ADVERTISEMENT

ಮಾಡೋಣ್‌ ಬರ್‍ರಿ ಸವಿರುಚಿಯ.. ‘ಸವಿರುಚಿ ಸೊಬಗು’ ಯೂಟ್ಯೂಬ್‌ ಚಾನೆಲ್‌ ಸಂದರ್ಶನ

ಸುಮಾ ಬಿ.
Published 13 ಡಿಸೆಂಬರ್ 2025, 1:30 IST
Last Updated 13 ಡಿಸೆಂಬರ್ 2025, 1:30 IST
ಮಹಾದೇವಿ ಹಾಗೂ ನಾಗೇಶ್‌ ಅವರ ಪಾಕಶಾಲೆ
ಮಹಾದೇವಿ ಹಾಗೂ ನಾಗೇಶ್‌ ಅವರ ಪಾಕಶಾಲೆ   

‘ತಿಂದ್ರ ಗಿರ್‌sss ಅನ್ಬೇಕು ಅಂಥ ರೆಸಿಪಿ ಇವತ್‌ ಹೇಳ್‌ಕೊಡ್ತೀವಿ. ಅದಾ ಗಿರ್ಮಿಟ್‌... ಉಳ್ಳಾಗಡ್ಡಿ, ಹುಂಚಿಕಾಯಿ, ಬೆಲ್ಲ ಸೇರ್ಸಿ ಮಾಡಿದ್ರಿ ಅಂದ್ರ ಮಸ್ತ್‌ ಆಕತಿ. ಈ ಚಳಿ ಹೊತ್ನ್ಯಾಗ ಸಂಜೀಕ ಬಾಯಿರುಚಿಗೆ ಇದ್ನ ಮಾಡಿ ತಿನ್ರಿ. ಬಾಳ್‌ ಛಲೋ ಅನಸ್ತತಿ…’

ಹೀಗೆ ಉತ್ತರ ಕರ್ನಾಟಕದ ಶೈಲಿಯಲ್ಲಿ, ಆ ಭಾಗದ ಅಡುಗೆ ರೆಸಿಪಿಗಳನ್ನು ಉಣಬಡಿಸುತ್ತಿರುವ ಅಮ್ಮ– ಮಗನ ‘ಸವಿರುಚಿ ಸೊಬಗು’ ಯೂಟ್ಯೂಬ್‌ ಚಾನೆಲ್‌ ತೆರೆದೆವೆಂದರೆ ‘ಟಪ್ss... ಟಪ್‌ss’ ಎನ್ನುವ, ಜೋಳದ ರೊಟ್ಟಿ ಬಡಿಯುವ ಸದ್ದು ಕಿವಿಗೆ ರಾಚುತ್ತದೆ.

ಜೋಳದ ಹಿಟ್ಟು ಜಿಗುಟ್‌ ಮಾಡಿಕೊಳ್ಳುವಲ್ಲಿಂದ ಹಿಡಿದು ಒಲೆಯ ಮೇಲೆ ರೊಟ್ಟಿ ಉಬ್ಬಿ ಬರುವವರೆಗಿನ ಹದವಾದ ರೊಟ್ಟಿ ಮಾಡುವವರೆಗಿನ ರಹಸ್ಯವನ್ನು ಎಳೆಎಳೆಯಾಗಿ ಬಿಚ್ಚಿಡುವ ಅಮ್ಮ ಮಹಾದೇವಿ– ಮಗ ನಾಗೇಶ್‌ ಮಾಡಲಗಿ ಅವರ ಜೋಡಿ ತಿನಿಸುಪ್ರಿಯರನ್ನು ಹಿಡಿದಿಟ್ಟಿದೆ.

ADVERTISEMENT

ಉತ್ತರ ಕರ್ನಾಟಕ ಭಾಗದ ರೆಸಿಪಿಗಳು, ಅತಿ ಕಷ್ಟ ಎನಿಸುವಂತಹ ಸಾಂಪ್ರದಾಯಿಕ ಅಡುಗೆಗಳನ್ನು ಸುಲಭದಲ್ಲಿ, ಅಡುಗೆ ಮನೆಯಲ್ಲಿ ಲಭ್ಯ ಇರುವಂತಹ ವಸ್ತುಗಳಲ್ಲೇ ಈಗಿನ ಕಾಲಕ್ಕೆ ತಕ್ಕಂತೆ ತಯಾರಿಸುವ ವಿಧಾನಗಳನ್ನು ಯೂಟ್ಯೂಬ್‌ ಅಂಗಳದಲ್ಲಿ ಹರಹಿದ್ದಾರೆ ಅಮ್ಮ– ಮಗ. ‘ಗುಳ್ಳಡಿಕಿ ಉಂಡಿ’ ಅದಕ್ಕೊಂದು ಉದಾಹರಣೆ. ಈ ಉಂಡಿ ತಯಾರಿಸಲು ಹಿಂದೆ ಒರಳುಕಲ್ಲು, ಒನಕೆ ಬಳಸುತ್ತಿದ್ದರು. ಈಗಿನ ಅಡುಗೆ ಮನೆಗಳಲ್ಲಿ ಅವೆಲ್ಲ ಸಿಗುವುದು ದುರ್ಲಭ. ಹಾಗಂತ ಸಾಂಪ್ರದಾಯಿಕ ಅಡುಗೆಗಳನ್ನು ಮಾಡದೆ ಬಿಡಲಾದೀತೇ? ಇಂಥ ತಿಂಡಿಗಳನ್ನೂ ಸುಲಭದಲ್ಲಿ ಮಾಡಿ ಸವಿಯಿರಿ ಎನ್ನುತ್ತಾರೆ ನಾಗೇಶ್‌. 

ಹೆಚ್ಚು ತಾಳ್ಮೆ, ಶ್ರಮ ಬೇಡುವ ಗುಳ್ಳಡಿಕಿ ಉಂಡಿ ಇಂದು ನಿಧಾನವಾಗಿ ಮರೆಯಾಗುತ್ತಿದೆ. ತೆರೆಮರೆಗೆ ಸರಿಯುತ್ತಿರುವ ಇಂತಹ ಹಲವು ರೆಸಿಪಿಗಳನ್ನು ತಮ್ಮದೇ ಶೈಲಿಯಲ್ಲಿ ಅವರಿಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ನಾಗೇಶ್‌ ಅವರಿಗೆ ಅಡುಗೆ ಯೂಟ್ಯೂಬ್‌ ಚಾನೆಲ್‌ ಶುರು ಮಾಡಬೇಕೆಂಬ ಆಲೋಚನೆ ಹೊಳೆಯಿತು. ಮದುವೆ ಮತ್ತಿತರ ಕಾರ್ಯಕ್ರಮಗಳ ಸಮಯದಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಿದ್ದ ಅಮ್ಮನ ಕೈರುಚಿಯನ್ನು ಬಹುಜನರಿಗೆ ಉಣಬಡಿಸುವ ಆಶಯ ಸಾಕಾರಗೊಂಡಿದ್ದು ಅಂಥದ್ದೊಂದು ಚಾನೆಲ್‌ ಮೂಲಕ. ಅಕ್ಕ ಜ್ಯೋತಿಯೂ ಅಮ್ಮ– ತಮ್ಮನ ಈ ಕಾರ್ಯಕ್ಕೆ ಜೊತೆಯಾದರು. ಹೀಗೆ ಶುರುವಾದ ಚಾನೆಲ್‌ ನಂತರ ಬದುಕಿಗೆ ಆಧಾರವಾಯಿತು. ಓದಿನ ಜೊತೆಗೇ ಚಾನೆಲ್‌ ನಿರ್ವಹಣೆ ಮಾಡುತ್ತಿರುವ ನಾಗೇಶ್‌ ಕೊಡುವ ಅಡುಗೆ ಬಗೆಗಿನ ವಿವರಣೆ, ಅವರ ಖಾದ್ಯ ಪ್ರೀತಿಯನ್ನು ನಿರೂಪಿಸುತ್ತದೆ.

7.5 ಲಕ್ಷ ವೀಕ್ಷಕ ವಲಯವನ್ನು ಹೊಂದಿರುವ ಇವರ ಚಾ‌ನೆಲ್‌ನಲ್ಲಿ ಈವರೆಗೆ 1,200ಕ್ಕೂ ಹೆಚ್ಚು ಬಗೆಯ ಖಾದ್ಯಗಳನ್ನು ಹಂಚಿಕೊಳ್ಳಲಾಗಿದೆ, 15 ಕೋಟಿಗೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ‘ಅಮ್ಮ ಮಾಡುವ ಅಡುಗೆಗಳು ಕೇವಲ ಪದಾರ್ಥಗಳಿಂದ ತುಂಬಿರಲ್ಲ. ಬದಲಾಗಿ ಪ್ರೀತಿಯೂ ತುಂಬಿರುತ್ತದೆ. ಅದೇ ಆ ಅಡುಗೆಯ ರುಚಿಗೂ ಕಾರಣವಾಗಿರುತ್ತದೆ’ ಎಂದು ತಮ್ಮ ಚಾನೆಲ್‌ನ ಡಿಸ್‌ಕ್ರಿಪ್ಶನ್‌ನಲ್ಲಿ ಬರೆದುಕೊಂಡಿರುವ ಸಾಲುಗಳೇ ಅಡುಗೆ ಬಗೆಗಿನ ಒಲುಮೆ, ಪ್ರೀತಿಯನ್ನು ಸಾಕ್ಷೀಕರಿಸುತ್ತವೆ. ಈ ಜೋಡಿಯಲ್ಲಿ ‘ಅಮ್ಮ– ಮಗನ ಕೈರುಚಿ’ ಎನ್ನುವ ಮತ್ತೊಂದು ಯೂಟ್ಯೂಬ್‌ ಚಾನೆಲ್‌ ಕೂಡ ಸೆಟ್ಟೇರಿದೆ. 

ಆರೋಗ್ಯಕರ ಪೇಯ, ಖಾದ್ಯಗಳು, ಬಾಣಂತಿಯರಿಗೆ ಕೊಡುವ ವಿವಿಧ ಬಗೆಯ ಪೌಷ್ಟಿಕ ಖಾದ್ಯಗಳು, ಉತ್ತರ ಕರ್ನಾಟಕ ಭಾಗದ ಸಿಹಿ ಖಾದ್ಯಗಳನ್ನು ಹಿರಿಯರು ಮಾಡುತ್ತಿದ್ದ ಶೈಲಿಯಲ್ಲೇ ಹೇಳಿಕೊಡುತ್ತಾರೆ ಮಹಾದೇವಿ. 50ಕ್ಕೂ ಹೆಚ್ಚು ಬಗೆಯ ದೋಸೆಗಳನ್ನು ಇವರು ಹೇಳಿಕೊಟ್ಟಿದ್ದಾರೆ.  ಬಾಣಂತಿಯರಿಗೆ ಕೊಡುವ ಕೊಬ್ಬರಿ ಖಾರ, ಅಳವಿ ಪಾಯಸ, ಹುರುಳಿ ಶುಂಠಿ, ಮೆಂತೆ ಲಡ್ಡು, ಮೆಂತೆ ಚಟ್ನಿಯಂತಹ ರೆಸಿಪಿಗಳು ಹೆಚ್ಚು ಜನರನ್ನು ಸೆಳೆದಿವೆ.

ಮಡಿಗಡಬು

ಯಾವುದೇ ಅಡುಗೆ ಮಾಡುವಾಗಲೂ ಹೊರಗಡೆ ಸಿಗುವ ಪ್ಯಾಕ್‌ ಮಸಾಲೆಗಿಂತ ಮನೆಯಲ್ಲೇ ತಯಾರಿಸಿ ಮಾಡಿದರೆ ರುಚಿ ಹೆಚ್ಚು. ಪದಾರ್ಥಗಳು ತರಕಾರಿಗಳನ್ನು ಆನ್‌ಲೈನ್‌ನಲ್ಲಿ ತರಿಸುವುದಕ್ಕಿಂತ ಮಾರುಕಟ್ಟೆಗೆ ಹೋಗಿ ತಾಜಾ ಇರುವುದನ್ನು ತಂದು ಮಾಡಿದರೆ ಆರೋಗ್ಯಕ್ಕೂ ರುಚಿಗೂ ಒಳ್ಳೆಯದು.

–ನಾಗೇಶ್‌ ಮಾಡಲಗಿ

ಮಾಡಿ ನೋಡಿ ಮಡಿಗಡಬು

ಉತ್ತರ ಕರ್ನಾಟಕದ ಸಾಂಪ್ರದಾಯಿಕ ರೆಸಿಪಿ ಮಡಿಗಡುಬು ಸುಲಭದಲ್ಲಿ ತಯಾರಿಸಬಹುದಾದ ಸ್ವಾದಿಷ್ಟ ಸಿಹಿ ಖಾದ್ಯ.  ಚಕೋಲಿ ಬೆಲ್ಲದ ಕಡುಬು... ಹೀಗೆ ಹಲವು ಹೆಸರುಗಳ ನಂಟು ಇದಕ್ಕೆ.  ಏನೇನು ಬೇಕು? ಒಂದು ಕಪ್‌ ಗೋಧಿಹಿಟ್ಟು ಅರ್ಧ ಕಪ್‌ ಬೆಲ್ಲ ಅರ್ಧ ಚಮಚ ಏಲಕ್ಕಿ ಪುಡಿ ಅರ್ಧ ಕಪ್‌ ಒಣಕೊಬ್ಬರಿ ತುರಿ ಸಣ್ಣಗೆ ಹೆಚ್ಚಿದ ಬಾದಾಮಿ ಪಿಸ್ತಾ ಸ್ವಲ್ಪ ಉಪ್ಪು.  ಹೀಗೆ ಮಾಡಿ: ಗೋಧಿಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಬೇಕು. ಬಳಿಕ ಸ್ವಲ್ಪ ಎಣ್ಣೆ ಸವರಿ 10 ನಿಮಿಷ ಬಿಡಿ. ನಂತರ ಚಪಾತಿಗಿಂತಲೂ ಸ್ವಲ್ಪ ದಪ್ಪಗೆ ಲಟ್ಟಿಸಿ ಶಂಕರಪೋಳಿ ರೀತಿ ಕತ್ತರಿಸಿ ಇಟ್ಟುಕೊಳ್ಳಬೇಕು. ಬಳಿಕ ಇನ್ನೊಂದು ಪಾತ್ರೆಯಲ್ಲಿ ಬೆಲ್ಲ ಹಾಗೂ ಸ್ವಲ್ಪ ನೀರು ಹಾಕಿ ಕುದಿಯಲು ಇಡಬೇಕು. ಬೆಲ್ಲ ಪೂರ್ತಿ ಕರಗಿದ ಬಳಿಕ ಕತ್ತರಿಸಿಟ್ಟ ಗೋಧಿಹಿಟ್ಟಿನ ತುಂಡುಗಳನ್ನು ಹಾಕಬೇಕು. ಅವು ಬೆಲ್ಲದ ನೀರಿನಲ್ಲಿ ಚೆನ್ನಾಗಿ ಬೇಯುವವರೆಗೂ ಬಿಡಬೇಕು. ಬೆಂದಾದ ಬಳಿಕ ತುರಿದ ಒಣಕೊಬ್ಬರಿ ಏಲಕ್ಕಿ ಪುಡಿ ಕತ್ತರಿಸಿದ ಒಣಹಣ್ಣುಗಳನ್ನು ಹಾಕಿ ಮಗುಚಬೇಕು. ಬಳಿಕ ಇದನ್ನು ಬೇರೊಂದು ಪಾತ್ರೆಗೆ ಹಾಕಿ ಮೇಲೊಂದಿಷ್ಟು ಒಣಕೊಬ್ಬರಿ ತುರಿ ಒಣಹಣ್ಣುಗಳನ್ನು ಅಲಂಕಾರಕ್ಕೆ ಉದುರಿಸಿದರೆ ಮಡಿಗಡಬು ಸವಿಯಲು ಸಿದ್ಧ. ಇದನ್ನು ತುಪ್ಪ ಅಥವಾ ಹಾಲಿನ ಜೊತೆ ಸವಿದರೆ ಹೆಚ್ಚು ರುಚಿ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.