ADVERTISEMENT

Christmas Cake: ಕ್ರಿಸ್‌ಮಸ್ ಸಂಭ್ರಮಕ್ಕೆ ಕೇಕ್ ಮೆರಗು

ಪ್ರಜಾವಾಣಿ ವಿಶೇಷ
Published 19 ಡಿಸೆಂಬರ್ 2025, 23:36 IST
Last Updated 19 ಡಿಸೆಂಬರ್ 2025, 23:36 IST
   

ಕ್ರಿಸ್‌ಮಸ್ ಹಬ್ಬಕ್ಕೂ ಕೇಕ್‌ಗೂ ಹಿಂದಿನಿಂದಲೂ ಅವಿನಾಭಾವ ಸಂಬಂಧವಿದೆ. ಉಡುಗೊರೆಗಳನ್ನು ಹೊತ್ತು ತರುವ ಸಾಂತಾ ಕ್ಲಾಸ್ ತಾತಾನಷ್ಟೇ ಮಹತ್ವ ಮತ್ತು ಆಕರ್ಷಣೆ ಕ್ರಿಸ್‌ಮಸ್ ಕೇಕಿನದು. ಯೇಸುಕ್ರಿಸ್ತನ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕೇಕ್ ತಿನ್ನದಿದ್ದರೆ ಕ್ರಿಸ್‌ಮಸ್ ಅಪೂರ್ಣವೆನಿಸುವಷ್ಟು ಈ ಹಬ್ಬದಲ್ಲಿ ಕೇಕ್ ಬೆರೆತು ಹೋಗಿದೆ. ಅದರಲ್ಲೂ ಥರೇವಾರಿ ಒಣಹಣ್ಣುಗಳನ್ನು ಹಾಕಿ ಮಾಡಿದ ಕೇಕ್‌ಗಳು ಈ ಹಬ್ಬದಲ್ಲಿ ಕಾಯಂ ಸ್ಥಾನ ಪಡೆದಿವೆ.

ಕ್ರಿಸ್‌ಮಸ್ ಹಬ್ಬ ಶುರುವಾಗುವ ಮುನ್ನವೇ ಮನೆಗಳಲ್ಲೇ ಕೇಕ್ ತಯಾರಿಸುವುದು ಹಬ್ಬದ ಆಚರಣೆಯ ಅವಿಭಾಜ್ಯ ಅಂಗವಾಗಿದೆ. ಒಂದರ್ಥದಲ್ಲಿ ಕ್ರಿಸ್‌ಮಸ್ ಅಂದರೆ ಥರೇವಾರಿ ಕೇಕುಗಳನ್ನು ತಯಾರಿಸಿ ಮನೆಗೆ ಬಂದವರಿಗೆ, ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆ ರೂಪದಲ್ಲಿ ಕೊಡುವುದೂ ವಾಡಿಕೆಯಾಗಿದೆ. ಅಷ್ಟಕ್ಕೂ ಕೇಕ್ ಅಂದರೆ ಬರೀ ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಅಚ್ಚುಮೆಚ್ಚು.

ಮಕ್ಕಳಿಗೆ ಬೇಕರಿಯ ಕೇಕ್ ಬದಲು ಮನೆಯಲ್ಲೇ ಕೇಕ್ ತಯಾರಿಸಲು ಆರಂಭಿಸಿದವರು ಬೆಂಗಳೂರಿನ ನಂದಿನಿ ಆದರ್ಶ. ಪದವಿ ಮುಗಿಸಿ ಉದ್ಯೋಗಸ್ಥೆಯಾಗಿದ್ದ ಅವರು ಮಕ್ಕಳ ಆರೈಕೆಗಾಗಿ ಉದ್ಯೋಗಕ್ಕೆ ಅಲ್ಪವಿರಾಮ ಹಾಕಿ, ಕೇಕ್ ಸೇರಿದಂತೆ ಇತರ ಸಿಹಿತಿನಿಸುಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಆರಂಭದಲ್ಲಿ ತಮ್ಮ ಮಕ್ಕಳಿಗಾಗಿಯೇ ಮನೆಯಲ್ಲೇ ಶುಚಿ–ರುಚಿಯಾಗಿ ಕೇಕ್ ತಯಾರಿಸುತ್ತಿದ್ದ ನಂದಿನಿ ಅವರ ಕೈರುಚಿ ಸವಿಯುವ ಅವಕಾಶ ಮನೆಗೆ ಬಂದ ಅತಿಥಿಗಳಿಗೂ ದೊರೆಯತೊಡಗಿತು. ಸಂಬಂಧಿಕರು, ಸ್ನೇಹಿತರ ಬಾಯಿಂದ ಬಾಯಿಗೆ ಕೇಕ್ ರುಚಿಯಷ್ಟೇ ಅಲ್ಲ, ಪ್ರಚಾರವೂ ದೊರೆಯಿತು. ಹತ್ತು ವರ್ಷಗಳಿಂದ ಮನೆಯಲ್ಲೇ ಕೇಕ್ ತಯಾರಿಸಿ, ಗ್ರಾಹಕರಿಗೂ ಕೇಕ್‌ನ ಸಿಹಿ ಉಣಬಡಿಸುತ್ತಿರುವ ನಂದಿನಿ ಕೇಕ್ ತಯಾರಿಕೆಯಲ್ಲೀಗ ಸಿದ್ಧಹಸ್ತರಾಗಿದ್ದಾರೆ. ವಿವಿಧ ಕೇಕ್‌ಗಳ ತಯಾರಿಯಲ್ಲಿ ಅವರು ಬಳಸುವ ಪದಾರ್ಥಗಳು ನೈಸರ್ಗಿಕವಾಗಿರುವುದು ವಿಶೇಷ. ಶುಚಿ ಮತ್ತು ರುಚಿಯ ಜತೆಗೆ ರಾಸಾಯನಿಕ ಪದಾರ್ಥಗಳು ಕೇಕ್ ಪ್ರಿಯರ ಹೊಟ್ಟೆಗೆ ಸೇರಬಾರದೆಂಬ ಕಾಳಜಿಯೂ ಅವರಿಗಿದೆ. ಹಾಗಾಗಿ, ಗ್ರಾಹಕರಿಗೆ ಅವರು ಮುಂಚಿತವಾಗಿಯೇ ತಾವು ಬಳಸುವ ಪದಾರ್ಥಗಳ ಮಾಹಿತಿ ನೀಡುವ ಅಭ್ಯಾಸವನ್ನೂ ಹೊಂದಿದ್ದಾರೆ.

ADVERTISEMENT

ಬ್ಲ್ಯೂಬೆರಿ ಕೇಕ್, ಕಾಫಿ ಕೇಕ್, ಸ್ಟ್ರಾಬೆರಿ ಕೇಕ್, ಕ್ಯಾರಮಲ್ ಕೇಕ್, ಕ್ಯಾರೆಟ್ ಅಂಡ್ ವಾಲ್‌ನಟ್ ಕೇಕ್‌, ಬೇಕ್ ಚೀಸ್ ಕೇಕ್, ಮ್ಯಾಕ್ರೋನ್ಸ್, ಕಪ್ ಕೇಕ್‌, ಸಿನಮನ್ ರೋಲ್ಸ್, ಬ್ರೌನಿ, ಟ್ರೆಡಿಷನಲ್‌ ಇಂಗ್ಲಿಷ್ ಫ್ರೂಟ್ ಕೇಕ್ ಸೇರಿದಂತೆ ಹಲವು ವೈವಿಧ್ಯಮಯ ಕೇಕ್‌ಗಳನ್ನು ಮಾಡುವ ನಂದಿನಿ ಅವರ ಸಿಗ್ನೇಚರ್ ಕೇಕ್ ಬ್ಲ್ಯೂಬೆರಿ ಕೇಕ್. 

ಕ್ರಿಸ್‌ಮಸ್ ಸಮಯದಲ್ಲಿ ಫ್ರೂಟ್ ಕೇಕ್ ಮತ್ತು ಫ್ಲಮ್ ಕೇಕ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಒಣ ಹಣ್ಣುಗಳು, ಖರ್ಜೂರ, ಮಸಾಲೆ ಪದಾರ್ಥಗಳನ್ನು ಬಳಸಿ ಮಾಡುವ ಫ್ರೂಟ್ ಕೇಕ್, ಚಳಿಗಾಲದಲ್ಲಿ ಆರೋಗ್ಯಕ್ಕೂ ಹಿತಕಾರಿ ಅನ್ನುವುದು ಅವರ ಅಭಿಮತ.

ಇಂಗ್ಲಿಷ್ ಫ್ರೂಟ್ ಕೇಕ್ 

ಇಂಗ್ಲೆಂಡ್‌ನಲ್ಲಿ ಹೆಚ್ಚಾಗಿ ಈ ಕೇಕ್‌ ಅನ್ನು ಮಾಡುವುದರಿಂದ ಅದಕ್ಕೆ ಈ ಹೆಸರು ಬಂದಿದೆ.

ಬೇಕಾದ ಪದಾರ್ಥಗಳು

ಹೊಂಬಣ್ಣದ ಒಣದ್ರಾಕ್ಷಿ: 225 ಗ್ರಾಂ
ಸಾಮಾನ್ಯ ಒಣದ್ರಾಕ್ಷಿ: 145 ಗ್ರಾಂ
ಒಣಗಿದ ಆ್ಯಪ್ರಿಕಾಟ್:  45 ಗ್ರಾಂ (ಸಣ್ಣದಾಗಿ ಹೆಚ್ಚಿದ್ದು)
ಖರ್ಜೂರ: 45 ಗ್ರಾಂ (ಬೀಜ ತೆಗೆದು, ಸಣ್ಣದಾಗಿ ಹೆಚ್ಚಿದ್ದು)
ಡಾರ್ಕ್ ರಮ್ ಅಥವಾ ಬ್ರಾಂದಿ: 2 ದೊಡ್ಡ ಚಮಚ
ಕಿತ್ತಳೆ ಹಣ್ಣು: ಅರ್ಧ ಭಾಗ (ರಸ ಮತ್ತು ತುರಿದ ಸಿಪ್ಪೆ)
ಉಪ್ಪಿಲ್ಲದ ಬೆಣ್ಣೆ : 100 ಗ್ರಾಂ
ಲೈಟ್ ಬ್ರೌನ್ ಶುಗರ್: 112 ಗ್ರಾಂ
ಮೊಟ್ಟೆ: 2
ಕ್ಯಾಂಡಿಡ್ ಪೀಲ್: 12 ಗ್ರಾಂ
ಚೆರ್ರಿ ಹಣ್ಣು: 32 ಗ್ರಾಂ
ಕ್ಯಾಂಡಿಡ್ ಶುಂಠಿ: 1 ದೊಡ್ಡ ಚಮಚ (ಸಣ್ಣದಾಗಿ ಹೆಚ್ಚಿದ್ದು)
ಬಾದಾಮಿ: 20 ಗ್ರಾಂ (ಸಣ್ಣದಾಗಿ ಹೆಚ್ಚಿದ್ದು)
ಮೈದಾ ಹಿಟ್ಟು: 100 ಗ್ರಾಂ
ಆಪಲ್ ಪೈ ಸ್ಪೈಸ್ (ಮಸಾಲೆ ಪುಡಿ): ಅರ್ಧ ಸಣ್ಣ ಚಮಚ

ತಯಾರಿಸುವ ವಿಧಾನ

ಒಂದು ದೊಡ್ಡ ಪಾತ್ರೆಯಲ್ಲಿ ಹೊಂಬಣ್ಣದ ಒಣದ್ರಾಕ್ಷಿ, ಆ್ಯಪ್ರಿಕಾಟ್ ಮತ್ತು ಖರ್ಜೂರವನ್ನು ಹಾಕಿಕೊಳ್ಳಿ. ಇದಕ್ಕೆ ರಮ್, ತುರಿದ ಕಿತ್ತಳೆ ಸಿಪ್ಪೆ ಮತ್ತು ರಸವನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಪಾತ್ರೆಗೆ ಮುಚ್ಚಳ ಮುಚ್ಚಿ ಇಡೀ ರಾತ್ರಿ ನೆನೆಯಲು ಬಿಡಿ.

ಕೇಕ್ ತಯಾರಿಸುವ ಮುನ್ನ ಓವನ್ ಅನ್ನು ಮುಂಚಿತವಾಗಿಯೇ 150° ಸೆಲ್ಸಿಯಸ್ ಗೆ ಕಾಯಿಸಿಟ್ಟುಕೊಳ್ಳಿ. ಕೇಕ್ ಪ್ಯಾನ್‌ಗೆ ಬೆಣ್ಣೆ ಸವರಿ, ಅದರೊಳಗೆ ಬೇಕಿಂಗ್ ಪೇಪರ್ ಹಾಕಿ ಸಿದ್ಧಪಡಿಸಿಕೊಳ್ಳಿ. ಒಂದು ಪಾತ್ರೆಯಲ್ಲಿ ಬೆಣ್ಣೆ ಮತ್ತು ಸಕ್ಕರೆಯನ್ನು ಸೇರಿಸಿ, ಮಿಶ್ರಣವು ಹಗುರವಾಗಿ ಮತ್ತು ನೊರೆಯಾಗುವವರೆಗೆ ಚೆನ್ನಾಗಿ ಕಲಸಿ. ನಂತರ ಮೊಟ್ಟೆಗಳನ್ನು ಒಂದೊಂದಾಗಿ ಸೇರಿಸುತ್ತಾ ಚೆನ್ನಾಗಿ ಮಿಶ್ರಣಮಾಡಿ. ಈಗ ಈ ಮಿಶ್ರಣಕ್ಕೆ ನೆನೆಸಿಟ್ಟ ಹಣ್ಣುಗಳು, ಕ್ಯಾಂಡಿಡ್ ಪೀಲ್, ಕ್ಯಾಂಡಿಡ್ ಚೆರ್ರಿ, ಕ್ಯಾಂಡಿಡ್ ಶುಂಠಿ ಮತ್ತು ಹೆಚ್ಚಿದ ಬಾದಾಮಿಯನ್ನು ಸೇರಿಸಿ ನಿಧಾನವಾಗಿ ಬೆರೆಸಿ.

ಮೈದಾ ಹಿಟ್ಟು ಮತ್ತು ಆಪಲ್ ಪೈ ಮಸಾಲೆ ಪುಡಿಯನ್ನು ಸೋಸಿ, ನಂತರ ಇದನ್ನು ಹಣ್ಣಿನ ಮಿಶ್ರಣಕ್ಕೆ ಹಾಕಿ ಹಗುರವಾಗಿ ಮತ್ತು ಸಮವಾಗಿ ಬೆರೆಸಿ. ಸಿದ್ಧಪಡಿಸಿದ ಕೇಕ್ ಪ್ಯಾನ್‌ಗೆ ಚಮಚದ ಮೂಲಕ ಈ ಮಿಶ್ರಣವನ್ನು ಹಾಕಿ ಮೇಲ್ಭಾಗವನ್ನು ಸಮತಟ್ಟು ಮಾಡಿ. ಚಮಚದ ಹಿಂಭಾಗದಿಂದ ಕೇಕ್‌ನ ಮಧ್ಯಭಾಗದಲ್ಲಿ ಸ್ವಲ್ಪ ತಗ್ಗು ಮಾಡಿ (ಇದು ಕೇಕ್ ಸಮನಾಗಿ ಬೇಯಲು ಸಹಾಯ ಮಾಡುತ್ತದೆ). ಮೊದಲೇ ಬಿಸಿ ಮಾಡಿದ ಮಾಡಿದ ಓವನ್‌ನಲ್ಲಿ ಎರಡೂವರೆ ಗಂಟೆಗಳ ಕಾಲ ಬೇಕ್ ಮಾಡಿ. ಕೇಕ್‌ನ ಮಧ್ಯಕ್ಕೆ ಒಂದು ಕಡ್ಡಿಯನ್ನು ಚುಚ್ಚಿ ಪರೀಕ್ಷಿಸಿ; ಕಡ್ಡಿಗೆ ಏನೂ ಅಂಟಿಕೊಳ್ಳದಿದ್ದರೆ ಕೇಕ್ ಬೆಂದಿದೆ ಎಂದರ್ಥ. ಕೇಕ್ ಅನ್ನು ಪ್ಯಾನ್‌ನಲ್ಲೇ ಪೂರ್ತಿಯಾಗಿ ತಣ್ಣಗಾಗಲು ಬಿಡಿ. ನಂತರ ಹೊರ ತೆಗೆಯಿರಿ.

ಹೊರತೆಗೆದ ಕೇಕ್ ಮೇಲೆ ಟೂತ್‌ಪಿಕ್‌ನಿಂದ ಎರಡು ಸಣ್ಣ ರಂಧ್ರ ಮಾಡಿ, ಅದರ ಮೇಲೆ ಒಂದೆರಡು ಚಮಚ ರಮ್ ಅಥವಾ ಬ್ರಾಂದಿಯನ್ನು ಹಾಕಿ. ಬಳಿಕ ಕೇಕ್ ಅನ್ನು ವ್ಯಾಕ್ಸ್‌ಪೇಪರ್ ಮತ್ತು ಫಾಯಿಲ್‌ನಿಂದ ಸುತ್ತಿ, ಗಾಳಿಯಾಡದ ಡಬ್ಬಿಯಲ್ಲಿ ಮುಚ್ಚಿಟ್ಟರೆ ಎರಡು ತಿಂಗಳ ತನಕ ಬಳಸಬಹುದು. 

ಬ್ಲೂಬೆರಿ ಕೇಕ್
ಕ್ರಿಸ್‌ಮಸ್ ಕೇಕ್
ಕೇಕ್‌ನೊಂದಿಗೆ ನಂದಿನಿ ಆದರ್ಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.