ADVERTISEMENT

ಮತ್ತೆ ಮಳೆಗಾಲ ಆರೋಗ್ಯಕ್ಕಿರಲಿ ಆದ್ಯತೆ

ಡಾ.ಶೈಲಜಾ ಶ್ಯಾಮಸುಂದರ್
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
   

ಮತ್ತೆ ಮಳೆಗಾಲ ಬಂದಿದೆ. ಈ ಬಾರಿಯ ಮಳೆಗಾಲ ಹೆಚ್ಚು ತೀವ್ರವೂ ಆಗಿದೆ. ಮಾತ್ರವಲ್ಲ, ಜನರು ಪ್ರವಾಹದಿಂದ ಉಂಟಾದ ಹಾನಿಯ ಜೊತೆಗೆ ಆರೋಗ್ಯ ಅಪಾಯವನ್ನೂ ಎದುರಿಸುತ್ತಿದ್ದಾರೆ. ಮಳೆಯೊಂದಿಗೆ ದಾಳಿ ಇಡುವ ಕೆಲವು ಕಾಯಿಲೆಗಳು ಮತ್ತು ಅಗತ್ಯ ಪರಿಹಾರಗಳ ಬಗ್ಗೆ ಡಾ.ಶೈಲಜಾ ಶ್ಯಾಮಸುಂದರ್ ಇಲ್ಲಿ ಚರ್ಚಿಸಿದ್ದಾರೆ.

**

ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟವೆ. ಉರಿವ ಬಿಸಿಲಿನ ದಗೆಗೆ ಬೇಸತ್ತಾಗ ಮಳೆಹನಿಗಳ ತಂಪು ಹಿತವೆನಿಸದೆ ಇರದು. ಆದರೆ ಮಳೆಯ ಜೊತೆಜೊತೆಗೆ ಲಗ್ಗೆ ಇಡುವ ತಾಪತ್ರಯಗಳೂ ಕಡಿಮೆ ಏನಿಲ್ಲ. ನಿರಂತರ ತಂಪು ಹವೆ, ಆರ್ದ್ರ ವಾತಾವರಣ, ಮೂಲೆ ಮೂಲೆಗಳಲ್ಲಿ ಸಂಗ್ರಹಗೊಳ್ಳುವ ನೀರು, ಅದರಿಂದ ಬಂದೆರಗುವ ಕಾಯಿಲೆ-ಕಸಾಲೆಗಳು ಒಂದೆರಡಲ್ಲ. ಅದರಲ್ಲೂ ಈ ಬಾರಿ ಜನರ ಬದುಕು ಹಾಗೂ ಆರೋಗ್ಯದ ಮೇಲೆ ಭಾರೀ ಪ್ರಭಾವ ಬೀರುತ್ತಿರುವ ಈ ಮಳೆಗಾಲದಲ್ಲಿ ಅಂತಹ ರೋಗಗಳ ತಡೆಗಟ್ಟುವಿಕೆ ಮತ್ತು ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ.

ADVERTISEMENT

ಮಳೆಗಾಲದಲ್ಲಿ ಕಂಡುಬರುವ ಕೆಲವು ಸಾಮಾನ್ಯ ಸಾಂಕ್ರಾಮಿಕ ಕಾಯಿಲೆಗಳೆಂದರೆ ಸಾಮಾನ್ಯ ಶೀತ, ಟೈಫಾಯಿಡ್, ಹೆಪಟೈಟಿಸ್ ಎ, ಡೆಂಗಿ, ಕಾಲರಾ, ಮಲೇರಿಯಾ ಮತ್ತು ಲೆಪ್ಟೊಸ್ಪಿರೋಸಿಸ್ ಇತ್ಯಾದಿ.

ಸಾಮಾನ್ಯ ಶೀತ-ನೆಗಡಿ

ಇದು ಎ, ಬಿ, ಮತ್ತು ಸಿ ಎನ್ನುವ ಮೂರು ರೀತಿಯ ಇನ್ಫ್ಲುಯೆನ್ಸಾ ವೈರಸ್‌ಗಳಿಂದ ಹರಡುತ್ತದೆ. ಇದು ಹೆಚ್ಚು ಸಾಂಕ್ರಾಮಿಕ ಕಾಯಿಲೆ
ಯಾಗಿದ್ದು, ವೇಗವಾಗಿ ಹರಡುತ್ತದೆ. ಮೇಲ್ಭಾಗದ ಶ್ವಾಸೇಂದ್ರಿಯ ಸೋಂಕನ್ನು ಉಂಟುಮಾಡುತ್ತದೆ. ಶೀತದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ- ನೆಗಡಿ, ಮೂಗು ಸೋರುವುದು ಮತ್ತು ತಲೆನೋವು. ಸ್ನಾಯುಗಳ ನೋವು, ಮೈ ಕೈ ನೋವು, ಒಣ ಕೆಮ್ಮು, ಮೂಗು ಕಟ್ಟುವುದು, ಗಂಟಲಿನ ಕಿರಿಕಿರಿ, ಸೀನು ಮತ್ತು ಕೆಲವೊಮ್ಮೆ ಜ್ವರ ಕಾಣಿಸಿಕೊಳ್ಳಬಹುದು. ಚಿಕಿತ್ಸೆಯು ಸಾಮಾನ್ಯವಾಗಿ ಆ್ಯಂಟಿಹಿಸ್ಟಮೈನ್‌ಗಳು ಮತ್ತು ಪ್ಯಾರಸಿಟಮೊಲ್‌ಗಳನ್ನು ಒಳಗೊಂಡಿರುತ್ತದೆ.

ಕಾಲರಾ

ಮಳೆಗಾಲದ ಮಾರಣಾಂತಿಕ ಕಾಯಿಲೆಯಲ್ಲಿ ಕಾಲರಾ ಕೂಡ ಒಂದು. ಇದನ್ನು ಬ್ಯಾಕ್ಟೀರಿಯಾದ ಕಾಯಿಲೆ ಎಂದು ಕರೆಯಲಾಗುತ್ತದೆ. ಕಲುಷಿತ ಆಹಾರ ಮತ್ತು ನೀರಿನ ಸೇವನೆಯಿಂದ ಇದು ಹರಡುತ್ತದೆ. ತೀವ್ರ ಡಯರಿಯ ಮತ್ತು ಅತಿಸಾರ ಭೇದಿ ಸಾಮಾನ್ಯ ಲಕ್ಷಣಗಳು. ಮುಂದುವರೆದರೆ ತೀವ್ರ ಅತಿಸಾರ, ನೀರಿನ ಮಲ, ವಾಂತಿ, ಸ್ನಾಯು ಸೆಳೆತ ಮತ್ತು ತೀವ್ರ ನಿರ್ಜಲೀಕರಣ ಉಂಟಾಗುತ್ತದೆ. ಇಂತಹ ಸ್ಥಿತಿಯಲ್ಲಿ, ಮೂತ್ರಪಿಂಡದ ತೊಡಕುಗಳನ್ನು ತಡೆಗಟ್ಟಲು ರೋಗಿಗೆ ದ್ರವ ಮತ್ತು ಪ್ರತಿಜೀವಕಗಳೊಂದಿಗಿನ ತಕ್ಷಣದ ಚಿಕಿತ್ಸೆಯ ಅಗತ್ಯವಿರುತ್ತದೆ.

ಟೈಫಾಯಿಡ್

ಸಾಲ್ಮೊನೆಲ್ಲಾ ಟೈಫಿ ಮುರಿಯಮ್ ಮತ್ತು ಪ್ಯಾರಾಟಿಫಿ ಬ್ಯಾಕ್ಟೀರಿಯದಿಂದ ಟೈಫಾಯಿಡ್ ಉಂಟಾಗುತ್ತದೆ. ಈ ಬ್ಯಾಕ್ಟೀರಿಯ ಮಾನವರ ಕರುಳು ಮತ್ತು ರಕ್ತದ ಹರಿವಿನಲ್ಲಿ ಜೀವಿಸುತ್ತದೆ. ಮೊದಲ ವಾರದಲ್ಲಿ ರಕ್ತ ಪರೀಕ್ಷೆಯ ಮೂಲಕ ಮತ್ತು 2ನೇ ವಾರದಲ್ಲಿ ವೈಡಲ್ ಟೆಸ್ಟ್ ಮೂಲಕ ಟೈಫಾಯಿಡ್ ಜ್ವರವನ್ನು ಪತ್ತೆ ಹಚ್ಚಬಹುದು. ಟೈಫಿ ಡಾಟ್ ಪರೀಕ್ಷೆಗಳು ಲಭ್ಯವಿದ್ದರೂ, ಕಲ್ಚರ್ ಮತ್ತು ವೈಡಲ್ ಟೆಸ್ಟ್ ತಪಾಸಣೆಗೆ ಸಲಹೆ ನೀಡಲಾಗುತ್ತದೆ. ಚಿಕಿತ್ಸೆ ನೀಡದೆ ಹೋದರೆ, ಸಾವೂ ಸಂಭವಿಸಬಹುದು. ಟೈಫಾಯಿಡ್ ರೋಗದ ಲಕ್ಷಣಗಳೆಂದರೆ- ಜ್ವರ, ತಲೆನೋವು, ಆಯಾಸ, ಮೈಕೈನೋವು. ಟೈಫಾಯಿಡ್ ಚಿಕಿತ್ಸೆಯು ದೀರ್ಘಕಾಲದವರೆಗೆ (ಸುಮಾರು 2 ರಿಂದ 3 ವಾರಗಳು) ಮುಂದುವರೆಯುತ್ತದೆ. ಕರುಳಿನಲ್ಲಿ ಬ್ಯಾಕ್ಟೀರಿಯಗಳು ಅಭಿವೃದ್ಧಿ ಹೊಂದುತ್ತಿರುವ ಕಾರಣ ರೋಗ ಮರುಕಳಿಸುವುದನ್ನು ತಪ್ಪಿಸುವುದು ಬಹಳ ಮುಖ್ಯ.

ಮಲೇರಿಯಾ

ಮಲೇರಿಯಾ ಸೊಳ್ಳೆಯಿಂದ ಹರಡುವ ರೋಗ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುತ್ತದೆ. ಪ್ಲಾಸ್ಮೋಡಿಯಂ ಫಾಲ್ಸಿಪಾರಂ ಮತ್ತು ಪಿ. ವೈವ್ಯಾಕ್ಸ್ ಮಿಶ್ರ ಸೋಂಕಿನಿಂದ ಮಲೇರಿಯಾ ಸೋಂಕು ಹರಡುತ್ತದೆ. ಪಿ. ಮಲೇರಿಯಾ, ಪಿ. ಓವಲೆ ಕೂಡ ಮಲೇರಿಯಾ ರೋಗಕ್ಕೆ ಕಾರಣವಾಗಬಹುದು. ಚಿಕಿತ್ಸೆ- ಜಲಸಂಚಯನ, ಮೌಖಿಕ ಮತ್ತು ಅಭಿದಮನಿ ಮಲೇರಿಯಾ ವಿರೋಧಿ ಔಷಧಗಳು, ಆಂಟಿಪೈರೆಟಿಕ್ಸ್ ಮತ್ತು ಬಹು-ಅಂಗಗಳ ವೈಫಲ್ಯವನ್ನು ತಡೆಗಟ್ಟುವ ಮೇಲ್ವಿಚಾರಣೆಯನ್ನು ಒಳಗೊಂಡಿದೆ. ಸೊಳ್ಳೆ ಕಡಿದ ಒಂದು ವಾರದ ನಂತರ ಮಲೇರಿಯಾ ಲಕ್ಷಣಗಳು ಕಾಣಿಸಲು ಆರಂಭವಾಗುತ್ತವೆ- ತೀವ್ರ ಜ್ವರ, ಆಯಾಸ, ತಲೆನೋವು, ಸ್ನಾಯುಗಳ ನೋವು, ವಾಂತಿ, ತಲೆಸುತ್ತು ಪ್ರಮುಖ ಲಕ್ಷಣಗಳು.

ಲೆಪ್ಟೊಸ್ಪಿರೊಸಿಸ್

ಇದು ಸಹ ಕೊಳಕು ನೀರು ಅಥವಾ ಕೊಚ್ಚೆ ನೀರಿನ ಸಂಪರ್ಕದಿಂದ ಬರುತ್ತದೆ. ಈ ಕಾಯಿಲೆಯು ವಿಶೇಷವಾಗಿ ಈಗ ಕೇರಳ, ಗುಜರಾತ್, ತಮಿಳುನಾಡು ಮತ್ತು ಕರ್ನಾಟಕದ ಜನರನ್ನು ಬಾಧಿಸುತ್ತಿದೆ. ಎಲ್ಲೆಡೆ ಮಳೆ-ಪ್ರವಾಹ ಉಂಟಾಗಿರುವ ಈ ಸಂದರ್ಭದಲ್ಲಿ ಲೆಪ್ಟೊಸ್ಪಿರೊಸಿಸ್ ಕಾಯಿಲೆಯ ಬಗ್ಗೆ ಮುಂಜಾಗ್ರತೆ ವಹಿಸುವುದು ಸೂಕ್ತ. ಅಧಿಕ ಜ್ವರ, ತಲೆನೋವು, ಶೀತ, ಸ್ನಾಯು ನೋವು, ವಾಂತಿ, ಕಾಮಾಲೆ, ಕೆಂಪು ಕಣ್ಣು, ಹೊಟ್ಟೆ ನೋವು ಮತ್ತು ಅತಿಸಾರ ದದ್ದುಗಳು ಈ ರೋಗದ ಲಕ್ಷಣಗಳಾಗಿವೆ.

ಡೆಂಗಿ

ಆರ್ಬೊವೈರಸ್ ಕುಟುಂಬಕ್ಕೆ ಸೇರಿದ ಸೊಳ್ಳೆಗಳಿಂದ ಇದು ಹರಡುತ್ತದೆ. ಡೆಂಗಿ ಸಾಮಾನ್ಯ ಲಕ್ಷಣಗಳು- ಜ್ವರ, ದೇಹದ ನೋವು, ಕೀಲು ನೋವು ಮತ್ತು ದದ್ದು ಅಥವಾ ಗುಳ್ಳೆ. ಇದು ತೀವ್ರ ಸ್ವರೂಪಕ್ಕೆ ತಿರುಗಿದಾಗ ರಕ್ತಸ್ರಾವದ ಜ್ವರ, ಡೆಂಗಿ ಶಾಕ್ ಸಿಂಡ್ರೋಮ್ ಅಥವಾ ತೀವ್ರ ಬೆನ್ನುನೋವಿನ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ಸ್ಥಿತಿ ಮುಂದುವರೆದರೆ, ಥ್ರಂಬೋಸೈಟೋಪೆನಿಯಾ, ಹೈಪೊಟೆನ್ಷನ್, ಬ್ರಾಡಿಕಾರ್ಡಿಯಾ ಮತ್ತು ಪಿತ್ತಜನಕಾಂಗದ ಅಪಸಾಮಾನ್ಯ ಕ್ರಿಯೆ, ಪ್ಲೆರಲೆಫ್ಯೂಷನ್, ಅಸೈಟ್ಸ್, ಅಸೆಪ್ಟಿಕ್ ಮೆನಿಂಜೈಟಿಸ್, ತೀವ್ರವಾದ ಪ್ಯಾಂಕ್ರಿಯಾಟೈಟಿಸ್ ಮತ್ತು ಬಹು-ಅಂಗಗಳ ವೈಫಲ್ಯ ಮತ್ತು ರಕ್ತಸ್ರಾವದಂತಹ ಗಂಭೀರ ತುರ್ತುಸ್ಥಿತಿಗಳು ಉಂಟಾಗಬಹುದು.

ಲೇಖಕಿ, ಕನ್ಸ್‌ಲ್ಟೆಂಟ್‌, ಇಂಟರ್ನಲ್‌ ಮೆಡಿಸಿನ್‌, ಬಿಜಿಎಸ್ ಗ್ಲೆನಿಗಲ್ಸ್‌ ಗ್ಲೋಬಲ್ ಆಸ್ಪತ್ರೆ

**

* ಮಳೆಗಾಲದ ಅನಾರೋಗ್ಯಕ್ಕೆ ಮುನ್ನೆಚ್ಚರಿಕೆಗಳು

* ಹೊರಗಿನ ಆಹಾರವನ್ನು ಸೇವಿಸಬೇಡಿ

* ದೇಹದ ಪ್ರತಿರೋಧ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಆರೋಗ್ಯಕರ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ

* ಹೆಚ್ಚು ನೀರು ಕುಡಿಯಿರಿ. ನೀರು ಶುದ್ಧವಾಗಿರಬೇಕು. ಕಾಯಿಸಿ ಆರಿಸಿದ ನೀರು ಒಳ್ಳೆಯದು.

* ಮನೆಯ ಬದಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ

* ಸರಿಯಾಗಿ ಒಣಗಿದ ಬಟ್ಟೆಗಳನ್ನು ಧರಿಸಿ

*ಪೂರ್ತಿ ಮೈ ಮುಚ್ಚುವಂತಹ ಬಟ್ಟೆ ಇರಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.