ADVERTISEMENT

ಎಳನೀರು ಚಿಕನ್‌, ಕಡಾಯಿ ಚಿಕನ್‌

ರಂಜಿತಾ ಎನ್‌.ಶೆಟ್ಟಿ
Published 30 ಜುಲೈ 2021, 19:30 IST
Last Updated 30 ಜುಲೈ 2021, 19:30 IST
ಎಳನೀರು ಚಿಕನ್‌
ಎಳನೀರು ಚಿಕನ್‌   

ಎಳನೀರು ಚಿಕನ್‌

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – 350 ಗ್ರಾಂ, ಅರಿಸಿನ ಪುಡಿ – 1/2 ಟೀ ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಕೊತ್ತಂಬರಿ ಪುಡಿ – 1 ಟೀ ಚಮಚ, ಜೀರಿಗೆ ಪುಡಿ – 1/2 ಟೀ ಚಮಚ, ಮೆಣಸಿನ ಪುಡಿ – ಎರಡೂವರೆ ಟೇಬಲ್‌ ಚಮಚ, ಜಜ್ಜಿದ ಶುಂಠಿ, ಬೆಳ್ಳುಳ್ಳಿ – 1 ಟೇಬಲ್‌ ಚಮಚ, ಹೆಚ್ಚಿದ ಈರುಳ್ಳಿ – 1/2, ಹಸಿಮೆಣಸು – 1, ಕರಿಬೇವು, ಲಿಂಬೆಹಣ್ಣು – 1/2, ತೆಂಗಿನಎಣ್ಣೆ – 1 ಟೇಬಲ್ ಚಮಚ, ಗರಂ ಮಸಾಲೆ – 1/4 ಟೀ ಚಮಚ

ತಯಾರಿಸುವ ವಿಧಾನ: ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಕೋಳಿ ಮಾಂಸಕ್ಕೆ ಬೆರೆಸಿ ಮುಕ್ಕಾಲು ಗಂಟೆ ಮುಚ್ಚಿಡಿ. ಬಳಿಕ ಒಂದು ಮಧ್ಯಮ ಗಾತ್ರದ ಎಳನೀರು ತೆಗೆದುಕೊಂಡು ಅದರಲ್ಲಿನ ನೀರನ್ನು ಹೊರ ತೆಗೆಯಬೇಕು. ಬಳಿಕ ಅದಕ್ಕೆ ಸಣ್ಣ ರಂಧ್ರ ಕೊರೆದು ಮಸಾಲೆ ಬೆರೆಸಿದ ಕೋಳಿ ಮಾಂಸವನ್ನು ಅದರಲ್ಲಿ ತುಂಬಿಸಬೇಕು. ನಂತರ ಎಳನೀರಿನ ರಂಧ್ರವನ್ನು ಗಟ್ಟಿಯಾಗಿ ಮುಚ್ಚಿ ಅದನ್ನು ಬೆಂಕಿ ಮೇಲಿಟ್ಟು ಸುಡಬೇಕು. ಎಳನೀರಿನ ಹೊರಭಾಗ ಚೆನ್ನಾಗಿ ಕಪ್ಪಗಾದ ನಂತರ ಬೆಂಕಿಯಿಂದ ಹೊರ ತೆಗೆಯಿರಿ. ಆಮೇಲೆ ಎಳನೀರಿನ ರಂಧ್ರದ ಮುಚ್ಚಳ ತೆಗೆದು ಕೋಳಿ ಮಾಂಸವನ್ನು ಬೇರೊಂದು ಪಾತ್ರೆಗೆ ಹಾಕಿಕೊಳ್ಳಿ. ಈ ಎಳನೀರು ಚಿಕನ್‌ ಸವಿಯಲು ಬಲು ರುಚಿ.

ADVERTISEMENT

**


ಕಡಾಯಿ ಚಿಕನ್‌

ಬೇಕಾಗುವ ಸಾಮಗ್ರಿಗಳು: ಕೋಳಿ ಮಾಂಸ – 1/2 ಕೆ.ಜಿ., ಉಪ್ಪು – ರುಚಿಗೆ ತಕ್ಕಷ್ಟು, ಅರಿಸಿನ ಪುಡಿ – 1/4 ಟೀ ಚಮಚ, ಈರುಳ್ಳಿ – ಒಂದೂವರೆ, ಬೇಯಿಸಿದ ಟೊಮೆಟೊ – 1, ತೆಂಗಿನಎಣ್ಣೆ – 1 ಟೇಬಲ್‌ ಚಮಚ, ತುಪ್ಪ – 2 ಟೀ ಚಮಚ, ಹಸಿಮೆಣಸು – 1, ಕರಿಬೇವು, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – 1 ಟೇಬಲ್‌ ಚಮಚ, ಮೆಣಸಿನ ಪುಡಿ – 2 ಟೀ ಚಮಚ, ಕೊತ್ತಂಬರಿ ಪುಡಿ – ಒಂದೂವರೆ ಟೀ ಚಮಚ, ಜೀರಿಗೆ ಪುಡಿ – 1/2 ಟೀ ಚಮಚ, ಸೋಂಪಿನ ಹುಡಿ – 1/4 ಟೀ ಚಮಚ, ಮೆಂತ್ಯೆ ಪುಡಿ – 1/4 ಟೀ ಚಮಚ, ಗರಂ ಮಸಾಲ – 1/2 ಟೀ ಚಮಚ, ಟೊಮೊಟೊ ಸಾಸ್‌ – 2 ಟೀ ಚಮಚ, ಚಿಲ್ಲಿ ಸಾಸ್‌ – 1 ಟೀ ಚಮಚ, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಕೋಳಿ ಮಾಂಸಕ್ಕೆ ಉಪ್ಪು , ಅರಿಸಿನ ಪುಡಿ ಹಾಕಿ ಕುಕರ್‌ನಲ್ಲಿ 2 ಸೀಟಿ ತನಕ ಬೇಯಿಸಿ ಅಥವಾ ಎಣ್ಣೆಯಲ್ಲಿ ಕರಿಯಿರಿ. ಬೇಯಿಸಿದ ಟೊಮೆಟೊ ಸಿಪ್ಪೆ ಸುಲಿದು ಒಂದು ಈರುಳ್ಳಿ ಜೊತೆ ರುಬ್ಬಿಕೊಳ್ಳಿ. ಒಂದು ಕಡಾಯಿ ಬಿಸಿ ಮಾಡಿ ಅದಕ್ಕೆ ತೆಂಗಿನ ಎಣ್ಣೆ, ತುಪ್ಪ ಸುರಿಯಿರಿ. ಅದಕ್ಕೆ ಉದ್ದಕ್ಕೆ ಹೆಚ್ಚಿದ ಅರ್ಧ ಈರುಳ್ಳಿ, ಹಸಿಮೆಣಸು, ಕರಿಬೇವು ಹಾಕಿ ಚೆನ್ನಾಗಿ ಹುರಿಯಿರಿ. ಆಮೇಲೆ ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ ಸೇರಿಸಿ ಹುರಿಯಿರಿ. ಚೆನ್ನಾಗಿ ಹುರಿದಾದ ಮೇಲೆ ರುಬ್ಬಿದ ಟೊಮೊಟೊ–ಈರುಳ್ಳಿ ಪೇಸ್ಟ್‌ ಸೇರಿಸಿ ಕಲೆಸಿ. ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ಮೇಲೆ ತಿಳಿಸಿದ ಮಸಾಲೆ ಪುಡಿಗಳನ್ನು ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ಹೊತ್ತು ಕುದಿಸಿ. ಆಮೇಲೆ ಅದಕ್ಕೆ ಟೊಮೊಟೊ ಸಾಸ್‌, ಚಿಲ್ಲಿ ಸಾಸ್‌, ಉಪ್ಪು ಸೇರಿಸಿ ಕಲೆಸಿ. ಬೇಯಿಸಿಟ್ಟ ಕೋಳಿ ಮಾಂಸ ಮತ್ತು ಅದರ ನೀರನ್ನು ಸೇರಿಸಿ ಮುಚ್ಚಿ ಚೆನ್ನಾಗಿ ಕುದಿಸಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಕಡಾಯಿ ಚಿಕನ್‌ ತಿನ್ನಲು ಸಿದ್ಧ.

**


ಸಿಂಪಲ್‌ ಚಿಲ್ಲಿ ಚಿಕನ್‌

ಬೇಕಾಗುವ ಸಾಮಗ್ರಿಗಳು: ಕೋಳಿಮಾಂಸ – 1/2 ಕೆ.ಜಿ., ತುಪ್ಪ ಅಥವಾ ಎಣ್ಣೆ – 3 ಟೀ ಚಮಚ, ಅರಿಸಿನ ಪುಡಿ – 1/4 ಟೀ ಚಮಚ, ಉಪ್ಪು– ರುಚಿಗೆ ತಕ್ಕಷ್ಟು, ಸೋಯಾ ಸಾಸ್‌ – 4 ಟೀ ಚಮಚ, ಚಿಲ್ಲಿ ಸಾಸ್‌ – 2 ಟೀ ಚಮಚ, ಟೊಮೆಟೊ ಸಾಸ್‌ – 3 ಟೀ ಚಮಚ, ಸಣ್ಣದಾಗಿ ಹೆಚ್ಚಿದ ಈರುಳ್ಳಿ – 1, ಉದ್ದಕ್ಕೆ ಹೆಚ್ಚಿದ ಹಸಿಮೆಣಸು – 3, ಶುಂಠಿ–ಬೆಳ್ಳುಳ್ಳಿ ಪೇಸ್ಟ್‌ – ಒಂದೂವರೆ ಟೀ ಚಮಚ, ಕಾಳುಮೆಣಸಿನ ಪುಡಿ – ಒಂದೂವರೆ ಟೀ ಚಮಚ, ಚಿಲ್ಲಿ ಫ್ಲೇಕ್ಸ್ – 2 ಟೀ ಚಮಚ

ತಯಾರಿಸುವ ವಿಧಾನ: ಒಂದು ಪಾತ್ರೆ ಬಿಸಿ ಮಾಡಿ ಅದಕ್ಕೆ 3 ಟೀ ಚಮಚ ತುಪ್ಪ/ ಎಣ್ಣೆ ಸುರಿಯಿರಿ. ಅದಕ್ಕೆ ಕೋಳಿ ಮಾಂಸ ಹಾಕಿ ಚೆನ್ನಾಗಿ ಕಲೆಸಿ ಬಳಿಕ ಮುಚ್ಚಿ ಬೇಯಿಸಿ. ನಂತರ ಅದಕ್ಕೆ ಅರಿಸಿನ ಪುಡಿ, ಉಪ್ಪು ಸೇರಿಸಿ ಮತ್ತೆ ಕಲೆಸಿ. ಸೋಯಾ ಸಾಸ್‌, ಚಿಲ್ಲಿ ಸಾಸ್‌, ಟೊಮೊಟೊ ಸಾಸ್‌ ಕೂಡ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ಬಳಿಕ ಹೆಚ್ಚಿದ ಈರುಳ್ಳಿ, ಕಾಯಿಮೆಣಸು, ಶುಂಠಿ– ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮುಚ್ಚಿ ಬೇಯಿಸಿ. ಸ್ಪಲ್ಪ ಬೆಂದ ಬಳಿಕ ಕಾಳುಮೆಣಸಿನ ಪುಡಿ, ಚಿಲ್ಲಿ ಪ್ಲೇಕ್ಸ್ ಹಾಕಿ ಮತ್ತೆ ಮುಚ್ಚಿ ಚೆನ್ನಾಗಿ ಬೇಯಿಸಿ. ಈಗ ರುಚಿಕರ ಚಿಲ್ಲಿ ಚಿಕನ್‌ ಸಿದ್ಧ.

(ಲೇಖಕಿ: ರಂಜುಸ್‌ ಹೋಮ್ಲಿ ಫುಡ್‌ ಯೂಟ್ಯೂಬ್‌ ಚಾನೆಲ್‌ ನಿರ್ವಾಹಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.