ADVERTISEMENT

ಅಜ್ಜಿಮನೆಯಲ್ಲಿ ಆರೋಗ್ಯದ ಅಡಿಪಾಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:45 IST
Last Updated 6 ಜೂನ್ 2022, 19:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆನ್ನು ಬಾಗಿರುತ್ತಿದ್ದ ಅಜ್ಜಿಗೆ ಬೆತ್ತ ಹಿಡಿಯದೆ ಮಕ್ಕಳನ್ನು ಬಗ್ಗಿಸಲು ಗೊತ್ತಿತ್ತು. ಶಾಲೆಯ ಮುಖ ನೋಡದಿದ್ದ ಅಜ್ಜಿಯಂದಿರು ಕಲಿಸುತ್ತಿದ್ದ ಆಟೋಟ ಮತ್ತು ಜೀವನಪಾಠಗಳು ಯಾವ ಬೇಸಿಗೆ ಶಿಬಿರಕ್ಕೂ ಕಡಿಮೆಯಿರಲಿಲ್ಲ.

ಕೆಲವು ದಶಕಗಳ ಹಿಂದೆ, ಬೇಸಿಗೆ ಬಂತೆಂದರೆ ಸಾಕು ಪ್ರತಿಯೊಂದು ಹಳ್ಳಿಯ ಮನೆಯಲ್ಲಿಯೂ ‘ಮಕ್ಕಳ ಶಿಬಿರ’ವಿರುತ್ತಿತ್ತು. ದೂರದ ಊರಿಂದ ಬರುವ ಪುಟಾಣಿಗಳು ಎರಡು ತಿಂಗಳ ಮಟ್ಟಿಗೆ ಅಜ್ಜಿ ಮನೆಯಲ್ಲಿ ಠಿಕಾಣಿ ಹೂಡುತ್ತಿದ್ದರು. ಸಾಲು ಸಾಲು ಮೊಮ್ಮಕ್ಕಳು ಮನೆಯ ತುಂಬೆಲ್ಲಾ ಓಡಾಡುತ್ತಾ, ತೋಟ ಗದ್ದೆಗಳಲ್ಲಿಯೂ ತಮ್ಮ ಪರಾಕ್ರಮ ಮೆರೆಯುತ್ತಾ ಜೀವನದ ಪಾಠಗಳನ್ನು ಅಜ್ಜಿಮನೆಯಲ್ಲಿ ಕಲಿಯುತ್ತಿದ್ದರು. ಫಲಿತಾಂಶದ ಒತ್ತಡಗಳಿಲ್ಲದೆ ನಿತ್ಯ ಹತ್ತಾರು ಸ್ಪರ್ಧೆಗಳು ಅಜ್ಜಿಮನೆಯ ಅಂಗಳದಲ್ಲಿ ನಡೆಯುತ್ತಿದ್ದವು. ಸಂಜೆ ಕಾಫಿಯ ಜೊತೆಗೆ ಅಜ್ಜಿ ಮಾಡಿದ ಆರೋಗ್ಯಕರ ತಿನಿಸುಗಳನ್ನು ಮೆಲ್ಲುವಾಗ ಗೆದ್ದವರ ಮುಖ ಮತ್ತು ಸೋತವರ ಮುಖ ಒಂದೇ ರೀತಿ ಅರಳಿರುತ್ತಿತ್ತು. ಹೈಸ್ಕೂಲು ಮಕ್ಕಳಿಂದ ಹಿಡಿದು ಇನ್ನೂ ಶಾಲೆಗೆ ಸೇರದಿದ್ದ ಪುಟಾಣಿಗಳೂ ಅಜ್ಜಿಮನೆಯ ಪಾಠಗಳನ್ನು ಶಿಸ್ತಿನಿಂದ ಕೇಳುತ್ತಿದ್ದರು. ಅಲ್ಲಿಯ ಸಿಲೆಬಸ್ಸು ಅಜ್ಜಿಯದಿದ್ದರೂ ಮಕ್ಕಳಿಗೆ ತಮಗಿಷ್ಟಬಂದ ಸರ್ಕಸ್ ಮಾಡಲು ಪೂರ್ಣ ಸ್ವಾತಂತ್ರ್ಯವಿರುತ್ತಿತ್ತು. ಬೆನ್ನು ಬಾಗಿರುತ್ತಿದ್ದ ಅಜ್ಜಿಗೂ ಬೆತ್ತ ಹಿಡಿಯದೆ ಮಕ್ಕಳನ್ನು ಬಗ್ಗಿಸಲು ಗೊತ್ತಿತ್ತು.

ಮುಂಜಾನೆದ್ದು ಅಡುಗೆಮನೆಯತ್ತ ಹೆಜ್ಜೆ ಹಾಕುವ ಮಕ್ಕಳನ್ನು ಸಾಲಾಗಿ ಶಿಸ್ತಿನಿಂದ ಕೂರಿಸಿ ಉಪಾಹಾರ ಬಡಿಸಿದ ನಂತರ ಆ ದಿನದ ಶಿಬಿರದ ಶುಭಾರಂಭವಾಗುತ್ತಿತ್ತು. ಯಾವುದೇ ಕಲಿಕೆಯ ಒತ್ತಡವಿಲ್ಲದಾಗ ಮತ್ತು ಮಕ್ಕಳನ್ನು ಜೀನಿಯಸ್‌ಗಳನ್ನಾಗಿ ಮಾಡಲೇಬೇಕೆನ್ನುವ ಹಪಾಹಪಿಯಿಲ್ಲದಾಗ ಮಕ್ಕಳ ಸ್ವಾಭಾವಿಕ ಪ್ರತಿಭೆಗಳು ಅನಾವರಣಗೊಳ್ಳುತ್ತಿದ್ದವು. ಹೆಚ್ಚಿನ ಮಕ್ಕಳು ಮೊದಲ ಬಾರಿಗೆ ವೇದಿಕೆಯೇರಿದ್ದು, ಹಾಡಿದ್ದು, ಕುಣಿದದ್ದು ಮತ್ತು ಚಪ್ಪಾಳೆ ಗಳಿಸಿದ್ದು ಅಜ್ಜಿಯ ಮನೆಯ ಅಂಗಳದಲ್ಲಿಯೇ! ಅಜ್ಜಿಯ ಮನೆಯ ಸಾಮೂಹಿಕ ಮಜ್ಜನವಂತೂ ಸಾಲಾಗಿ ಗಾಡಿಗಳನ್ನು ತೊಳೆಯುವ ಸರ್ವಿಸ್ ಸ್ಟೇಷನ್ ರೀತಿಯಲ್ಲಿರುತ್ತಿತ್ತು. ನಿತ್ಯ ಸಂಜೆ ಭಜನೆ ಮಾಡುವಾಗ, ತೊದಲು ನುಡಿಯುತ್ತಿದ್ದ ಪುಟಾಣಿಗಳು ಕಾಲಕ್ರಮೇಣ ಯಾವ ಒತ್ತಡಗಳಿಲ್ಲದೆ ಭಕ್ತಿಗೀತೆಗಳನ್ನು ಕಂಠಪಾಠ ಮಾಡಿಬಿಡುತ್ತಿದ್ದರು‌‌.

ADVERTISEMENT

ತೋಟ–ಗದ್ದೆಗಳನ್ನು ನೋಡಲು ಮತ್ತು ಪರಿಸರದ ಜೊತೆಗೆ ಬೆರೆಯಲು ಮಲೆನಾಡಿನ ಅಜ್ಜಿಮನೆಯನ್ನೆ ಮಕ್ಕಳು ತಿಂಗಳುಗಳ ಕಾಲ ಹೋಮ್ ಸ್ಟೇ ಮಾಡಿಕೊಂಡು ಬಿಡುತ್ತಿದ್ದರು. ಗಾಳಕ್ಕೆ ಹಾಕಲು ಎರೆಹುಳಗಳನ್ನು ಹುಡುಕುವುದರಿಂದ ಹಿಡಿದು ತರಕಾರಿತೋಟಕ್ಕೆ ಬರುವ ಹಕ್ಕಿಗಳನ್ನು ಓಡಿಸುವಂತಹ ತಳಮಟ್ಟದ ಜವಾಬ್ದಾರಿಗಳು ಅಜ್ಜಿಮನೆಯಲ್ಲಿ ಪ್ರಾಥಮಿಕ ಶಾಲೆಯ ಪುಟಾಣಿಗಳಿಗಿದ್ದರೆ, ಮಂಗಗಳಿಗೆ ಮಾತ್ರ ತಲುಪಬಹುದಾದ ಪೇರಳೆಮರದ ಗೆಲ್ಲಿನ ತುದಿಗೆ ತಲುಪುವ ಕೆಲಸದಲ್ಲಿ ದೊಡ್ಡ ಮಕ್ಕಳಿಗೆ ಮೀಸಲಾಗಿರುತ್ತಿತ್ತು. ಪರಿಸರಸ್ನೇಹಿ ವಾತಾವರಣದಲ್ಲಿ ನಡೆಯುತ್ತಿದ್ದ ದೈಹಿಕ ಕಸರತ್ತುಗಳು ಮಕ್ಕಳ ಆರೋಗ್ಯಕ್ಕೆ ಉತ್ತಮ ಅಡಿಪಾಯವನ್ನು ಹಾಕಿಕೊಡುತ್ತಿದ್ದವು. ಚಾರಣಕ್ಕೆಂದು ಅಜ್ಜಿಮನೆಯಲ್ಲಿ ಎಂದೂ ವಿಶೇಷವಾಗಿ ತಯಾರಾಗಬೇಕಿರಲಿಲ್ಲ. ಮನೆಯ ಹಿತ್ತಲಿನ ತನಕ ಚಾಚಿಕೊಂಡಿರುವ ಗುಡ್ಡದ ಕಾಲುದಾರಿಯೊಂದನ್ನು ಹಿಡಿದು ಮಕ್ಕಳು ಹೆಜ್ಜೆ ಹಾಕಿದರೆಂದರೆ ಅದು ಅವರನ್ನು ನಯನಮನೋಹರವಾಗಿರುವ ಗಿರಿಶಿಖರದ ತುದಿ ತಲುಪಿಸುತ್ತಿತ್ತು ಮತ್ತು ಚಾರಣದ ಸಂಭ್ರಮ ಸಡಗರದ ಜೊತೆ ಜೊತೆಗೆ ಆ ದಿನದ ವ್ಯಾಯಾಮವೂ ಮುಗಿದಿರುತ್ತಿತ್ತು.

ಅಜ್ಜಿಮನೆಯ ಅಂಗಳದಲ್ಲಿ ನಿತ್ಯ ನಡೆಯುವ ಆಟೋಟಗಳು ಮುಂದೆ ಶಾಲಾ–ಕಾಲೇಜಿನ ಮೈದಾನಕ್ಕೆ ಧುಮುಕಲು ಧೈರ್ಯ ತುಂಬುತ್ತಿತ್ತು. ಕುಂಟೆಬಿಲ್ಲೆಯಿಂದ ಹಿಡಿದು ಕಬಡ್ಡಿ ಮತ್ತು ಕ್ರಿಕೆಟಿನ ತನಕದ ಆಟಗಳನ್ನು ಅಜ್ಜಿಮನೆಯಲ್ಲಿ ಹಾಜರಿರುತ್ತಿದ್ದ ಮಕ್ಕಳ ಸಂಖ್ಯೆಯ ಆಧಾರದಲ್ಲಿ ನಡೆಯುತ್ತಿತ್ತು. ಗ್ರಾಮೀಣ ಪ್ರದೇಶಗಳ ಆಟಗಳು ನಿರಸವಾಗಿರದೆ ಮಕ್ಕಳ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿತ್ತು. ಇಂದಿಗೂ ನಮ್ಮ ದೇಶಕ್ಕೆ ಪದಕಗಳನ್ನು ತರುವ ಹೆಚ್ಚಿನ ಕ್ರೀಡಾಪಟುಗಳು ಗ್ರಾಮೀಣ ಪ್ರತಿಭೆಗಳು. ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಅಡುಗೆಮನೆಯ ಪಾತ್ರಕ್ಕೂ ದೈಹಿಕ ಕಸರತ್ತಿನಷ್ಟೇ ಪ್ರಾಮುಖ್ಯವಿತ್ತು. ಪ್ರತಿಯೊಂದು ಭೌಗೋಳಿಕ ಪ್ರದೇಶ ಜನರಿಗೆ ಅವರದೇ ಆದ ಆಹಾರ ಪದಾರ್ಥಗಳಿದ್ದವು‌. ತಾವೇ ಬೆಳೆದ ಅಕ್ಕಿ, ರಾಗಿ, ಜೋಳ, ಗೋಧಿ – ಹೀಗೆ ಆಯಾ ಜನರು ಅವರದೇ ಆಹಾರಪದ್ಧತಿಗೆ ಒಗ್ಗಿಕೊಂಡಿದ್ದ ಕಾರಣ ಗದ್ದೆ–ತೋಟಗಳಿಂದ ಬಂದ ತಾಜಾತನದ ಆಹಾರಗಳು ಮಕ್ಕಳ ಹೊಟ್ಟೆಗೆ ಹೋಗುತ್ತಿತ್ತೇ ವಿನಾ, ಪ್ಲಾಸ್ಟಿಕಿನ ಪೊಟ್ಟಣದೊಳಗಿನಿಂದ ಬಂದ ವಾಣಿಜ್ಯ ಉತ್ಪನ್ನಗಳಿಗೆ ಅಜ್ಜಿಮನೆಯ ಅಡುಗೆಮನೆಯಲ್ಲಿ ಬಹಿಷ್ಕಾರವಿತ್ತು. ಅಜ್ಜಿಮನೆಯ ಗದ್ದೆಬಯಲಿನಲ್ಲಿ‌ ನಾಟಿ ಕೋಳಿಗಳಂತೆ ಓಡುತ್ತಿದ್ದ ಆ ಮಕ್ಕಳು ಪಿಜ್ಜಾ, ಬರ್ಗರ್ ಮುಖ ನೋಡಿದವರಲ್ಲ ಮತ್ತು ಆ ಮಕ್ಕಳ ಹೊಟ್ಟೆಗಳು ಅವರನ್ನು ಹಿಂದಿಕ್ಕಿ ಮುಂದೆ ಹೋಗಿದ್ದಿಲ್ಲ!

ತಂತ್ರಜ್ಞಾನ ಮತ್ತು ವಿಜ್ಞಾನ ಅಭಿವೃದ್ಧಿಯಾದಂತೆಲ್ಲ ಊರುಗಳ ನಡುವಿನ ಪ್ರಯಾಣದ ಸಮಯವು ಕಡಿಮೆಯಾಗಿದೆ; ಆದರೆ ಮನುಷ್ಯರ ನಡುವಿನ ಅಂತರ ಜಾಸ್ತಿಯಾಗಿದೆ. ಆರು ತಿಂಗಳ ಮೆಟರ್ನಿಟಿ ರಜೆಯ ಜೊತೆಗೆ ಚೈಲ್ಡ್ ಕೇರ್ ರಜೆಗಳಿದ್ದರೂ ಹಿಂದಿನಂತೆ ಹೆಣ್ಣುಮಕ್ಕಳು ಈಗ ಒಂದರ ಹಿಂದೆ ಒಂದರಂತೆ ಸಾಲು ಮಕ್ಕಳನ್ನು ಹೆರುವುದಿಲ್ಲ. ಪ್ರತಿಯೊಬ್ಬರಿಗೂ ಒಂದೋ ಎರಡೋ ಮಕ್ಕಳಿರುವ ಈ ದಿನಗಳಲ್ಲಿ ತಮ್ಮ ಮಕ್ಕಳನ್ನು ತಿಂಗಳುಗಳ ಕಾಲ ಅಜ್ಜಿಮನೆಯಲ್ಲಿ ಬಿಡುವವರು ನಮಗೀಗ ಕಾಣಸಿಗುವುದಿಲ್ಲ. ತಮ್ಮ ಮಗುವಿನ ಭವಿಷ್ಯಕ್ಕಾಗಿಯೆ ಹಗಲು ರಾತ್ರಿ ದುಡಿಯುತ್ತಿದ್ದೇವೆಂಬ ಭ್ರಮೆಯಲ್ಲಿರುವ ತಂದೆತಾಯಿಗಳ ಬಳಿಯೀಗ ಮಕ್ಕಳಿಗೆ ಕೊಡಲು ಸಮಯವೊಂದನ್ನು ಬಿಟ್ಟು ಬೇರೆಲ್ಲಾ ಇದೆ!

ಮಗುವಿನ ಭಾಷಾಕೌಶಲ ಬೆಳೆಯಲು ಮತ್ತು ಶಬ್ದಭಂಡಾರ ವಿಸ್ತಾರವಾಗಲು ಮಗುವಿನ ಬೆಳವಣಿಗೆಯ ಹಂತದಲ್ಲಿ ಮನೆಯ ವಾತಾವರಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಾತನಾಡುವವರ ಸಂಖ್ಯೆ ಜಾಸ್ತಿಯಿದ್ದಲ್ಲಿ ಮಗು ಬಹಳ ಬೇಗ ಮಾತನಾಡಲು ಕಲಿಯುತ್ತದೆ. ಈಗ ನಗರದ ಫ್ಲ್ಯಾಟುಗಳಲ್ಲಿ ಅಪ್ಪ–ಅಮ್ಮನ ಜೊತೆಗಿರುವ ಒಂಟಿ ಮಕ್ಕಳ ಭಾಷಾ ಸಾಮರ್ಥ್ಯ ಕುಂದುತ್ತಿದೆ. ಮನೆಯಲ್ಲಿ ಬೇರೆ ಮಕ್ಕಳ ಮಾತಿನ ಕಲರವದ ಜೊತೆ ಚುರುಕಾಗಿ ಹೊಸ ಶಬ್ದಗಳನ್ನು ನಿತ್ಯ ಕಲಿಯುವ ಭಾಗ್ಯ ನಗರದ ಮಕ್ಕಳಿಗಿಲ್ಲ. ಪ್ರಕೃತಿ ಮತ್ತು ಪರಿಸರವನ್ನು ಹತ್ತಿರದಿಂದ ನೋಡದ ಮಕ್ಕಳು ಈಗ ಕಾಂಕ್ರೀಟ್ ಕಾಡುಗಳ ಬಡಾವಣೆಯ ಓಣಿಗಳಲ್ಲಿ ದಾರಿ ತಪ್ಪಿದ್ದಾರೆ. ಮನೆಯಿಂದ ಹೊರಬಂದು ಸೂರ್ಯನಿಗೆ ಮೈಯೊಡ್ಡದ ಮಕ್ಕಳಲ್ಲಿ ವಿಟಾಮಿನ್ ಡಿ ಕೊರತೆ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸುತ್ತಮುತ್ತಲಿನ ಪರಿಸರ ಮತ್ತು ಮನುಷ್ಯರ ಜೊತೆಗಿನ ಸಂವಹನ ಮತ್ತು ಸಂವಾದವು ಮಕ್ಕಳಿಗೆ ಕಡಿಮೆಯಾಗುತ್ತಿರುವ ಈಗಿನ ದಿನಗಳಲ್ಲಿ ಆಟಿಸಂ ಸಮಸ್ಯೆಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಅಜ್ಜಿ‌ಮನೆಯ ಅಡುಗೆಮನೆಯಲ್ಲಿ ತಯಾರಗುತ್ತಿದ್ದ ಆರೋಗ್ಯವಂತ ಮಕ್ಕಳ ಜಾಗದಲ್ಲೀಗ ಚಿಕ್ಕವಯಸ್ಸಿನಲ್ಲಿ ಬೊಜ್ಜಿನ ಸಮಸ್ಯೆಯಿಂದ ನರಳುತ್ತಿರುವ ಮಕ್ಕಳು ಕಾಣಸಿಗುತ್ತಿದ್ದಾರೆ. ಮರದ ತುದಿಯಲ್ಲಿ ನೇಲುತ್ತಿದ್ದ ಆಟಗಾರರು ಎರಡೂ ಕೈಗಳಿಗೆ ಮೊಬೈಲ್ ಉಜ್ಜುವುದರಿಂದ ಬಿಡುವಾಗುತ್ತಿಲ್ಲ. ಗಿಡ್ಡವಿರುವವರನ್ನು ಉದ್ದ ಮಾಡುವ, ಚರ್ಮದ ಬಣ್ಣ ಕಪ್ಪಿರುವವರನ್ನು ಬಿಳಿ ಮಾಡುವ, ಸಾಮಾನ್ಯರನ್ನು ‘ಜೀನಿಯಸ್’ ಮಾಡುವ ಘೋಷಣೆಗಳನ್ನು ಅಚ್ಚೆ ಹಾಕಿಸಿಕೊಂಡಿರುವ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಿ ಹೆತ್ತವರನ್ನು ಮರಳು ಮಾಡುತ್ತಿವೆ. ಮಕ್ಕಳ ಸ್ವಾಭಾವಿಕವಾಗಿ ಕಲಿಯುವ ಹಾಡು ಕುಣಿತಗಳು ಈಗ ಟಿವಿ ಪರದೆಯ ಮೇಲೆ ರಿಯಾಲಿಟಿ ಶೋ ಎಂಬ ಉದ್ಯಮಕ್ಕೆ ಬಂಡವಾಳವಾಗುತ್ತಿದೆ.

ಥಳುಕು ಬಳುಕಿನ ಆಧುನಿಕ ಲೋಕದಲ್ಲಿ ಗೆಲ್ಲಲೇಬೇಕಾದ ಒತ್ತಡಗಳು ಸ್ಪರ್ಧೆಯ ರೋಚಕತೆಗಿಂತ ಹೆಚ್ಚಾಗಿ, ಬೆಳೆಯುವ ಸಿರಿಗಳು ಮೊಳಕೆಯಲ್ಲೆ ಮುದುಡುತ್ತಿವೆ. ಮಕ್ಕಳಿಗೆ ಸಮಯ ಕೊಡದಿರುವ ಕಾರಣಕ್ಕೆ ಅಪರಾಧಿ ಪ್ರಜ್ಞೆಯಿಂದ ನರಳುವ ಪೋಷಕರು ಒಂದು ವಾರದಲ್ಲಿ ‘ಎಲ್ಲವನ್ನೂ ಕಲಿಸುವ’ ಬೇಸಿಗೆ ಶಿಬಿರಕ್ಕೆ ತಮ್ಮ ಮಕ್ಕಳನ್ನು ಸೇರಿಸಿ ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುತ್ತಿದ್ದಾರೆ. ನಲಿಯುವ ವಯಸ್ಸಿನಲ್ಲಿ ನಲಿಯದಿದ್ದರೆ ಕಲಿಯುವ ರೀತಿಯಲ್ಲಿ ಕಲಿಯದಿದ್ದರೆ ಮಕ್ಕಳ ಮನೋವಿಕಾಸದಲ್ಲಿ‌ ಆಗಬಹುದಾದ ಎರುಪೇರುಗಳು ಬಗ್ಗೆ ಅರಿವಿಲ್ಲದ ಹೆತ್ತವರು ಮಕ್ಕಳ ಆರೋಗ್ಯವನ್ನು‌ ಸಿರಪ್ಪು ಟಾನಿಕ್ಕುಗಳಲ್ಲಿ ಹುಡುಕುತ್ತಿದ್ದಾರೆ. ಮಕ್ಕಳ ಮನೋವಿಕಾಸದಲ್ಲಿದ್ದ ಅಜ್ಜಿಮನೆಯ ಪಾತ್ರವನ್ನು ಮರೆತಿರುವವರು ಅಜ್ಜಿಯನ್ನು ಮಕ್ಕಳಿಗೆ ಟಿವಿ ಧಾರಾವಾಹಿಗಳಲ್ಲಿ ತೋರಿಸಿ ಸಂತೈಸುತ್ತಿದ್ದಾರೆ.

ಎಂಬತ್ತು–ತೊಂಬತ್ತರ ದಶಕದ ಸಮಯದಲ್ಲಿ ತಮ್ಮ ಅಜ್ಜಿಮನೆಯಲ್ಲಿ ಬಾಲ್ಯವನ್ನು ಕಳೆದ ಪುಟಾಣಿಗಳು ನಿಜಕ್ಕೂ ಭಾಗ್ಯವಂತರು. ಅಜ್ಜಿಯ ನೆರಳಿನಡಿಯಲ್ಲಿ ಅರಳಿದ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರುತ್ತಿದ್ದರು. ಶಾಲೆಯ ಮುಖ ನೋಡದಿದ್ದ ಅಜ್ಜಿಯಂದಿರು ಕಲಿಸುತ್ತಿದ್ದ ಆಟೋಟ ಮತ್ತು ಜೀವನಪಾಠಗಳು ಯಾವ ಬೇಸಿಗೆ ಶಿಬಿರಕ್ಕೂ ಕಡಿಮೆಯಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.