ಹೊಯ್ದರಾಯಿತು. ಇದನ್ನು ಇನ್‌ಸ್ಟಂಟ್‌ ರೀತಿಯೂ ತಯಾರಿಸಬಹುದು. ಹಿಟ್ಟು ರುಬ್ಬಿ ಅರ್ಧ ಗಂಟೆ ಬಳಿಕ ದೋಸೆ ಮಾಡಿ ಸವಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.